ಒಬಿಸಿ ಪಟ್ಟಿ ಪರಿಷ್ಕರ ಉದ್ದೇಶಪೂರ್ವಕ ಅವಿಧೇಯತೆ

Update: 2023-09-22 17:32 GMT

 ಸುಪ್ರೀಂ ಕೋರ್ಟ್| Photo: PTI 

ಹೊಸದಿಲ್ಲಿ: ಕೇರಳದಲ್ಲಿ ಒಬಿಸಿ ಪಟ್ಟಿಯನ್ನು ಪರಿಷ್ಕರಿಸುವಲ್ಲಿ ಉದ್ದೇಶಪೂರ್ವಕವಾಗಿ ಅವಿಧೇಯತೆ ತೋರಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರ ಹಾಗೂ ಕೇರಳ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯದ ಸಮಾನ ಹಂಚಿಕೆಯ ಖಾತರಿ ನೀಡಲು ಕೇರಳದಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯನ್ನು ಪರಿಷ್ಕರಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಈ ಹಿಂದೆ ಕೇಂದ್ರ ಸರಕಾರ ನಿರ್ದೇಶಿಸಿತ್ತು.

ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಮುಖ್ಯ ಕಾರ್ಯದರ್ಶಿ ಹಾಗೂ ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೇಂದ್ರ ಹಾಗೂ ಕೇರಳ ರಾಜ್ಯ ಸರಕಾರದ ಪ್ರತಿಕ್ರಿಯೆ ಕೋರಿದೆ.

ಸರಕಾರೇತರ ಸಂಸ್ಥೆಯಾದ ಮೈನಾರಿಟಿ ಇಂಡಿಯನ್ಸ್ ಪ್ಲಾನಿಂಗ್ ಆ್ಯಂಡ್ ವಿಜಿಲೆನ್ಸ್ ಕಮಿಷನ್ ಟ್ರಸ್ಟ್ನ ಪರವಾಗಿ ನ್ಯಾಯವಾದಿ ಹ್ಯಾರಿಸ್ ಬೀರನ್ ಅವರು ಈ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

ಕೇರಳದಲ್ಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಬೇಕಾದ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಸಾಮಾಜಿಕ-ಆರ್ಥಿಕ ಅಧ್ಯಯನ ವರದಿಯನ್ನು ಅಂತಿಮಗೊಳಿಸಲು ಅಗತ್ಯ ಇರುವ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ವರದಿಯನ್ನು ಕೇರಳ ಆಯೋಗಕ್ಕೆ ಸಲ್ಲಿಸುವಂತೆ ಕೇರಳ ಹೈಕೋಟ್ 2020 ಸೆಪ್ಟಂಬರ್ 8ರಂದು ಕೇಂದ್ರ ಸರಕಾರ ನಿರ್ದೇಶಿಸಿತ್ತು ಎಂದು ಅರ್ಜಿ ಹೇಳಿದೆ.

ಈ ವರದಿಯ ಆಧಾರದಲ್ಲಿ 6 ತಿಂಗಳ ಒಳಗೆ ವೌಲ್ಯ ಮಾಪನವನ್ನು ಅಂತಿಮಗೊಳಿಸುವಂತೆ ಹಾಗೂ ಶಿಫಾರಸುಗಳನ್ನು ಕೇರಳ ರಾಜ್ಯ ಸರಕಾರಕ್ಕೆ ಸಲ್ಲಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಕೇರಳ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಿತ್ತು ಎಂದು ಅರ್ಜಿ ತಿಳಿಸಿದೆ.

ಈ ವರದಿಯನ್ನು ಪೂರ್ಣಗೊಳಿಸುವ ಅವಧಿಯನ್ನು ಸುಪ್ರೀಂ ಕೋರ್ಟ್ 2021 ಜೂನ್ 28ರಂದು ಒಂದು ವರ್ಷಗಳ ಕಾಲ ವಿಸ್ತರಿಸಿತ್ತು.

ಕೇಂದ್ರ ಸರಕಾರ ಹಾಗೂ ಕೇರಳ ಸರಕಾರ ಉಚ್ಚ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ. ಯಾವುದೇ ಸಮೀಕ್ಷೆ ನಡೆಸಲು ಹಾಗೂ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮುಸ್ಲಿಮ್ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳು ಸಮಾಜದ ಕೆಳ ಸ್ತರದಲ್ಲೇ ಉಳಿದುಕೊಳ್ಳುವಂತಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News