ಮಾಡಿದ ಪಾಪಕ್ಕೆ ಮನವೇ ಸಾಕ್ಷಿ
ಸಿ.ಟಿ. ರವಿ ಆಡಬಾರದ್ದು ಆಡಿದ ಕಾರಣಕ್ಕೆ ನಂತರ ಆಗಬಾರದ ಘಟನೆಗಳು ಸಂಭವಿಸಿವೆ. ಸದನದಲ್ಲಿ ಸಿ.ಟಿ. ರವಿಯವರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಕಟುವಾದ ಪದಗಳಲ್ಲಿ ನಿಂದಿಸಿಲ್ಲ, ಬಹುತೇಕ ಕಾಂಗ್ರೆಸ್ ಸದಸ್ಯರು ಜಾಡಿಸಿದ್ದಾರೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ವ್ಯಕ್ತಪಡಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಭಿಮಾನಿ ಬಳಗ ಕೊತ ಕೊತ ಕುದಿಯುತ್ತಿತ್ತು. ಆದರೆ ಮಾರ್ಷಲ್‌ಗಳು, ಹೊರಗಡೆ ಜಮಾಯಿಸಿದ ಪೊಲೀಸರು ಸಿ.ಟಿ. ರವಿಯವರ ರಕ್ಷಣೆಗೆ ನಿಂತಿದ್ದರಿಂದ ಪ್ರತಿಕ್ರಿಯೆ ಸೃಷ್ಟಿಸುವ ಅನಾಹುತಗಳು ತಪ್ಪಿವೆ.
ಆಚಾರವಿಲ್ಲದ ನಾಲಿಗೆ
ನಿನ್ನ ನೀಚ ಬುದ್ಧಿ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಪುದಕೆ
ಚಾಚಿಕೊಂಡಿರುವಂಥ ನಾಲಿಗೆ..
-ಪುರಂದರದಾಸರು.
ಭಾರತೀಯ ಜನತಾ ಪಕ್ಷದವರಿಗೆ ಕರ್ಮ ಸಿದ್ಧಾಂತ ಮತ್ತು ಕ್ರಿಯೆಗೆ ಅಷ್ಟೇ ಬಲವಾದ ಪ್ರತಿಕ್ರಿಯೆ ಹೊರ ಹೊಮ್ಮುತ್ತದೆ ಎಂಬ ತತ್ವದಲ್ಲಿ ಅಪಾರ ನಂಬಿಕೆ. ಗುಜರಾತ್‌ನಲ್ಲಿ ಗೋಧ್ರಾ ನಂತರ ನಡೆದ ಗಲಭೆಗಳನ್ನು ಸ್ವತಃ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಕ್ರಿಯೆಗೆ ಪ್ರತಿಕ್ರಿಯೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗಿನ ಕೇಂದ್ರ ಗೃಹ ಸಚಿವರು ವಿಶ್ವ ಹಿಂದೂ ಪರಿಷತ್ತಿನ ದಾಂಧಲೆಗಳನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂಬ ತತ್ವದ ಆಧಾರದಲ್ಲೇ ಸಮರ್ಥಿಸಿಕೊಳ್ಳುತ್ತಾರೆ.
ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಬಹುತೇಕ ನಾಯಕರು ಬಿಜೆಪಿಯ ಅಂಗ ಸಂಸ್ಥೆಗಳ ಗಲಾಟೆಗಳನ್ನು ಎದುರಾಳಿಗಳ ಕ್ರಿಯೆಗೆ ತಮ್ಮವರು ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ ಎಂದೇ ಸಮರ್ಥಿಸುತ್ತಾ ಬಂದಿದ್ದಾರೆ.ಇತ್ತೀಚೆಗೆ ಮುಕ್ತಾಯಗೊಂಡ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ನಾಯಕರು ಕೇಂದ್ರ ಗೃಹ ಸಚಿವರ ಉಡಾಫೆಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದೇ ದೊಡ್ಡ ತಪ್ಪು...ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಈ ದೇಶದ ಶೋಷಿತರು ಗಣರಾಜ್ಯ ಅಸ್ತಿತ್ವಕ್ಕೆ ಬಂದಾಗಿನಿಂದ ಸ್ಮರಿಸುತ್ತಲೇ ಇದ್ದಾರೆ. ಯಾಕೆಂದರೆ ಅವರಿಗೆ ಸ್ವಾಭಿಮಾನದ ಬದುಕು ಪ್ರಾಪ್ತಿಯಾಗಿದ್ದೇ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ಕಾರಣಕ್ಕೆ. ಹಾಗೆ ನೋಡಿದರೆ ಬಿಜೆಪಿಯವರು ಅವರ ಹೆಸರನ್ನು ಸ್ಮರಿಸಲು ಶುರು ಮಾಡಿದ್ದು ಇತ್ತೀಚೆಗೆ, ಅದು ವೋಟ್ ಬ್ಯಾಂಕ್ ರಾಜಕಾರಣದ ಕಾರಣಕ್ಕೆ.
ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಮಾತಿನ ಭರಾಟೆಯಲ್ಲಿ ಅಪಮಾನ ಮಾಡಿದ್ದು ಸಂವೇದನಾಶೀಲರಾದ ಯಾರಿಗಾದರೂ ಅರ್ಥ ಆಗುತ್ತದೆ. ಬಿಜೆಪಿಯ ಅನೇಕರು ಅಮಿತ್ ಶಾ ಅವರು ಹಾಗೆ ಮಾತನಾಡಿದ್ದು ತಪ್ಪು ಅಂತ ನನ್ನೊಂದಿಗೆ ಆಫ್ ದಿ ರೆಕಾರ್ಡ್‌ನಲ್ಲಿ ಹೇಳಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಭಾರತದ ಸಂವಿಧಾನ ಮತ್ತು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ನಿಜವಾಗಿಯೂ ಗೌರವ ಇದ್ದಿದ್ದರೆ ಅಮಿತ್ ಶಾ ಕ್ಷಮೆ ಯಾಚಿಸುವಂತೆ ಮಾಡುತ್ತಿದ್ದರು. ಬದಲಿಗೆ ವಿಷಯಾಂತರ ಮಾಡಲು ರಾಹುಲ್ ಗಾಂಧಿ ಬಿಜೆಪಿ ಸಂಸದರನ್ನು ತಳ್ಳಿದರು, ಅವರಿಗೆ ಗಾಯ ಆಯಿತು ಎಂದು ಬ್ಯಾಂಡೇಜ್ ಕತೆ ಕಟ್ಟಿ ಭಂಡತನ ಮೆರೆದರು.
ಸಂಸತ್ತಿನಲ್ಲಿನ ಬ್ಯಾಂಡೇಜ್ ಕತೆಯಿಂದ ಸ್ಫೂರ್ತಿ ಪಡೆದ ಸಿ.ಟಿ. ರವಿ ಬಹು ದೊಡ್ಡ ಅನಾಹುತ ಮತ್ತು ಪ್ರಹಸನಕ್ಕೆ ಕಾರಣರಾದರು. ಸಿ.ಟಿ. ರವಿಯವರು ನಿಜವಾಗಿಯೂ ಸಂವೇದನಾಶೀಲ ಮತ್ತು ಆತ್ಮಸಾಕ್ಷಿಯುಳ್ಳ ರಾಜಕಾರಣಿಯಾಗಿದ್ದರೆ, ಸಂಸತ್ತಿನಲ್ಲಿ ಅಮಿತ್ ಶಾ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಆಡಿದ ಮಾತುಗಳನ್ನು ಮತ್ತೊಮ್ಮೆ ಕೇಳಿಸಿಕೊಳ್ಳಲಿ. ಆಗ ಸತ್ಯ ಮನವರಿಕೆಯಾಗುತ್ತದೆ. ರವಿ ಮಾತ್ರವಲ್ಲ ಕರ್ನಾಟಕ ಬಿಜೆಪಿಯ ಎಲ್ಲರೂ ಆತ್ಮಸಾಕ್ಷಿಯ ಮಾತು ಕೇಳಿಸಿಕೊಂಡಿದ್ದರೆ ಈ ಮಟ್ಟದ ಭಂಡತನ ಮೆರೆಯುತ್ತಿರಲಿಲ್ಲ. ಅಮಿತ್ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಹೋಗಿಯೇ ಸಿ.ಟಿ. ರವಿ ವಿಧಾನ ಪರಿಷತ್ತಿನಲ್ಲಿ ಅವಾಂತರ ಸೃಷ್ಟಿಸಿದ್ದು. ಆ ಮೂಲಕ ಸಿ.ಟಿ. ರವಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳ ಮೇಲೆ ವಿಶ್ವಾಸ ಹೊಂದಿಲ್ಲ ಎನ್ನುವುದು ಜನತೆಗೆ ತೋರಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಕೊಂಡು, ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬರಿಗೆ ಈ ಹಿಂದೆ ಮಾಡಿದ ಅಪಮಾನಗಳ ಕತೆಯೇ ಬಿಚ್ಚಿಟ್ಟಿದ್ದಾರೆ. ಬಿಜೆಪಿಯವರ ಕೆಟ್ಟ ಚಾಳಿಯೆಂದರೆ ವರ್ತಮಾನದಲ್ಲಿ ತಾವು ಮಾಡುವ ಘನಘೋರ ತಪ್ಪುಗಳನ್ನು ಮುಚ್ಚಿಕೊಳ್ಳಲು, ಇತಿಹಾಸದಲ್ಲಿನ ಕಾಂಗ್ರೆಸ್ ತಪ್ಪುಗಳನ್ನು ಎತ್ತಿ ತೋರಿಸುವುದು. ಆ ಮೂಲಕ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸುವುದು. ಕಾಂಗ್ರೆಸ್ ಮಾಡಿದ ತಪ್ಪುಗಳಿಗೆ ಈ ದೇಶದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ಮಾಡಿದ ತಪ್ಪುಗಳನ್ನೇ ಬಿಜೆಪಿಯವರು ಪುನರಾವರ್ತಿಸಿದರೆ ಮುಂದೆ ಜನತೆಯ ಕಠೋರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಮಿತ್ ಶಾ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ್ದು ಸರಿಯೋ ತಪ್ಪೋ ಅನ್ನುವುದು ಚರ್ಚೆ ಆಗಬೇಕೆ ವಿನಃ, ಕಾಂಗ್ರೆಸ್‌ನವರು ಹಿಂದೆ ತಪ್ಪು ಮಾಡಿದ್ದರು ಈಗ ಬಿಜೆಪಿಯವರು ತಪ್ಪು ಮಾಡುತ್ತಿದ್ದಾರೆ ಎಂದು ಹೇಳಿದರೆ ಪರೋಕ್ಷವಾಗಿ ತಪ್ಪನ್ನು ಒಪ್ಪಿಕೊಂಡಂತಾಗುತ್ತದೆ.
ಸಿ.ಟಿ. ರವಿ, ಅಮಿತ್ ಶಾ ತಪ್ಪನ್ನು ಸಮರ್ಥಿಸಿಕೊಂಡಿದ್ದೇ ಬಹುದೊಡ್ಡ ಅಪರಾಧ. ಮೇಲಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ‘ಡ್ರಗ್ಗಿಸ್ಟ್’ ಅಂತ ಕರೆದಿದ್ದು ಆ ಸಂದರ್ಭಕ್ಕೆ ಅನಗತ್ಯವಾಗಿತ್ತು. ರವಿಯವರ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ‘ಕೊಲೆಗಾರ’ ಅಂತ ಕರೆದಿದ್ದಾರೆ. ಸಿ.ಟಿ. ರವಿಯವರನ್ನು ಅವರು ಕೊಲೆಗಾರ ಎಂದು ಕರೆಯಲು ಸಣ್ಣ ಸಮರ್ಥನೆಯೂ ಇತ್ತು. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕೊಲೆಗಾರ ಮಾತಿಗೆ ಸಿ.ಟಿ. ರವಿ ಹೆಚ್ಚೆಂದರೆ, ಕೊಲೆಗಾರ್ತಿ ಎಂದು ಜರಿಯಲು ಅವಕಾಶ ಇತ್ತು. ಆ ಪದ ಬಳಸಲು ಒಂದು ಸಣ್ಣ ಸಮರ್ಥನೆ ದೊರೆಯುತ್ತಿತ್ತು. ಆದರೆ ಸಿ.ಟಿ. ರವಿ ವಿಧಾನ ಪರಿಷತ್ತಿನ ಚೌಕಟ್ಟು ಮತ್ತು ಕನ್ನಡ ಭಾಷೆಯ ಎಲ್ಲೆಕಟ್ಟುಗಳನ್ನು ಮೀರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ‘ಪ್ರಾಸ್ಟಿಟ್ಯೂಟ್’ ಎಂದು ಜರಿದು ಬಿಟ್ಟರು. ಪರಿಸ್ಥಿತಿ ವಿಕೋಪಕ್ಕೆ ಹೋದ ಮೇಲೆ ’’ನಾನು ಆ ಪದ ಬಳಸಿಲ್ಲ, ‘ಪ್ರಸ್ಟ್ರೇಟ್’ ಎಂಬ ಪದ ಬಳಸಿದ್ದೇನೆ. ಆ ಗದ್ದಲದಲ್ಲಿ ಅವರಿಗೆ ಹಾಗೆ ಕೇಳಿಸಿರಬೇಕು’’ ಎಂದು ಮಾತು ತಿರುಚಿದರು. ಅದು ಚಾಲಾಕಿ ಮಾತು ಎನ್ನುವುದು ಯಾರಿಗಾದರೂ ಅರ್ಥ ಆಗುತ್ತದೆ. ವಿಧಾನ ಪರಿಷತ್ತಿನ ಪ್ರತಿಪಕ್ಷದ ಸಾಲಿನಲ್ಲಿ ಸಿ.ಟಿ. ರವಿ ಸೇರಿದಂತೆ ಅನೇಕ ಬಿಜೆಪಿ ನಾಯಕರಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಕ್ರೋಶದಿಂದ ಸಿ.ಟಿ. ರವಿ ಅವರನ್ನೇ ಗುರಿ ಮಾಡಿ ‘‘ನಿನಗೆ ತಾಯಿ ಇಲ್ವೇನೋ, ತಂಗಿ ಇಲ್ವೇನೋ, ಹೆಂಡ್ತಿ ಇಲ್ವೇನೋ’’ ಅಂತ ಕಿರುಚಾಡಿದ್ದು ಯಾಕೆ?
ಬಿಜೆಪಿಯವರ ನಂಬಿಕೆಯಂತೆ, ಕೆಟ್ಟ ಕ್ರಿಯೆ ಇರದಿದ್ದರೆ ಕಠೋರ ಪ್ರತಿಕ್ರಿಯೆ ಹೊರ ಹೊಮ್ಮಲು ಸಾಧ್ಯವೇ?
ಸಿ.ಟಿ. ರವಿ ಆಡಬಾರದ್ದು ಆಡಿದ ಕಾರಣಕ್ಕೆ ನಂತರ ಆಗಬಾರದ ಘಟನೆಗಳು ಸಂಭವಿಸಿವೆ. ಸದನದಲ್ಲಿ ಸಿ.ಟಿ. ರವಿಯವರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಕಟುವಾದ ಪದಗಳಲ್ಲಿ ನಿಂದಿಸಿಲ್ಲ, ಬಹುತೇಕ ಕಾಂಗ್ರೆಸ್ ಸದಸ್ಯರು ಜಾಡಿಸಿದ್ದಾರೆ, ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ವ್ಯಕ್ತಪಡಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಭಿಮಾನಿ ಬಳಗ ಕೊತ ಕೊತ ಕುದಿಯುತ್ತಿತ್ತು. ಆದರೆ ಮಾರ್ಷಲ್‌ಗಳು, ಹೊರಗಡೆ ಜಮಾಯಿಸಿದ ಪೊಲೀಸರು ಸಿ.ಟಿ. ರವಿಯವರ ರಕ್ಷಣೆಗೆ ನಿಂತಿದ್ದರಿಂದ ಪ್ರತಿಕ್ರಿಯೆ ಸೃಷ್ಟಿಸುವ ಅನಾಹುತಗಳು ತಪ್ಪಿವೆ. ಸಿ.ಟಿ. ರವಿ ಪೊಲೀಸರಿಗೆ, ಮಾರ್ಷಲ್ ತಂಡಕ್ಕೆ ಋಣಿಯಾಗಿರಬೇಕು.
ಸಿ.ಟಿ. ರವಿ ಆ ಕೆಟ್ಟ ಪದ ಬಳಸಿದ್ದಾರೆ ಎನ್ನುವುದಕ್ಕೆ ಬೇರಾವ ಸಾಕ್ಷಿ ಬೇಕಿಲ್ಲ. ಅಲ್ಲಿ ವ್ಯಕ್ತವಾದ ಉಗ್ರ ಸ್ವರೂಪದ ಕೊತ ಕೊತ ಕುದಿಯುವಿಕೆಯೇ ರವಿಯವರ ಕೆಟ್ಟ ಕ್ರಿಯೆಗೆ ಜ್ವಲಂತ ಸಾಕ್ಷಿ.
ಸಿ.ಟಿ. ರವಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೊಲೆಗಾರ ಅಂತ ಜರಿಯಲು ಒಂದು ಸಣ್ಣ ಸಮರ್ಥನೆ ಇದೆ. 2019ರ ಫೆಬ್ರವರಿ ಹದಿನೆಂಟರಂದು ಎನ್.ಎಚ್. 75ರಲ್ಲಿ ಉರ್ಕೆಹಳ್ಳಿ ಸೇತುವೆ ಸಮೀಪ (ತುಮಕೂರು ಜಿಲ್ಲೆಯ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿ) ಭೀಕರ ರಸ್ತೆ ಅಪಘಾತವೊಂದು ಸಂಭವಿಸಿತ್ತು. ಆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆರೇಳು ಜನರಿಗೆ ಗಂಭೀರ ಗಾಯಗಳಾಗಿದ್ದವು. ರಸ್ತೆ ಬದಿ ನಿಂತಿದ್ದ ಎರಡು ಕಾರುಗಳಿಗೆ ರಭಸದಿಂದ ಬಂದು ಢಿಕ್ಕಿ ಹೊಡೆದು ಅಪಘಾತ ಮಾಡಿದ ಕಾರಿನಲ್ಲಿ ಅಂದಿನ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಮತ್ತು ಅವರ ಡ್ರೈವರ್ ಆಕಾಶ್ ಇದ್ದರು. ಆ ಭೀಕರ ರಸ್ತೆ ಅಪಘಾತದಲ್ಲಿ ರಾಮನಗರ ಜಿಲ್ಲೆಯ ಸೂರನ ಹಳ್ಳಿಯ ಶಶಿಗೌಡ ಎಸ್.ಪಿ. (28), ಸುನೀಲ್ ಗೌಡ ಎಸ್.ಜೆ. (27) ಸ್ಥಳದಲ್ಲೇ ಮೃತ ಪಟ್ಟ ನತದೃಷ್ಟರು.
ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ಹದಿನಾಲ್ಕು ಜನ ಯುವಕರು ಎರಡು ಕಾರುಗಳಲ್ಲಿ ಶೃಂಗೇರಿ, ಹೊರನಾಡು, ಕುಂದಾಪುರಕ್ಕೆ ಟ್ರಿಪ್ ಹೋಗಿದ್ದರು. ಬೆಂಗಳೂರಿಗೆ ವಾಪಸ್ ಬರುವಾಗ ಉರ್ಕೆ ಹಳ್ಳಿ ಸೇತುವೆ ಬಳಿ ಎರಡು ಕಾರುಗಳನ್ನು ರಸ್ತೆ ಬದಿ ನಿಲ್ಲಿಸಿ ಡಿಕ್ಕಿಯಲ್ಲಿದ್ದ ಲಗೇಜ್‌ಗಳನ್ನು ಒಂದು ಕಾರಿನಿಂದ ಇನ್ನೊಂದು ಕಾರಿಗೆ ವರ್ಗಾಯಿಸುತ್ತಿದ್ದರು. ಕಾರುಗಳ ಇಂಡಿಕೇಟರ್ ಆನ್ ಆಗಿದ್ದವು.. ಮಧ್ಯರಾತ್ರಿ ಎರಡರ ಹೊತ್ತಿಗೆ ಬೆಂಗಳೂರು ಕಡೆಗೆ ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ಬದಿ ನಿಂತ ಆ ಎರಡೂ ಕಾರುಗಳಿಗೆ ಢಿಕ್ಕಿ ಹೊಡೆದು ಅಪಘಾತ ಮಾಡಿದೆ. ಶಾಸಕ ಸಿ.ಟಿ. ರವಿ ಡ್ರೈವರ್ ಸೀಟಿನಲ್ಲಿ ಇದ್ದರೆಂದು, ಅವರೇ ಕಾರು ಚಲಾಯಿಸುತ್ತಿದ್ದರೆಂದು ಪ್ರತ್ಯಕ್ಷದರ್ಶಿಗಳೇ ಹೇಳಿದ್ದರು. ಆಡಳಿತ ಪಕ್ಷದ ಶಾಸಕ ಸಿ.ಟಿ. ರವಿ ಅಪಘಾತ ಮಾಡಿದ ಕಾರಿನಿಂದ ಇಳಿದು ಸಾವು, ಆಕ್ರಂದನ ಕಣ್ಣಾರೆ ಕಂಡಿದ್ದಾರೆ. ಆರಂಭದಲ್ಲಿ ಗರ ಬಡಿದವರಂತೆ ಇದ್ದ ಅವರು ಕರೆ ಮಾಡಿ ಬೇರೊಂದು ವಾಹನ ಮತ್ತು ಸ್ನೇಹಿತರನ್ನು ಕರೆಸಿಕೊಂಡಿದ್ದಾರೆ. ಸ್ನೇಹಿತರು ಬಂದ ಕೂಡಲೇ ರವಿಯವರ ವರಸೆ ಬದಲಾಗಿದೆ. ಸಂತ್ರಸ್ತರ ಮೇಲೆಯೇ ಜೋರು ಮಾಡಿದ್ದಾರೆ. ಕೊನೆಗೆ ಸಿ.ಟಿ.ರವಿ ತನ್ನ ಕಾರ್ ಡ್ರೈವರ್ ಆಕಾಶ್ ಮೇಲೆ ಐಪಿಸಿ 304 ಎ ಮೊಕದ್ದಮೆ ದಾಖಲಿಸಿ ತಾವು ಬಚಾವ್ ಆಗಿದ್ದಾರೆ. ಸಿ.ಟಿ. ರವಿ ಆ ಹೊತ್ತಿನಲ್ಲಿ ಕುಡಿದಿದ್ದರೋ ಇಲ್ಲವೋ ಎಂಬುದು ಮರೆತು ಮೃತ ಪಟ್ಟ ಆ ಎರಡು ಜೀವಗಳು, ಅವರ ಕುಟುಂಬದ ಗೋಳು, ಸ್ಥಳದಲ್ಲಿದ್ದ ಗೆಳೆಯರ ಗುಂಪಿನ ದುಃಖ ದುಮ್ಮಾನ ಸುಳ್ಳೆ? ಅಲ್ಲಿ ನಡೆದ ಘಟನೆಗೆ ಬೇರೆ ಯಾವ ಸಾಕ್ಷಿಯೂ ಬೇಡ. ಸಿ.ಟಿ. ರವಿಯವರ ಕಣ್ಣುಗಳು, ಆ ಮೂಲಕ ಗ್ರಹಿಸಿದ ಮನಸ್ಸು ಎಲ್ಲವನ್ನು ನೆನಪಿಟ್ಟುಕೊಂಡಿರುತ್ತವೆ. ನೋಡಿದ ಘಟನೆಗೆ ಮನವೇ ಸಾಕ್ಷಿ. ರವಿ ಏಕಾಂತದಲ್ಲಿ ಕೂತು ಅಪಘಾತದ ಘಟನೆ ನೆನಪಿಸಿಕೊಂಡರೆ ಸಾಕು ಆ ಎಲ್ಲ ವಿವರಗಳು ಚಲನಚಿತ್ರದಂತೆ ಕಣ್ಣ ಮುಂದೆ ಬಂದು ಹೋಗುತ್ತವೆ. ಅದು ಅಪಘಾತವೇ ಆಗಿದ್ದರೂ ಆ ಎರಡು ಜೀವಗಳ ಸಾವಿಗೆ ಸಿ.ಟಿ ರವಿ ಕಾರಣರಲ್ಲವೇ?
ಲಕ್ಷ್ಮೀ ಹೆಬ್ಬಾಳ್ಕರ್ ಬಳಸಿದ ಪದಕ್ಕೆ ಪ್ರತಿಯಾಗಿ ಸಿ.ಟಿ. ರವಿ ಕೊಲೆಗಾರ್ತಿ ಎಂಬ ಪದ ಬಳಸಿದ್ದರೂ ಸಣ್ಣ ಸಮರ್ಥನೆ ಸಿಗುತ್ತಿತ್ತು. ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಬೆಳಗಾವಿ ಜಿಲ್ಲೆಯ ತಹಸೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ತನ್ನ ಸಾವಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಸಹಾಯಕ ಕಾರಣ ಎಂದು ಹೇಳಿದ್ದರು. ಅದನ್ನು ಉಲ್ಲೇಖಿಸಿ ಸಿ.ಟಿ. ರವಿ ಪ್ರತಿಕ್ರಿಯೆ ವ್ಯಕ್ತಪಡಿಸಬಹುದಿತ್ತು.. ಅದೆಲ್ಲ ಬಿಟ್ಟು ಕಣ್ಣಾರೆ ಕಾಣದೆ ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್ ಎಂಬಂತೆ ಮಾತನಾಡಿದ್ದು, ಅದು ಸಾಲದು ಎಂಬಂತೆ ಆಕ್ಷೇಪಾರ್ಹ ಪದ ಬಳಸಿದ್ದು ಸಿ.ಟಿ. ರವಿಯವರ ಭಾಷಾ ಸಂಸ್ಕಾರ ತೋರಿಸುತ್ತದೆ.
ಹಾಗೆ ನೋಡಿದರೆ ಸಿ.ಟಿ. ರವಿಯವರಿಗೆ ಮೊದಲಿಂದಲೂ ನಾಲಿಗೆ ಮೇಲೆ ಹಿಡಿತ ಇಲ್ಲ. ಒಮ್ಮೆ ಮತದಾರರನ್ನು ತಾಯಿಗಂಡರು ಎಂದು ನಿಂದಿಸಿದ್ದರು. ಅಷ್ಟು ಮಾತ್ರವಲ್ಲ ಆ ಪದವನ್ನು ಜನಪದ ಸೊಗಡಿನ ಪ್ರತೀಕ ಎಂಬಂತೆ ಸಮರ್ಥಿಸಿಕೊಳ್ಳಲು ಯತ್ನಿಸಿದ್ದರು. ಇನ್ನೊಮ್ಮೆ ವಿಧಾನಪರಿಷತ್ತಿನಲ್ಲೇ ನಿತ್ಯ ಸುಮಂಗಲಿಯರು ಎಂಬ ಪದ ಬಳಸಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಅಷ್ಟಕ್ಕೇ ನಿಲ್ಲದೆ ನಿತ್ಯ ಸುಮಂಗಲಿಯರು ಎಂಬ ಪದ ಶ್ರೇಷ್ಠವಾದುದು, ಅದನ್ನು ಬಳಸಿದರೆ ತಪ್ಪಿಲ್ಲ ಎಂದು ವಾದಿಸಿದ್ದರು. ಈಗ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಧಾನ ಪರಿಷತ್ತಿನಲ್ಲೇ ಆಕ್ಷೇಪಾರ್ಹ ಪದ ಬಳಸಿ ಭಂಡತನ ಮೆರೆಯುತ್ತಿದ್ದಾರೆ.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು ಅತ್ಯಂತ ಹಿರಿಯರು. ನಿಯಮಗಳು ಅವರಿಗೆ ಮುಖ್ಯ ಆಗಲೇಬೇಕು. ಸದನ ಮುಂದೂಡಿದ ನಂತರ ನಡೆಯುವ ಘಟನೆಗಳ ವಿವರ ರೆಕಾರ್ಡ್ ಆಗಿರುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ರೆಕಾರ್ಡ್ ಸಿಕ್ಕಿರಲಿಕ್ಕಿಲ್ಲ ಎಂದೇ ಭಾವಿಸೋಣ. ಆದರೆ ಇದೇ ಬಗೆಯ ಘಟನೆ ಇಪ್ಪತ್ತೈದು ವರ್ಷಗಳ ಹಿಂದೆ ಘಟಿಸಿದ್ದರೆ ಸಭಾಪತಿಯಾದವರು ಯಾವ ಸಾಕ್ಷ್ಯ ಆಧರಿಸಿ ರೂಲಿಂಗ್ ಕೊಡುತ್ತಿದ್ದರು? ಯಾಕೆಂದರೆ ಆಗಲೂ ರೆಕಾರ್ಡ್ ಸಿಗುತ್ತಿರಲಿಲ್ಲ. ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ಪರಿಗಣಿಸಬೇಕಲ್ಲವೇ? ಘಟನೆಯ ವಿವರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ನಾನು ಬಿಜೆಪಿಯ ಇಬ್ಬರು ಶಾಸಕರೊಂದಿಗೆ ಮಾತನಾಡಿದೆ. ಆ ಇಬ್ಬರೂ ನನ್ನ ಮೇಲಿನ ವ್ಯಕ್ತಿಗತ ಸ್ನೇಹದ ನಂಬಿಕೆಯಿಂದ ಮೊಬೈಲ್ ಸಂಭಾಷಣೆಯಲ್ಲೇ ಸಿ.ಟಿ. ರವಿ ಆಕ್ಷೇಪಾರ್ಹ ಪದ ಬಳಸಿದ್ದು ನಿಜ ಎಂಬುದು ಒಪ್ಪಿಕೊಂಡರು. ಆದರೆ ಸಿ.ಟಿ. ರವಿ ಈ ಕ್ಷಣಕ್ಕೂ ನಾನು ಹಾಗೆ ಹೇಳಿಯೇ ಇಲ್ಲ ಎಂದು ಕುತರ್ಕ ಮಾಡುವ ಮೂಲಕ ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ. ಅಷ್ಟು ಮಾತ್ರವಲ್ಲ; ನಾನು ಸಂಘ ಪರಿವಾರದಲ್ಲಿ ಸಂಸ್ಕಾರ ಪಡೆದವನು ಎಂದು ಹೇಳುವ ಮೂಲಕ ಸಂಘ ಪರಿವಾರದ ಹಿರಿಯರನ್ನು ಅಪಮಾನಿಸುತ್ತಿದ್ದಾರೆ. ಸಂಘ ಪರಿವಾರದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರಂತಹ ವಾಚಾಳಿಗಳು ಇದ್ದಾರೆ. ದತ್ತಾತ್ರೇಯ ಹೊಸಬಾಳೆ, ಮುಕುಂದ, ಕೃಷ್ಣಗೋಪಾಲ, ವಾದಿರಾಜ್ ಅವರಂತಹ ಸಜ್ಜನರೂ ಇದ್ದಾರೆ. ಅವರನ್ನು ಸೈದ್ಧಾಂತಿಕವಾಗಿ ಒಪ್ಪದೇ ಇರಬಹುದು, ಆದರೆ ಸೌಜನ್ಯದ ಎಲ್ಲೆ ಮೀರುವ ವ್ಯಕ್ತಿಗಳಲ್ಲ. ಸಿ.ಟಿ. ರವಿ, ಈಶ್ವರಪ್ಪ, ಬಸನಗೌಡ ಯತ್ನಾಳ್ ಮುಂತಾದವರಿಗೆ ಕಲ್ಲಡ್ಕ ಪ್ರಭಾಕರ ಭಟ್ಟರು ಆದರ್ಶ ಪ್ರಾಯರಾಗಿರಬೇಕು. ಪ್ರಭಾಕರ ಭಟ್ಟರು ಒಮ್ಮೆ ಮುಸ್ಲಿಮ್ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.
ಬೆಳಗಾವಿ ಪೊಲೀಸರು ಆವತ್ತು ಸಿ.ಟಿ. ರವಿಯವರ ರಕ್ಷಣೆಗೆಂದೇ ವಿಶೇಷ ಬಂದೋಬಸ್ತ್ ಮಾಡಿದ್ದರಿಂದ ಅವಘಡಗಳು ತಪ್ಪಿವೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಳಗಾವಿ ಶಾಸಕಿ. ಅಲ್ಲಿ ಅವರ ಅಭಿಮಾನಿ ವರ್ಗ ಅಪಾರ ಸಂಖ್ಯೆಯಲ್ಲಿ ಇರುತ್ತಾರೆ. ತಮ್ಮ ನಾಯಕಿಯ ಬಗ್ಗೆ ಯಾರೇ ಆಕ್ಷೇಪಾರ್ಹ ಮಾತುಗಳನ್ನು ಆಡಿದರೂ ಸಿಟ್ಟಿಗೇಳುವುದು ಸಹಜ. ಸಮೂಹ ಸನ್ನಿಯನ್ನು, ಅದು ಉಂಟು ಮಾಡುವ ಅನಾಹುತಗಳನ್ನು ಊಹಿಸಲು ಸಾಧ್ಯವಿಲ್ಲ.. ಮುಂಜಾಗ್ರತ ಕ್ರಮವಾಗಿ ಪೊಲೀಸರು ಸಿ.ಟಿ. ರವಿಯವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಕಣ್ಣ ಎವೆಯಾಗಿ ರಕ್ಷಿಸಿದ್ದಾರೆ. ಆ ಕೃತಜ್ಞತಾ ಭಾವ ಸಿ.ಟಿ. ರವಿಗೆ ಇರಬೇಕಿತ್ತು. ಪೊಲೀಸರ ಬಗ್ಗೆ ಕನಿಷ್ಠ ಕೃತಜ್ಞತಾ ಭಾವ ಹೊಂದದೆ, ಅವರು ಎನ್‌ಕೌಂಟರ್‌ಗೆ ಸ್ಕೆಚ್ ಹಾಕಿದ್ದರು ಎನ್ನುವುದು ಕರ್ನಾಟಕದ ಪೊಲೀಸ್ ವ್ಯವಸ್ಥೆಗೆ ಮಾಡಿದ ಅಪಮಾನ. ಸಿ.ಟಿ. ರವಿ ಮಾಜಿ ಮಂತ್ರಿ, ನಾಲ್ಕು ಬಾರಿ ಶಾಸಕ, ವಿಧಾನ ಪರಿಷತ್ ಸದಸ್ಯ ಎಲ್ಲಕ್ಕೂ ಮಿಗಿಲಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದವರು. ಎಷ್ಟೇ ಪ್ರಭಾವಿ ನಾಯಕ ಹೇಳಿದರೂ ಸಿ.ಟಿ. ರವಿಯವರನ್ನು ಎನ್‌ಕೌಂಟರ್‌ನಲ್ಲಿ ಮುಗಿಸಲು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಎನ್‌ಕೌಂಟರ್ ಮಾಡುವುದು ಒತ್ತಟ್ಟಿಗಿರಲಿ ಅವರಿಗೆ ಸಣ್ಣ ಗಾಯ ಮಾಡಲು ಯಾವ ಅಧಿಕಾರಿಯೂ ಧೈರ್ಯ ಮಾಡಲಾರ. ರಾಜಕೀಯ ಮಾಡುವುದಕ್ಕೂ ಒಂದು ಮಿತಿ ಇರಬೇಕು. ಮಿತಿ ಮೀರಿ ಸಿ.ಟಿ. ರವಿ ಗಿಮಿಕ್ ರಾಜಕೀಯ ಮಾಡಿದ್ದಾರೆ. ಅವರ ನಡೆ ಮತ್ತು ನುಡಿಗೆ ಪೊಲೀಸ್ ವ್ಯವಸ್ಥೆ ಸಾಕ್ಷಿಯಾಗಿದೆ. ಆದರೆ ಯಾರೂ ಬಹಿರಂಗಪಡಿಸುವ ಸ್ಥಿತಿಯಲ್ಲಿ ಇಲ್ಲ. ಮಧ್ಯಂತರ ಜಾಮೀನು ಸಿಕ್ಕಿದ್ದೇ ಸತ್ಯಕ್ಕೆ ಸಂದ ಜಯ ಎನ್ನುವುದು. ರಸ್ತೆಯುದ್ಧಕ್ಕೂ ಮೆರವಣಿಗೆ ಮಾಡಿಸಿಕೊಳ್ಳುವುದು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತದ ವ್ಯವಸ್ಥೆ ಮಾಡಿಕೊಳ್ಳುವುದರಿಂದ ಆಡಿದ ಮಾತನ್ನು ಮಾಡಿದ ಪಾಪವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಸಿ.ಟಿ. ರವಿಯವರ ಅಂತರಾತ್ಮ ಪದೇ ಪದೇ ಎಲ್ಲವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಮಾಯದ ಗಾಯದಂತೆ ಜೀವನದುದ್ದಕ್ಕೂ ಸಿ.ಟಿ. ರವಿಯವರನ್ನು ಕಾಡುತ್ತಲೇ ಇರುತ್ತದೆ. ಸಿ.ಟಿ. ರವಿ ಕ್ರಿಯಾಶೀಲತೆಗೆ ಹೆಸರಾದವರು. ಆದರೆ ಹರಕು ಬಾಯಿ, ಆತ್ಮವಂಚಕ ಮನಸ್ಸು ಅವರ ಪರಮ ಶತ್ರುಗಳು. ಹಾಗೆ ನೋಡಿದರೆ ಕಳೆದ ಚುನಾವಣೆಯಲ್ಲಿ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಸೋಲುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ.. ಅದೂ ತನ್ನ ಶಿಷ್ಯನ ಎದುರು. ರವಿಯ ಸೋಲು ಅವರ ಕರ್ಮದ ಫಲವೇ ಆಗಿರಬೇಕು. ಸಿ.ಟಿ. ರವಿ ಈ ಬಾರಿ ಗೆಲುವು ಸಾಧಿಸಿದ್ದರೆ ಖಂಡಿತಾ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಅಲಂಕರಿಸುತ್ತಿದ್ದರು. ಉರ್ಕೆ ಹಳ್ಳಿ ಸೇತುವೆ ಬಳಿಯ ರಸ್ತೆ ಅಪಘಾತ. ಅಮಾಯಕ ಯುವಕರ ಭೀಕರ ಮೃತ್ಯು, ಅವರ ಗೆಳೆಯರ ಆಕ್ರಂದನ, ಶಾಸಕ ಸ್ಥಾನದ ಬಲ ಕಿತ್ತುಕೊಂಡ ನ್ಯಾಯ, ಮೃತ ಕುಟುಂಬದವರ ತೀರದ ಗೋಳು ಕರ್ಮ ಆಗಿ ಕಾಡಿರಲಾರದೇ?
ಬಿಜೆಪಿ ಹಿರಿಯ ನಾಯಕ ಸುದೀರ್ಘ ಕಾಲ ರಾಜಕಾರಣ ಮಾಡಿದವರು. ಒಂದು ಜನಾಂಗ, ಒಂದು ಜಾತಿ ಅಥವಾ ಯಾವುದೇ ಸಮುದಾಯವನ್ನು ಸಾರಾಸಗಟಾಗಿ ನಿಂದಿಸಿದ ಉದಾಹರಣೆ ಇಲ್ಲ. ಶೋಭಾ ಕರಂದ್ಲಾಜೆ ಬಹಳ ವರ್ಷಗಳ ಕಾಲ ಕರ್ನಾಟಕದ ರಾಜಕಾರಣದಲ್ಲಿ ಇದ್ದಾರೆ. ಅವರನ್ನು ಕಾಂಗ್ರೆಸ್‌ನ ಯಾವೊಬ್ಬ ನಾಯಕನೂ ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ ನಿದರ್ಶನ ಇಲ್ಲ..
ಬಿಜೆಪಿಯ ರಾಷ್ಟ್ರೀಯ ಮತ್ತು ಕರ್ನಾಟಕದ ನಾಯಕತ್ವ ನಿಜವಾಗಿಯೂ ಸಂವೇದನಾಶೀಲ ಗುಣಗಳನ್ನು ಹೊಂದಿದ್ದರೆ, ಸದನದಲ್ಲಿದ್ದ ತನ್ನದೇ ಪಕ್ಷದ ಪ್ರತ್ಯಕ್ಷ ದರ್ಶಿಗಳಿಂದ ಮಾಹಿತಿ ಪಡೆದು ಸಿ.ಟಿ. ರವಿಯವರಿಗೆ ಬುದ್ಧಿವಾದ ಹೇಳಿ ಕ್ಷಮೆ ಕೇಳುವಂತೆ ತಾಕೀತು ಮಾಡಬೇಕಿತ್ತು. ಸಿ.ಟಿ. ರವಿ ಕ್ಷಮೆ ಯಾಚಿಸಿ ವಿನಮ್ರವಾಗಿ ನಡೆದುಕೊಂಡಿದ್ದರೆ ಅವರ ವ್ಯಕ್ತಿತ್ವ ಮಾದರಿಯಾಗಿ ನಿಲ್ಲುತ್ತಿತ್ತು. ಆತ್ಮಕ್ಕೆ ಗೊತ್ತಿರುವ ಸಂಗತಿಗಳ ವಿರುದ್ಧ ನಡೆದುಕೊಂಡರೆ ಸೃಷ್ಟಿಯ ಸಹಜ ನ್ಯಾಯ ಸರಿಯಾದ ತೀರ್ಪು ನೀಡಿ ತಕ್ಕ ಪಾಠ ಕಲಿಸುತ್ತದೆ. ‘ಮಾಡಿದ ಪಾಪಕ್ಕೆ ಮನವೇ ಸಾಕ್ಷಿ ತೋಡಿದ ಬಾವಿಗೆ ಜಲವೇ ಸಾಕ್ಷಿ’ ಎಂಬ ಅನುಭವದ ಮಾತು ಸಿ.ಟಿ. ರವಿ ಮಾತ್ರವಲ್ಲ ಎಲ್ಲ ಪಕ್ಷದ ಭಂಡರಿಗೆ ಬೇತಾಳದಂತೆ ಸದಾ ಕಾಡುತ್ತಿರುತ್ತದೆ. ಸಾರ್ವಜನಿಕ ಬದುಕು ಅಸಂಖ್ಯಾತ ಸಿಸಿಟಿವಿಗಳ ಕಣ್ಣಗಾವಲಿನಲ್ಲಿ ಸಂಭವಿಸುತ್ತಿರುತ್ತದೆ.ಅದರಲ್ಲಿ ಸಿ.ಟಿ. ರವಿಯವರ ಒಳಗಣ್ಣು ಸೇರಿಕೊಂಡಿದೆ. ಎಲ್ಲ ಸಾಕ್ಷಿಗಳನ್ನು ಸುಳ್ಳು ಮಾಡಿ ಗೆಲ್ಲಬಹುದು. ಆದರೆ ಸ್ವತಃ ಸಿ.ಟಿ. ರವಿಯವರ ಮನಃಸಾಕ್ಷಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ದೇವರು, ಧರ್ಮ, ಆಣೆ ಪ್ರಮಾಣಕ್ಕೆ ಹೆಸರಾದ ಸಿ.ಟಿ. ರವಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸಮಕ್ಷಮದಲ್ಲಿ ಪ್ರಮಾಣ ಮಾಡಲು ನಿರಾಕರಿಸಿರುವುದು ಆತ್ಮಸಾಕ್ಷಿಯ ಸತ್ಯದ ಮಾತುಗಳಿಗೆ ಹೆದರಿ. ಇಲ್ಲಿ ತಪ್ಪು ಮಾಡಿದ್ದು ಸಿ.ಟಿ. ರವಿ, ಸಾಕ್ಷಿಯಾಗಿ ನಿಂತಿದ್ದು ಅವರ ಒಳಮನಸ್ಸು. ಇದಕ್ಕೆಲ್ಲ ಅವರ ಶ್ರೀಮತಿಯವರನ್ನು ಎಳೆದು ತರುವುದು ತಪ್ಪು. ಒಬ್ಬ ಮಹಿಳೆಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸೂಕ್ಷ್ಮತೆ ಮೆರೆಯಬೇಕು. ಸಿ.ಟಿ. ರವಿಯವರ ಪತ್ನಿ ಸಂವೇದನಾಶೀಲ ಮಹಿಳೆ. ಸಿ.ಟಿ. ರವಿಯವರ ಅದರಲ್ಲೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರ ಪತ್ನಿಯಾಗಿ ರಾಜಕೀಯ ಕಾರಣಕ್ಕೆ ಬಹಿರಂಗವಾಗಿ ಸತ್ಯ ಹೇಳಲು ಸಾಧ್ಯವಾಗಿರಲಿಕ್ಕಿಲ್ಲ. ಆದರೆ ಸಂವೇದನಾಶೀಲ ಭಾರತೀಯ ಮಹಿಳೆಯಾಗಿ ಆಡಿದ ಮಾತು ತಪ್ಪು ಅಂತ ಖಂಡಿತಾ ಹೇಳಿರುತ್ತಾರೆ. ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ನೀಡುವ ಪರಿಪಾಠ ಕಾನೂನಿನಲ್ಲಿದೆ. ಸಿ.ಟಿ. ರವಿಯವರ ಪ್ರಕರಣದಲ್ಲೂ ಎಲ್ಲ ಸೂಕ್ಷ್ಮ ಮನಸ್ಸಿನವರು ಅದನ್ನೇ ಮಾಡಬೇಕು. ವಿನಾಕಾರಣ ಅವರ ತಾಯಿ, ತಂಗಿ, ಮಗಳನ್ನು ಎಳೆದು ತರಬಾರದು. ಇಲ್ಲದಿದ್ದರೆ ಸಿ.ಟಿ. ರವಿಗೂ ನಮಗೂ ವ್ಯತ್ಯಾಸ ಉಳಿಯುವುದಿಲ್ಲ.