ಇದು ಇವರ ಹೊಸ ನಾಟಕವೇ?
ಸುಪ್ರೀಂ ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ಮೋಹನ್ ಭಾಗವತರು ವಿವಾದ ಮುಂದುವುರಿಸುವುದು ಬೇಡ ಎಂದು ಕಾಟಾಚಾರದ ಹೇಳಿಕೆ ನೀಡಿದರು. ಇದಕ್ಕೆ ಅವರದೇ ಸಂಘಟನೆಗಳು ಪ್ರತಿಯಾಗಿ ಇನ್ನೊಂದು ಹೇಳಿಕೆಯನ್ನು ನೀಡಿದವು.ಅಲ್ಲದೆ ಸಂಘದ ಮುಖವಾಣಿಯಾದ ‘ಆರ್ಗನೈಸರ್’ ಪತ್ರಿಕೆ ಪ್ರತಿಯಾದ ವಿಶ್ಲೇಷಣೆ ಮಾಡಿತು.ಈ ರೀತಿ ಒಂದೇ ಸಂಘಟನೆಯ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುವುದು ಕೂಡ ಒಂದು ತಂತ್ರವಲ್ಲದೆ ಬೇರೇನೂ ಅಲ್ಲ. ಎರಡು ಕಡೆಯವರನ್ನು ಒಲಿಸಿಕೊಳ್ಳುವುದು ಇದರ ಉದ್ದೇಶ.
ಸವಾಲುಗಳು ಎದುರಾದಾಗ, ಬಿಕ್ಕಟ್ಟಿನ ಸುಳಿಗೆ ಸಿಲುಕಿದಾಗ ಒಂದೊಂದು ರೀತಿ ಹೇಳಿಕೆ ನೀಡುವುದು, ಗೊಂದಲ ಮೂಡಿಸುವುದು ಇವರ ಹಳೆಯ ಚಾಳಿ. ಈಗ ನೂರನೇ ವಾರ್ಷಿಕೋತ್ಸವ ಆಚರಿಸುತ್ತಿರುವ ನಾಗಪುರ ಮೂಲದ ಈ ಸಂಘಟನೆಯ ಇತಿಹಾಸವನ್ನು ಅವಲೋಕಿಸಿದಾಗ ಇದರ ಇಂದಿನ ನಡೆ ಅಚ್ಚರಿ ಎನಿಸುವುದಿಲ್ಲ. ಆದರೂ ಎಚ್ಚರ ಅಗತ್ಯ. ಈ ಸಂಘಟನೆಯ ಈಗಿನ ಸರಸಂಘಚಾಲಕ ಮೋಹನ್ ಭಾಗವತರ ಇತ್ತೀಚಿನ ಒಂದು ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗೆ ಪುಣೆಯಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತರು, ‘ದೇಶದಲ್ಲಿ ಹೊಸದಾಗಿ ಮಂದಿರ-ಮಸೀದಿ ವಿವಾದ ಕೆರಳಿಸಬೇಡಿ. ಮಸೀದಿ ಕೆಳಗೆ ಮಂದಿರವನ್ನು ಹುಡುಕುವುದು ನಿಲ್ಲಿಸಿ’ ಎಂದು ಕರೆ ನೀಡಿದರು.
ಈ ಹೇಳಿಕೆಯ ಬಗ್ಗೆ ಈ ಸಂಘಟನೆಯ ಇತಿಹಾಸ ಗೊತ್ತಿಲ್ಲದ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದರು. ಆದರೆ, ಗೊತ್ತಿದ್ದವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಯಾವಾಗ ಯಾರು ಯಾವ ಹೇಳಿಕೆ ನೀಡಬೇಕು ಎಂಬುದು ಮೊದಲೇ ತೀರ್ಮಾನ ಆಗಿರುತ್ತದೆ. ಅದರಂತೆ ವಿದ್ಯಮಾನ ನಡೆದಿವೆ. ಒಬ್ಬರು ಮೆದುವಾದ ಮಾತು ಆಡುವುದು, ಇನ್ನೊಬ್ಬರು ಕಟುವಾಗಿ ಮಾತನಾಡುವುದು ಇವರಿಗೆ ಹೊಸದಲ್ಲ. ಈಗಲೂ ಅದೇ ರೀತಿ ನಡೆದಿದೆ.
ಭಾಗವತರು ಈ ಹೇಳಿಕೆ ನೀಡಿದ ಮರು ದಿನವೇ ಸಂಘ ಪರಿವಾರದ ಅಂಗವಾದ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರಾನಂದ ಸರಸ್ವತಿ ಅವರು ಸ್ವಾಗತಿಸಿದರೆ, ಉತ್ತರಾ ಖಂಡದ ಜ್ಯೋತಿರ್ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
‘ಇದು ಭಾಗವತರ ಅನುಕೂಲಸಿಂಧು ನಿಲುವು’ ಎಂದು ನುಡಿದರು.ಇದಷ್ಟೇ ಅಲ್ಲ, ಆರೆಸ್ಸೆಸಿನ ಇಂಗ್ಲಿಷ್ ಮುಖಪತ್ರ ‘ಆರ್ಗನೈಸರ್’ ತನ್ನ ಸಂಪಾದಕೀಯ, ‘ಸೋಮನಾಥದಿಂದ ಆರಂಭಗೊಂಡು ಸಂಭಲ್ ವರೆಗೆ ಹಾಗೂ ಅದರಾಚೆಗಿನ ವಿವಾದಗಳು ‘ಚಾರಿತ್ರಿಕ’ ಸತ್ಯ ಹಾಗೂ ‘ನಾಗರಿಕತೆಯ ನ್ಯಾಯ’ ಹುಡುಕುವ ಹೋರಾಟವೆಂದು ವಿಶ್ಲೇಷಣೆ ಮಾಡಿತು.ಇನ್ನೊಂದು ಕಡೆ ವಿಶ್ವ ಹಿಂದೂ ಪರಿಷತ್ತು ಹೇಳಿಕೆ ನೀಡಿ ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತ ಗೊಳಿಸಬೇಕೆಂದು ಒತ್ತಾಯಿಸಿ ದೇಶವ್ಯಾಪಿ ಅಭಿಯಾನವೊಂದನ್ನು ನಡೆಸಲಿದೆ ಎಂದು ತಿಳಿಸಿತು.
ರಾಜಕೀಯ ಅಧಿಕಾರವನ್ನು ಸ್ವಾಧೀನ ಪಡಿಸಿಕೊಳ್ಳಲು ಆ ಮೂಲಕ ಸಂವಿಧಾನವನ್ನು ಕ್ರಮೇಣ ಬದಿಗೊತ್ತಿ ಮನುವಾದಿ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಯಾವ ಸಂದರ್ಭದಲ್ಲಿ ಯಾರನ್ನು ಮುಂದೆ ಮಾಡಬೇಕು ಎಂಬುದು ಈ ಸಂಘಟನೆಯ ಬೈಠಕ್‌ನಲ್ಲೇ ತೀರ್ಮಾನವಾಗಿರುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ಮೆದು ವ್ಯಕ್ತಿತ್ವದವರೆಂದು ಬಿಂಬಿಸಿ ಮುಂದೆ ಮಾಡಲಾಯಿತು. ಆದರೆ ಸಂಘದ ಚಿಂತಕ ಗೋವಿಂದಾಚಾರ್ಯರು ವಾಜಪೇಯಿ ಅವರನ್ನು ‘ಮುಖವಾಡ’ ಎಂದು ಬಹಿರಂಗವಾಗಿ ಹೇಳಿದರು. ಮುಂದೆ ನಡೆದ ಬೆಳವಣಿಗೆಗಳು ಎಲ್ಲರಿಗೂ ಗೊತ್ತು. ಕ್ರಮೇಣ ವಾಜಪೇಯಿ ಅವರನ್ನು ಪಕ್ಕಕ್ಕೆ ಸರಿಸಿ ಅಡ್ವಾಣಿ ಅವರನ್ನು ಮುಂದೆ ಮಾಡಲಾಯಿತು. ಅವರ ಅಭಿನಯ ಮುಗಿಯುತ್ತಲೇ , ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ರಂಗಕ್ಕೆ ತರಲಾಯಿತು. ಈಗ ಬಹುತೇಕ ಮೋದಿಯವರ ಪಾತ್ರ ಮುಗಿದಂತೆ ಕಾಣುತ್ತದೆ. ಈಗ ಕ್ರಮೇಣ ಯೋಗಿ ಆದಿತ್ಯನಾಥ್ ಹಾಗೂ ಸಾರಂಗಿ ಹೆಸರು ಕೇಳಿ ಬರುತ್ತಿದೆ.
ಈ ಎಲ್ಲದಕ್ಕೂ ಒಂದು ಹಿನ್ನೆಲೆಯಿದೆ. ಸುಮ್ಮನೆ ಇದೆಲ್ಲ ನಡೆಯುವುದಿಲ್ಲ. ದೇಶದ ವಿವಿಧೆಡೆ ಅದರಲ್ಲೂ ಮುಖ್ಯವಾಗಿ ಉತ್ತರ ಭಾರತದಲ್ಲಿ ಕೆಲ ಕೋಮುವಾದಿ ಸಂಘಟನೆಗಳು ಮತ್ತು ವ್ಯಕ್ತಿಗಳು ಹಲವು ಮಸೀದಿಗಳು ಇರುವ ಜಾಗ ತಮಗೆ ಸೇರಿದ್ದೆಂದು ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆೆ. ಅಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದು ಇವರ ವಾದವಾಗಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮಭೂಮಿ, ಉತ್ತರ ಪ್ರದೇಶದ ಸಂಭಲ್ ನಲ್ಲಿ ಇರುವ ಶಾಹಿ ಜಾಮಾ ಮಸೀದಿ ಕುರಿತ ವಿವಾದಗಳು ಇದಕ್ಕೆ ಕೆಲವು ಉದಾಹರಣೆಗಳಾಗಿವೆ. ಅಯೋಧ್ಯೆಯ ರಾಮ ಮಂದಿರ,ಬಾಬರಿ ಮಸೀದಿ ವಿವಾದ ಉಂಟಾದಾಗಲೇ ಕೋಮುವಾದಿ ಸಂಘಟನೆಗಳು ದೇಶದಲ್ಲಿ ಒಟ್ಟು ಮೂರು ಸಾವಿರ ವಿವಾದಿತ ಸ್ಥಳಗಳಿವೆ ಎಂದು ಪಟ್ಟಿ ಮಾಡಿದ್ದವು. ಈಗ ಕೆಲವು ನ್ಯಾಯಾಲಯಗಳು ಇಂಥ ಅರ್ಜಿಗಳನ್ನು ಸ್ವೀಕರಿಸಿ ವಿವಾದಿತ ಜಾಗಗಳಲ್ಲಿ ಸಮೀಕ್ಷೆ ನಡೆಸುವಂತೆ ಆದೇಶ ನೀಡಿವೆ. ಅಜ್ಮೀರ್‌ನಲ್ಲಿ ಇರುವ ಸೂಫಿ ದರ್ಗಾದ ಬಗ್ಗೆಯೂ ಇಂಥದೇ ವಿವಾದವನ್ನು ಇತ್ತೀಚೆಗೆ ಹುಟ್ಟು ಹಾಕಲಾಗಿದೆ. ಇಂಥ ಸಮೀಕ್ಷೆ ನಡೆಸಲು ಹೊರಟಾಗ ಉತ್ತರ ಪ್ರದೇಶದ ಸಂಭಲ್ ಮಸೀದಿ ಪ್ರದೇಶದಲ್ಲಿ ಗಲಾಟೆ ನಡೆದು ಕಾನೂನು ,ಸುವ್ಯವಸ್ಥೆ ಸಮಸ್ಯೆ ಉಂಟಾಗಿತ್ತು. ಅಲ್ಲಿ ನಡೆದ ಹಿಂಸಾಚಾರದಲ್ಲಿ ಆರ್ ಮಂದಿ ಸಾವಿಗೀಡಾಗಿದ್ದರು.ಈ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೆ ಹೋಗಿ ಯಾವುದೇ ಧಾರ್ಮಿಕ ಸ್ಥಳದ ಸದ್ಯದ ಸ್ಥಿತಿಯ ವಿಚಾರವಾಗಿ ಹೊಸ ಅರ್ಜಿಗಳನ್ನು ದಾಖಲು ಮಾಡಿಕೊಳ್ಳಬಾರದೆಂದು ಆದೇಶ ನೀಡಿದ ಸುಪ್ರೀಂ ಕೋರ್ಟ್ ಪೂಜಾ ಸ್ಥಳಗಳ ಕಾಯ್ದೆ 1991 ರ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಮಾನವನ್ನು ಕೈಗೊಳ್ಳುವವರೆಗೆ ಅಧೀನ ನ್ಯಾಯಾಲಯಗಳು ಧಾರ್ಮಿಕ ಸ್ಥಳಗಳ ಸಮೀಕ್ಷೆ ಗೆ ಆದೇಶ ನೀಡಬಾರದೆಂದು ಕಟ್ಟುನಿಟ್ಟಿನ ತಾಕೀತು ಮಾಡಿತು.
ಸುಪ್ರೀಂ ಕೋರ್ಟಿನ ಈ ಆದೇಶದ ಹಿನ್ನೆಲೆಯಲ್ಲಿ ಮೋಹನ್ ಭಾಗವತರು ವಿವಾದ ಮುಂದುವುರಿಸುವುದು ಬೇಡ ಎಂದು ಕಾಟಾಚಾರದ ಹೇಳಿಕೆ ನೀಡಿದರು. ಇದಕ್ಕೆ ಅವರದೇ ಸಂಘಟನೆಗಳು ಪ್ರತಿಯಾಗಿ ಇನ್ನೊಂದು ಹೇಳಿಕೆಯನ್ನು ನೀಡಿದವು.ಅಲ್ಲದೆ ಸಂಘದ ಮುಖವಾಣಿಯಾದ ‘ಆರ್ಗನೈಸರ್’ ಪತ್ರಿಕೆ ಪ್ರತಿಯಾದ ವಿಶ್ಲೇಷಣೆ ಮಾಡಿತು.ಈ ರೀತಿ ಒಂದೇ ಸಂಘಟನೆಯ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುವುದು ಕೂಡ ಒಂದು ತಂತ್ರವಲ್ಲದೆ ಬೇರೇನೂ ಅಲ್ಲ. ಎರಡು ಕಡೆಯವರನ್ನು ಒಲಿಸಿಕೊಳ್ಳುವುದು ಇದರ ಉದ್ದೇಶ.
ತೊಂಭತ್ತರ ದಶಕದವರೆಗೆ ಅತ್ಯಂತ ಮುಖ್ಯವಾಗಿದ್ದ ಜನಸಾಮಾನ್ಯರ ದೈನಂದಿನ ಬದುಕಿನ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಈಗ ಪಕ್ಕಕ್ಕೆ ತಳ್ಳಿದಂತಾಗಿದೆ. ಜಾತಿ, ಮತ, ಮಂದಿರ, ಮಸೀದಿ, ಚರ್ಚ್ ,
ಹೆಸರಿನಲ್ಲಿ ಜನರನ್ನು ವಿಭಜಿಸಿ ಆಳಲು ಇನ್ನೂ ಬೇಕಾದಷ್ಟು ಕಾರ್ಯಸೂಚಿಗಳು ಅವರ ಬಳಿ ಇವೆ. ಪ್ರತೀ ಊರಿನಲ್ಲಿ ಮಸೀದಿಯ ಕೆಳಗೆ ಮಂದಿರ ಹುಡುಕುವುದರಲ್ಲೇ ಜನರನ್ನು ಮುಳುಗಿಸಲಾಗಿದೆ.ಹೊಸ ವರ್ಷದಲ್ಲೂ ಇದು ಮುಂದುವರಿಯಲಿದೆ. ದ್ವಿಪಾತ್ರಾಭಿನಯ ಇವರಿಗೆ ಹೊಸದಲ್ಲ. ನರೇಂದ್ರ ಮೋದಿ ಮೊದಲ ಬಾರಿ ಪ್ರಧಾನಿಯಾದಾಗ ಸಂಸತ್ ಭವನದ ದ್ವಾರದಲ್ಲಿ ಹೊಸ್ತಿಲಿಗೆ ನಮಸ್ಕಾರ ಮಾಡಿದರು. ನಂತರ ಸಂಸತ್ ಭವನ ಬದಲಿಸಿ ಹೊಸ ಕಟ್ಟಡವನ್ನೇ ನಿರ್ಮಿಸಿದರು. ಮೂರನೇ ಸಲ ಪ್ರಧಾನಿಯಾದ ನಂತರ ಸಂವಿಧಾನಕ್ಕೆ ನಮಸ್ಕರಿಸಿದರು. ಈಗ ಸಂವಿಧಾನವನ್ನೇ ಬದಲಿಸುವ ಮಸಲತ್ತು ನಡೆಸಲಾಗಿದೆ.
ಬಾಬರಿ ಮಸೀದಿಗೆ ಎದುರಾದ ಸ್ಥಿತಿ ಮುಂದೆ ಯಾವುದೇ ಧಾರ್ಮಿಕ ಪ್ರಾರ್ಥನಾ ಇಲ್ಲವೇ ಪೂಜಾ ಸ್ಥಳಕ್ಕೆ ಆಗಬಾರದು ಎಂಬ ಸದುದ್ದೇಶದಿಂದ ಇಂಥ ಸ್ಥಳಗಳ ಧಾರ್ಮಿಕ ಸ್ವರೂಪವು 1947ರ ಆಗಸ್ಟ್ 15ರಂದು ಹೇಗಿತ್ತೋ ಹಾಗೆಯೇ ಇರಬೇಕೆಂದು ಹೇಳುವ ಕಾಯ್ದೆಗೆ ಧಕ್ಕೆ ಆಗಬಾರದು. ಭಾರತ ಈಗಾಗಲೇ ಸ್ವೀಕರಿಸಲಾದ ಧರ್ಮ ನಿರಪೇಕ್ಷ ತತ್ವಕ್ಕೆ ಚುನಾಯಿತ ಸರಕಾರಗಳು ಬದ್ಧವಾಗಿರಬೇಕೆಂಬುದು ಕಡ್ಡಾಯ ಎಂಬುದನ್ನು ಮರೆಯಬಾರದು.
ಇತಿಹಾಸವನ್ನು ಕೆದಕುತ್ತ ಹೋದರೆ ಸಮಾಜದಲ್ಲಿ ಅಶಾಂತಿ ಮತ್ತು ಕೋಲಾಹಲ ಉಂಟಾಗುತ್ತದೆ.
ಬರೀ ಮಸೀದಿಯನ್ನು ಅಗೆದರೆ ಸಾಲದು ಎಂದು ಬಸದಿಗಳು ಹಾಗೂ ಬೌದ್ಧ್ದ ವಿಹಾರಗಳು,
ಸ್ತೂಪಗಳು ಬೇರೆ, ಬೇರೆ ಮಂದಿರಗಳ ಅಡಿಯಲ್ಲಿ ಇವೆ ಎಂದು ಅಗೆಯುತ್ತ ಹೋದರೆ ಈ ಬಹುತ್ವ ಭಾರತ ತಲುಪುವುದೆಲ್ಲಿಗೆ? ಇದು ಸ್ಥಗಿತಗೊಂಡು ಈ ಭಾರತ ನೆಮ್ಮದಿಯ ತಾಣವಾಗಬೇಕಾದರೆ ಭಾಗವತರು ತಾವೊಂದು ಹೇಳುವುದು, ತಮ್ಮ ಪತ್ರಿಕೆಯಲ್ಲಿ ಇನ್ನೊಂದನ್ನು ಬರೆಸುವುದನ್ನು ನಿಲ್ಲಿಸಬೇಕು. ತಮ್ಮ ಸಂಘಟನೆಗಳ ಮೂಲಕ ಬೇರೊಂದು ಚಟುವಟಿಕೆ ಮಾಡಲು ಅವಕಾಶ ನೀಡಬಾರದು.
ಭಾರತ ಯಾವುದೇ ಜಾತಿಯ, ಧರ್ಮದ , ಜನಾಂಗದ ದೇಶವಲ್ಲ. ಹಾಗೆ ಆಗಬಾರದು ಕೂಡ. ರಾಷ್ಟ್ರ ಕವಿ ಕುವೆಂಪು ಅವರ ಆಶಯದಂತೆ ಇದು ಎಲ್ಲರ ಭಾರತವಾಗಿ , ಸರ್ವ ಜನಾಂಗದ ಶಾಂತಿಯ ತೋಟವಾಗಿ ಮುನ್ನಡೆಯಬೇಕು.