ಶೈಕ್ಷಣಿಕವಾಗಿ ಮುಂದಿರುವ ಬ್ಯಾರಿಗಳು ಒಗ್ಗಟ್ಟು ಪ್ರದರ್ಶಿಸಬೇಕು: ಎಸ್.ಎಂ ರಶೀದ್ ಹಾಜಿ
ಮಂಗಳೂರು: ಒಂದು ಕಾಲದಲ್ಲಿ ಬ್ಯಾರಿಗಳು ಶೈಕ್ಷಣಿಕ ಸಹಿತ ಎಲ್ಲಾ ಕ್ಷೇತ್ರದಲ್ಲೂ ತೀರಾ ಹಿಂದುಳಿದಿದ್ದರು. ಇದೀಗ ಶೈಕ್ಷಣಿಕವಾಗಿ ತುಂಬಾ ಮುಂದುವರಿದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಬ್ಯಾರಿಗಳಲ್ಲಿ ಒಗ್ಗಟ್ಟಿನ ಕೊರತೆ ಇದೆ. ಹಾಗಾಗಿ ಎಲ್ಲಾ ವೈಮನಸ್ಸು ಮರೆತು ಬ್ಯಾರಿಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಕರೆ ನೀಡಿದ್ದಾರೆ.
ಮಂಗಳೂರಿನ ಬ್ಯಾರಿ ಸಂಶೋಧನಾ ಕೇಂದ್ರದ ವತಿಯಿಂದ ಸಂಶೋಧನಾ ಕೇಂದ್ರದ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ಯಾರಿ ಬುಲೆಟಿನ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾರಿ ಸಂಶೋಧನಾ ಕೇಂದ್ರದ ಬಿ.ಎ. ಮುಹಮ್ಮದ್ ಹನೀಫ್ ಬ್ಯಾರಿಗಳು ಯಾರು ಎಂಬ ಪ್ರಶ್ನೆ ಇದೀಗ ಮತ್ತೆ ಮುನ್ನಲೆಗೆ ಬರುತ್ತಿದೆ. ಇತ್ತೀಚೆಗೆ ಕೆಲವರು ಬ್ಯಾರಿ ಎಂಬುದು ಭಾಷೆ ಅಲ್ಲ, ಅದನ್ನು ನಕ್ಕ್-ನಿಕ್ಕ್ ಎಂದು ವಾದಿಸತೊಡಗಿದ್ದಾರೆ. ಬ್ಯಾರಿ ಭಾಷೆಯಲ್ಲೂ ವೈವಿಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಶಯ ನಿವಾರಿಸುವ ಸಲುವಾಗಿ ಬ್ಯಾರಿ ಬುಲೆಟಿನ್ ಹೊತರಲಾಗಿದೆ ಎಂದರು.
ಬ್ಯಾರಿ ಬುಲೆಟಿನ್‌ನ ಪ್ರಥಮ ಪ್ರತಿ ಸ್ವೀಕರಿಸಿ ಮಾತನಾಡಿದ ಯು.ಎಸ್. ಹಸ್ಮತ್ ಅಲಿ, ಯಾವುದೇ ಭಾಷೆಗೆ ಜಾತಿ, ಧರ್ಮ, ಪ್ರದೇಶದ ಹಂಗಿಲ್ಲ. ಅದಕ್ಕೆ ಅಂಕುಶ ಹಾಕಲು ಯಾರಿಗೂ ಸಾಧ್ಯವಿಲ್ಲ ಎಂದರು.
ಮಾಜಿ ಮೇಯರ್ ಕೆ. ಅಶ್ರಫ್, ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್, ಫಾರೂಕ್ ಉಳ್ಳಾಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿಸಾರ್ ಮುಹಮ್ಮದ್ ಫಕೀರ್, ಮುಹಮ್ಮದ್ ಕುಳಾಯಿ, ಹುಸೈನ್ ಕಾಟಿಪಳ್ಳ, ಖಾಲಿದ್ ಯು.ಎಚ್., ಇಬ್ರಾಹಿಂ ಹಾಜಿ ನಡುಪದವು, ಎನ್.ಇ. ಮುಹಮ್ಮದ್, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಡಿ.ಎಂ. ಅಸ್ಲಂ, ಅಝೀಝ್ ಕಂದಾವರ, ಬಶೀರ್ ಕಲ್ಕಟ್ಟ, ಅಬ್ದುಲ್ ಖಾದರ್ ಫರಂಗಿಪೇಟೆ, ಅಬ್ದುಲ್ ಖಾದರ್ ಇಡ್ಮ, ದಿನಕರ ಡಿ. ಬಂಗೇರಾ ಉಪಸ್ಥಿತರಿದ್ದರು.
ಯೂಸುಫ್ ವಕ್ತಾರ್ ಕಿರಾಅತ್ ಪಠಿಸಿದರು. ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ ವಂದಿಸಿದರು. ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.