ಬಣ ರಾಜಕೀಯ ಬಿಜೆಪಿಯನ್ನು ಎತ್ತ ಕೊಂಡೊಯ್ಯುತ್ತಿದೆ?

Update: 2025-02-04 09:50 IST
Editor : Ismail | Byline : ಆರ್.ಜೀವಿ
ಬಣ ರಾಜಕೀಯ ಬಿಜೆಪಿಯನ್ನು ಎತ್ತ ಕೊಂಡೊಯ್ಯುತ್ತಿದೆ?
  • whatsapp icon

ಶಿಸ್ತಿನ ಪಕ್ಷ ಎನ್ನಿಸಿಕೊಂಡಿದ್ದ ಬಿಜೆಪಿಯಲ್ಲಿ ಅಶಿಸ್ತು, ಅಸಮಾಧಾನ, ಅಧ್ಯಕ್ಷ ಗಾದಿ ಕದನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಲೇ ಇದೆ. ಹಾಸಿ ಹೊದೆಯುವಷ್ಟು ಗೊಂದಲಗಳಲ್ಲಿ ಮುಳುಗಿರುವ ಪಕ್ಷದಲ್ಲಿ ಮೊದಲಿದ್ದ ಯಡಿಯೂರಪ್ಪ ವಿರೋಧಿ ಬಣ ಈಗ ಸ್ಪಷ್ಟವಾಗಿ ವಿಜಯೇಂದ್ರ ವಿರೋಧಿ ಬಣವಾಗಿದೆ. ಲಿಂಗಾಯತರ ಬಲ ಬೇಕೆಂದು ಯಡಿಯೂರಪ್ಪ ಎದುರು ತಲೆಬಾಗುತ್ತ ಬಂದ ದಿಲ್ಲಿ ನಾಯಕತ್ವ ಈಗ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂಥ ಸ್ಥಿತಿಯಲ್ಲಿದೆ. ಯಡಿಯೂರಪ್ಪ ಜೊತೆಗೆ ಒಂದು ಕಾಲದಲ್ಲಿ ಗಟ್ಟಿಯಾಗಿ ನಿಂತಿದ್ದವರೂ ಅವರ ಪುತ್ರನ ವಿರುದ್ಧ ಹರಿಹಾಯುತ್ತಿರುವುದನ್ನು ನೋಡಿದರೆ, ವಿಜಯೇಂದ್ರ ವಿರೋಧಿಗಳ ಬಲ ಹೆಚ್ಚುತ್ತಿರುವ ಲಕ್ಷಣಗಳೇ ಕಾಣಿಸುತ್ತಿವೆ.

ರಾಜ್ಯ ಬಿಜೆಪಿ ಒಡೆದ ಮನೆಯಾಗಿ ಬಹಳ ಕಾಲವೇ ಆಗಿದೆ. ಕಂಡಕಂಡಲ್ಲೆಲ್ಲಾ ಬಾಗಿಲುಗಳಾಗಿವೆ ಎಂಬ ಲೇವಡಿಗೂ ಅದು ತುತ್ತಾಗಿದೆ. ಬಿಜೆಪಿಯನ್ನು ಕಟ್ಟಿರುವುದು ಯಡಿಯೂರಪ್ಪ ಒಬ್ಬರೇ ಅಲ್ಲ ಎಂದು ಸೆಡ್ಡುಹೊಡೆದು ನಿಲ್ಲುವ ಮೂಲಕ, ಪಕ್ಷವನ್ನು ಪೂರ್ತಿಯಾಗಿ ಆ ಕುಟುಂಬದ ಹಿಡಿತದಿಂದ ಬಿಡಿಸುವ ದೊಡ್ಡ ಪ್ರಯತ್ನವೂ ಈ ಸಲ ಬಿಗಿಪಟ್ಟಿನ ಸ್ವರೂಪ ಪಡೆದಿದೆ. ದುರಹಂಕಾರಿ ಎಂಬ ಆರೋಪಕ್ಕೆ ಒಳಗಾಗಿರುವ ವಿಜಯೇಂದ್ರ ಪದಚ್ಯುತಿಯಾಗದೆ ರಾಜ್ಯ ಬಿಜೆಪಿ ಉದ್ಧಾರವಾಗದು ಎಂದು ಬಿಂಬಿಸುವ ಯತ್ನದಲ್ಲಿ ವಿರೋಧಿ ಬಣ ಒಂದು ಮಟ್ಟದ ಯಶಸ್ಸನ್ನೂ ಕಂಡಿರುವ ಹಾಗಿದೆ. ಹಾಗಾಗಿಯೇ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಲು ಹೈಕಮಾಂಡ್ ತಯಾರಾಗುತ್ತಿರುವುದು ಎಂಬ ಸುದ್ದಿಗಳಿವೆ. ಚುನಾವಣೆ ಮೂಲಕವೇ ಅಧ್ಯಕ್ಷರ ಆಯ್ಕೆಯಾಗಬೇಕೆಂಬುದು ವಿಜಯೇಂದ್ರ ವಿರೋಧಿಗಳ ವರಸೆಯಾಗಿದ್ದು, ಹಣಿದುಹಾಕಲು ಸಜ್ಜಾಗಿದೆ.

ಈ ಹಂತದಲ್ಲಿ ಮುಖ್ಯವಾಗಿ ಕಾಣಿಸುತ್ತಿರುವ ಅಂಶಗಳೆಂದರೆ,

1. ಬಿಜೆಪಿಯಲ್ಲಿರುವುದು ನಾಯಕತ್ವಕ್ಕಾಗಿ ಬಡಿದಾಟ ಎಂಬುದಕ್ಕಿಂತ ಹೆಚ್ಚಾಗಿ ಅದು ನಾಯಕತ್ವದ ಕೊರತೆ.

2. ಮೂಲತಃ ಯಡಿಯೂರಪ್ಪನವರನ್ನು ವಿರೋಧಿಸುತ್ತಿದ್ದವರ ಜೊತೆ, ಒಂದು ಕಾಲದಲ್ಲಿ ಅವರೊಂದಿಗೆ ನಿಂತಿದ್ದವರೂ ಹೋಗತೊಡಗಿದ್ದಾರೆ.

3. ಅಧ್ಯಕ್ಷ ಹುದ್ದೆಗೆ ವಿಜಯೇಂದ್ರ ನೇಮಕವಾದಾಗಿನಿಂದಲೂ ಇದ್ದ ಅಸಮಾಧಾನವನ್ನು ಬಹುಶಃ ಹಗುರವಾಗಿ ತೆಗೆದುಕೊಂಡಿದ್ದ ದಿಲ್ಲಿ ನಾಯಕರು, ಕಡೆಗಣಿಸಿದ ಕಿಡಿಯೇ ಮನೆಯನ್ನು ಸುಡುತ್ತಿರುವ ಸನ್ನಿವೇಶವನ್ನು ಈಗ ಅಸಹಾಯಕರಾಗಿ ನೋಡಬೇಕಾಗಿದೆ.

4. ಉಸ್ತುವಾರಿಗಳ ಮುಂದೆ ಎರಡು ಬಣಗಳು ಪರಸ್ಪರ ಆರೋಪಗಳನ್ನು ಮಾಡಿದವೇ ಹೊರತು, ಯಾವುದೇ ಸೂತ್ರವೂ ಅವೆರಡೂ ಬಣಗಳನ್ನು ಒಂದುಗೂಡಿಸುವ ಲಕ್ಷಣಗಳು ಕಾಣಲಿಲ್ಲ.

5. ಈ ನಡುವೆ ಗಮನ ಸೆಳೆದಿರುವ ಜನಾರ್ದನ ರೆಡ್ಡಿ- ಶ್ರೀರಾಮುಲು ಜಟಾಪಟಿ ಕೂಡ ಬಣ ರಾಜಕೀಯದ ಉಪ ಪ್ರಹಸನದ ಹಾಗೆಯೇ ತೋರುತ್ತಿದೆ.

6. ಕಾಂಗ್ರೆಸ್‌ನಲ್ಲಿನ ಭಿನ್ನಮತವನ್ನು ನೆಪ ಮಾಡಿಕೊಂಡು, ಬಿಜೆಪಿ ಕದನದೊಳಗೆ ಕಾಂಗ್ರೆಸ್ ಅನ್ನೂ ಎಳೆದು ತಂದು ಲಾಭ ಮಾಡಿಕೊಳ್ಳುವ ತಂತ್ರವೊಂದು ರೆಡ್ಡಿ-ರಾಮುಲು ಜಗಳದ ಸಂದರ್ಭದಲ್ಲಿ ಚುರುಕುಗೊಂಡಿರುವ ಅನುಮಾನಗಳೂ ಇವೆ.

7. ಹಿಂದುತ್ವ ಕಾರ್ಡ್ ಬಳಸುತ್ತ ದಿಲ್ಲಿ ನಾಯಕರ ಗಮನ ಸೆಳೆಯಲು ಯತ್ನಿಸಿದಾಗಲೂ ಪಕ್ಷದೊಳಗೆ ನಿರೀಕ್ಷಿಸಿದ ಯಾವುದೇ ಹುದ್ದೆ ಸಿಗದೆ ಅಸಮಾಧಾನಗೊಂಡಿರುವ ಯತ್ನಾಳ್, ಈಗ ಯಡಿಯೂರಪ್ಪ ವಿರೋಧಿ ಕಾರ್ಡ್ ಮಾತ್ರವೇ ಪರಿಣಾಮಕಾರಿ ಎಂಬುದನ್ನು ಮನದಟ್ಟು ಮಾಡಿಕೊಂಡಿದ್ದಾರೆ ಎಂಬುದು ಈ ಒಟ್ಟಾರೆ ಭಿನ್ನಮತದಲ್ಲಿ ಬಹಳ ಸ್ಪಷ್ಟ.

8. ಆರ್. ಅಶೋಕ್ ಮೊದಲಿಂದಲೂ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದರಿಂದ ಅವರ ಜೊತೆ ಹೆಚ್ಚು ಸಮನ್ವಯ ಸಾಧ್ಯವಾದೀತು ಎಂಬ ಲೆಕ್ಕಾಚಾರವೂ ಅಧ್ಯಕ್ಷ ಹುದ್ದೆಗೆ ವಿಜಯೇಂದ್ರ ನೇಮಕವಾಗುವ ಹೊತ್ತಲ್ಲಿ ಇತ್ತು. ಆದರೆ ಒಬ್ಬರು ಏರಿಗೆ, ಒಬ್ಬರು ನೀರಿಗೆ ಎನ್ನುವ ಸ್ಥಿತಿ ಅವರ ಮಧ್ಯೆ ತಲೆದೋರಿರುವುದು ಕೂಡ ಬಗೆಹರಿಸಲಾರದ ಮಟ್ಟದಲ್ಲಿದೆ.

9. ವಿಪಕ್ಷ ನಾಯಕರಾಗಿ ಅಶೋಕ್ ಮತ್ತು ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಂತಿಮವಾಗಿ ವಿಫಲ ನಾಯಕತ್ವದ ಕಳಂಕ ಹೊತ್ತುಕೊಂಡು ಕೆಳಗಿಳಿಯಬೇಕಾಗಿ ಬಂದರೆ ಪಕ್ಷದ ನಾಯಕತ್ವದಲ್ಲಿ ಆಗಬಹುದಾದ ದೊಡ್ಡ ಬದಲಾವಣೆ ಏನಿರಬಹುದು ಎಂಬುದು ಈಗಿರುವ ಪ್ರಶ್ನೆ.

ಬಿಜೆಪಿಯೊಳಗೆ ಈಗಿರುವ ಗುಂಪುಗಳು ಎಂಥೆಂಥವು ಎಂಬುದನ್ನು ಕೂಡ ಅದರ ಇಡೀ ಸ್ಥಿತಿ ಹೇಗಾಗಿದೆ ಎಂಬುದರ ಚಹರೆಯನ್ನು ಅರ್ಥ ಮಾಡಿಕೊಳ್ಳಲು ಒಮ್ಮೆ ಕಣ್ಣೆದುರು ತಂದುಕೊಳ್ಳಬಹುದು. ಮೊದಲನೆಯದಾಗಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರೋಧಿ ಬಣ. ಇದು ಅಸಮಾಧಾನಿತರ ಗುಂಪು. ಇದು ಯಾವ ಹಿಂಜರಿಕೆಯಿಲ್ಲದೆ, ದಾಕ್ಷಿಣ್ಯವಿಲ್ಲದೆ, ನೇರ ಸೆಡ್ಡು ಹೊಡೆದಂತೆ ನಿಂತಿರುವ ಬಣ. ಮೊದಲು ಕಂಡಾಗ ಯಾರೋ ಮೂರ್ನಾಲ್ಕು ಜನ ಬಾಯಿಗೆ ಬಂದಂತೆ ಮಾತಾಡುತ್ತಿದ್ಧಾರೆ ಎಂಬಂತಿದ್ದ ಅದು, ಅಷ್ಟೇ ಅಲ್ಲ ಎಂಬುದು ಈಗ ಎಲ್ಲರಿಗೂ ಖಚಿತವಾಗಿದೆ. ಅಷ್ಟೇ ಆಗಿದ್ದರೆ ಹೈಕಮಾಂಡ್ ಇಷ್ಟೊಂದು ತಲೆಕೆಡಿಸಿಕೊಳ್ಳಬೇಕಾದ ಪ್ರಮೇಯವೂ ಬರುತ್ತಿರಲಿಲ್ಲ.

ಈ ಗುಂಪು ತಮ್ಮ ಹೋರಾಟ ವೈಯಕ್ತಿಕ ಅಧಿಕಾರದ ಆಸೆಯದ್ದಲ್ಲ, ಪಕ್ಷವನ್ನು ಉಳಿಸುವುದಕ್ಕಾಗಿ ಮತ್ತು ಯಡಿಯೂರಪ್ಪ ಕುಟುಂಬದ ಹಿಡಿತದಿಂದ ಪಕ್ಷವನ್ನು ಕಾಪಾಡುವುದಕ್ಕಾಗಿ ನಡೆದಿರುವ ಹೋರಾಟ ಎಂಬುದನ್ನೂ ಮೊದಲ ದಿನದಿಂದಲೇ ಹೇಳಿಕೊಂಡು ಬಂದಿದೆ.

ಎರಡನೆಯದು ಯಡಿಯೂರಪ್ಪ ನಿಷ್ಠರ ಗುಂಪು. ಬಹುಶಃ ಮನಸ್ಸಿದ್ದರೂ ಇಲ್ಲದಿದ್ದರೂ ವಿಜಯೇಂದ್ರ ಜೊತೆ ನಿಂತಿರುವ ಗುಂಪು ಅದು. ಆದರೆ ಈಗಿನ ಸಂದರ್ಭದಲ್ಲಿ ಅದು ಕ್ಷೀಣಿಸುತ್ತಿರುವುದರ ಜೊತೆಗೇ ಒಳಗೊಳಗೇ ಅಳುಕಿಗೂ ತುತ್ತಾಗಿರುವ ಹಾಗಿದೆ. ಸುಧಾಕರ್ ಇದ್ದಕ್ಕಿದ್ದಂತೆ ವರಸೆ ಬದಲಿಸಿರುವುದು ಕೂಡ ಅಂಥ ಅಳುಕಿಗೆ ಒಂದು ಉದಾಹರಣೆಯಂತೆ ಕಾಣಿಸುತ್ತಿದೆ.

ಮೂರನೆಯದು ತಟಸ್ಥರ ಗುಂಪು. ಆದರೂ ರಾಜಕೀಯದಲ್ಲಿರುವವರು ಸನ್ಯಾಸಿಗಳಲ್ಲವಾದ್ದರಿಂದ, ಅವರ ಈ ತಾಟಸ್ಥ್ಯ ಒಂದು ಬಿರುಗಾಳಿ ಬೀಸಿ ಹೋಗುವವರೆಗೆ ಮಾತ್ರವಲ್ಲವೆ? ಆಮೇಲೆ ಹೊತ್ತು ಗೊತ್ತು ನೋಡಿಕೊಂಡು, ಗ್ರಹಗತಿ ಖಚಿತಪಡಿಸಿಕೊಂಡು ಎಲ್ಲಾದರೂ ಒಂದು ಕಡೆ ಸ್ಥಾಪಿತರಾಗುವವರೇ ಅಲ್ಲವೆ?

ನಾಲ್ಕನೆಯದಾಗಿ, ಈ ತಟಸ್ಥರಿಗಿಂತಲೂ ಸ್ವಲ್ಪ ಭಿನ್ನವಾಗಿರುವ, ಅವಕಾಶವಾದಿಗಳ ಗುಂಪು. ಇದು ಅಲ್ಲಿಯೂ ಇಲ್ಲಿಯೂ ಇರುತ್ತ, ಗಾಳಿ ಬಂದಾಗ ತೂರಿಕೊಳ್ಳುವವರ ಗುಂಪು.

ಬಿಜೆಪಿಯೊಳಗೆ, ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರಿಗೆ ಬೆಲೆಯಿಲ್ಲ ಎಂಬ ಆರೋಪ ಮೊದಲಿಂದಲೂ ಇದೆ. ಆ ಆರೋಪವೇ ಈಗಿನ ಅಸಮಾಧಾನಿತರ ಬಣದ ಮೂಲಕ ಹೆಚ್ಚು ತೀವ್ರ ಸ್ವರೂಪದಲ್ಲಿ ಕಾಣಿಸಿಕೊಂಡಿದೆ ಎಂಬುದು ನಿಜ. ಹಾಗೆಂದು ಅದು ಪಕ್ಷದ ನಿಷ್ಠಾವಂತರ ಪಡೆ ಎಂದೇನೂ ಅಲ್ಲ. ಸಂದರ್ಭ, ಸ್ಥಾನಮಾನ ಇವೆಲ್ಲವೂ ಅಲ್ಲಿ ಕೂಡಿಕೊಂಡು ಭಿನ್ನಮತೀಯರ ಒಂದು ದೊಡ್ಡ ಬಣ ತಯಾರಾಗಿದೆ. ರಾಜ್ಯದ ಪ್ರಬಲ ಸಮುದಾಯಗಳಲ್ಲಿ ಒಂದಾಗಿರುವ ಲಿಂಗಾಯತರನ್ನು ಬಿಜೆಪಿ ಓಲೈಸುತ್ತ ಬಂದದ್ದೇ ಯಡಿಯೂರಪ್ಪ ಮೂಲಕ. ಆ ಕಾರಣದಿಂದಲೇ ರಾಜ್ಯಾಧ್ಯಕ್ಷ ಹುದ್ದೆಯನ್ನು ಅವರ ಪುತ್ರ ವಿಜಯೇಂದ್ರಗೆ ನೀಡಲಾಯಿತು. ಯಡಿಯೂರಪ್ಪ ಅವರನ್ನು ಎದುರು ಹಾಕಿಕೊಂಡರೆ ತೊಂದರೆಯಾದೀತು ಎಂಬ ಲೆಕ್ಕಾಚಾರ ಕೂಡ ಆ ಹಂತದಲ್ಲಿ ಇತ್ತು. ಆದರೆ ಈಗಿನ ಸ್ಥಿತಿ ನೋಡಿದರೆ, ವಿಜಯೇಂದ್ರ ವಿರೋಧಿಗಳಲ್ಲಿ ಮುಂದಿರುವವರು ಲಿಂಗಾಯತರೇ ಆಗಿದ್ದಾರೆ. ಹಾಗೆಂದು, ವಿರೋಧಿಗಳನ್ನು ಕರೆದು ಪಟ್ಟ ಕಟ್ಟಿಬಿಡುವ ಸ್ಥಿತಿಯಲ್ಲೂ ಹೈಕಮಾಂಡ್ ಇಲ್ಲ.

ಪಕ್ಷದಲ್ಲಿ ಈಚಿನ ಬೆಳವಣಿಗೆಗಳಲ್ಲಿ ಮುಖ್ಯವಾಗಿರುವುದು ಪಕ್ಷದ ಜಿಲ್ಲಾಧ್ಯಕ್ಷರುಗಳ ಆಯ್ಕೆ, ಅದರ ಬೆನ್ನಲ್ಲೇ ವಿಜಯೇಂದ್ರ ವಿರುದ್ಧ ಸುಧಾಕರ್ ಸಿಡಿದೆದ್ದಿರುವುದು ಮತ್ತು ಇದಕ್ಕೂ ಮುನ್ನ ರೆಡ್ಡಿ ರಾಮುಲು ಮುಸುಕಿನ ಗುದ್ದಾಟ ಬೀದಿ ರಂಪವಾಗಿ ಬಿಜೆಪಿಯನ್ನು ಇನ್ನಷ್ಟು ಬೆತ್ತಲಾಗಿಸಿದ ಬೆಳವಣಿಗೆಯೂ ನಡೆದುಹೋಗಿದೆ. ವಿಜಯೇಂದ್ರ ವಿರುದ್ಧ ಸಮರ ಸಾರಿರುವಾಗಲೇ ಪಕ್ಷದ ಜಿಲ್ಲಾಧ್ಯಕ್ಷರುಗಳ ಆಯ್ಕೆಯಲ್ಲಿ ವಿಜಯೇಂದ್ರ ಬಣದ ಕೈಮೇಲಾಗಿರುವುದು ಯತ್ನಾಳ್ ಬಣವನ್ನು ಕೆರಳಿಸಿದೆ ಮತ್ತು ಈ ಆಕ್ರೋಶ ಚಿಕ್ಕಬಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಚಾರದ ನೆಪದಲ್ಲಿ ವಿಜಯೇಂದ್ರ ವಿರುದ್ಧ ಸುಧಾಕರ್ ಹರಿಹಾಯುವುದರೊಂದಿಗೆ ಸ್ಫೋಟಗೊಂಡಿದೆ.

ವಿಜಯೇಂದ್ರ ಬಿಜೆಪಿಯನ್ನು ಮುಗಿಸಲು ಹೊರಟಿದ್ದಾರೆ ಎಂದು ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸಂದೀಪ್ ರೆಡ್ಡಿ ನೇಮಕ ಮಾಡಿರುವುದು ಸುಧಾಕರ್ ಅಸಮಾಧಾನಕ್ಕೆ ಕಾರಣ. ಕೋರ್ ಕಮಿಟಿ ಸಭೆಯಲ್ಲಿ ಜಿಲ್ಲಾಧ್ಯಕ್ಷರ ನೇಮಕದ ಕುರಿತು ಚರ್ಚಿಸಿಲ್ಲ, ಈ ಬಗ್ಗೆ ಚರ್ಚಿಸಲು ಫೋನ್ ಮಾಡಿದರೆ ಕರೆ ಸ್ವೀಕರಿಸಿಲ್ಲ ಎಂಬುದು ಅವರ ಆರೋಪ. ಬಿಜೆಪಿ ವಿಜಯೇಂದ್ರ ಸ್ವಂತ ಆಸ್ತಿಯಾ? ಎಂದು ಪ್ರಶ್ನಿಸಿರುವ ಸುಧಾಕರ್, ಬಿಜೆಪಿ ಪ್ರಾಬಲ್ಯ ಇರುವ ಕಡೆಯೇ ಗೆಲ್ಲಲು ಪರದಾಡಿದ್ದಾರೆ. ತಾಕತ್ತಿದ್ದರೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಗೆದ್ದು ತೋರಿಸಿ ಎಂದು ಸವಾಲು ಹಾಕಿದ್ದಾರೆ. ‘‘ನನ್ನ ತಾಳ್ಮೆ ಮುಗಿಯಿತು, ಇನ್ನೇನಿದ್ದರೂ ಯುದ್ಧ’’ ಎಂದಿದ್ಧಾರೆ. ವಿಜಯೇಂದ್ರ ನನ್ನ ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ. ‘‘ನಾನು ಕೇಂದ್ರದ ನಾಯಕರಿಗೆ ದೂರು ಕೊಟ್ಟಿದ್ದೇನೆ. ತುಂಬಾ ನೋವಾಗಿದೆ’’ ಎಂದಿರುವ ಅವರು, ಏನು ಮಾಡಬೇಕೆಂದು ಗೊತ್ತಿದೆ ಎನ್ನುವ ಮೂಲಕವೂ ಸಣ್ಣ ಬೆದರಿಕೆ ಒಡ್ಡಿರುವ ಹಾಗಿದೆ. ‘‘ಯಡಿಯೂರಪ್ಪ ಅವರೇ ಬೇರೆ, ವಿಜಯೇಂದ್ರ ಅವರೇ ಬೇರೆ. ವಿಜಯೇಂದ್ರ ಹಠ, ದ್ವೇಷ ರಾಜಕಾರಣ ಮಾಡುತ್ತಾರೆ. ಅವರ ಮನಸ್ಥಿತಿ, ಧೋರಣೆ, ಅಹಂಕಾರಕ್ಕೆ ನನ್ನ ಧಿಕ್ಕಾರ’’ ಎಂದು ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ತಮಗೆ ಬೇಕಾದವರನ್ನು ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿಕೊಂಡಿರುವ ವಿಜಯೇಂದ್ರ ಧೋರಣೆ ಬೇಸರ ತಂದಿದೆ ಎಂದಿದ್ದಾರೆ. ‘‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು 17 ಜನರು ಬಿಜೆಪಿಗೆ ಬಂದೆವು’’ ಎಂದು ಈ ಸಂದರ್ಭದಲ್ಲಿ ಸುಧಾಕರ್ ನೆನಪಿಸಿದ್ದಾರೆ.

ಸುಧಾಕರ್ ಆರೋಪಗಳನ್ನು ವಿಜಯೇಂದ್ರ ನಿರಾಕರಿಸಿರುವುದು, ಸ್ವತಂತ್ರವಾಗಿ ನಿಂತು ಚುನಾವಣೆ ಗೆಲ್ಲುವಂತೆ ವಿಜಯೇಂದ್ರ ಕಡೆಯವರು ಸುಧಾಕರ್‌ಗೆ ಸವಾಲು ಹಾಕಿರುವುದೆಲ್ಲ ಬೇರೆ ವಿಚಾರ. ಆದರೆ, ಪಕ್ಷದ ಜಿಲ್ಲಾಧ್ಯಕ್ಷರುಗಳ ಆಯ್ಕೆಯೊಂದಿಗೆ ಎದ್ದಿರುವ ಈ ಹೊಸ ಅಸಮಾಧಾನ, ಬಿಜೆಪಿಯೊಳಗಿನ ಸಮಸ್ಯೆ ಸದ್ಯಕ್ಕೆ ಮತ್ತು ಸುಲಭವಾಗಿ ಬಗೆಹರಿಯುವಂಥದ್ದಲ್ಲ ಎಂಬುದರ ಮುನ್ಸೂಚನೆಯಂತೂ ಹೌದು. ಯಾಕೆಂದರೆ ನಾಳೆ ಹೊಸ ಅಧ್ಯಕ್ಷರ ಆಯ್ಕೆಯಾದರೂ, ಯತ್ನಾಳ್ ಬಣದವರೇ ಅಧ್ಯಕ್ಷರಾದರೂ, ವಿಜಯೇಂದ್ರ ಬಣದ ಕಡೆಯವರೇ ಹೆಚ್ಚಿರುವ ಜಿಲ್ಲಾಧ್ಯಕ್ಷರುಗಳ ಜೊತೆ ಸಂಘರ್ಷ ನಡೆಯವುದರೊಂದಿಗೆ ಎರಡೂ ಬಣಗಳ ನಡುವಿನ ಕದನ ಮುಂದುವರಿಯುತ್ತದೆ. ಬಣಗಳ ಜಾಗ ಮಾತ್ರವೇ ಬದಲಾಗಿರುತ್ತದೆ. ಇಲ್ಲಿ ಕೂತಿದ್ದವರು ಅಲ್ಲಿ ಮತ್ತು ಅಲ್ಲಿ ಕೂತಿದ್ದವರು ಇಲ್ಲಿ ಕೂತು ನಾನು ತಾನೆಂಬುದನ್ನು ಯಥಾ ಪ್ರಕಾರ ಮುಂದುವರಿಸುತ್ತಾರೆ.

ಇದೆಲ್ಲದರ ನಡುವೆಯೇ ಬಿಜೆಪಿಯೊಳಗಿನ ಪರಮಾಪ್ತರಾಗಿದ್ದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜಗಳ ಬೀದಿಗೆ ಬಿದ್ದಿದೆ. ಒಬ್ಬರ ಮೇಲೊಬ್ಬರು ಕೆಸರೆರಚಿಕೊಂಡಿದ್ದಾರೆ. ಯತ್ನಾಳ್ ವಿಜಯೇಂದ್ರ ಬಣ ಗುದ್ದಾಟದ ಜೊತೆಗೇ ಇದು ಹೈಕಮಾಂಡ್‌ಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಶ್ರೀರಾಮುಲು ಕಾಂಗ್ರೆಸ್ ಸೇರಬಹುದು ಮತ್ತು ಸತೀಶ್ ಜಾರಕಿಹೊಳಿಯನ್ನು ಹಣಿಯಲು ಡಿ.ಕೆ. ಶಿವಕುಮಾರ್ ಅವರೇ ರಾಮುಲು ಅವರನ್ನು ಕಾಂಗ್ರೆಸ್‌ಗೆ ಕರೆಸಿಕೊಳ್ಳುವ ಯತ್ನದಲ್ಲಿದ್ದಾರೆ ಎಂಬ ಹೊಸ ಗುಮ್ಮವನ್ನು ಸೃಷ್ಟಿಸುವ ಮೂಲಕ, ಕಾಂಗ್ರೆಸ್‌ನೊಳಗೂ ಸ್ವಲ್ಪ ಬೆಂಕಿ ಏಳಲಿ ಎಂಬ ತಂತ್ರವನ್ನು ಹೂಡಿರುವ ಹಾಗೆಯೂ ಈ ಒಟ್ಟಾರೆ ಬೆಳವಣಿಗೆ ಕಾಣಿಸುತ್ತಿದೆ.

ರೆಡ್ಡಿ-ರಾಮುಲು ಕದನ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಈಗ ಹೈಕಮಾಂಡ್‌ಗೆ ತುರ್ತಿನದಾಗಿ ಕಾಣಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ. ರಾಮುಲು ಅವರನ್ನು ಕರೆದು ಮಾತನಾಡುವಂತೆ ವಿಜಯೇಂದ್ರಗೆ ತಿಳಿಸಲಾಗಿದೆ. ಏನೇ ಗೊಂದಲ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸುವಂತೆ ದಿಲ್ಲಿ ನಾಯಕರು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಇನ್ನು, ದಿಲ್ಲಿಗೆ ರಾಮುಲು ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ವಹಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ. ಆದರೆ, ರಾಮುಲು ಕಾಂಗ್ರೆಸ್ ಸೇರುವ ಯತ್ನದಲ್ಲಿದ್ದಾರೆ ಎಂದು ಬಿಂಬಿಸಲಾಗುತ್ತಿರುವುದು ಯಾವುದೋ ತಂತ್ರಗಾರಿಕೆಯ ಭಾಗವಾಗಿರಬಹುದು ಎಂಬ ಅನುಮಾನಗಳೂ ಎದ್ದಿವೆ. ರೆಡ್ಡಿ ಮತ್ತು ರಾಮುಲು ನಡುವಿನ ಗುದ್ದಾಟ ಅವರ ಆಂತರಿಕ ವಿಚಾರ. ಅವರು ಕಾಂಗ್ರೆಸ್ ಸೇರುವ ವದಂತಿಯಿಂದ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಝಮೀರ್ ಅಹ್ಮದ್ ಹೇಳಿರುವುದರಲ್ಲಿ ಬಹುಶಃ ಸತ್ಯ ಇರುವಂತಿದೆ. ಶ್ರೀರಾಮುಲು ಕಾಂಗ್ರೆಸ್‌ಗೆ ಬರುವ ಹಾಗೆ ಕಾಣುವುದಿಲ್ಲ. ಕಾಂಗ್ರೆಸ್ ಅನ್ನು ತೋರಿಸಿ ಬಿಜೆಪಿಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅವರು ನಾಟಕ ಮಾಡುತ್ತಿದ್ದಾರೆ ಎಂದು ಝಮೀರ್ ಹೇಳಿದ್ದಾರೆ. ‘‘ನಾವ್ಯಾರೂ ಅವರನ್ನು ಪಕ್ಷಕ್ಕೆ ಕರೆದಿಲ್ಲ. ನಮ್ಮ ಪಕ್ಷಕ್ಕೆ ಕರೆದುಕೊಳ್ಳಬೇಕಾದರೆ ಹೈಕಮಾಂಡ್ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ರೆಡ್ಡಿ ಮತ್ತು ರಾಮುಲು ಇಬ್ಬರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ’’ ಎಂದು ಝಮೀರ್ ಹೇಳಿದ್ದಾರೆ. ಈಗ ಶ್ರೀರಾಮುಲು ಕೂಡ ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿರುವುದು ವರದಿಯಾಗಿದೆ. ಫೆಬ್ರವರಿ 5ರ ನಂತರ ದಿಲ್ಲಿಗೆ ಹೋಗುವುದಾಗಿ ಹೇಳಿದ್ದಾರೆ.

ಹೀಗೆ ಬಿಜೆಪಿಯಲ್ಲಿ ಮುಗಿಯದಷ್ಟು ಗೊಂದಲಗಳು ಬೆಳೆಯುತ್ತಲೇ ಇರುವಾಗ, ರಾಜ್ಯಾಧ್ಯಕ್ಷರನ್ನು ಬದಲಿಸುವುದು ಸ್ಪಷ್ಟವಾಗತೊಡಗಿದೆ. ಬಹುಶಃ ಅದರ ಸೂಚನೆ ವಿಜಯೇಂದ್ರ ಅವರಿಗೂ ಸಿಕ್ಕಿದೆಯೆ? ನಾನೇ ಮುಂದೆಯೂ ರಾಜ್ಯಾಧ್ಯಕ್ಷ ಎನ್ನುತ್ತಿದ್ದ ವಿಜಯೇಂದ್ರ, ಈಗ ತಾನು ಯಾವುದಕ್ಕೂ ಸಿದ್ಧ ಎನ್ನುತ್ತಿರುವುದರ ಹಿನ್ನೆಲೆಯಲ್ಲಿ ಇಂಥ ಪ್ರಶ್ನೆ ಮೂಡಿದೆ. ರಾಜ್ಯಕ್ಕೆ ಬಂದಿದ್ದ ಉಸ್ತುವಾರಿಗಳು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಸೂಚನೆ ನೀಡಿದ ಬಳಿಕ ವಿಜಯೇಂದ್ರ ಮಾತು ಬದಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಯತ್ನಾಳ್ ಬಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯನ್ನೇ ಇಳಿಸಲಿದೆ ಎಂಬ ಮಾತಿತ್ತು. ಈಗ ನೋಡಿದರೆ ಸ್ವತಃ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧವಾಗಿದ್ದೇನೆ ಎಂದಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ ಎನ್ನುವ ಮೂಲಕ ಯತ್ನಾಳ್ ಸಂಚಲನ ಸೃಷ್ಟಿಸಿದ್ದಾರೆ. ಈ ನಡುವೆ ಅರವಿಂದ ಲಿಂಬಾವಳಿ ದಿಲ್ಲಿಯಲ್ಲಿ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಯತ್ನಾಳ್ ಬಣ ಕೂಡ ದಿಲ್ಲಿಗೆ ಹೋಗಿ ಚರ್ಚಿಸಿ ಅಲ್ಲೇ ತಮ್ಮ ಬಣದ ರಾಜ್ಯಾಧ್ಯಕ್ಷ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ವರದಿಯಾಗಿದೆ.

ಅದೇನೇ ಇದ್ದರೂ, ಪಕ್ಷದೊಳಗಿನ ಬಣ ಗುದ್ದಾಟವನ್ನು ಕೊನೆಗಾಣಿಸುವುದು ರಾಜ್ಯಾಧ್ಯಕ್ಷ ಚುನಾವಣೆಯನ್ನು ನಡೆಸಿದ ಮಾತ್ರಕ್ಕೇ ಸಾಧ್ಯವಿಲ್ಲ ಎಂಬುದು ಹೈಕಮಾಂಡ್‌ಗೂ ಗೊತ್ತಿದೆ. ಇದೆಲ್ಲವನ್ನೂ ಹೇಗೆ ಬಗೆಹರಿಸುವುದು ಎಂಬ ನಿಟ್ಟಿನಲ್ಲಿ ಅದು ಹೊಸ ಸೂತ್ರಗಳ ಹುಡುಕಾಟದಲ್ಲಿ ಬಿದ್ದಿದೆ. ಎರಡೂ ಬಣಗಳ ನಡುವಿನ ಭಿನ್ನಮತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ದಾರಿ ಯಾವುದು ಎಂಬುದು ಅದಕ್ಕೆ ಹೊಳೆಯದಂತಾಗಿದೆ. ರಾಜ್ಯ ನಾಯಕರ ಮುಂದೆ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಆಟ ನಡೆಯುತ್ತಿಲ್ಲ. ಅವರು ಬಂದುಹೋದ ಮೇಲೆ ಪಕ್ಷದೊಳಗೆ ಇನ್ನಷ್ಟು ಗೊಂದಲಗಳು ಮೂಡಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೀಗಾಗಿ ಹೊಸ ಚಾಣಾಕ್ಷ ನಾಯಕರೊಬ್ಬರನ್ನು ರಾಜ್ಯಕ್ಕೆ ಕಳಿಸಿ ಸಮಸ್ಯೆ ಬಗೆಹರಿಸುವ ಬಗ್ಗೆಯೂ ದಿಲ್ಲಿಯಲ್ಲಿ ಚಿಂತನೆ ನಡೆದಿದೆ ಎಂಬ ಸುದ್ದಿಗಳಿವೆ.

ಇದೆಲ್ಲವೂ ಒಂದೆಡೆಗಾದರೆ, ಬಿಜೆಪಿ ನಾಯಕತ್ವ ಪಕ್ಷದೊಳಗೆ ಕಚ್ಚಾಡುತ್ತಿರುವವರ ಕೈತಪ್ಪಿ ಬೇರೊಬ್ಬರ ಪಾಲಾಗುವುದೇಎಂಬ ಬಗ್ಗೆಯೂ ಮಾತುಗಳಿವೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಅಶೋಕ್ ಇಬ್ಬರನ್ನೂ ಬದಲಿಸುವ ಆಟದಲ್ಲಿ ಹಳೇ ಪ್ರಸ್ತಾವವೊಂದಕ್ಕೆ ಜೀವ ಸಿಗುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಮಾಡಿ ಮುಗಿಸುವುದರಲ್ಲೇ ಹೈರಾಣಾಗಿ ಹೋಗಿತ್ತು. ಆಗ, ಬಿಜೆಪಿಗಿಂತಲೂ ಹೆಚ್ಚಾಗಿ ಬಿಜೆಪಿಯದ್ದೇ ವರಸೆ ಎನ್ನುವಷ್ಟು ಮಟ್ಟಿಗೆ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿದ್ದ ಕುಮಾರಸ್ವಾಮಿಯವರನ್ನೇ ವಿಪಕ್ಷ ನಾಯಕನ ಸ್ಥಾನಕ್ಕೆ ಬಿಜೆಪಿ ಯೋಚಿಸಿತ್ತೆಂಬುದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕಡೆಗೆ ಆ ಪ್ರಸ್ತಾವ ಬೇರೆ ಬೇರೆ ಕಾರಣಗಳಿಂದ ಬಿದ್ದುಹೋಗಿತ್ತು.

ಈಗ, ಕುಮಾರಸ್ವಾಮಿಯವರಿಗೂ ಕೇಂದ್ರ ಮಂತ್ರಿಯಾಗಿದ್ದರೂ ರಾಜ್ಯ ರಾಜಕಾರಣವೇ ಸೆಳೆಯುತ್ತಿದೆ. ರಾಮನಗರ, ಚನ್ನಪಟ್ಟಣ ಬಿಟ್ಟು ಅವರ ಮನಸ್ಸು ಬೇರೇನನ್ನೂ ಯೋಚಿಸುತ್ತಿಲ್ಲವೇನೋ ಎನ್ನುವ ಮಟ್ಟಿಗೆ ಅವರ ಮಾತು ಮತ್ತು ರಾಜಕೀಯದ ಧಾಟಿ ಕಾಣಿಸುತ್ತಿದೆ. ಜೆಡಿಎಸ್ ಕೂಡ ಎಲ್ಲ ಆಯಾಮಗಳಿಂದಲೂ ಬಲ ಕಳೆದುಕೊಳ್ಳುತ್ತಿರುವಾಗ, ಅವರು ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿ ಬಿಜೆಪಿ ಪಾಲಾದರೂ ಅಚ್ಚರಿಯಿಲ್ಲ ಎನ್ನುವ ಮಾತುಗಳಿವೆ. ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

ಆದರೆ, ಬಿಜೆಪಿಯೊಳಗೆ ಭಿನ್ನರ ಬಣವೊಂದು ಇಷ್ಟು ಪ್ರಬಲವಾಗಿರುವುದು ಯಾವ ಬಲ ಮತ್ತು ಧೈರ್ಯದಿಂದ ಎಂಬ ಪ್ರಶ್ನೆಯೊಂದು ಹಾಗೇ ಉಳಿಯುತ್ತದೆ. ಇದು ಬಿಜೆಪಿಯ ಮಟ್ಟಿಗೆ ಬಹಳ ದೊಡ್ಡ ಪ್ರಶ್ನೆಯೂ ಆಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್.ಜೀವಿ

contributor

Similar News