ಇವರು ನಮ್ಮೆಲ್ಲರ ವಿವೇಕಾನಂದರು
‘ನಾನು ಮನುಷ್ಯ. ನನ್ನಿಂದಲೂ ತಪ್ಪುಗಳಾಗಿವೆ’ ಎಂದು ಯಾರು ಹೇಳಿದರು ಎಂಬುದು ಎಲ್ಲರಿಗೂ ಗೊತ್ತು. ಇಷ್ಟೇ ಅಲ್ಲ, ‘ಜಗತ್ತಿಗೆ ಯುದ್ಧ ಬೇಡ. ಬುದ್ದ ಬೇಕು’ ಎಂದು ಆಗಾಗ ಹೇಳುತ್ತಿರುವವರು ಯಾರು ಎಂಬುದು ಕೂಡ ಗುಟ್ಟಿನ ಸಂಗತಿಯಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಯಾರು ಮಾಡಿದರು ಎಂಬುದು ಕೂಡ ಮಾಧ್ಯಮದಲ್ಲಿ ದಾಖಲಾಗಿದೆ. ಭಾರತದ ಒಳಗೆ ನಾಥುರಾಮ ಗೋಡ್ಸೆ, ಸಾವರ್ಕರ್‌ರನ್ನು ಗುಟ್ಟಾಗಿ ಆರಾಧಿಸುತ್ತ, ವಿದೇಶಕ್ಕೆ ಹೋದಾಗ ಬುದ್ಧ, ಗಾಂಧೀಜಿ, ಬಾಬಾಸಾಹೇಬರ ದೇಶದಿಂದ ಬಂದಿದ್ದೇನೆ ಎಂದು ಹೇಳುವವರು ಯಾರೆಂದು ಕೂಡ ಎಲ್ಲರಿಗೂ ಗೊತ್ತಿದೆ. ಇದು ಉಳಿದವರೆಲ್ಲರಿಗೂ ತಪ್ಪಾಗಿರಬಹುದು ಆದರೆ ಯಾವ ಐಕಾನ್ ಗಳೂ ಇಲ್ಲದ ಇವರಿಗೆ ಹಾಗೂ ಇವರ ಸಂಘಟನೆಗೆ ಇದು ರಾಜಕೀಯ ಮಾತ್ರವಲ್ಲ, ಅಸ್ತಿತ್ವದ ಅನಿವಾರ್ಯತೆ.
ವೈದಿಕಶಾಹಿಯ ಜೀವ ವಿರೋಧಿ ಸಿದ್ಧಾಂತದ ವಿರುದ್ಧ ಬಂಡೆದ್ದ ಬುದ್ಧನನ್ನು ವಿಷ್ಣುವಿನ ಹನ್ನೊಂದನೇ ಅವತಾರ ಮಾಡಿ ಮುಗಿಸಲು ನೋಡಿದರು. ಆದರೆ ಈ ಜೀವಪರ ಧರ್ಮ ಗಡಿಯಾಚೆ ಹೋಗಿ ಚೀನಾ, ಜಪಾನ್ ಮುಂತಾದ ದೇಶಗಳಲ್ಲಿ ನೆಲೆ ಕಂಡುಕೊಂಡಿತು.ಭಾರತದಲ್ಲಿ ಬಾಬಾಸಾಹೇಬರು ಬೌದ್ಧ ಧರ್ಮ ಸೇರಿದ ನಂತರ ಅದು ಮತ್ತೆ ಚಿಗುರಿ ಬೆಳೆಯತೊಡಗಿತು. ಜೈನರು ಆಚಾರ, ವಿಚಾರಗಳಲ್ಲಿ ಒಂದಿಷ್ಟು ರಾಜಿ ಮಾಡಿಕೊಂಡಿದ್ದರೂ ಪೂರ್ತಿಯಾಗಿ ತಮ್ಮ ಸಿದ್ಧಾಂತ ಮತ್ತು ಅಸ್ಮಿತೆ ಬಿಟ್ಟುಕೊಟ್ಟಿಲ್ಲ. ಇನ್ನು ‘ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗ ಕೊಯ್ಯುವೆ’ ಎಂದು ಹೇಳಿದ ಬಸವಣ್ಣನವರನ್ನು ವಶಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಶತಾಯಗತಾಯ ಯತ್ನ ನಡೆಸುತ್ತಲೇ ಇದ್ದಾರೆ. ಅಂಬೇಡ್ಕರ್ ಅವರನ್ನು ಗೌರವಿಸುವ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ದಲಿತ ಮತ್ತು ಸಮಸ್ತ ದಮನಿತ ಸಮುದಾಯಗಳು ಇಂದಿಗೂ ಮನುವಾದಿ, ಕೋಮುವಾದಿ ಶಕ್ತಿಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅವರ ಮನುವಾದಿ ಹಿಂದೂರಾಷ್ಟ್ರ ನಿರ್ಮಾಣದ ಮಸಲತ್ತಿಗೆ ಅಂಬೇಡ್ಕರ್ ಅವರು ದೊಡ್ಡ ಅಡ್ಡಿಯಾಗಿದ್ದಾರೆ. ಅದಕ್ಕಾಗಿ ಅವರನ್ನೇ ನುಂಗಿ ಜೀರ್ಣಿಸಿಕೊಳ್ಳಲು ಹುನ್ನಾರ ನಡೆಸುತ್ತಲೇ ಬರಲಾಗಿದೆ.
ಆದರೆ, ಶ್ರೇಣೀಕೃತ ಜಾತಿ ಪದ್ಧತಿಯ ಮೂಲವಾದ ಧರ್ಮ ಎಂದು ವ್ಯಾಪಕವಾಗಿ ಕರೆಯಲ್ಪಡುವ ಮತ ಮತ್ತು ಭಿನ್ನ ಭೇದದ ಸಿದ್ಧಾಂತಗಳನ್ನು ವಿರೋಧಿಸುತ್ತ ಬಂದ ಬಾಬಾ ಸಾಹೇಬರನ್ನು ನುಂಗಿ ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಮಾತ್ರವಲ್ಲ ಸಾಧ್ಯವೇ ಇಲ್ಲ.ಕೋಮುವಾದಿ ಶಕ್ತಿಗಳು ಮೊದಲು ಅಂಬೇಡ್ಕರ್ ಅವರನ್ನು ತೇಜೋವಧೆ ಮಾಡಿಸಿ ಅರುಣ್ ಶೌರಿಯವರಿಂದ ಪುಸ್ತಕ ಬರೆಸಿದರು. ಆದರೆ, ಅದರ ವಿರುದ್ಧ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರತಿಭಟನೆ ವ್ಯಕ್ತವಾದಾಗ ತಮ್ಮ ರಾಗ ಬದಲಿಸಿದರು.ಅತ್ಯಂತ ಪ್ರಜ್ಞಾವಂತ ದಲಿತ ಸಮುದಾಯ ಮನುವಾದಿ, ಕೋಮುವಾದಿ ಶಕ್ತಿಗಳ ಬಲೆಗೆ ಬೀಳಲಿಲ್ಲ. ಕೆಲವರು ಬಿದ್ದರೂ ಪ್ರಯೋಜನವಾಗಲಿಲ್ಲ. ಈಗ ಗೃಹ ಮಂತ್ರಿಯ ಮೂಲಕ ಹೇಳಿಕೆ ನೀಡಿಸಿ ಅದರಿಂದ ಬಂದ ಪ್ರತಿಕ್ರಿಯೆಗಳನ್ನು ಗಮನಿಸಿ ಹೊಸ ತಂತ್ರವನ್ನು ರೂಪಿಸುತ್ತಿರುವವರು ಯಾರೆಂಬುದು ಸಹ ಜನಜನಿತ ಸಂಗತಿ. ನಾವು ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ಆಡಳಿತ ಪದ್ಧ್ದತಿಯನ್ನು ಒಪ್ಪಿಕೊಂಡ ದಿನ ಸಮೀಪಿಸುತ್ತಿದೆ. ಜನವರಿ 26 ಬಹುತ್ವ ಭಾರತಕ್ಕೆ ಸಂಭ್ರಮದ ದಿನ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದಿದ್ದವರಿಗೆ, ತಮ್ಮ ಸೈದ್ಧಾಂತಿಕ ಅಡಿಪಾಯದಲ್ಲಿ ಭಾರತವನ್ನು ಮರು ರೂಪಿಸಲು ಹೊರಟವರಿಗೆ ಹೇಳಿಕೊಳ್ಳಲು ಯಾವುದೇ ಇತಿಹಾಸವಿಲ್ಲ.ಯಾವ ಐಕಾನ್‌ಗಳೂ ಇಲ್ಲ. ಅದಕ್ಕಾಗಿ ತಮ್ಮ ವಿಚಾರ ಧಾರೆಗೆ ಸಂಬಂಧವಿಲ್ಲದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕೆಲವರನ್ನು ಹೈಜಾಕ್ ಮಾಡಲು ಮುಂದಾಗಿದ್ದೆೆ. ಭಾರತದ ಸ್ವಾತಂತ್ರ್ಯಕ್ಕಾಗಿ ಆಝಾದ್ ಹಿಂದ್ ಸೇನೆ ಕಟ್ಟಿದ ನೇತಾಜಿ ಸುಭಾಷ್ ಚಂದ್ರ ಬೋಸ್, ವಲ್ಲಭ ಭಾಯ್ ಪಟೇಲ್, ಮೊದಲಾದವರನ್ನು ಬಳಸಿಕೊಳ್ಳಲು ಮಸಲತ್ತು ನಡೆಯುತ್ತಲೇ ಇದೆ. ನಡೆದಿದೆ. ಈ ಬಗ್ಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಗಳು ಅನಿತಾ ಬೋಸ್ ಕೂಡ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಕೋಮುವಾದಿಗಳ ಸಿದ್ಧಾಂತಕ್ಕೂ ತಮ್ಮ ತಂದೆಗೂ ಸಂಬಂಧವಿಲ್ಲ ಎಂದು ಅನಿತಾ ಬೋಸ್ ಹೇಳಿದ್ದಾರೆ.
‘ಎಲ್ಲ ಧರ್ಮಗಳನ್ನು ಗೌರವಿಸಬೇಕೆಂದು ನೇತಾಜಿ ಸುಭಾಷರು ಸದಾ ಹೇಳುತ್ತಿದ್ದರು. ಈ ಅಂಶ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಸಿದ್ಧಾಂತದಲ್ಲಿ ಇಲ್ಲ’ ಎಂದು ನೇತಾಜಿ ಅವರ ಪುತ್ರಿ ಅನಿತಾ ಹೇಳಿದ್ದಾರೆ. ಸರ್ವಧರ್ಮಗಳ ಸಹಬಾಳ್ವೆ ಸುಭಾಷರ ಆದರ್ಶವಾಗಿತ್ತು. ಆದರೆ ಮತೀಯವಾದಿಗಳು ಏಕ ಧರ್ಮದ ಯಜಮಾನಿಕೆಯನ್ನು ದೇಶದ ಮೇಲೆ ಹೇರಲು ಹೊರಟಿದ್ದಾರೆೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.
ತಮ್ಮ ತಂದೆಯ ಹೆಸರನ್ನು ಕೋಮುವಾದಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಅನಿತಾ ಬೋಸ್ ಅವರು ಅನೇಕ ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಎಡಪಂಥೀಯರಾಗಿದ್ದರು’ ಎಂದೂ ಹೇಳಿದ್ದಾರೆ.ಈ ಮಾತನ್ನು ಹೇಳಿದ ಅನಿತಾ ಬೋಸ್ ಜರ್ಮನಿಯಲ್ಲಿದ್ದಾರೆ. ಭಾರತದಲ್ಲಿದ್ದು ಈ ಮಾತನ್ನು ಹೇಳಿದ್ದರೆ ಅವರೂ ಅಂಬೇಡ್ಕರ್ ಸಂಬಂಧಿ ಚಿಂತಕ ಆನಂದ್ ತೇಲ್ತುಂಬ್ಡೆೆ ಅವರಂತೆ ಸೆರೆಮನೆಗೆ ಹೋಗಿ ಬರುವ ಗತಿ ಬರುತ್ತಿತ್ತೇನೊ.
ಈ ರೀತಿ ಮಹಾಚೇತನಗಳನ್ನು ಅಪಹರಿಸಿ ಕಬ್ಜ್ಜ ಮಾಡಿಕೊಳ್ಳುವ ಮಸಲತ್ತು ನಡೆಯುತ್ತಲೇ ಇದೆ. ಒಬ್ಬರಲ್ಲ ಇಬ್ಬರಲ್ಲ, ಶಿವಾಜಿ ಮಹಾರಾಜರಿಂದ ಹಿಡಿದು ಶಹೀದ್ ಭಗತ್ ಸಿಂಗ್ ಸೇರಿದಂತೆ ಅನೇಕ ಮಹಾ ಪುರುಷರನ್ನು ಅವರು ಹೈಜಾಕ್ ಮಾಡುತ್ತಲೇ ಇದ್ದಾರೆ. ಶಹೀದ್ ಭಗತ್ ಸಿಂಗ್‌ರನ್ನು ಅಪಹರಿಸಲು ಯತ್ನಿಸಿದರು, ಅಷ್ಟರಲ್ಲಿ ಭಗತ್ ಸಿಂಗ್ ನಂಬಿದ ಸಿದ್ಧಾಂತ ಅಡ್ಡಿ ಬಂತು. ಬಾಬಾಸಾಹೇಬರನ್ನು ಬುಟ್ಟಿಗೆ ಹಾಕಿಕೊಳ್ಳಲು ಯತ್ನಿಸಿದರು,ಆದರೆ ಆ ಉರಿವ ಜ್ವ್ವಾಲೆ ಮುಟ್ಟಲು ಹೋಗಿ ಅವರೇ ಸುಟ್ಟುಕೊಂಡರು. ಎಲ್ಲಕ್ಕಿಂತಲೂ ಮುಖ್ಯವಾಗಿ ಸುಭಾಷರಂತೆ ವಿವೇಕಾನಂದರನ್ನ್ನು ಕಬಳಿಸಲು ಹುನ್ನಾರ ನಡೆಸುತ್ತಲೇ ಇದ್ದಾರೆ. ಅವರ ಜಯಂತಿ ಆಚರಿಸಿ ಅವರ ಕ್ರಾಂತಿಕಾರಿ ವಿಚಾರಧಾರೆಯನ್ನು ಮುಚ್ಚಿ ಡಲು ಯತ್ನಿಸುತ್ತಿದ್ದಾರೆ. ರಾಮಕೃಷ್ಣ ಆಶ್ರಮದಲ್ಲೂ ನುಸುಳಿ ತಮ್ಮ ಮಸಲತ್ತು ನಡೆಸುತ್ತಿದ್ದಾರೆ. ಆದರೆ ವಿವೇಕಾನಂದರು ಕೂಡ ಇವರಿಗೆ ದಕ್ಕುವುದಿಲ್ಲ. ವಿವೇಕಾನಂದರು ಮುಸಿಮ್ ದ್ವೇಷಿ ಅಲ್ಲ, ಕೋಮುವಾದಿ ಅಲ್ಲ, ಅವರು ಮನುಷ್ಯ ಸಮಾನತೆಯ ಕನಸು ಕಂಡ ಕ್ರಾಂತಿಕಾರಿ. ಅವರ ಕ್ರಾಂತಿಕಾರಿ ವಿಚಾರಗಳನ್ನು ಮುಚ್ಚಿಟ್ಟು ಬೇರೆ ವಿವೇಕಾನಂದರನ್ನು ತೋರಿಸುವ ಮಸಲತ್ತನ್ನು ಕೋಮುವಾದಿಗಳು ಮಾಡುತ್ತ ಬಂದಿದ್ದಾರೆ. ನೆನಪಿರಲಿ, ವಿವೇಕಾನಂದರು
ಸಮಾನತೆಯಲ್ಲಿ ನಂಬಿಕೆ ಹೊಂದಿದವರು. ಅವರು ಪ್ರತಿಪಾದಿಸಿದ ಧರ್ಮ ಜನಾಂಗ ದ್ವೇಷದ ಧರ್ಮವಲ್ಲ, ಮಹಾಪುರುಷರನ್ನು ಹೈಜಾಕ್ ಮಾಡಿ ವಿರೂಪಗೊಳಿಸುವ ಕೋಮುವಾದಿಗಳ ಹುನ್ನಾರದ ಹುದಲಲ್ಲಿ ನಿಜ ವಿವೇಕಾನಂದರು ಕಳೆದು ಹೋಗುವುದಿಲ್ಲ.
ಭಾರತದಲ್ಲಿ ಇಸ್ಲಾಮ್ ಧರ್ಮ ಬಲಪ್ರಯೋಗದಿಂದ ಬೆಳೆಯಿತು ಎಂಬ ವಾದವನ್ನು ತಳ್ಳಿ ಹಾಕಿದ ವಿವೇಕಾನಂದರು ಜಮೀನ್ದಾರರ ದೌರ್ಜನ್ಯ, ಪುರೋಹಿತರ ಕಾಟ, ಜಾತಿವಾದಿಗಳ ಹಿಂಸೆಯ ಪರಿಣಾಮವಾಗಿ ಈ ಯಾತನೆಯಿಂದ ಬಿಡುಗಡೆ ಹೊಂದಲು ಈ ನೆಲದ ಅನ್ಯಾಯಕ್ಕೊಳಗಾದ ಜನರು ಮಹ್ಮದಿಯರಾದರು ಎಂದು ಹೇಳುತ್ತಾರೆ. ಬಲವಂತದ ಮತಾಂತರ ಎಂಬುದನ್ನು ವಿವೇಕಾನಂದರು ತಳ್ಳಿ ಹಾಕುತ್ತಾರೆ.ಭಾರತದ ಭವಿಷ್ಯ ಇರುವುದು ಹಿಂದೂ_ ಮುಸ್ಲಿಮ್ ಏಕತೆಯಲ್ಲಿ ಎಂದು ಸ್ಪಷ್ಟವಾಗಿ ನುಡಿಯುವ ವಿವೇಕಾನಂದರು ಇಸ್ಲಾಮ್‌ನ ದೇಹ,ವೇದಾಂತದ ವಿವೇಕದ ಸಮ್ಮಿಲನವೇ ಭಾರತದ ಬೆಳಕಿನ ದಾರಿ ಎಂದು ಒಂದೆಡೆ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರು ಅಂದರೆ ಯಾರು,ಅವರು ಯಾವ ಸಂದೇಶ ನೀಡಿದರು ಎಂಬುದನ್ನು ಅರಿತುಕೊಳ್ಳಲು ಹೆಚ್ಚಿನ ಸಂಶೋಧನೆ ನಡೆಸಬೇಕಾಗಿಲ್ಲ.ರಾಮಕೃಷ್ಣ ಆಶ್ರಮದ ಪ್ರಕಾಶನ ಸಂಸ್ಥೆ ಪ್ರಕಟಿಸಿದ ವಿವೇಕಾನಂದರ ಕೃತಿ ಶ್ರೇಣಿಗಳಲ್ಲಿ ಅವರ ನಿಲುವು ಸ್ಪಷ್ಟವಾಗಿದೆ. ನವ ಭಾರತವು ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ‘ಕೈಯಲ್ಲಿ ನೇಗಿಲು ಹಿಡಿದ ರೈತರ ಗುಡಿಸಿಲಿನಿಂದ, ಮೀನುಗಾರರ ಹಟ್ಟಿಗಳೊಳಗಿನಿಂದ, ಚಮ್ಮಾರನ, ಜಾಡಮಾಲಿಯ ಮನೆಗಳಿಂದ ನವ ಭಾರತ ಹೊರ ಹೊಮ್ಮುತ್ತದೆ. ಕಿರಾಣಿ ಅಂಗಡಿಯಿಂದ, ಪಿಂಗಾಣಿ ಕೆಲಸಗಾರರ ಕುಲುಮೆಯಿಂದ, ಕಾರ್ಖಾನೆ ಗಳ ಕಾರ್ಮಿಕರ ಬೆವರಿನಿಂದ ನವ ಭಾರತ ಹುಟ್ಟುತ್ತದೆ ಎಂದು ವಿವೇಕಾನಂದರು ಹೇಳಿದರು.
ಜಗತ್ತಿನ ಧರ್ಮಗಳೆಲ್ಲ ನಿಸ್ತೇಜವಾಗಿ ಬಿದ್ದಿವೆ, ಮನುಷ್ಯ ಪ್ರೀತಿ, ಅಂತಃಕರಣ, ಶುದ್ಧ್ಧ ಚಾರಿತ್ರ್ಯ ಇವುಗಳು ವಿಶ್ವದ ತುರ್ತು ಅಗತ್ಯಗಳಾಗಿವೆ ಎಂದು ಲಂಡನ್‌ನ ಒಂದು ಸಭೆಯಲ್ಲಿ ಹೇಳಿದ ವಿವೇಕಾನಂದರು, ‘ಇಹದಲ್ಲಿ ಹೊಟ್ಟೆಗೆ ಅನ್ನವನ್ನು ನೀಡದ, ವಿಧವೆಯ ಕಣ್ಣೀರನ್ನು ಒರೆಸದ ಧರ್ಮದಲ್ಲಾಗಲಿ ದೇವರಲ್ಲಾಗಲಿ ನನಗೆ ನಂಬಿಕೆಯಿಲ್ಲ’ ಎಂದು ಸ್ಪಷ್ಟವಾಗಿ ನುಡಿದರು. ವಿವೇಕಾನಂದರ ಈ ಮಾತುಗಳನ್ನು ಮರೆಮಾಚಿ ಕೋಮುವಾದಿಗಳು ತಮ್ಮ ಮನುವಾದಿ ಅಜೆಂಡಾ ಜಾರಿಗಾಗಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಪುರೋಹಿತಶಾಹಿಯ ವಿರುದ್ಧ, ಮೂಢ ನಂಬಿಕೆಗಳ ವಿರುದ್ಧ, ಅರ್ಥಹೀನ ಧಾರ್ಮಿಕ ಆಚರಣೆಗಳ ಬಗ್ಗೆ ಕಟುವಾಗಿ ಟೀಕಿಸುತ್ತ ಬಂದ ವಿವೇಕಾನಂದರು ಪುರೋಹಿತ ಶಾಹಿಯನ್ನು ಒದ್ದೋಡಿಸಲು ಕರೆ ನೀಡಿದರು. ಹಿಂದೂ ಧರ್ಮದ ಬಗ್ಗೆ ಒಂದೆಡೆ ಅವರು ಜಗತ್ತಿನ ಯಾವುದೇ ಧರ್ಮವೂ ಹಿಂದೂ ಧರ್ಮದಂತೆ ಮಾನವನ ಘನತೆಯನ್ನು ಎತ್ತಿ ಹಿಡಿಯುವುದಿಲ್ಲ, ಜಗತ್ತಿನಲ್ಲಿ ಯಾವುದೇ ಧರ್ಮವೂ ಹಿಂದೂ ಧರ್ಮದಂತೆ ದಲಿತರ ಕತ್ತಿನ ಮೇಲೆ ಸವಾರಿ ಮಾಡುವುದಿಲ್ಲ ಎಂದು ಹೇಳಿದ್ದು ಮತ ಧರ್ಮಗಳ ಬಗೆಗಿನ ಅವರ ಕಟು ವಿಮರ್ಶೆಗೆ ಉದಾಹರಣೆಯಾಗಿದೆ.
ಅವರು ಎಲ್ಲೋ ಹೇಳಿದ ಧಾರ್ಮಿಕ ವಿಷಯಗಳನ್ನು ದೊಡ್ಡದು ಮಾಡಿ ತಮ್ಮ ವಿಭಜನಕಾರಿ ರಾಜಕೀಯಕ್ಕೆ ಬಳಸಿಕೊಳ್ಳುವುದು ಕೋಮುವಾದಿಗಳ ಚಾಳಿಯಾಗಿದೆ.
ಪುರೋಹಿತಶಾಹಿಯ ವಂಚನೆಯ ಬಗ್ಗೆ ವಿವೇಕಾನಂದರಿಗೆ ತೀವ್ರ ಅಸಮಾಧಾನವಿತ್ತು. ಮೂಢ ಕಂದಾಚಾರಗಳನ್ನು ನೂರಾರು ವರ್ಷಗಳಿಂದ ತಲೆಯಲ್ಲಿ ತುಂಬಿಕೊಂಡ ಈ ದೇಶದಲ್ಲಿ ಯಾವುದನ್ನು ತಿಂದರೆ ಶ್ರೇಷ್ಠ, ಯಾವುದನ್ನು ತಿಂದರೆ ಅಶುದ್ಧ ಎಂದು ಒಣ ಚರ್ಚೆಯಲ್ಲಿ ಕಾಲ ಹರಣ ಮಾಡಲಾಗಿದೆ. ಪುರೋಹಿತಶಾಹಿಯನ್ನು ಒದ್ದೋಡಿಸಿ, ಯಾಕೆಂದರೆ ಅವರೆಂದೂ ಬದಲಾಗುವುದಿಲ್ಲ. ಅವರು ಶತಮಾನಗಳ ಮೂಢ ನಂಬಿಕೆ ಕಂದಾಚಾರಗಳ ಸಂತಾನವಾಗಿದ್ದಾರೆ ಎಂದು ಕರೆ ನೀಡಿದ ವಿವೇಕಾನಂದರು, ಹಿಂದೂ ಧರ್ಮದಲ್ಲಿ ನವ ವೇದಾಂತ ಚಳವಳಿಯನ್ನು ಹುಟ್ಟು ಹಾಕಿದ ಕಟು ವಿಮರ್ಶಕರಾಗಿದ್ದರು.
ವಿವೇಕಾನಂದರು ಜಾತಿ ಮತಗಳ ಆಚೆ ಮನುಷ್ಯರನ್ನು ಪ್ರೀತಿಸಿದರು.ಎಲ್ಲೆಡೆ ಪ್ರೀತಿಯನ್ನು ಹಂಚಲು ಕರೆ ನೀಡಿದರು. ವೇದ, ಶಾಸ್ತ್ರ, ಪುರಾಣ, ಕುರ್‌ಆನ್, ಬೈಬಲ್‌ಗಳಿಗೆ ಕೆಲ ಕಾಲ ವಿಶ್ರಾಂತಿ ನೀಡಿ ಮನುಷ್ಯರು ಪ್ರೀತಿ, ಪ್ರೇಮದ ಸಂತಸದ ಸಾಗರದಲ್ಲಿ ಕೆಲ ಕಾಲವಾದರೂ ಖುಷಿಯಾಗಿರಲಿ ಎಂದು ಕರೆ ನೀಡಿದರು.ಇಂಥ ಜೀವಪರ ಕಾಳಜಿಯ ಮಹಾನ್ ವೇದಾಂತಿಯನ್ನು ತಮ್ಮ ಕೋಮುವಾದಿ ರಾಜಕಾರಣಕ್ಕೆ ಬಳಸಿಕೊಳ್ಳುವ ಕೋಮುವಾದಿಗಳ ಮೂಲ ಭಾರತವಲ್ಲ. ಅವರದು ಇಟಲಿ,ಜರ್ಮನಿಯಿಂದ ಮುಸ್ಸೋಲಿನಿ, ಹಿಟ್ಲರ್ ಗಳಿಂದ ಎರವಲು ತಂದ ಜನಾಂಗ ದ್ವೇಷಿ ಸಿದ್ಧಾಂತ.
ಯಾವ ಆಹಾರ ಸೇವಿಸಬೇಕು, ಯಾವುದನ್ನು ಸೇವಿಸಬಾರದು ಎಂಬುದು ವಿವೇಕಾನಂದರಿಗೆ ಮುಖ್ಯ ವಾಗಿರಲಿಲ್ಲ.ಅವರು ಸ್ವತಃ ಮಾಂಸಾಹಾರಿಯಾಗಿದ್ದರು.ಆದರೆ ಓಟಿನ ರಾಜಕೀಯಕ್ಕೆ ಅವರನ್ನೂ ಬಳಸಿಕೊಳ್ಳುವ ಪಕ್ಷ ಮತ್ತು ಸಂಘಟನೆಗಳಿಗೆ ನಿಜವಾದ ವಿವೇಕಾನಂದರು ಬೇಕಾಗಿಲ್ಲ.
ನಮ್ಮ ಯುವಕರಿಗೆ ಈಗ ವಿವೇಕಾನಂದರು ಬೇಕು. ಕೋಮುವಾದಿಗಳು ವಿರೂಪಗೊಳಿಸಿದ ವಿವೇಕಾನಂದರಲ್ಲ. ಹಸಿದವರ ಹೊಟ್ಟೆಗೆ ಅನ್ನ ನೀಡಬೇಕೆಂದು, ವಿಧವೆಯರ ಕಣ್ಣೀರು ಒರೆಸಬೇಕೆಂದು ಹೇಳುವ ನಮ್ಮ ವಿವೇಕಾನಂದರು ನಮಗೆ ಬೇಕು.
ಹೀಗೆ ಮಹಾಚೇತನಗಳನ್ನು ಹೈಜಾಕ್ ಮಾಡಿ ತಮ್ಮ ಫ್ಯಾಶಿಸ್ಟ್ ಸಿದ್ಧಾಂತಗಳ ಜಾರಿಗೆ ಬಳಸಿಕೊಳ್ಳುವ ಹುನ್ನಾರದ ಬಗ್ಗೆ ಜನರಲ್ಲಿ ಅದರಲ್ಲೂ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜೀವ ಪರ, ಜನಪರ ಶಕ್ತಿಗಳು ಸಮರೋಪಾದಿಯಲ್ಲಿ ನಡೆಸಬೇಕಾಗಿದೆ.ಈ ನಿಟ್ಟಿನಲ್ಲಿ ಕಾಂಗ್ರೆಸ್, ಡಿಎಂಕೆ ಸೇರಿದಂತೆ ಜಾತ್ಯತೀತ ಪಕ್ಷಗಳು ಮಾತ್ರವಲ್ಲ ಎಡಪಂಥೀಯ ಪಕ್ಷಗಳು ಮತ್ತು ಸಂಘಟನೆಗಳು ಹೆಚ್ಚಿನ ಗಮನ ಹರಿಸಬೇಕಾಗಿದೆ.ಬಹುತ್ವ ಭಾರತವನ್ನು ಕಾಪಾಡಿಕೊಳ್ಳಲು ಮತ್ತು ಇದನ್ನು ಎಲ್ಲರ ಭಾರತವನ್ನಾಗಿ ಉಳಿಸಿಕೊಳ್ಳಲು ಕಾರ್ಯೋನ್ಮುಖವಾಗದಿದ್ದರೆ ಬಹುದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತ್ತದೆ. ಮನಸ್ಸು ಒಡೆಯುವವರ ವಿರುದ್ಧ ಮನಸ್ಸು ಕಟ್ಟುವ ಮತ್ತು ಕನಸು ಕಟ್ಟುವ ಜನ ಒಂದಾಗಬೇಕಾಗಿದೆ.ಅದಕ್ಕಾಗಿ ಪ್ರಜಾರಾಜ್ಯೋತ್ಸವದ ಸಂದರ್ಭದಲ್ಲಿ ಪಣ ತೊಡಬೇಕಾಗಿದೆ.