ಸಿದ್ದರಾಮಯ್ಯ ಮುಂದಿರುವ ಸವಾಲು
ಸಿದ್ದರಾಮಯ್ಯನವರು ಮಾತ್ರವಲ್ಲ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯಗಳಿಗೆ ಸೇರಿದ ಹಾಗೂ ಕೋಮುವಾದವನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸುವ ಯಾರೂ ಅಧಿಕಾರಕ್ಕೆ ಬರಬಾರದು, ಮುಖ್ಯಮಂತ್ರಿಯಾಗಬಾರದು ಎಂಬುದು ಮನುವಾದಿಗಳ ಮಸಲತ್ತು. ಅಂತಲೇ ಸಿದ್ದರಾಮಯ್ಯ ಮತ್ತು ಖರ್ಗೆಯವರನ್ನು ವಿರೋಧಿಸಿದಂತೆ ಸೈದ್ಧಾಂತಿಕವಾಗಿ ಇಡೀ ಬಸವ ಪರಂಪರೆಯನ್ನೇ ಮುಗಿಸಲು ಹೊರಟಿದ್ದಾರೆ.
ಮುಡಾ ಹಗರಣದ ನೆಪ ಮಾಡಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜೀನಾಮೆ ಕೊಡಿಸಿದರೆ, ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ’ಆಪರೇಷನ್ ಕಮಲ’ದ ಮೂಲಕ ಕಬ್ಜಾ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಒಬ್ಬಿಬ್ಬರದ್ದಲ್ಲ. ಹಲವರದ್ದು ಇದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಗುರುಗಳು ಹಸಿರು ಬಾವುಟ ತೋರಿಸಿದ ನಂತರ ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ ,ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಬಿಜೆಪಿ ವಲಯದಲ್ಲೂ ಸಿ.ಎಂ.ಕುರ್ಚಿ ಪಕ್ಕದಲ್ಲಿ ಸಾಲಾಗಿ ನಿಂತು ಕಾಯುತ್ತಿರುವವರ ಸಂಖ್ಯೆ ಕಡಿಮೆಯಿಲ್ಲ. ಆದರೆ ಇಂಥವರ ಲೆಕ್ಕಾಚಾರಗಳೆಲ್ಲ ಉಲ್ಟಾ ಆಗುತ್ತಿವೆ. ಸಿದ್ದರಾಮಯ್ಯನವರು ಅಷ್ಟು ಸುಲಭಕ್ಕೆ ಜಗ್ಗುವವರಲ್ಲ ಎಂಬುದು ಸಿ.ಎಂ ಕುರ್ಚಿಯ ಕನಸು ಕಾಣುತ್ತಿರುವವರಲ್ಲಿ ನಿರಾಶೆ ಮೂಡಿಸಿದೆ.
ರಾಜಕಾರಣಿಗಳು ಮಾತ್ರವಲ್ಲ ಮಾಧ್ಯಮಗಳಲ್ಲಿ ಇರುವ ಅವರ ಆಪ್ತ ಫಲಾನುಭವಿಗಳು ‘ಮುಂದಿನ ಮುಖ್ಯಮಂತ್ರಿ ಯಾರು’ ಎಂದು ದಿನಕ್ಕೊಂದು ಸುದ್ದಿ ಬರೆದು ಸಿ.ಎಂ. ಆಗಲು ಹೊರಟವರ ಕಣ್ಣುಗಳಲ್ಲಿ ಹುಸಿ ಕನಸನ್ನು ತುಂಬಿದವರು ಹೊಸ ಹೊಸ ಕತೆಗಳನ್ನು ಸೃಷ್ಟಿಸುತ್ತಲೇ ಇದ್ದಾರೆ.ಆದರೆ, ಪ್ರತಿಫಲ ಸಿಗುತ್ತಿಲ್ಲ.
ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ 2014ರಲ್ಲಿ ಬಂದ ನಂತರ ಭಾರತದ ಪ್ರಜಾಪ್ರಭುತ್ವ ಎಲ್ಲಿಗೆ ಬಂದಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಸಿಬಿಐ, ಈಡಿ., ಐಟಿ ಬಳಸಿಕೊಂಡು ಬಿಜೆಪಿಯನ್ನು ಸೋಲಿಸಿ ಗೆದ್ದ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ಚುನಾಯಿತ ಪ್ರತಿನಿಧಿಗಳನ್ನು ಹೇಗೆ ಬುಟ್ಟಿಗೆ ಹಾಕಿಕೊಳ್ಳಲಾಗುತ್ತಿದೆ ಎಂಬುದು ಯಾರೂ ಅರಿಯದ ಸಂಗತಿಯೇನಲ್ಲ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ತಿಂಗಳಾನುಗಟ್ಟಲೆ ಇಲ್ಲೇ ಟೆಂಟ್ ಹಾಕಿ ಹಗಲಿರಳು ಜಿಲ್ಲಾ ಮಾತ್ರವಲ್ಲ ತಾಲೂಕು ಕೇಂದ್ರಗಳಿಗೂ ಹೋಗಿ ಮಾತಾಡಿದ್ದನ್ನೇ ಮಾತಾಡುತ್ತ ಹೋದರು. ಆದರೂ ಸಿದ್ದರಾಮಯ್ಯನವರ ಮುಂದೆ ಅವರ ಆಟ ನಡೆಯಲಿಲ್ಲ. ಸಿದ್ದರಾಮಯ್ಯನವರ ಪ್ರಭಾವಿ ಹಾಗೂ ನಿಷ್ಕಳಂಕ ವ್ಯಕ್ತಿತ್ವ ಹಾಗೂ ಡಿ.ಕೆ.ಶಿವಕುಮಾರ್‌ಅವರ ಸಂಘಟನಾ ಸಾಮರ್ಥ್ಯ ಮತ್ತು ಸತೀಶ್ ಜಾರಕಿಹೊಳಿ ಮುಂತಾದವರ ಕ್ರಿಯಾಶೀಲತೆಯಿಂದ ಬಿಜೆಪಿ ಸೋತು ಕಾಂಗ್ರೆಸ್ ಜಯಶಾಲಿಯಾಯಿತು.
ಒಂದು ರಾಜ್ಯದ ಮುಖ್ಯ ಮಂತ್ರಿಯಾಗಲು ಬರೀ ಜಾತಿ ಮತ್ತು ಹಣವಿದ್ದರೆ ಸಾಲದು, ಇವಕ್ಕಿಂತ ಮುಖ್ಯವಾಗಿ ವಿದ್ಯೆ, ವಿನಯ ಹಾಗೂ ಅಧ್ಯಯನ ಶೀಲತೆ, ಮುಖ್ಯವಾಗಿ ವೈಯಕ್ತಿಕ ಪ್ರಾಮಾಣಿಕತೆ ಬೇಕು. ಎಪ್ಪತ್ತು, ಎಂಭತ್ತರ ದಶಕದ ವರೆಗೆ ಬಹುತೇಕ ಇಂಥವರೇ ಮುಖ್ಯಮಂತ್ರಿ ಆಗಿದ್ದರು. ಆದರೆ, ತೊಂಭತ್ತರ ದಶಕದಲ್ಲಿ ಎಲ್ಲವೂ ಬದಲಾಯಿತು.ಮುಂಚೆ ಕೋಟ್ಯಂತರ ರೂಪಾಯಿ ಕಪ್ಪು ಮತ್ತು ಬಿಳಿಯ ಹಣ ಇಟ್ಟುಕೊಂಡವರು ನೇರವಾಗಿ ರಾಜಕೀಯಕ್ಕೆ ಬರುತ್ತಿರಲಿಲ್ಲ, ಹಣ ಚೆಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಕಾರ್ಪೊರೇಟ್ ಧಣಿಗಳು ನೇರವಾಗಿ ಚುನಾವಣಾ ರಾಜಕೀಯಕ್ಕೆ ಧುಮುಕಿ ಗೆದ್ದು ತಮ್ಮ ಹಣಕಾಸು ಸಾಮ್ರಾಜ್ಯವನ್ನು ಸುರಕ್ಷಿತವಾಗಿ ಇಡುವುದರ ಜೊತೆಗೆ ಅದಕ್ಕೆ ಮತ್ತಷ್ಟು ಸೇರಿಸಲು ಮಸಲತ್ತು ಮಾಡುತ್ತಿದ್ದರು.
ಹಿಂದೆ ಜನಪರ ಚಳವಳಿಗಳಿಂದ ಬಂದವರು ಹಾಗೂ ಸಂವಿಧಾನ, ಆಡಳಿತದ ನಿರ್ವಹಣೆಯ ಬಗ್ಗೆ ಸಾಕಷ್ಟು ತಿಳಿದುಕೊಂಡವರು ಶಾಸನ ಸಭೆಗಳನ್ನು ಪ್ರವೇಶಿಸುತ್ತಿದ್ದರು.ಆದರೆ ಈಗ ರಿಯಲ್ ಎಸ್ಟೇಟ್, ಮೈನಿಂಗ್,ಸಕ್ಕರೆ ಕಾರ್ಖಾನೆಗಳ ಮಾಲಕರು ಚುನಾವಣೆಗೆ ನಿಂತು ಗೆದ್ದು ಬರುತ್ತಿದ್ದಾರೆ.ಇಂಥವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ. ಸೈದ್ಧಾಂತಿಕ ರಾಜಕೀಯವೆಂದರೆ ಇವರಿಗೆ ಆಗುವುದಿಲ್ಲ. ಇಂಥ ಗಣಿ ಖದೀಮರು ಬಳ್ಳಾರಿ ಜಿಲ್ಲೆಯನ್ನು ಹೇಗೆ ಕೊಳ್ಳೆ ಹೊಡೆದರು ಎಂಬುದು ಎಲ್ಲರಿಗೂ ಗೊತ್ತಿದೆ. ಇಂಥವರಿಗೆ ಬಲೆ ಹಾಕಿ ತನಿಖಾ ಸಂಸ್ಥೆಗಳ ಮೂಲಕ ಇವರನ್ನು ಹೇಗೆ ರುಬ್ಬುತ್ತಾರೆ ಎಂಬುದು ಇತ್ತೀಚಿನ ಮಹಾರಾಷ್ಟ್ರದಲ್ಲಿನಡೆದ ವಿದ್ಯಮಾನಗಳನ್ನು ಅವಲೋಕಿಸಿದರೆ ಗೊತ್ತಾಗುತ್ತದೆ. ಮಹಾರಾಷ್ಟ್ರದ ಶರದ್‌ಪವಾರ್ ಅವರ ಆಪ್ತಬಂಧು ಅಜಿತ್ ಪವಾರ್ ಬಿಜೆಪಿ ಸೇರಿ ಬೇಗ ಬಚಾವ್ ಆದರೆಂಬುದು ಗುಟ್ಟಿನ ವಿಷಯವೇನಲ್ಲ.
ಆದರೆ, ಸಿದ್ದರಾಮಯ್ಯನವರು ಇವರಂತಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಸಿದ್ದರಾಮಯ್ಯನವರು ನುಂಗಲಾಗದ ತುತ್ತಾಗಿದ್ದಾರೆ. ಸಿದ್ದರಾಮಯ್ಯನವರಿಗೆ ಬೀಸಿದ ಮುಡಾದಂಥ ಬಲೆಯನ್ನು ಬೇರೆ ಯಾರಿಗಾದರೂ ಬೀಸಿದ್ದರೆ ತತ್ತರಿಸಿ ಹೋಗುತ್ತಿದ್ದರು. ಆದರೆ ಕಾನೂನು ಪದವೀಧರರಾದ ಹಾಗೂ ಸಾಕಷ್ಟು ಓದಿಕೊಂಡಿರುವ ಮತ್ತು ಪ್ರೊ.ನಂಜುಂಡಸ್ವಾಮಿ ಅವರ ಗರಡಿಯಲ್ಲಿ ಪಳಗಿದ, ಸೈದ್ಧಾಂತಿಕವಾಗಿ ಸಮಾಜವಾದಿಯಾದ ಸಿದ್ದರಾಮಯ್ಯನವರನ್ನು ಮಣಿಸುವುದು ಅಷ್ಟು ಸುಲಭವಲ್ಲ ಎಂಬುದು ದಿಲ್ಲಿಯ ಗುರು, ಶಿಷ್ಯರಿಗೆ ಈಗ ಅರ್ಥವಾದಂತೆ ಕಾಣುತ್ತದೆ. ಮುಡಾ ಪ್ರಕರಣದಲ್ಲಿ ಇನ್ನೇನು ಸಿದ್ದರಾಮಯ್ಯನವರು ರಾಜೀನಾಮೆ ಕೊಟ್ಟೇ ಬಿಟ್ಟರು ಎಂದು ನಿತ್ಯ ವದಂತಿಗಳನ್ನು ಹರಡಿಸಲಾಗುತ್ತಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡು ಕೆಲವು ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಿ ಕುಮಾರಸ್ವಾಮಿಯವರಂತೆ ಹಗಲುಕನಸನ್ನು ಕಂಡವರು ಸಾಕಷ್ಟು ಜನರಿದ್ದರು.ಆದರೆ ಯಾವುದೇ ಒತ್ತಡಕ್ಕೆ ಮಣಿಯದ ಸಿದ್ದರಾಮಯ್ಯನವರು ನಿಶ್ಚಿಂತೆಯಿಂದ ಇದ್ದರು. ಮುಡಾ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಮೂಲಕ ಎದುರಿಸುವ ಜೊತೆಗೆ ರಾಜಕೀಯವಾಗಿ ಎದುರಿಸಲು ತೀರ್ಮಾನಿಸಿ ಹೆಜ್ಜೆ ಗಳನ್ನು ನಿಧಾನವಾಗಿ ಇಡತೊಡಗಿದರು. ಯಾವುದೇ ರಾಜಕೀಯ ಚಾಣಾಕ್ಷ ರಾಜಕಾರಣಿಯಂತೆ ಧೈರ್ಯವಾಗಿ ಎದುರಿಸಿದ ಸಿದ್ದರಾಮಯ್ಯನವರನ್ನು ರಾಜೀನಾಮೆ ಕೊಡಿಸುವುದು ಅಷ್ಟು ಸುಲಭವಲ್ಲ. ನಿಜ, ಸಿದ್ದರಾಮಯ್ಯನವರ ಬಳಿ ಕೋಟಿಗಟ್ಟಲೆ ಹಣವಿರಲಿಕ್ಕಿಲ್ಲ, ಅವರ ಸಕ್ಕರೆ ಕಾರ್ಖಾನೆಯಾಗಲಿ , ಕ್ಯಾಪಿಟೇಶನ್ , ಡೊನೇಶನ್ ಕಾಲೇಜು ಇಲ್ಲವೇ ರಿಯಲ್ ಎಸ್ಟೇಟ್ ದಂಧೆಯಾಗಲಿ ಇರಲಿಕ್ಕಿಲ್ಲ.ಆದರೆ ಪ್ರಾಮಾಣಿಕತೆ ಹಾಗೂ ರಾಜಕೀಯ ಚಾಣಾಕ್ಷತನ ಅವರ ರಕ್ಷಾ ಕವಚಗಳಾಗಿವೆ.
ಸಿದ್ದರಾಮಯ್ಯ್ಯನವರಿಗೆ ಇರುವ ದಿಟ್ಟತನದ ಸೈದ್ಧಾಂತಿಕ ತಿಳಿವಳಿಕೆ ಪ್ರಶ್ನಾತೀತ. ಕಾಂಗ್ರೆಸ್‌ನ ಅನೇಕ ಘಟಾನುಘಟಿ ನಾಯಕರು ಕೂಡ ಕೋಮುವಾದಿ ಶಕ್ತಿಗಳ ಕುತಂತ್ರಗಳನ್ನು ಸಿದ್ದರಾಮಯ್ಯನವರಂತೆ ನೇರವಾಗಿ ಟೀಕಿಸುವುದಿಲ್ಲ.ಕರ್ನಾಟಕದಲ್ಲಿ ಸಾಕಷ್ಟು ಕಾಂಗ್ರೆಸ್ ನಾಯಕರಿದ್ದಾರೆ, ಆದರೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯವರಂತೆ ಸಂಘ ಪರಿವಾರದ ಕೋಮುವಾದಿ ಮಸಲತ್ತುಗಳನ್ನು ಬೇರೆ ಕಾಂಗ್ರೆಸ್ ನಾಯಕರು ಬಯಲಿಗೆಳೆದ ಉದಾಹರಣೆಗಳು ತುಂಬಾ ಕಡಿಮೆ. ಈ ಕಾರಣದಿಂದ ನಾಗಪುರದ ಸಂಘ ಪರಿವಾರದ ಗುರುಗಳು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಮಾಡಿ ಬಿಜೆಪಿ ಮೂಲಕ ಬೀದಿ ಚಳವಳಿ ನಡೆಸಲು ಗುಪ್ತ ಪ್ರಚೋದನೆ ನೀಡುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇರುವ ಬೇರೆ ನಾಯಕರು ಇಲ್ಲವೆಂದಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವಕಾಶಕ್ಕಾಗಿ ಮುಂಚೂಣಿಯಲ್ಲಿ ನಿಂತು ಕಾಯುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಗೆಲುವಿನಲ್ಲಿ ಅವರ ಪಾತ್ರವೂ ಇದೆ.ಅವರನ್ನು ಬಿಟ್ಟರೆ ಗೃಹ ಮಂತ್ರಿ ಡಾ. ಜಿ.ಪರಮೇಶ್ವರ್, ಬಿಜಾಪುರದ ಎಂ.ಬಿ.ಪಾಟೀಲ್, ಗದುಗಿನ ಅನುಭವಿ ಹಾಗೂ ಸಜ್ಜನ ರಾಜಕಾರಣಿ ಎಚ್.ಕೆ.ಪಾಟೀಲ, ಸೈದ್ಧಾಂತಿಕವಾಗಿ ಸಿದ್ದರಾಮಯ್ಯನವರಷ್ಟೇ ಗಟ್ಟಿಯಾಗಿರುವ ಸತೀಶ್ ಜಾರಕಿಹೊಳಿ,ಕೃಷ್ಣ ಬೈರೇಗೌಡ, ಮಹದೇವಪ್ಪ ,ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೀಗೆ ಇನ್ನೂ ಅನೇಕರು ಇದ್ದಾರೆ. ಆದರೂ ಎಲ್ಲ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಎಲ್ಲ ಸಮುದಾಯಗಳ ಜನಸಾಮಾನ್ಯರು ತುಂಬಾ ಮೆಚ್ಚಿ ಕೊಳ್ಳುವ ನಾಯಕರೆಂದರೆ ಸಿದ್ದರಾಮಯ್ಯ. ಅವರಿಗೆ ಯಾರೂ ಎದುರಾಳಿಗಳಿಲ್ಲ. ಇನ್ನು ಬಿಜೆಪಿ ನಾಯಕರ ಒಳ ಕಿತ್ತಾಟದಿಂದ ಆ ಪಕ್ಷ ತತ್ತರಿಸಿ ಹೋಗಿದೆ.
ಸಿದ್ದರಾಮಯ್ಯನವರು ಮಾತ್ರವಲ್ಲ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ಸಮುದಾಯಗಳಿಗೆ ಸೇರಿದ ಹಾಗೂ ಕೋಮುವಾದವನ್ನು ನಿರ್ದಾಕ್ಷಿಣ್ಯವಾಗಿ ವಿರೋಧಿಸುವ ಯಾರೂ ಅಧಿಕಾರಕ್ಕೆ ಬರಬಾರದು, ಮುಖ್ಯಮಂತ್ರಿಯಾಗಬಾರದು ಎಂಬುದು ಮನುವಾದಿಗಳ ಮಸಲತ್ತು. ಅಂತಲೇ ಸಿದ್ದರಾಮಯ್ಯ ಮತ್ತು ಖರ್ಗೆಯವರನ್ನು ವಿರೋಧಿಸಿದಂತೆ ಸೈದ್ಧಾಂತಿಕವಾಗಿ ಇಡೀ ಬಸವ ಪರಂಪರೆಯನ್ನೇ ಮುಗಿಸಲು ಹೊರಟಿದ್ದಾರೆ.ಅದಕ್ಕಾಗಿ ‘ವಚನ ಸಾಹಿತ್ಯವನ್ನು ಮುಗಿಸಲು ವಚನ ದರ್ಶನ’ ಎಂಬ ಪುಸ್ತಕವನ್ನು ಎಲ್ಲೆಡೆ ಹಂಚಿ ವಿಚಾರಗೋಷ್ಠಿಗಳನ್ನು ಮಾಡುತ್ತಿದ್ದಾರೆ. ಹನ್ನೆರಡನೇ ಶತಮಾನದಲ್ಲೇ ಜನಿವಾರವನ್ನು ಕಿತ್ತು ಬಿಸಾಡಿದ ಬಸವಣ್ಣನವರಿಗೆ ಈಗ ಜನಿವಾರ ಹಾಕಲು ಹೊರಟಿದ್ದಾರೆ.
ಬಹುತ್ವ ಭಾರತದ ದಿಕ್ಕನ್ನು ತಪ್ಪಿಸಲು ಮನುವಾದಿ ಫ್ಯಾಶಿಸ್ಟ್ ಶಕ್ತಿಗಳು ಮಸಲತ್ತು ನಡೆಸಿರುವ ಇಂದಿನ ಸಂಕಷ್ಟದ ದಿನಗಳಲ್ಲಿ ಎಲ್ಲ ಜನ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯ ಬಲ್ಲ, ಕೋಮುವಾದವನ್ನು ಧೈರ್ಯದಿಂದ ಎದುರಿಸುವ ನಿಷ್ಠುರ ವ್ಯಕ್ತಿತ್ವ ಹೊಂದಿರುವ ಸಿದ್ದರಾಮಯ್ಯನವರು ಇನ್ನಷ್ಟು ದಿನ ಮಾತ್ರವಲ್ಲ ಇನ್ನಷ್ಟು ವರ್ಷ ಸಾರ್ವಜನಿಕ ಜೀವನದಲ್ಲಿ ಇರಬೇಕು. ಮುಖ್ಯಮಂತ್ರಿಯಾಗಿ ಈ ರಾಜ್ಯವನ್ನು ಮುನ್ನಡೆಸಬೇಕು. ಮುಂದಿನ ನಾಯಕತ್ವಕ್ಕೆ ಕೃಷ್ಣ ಬೈರೇಗೌಡ , ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್‌ರಂಥವರನ್ನು ತಯಾರು ಮಾಡ ಬೇಕೆಂಬುದು ಬಹುತೇಕ ಜನಸಾಮಾನ್ಯರ ಆಶಯವಾಗಿದೆ.