ವಿಶ್ವಮಾನ್ಯ ಧೀಮಂತ ರಾಜಕಾರಣಿ ಡಾ. ಮನಮೋಹನ ಸಿಂಗ್

Update: 2024-12-29 04:06 GMT
Editor : Ismail | Byline : ಟಿ.ಆರ್. ಭಟ್

ಮೂಲತಃ ರಾಜಕಾರಣಿಯಾಗಿರದಿದ್ದರೂ ಪ್ರಜಾತಂತ್ರದ ಮೌಲ್ಯಗಳಲ್ಲಿ ಮನಮೋಹನ್ ಸಿಂಗ್ ಅವರ ನಂಬಿಕೆ ಗಾಢವಾಗಿತ್ತು. ಸಂಸತ್ತಿನ ಚರ್ಚೆಗಳಲ್ಲಿ ಭಾಗವಹಿಸುವಾಗ, ವಸ್ತುನಿಷ್ಠರಾಗಿ ಸರಕಾರವನ್ನು ಸಮರ್ಥಿಸುತ್ತಿದ್ದರು. ಸಂಸತ್ತಿನಲ್ಲಿ ಅಥವಾ ಅದರ ಹೊರಗೆ ಯಾರನ್ನೂ ವೈಯಕ್ತಿಕವಾಗಿ ನಿಂದಿಸದೆ, ತೀವ್ರವಾದ ಭಿನ್ನಾಭಿಪ್ರಾಯಗಳಿದ್ದರೂ ಮಿತಭಾಷಿಯಾಗಿ, ನಿರಾಡಂಬರದಿಂದ, ಸಜ್ಜನಿಕೆ ಮತ್ತು ನಿಸ್ಪಹತೆಯಿಂದ ತನ್ನ ಜವಾಬ್ದಾರಿಯನ್ನು ನಿಭಾಯಿಸಿ ಪ್ರಧಾನ ಮಂತ್ರಿಯ ಸ್ಥಾನದ ಘನತೆಯನ್ನು ಹೆಚ್ಚಿಸಿದವರು ಡಾ. ಮನಮೋಹನ್ ಸಿಂಗ್.

ಜವಾಹರಲಾಲ್ ನೆಹರೂ ನಂತರ ಬಂದ ಅತ್ಯಂತ ಶ್ರೇಷ್ಠ ಪ್ರಧಾನಿ ಎಂಬ ಕೀರ್ತಿಗೆ ಅರ್ಹರಾದವರು ಡಾ.ಮನಮೋಹನ್ ಸಿಂಗ್. ನೆಹರೂ ಅವರ ರಾಜಕೀಯ ಸಿದ್ಧಾಂತ ಮತ್ತು ಆರ್ಥಿಕ ಚಿಂತನೆಯ ವಾತಾವರಣದಲ್ಲಿಯೇ ಬೆಳೆದು ಅರ್ಥಶಾಸ್ತ್ರದಲ್ಲಿ ವಿಶ್ವಮಾನ್ಯರಾಗಿ, ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್, ಯೋಜನಾ ಆಯೋಗದ ಸಾರಥಿಯಾಗಿ 1980ರ ದಶಕದ ಆಸುಪಾಸಿನಲ್ಲಿ ಆರ್ಥಿಕ ರಂಗದಲ್ಲಿ ಚಿರಪರಿಚಿತರಾಗಿದ್ದ ಅವರು ರಾಜಕೀಯದಿಂದ ಹೊರಗೇ ಇದ್ದರು. 1991ರಲ್ಲಿ ಆಶ್ಚರ್ಯಕರ ರೀತಿಯಲ್ಲಿ ಅರ್ಥಸಚಿವರಾದರು. ಮುಂದೆ ಐದು ವರ್ಷ ಅವರು ಸಲ್ಲಿಸಿದ ಸೇವೆಯನ್ನು ದೇಶ ಮತ್ತೆ ಸ್ಮರಿಸಿ ಅವರಿಗೆ ಇನ್ನೂ ಘನವಾದ ಪ್ರಧಾನ ಮಂತ್ರಿಯ ಜವಾಬ್ದಾರಿಯನ್ನು 2004ರಲ್ಲಿ ನೀಡಿತು. ಮುಂದಿನ ಒಂದು ದಶಕದಲ್ಲಿ ನೆಹರೂ ಅವರ ಸಿದ್ಧಾಂತಗಳಿಂದ ಭಿನ್ನವಾದ ದಾರಿಯನ್ನು ತೋರಿಸಿ ಆರ್ಥಿಕವಾಗಿ ದುರ್ಬಲವಾಗಿದ್ದ ದೇಶವನ್ನು ಮತ್ತೆ ಬಲಿಷ್ಠಗೊಳಿಸಿದ ಹೆಗ್ಗಳಿಕೆ ಮನಮೋಹನ್ ಸಿಂಗ್‌ರದ್ದು.

1980-90ರ ಎರಡು ದಶಕಗಳು ಅಮೆರಿಕದ ರೇಗನ್ ಮತ್ತು ಇಂಗ್ಲೆಂಡಿನ ಥ್ಯಾಚರ್ ಅವರ ನೇತೃತ್ವದಲ್ಲಿ ಆರಂಭವಾದ ಜಾಗತೀಕರಣದ ಗಾಳಿ ವಿಶ್ವದಾದ್ಯಂತ ಬೀಸುತ್ತಿದ್ದ ಕಾಲಘಟ್ಟ. ಯಾವುದೇ ರಾಷ್ಟ್ರವು ಬೇರೆ ದೇಶಗಳ ಸಂಪರ್ಕ ಮತ್ತು ವ್ಯಾಪಾರ ವ್ಯವಹಾರಗಳಿಂದ ಸಂಪೂರ್ಣವಾಗಿ ಮುಕ್ತವಾಗಿರುತ್ತೇವೆಂಬ ಕಾಲ ಕಳೆದಿತ್ತು. ನಿರ್ಬಂಧರಹಿತ ಅಂತರ್‌ರಾಷ್ಟ್ರೀಯ ವ್ಯಾಪಾರ ಮತ್ತು ಬಂಡವಾಳದ ಹೂಡಿಕೆ, ಅರ್ಥವ್ಯವಸ್ಥೆಯಲ್ಲಿ ಸರಕಾರಗಳ ಕನಿಷ್ಠ ಹಸ್ತಕ್ಷೇಪ, ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಅನುಕೂಲವಾದ ವಾತಾವರಣದ ಸೃಷ್ಟಿ-ಮುಂತಾದ ಬದಲಾವಣೆಗಳು ವಿಶ್ವದಾದ್ಯಂತ ಸಂಭವಿಸುತ್ತಿದ್ದ ಸಂದರ್ಭ - ಭಾರತವೂ ಈ ಬದಲಾವಣೆಯ ಗಾಳಿಯನ್ನು ಎದುರಿಸಬೇಕಿತ್ತು.

ಭಾರತವು 1991ರಲ್ಲಿ ತೀವ್ರವಾದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ ಸಂದರ್ಭದಲ್ಲಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಪಿ.ವಿ. ನರಸಿಂಹರಾಯರ ಆಶ್ಚರ್ಯಕರ ಆಯ್ಕೆಯೇ ಮನಮೋಹನ್ ಸಿಂಗ್. ಅರ್ಥಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹೊಸ್ತಿಲಿನಲ್ಲಿಯೇ ಅವರ ಮುಂದಿದ್ದ ದೊಡ್ಡ ಸವಾಲು ಹಳಿತಪ್ಪಿದ್ದ ದೇಶದ ಅರ್ಥವ್ಯವಸ್ಥೆಯನ್ನು ಮತ್ತೆ ಹಳಿಗೇರಿಸಿ ಅದರ ಪ್ರಗತಿಗೆ ಹೊಸ ದಾರಿಗಳನ್ನು ಹುಡುಕುವುದರಲ್ಲಿತ್ತು. ಆರ್ಥಿಕ ತಜ್ಞರಾಗಿ ಗಳಿಸಿದ ಅಗಾಧವಾದ ಪಾಂಡಿತ್ಯ, ಹಣಕಾಸು ಸಚಿವಾಲಯ ಮತ್ತು ಆರ್‌ಬಿಐಗಳನ್ನು ಮುನ್ನಡೆಸಿದ ಅನುಭವಗಳ ಹಿನ್ನೆಲೆ ಮತ್ತು ರಾಜಕೀಯೇತರ ವ್ಯಕ್ತಿತ್ವ-ಇವು ಅವರ ಆಸ್ತಿಗಳಾಗಿದ್ದವು. ಇದೇ ಕಾರಣಕ್ಕಾಗಿಯೇ ನರಸಿಂಹರಾಯರು ಸಿಂಗ್‌ರಿಗೆ ಅತ್ಯಂತ ಕ್ಲಿಷ್ಟಕರವಾದ ಜವಾಬ್ದಾರಿಯನ್ನು ಕೊಟ್ಟರು. ರಾಯರ ಸರಕಾರಕ್ಕೆ ಪೂರ್ಣಬಹುಮತವೂ ಇರಲಿಲ್ಲ ಎಂಬುದೂ ಇಲ್ಲಿ ಗಮನಾರ್ಹವಾಗುತ್ತದೆ.

ಆದರೆ ತಮ್ಮ ಅನುಭವ, ದೂರದೃಷ್ಟಿ ಮತ್ತು ವ್ಯಾವಹಾರಿಕ ಮನೋಧರ್ಮಗಳಿಂದ ದೇಶದಲ್ಲಿ ಹೊಸ ಆರ್ಥಿಕ ನೀತಿಗೆ ನಾಂದಿಯನ್ನು ಮನಮೋಹನ್ ಸಿಂಗ್ ಹಾಡಿದರು. ಕೈಗಾರಿಕೆ, ವಾಣಿಜ್ಯ, ವಿದೇಶ ವಿನಿಮಯ ಮತ್ತು ವಿದೇಶೀ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಕ್ರಾಂತಿಕಾರಿ ಬದಲಾವಣೆಗಳು, ಸರಕಾರಿ ಸಂಸ್ಥೆಗಳ ಖಾಸಗೀಕರಣ, ಹಣಕಾಸು ರಂಗದಲ್ಲಿ ಮೂಲಭೂತ ಸುಧಾರಣೆಗಳು ಮತ್ತು ಹೊಸ ಸಂಸ್ಥೆಗಳ ಆರಂಭಕ್ಕೆ ಸೂಕ್ತವಾದ ನೀತಿ-ಮುಂತಾದ ಕಾರ್ಯಕ್ರಮಗಳ ಮೂಲಕ ಅವರು ದೇಶದ ಅರ್ಥವ್ಯವಸ್ಥೆಗೆ ಹೊಸ ರೂಪವನ್ನು ನೀಡಿದರು.

ಮನಮೋಹನ್ ಸಿಂಗ್‌ರ ಆರ್ಥಿಕ ನೀತಿಯ ಬಗ್ಗೆ ತೀವ್ರವಾದ ಭಿನ್ನಾಭಿಪ್ರಾಯಗಳು ಇದ್ದವು. ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ, ಬಡತನ, ನಿರುದ್ಯೋಗ, ಅತೃಪ್ತಿಕರವಾದ ಸಾಮಾಜಿಕ ಆರೋಗ್ಯ ಮತ್ತು ಮೂಲಶಿಕ್ಷಣ ರಂಗ-ಇವುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ದೇಶವನ್ನು ಕಾಡುತ್ತಿದ್ದವು. ಇವುಗಳನ್ನು ಪರಿಹರಿಸುವಲ್ಲಿ ಸರಕಾರವೇ ನಿರ್ಣಾಯಕ ಪಾತ್ರವನ್ನು ವಹಿಸಬೇಕೆಂಬುದು ಅಂದು (ಇಂದಿಗೂ) ಪ್ರಚಲಿತವಾದ ಅಭಿಪ್ರಾಯ. ಅದಕ್ಕೆ ಸೈದ್ಧಾಂತಿಕ ನೆಲೆಯೂ ಇತ್ತು. ಇದಕ್ಕೆ ವಿರುದ್ಧವಾದ ಮನಮೋಹನ್ ಸಿಂಗ್‌ರ ಹೊಸ ನೀತಿಯ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚಿಂತನೆ, ಪ್ರತಿಭಟನೆ, ಸಮಾಲೋಚನೆಗಳು ನಡೆಯುತ್ತಲೇ ಇದ್ದವು. ಉದಾರೀಕರಣದ ಹೊಸ್ತಿಲಲ್ಲಿ 1992-93ರಲ್ಲಿ, ಹಣಕಾಸು ರಂಗದಲ್ಲಿ ಬಹುದೊಡ್ಡ ವಂಚನೆಯೂ ನಡೆಯಿತು. ಅದಾವುದೂ ಅವರನ್ನು ಧೃತಿಗೆಡಿಸಲಿಲ್ಲ. ನರಸಿಂಹರಾಯರಿಗೂ ಸಿಂಗ್‌ರ ಸಾಮರ್ಥ್ಯದ ಮೇಲೆ ಅಚಲವಾದ ವಿಶ್ವಾಸವಿತ್ತು. ಹೀಗಾಗಿ 1991-96ರ ತಮ್ಮ ಕಾಲಾವಧಿಯಲ್ಲಿ ಓರ್ವ ಶ್ರೇಷ್ಠ ಹಣಕಾಸು ಸಚಿವರೆಂಬ ಕೀರ್ತಿಗೂ ಪಾತ್ರರಾದರು. ದೇಶದ ಅರ್ಥವ್ಯವಸ್ಥೆಯು ಕೇವಲ ಐದು ವರ್ಷಗಳಲ್ಲಿ ಹಳಿಗೇರಿತು ಮಾತ್ರವಲ್ಲ ಪ್ರಗತಿಯತ್ತ ಸಾಗಿತು.

ಅರ್ಥಸಚಿವರಾಗಿ ಅವರು ಮಾಡಿದ ಸಾಧನೆಯೇ ಅವರನ್ನು 2004ರಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಮಾಡುವಲ್ಲಿ ಮೂಲಕಾರಣವಾಗಿತ್ತು. ಸ್ಪಷ್ಟ ಬಹುಮತವಿಲ್ಲದ ಸಮ್ಮಿಶ್ರ ಸರಕಾರವನ್ನು ರಚಿಸಬೇಕಾಗಿ ಬಂದ ಕಾಂಗ್ರೆಸ್ ಪಕ್ಷಕ್ಕೆ ಸರ್ವರಿಗೂ ಒಪ್ಪಿಗೆಯಾಗಬಲ್ಲ ನೇತಾರರೊಬ್ಬರು ಬೇಕಾಗಿತ್ತು. ರಾಜಕೀಯೇತರ ನಾಯಕರು ಹೆಚ್ಚು ಸ್ವೀಕಾರಾರ್ಹರೆಂದು ಮನಗಂಡ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಂಸದೀಯ ಪಕ್ಷದ ನಾಯಕತ್ವವನ್ನು ಮನಮೋಹನ್ ಸಿಂಗ್‌ರ ಪರವಾಗಿ ಬಿಟ್ಟುಕೊಟ್ಟು ಅವರನ್ನು ಪ್ರಧಾನಿಯಾಗುವಂತೆ ಒಪ್ಪಿಸಿದರು. ಅವರ ನಾಯಕತ್ವದ ಯಶಸ್ಸಿನಿಂದಾಗಿ 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಸರಕಾರ ಮರಳಿ ಅಧಿಕಾರಕ್ಕೆ ಬಂತು.

ಈ ಹತ್ತು ವರ್ಷಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ದೇಶವು ಹಿಂದಿನ ದಶಕಗಳ ದಾಖಲೆಯನ್ನು ಮೀರಿ ಪ್ರಗತಿ ಸಾಧಿಸಿತು. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮನಮೋಹನ್ ಸಿಂಗ್‌ರ ವ್ಯಕ್ತಿತ್ವ ಮತ್ತು ಅವರ ಸಾಧನೆಯಿಂದ ಗೌರವ ಸಿಕ್ಕಿತು. ಅಮೆರಿಕದ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಮತ್ತು ಬರಾಕ್ ಒಬಾಮ, ಇಂಗ್ಲೆಂಡಿನ ಪ್ರಧಾನಿ ಟೋನಿ ಬ್ಲೇರ್, ಜರ್ಮನಿಯ ಅಧ್ಯಕ್ಷೆ ಅಂಗೆಲ ಮರ್ಕೆಲ್ ಮುಂತಾದವರಿಗೆ ಭಾರತದ ಪ್ರಧಾನಿಯವರ ಮೇಲೆ ಅಪೂರ್ವವಾದ ಗೌರವವಿತ್ತು. ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಮಲೇಶ್ಯ ಮತ್ತು ಶ್ರೀಲಂಕಾದೊಡನೆ ಭಾರತದ ಸಂಬಂಧವನ್ನು ಸುಧಾರಿಸಿ ಸಹಬಾಳ್ವೆಗೆ ಶ್ರಮಿಸಿದವರು ಅವರು. ಇದೇ ಅವಧಿಯಲ್ಲಿ ಭಾರತದ ವಿದೇಶ ನೀತಿಯು ಮತ್ತೊಮ್ಮೆ ಧನಾತ್ಮಕವಾಗಿ ಬೆಳೆಯಿತು.

ಮನಮೋಹನ್ ಸಿಂಗ್‌ರ ಒಂದು ದಶಕದ (2004-14)ರ ಕಾಲಾವಧಿಯು ಭಾರತದ ಚರಿತ್ರೆಯಲ್ಲಿ ಬಹುಮುಖ್ಯವಾದ ಕಾಲಘಟ್ಟ. ಜನಪರವಾದ ಹೊಸ ಕಾನೂನುಗಳು (ಮುಖ್ಯವಾಗಿ ಶಿಕ್ಷಣದ ಹಕ್ಕು, ಉದ್ಯೋಗ ಖಾತರಿ, ಮಾಹಿತಿ ಹಕ್ಕು, ಆಹಾರಭದ್ರತೆ, ಭೂ ಸ್ವಾಧೀನತೆಗೆ ಸಂಬಂಧಿಸಿದಂತೆ), ಯೋಜನೆಗಳು (ಆರೋಗ್ಯ, ಕನಿಷ್ಠ ಠೇವಣಿಯ ಬ್ಯಾಂಕು ಖಾತೆಗಳ ಆರಂಭ, ನಗರಾಭಿವೃದ್ಧಿ), ಆಡಳಿತೆಯ ಪಾರದರ್ಶಕತೆ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳನ್ನು ಗೌರವಿಸುವ ಮೂಲಕ ತಾವು ರಾಜಕಾರಣಿಗಿಂತಲೂ ಹೆಚ್ಚಾಗಿ ದೂರದೃಷ್ಟಿಯುಳ್ಳ ಅಸಾಮಾನ್ಯ ಮುತ್ಸದ್ದಿ ಎಂದು ಸಾಬೀತು ಪಡಿಸಿದರು. ಮಿತಭಾಷಿಯಾಗಿದ್ದರೂ ಸಂಸತ್ತಿನಲ್ಲಿ ಚರ್ಚೆಗಳಲ್ಲಿ ಸ್ವತಃ ಭಾಗವಹಿಸುತ್ತಿದ್ದರು, ಪತ್ರಿಕಾ ಸಮ್ಮೇಳನಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು, ಮಾಧ್ಯಮಗಳಿಗೆ ಸಂದರ್ಶನವನ್ನು ನೀಡುತ್ತಿದ್ದರು.

ಇಂದಿರಾ ಗಾಂಧಿಯ ಕಾಲದ ಕಾಂಗ್ರೆಸ್ ಸರಕಾರ ಅಮೃತಸರದ ಸ್ವರ್ಣದೇಗುಲದಲ್ಲಿ ಸೇನೆಯನ್ನು ಉಪಯೋಗಿಸಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕವಾಗಿ ಸಿಖ್ ಸಮುದಾಯದ ಕ್ಷಮೆಯನ್ನು ಕೋರುವ ಹೃದಯವೈಶಾಲ್ಯ ಮನಮೋಹನ್ ಸಿಂಗ್‌ರಿಗೆ ಇತ್ತು. ಅದೇ ರೀತಿ ದೇಶದ ರಾಜಧಾನಿಯತ್ತ ವಿಭಿನ್ನ ರಾಜ್ಯಗಳಿಂದ ರೈತರ ಪ್ರತಿಭಟನೆಯ ಜನಜಾತ್ರೆ ನಡೆಯುತ್ತಿದ್ದಾಗ ಬಲಪ್ರಯೋಗದ ಬದಲು ತಮ್ಮ ಮಂತ್ರಿಗಳಲ್ಲೊಬ್ಬರಾದ ಜೈರಾಂ ರಮೇಶ್‌ರ ನೇತೃತ್ವದಲ್ಲಿ ಪ್ರತಿಭಟನಾ ನಿರತ ರೈತರ ನಾಯಕರನ್ನು ಗ್ವಾಲಿಯರ್‌ನಲ್ಲಿಯೇ ಭೇಟಿ ಮಾಡಿಸಿ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅವರು ಮುಂದಾಗಿದ್ದರು.

ಮನಮೋಹನ್ ಸಿಂಗ್ ಅತ್ಯಂತ ಸರಳ ಮತ್ತು ಸಜ್ಜನ ನಾಯಕರು. ಪೋಷಾಕಿನ ಮತ್ತು ಮಾತಿನ ಆಡಂಬರಗಳಿಂದ ಸದಾ ದೂರವಿರುತ್ತಿದ್ದವರು. ತನ್ನ ಘನಪಾಂಡಿತ್ಯವನ್ನು ತೋರಿಸುವ ಜಾಯಮಾನ ಎಂದೂ ಅವರಿಗಿರಲಿಲ್ಲ. ಅಗತ್ಯಬಿದ್ದಾಗ ತಮ್ಮ ಅನುಭವ ಮತ್ತು ಜ್ಞಾನದ ಆಧಾರದಲ್ಲಿ ತಮ್ಮ ಮಾತಿನ ಮೌಲ್ಯವನ್ನು ಹೆಚ್ಚಿಸುತ್ತಿದ್ದರು. 2016ರ ನೋಟು ರದ್ದತಿಯ ಕುರಿತು ಅವರು ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಸರಕಾರದ ನಿರ್ಧಾರದಿಂದಾಗಿ ದೇಶದ ಅರ್ಥವ್ಯವಸ್ಥೆಗೆ ಮಾರಕ ಹೊಡೆತ ಬೀಳಲಿದೆ ಹಾಗೂ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ)ದಲ್ಲಿ ಶೇ.2ರಷ್ಟು ಕಡಿತವಾಗಲಿದೆ ಎಂದು ಕರಾರುವಾಕ್ಕಾಗಿ ಭವಿಷ್ಯವನ್ನು ನುಡಿದಿದ್ದರು.

ಅವರ ಸಜ್ಜನಿಕೆಯ ಬಗೆಗೆ ಎರಡು ಘಟನೆಗಳು ನನಗೆ ನೆನಪಾಗುತ್ತಿವೆ. 1993ರಲ್ಲಿ ಅಂದಿನ ಕಾರ್ಪೊರೇಶನ್ ಬ್ಯಾಂಕಿನ ಒಂದು ಪ್ರಮುಖ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದು ಭಾಗವಹಿಸಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರಾವಳಿಯ ಮಹತ್ತರವಾದ ಕೊಡುಗೆಯನ್ನು ಶ್ಲಾಘಿಸಿದ್ದರು. ಅಧಿಕಾರಿ ಮತ್ತು ನೌಕರರ ಸಂಘಗಳ ಪದಾಧಿಕಾರಿಗಳ ಪರಿಚಯ ಮಾಡಿಸಿದಾಗಲೂ ಯಾವುದೇ ಘನಸ್ತಿಕೆ ಇಲ್ಲದೆ ಮಾತನಾಡಿಸಿದ್ದನ್ನು ಮರೆಯಲು ಸಾಧ್ಯವಿಲ್ಲ. ಇನ್ನೊಂದು ಸಂದರ್ಭ ಹೀಗಿದೆ: ಕಾಂಗ್ರೆಸ್ ಪಕ್ಷವು ಅಧಿಕಾರ ಕಳಕೊಂಡು ಅವರು ವಿರೋಧಪಕ್ಷದ ನಾಯಕರಾಗಿದ್ದಾಗ ಅಧಿಕಾರಿ ಸಂಘದ ರಾಷ್ಟ್ರೀಯ ಸಮ್ಮೇಳನಕ್ಕೆ ಅವರನ್ನು ನಾನು ಮತ್ತು ನಮ್ಮ ಸಹೋದ್ಯೋಗಿಗಳು ಭೇಟಿ ಮಾಡಿ ಆಮಂತ್ರಿಸಿದಾಗ ಅವರು ಹೇಳಿದ ಮಾತು ಹೀಗಿತ್ತು: ‘‘ನಿಮ್ಮ ಬ್ಯಾಂಕಿನ ಕಾರ್ಯಕ್ರಮಕ್ಕೆ ನನಗೆ ಬರಲು ಸಂತೋಷವೇ; ಆದರೆ ಕೊನೆಯ ಗಳಿಗೆಯಲ್ಲಿ ರಾಜಕೀಯ ಬೆಳವಣಿಗೆಗಳಾಗಿ ನಾನು ದಿಲ್ಲಿಯಲ್ಲೇ ಉಳಿಯಬೇಕಾಗಿ ಬಂದರೆ ನಿಮ್ಮ ಕಾರ್ಯಕ್ರಮಕ್ಕೆ ಅಡಚಣೆ ಆಗಬಹುದು. ವಿರೋಧಪಕ್ಷದ ನಾಯಕನಾಗಿ ಈ ತರದ ಅನಿಶ್ಚಿತತೆ ಇದೆ’’.

ಅವರ ಆಡಳಿತಾವಧಿಯಲ್ಲಿ ವೈಫಲ್ಯಗಳೂ ಇದ್ದವು. ಎರಡನೆಯ ಅವಧಿಯಲ್ಲಿ ಹೆಚ್ಚುತ್ತಿದ್ದ ಭ್ರಷ್ಟಾಚಾರ, ಬೆಲೆ ಏರಿಕೆ, ಕುಸಿಯುತ್ತಿರುವ ರೂಪಾಯಿಯ ಮೌಲ್ಯ, ಹೆಚ್ಚುತ್ತಿರುವ ನಿರುದ್ಯೋಗ ಮುಂತಾದ ಸಮಸ್ಯೆಗಳು ಮತದಾರರಲ್ಲಿ ಹತಾಶೆಯನ್ನು ಉಂಟುಮಾಡುತ್ತಿದ್ದವು. ಅವರ ಬಗ್ಗೆ 2014ರ ನಂತರ ಅನೇಕ ತರದ ಆಪಾದನೆಗಳನ್ನು ಹಾಗೂ ಕೆಲವೊಮ್ಮೆ ತೀರಾ ಕೀಳು ಮಟ್ಟದ ಶಬ್ದಗಳನ್ನು ಉಪಯೋಗಿಸಿ ಟೀಕೆಯನ್ನು ಮಾಡಲಾಗಿತ್ತು. ಆದರೆ ಅವುಗಳಿಂದ ಅವರು ವಿಚಲಿತರಾಗಲಿಲ್ಲ, ಮಾತ್ರವಲ್ಲ ‘‘ನಾನು ಏನು ಮಾಡಿದ್ದೇನೆ ಎಂಬುದರ ಬಗ್ಗೆ ಚರಿತ್ರೆಯೇ ದಾಖಲಿಸಲಿದೆ’’ ಎಂದು ಮಾರುತ್ತರ ನೀಡಿದ್ದರು.

ಮೂಲತಃ ರಾಜಕಾರಣಿಯಾಗಿರದಿದ್ದರೂ ಪ್ರಜಾತಂತ್ರದ ಮೌಲ್ಯಗಳಲ್ಲಿ ಅವರ ನಂಬಿಕೆ ಗಾಢವಾಗಿತ್ತು. ಸಂಸತ್ತಿನ ಚರ್ಚೆಗಳಲ್ಲಿ ಭಾಗವಹಿಸುವಾಗ, ವಸ್ತುನಿಷ್ಠರಾಗಿ ಸರಕಾರವನ್ನು ಸಮರ್ಥಿಸುತ್ತಿದ್ದರು. ಸಂಸತ್ತಿನಲ್ಲಿ ಅಥವಾ ಅದರ ಹೊರಗೆ ಯಾರನ್ನೂ ವೈಯಕ್ತಿಕವಾಗಿ ನಿಂದಿಸದೆ, ತೀವ್ರವಾದ ಭಿನ್ನಾಭಿಪ್ರಾಯಗಳಿದ್ದರೂ ಮಿತಭಾಷಿಯಾಗಿ, ನಿರಾಡಂಬರದಿಂದ, ಸಜ್ಜನಿಕೆ ಮತ್ತು ನಿಸ್ಪಹತೆಯಿಂದ ತನ್ನ ಜವಾಬ್ದಾರಿಯನ್ನು ನಿಭಾಯಿಸಿ ಪ್ರಧಾನ ಮಂತ್ರಿಯ ಸ್ಥಾನದ ಘನತೆಯನ್ನು ಹೆಚ್ಚಿಸಿದವರು ಡಾ. ಮನಮೋಹನ್ ಸಿಂಗ್.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಟಿ.ಆರ್. ಭಟ್

contributor

Similar News