ಪಶುತ್ವ ಮತ್ತು ಮನುಷ್ಯತ್ವ

Update: 2024-01-07 05:52 GMT

ಮನುಷ್ಯನ ಮೊದಲ ಗುರು ಮತ್ತು ಮಾದರಿ ಎಂದರೆ ಪ್ರಾಣಿಗಳೇ. ಹಾಗೆಯೇ ಪಶುತನದಿಂದಲೇ ಮಾನುಷತನವೂ ರೂಪುಗೊಂಡಿದ್ದು.

ಪ್ರಾಣಿಗುಣಗಳೇ ನಮ್ಮ ಪ್ರವೃತ್ತಿಗಳಿಗೆ ಅಥವಾ ಒಲವುಗಳಿಗೆ ಮೂಲ ತ್ರಾಣಗಳಾಗಿರುವ ಕಾರಣದಿಂದ ಸ್ವಾಭಾವಿಕವಾಗಿಯೂ, ಆನುವಂಶೀಯ ಧಾತು (ಜೀನ್)ಗಳ ಮೂಲಕವೂ ಅನೇಕ ಸ್ವಭಾವಗಳನ್ನು, ಒಲವುಗಳನ್ನು ಮತ್ತು ವರ್ತನೆಗಳನ್ನು ತೋರುತ್ತಿರುತ್ತೇವೆ ಮತ್ತು ಸಹಜವಾಗಿಯೇಕಲಿಯುತ್ತಿರುತ್ತೇವೆ.

ಮನುಷ್ಯನ ಮೆದುಳಿನ ಹಳೆಯ ಭಾಗ ಹೊಸದಾಗಿ ರೂಪುಗೊಂಡಿರುವ ಭಾಗಕ್ಕಿಂತ ಬೇಗನೆ ಕೆಲಸ ಮಾಡುವುದು. ಮನಸ್ಥಿತಿಗಳಲ್ಲಿಯೂ ಕೂಡಾ ಹಳೆಯ ಪ್ರಭಾವ ಮತ್ತು ರೂಢಿಗಳೇ ಹೊಸ ಪ್ರಜ್ಞೆ ಮತ್ತು ಅರಿವುಗಳಿಗಿಂತ ಹಠಾತ್ತನೆ ಕೆಲಸ ಮಾಡಿಬಿಡುವವು.

ಮನುಷ್ಯ ಪ್ರಾಣಿಗಳಂತೆಯೇ ನೈಸರ್ಗಿಕವಾಗಿ ಹಂಚಿಕೊಂಡಿರುವ ಪ್ರವೃತ್ತಿಗಳನ್ನು ಮತ್ತು ತಾನೇ ವಿಶೇಷವಾಗಿ ಬೆಳೆಸಿಕೊಂಡಿರುವ ಪ್ರವೃತ್ತಿಗಳನ್ನು ಹೊಂದಿದ್ದು ಅದನ್ನು ಸಾಧ್ಯವಾದಷ್ಟು ಸಾಮಾಜಿಕವಾಗಿ ಸಭ್ಯಗೊಳಿಸಿಕೊಳ್ಳುವುದಕ್ಕೆ ಯತ್ನಿಸುತ್ತಾನೆ. ಕೆಲವು ಪ್ರವೃತ್ತಿಗಳ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದರ ಬಗ್ಗೆ ಅಷ್ಟೇನೂ ಗಂಭೀರ ಗಮನ ಕೊಡುವಷ್ಟಿರುವುದಿಲ್ಲ. ಇರಲಿ, ಪ್ರಾಣಿಗಳಂತೆ ನಾವು ಸ್ವಾಭಾವಿಕವಾಗಿ ಹಂಚಿಕೊಂಡಿರುವ ಕೆಲವು ಪ್ರವೃತ್ತಿಗಳನ್ನು ಗಮನಿಸೋಣ.

ಅನ್ವೇಷಣೆ: ಹುಡುಕುವ, ತಡಕುವ ಗುಣ ಎಲ್ಲಾ ಮನುಷ್ಯನಿಗಿರುವ ಮೂಲ ಪ್ರವೃತ್ತಿ. ಆದಿಮ ಕಾಲದಲ್ಲಿ ಆಹಾರ, ಆಶ್ರಯ, ನೀರಿನಂತಹ ಉಳಿಯುವಿಕೆಗೆ ಅಗತ್ಯವಾದುದರಿಂದ ಪ್ರಾರಂಭವಾದ ಈ ಹುಡುಕುವಿಕೆ ಮತ್ತು ತಡಕುವಿಕೆಗಳು ಪ್ರವೃತ್ತಿಯಾಗಿ ರೂಪುಗೊಂಡು ಮುಂದೆ ಆಸೆ, ಆಹಾರ, ಆಶ್ರಯ, ಆಸಕ್ತಿ, ಜ್ಞಾನ, ಕುತೂಹಲ, ಈಗಿನದ್ದಕ್ಕಿಂತ ಉತ್ತಮವಾಗಿರುವ ಸ್ಥಿತಿ ಮತ್ತು ವಾತಾವರಣ; ಹೀಗೆ ನಾನಾ ನೆಪಗಳನ್ನು ಹೊಂದುತ್ತವೆ.

ಅಂತರ್ಜಾಲ ತಂತ್ರಜ್ಞಾನ ಕೈಗೆಟಕುವ ಮುನ್ನ ದೈಹಿಕವಾಗಿ ಅಲೆದಾಡುತ್ತಾ ಹುಡುಕುತ್ತಾ ತಡಕುತ್ತಿದ್ದವರು ಈಗ ಕುಳಿತಲ್ಲಿಯೂ ಅಲೆದಾಡುವ ಒಲವನ್ನು ತೋರುತ್ತಾರೆ. ಅಯನ ಅಥವಾ ಅಲೆಯುವಿಕೆ ಯಾವ ಮನುಷ್ಯನೂ ತಪ್ಪಿಸಿಕೊಳ್ಳಲಾಗದ ಪ್ರವೃತ್ತಿ.

ಕೋಪ: ಕೋಪವೂ ಕೂಡಾ ಸ್ವಾಭಾವಿಕವಾದ ಒಂದು ಪ್ರವೃತ್ತಿ. ಆದಿಮ ಕಾಲದ ಮನುಷ್ಯನ ಅಭದ್ರತೆಯ ಸ್ಥಿತಿಯಲ್ಲಿ ಎದುರಾಗುತ್ತಿದ್ದ ಬೆದರಿಕೆಗಳನ್ನು ಎದುರಿಸಲು ಒಟ್ಟಾಗಿಸಿಕೊಳ್ಳುತ್ತಿದ್ದ ಆಗ್ರಹ ಮತ್ತು ಆವೇಶಗಳು ಕೋಪದ ಗುಣವಾಗಿ ನಮ್ಮಲ್ಲಿ ಇಂದಿಗೂ ಮುಂದುವರಿಯುತ್ತಿದೆ. ಅಪಾಯವನ್ನು ಎದುರಿಸಲು ಒಂದೋ ಹೋರಾಡಬೇಕಿತ್ತು ಅಥವಾ ಓಡಿ ಹೋಗಬೇಕಿತ್ತು. ನೈಸರ್ಗಿಕವಾಗಿ ಹುಟ್ಟಿದ ಹೋರಾಟ ಗುಣದ ಭಾಗವೇ ಕೋಪವಾಗಿ ರೂಪಾಂತರ ಹೊಂದಿದ್ದು. ಕೋಪವೆಂಬುದು ಉಳಿಕೆಯ ರಕ್ಷಣಾ ತಂತ್ರವೇ ಹೊರತು ದುರ್ಗುಣವೋ ಅಥವಾ ಅನೈತಿಕವೋ ಅಥವಾ ಅಧರ್ಮವೋ ಅಲ್ಲ. ಆದರೆ ಅದರ ಪ್ರಮಾಣವನ್ನು ಗಮನಿಸುವ ಮತ್ತು ಪ್ರಕಟಿಸುವ ವಿಧಾನದಲ್ಲಿ ತರಬೇತಿಗೊಳಿಸಿಕೊಳ್ಳ ಬೇಕಾಗಿರುವುದು ನಮ್ಮ ಸಾಮಾಜಿಕ ಜೀವನದಲ್ಲಿ ಅನಿವಾರ್ಯವೂ ಹೌದು ಮತ್ತು ಒಪ್ಪಂದವೂ ಹೌದು.

ಭಯ: ಭಯಪಡುವವನೆಂದರೆ ಅಂಜುಕುಳಿ ಅಥವಾ ಹೇಡಿ ಎಂದು ವೀರತೆಯನ್ನು ಕೊಂಡಾಡುವ ಒಂದು ಪೂರ್ವಾಗ್ರಹದ ಮನಸ್ಥಿತಿ ಬಹಳಷ್ಟು ಮಂದಿಯಲ್ಲಿ ಇದೆ. ಭಯ ಕೂಡಾ ಮನುಷ್ಯನ ಮೂಲ ಪ್ರವೃತ್ತಿಯಾಗಿದ್ದು ಅದು ನಮಗೆ ಅಪಾಯಗಳನ್ನು ಎದುರಿಸುವಲ್ಲಿ ಎಚ್ಚರಿಕೆಯನ್ನು ಕೊಡುತ್ತದೆ ಮತ್ತು ನಮ್ಮನ್ನು ರಕ್ಷಿಸುತ್ತದೆ. ಪ್ರಾಣಿಗಳಲ್ಲಾಗಲಿ ಅಥವಾ ಮನುಷ್ಯರಲ್ಲಾಗಲಿ ಜೀವವನ್ನು ಉಳಿಸುವುದರಲ್ಲಿ ಭಯ ಮಹತ್ತರ ಪಾತ್ರವಹಿಸುತ್ತದೆ. ಯಾವುದೇ ವಾತಾವರಣ ಮತ್ತು ಪರಿಸ್ಥಿತಿಯಲ್ಲಿ ಭಯ ಎನ್ನುವುದು ನಮಗೆ ಎಚ್ಚರವಾಗಿದ್ದು ಕಾಪಾಡುವ ಪ್ರವೃತ್ತಿ.

ಸ್ಪರ್ಧೆ: ಪೈಪೋಟಿ ಎಂಬುದು ತನ್ನ ಉಳಿವಿಗಾಗಿ ಮಾಡುವ ಹೋರಾಟದ ಭಾಗವೇ ಆಗಿತ್ತು. ಆಹಾರ ಮತ್ತು ಆಶ್ರಯದ ವಿಷಯಗಳಲ್ಲಿ ತೀವ್ರ ಕೊರತೆ ಉಂಟಾಗುವುದು ಅಪರೂಪವೇನಾಗಿರಲಿಲ್ಲ. ಪ್ರತಿನಿತ್ಯವೂ ಬದುಕಿನ ಅನಿಶ್ಚಿತತೆಯನ್ನು ಎದುರಿಸುತ್ತಿದ್ದ ಮನುಷ್ಯನಿಗೆ ಸದ್ಯಕ್ಕೆ ದೊರಕುವ ಉಳಿಯುವಿಕೆಯ ವಿಷಯಗಳನ್ನು ಕಳೆದುಕೊಳ್ಳಲು ಸಿದ್ಧವಿರದೆ ಅಪರಿಚಿತರನ್ನು ಎದುರಿಸಲು ಮುನ್ನುಗ್ಗುತ್ತಿದ್ದ. ತಮ್ಮ ಬದುಕಿನ ಅನಿಶ್ಚಿತತೆಯನ್ನು ಮೀರಿದ ಮನುಷ್ಯರೂ ತಮ್ಮಲ್ಲಿ ಸ್ಪರ್ಧೆಯ ಗುಣವನ್ನು ಉಳಿಸಿಕೊಂಡಿರುವುದು ಇಂದಿನ ವಿಪರ್ಯಾಸ.

ಶೋಕ: ತಮ್ಮವರನ್ನು ಕಳೆದುಕೊಂಡಾಗ ಉಂಟಾಗುವ ಶೋಕ ಮತ್ತು ಸಂಕಟಗಳು ಸಹಜ ಪ್ರವೃತ್ತಿ. ದೈಹಿಕವಾಗಿ ಮಾತ್ರವಲ್ಲ ಜೀವಂತವಾಗಿದ್ದರೂ ಸಂಬಂಧಗಳನ್ನು ಕಡಿದುಕೊಂಡಾಗ ಅಥವಾ ತಿರಸ್ಕಾರಕ್ಕೆ ಒಳಗಾದಾಗ ಶೋಕಕ್ಕೆ ಒಳಗಾಗುವುದು, ಜೊತೆಗೆ ಕೋಪ ಬರುವುದೂ ಕೂಡಾ ಪ್ರಾಣ ಮತ್ತು ಮನುಷ್ಯರಲ್ಲಿ ಅಷ್ಟೇ ಸಹಜ.

ಕಾಳಜಿ: ತಮ್ಮೊಡನೆ ಸಮೂಹವನ್ನು ಅಥವಾ ಒಡನಾಟವನ್ನು ಹಂಚಿಕೊಳ್ಳುವವರ ಬಗ್ಗೆ ಕಾಳಜಿ ತೋರುವುದು. ಕುಟುಂಬದಲ್ಲಾಗಲಿ, ಸಮೂಹದಲ್ಲಾಗಲಿ ತಮ್ಮೊಡನೆ ಬದುಕುತ್ತಿರುವವರ ಸಂಕಷ್ಟದಲ್ಲಿ, ನೋವಿನಲ್ಲಿ ನೆರವಾಗುವುದು, ತಮ್ಮವರ ನೆರವಿಗಾಗಿ ಬೇರೆಯವರಲ್ಲಿ ನೆರವು ಕೋರುವುದು, ಸಾಂತ್ವನ ನೀಡುವುದು, ಸಮಾಧಾನ ಮಾಡುವುದು ಕೂಡಾ ಪ್ರಾಣ ಮತ್ತು ಮನುಷ್ಯರಲ್ಲಿ ಸಹಜವಾದ ಮೂಲ ಪ್ರವೃತ್ತಿಗಳೇ ಆಗಿವೆ.

ಕಾಮನೆಗಳು: ತಮ್ಮಲ್ಲಿ ಉಂಟಾಗುವ ಬಯಕೆಯ ಪ್ರೇರಣೆಯ ಪ್ರತಿಕ್ರಿಯೆಯಾಗಿ ತೃಪ್ತಿಯನ್ನು ಹೊಂದುವ ಕಾಮನೆಯು ಪ್ರಾಣ ಮತ್ತು ಮನುಷ್ಯರಲ್ಲಿ ಮೂಲ ಪ್ರವೃತ್ತಿಯೇ ಆಗಿದೆ. ಅದರಲ್ಲೂ ಲೈಂಗಿಕ ಬಯಕೆ ಮತ್ತು ಅದನ್ನು ಈಡೇರಿಸಿಕೊಳ್ಳಬೇಕೆಂಬ ತವಕವೂ ಕೂಡಾ ಅತ್ಯಂತ ಸಹಜವೇ ಆಗಿರುತ್ತದೆ.

ಆಡುವುದು: ದೇಹ, ಇಂದ್ರಿಯಗಳು, ಮನಸ್ಸು, ಮೆದುಳು, ನರಗಳು; ಹೀಗೆ ಎಲ್ಲವನ್ನೂ ಚುರುಕುಗೊಳಿಸುವ ಚಟುವಟಿಕೆಯಾದ ಆಟವನ್ನು ಆಡುವುದು ಕೂಡಾ ಒಂದು ಸ್ವಾಭಾವಿಕ ಪ್ರವೃತ್ತಿ. ಹಾಗೆಯೇ ಯಾರೇ ಸಂತೋಷ ಮತ್ತು ಚುರುಕುತನದಿಂದ ಆಟವಾಡುವಾಗ ನಮಗೂ ಅವರಂತೆಯೇ ಅಥವಾ ಅವರ ಜೊತೆ ಆಡಲು ಬಯಕೆ ಉಂಟಾಗುವುದು ಏನೂ ಆಶ್ಚರ್ಯವಲ್ಲ.

ವಾಸ್ತವವಾಗಿ ಮನುಷ್ಯ ತನ್ನ ಸಹಜ ಪ್ರವೃತ್ತಿಗಳನ್ನು ಸಹಜವಾಗಿರಿಸಿಕೊಳ್ಳುವ ಬದಲು ಅದರ ಕುರಿತಾಗಿ ಆಲೋಚಿಸುತ್ತಾನೆ, ಗ್ರಹಿಸುತ್ತಾನೆ, ವಿಶ್ಲೇಷಿಸುತ್ತಾನೆ, ತಾತ್ವಿಕ ರೂಪ ಕೊಡಲು ಯತ್ನಿಸುತ್ತಾನೆ ಮತ್ತು ನಿರ್ಣಯಗಳನ್ನು ಕೈಗೊಳ್ಳುತ್ತಾನೆ. ಇದರಿಂದಾಗಿ ಅವನು ತನ್ನ ಮೂಲ ಪ್ರವೃತ್ತಿಗಳನ್ನು ಪ್ರಾಣ ಗಳಷ್ಟು ಸಹಜವಾಗಿ ಮತ್ತು ಮುಕ್ತವಾಗಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಅವನು ಸ್ವಾಭಾವಿಕವಾಗಿರುವ ಅಂಶಗಳಿಗೂ ವಿಪರೀತವಾಗಿ ಅಥವಾ ಅತಿರೇಕದಲ್ಲಿ (ಓವರ್ ರಿಯಾಕ್ಟ್) ಪ್ರತಿಕ್ರಿಯಿಸುತ್ತಾನೆ. ಸಹಜವನ್ನು ಸಹಜವಾಗಿ ನೋಡುತ್ತಾ, ಸಹಜವಾಗಿಯೇ ಗ್ರಹಿಸುತ್ತಾ ಮತ್ತು ಸಹಜವಾಗಿ ಪ್ರತಿಕ್ರಿಯಿಸುವ ಗುಣವನ್ನು ಮನುಷ್ಯ ಕಳೆದುಕೊಂಡು ಸಾವಿರಾರು ವರ್ಷಗಳೇ ಆಗಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಯೋಗೇಶ್ ಮಾಸ್ಟರ್

contributor

Similar News

ಅಂಜುಗೇಡಿತನ
ಮನದರಿವು
ಬಯಲರಿವು
ಬಯಲರಿವು
ಗೀಳಿಗರು
ತನ್ನಾರೈಕೆ