87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊರೆತ ಯಶಸ್ಸೇನು?

Update: 2024-12-29 04:29 GMT

ಅಬಿ ಒಕ್ಕಲಿಗ, ನಾವು ದ್ರಾವಿಡ ಕನ್ನಡಿಗರು ಚಳವಳಿ

ಒಂದು ಸಮ್ಮೇಳನ ಹಲವರಿಗೆ ಹಲವು ಬಗೆಯ ಆಯಾಮದಲ್ಲಿ ದಕ್ಕುತ್ತದೆ. ರಾಜಕಾರಣಿಗಳಿಗೆ ತಮ್ಮ ಮುಂದಿನ ಚುನಾವಣೆಗೆ ಬಳಸಿಕೊಳ್ಳುವಿಕೆ ಜೊತೆಗೆ ಕಮಿಷನ್ ದಂಧೆ, ಅಧಿಕಾರಿಗಳಿಗೆ ಕಮಿಷನ್, ಪ್ರಮೋಷನ್ (ಕೆಲವು ರಾಜಕಾರಣಿಗಳು, ಕೆಲವು ಅಧಿಕಾರಿಗಳ ಹೊರತು ಪಡಿಸಿ), ಪುಸ್ತಕ ವ್ಯಾಪಾರಿಗಳಿಗೆ ವ್ಯವಹಾರಕ್ಕೊಂದು ರಹದಾರಿ, ಸಾಹಿತಿಗಳಿಗೆ ನನಗೆ ವೇದಿಕೆ, ನನಗೆ ಮೈಕು ಎಂಬ ಪೈಪೋಟಿ, ಪೊಲೀಸರಿಗೆ ಒಮ್ಮೆ ಮುಗಿದರೆ ಸಾಕಪ್ಪ ಎನ್ನುವ ಭಾವ, ಸ್ವಯಂ ಸೇವಕರಿಗೆ ಕನ್ನಡದ ಸೇವೆ ಮಾಡುತ್ತಿದ್ದೇವೆ ಎಂಬ ಹೆಮ್ಮೆ, ಹೋರಾಟಗಾರರಿಗೆ ಕುಂದು ಕೊರತೆಗಳ ಬಯಲಿಗೆಳೆವ ಸದುದ್ದೇಶ, ಸಾಹಿತ್ಯಾಸಕ್ತರಿಗೆ ಗೋಷ್ಠಿಗಳು, ವಿಚಾರಗಳ ಸಮಾಲೋಚನೆ, ಜನ ಸಾಮಾನ್ಯರಿಗೆ ಕಾಲ ಕಳೆಯಲೊಂದು ಜಾತ್ರೆ.

ಈ ಸಲ (2024)ಮಂಡ್ಯದಲ್ಲಿ ನಡೆದ ಸಮ್ಮೇಳನದಲ್ಲಿ ಹೋರಾಟಗಾರರ ಆಯಾಮವೇ ಮೇಲುಗೈ ಸಾಧಿಸಿದ್ದು ವಿಶೇಷ. ಇದಕ್ಕೆ ‘ನಾವು ದ್ರಾವಿಡ ಕನ್ನಡಿಗರು ಚಳವಳಿ’ ಎತ್ತಿದ ಎರಡು ವಿಚಾರಗಳು ಬಹುಮುಖ್ಯ ಕಾರಣ. ಅವು ಇಂತಿವೆ.

1)ಕನ್ನಡನಾಡಿನಲ್ಲಿ ಹಿಂದಿ ಹೇರಿಕೆ ತಡೆಗಟ್ಟಲು ತ್ರಿಭಾಷಾ ಸೂತ್ರ ತೆಗೆದು ದ್ವಿಭಾಷಾ ಸೂತ್ರ ಅಳವಡಿಸಬೇಕು. ಇದರ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಮಾಡಬೇಕು.

2)ಊಟದಲ್ಲಿ ಸಮಾನತೆಗಾಗಿ ಸಮ್ಮೇಳನದಲ್ಲಿ ಬಾಡೂಟ ಬಾಡಿಲ್ಲದೂಟ ಎರಡನ್ನು ಕೊಡಬೇಕು.

ಮೊದಲ ವಿಚಾರಕ್ಕಿಂತ ಎರಡನೇ ವಿಚಾರ ನಾಡಿನ ಮೂಲೆ ಮೂಲೆಗಳಲ್ಲಿರುವ ಜನ ಸಾಮಾನ್ಯರನ್ನು ತಲುಪಿತು ಮತ್ತು ಎಲ್ಲಾ ಬಗೆಯ ಹೋರಾಟಗಾರರು ಪರ ವಿರೋಧ ಚರ್ಚೆಗಳಲ್ಲಿ ಮುಳುಗುವಂತೆ ಮಾಡಿತು. ಅದರಲ್ಲೂ ಮಂಡ್ಯ ಜಿಲ್ಲೆಯ ಹೋರಾಟಗಾರರನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ಮೊಟ್ಟೆ ತಿನ್ನುವಂತೆ, ಬಾಡೂಟದ ಪರ ಮಾಡುವಂತೆ, ನಗರದಲ್ಲಿ ಬೈಕ್ ರ್ಯಾಲಿ ಮಾಡಿಬಿಟ್ಟಿತು. ಒಂದು ತಿಂಗಳು ಮೊದಲಿನಿಂದಲೂ ಮಾಡಿಕೊಂಡು ಬಂದ ಪ್ರತಿಭಟನೆಗಳದ್ದೇ ಒಂದು ತೂಕವಾದರೆ ಸಮ್ಮೇಳನ ನಡೆಯುವ ಮೂರು ದಿನ ನಮ್ಮ ನಡೆ ನುಡಿಯದ್ದು ಇನ್ನೊಂದು ತೂಕವಾಯಿತು. ಸಮ್ಮೇಳನದ ಮೊದಲ ದಿನ ಮುಖ್ಯ ವೇದಿಕೆ ಮಹಾದ್ವಾರದ ಬಳಿ ಇಬ್ಬರು ಚಿಕನ್ ಬಿರಿಯಾನಿ ತಿಂದು, ಎರಡನೇ ದಿನ ಅದೇ ಜಾಗದಲ್ಲಿ 50 ಜನ ಕೋಳಿ ಬಾಡು ಮತ್ತು ಮೊಟ್ಟೆ ತಿಂದು ಮತ್ತೆ ಮೂರನೇ ದಿನ ಪೊಲೀಸರ ಜೊತೆ ಕಿತ್ತಾಡುತ್ತಲೇ ಮುಖ್ಯವಾಗಿ ಊಟ ಬಡಿಸುವ ಜಾಗದಲ್ಲೇ ನೂರಾರು ಜನರಿಗೆ ಚಿಕನ್ ಕಬಾಬ್ ವಿತರಿಸಿ ಸರಕಾರ ನುಡಿದಂತೆ ನಡೆಯಲೇಬೇಕು, ಹೇಳಿದಂತೆ ಮೊಟ್ಟೆ ಕೊಡಲೇಬೇಕು ಎಂಬ ಒತ್ತಡ ಸೃಷ್ಟಿಸಿದೆವು.ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ, ಟಿವಿಗಳಲ್ಲಿ 10ರಿಂದ 15 ದಿನ ಬಾಡೂಟದ ವಿಚಾರವೇ ತಾಂಡವವಾಡಿತು. ಹಲವರು ಲೇಖನ ಬರೆದರು, ಕವಿತೆ ಬರೆದರು, ಚಿತ್ರ ಬರೆದರು, ಚರ್ಚೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು, ಹಾಡುಗಳನ್ನು ಹಾಡಿದರು, ಪೋಸ್ಟರ್ ಡಿಸೈನ್ ಗಳು, ಕಾರ್ಟೂನ್‌ಗಳು ನಲಿದಾಡಿದವು. ಕಡೆಯಲ್ಲಿ ಕರ್ನಾಟಕ ಸರಕಾರ ಈ ಹೋರಾಟ ಪರಿಗಣಿಸಿ ಅಧಿಕೃತವಾಗಿ ಸಾವಿರಾರು ಜನರಿಗೆ ಮೊಟ್ಟೆ ನೀಡಿ 86 ವರ್ಷಗಳಿಂದ ಊಟದಲ್ಲಿ ಅಸಮಾನತೆಯ ಸಸ್ಯಾಹಾರಿ ಕನ್ನಡ ಸಾಹಿತ್ಯ ಸಮ್ಮೇಳನ ಆಗಿದ್ದನ್ನು ಇನ್ನು ಮುಂದೆ ಊಟದಲ್ಲಿ ಸಮಾನತೆ ಕಡೆಗೆ ಸಾಗುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುನ್ನುಡಿ ಬರೆಯಿತು.

ನಾವು ಈ ಹೋರಾಟ 2024 ನವೆಂಬರ್ 23ರಂದು ಅರಂಭಿಸಿ ದಿನದಿಂದ ದಿನಕ್ಕೆ ಅನೇಕರನ್ನು ಒಳಗೊಂಡ ನಂತರ ಆ ಕಡೆ ಈ ಕಡೆ ದಿಕ್ಕು ತಪ್ಪುತ್ತಿದ್ದಾಗ ಮತ್ತೆ ಮತ್ತೆ ಗುರಿಯೆಡೆಗೆ ಎಳೆದು ತರಲು ಮತ್ತು ಕುವೆಂಪುರವರು ಹೇಳಿದ್ದಂತೆ ‘ಸತ್ತಂತಿಹರನು ಬಡಿದೆಚ್ಚರಿಸಲು’ ಸಾಹಿತ್ಯ ಪರಿಷತ್ ಅಧ್ಯಕ್ಷರು ತಮ್ಮ ವೆಬ್‌ಸೈಟ್‌ನಲ್ಲಿ 2024 ಡಿಸೆಂಬರ್ 6ರಂದು ‘ಮಾಂಸಾಹಾರ, ಮದ್ಯ ಮತ್ತು ತಂಬಾಕು ನಿಷೇಧ’ ಎಂದು ಮಾಂಸಾಹಾರವನ್ನು ಕೆಟ್ಟ ಚಟಗಳಾದ ಮದ್ಯ, ತಂಬಾಕು ಜೊತೆ ಸಮೀಕರಿಸಿ ಪ್ರಕಟಿಸಿದ್ದು ವರವಾಗಿ ಪರಿಣಮಿಸಿತು. ವೆಬ್‌ಸೈಟಿನಲ್ಲಿ ಮೇಲಿನ ಸಾಲಿನಲ್ಲಿದ್ದ ಮಾಂಸಾಹಾರ ಪದ ತೆಗೆಸಿದ್ದು ಮೊತ್ತ ಮೊದಲ ಯಶಸ್ಸು ಈ ಹೋರಾಟದ್ದು. ಇಷ್ಟೆಲ್ಲಾ ಆದರೂ ಸಾಹಿತ್ಯ ಪರಿಷತ್ ಅಧ್ಯಕ್ಷರು ತಾವು ಪ್ರಕಟಿಸಿದ್ದ ಕೆಟ್ಟ ಸಾಲಿಗೆ ಕ್ಷಮೆ ಕೇಳದೆ ಕನ್ನಡ ಜನ ವಿರೋಧಿ, ಸಂಸ್ಕೃತ ಪರ ಆರ್ಯವಾದದ ಮನಸ್ಥಿತಿ ಮುಂದುವರಿಸಿರುವುದು ಮುಂದಿನ ದಿನಗಳಲ್ಲಿ ಎಲ್ಲಾ ಜನಪರವಾದ ದ್ರಾವಿಡ ಕನ್ನಡಿಗರ ವಾದ ಬೆಳೆಸಲು ರಹದಾರಿ ತೆರೆದುಕೊಟ್ಟಂತಾಗಿದೆ.

ಹೇಳಿ ಕೇಳಿ ಎರಡನೇ ವಿಚಾರ ಊಟದ್ದು ಆದ್ದರಿಂದ ಕಟ್ಟಕಡೆಯ ಮನುಷ್ಯನನ್ನು ತಲುಪಿತ್ತು ಇದು ಅರ್ಥ ಆಗುವಂತೆ ಮೊದಲ ವಿಚಾರವಾದ ‘ಹಿಂದಿ ಹೇರಿಕೆ’ ಜನಸಾಮಾನ್ಯರಿಗೆ ಅರ್ಥವಾಗದು.

15 ದಿನಗಳ ಮೊದಲೇ ಮುಖ್ಯಮಂತ್ರಿ ಮತ್ತು ಸರ್ವಾಧ್ಯಕ್ಷರ ಭೇಟಿ ಮಾಡಿ ಮೊದಲ ದಿನದ ಭಾಷಣದಲ್ಲಿ ಹಿಂದಿ ಹೇರಿಕೆ ಬಗ್ಗೆ ಮಾತನಾಡಬೇಕು ಎಂದು ಮನವಿ ಮಾಡಿದ್ದೆವು. ಅದರಂತೆಯೇ ಅವರಿಬ್ಬರೂ ಮಾತನಾಡಿದ್ದು ನಮ್ಮ ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲ ಸಿಕ್ಕಿತು. ಇದರ ಜೊತೆಗೆ ಮೊದಲ ದಿನದಿಂದಲೂ ನೂರಾರು ಜನರು ‘ತ್ರಿಭಾಷಾ ಸೂತ್ರ ಬೇಡ, ದ್ವಿಭಾಷಾ ನೀತಿ ಬೇಕು’ ಎಂಬ ಟಿ ಶರ್ಟ್ ತೊಟ್ಟುಕೊಂಡು ಕರಪತ್ರ ವಿತರಿಸಿದೆವು. ಎರಡನೇ ದಿನ ಸಮಾನಾಂತರ ವೇದಿಕೆಗಳಿಗೆ ಹೋಗಿ ಹಿಂದಿ ಹೇರಿಕೆ ಬಗ್ಗೆ ನಿರ್ಣಯ ಮಾಡಲೇಬೇಕು ಎಂದು ತಾಕೀತು ಮಾಡಿದೆವು. ಮೂರನೇ ದಿನ ನಿರ್ಣಯವಾಗುವಾಗ ಪೊಲೀಸ್‌ನವರು ಮುಖ್ಯ ವೇದಿಕೆಗೆ ನಾವು ತಲುಪದಂತೆ ದಿಕ್ಕು ತಪ್ಪಿಸಿದರು, ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕರು ಬಂದು ನಮ್ಮನ್ನು ಸಮಾಧಾನ ಮಾಡಿದರು ಮತ್ತು ಎಂದೋ ತೀರ್ಮಾನಿಸಿದ್ದ ನಿರ್ಣಯಗಳನ್ನು ಓದಿದರು. ನಾವು ಊಹಿಸಿದಂತೆ ಕನ್ನಡ ವಿರೋಧಿ ಸಂಸ್ಕೃತ ಪರ ಇರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ನಿರ್ಣಯದಲ್ಲಿ ಹಿಂದಿ ಹೇರಿಕೆ ವಿಚಾರ ಕೈ ಬಿಟ್ಟರು.

ನಮ್ಮ ಯಶಸ್ಸು ಯಾವುದೆಂದರೆ ನಾವು ಈ ಮೊದಲೇ ಒತ್ತಾಯಿಸಿದ್ದಂತೆ ಮುಖ್ಯಮಂತ್ರಿಗಳು, ಸಮ್ಮೇಳನದ ಸರ್ವಾಧ್ಯಕ್ಷರು ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದ ಅಧಿಕೃತ ವೇದಿಕೆಯಲ್ಲಿಯೇ ಹಿಂದಿ ಹೇರಿಕೆ ಬಗ್ಗೆ ಗುಡುಗಿದರು. ಸಮಾನಾಂತರ ವೇದಿಕೆಗಳಲ್ಲಿ ನಡೆದ 2-3 ಗೋಷ್ಠಿಗಳಲ್ಲಿ ಕೂಡ ಇದರ ಬಗ್ಗೆ ಪ್ರಸ್ತಾವ ಆಯಿತು ಮತ್ತು ಲಕ್ಷಾಂತರ ಕರಪತ್ರಗಳು ಜನ ಸಾಮಾನ್ಯರನ್ನು ತಲುಪಿದವು. ನಮ್ಮ ತಂಡದವರು ಕರಪತ್ರ ವಿತರಿಸುವಾಗ ಹಲವು ನಾಡದ್ರೋಹಿಗಳ ಜೊತೆ ವಾಗ್ವಾದ ಬೇರೆ ನಡೆಯಿತು.

ಸಮ್ಮೇಳನದ ಮೂರು ದಿನಗಳ ಟಿವಿ, ಪತ್ರಿಕಾ ಸುದ್ದಿಗಳಲ್ಲಿ ಹಿಂದಿ ಹೇರಿಕೆ ವಿಚಾರ ಪ್ರಧಾನವಾಗಿಯೇ ಪ್ರಕಟವಾಯಿತು.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಸರಕಾರದ ಮೇಲೆ ಈ ಎರಡು ವಿಚಾರಗಳ ಬಗ್ಗೆ ನಿರಂತರವಾಗಿ ಒತ್ತಡ ಹೇರಿ ಸರಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಊಟದಲ್ಲಿ ಸಮಾನತೆ ಕಡೆಗೆ ಸಾಗಲು ಬಾಡೂಟ-ಬಾಡಿಲ್ಲದೂಟ ಎರಡನ್ನೂ ಕೊಡಬೇಕು ಎಂದು ಕಾನೂನು ಮಾಡಿಸಲು ಮತ್ತು ತ್ರಿಭಾಷಾ ಸೂತ್ರ ತೆಗೆದು ದ್ವಿಭಾಷಾ ಸೂತ್ರ ಅಳವಡಿಸುವ ಕಾನೂನು ಮಾಡಿಸಲು ಡಾ.ಬಿ.ಆರ್. ಅಂಬೇಡ್ಕರ್ ರವರು ಹೇಳುವಂತೆ ಜಾಗೃತರಾಗಿರಿ (ಎಜುಕೇಟ್), ಒಗ್ಗೂಡಿರಿ (ಆರ್ಗನೈಸ್), ಹೋರಾಡಿ (ಅಜಿಟೇಟ್) ಎಂಬ ಸೂತ್ರದಂತೆ ಜನರನ್ನು ಜೊತೆಗೆ ಸರಕಾರವನ್ನು ಜಾಗೃತಗೊಳಿಸುವ ಕೆಲಸ ಮಾಡಿದ ಹೆಮ್ಮೆ ನಮಗಿದೆೆ. ಚಿಕ್ಕದಾಗಿ ಚೊಕ್ಕವಾಗಿ ಹೇಳಬೇಕು ಅಂದರೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ‘ಹಿಂದಿ ಬೇಡ-ಬಾಡು ಬೇಕು’ ಎಂಬ ಸಮಾನತೆ, ಸ್ವಾಯತ್ತತೆ ಕಡೆಗೆ ಸಾಗುವ ಯಶಸ್ಸಿನ ಚರಿತೆಯ ಸಮ್ಮೇಳನವಾಗಲು ಪ್ರಯತ್ನಿಸಿದ್ದೇವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News