ಅಮಿತ್ ಶಾರಂತಹವರಿಗೆ ಅಂಬೇಡ್ಕರ್ ಹೆಸರು ಫ್ಯಾಷನ್ ಆಗಿಯೇ ಕಾಣುತ್ತದೆ ಏಕೆಂದರೆ...
ಭಾಗ- 2
ಸಂವಿಧಾನದ ರಚನೆಯಾದಾಗ, ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ ಎಂದು, ಆರೆಸ್ಸೆಸ್ ಮುಖವಾಣಿಯಾದ ‘ಆರ್ಗನೈಸರ್’ 1949ರ ನವೆಂಬರ್ 30ರ ಸಂಚಿಕೆಯ ಸಂಪಾದಕೀಯದಲ್ಲಿ ಜರೆಯಲಾಗಿತ್ತು. ಪ್ರಾಚೀನ ಭಾರತದ ಯಾವ ಕುರುಹುಗಳೂ ಸಂವಿಧಾನದಲ್ಲಿ ಇಲ್ಲವೆಂದು ಆರೆಸ್ಸೆಸ್ ಅಪಸ್ವರ ತೆಗೆದಿತ್ತು ಎಂದು ಈ ವಿಚಾರದ ಬಗ್ಗೆ ಬರೆದಿರುವ ರಾಮಚಂದ್ರ ಗುಹಾ ಉಲ್ಲೇಖಿಸಿದ್ದಾರೆ.
ಹಿಂದೂ ಸಂಹಿತೆ ಮಸೂದೆ:
ಹಿಂದೂ ಸಂಹಿತೆ ಮಸೂದೆಯ ಮೂಲವಿರುವುದು 1937ರಲ್ಲಿ ಜಾರಿಗೆ ಬಂದ ಮಹಿಳೆಯರ ಆಸ್ತಿ ಹಕ್ಕು ಕಾಯ್ದೆಯಲ್ಲಿ. ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ಆನಂತರ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನದ ಮುಖ್ಯ ಕರಡು ಪ್ರತಿಪಾದಕರಾಗಿದ್ದ ಸರ್ ಬಿ.ಎನ್. ರಾವ್ ಅಧ್ಯಕ್ಷತೆಯ ಸಮಿತಿ 1944ರಲ್ಲಿ ಕರಡು ಹಿಂದೂ ಸಂಹಿತೆ ರಚಿಸಿತು. ಆದರೆ ಸ್ವಾತಂತ್ರ್ಯ ಮತ್ತು ವಿಭಜನೆ ನಂತರದ ರಾಜಕೀಯ ಸಂದರ್ಭಗಳು ಅದರ ಚರ್ಚೆಗೆ ಅವಕಾಶ ನೀಡಲಿಲ್ಲ. 1948ರಲ್ಲಿ ಪ್ರಧಾನಿ ನೆಹರೂ ಹೊಸ ಸಂಹಿತೆಯ ಕರಡು ರಚನೆಯನ್ನು ಅಂಬೇಡ್ಕರ್ ಅವರಿಗೆ ವಹಿಸಿದರು. ಹಿಂದೂ ಕಾನೂನನ್ನು ಕ್ರೋಡೀಕರಿಸುವುದರಿಂದ ಹಿಂದೂ ಮಹಿಳೆಯರು ಅನುಭವಿಸುತ್ತಿರುವ ಅನ್ಯಾಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಡೆಯುವುದು ಸಾಧ್ಯ ಎಂದು ನೆಹರೂ ಮತ್ತು ಅಂಬೇಡ್ಕರ್ ಭಾವಿಸಿದ್ದರು. ಭಾರತೀಯ ಸಮಾಜದಲ್ಲಿ ಸಮಾನತೆಯನ್ನು ತರುವುದು ಮತ್ತು ಜಾತಿ, ಜನಾಂಗ, ಧರ್ಮ ಮತ್ತು ಲಿಂಗದ ಆಧಾರದ ಮೇಲೆ ಎಲ್ಲಾ ತಾರತಮ್ಯವನ್ನು ಕೊನೆಗೊಳಿಸುವುದು ದೇಶದ ಮೊದಲ ಪ್ರಧಾನಿ ಮತ್ತು ಮೊದಲ ಕಾನೂನು ಸಚಿವರ ಧ್ಯೇಯವಾಗಿತ್ತು. ಆದರೆ ಮಸೂದೆಯನ್ನು ಪರಿಚಯಿಸಿದ ಕೂಡಲೇ ದೇಶದಲ್ಲಿ ಸಾಂಪ್ರದಾಯಿಕ ಹಿಂದೂಗಳಿಂದ ತೀವ್ರ ವಿರೋಧ ಬಂತು. ಭಾರತದ ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಕೂಡ ಅದನ್ನು ವಿರೋಧಿಸಿದ್ದರು. 1951ರ ಫೆಬ್ರವರಿಯಲ್ಲಿ ಸಂಪುಟ ಹಿಂದೂ ಸಂಹಿತೆ ಮಸೂದೆಯನ್ನು ಪರಿಚಯಿಸಲು ನಿರ್ಧರಿಸಿದರೂ, ಸೆಪ್ಟಂಬರ್ ಮೊದಲ ವಾರದಲ್ಲಿ ಕೈಗೆತ್ತಿಕೊಳ್ಳಲಾಗುವ ಸಂಸತ್ತಿನ ಅಧಿವೇಶನಕ್ಕೆ ಅದನ್ನು ಮುಂದೂಡಲಾಯಿತು. ತಮ್ಮ ಅನಾರೋಗ್ಯದ ಕಾರಣ ದೀರ್ಘ ಚಿಕಿತ್ಸೆಗೆ ಒಳಪಡಬೇಕಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ ಮಧ್ಯದಲ್ಲಿ ಮಸೂದೆಯನ್ನು ಕೈಗೆತ್ತಿಕೊಂಡು ಸೆಪ್ಟಂಬರ್ ವೇಳೆಗೆ ಪೂರ್ಣಗೊಳಿಸಲು ಅಂಬೇಡ್ಕರ್ ಆಗ ಪ್ರಧಾನಿ ನೆಹರೂ ಅವರನ್ನು ಕೋರಿದರು. ಆ ನಡುವೆ ಮಸೂದೆಗೆ ಹೆಚ್ಚಿನ ವಿರೋಧ ವ್ಯಕ್ತವಾಯಿತು. ಜನಸಂಘ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಮಸೂದೆ ವಿರುದ್ಧ ಸಾರ್ವಜನಿಕ ಹೇಳಿಕೆ ನೀಡಿದರು. ನೆಹರೂ ಮತ್ತು ಅಂಬೇಡ್ಕರ್ ವಿರುದ್ಧ ಆರೆಸ್ಸೆಸ್ ಪ್ರತಿಭಟನೆ ನಡೆಸಿತು. ಖಾವಿಧಾರಿ ಸಂತರೊಬ್ಬರು ಬ್ರಾಹ್ಮಣರ ಆಸ್ತಿಯಲ್ಲಿ ಅಸ್ಪಶ್ಯನಿಗೆ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ ಎಂದು ಹೇಳುವ ಮಟ್ಟಕ್ಕೂ ಹೋದರು. ಸಂಸತ್ತಿನೊಳಗೂ ಅನೇಕರು ವೈದಿಕ ಧರ್ಮ ನಾಶ ಮಾಡಲು ಹೊರಟಿದ್ದಾರೆ ಎಂದು ನೆಹರೂ ಮತ್ತು ಅಂಬೇಡ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸಂಸತ್ತಿನಲ್ಲಿ ಮತ್ತು ಹೊರಗೆ ಮಸೂದೆಗೆ ಬಲವಾದ ವಿರೋಧವಿದ್ದ ಹಿನ್ನೆಲೆಯಲ್ಲಿ ಅದರ ಮಂಡನೆ ವಿಳಂಬವಾಯಿತು.
ನೆಹರೂ ಅವರ ತೀವ್ರ ಪ್ರಯತ್ನಗಳ ಹೊರತಾಗಿಯೂ ಮಸೂದೆಯ ಆಶಯಗಳು ಈಡೇರುವುದು ಸಾಧ್ಯವಾಗಲಿಲ್ಲ. ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಮಸೂದೆಯ ಭಾಗ 2ನ್ನು ಪ್ರತ್ಯೇಕವಾಗಿ ಅಂಗೀಕರಿಸಲು ನಿರ್ಧರಿಸಲಾಯಿತು.
ಆದರೂ ಮಸೂದೆಯ ಎರಡನೇ ಭಾಗವನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ ಮತ್ತು 1951ರ ಸೆಪ್ಟಂಬರ್ 22ರಂದು ಅದನ್ನು ಕೈಬಿಡಲಾಯಿತು.
ಸಂಪೂರ್ಣ ನಿರಾಶರಾದ ಅಂಬೇಡ್ಕರ್ ಅದೇ ಸೆಪ್ಟಂಬರ್ 27ರಂದು ನೆಹರೂ ಸಂಪುಟಕ್ಕೆ ರಾಜೀನಾಮೆ ನೀಡಿದರು.
ಸರಕಾರ ಮಾತ್ರವಲ್ಲದೆ, ಭಾರತದಲ್ಲಿ ಮಹಿಳೆಯರ ನೈತಿಕ ಧೈರ್ಯ ಮತ್ತು ಬಲದ ಕೊರತೆ ಮಸೂದೆಗೆ ಅಡ್ಡಿಯಾಗಿದೆ ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟರು. ಮಸೂದೆ ಅಂಗೀಕರಿಸಲು ಯಾವುದೇ ಪ್ರಮುಖ ಮಹಿಳಾ ನಾಯಕರು ಬೆಂಬಲಿಸಲಿಲ್ಲ ಎಂಬುದು ಅವರಿಗೆ ತೀವ್ರ ನೋವುಂಟು ಮಾಡಿತ್ತು.
ಹಿಂದೂ ಸಂಹಿತೆ ಮಸೂದೆ ಅಂಗೀಕಾರವಾಗದಿರುವುದರ ಜೊತೆಗೆ, ಅಂಬೇಡ್ಕರ್ ಅವರು ಸಂಪುಟಕ್ಕೆ ರಾಜೀನಾಮೆ ನೀಡಲು ಇತರ ಕಾರಣಗಳೂ ಇದ್ದವು. ಮೊದಲನೆಯದಾಗಿ, ವಿದೇಶಾಂಗ ನೀತಿ ಕರಿತು ನೆಹರೂ ಅವರೊಂದಿಗಿನ ಭಿನ್ನಾಭಿಪ್ರಾಯಗಳು. ಎರಡನೆಯದಾಗಿ, ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಜಾತಿಗಳು ಅದೇ ಹಳೆಯ ದಬ್ಬಾಳಿಕೆ ಮತ್ತು ತಾರತಮ್ಯದಿಂದ ಬಳಲುತ್ತಿರುವ ಬಗ್ಗೆ ಅವರು ತೀವ್ರವಾಗಿ ನೊಂದಿದ್ದರು. ಮೂರನೆಯದಾಗಿ, ಕಾನೂನು ಸಚಿವಾಲಯದ ಸ್ಥಳದಲ್ಲಿ ಯೋಜನಾ ಆಯೋಗದ ಉಸ್ತುವಾರಿಯನ್ನು ಅವರು ಬಯಸಿದ್ದರು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಸಂಪುಟಕ್ಕೆ ರಾಜೀನಾಮೆ ಬೆನ್ನಲ್ಲೇ ಅಂಬೇಡ್ಕರ್ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧಧರ್ಮವನ್ನು ಸ್ವೀಕರಿಸುವ ನಿರ್ಧಾರ ಕೈಗೊಂಡಿದ್ದರು.
ಹಿಂದೂ ಸಂಹಿತೆ ಮಸೂದೆಯನ್ನು ನಂತರ ನಾಲ್ಕು ಮಸೂದೆಗಳಾಗಿ ವಿಭಜಿಸಲಾಯಿತು. ಹಿಂದೂ ವಿವಾಹ ಕಾಯ್ದೆ, 1955; ಹಿಂದೂ ಉತ್ತರಾಧಿಕಾರ ಕಾಯ್ದೆ, 1956; ಹಿಂದೂ ಅಲ್ಪಸಂಖ್ಯಾತ ಮತ್ತು ಪಾಲನಾ ಕಾಯ್ದೆ, 1956 ಮತ್ತು ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆ, 1956. ಇವು ಮೂಲ ಹಿಂದೂ ಸಂಹಿತೆ ಮಸೂದೆಯ ಆಲೋಚನೆಗಳು ಮತ್ತು ತತ್ವಗಳನ್ನು ಒಳಗೊಂಡ ನಾಲ್ಕು ಕಾನೂನುಗಳಾಗಿವೆ.
ಡಾ. ಅಂಬೇಡ್ಕರ್ ಅವರ ಪ್ರಕಾರ, ‘ಈ ಮಸೂದೆಯು ಈ ದೇಶದಲ್ಲಿ ಶಾಸಕಾಂಗವು ಕೈಗೊಂಡ ಅತ್ಯಂತ ದೊಡ್ಡ ಸಾಮಾಜಿಕ ಸುಧಾರಣಾ ಕ್ರಮವಾಗಿದೆ’. ಹಿಂದೆ ಭಾರತದ ಶಾಸಕಾಂಗವು ಅಂಗೀಕರಿಸಿದ ಅಥವಾ ಭವಿಷ್ಯದಲ್ಲಿ ಅಂಗೀಕರಿಸಲ್ಪಡುವ ಯಾವುದೇ ಕಾನೂನನ್ನು ಅದರೊಂದಿಗೆ ಅದಕ್ಕಿರುವ ಮಹತ್ವದ ದೃಷ್ಟಿಯಿಂದ ಹೋಲಿಸಲಾಗುವುದಿಲ್ಲ. ಹಿಂದೂ ಸಮಾಜದಲ್ಲಿ ವರ್ಗ, ವರ್ಗಗಳ ನಡುವಿನ ಅಸಮಾನತೆ ಮತ್ತು ಲಿಂಗಭೇದವನ್ನು ಇಲ್ಲವಾಗಿಸುವ ನಿಟ್ಟಿನ ಮಹತ್ವದ ಹೆಜ್ಜೆ ಅದಾಗಿತ್ತು. ರಾಜೀವ್ ಗಾಂಧಿ ಸರಕಾರ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಪಂಚಾಯತ್ ರಾಜ್ ಮಸೂದೆ ತರುವ ಮೊದಲು ಮಹಿಳಾ ಸಬಲೀಕರಣ ನಿಟ್ಟಿನಲ್ಲಿಯ ಅತ್ಯಂತ ದೊಡ್ಡ ಹೆಜ್ಜೆಯಾಗಿದ್ದ ಹಿಂದೂ ಸಂಹಿತೆ ಮಸೂದೆಯ ಶ್ರೇಯಸ್ಸು ನೆಹರೂ ಮತ್ತು ಅಂಬೇಡ್ಕರ್ ಇಬ್ಬರಿಗೂ ಸಲ್ಲುತ್ತದೆ.
ಅಂಬೇಡ್ಕರ್ ಅವರನ್ನು ಅವಮಾನಿಸಿದವರು ಯಾರು?
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಅಮಿತ್ ಶಾ ಅವರ ಅವಹೇಳನಕಾರಿ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವಾಗ, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆಲ್ಲ ಅವಮಾನಿಸಿದೆ ಎಂಬುದನ್ನು ಮುಂದೆ ಮಾಡಿದ್ದಾರೆ. 1946ರಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾದಾಗ ಕಾಂಗ್ರೆಸ್ ನಾಯಕತ್ವದ ಒಂದು ವಲಯ, ವಿಶೇಷವಾಗಿ ವಲ್ಲಭಭಾಯಿ ಪಟೇಲ್, ಬಿ.ಜಿ. ಖರೆ ಮತ್ತು ಕಿರಣ್ ಶಂಕರ್ ರಾಯ್ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಹೊರತಾಗಿಯೂ, 1946ರಲ್ಲಿ ಅವಿಭಜಿತ ಬಂಗಾಳದ ಜೆಸ್ಸೋರ್-ಖುಲ್ನಾ ಕ್ಷೇತ್ರದಿಂದ ಅಂಬೇಡ್ಕರ್ ಅವರು ಸಂವಿಧಾನ ಸಭೆಗೆ ಆಯ್ಕೆಯಾದರು. ಅವರ ಉಮೇದುವಾರಿಕೆಯನ್ನು ಪರಿಶಿಷ್ಟ ಜಾತಿಗಳ ಒಕ್ಕೂಟದ ನಾಯಕ ಜೋಗೇಂದ್ರ ನಾಥ್ ಮಂಡಲ್ ಪ್ರಸ್ತಾಪಿಸಿದ್ದರು ಮತ್ತು ಕಾಂಗ್ರೆಸ್ ಶಾಸಕಾಂಗ ಮಂಡಳಿಯ ಸದಸ್ಯ ಗಾಯನಾಥ್ ಬಿಸ್ವಾಸ್ ಅನುಮೋದಿಸಿದ್ದರು. ವಿಭಜನೆಯ ನಂತರ, ಜೆಸ್ಸೋರ್-ಖುಲ್ನಾ ಕ್ಷೇತ್ರ ಪೂರ್ವ ಪಾಕಿಸ್ತಾನದ ಭಾಗವಾಯಿತು ಮತ್ತು ಡಾ. ಅಂಬೇಡ್ಕರ್ ತಮ್ಮ ಸ್ಥಾನ ಕಳೆದುಕೊಂಡರು. ನಂತರ ಸಂವಿಧಾನ ಸಭೆಯ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, 1947ರಲ್ಲಿ ಮುಕುಂದ್ ರಾಮರಾವ್ ಜಯಕರ್ ಅವರ ರಾಜೀನಾಮೆಯಿಂದ ಉಂಟಾದ ಖಾಲಿ ಸ್ಥಾನ ತುಂಬಲು ಬಾಂಬೆಯಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಡಾ. ಅಂಬೇಡ್ಕರ್ ಅವರನ್ನು ಮರು ಆಯ್ಕೆ ಮಾಡುವಂತೆ ಬಿ.ಜಿ. ಖರೆ ಅವರಿಗೆ ನಿರ್ದೇಶನ ನೀಡಿದರು.
ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮ್ಮ ಸಂಪುಟಕ್ಕೆ ಸೇರಲು ಅಂಬೇಡ್ಕರ್ ಅವರನ್ನು ಆಹ್ವಾನಿಸಿದರು. 1947ರ ಆಗಸ್ಟ್ 15ರಂದು ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ಅಂಬೇಡ್ಕರ್ ಪ್ರಮಾಣವಚನ ಸ್ವೀಕರಿಸಿದರು. ತರುವಾಯ, ಅವರು ಸಂವಿಧಾನ ಸಭೆಯ ಕರಡು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಭಾರತದ ಸಂವಿಧಾನದ ಕರಡು ರಚನೆ ಪ್ರಕ್ರಿಯೆಯ ನೇತೃತ್ವ ವಹಿಸಿದರು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ನ ಬ್ರಾಹ್ಮಣ ಸಂಪ್ರದಾಯವಾದಿಗಳು ಮಾತ್ರವಲ್ಲದೆ ಜನಸಂಘದ, ಆರೆಸ್ಸೆಸ್ ಹಿಂದುತ್ವವಾದಿಗಳು ವಿರೋಧಿಸಿದರು.
ಮತ್ತೊಂದೆಡೆ, ಕಾಂಗ್ರೆಸ್‌ನ ಪ್ರಗತಿಪರರು ಅವರ ಬಗ್ಗೆ ಹೆಚ್ಚು ಸಮತೋಲಿತ, ಸಮನ್ವಯದ ನಡೆ ಅನುಸರಿಸಿದ್ದರು. ಅವರು ಸಮಾಜದ ದಮನಿತ ವರ್ಗಗಳಿಗೆ ನ್ಯಾಯವನ್ನು ಪಡೆಯುವಲ್ಲಿ ಅಂಬೇಡ್ಕರರ ಪಾಂಡಿತ್ಯ, ಪ್ರತಿಭೆ ಮತ್ತು ಬದ್ಧತೆಯನ್ನು ಮನಗಂಡಿದ್ದರು. ವಿ.ಪಿ. ಸಿಂಗ್ ಸರಕಾರ 1990ರಲ್ಲಿ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನವನ್ನು ನೀಡಿತು. ಭಾರತದಲ್ಲಿನ ಸೈದ್ಧಾಂತಿಕ ರಾಜಕೀಯದ ಒಂದು ಪಡೆಯೇ ಹೇಗೆ ಅಂಬೇಡ್ಕರ್ ವಿರೋಧಿಯಾಗಿದೆ ಎಂಬುದಕ್ಕೆ ಸ್ಪಷ್ಟ ಪುರಾವೆ 1997ರಲ್ಲಿ ಪ್ರಕಟವಾದ ಅರುಣ್ ಶೌರಿ ಅವರ ‘ವರ್ಶಿಪ್ಪಿಂಗ್ ಫಾಲ್ಸ್ ಗಾಡ್ಸ್’ ಪುಸ್ತಕ. ಶೌರಿ ತಮ್ಮ ಪುಸ್ತಕದಲ್ಲಿ, ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟಿದ್ದರ ಬಗ್ಗೆ ತಿರಸ್ಕಾರದಿಂದ ಮಾತನಾಡಿದ್ದಾರೆ. ಮತ್ತೆ ಮತ್ತೆ ಅವರನ್ನು ಶೌರಿ ಅವಮಾನಿಸಿದ್ದಾರೆ. 1998ರಲ್ಲಿ ಬಿಜೆಪಿ ಶೌರಿಯನ್ನು ರಾಜ್ಯಸಭೆಗೆ ನೇಮಿಸಿತು. ವಾಜಪೇಯಿ ಅವಧಿಯಲ್ಲಿ ಅವರು ಮಂತ್ರಿಯೂ ಆದರು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ, ಇನ್ನಾರೋ ಅವಮಾನಿಸಿದ್ದಾರೆ ಎನ್ನುವ ಮೊದಲು ಶೌರಿ ಪುಸ್ತಕವನ್ನು ಮೋದಿ ಬಹಿರಂಗವಾಗಿ ಖಂಡಿಸಬೇಕಿದೆ.
ಅಂಬೇಡ್ಕರ್ ಮತ್ತು ಚುನಾವಣಾ ರಾಜಕಾರಣ
ಕೆಲ ವರ್ಷಗಳ ಹಿಂದೆ ಆಗ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಕಾಂಗ್ರೆಸ್ ವಿರುದ್ಧ ಒಂದು ದೊಡ್ಡ ಆರೋಪ ಮಾಡಿದ್ದರು. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸುವುದಕ್ಕೆ ಕಾಂಗ್ರೆಸ್ ಸ್ವತಃ ಸಜ್ಜಾಗಿ ನಿಂತಿತ್ತು ಎಂಬುದು ಅವರ ಆರೋಪವಾಗಿತ್ತು. ಅದೇ ವರ್ಷ ಅಡ್ವಾಣಿ ಅಂಥ ಆರೋಪ ಮಾಡಿದ್ದ ವಾರಗಳ ಬಳಿಕ ಮಾಯಾವತಿ ಕೂಡ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಸಲ್ಲಬೇಕಾದ ಮಾನ್ಯತೆಯನ್ನು ಎಂದಿಗೂ ನೀಡಲೇ ಇಲ್ಲ. 1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಅದು ಅವರನ್ನು ಸೋಲಿಸಿತು ಎಂದಿದ್ದರು. ಬಿಜೆಪಿ ಇದನ್ನು ಹೇಳುತ್ತಲೇ ಬಂದಿದೆ. ಈಗಲೂ ಶಾ ವಿರುದ್ಧ ವಿಪಕ್ಷಗಳ ಪ್ರತಿಭಟನೆ ನಡೆದಿರುವಾಗಲೂ ಮೋದಿ ಮತ್ತೊಮ್ಮೆ ಅದನ್ನೇ ಹೇಳಿದ್ದಾರೆ. ಅಂಬೇಡ್ಕರ್ ಒಂದಲ್ಲ, ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಕಾಂಗ್ರೆಸ್ ಮಾಡಿತು. ಅವರ ವಿರುದ್ಧ ಅಪಪ್ರಚಾರ ಮಾಡುವ ಮೂಲಕ ಅವರ ಸೋಲನ್ನು ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡಿತ್ತು ಎಂದು ಮೋದಿ ಹೇಳಿದರು.
ಆದರೆ, ಆಗ ಆದದ್ದು ಏನು? ಅಂಬೇಡ್ಕರ್ ಅವರು ಎರಡೂ ಬಾರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಚುನಾವಣೆ ಸೋತರು ಎಂಬುದು ನಿಜ. ಆದರೆ ಅವರನ್ನು ರಾಜ್ಯಸಭೆಗೆ ತಂದದ್ದು ಕಾಂಗ್ರೆಸ್ ಎಂಬುದೂ ನಿಜವೇ. ಮೊದಲ ಸಾರ್ವತ್ರಿಕ ಚುನಾವಣೆಗಳು 1951ರ ಅಕ್ಟೋಬರ್‌ನಿಂದ 1952ರ ಫೆಬ್ರವರಿ ನಡುವೆ ನಡೆದವು. ಅಂಬೇಡ್ಕರ್ ಬಾಂಬೆ ನಾರ್ತ್ ಸೆಂಟ್ರಲ್‌ನಿಂದ ಸ್ಪರ್ಧಿಸಿದರು. ಅಶೋಕ್ ಮೆಹ್ತಾ ನೇತೃತ್ವದ ಸಮಾಜವಾದಿ ಪಕ್ಷ ಅವರನ್ನು ಬೆಂಬಲಿಸಿತು. ಕಮ್ಯುನಿಸ್ಟ್ ಪಕ್ಷದ ನಾಯಕ ಎಸ್.ಎ. ಡಾಂಗೆಯಂತಹ ಪ್ರಭಾವಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಂಬೇಡ್ಕರ್ ಕಾಂಗ್ರೆಸ್‌ನ ನಾರಾಯಣ್ ಸಡೋಬಾ ಕಜ್ರೋಲ್ಕರ್ ವಿರುದ್ಧ 15,000 ಮತಗಳಿಂದ ಸೋತರು.
ದೇಶದೆಲ್ಲೆಡೆ ಪಂಡಿತ್ ನೆಹರೂ ಅವರ ಮತ್ತು ಕಾಂಗ್ರೆಸ್ ನ ಜನಪ್ರಿಯತೆಯ ಅಲೆ ಎಷ್ಟು ಜೋರಾಗಿತ್ತು ಎಂದರೆ ಕಾಂಗ್ರೆಸ್ 499ರಲ್ಲಿ 364 ಸೀಟುಗಳಲ್ಲಿ ಗೆಲುವು ಸಾಧಿಸುತ್ತದೆ. ಬೇರೆ ಯಾವುದೇ ಪಕ್ಷವು 16 ಕ್ಕಿಂತ ಹೆಚ್ಚು ಸೀಟ್ ಗೆದ್ದಿರಲಿಲ್ಲ.
ಸೋಲಿನ ನಂತರ ಅಂಬೇಡ್ಕರ್ ಫಲಿತಾಂಶವನ್ನು ಪ್ರಶ್ನಿಸಿದರು. ಬಾಂಬೆಯ ಸಾರ್ವಜನಿಕರ ಅಗಾಧ ಬೆಂಬಲವನ್ನು ಹೇಗೆ ಇಷ್ಟು ತೀವ್ರವಾಗಿ ಸುಳ್ಳು ಮಾಡಲು ಸಾಧ್ಯ? ಇದು ನಿಜವಾಗಿಯೂ ಚುನಾವಣಾ ಆಯುಕ್ತರ ವಿಚಾರಣೆಗೆ ಒಳಪಡುವ ವಿಷಯವಾಗಿದೆ ಎಂದು ಅವರು ಹೇಳಿದ್ದರ ಉಲ್ಲೇಖ ಪಿಟಿಐ ವರದಿಯಲ್ಲಿದೆ. ಅಂಬೇಡ್ಕರ್ ಮತ್ತು ಮೆಹ್ತಾ ಫಲಿತಾಂಶ ರದ್ದುಗೊಳಿಸಲು ಮತ್ತು ಅದನ್ನು ಅನೂರ್ಜಿತ ಎಂದು ಘೋಷಿಸಲು ಮುಖ್ಯ ಚುನಾವಣಾ ಆಯುಕ್ತರ ಮುಂದೆ ಜಂಟಿ ಚುನಾವಣಾ ಅರ್ಜಿಯನ್ನು ಸಲ್ಲಿಸಿದರು. ಒಟ್ಟು 74,333 ಮತಪತ್ರಗಳನ್ನು ತಿರಸ್ಕರಿಸಲಾಗಿದೆ ಮತ್ತು ಎಣಿಕೆ ಮಾಡಲಾಗಿಲ್ಲ ಎಂದು ಅವರು ಆರೋಪಿಸಿದ್ದರು. ಆನಂತರ ಅವರು ಹೈಕೋರ್ಟ್ ಮೊರೆ ಹೋದರೂ ಕೇಸ್ ಗೆಲ್ಲಲಿಲ್ಲ. ಕಮ್ಯುನಿಸ್ಟ್ ಪಾರ್ಟಿ ವಿರುದ್ಧ ಅವರು ಪಿತೂರಿ ಆರೋಪ ಮಾಡಿದ್ದರು. ಈ ನಡುವೆ ಅವರು ರಾಜ್ಯಸಭಾ ಸದಸ್ಯರಾಗಿ ಸಂಸತ್ತಿನಲ್ಲಿದ್ದರು.
1954ರಲ್ಲಿ ಅಂಬೇಡ್ಕರ್ ಎರಡನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅದು ಮಹಾರಾಷ್ಟ್ರದ ಭಂಡಾರ ಕ್ಷೇತ್ರದಿಂದ ನಡೆದ ಉಪಚುನಾವಣೆಯಾಗಿತ್ತು. ಆಗ ಅವರು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸುಮಾರು 8,500 ಮತಗಳಿಂದ ಸೋತರು. ಎರಡನೇ ಸಾರ್ವತ್ರಿಕ ಚುನಾವಣೆ ಬರುವ ಹೊತ್ತಿಗೆ ಅವರೇ ಇಲ್ಲವಾಗಿದ್ದರು.