ಬಿಜೆಪಿಯ ಶಿಕ್ಷಣ ವಿರೋಧಿ ಮನಸ್ಥಿತಿಯಿಂದ ಯುವಕರ ಭವಿಷ್ಯ ಅತಂತ್ರವಾಗಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ: ಭಾರತದ ಯುವಕರು ನಿರುದ್ಯೋಗದಿಂದಾಗಿ ತೀವ್ರ ಹತಾಶರಾಗಿದ್ದು, ಬಿಜೆಪಿಯ ಶಿಕ್ಷಣ ವಿರೋಧಿ ಮನಸ್ಥಿತಿಯಿಂದಾಗಿ ಅವರ ಭವಿಷ್ಯ ಅತಂತ್ರಗೊಂಡಿದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
2024ರಲ್ಲಿ ಭಾರತೀಯ ತಾಂತ್ರಿಕ ಸಂಸ್ಥೆ(IIT)ಯಿಂದ ಇಂಜಿನಿಯರಿಂಗ್ ಪದವಿ ಪಡೆದಿರುವವರು ಉದ್ಯೋಗ ನೇಮಕಾತಿ ಪ್ರಕ್ರಿಯೆಯು ನಿಧಾನ ಗತಿಯಲ್ಲಿರುವುದರಿಂದ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂಬ ಮಾಧ್ಯಮ ವರದಿಯೊಂದರ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯ ಈ ಹೇಳಿಕೆ ಹೊರ ಬಿದ್ದಿದೆ.
2022ರಲ್ಲಿ ಐಐಟಿಯ ಶೇ. 19 ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿಯ ಅವಕಾಶ ದೊರೆತಿರಲಿಲ್ಲ. ಅದೀಗ ದ್ವಿಗುಣಗೊಂಡಿದ್ದು, ಶೇ. 38ಕ್ಕೆ ತಲುಪಿದೆ ಎಂದು ಕಾಂಗ್ರೆಸ್ ನಾಯಕರೂ ಆದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಗೌರವಾನ್ವಿತ ಶಿಕ್ಷಣ ಸಂಸ್ಥೆಗಳ ಪರಿಸ್ಥಿತಿಯೇ ಹೀಗಾದರೆ, ಉಳಿದ ಶಿಕ್ಷಣ ಸಂಸ್ಥೆಗಳ ಪಾಡೇನು ಎಂದು ಅವರು ಪ್ರಶ್ನಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳ ವೃತ್ತಿಪರ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿಗಳು ಅಧಿಕ ಪ್ರಮಾಣದ ಬಡ್ಡಿಗೆ ಸಾಲ ಪಡೆದು ಶಿಕ್ಷಣ ಮುಂದುವರಿಸುತ್ತಿದ್ದಾರೆ. ಹೀಗಿದ್ದೂ, ನಿರುದ್ಯೋಗದ ಕಾರಣಕ್ಕೆ ಯುವಕರು ಸಂಪೂರ್ಣವಾಗಿ ಹತಾಶರಾಗಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.