ಯತ್ನಾಳ್ - ವಿಜಯೇಂದ್ರ ಜಗಳ ಬಂಧಿ
ಕಾಂಗ್ರೆಸ್ ಪಕ್ಷ ಮನಸ್ಸು ಮಾಡಿದರೆ ಈ ಉಪಚುನಾವಣೆಯಲ್ಲಿ ಮೂರು ವಿಧಾನ ಸಭಾ ಕ್ಷೇತ್ರಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಆಡಳಿತ ನಡೆಸುತ್ತಿರುವುದು ಮತದಾರರ ಮೇಲೆ ಸಹಜವಾಗಿಯೇ ಪ್ರಭಾವ ಬೀರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ಇದೆಯಾದರೂ ಬಣ ರಾಜಕೀಯ ಬೀದಿಗೆ ಬಂದಿಲ್ಲ. ಸರಕಾರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎನ್ನುವುದು ಇನ್ನೂ ಮತದಾರರ ಗಮನಕ್ಕೆ ಬಂದಿಲ್ಲ. ಹಾಗಾಗಿ ಆಡಳಿತ ವಿರೋಧಿ ಅಲೆ ಈ ಚುನಾವಣೆಯಲ್ಲಿ ಲೆಕ್ಕಕ್ಕೇ ಬರುವುದಿಲ್ಲ. ಚನ್ನಪಟ್ಟಣ, ಶಿಗ್ಗಾಂವಿ- ಸವಣೂರು ಮತ್ತು ಸಂಡೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಪಕ್ಷಕ್ಕೆ ಗಟ್ಟಿ ನೆಲೆಯಿದೆ. ಈ ಹಿಂದೆ ಬೇರೆ ಬೇರೆ ಕಾರಣಕ್ಕೆ ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳನ್ನು ಕಳೆದುಕೊಂಡಿರಬಹುದು. ಈ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ತಕ್ಷಣಕ್ಕೆ ಕಾಂಗ್ರೆಸ್‌ಗೆ ನೈತಿಕ ಬಲ ಹೆಚ್ಚಿಸುತ್ತದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲ್ಲೂ ಬಹುಮತ ಪಡೆದುಕೊಳ್ಳುವ ಅವಕಾಶ ತರೆದುಕೊಳ್ಳುತ್ತದೆೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿರಬಹುದು. ಆದರೆ ಕರ್ನಾಟಕದಲ್ಲಿ ಬಿಜೆಪಿ -
ಮನೆಯೊಂದು ನೂರು ಬಾಗಿಲು ಎನ್ನುವ ಅರಾಜಕ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಪಕ್ಷ ಕಾರ‌್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡಿದರೆ 2028ರಲ್ಲೂ ಸರಕಾರ ರಚಿಸುವ ಶಕ್ತಿ ಪಡೆದುಕೊಳ್ಳಬಹುದಾಗಿದೆ.
ಬಿಜೆಪಿಯೊಳಗಿನ ಅಂತಃಕಲಹ ಮೇಲ್ನೋಟಕ್ಕೆ ಯತ್ನಾಳ್-ವಿಜಯೇಂದ್ರ ನಡುವಿನ ವೈಯಕ್ತಿಕ ಜಗಳ ಎಂಬ ಅಭಿಪ್ರಾಯ ಮೂಡಿಸುತ್ತಿದೆಯಾದರೂ ವಸ್ತುಸ್ಥಿತಿಗೆ ಹಲವು ಆಯಾಮಗಳಿವೆ. ಯಡಿಯೂರಪ್ಪ -
ಅನಂತಕುಮಾರ್ ಜಗಳ ನಿಜವಾದ ಅರ್ಥದಲ್ಲಿ ವ್ಯಕ್ತಿಗತವಾಗಿತ್ತು. ಅಧಿಕಾರ ರಾಜಕಾರಣದ ಮೇಲಾಟದಲ್ಲಿ ಯಡಿಯೂರಪ್ಪ ಗೆದ್ದರು. ಸೋತು ಗೆದ್ದರು ಎನ್ನುವುದು ಸರಿಯಾದ ಮಾತು. ಸಂಘ ಪರಿವಾರ ಮೂಲದಿಂದ ಬಂದ ಯಡಿಯೂರಪ್ಪ-ಅನಂತಕುಮಾರ್ ಆರಂಭದ ವರ್ಷಗಳಲ್ಲಿ ಪರಸ್ಪರ ಪೂರಕ ರಾಜಕಾರಣ ಮಾಡಿದ್ದರು ಮುಖ್ಯಮಂತ್ರಿ ಕುರ್ಚಿಗೆ ಹತ್ತಿರವಾಗುತ್ತದ್ದಂತೆ ಪರಸ್ಪರ ಶತ್ರುಗಳಾದರು. ಇಬ್ಬರಿಗೂ ಆರಂಭದಲ್ಲಿ ಜೊತೆಗೆ ಇದ್ದಿದ್ದು ಸಂಘ ಬಲ ಮಾತ್ರ. ಮುಖ್ಯಮಂತ್ರಿ ಹುದ್ದೆಗೇರಲು ಸಂಘ ಬಲ ಸಾಕಾಗುವುದಿಲ್ಲ ಎಂದು ಭಾವಿಸಿ ಅನಂತಕುಮಾರ್ ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ ಬಲವನ್ನು ತಮ್ಮ ಜೊತೆಗೆ ಸೇರಿಸಿಕೊಂಡರು.ಜಗದೀಶ್ ಶೆಟ್ಟರ್, ಆರ್. ಅಶೋಕ್, ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ, ರಘುನಾಥ ಮಲ್ಕಾಪುರೆ ಮುಂತಾದವರಿಗೆ ಅವಕಾಶ ನೀಡಿ ಬೆಳೆಸತೊಡಗಿದರು. ಸಂಘ ಬಲದ ಯಡಿಯೂರಪ್ಪ ರೈತ ಹೋರಾಟಗಳಲ್ಲಿ ಸಕ್ರಿಯವಾಗಿ ರೈತ ನಾಯಕನಾಗಲು ಯತ್ನಿಸಿದರು. ರೈತರು ಎಲ್ಲ ಜಾತಿ-ಸಮುದಾಯಗಳಲ್ಲಿ ಇದ್ದಾರೆ ಎಂಬುದು ಅವರ ಗ್ರಹಿಕೆಯಾಗಿತ್ತು.
ಎಚ್.ಡಿ. ಕುಮಾರಸ್ವಾಮಿಯವವರ ಜೊತೆಗೆ ಕೂಡಿಕೆ ಮಾಡಿಕೊಂಡು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಯಡಿಯೂರಪ್ಪ ಸಂಘ ಬಲದ ಮಿತಿ ಅರಿಯ ತೊಡಗಿದರು. ಸಂಘ ಬಲ ಬೇಕೇ ಬೇಕು. ಆದರೆ ಮುಖ್ಯಮಂತ್ರಿ ಹುದ್ದೆಗೇರಲು ಜಾತಿಬಲ ಮತ್ತು ಹಣಬಲ ಅನಿವಾರ‌್ಯ ಎಂದು ಮನಗಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರು. ಇಪ್ಪತ್ತು ತಿಂಗಳ ಕಾಲ ಮುಖ್ಯಮಂತ್ರಿಯಾಗುವ ಅವಕಾಶವನ್ನು ಅನಂತಕುಮಾರ್ ಅವರೇ ತಪ್ಪಿಸಿದರು ಎಂದು ಕುಮಾರಸ್ವಾಮಿಯವರು ಪದೇ ಪದೇ ಹೇಳುತ್ತಾ ಹೋದಂತೆ ಯಡಿಯೂರಪ್ಪ ಸಂಘ ಮೂಲದೊಂದಿಗೆ ಜಾತಿ ಸಮೀಕರಣ ಸೇರಿಸತೊಡಗಿದರು. 2008ರ ಹೊತ್ತಿಗೆ ಜನತಾ ಪರಿವಾರದ ಭಾಗವಾಗಿದ್ದ, ರಾಮಕೃಷ್ಣ ಹೆಗಡೆಯವರ ಆಪ್ತ ವಲಯದಲ್ಲಿದ್ದ ಸಿಎಂ. ಉದಾಸಿ, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಮಾಮನಿ ಕುಟುಂಬದವರು ಸೇರಿದಂತೆ ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತರು ಯಡಿಯೂರಪ್ಪ ನಾಯಕತ್ವ ಒಪ್ಪಿಕೊಂಡು ಬಿಜೆಪಿ ಸೇರಿದರು. ಅನಂತಕುಮಾರ್ ಎದುರಿಸಲು ಮತ್ತು ಸಂಘದ ಬಲ ತನ್ನ ಜೊತೆಗೇ ಉಳಿಸಿಕೊಳ್ಳಲು ವಿ.ಎಸ್. ಆಚಾರ್ಯ, ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ರಾಮದಾಸ್ ಮುಂತಾದವರನ್ನು ಜೊತೆಗೇ ಇರಿಸಿಕೊಂಡಿದ್ದರು. ಗೋ ಮಧುಸೂಧನ್ ಯಡಿಯೂರಪ್ಪ ಅವರ ವಕ್ತಾರರೇ ಆಗಿದ್ದರು.
ಅಷ್ಟಕ್ಕೂ ಯಡಿಯೂರಪ್ಪ 2008ರ ವಿಧಾನಸಭಾ ಚುನಾವಣೆ ಎದುರಿಸಿದ್ದು; ಕೊಟ್ಟ ಮಾತಿಗೆ ತಪ್ಪಿದ ಕುಮಾರಸ್ವಾಮಿ ಎಂಬ ಸ್ಲೋಗನ್ನು ಮತ್ತು ನಾಡಿನ ಲಿಂಗಾಯತ ಸಮುದಾಯದೆದುರು ಹರಕೆಯ ಕುರಿಯಂತೆ ಬಿಂಬಿಸಿಕೊಂಡು. ಮೊದಲ ಬಾರಿಗೆ ಯಡಿಯೂರಪ್ಪಗೆ ಜಾತಿ ಬೆಂಬಲ ದೊರೆಯಿತು.ಜನಾದರ್ನ ರೆಡ್ಡಿಯ ಹಣಬಲ ಮತ್ತು ತನ್ನ ಜಾತಿ ಬಲ,ಅನಂತಕುಮಾರ್ ಸಿದ್ಧ್ದಪಡಿಸಿಕೊಟ್ಟಿದ್ದ ಸಣ್ಣ ಪ್ರಮಾಣದ ದಲಿತ ಬಲ- ಎಲ್ಲವನ್ನೂ ಬಳಸಿಕೊಂಡು ಬಿಜೆಪಿ ಸಂಖ್ಯಾಬಲವನ್ನು 110ಕ್ಕೆ ಹೆಚ್ಚಿ
ಸಿಕೊಂಡರು.ಅನಂತಕುಮಾರ್ ರಾಜ್ಯಾಧ್ಯಕ್ಷರಾಗಿ ಎದುರಿಸಿದ 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಪರ್ಯಾಯ ಶಕ್ತಿಯಾಗಿ ಹೊರ ಹೊಮ್ಮಬಹುದೆಂದು ಕೆಲವರು ಬಲವಾಗಿ ನಂಬಿದ್ದರು.ಆಗ ಬಿಜೆಪಿಗೆ ದಕ್ಕಿದ್ದು 79 ಸೀಟುಗಳು ಮಾತ್ರ.ಲಿಂಗಾಯತ ಮತಗಳು ಪೂರ್ಣ ಪ್ರಮಾಣದಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರಲಿಲ್ಲ.ಯಡಿಯೂರಪ್ಪ ಹರಕೆಯ ಕುರಿ ವೇಷ ಹಾಕಿ ಗೋಳಾಡಿದಾಗ ‘ಲಿಂಗಾಯತ’ ಮಾನ್ಯತೆ ಪಡೆದುಕೊಂಡೇ ಬಿಟ್ಟರು.ಆಗ ಒಕ್ಕಲಿಗ ಮತಗಳು ಬಿಜೆಪಿಗೆ ಸಣ್ಣ ಪ್ರಮಾಣದಲ್ಲಿ ವರ್ಗಾವಣೆಯಾಗಿದ್ದರೂ ಆ ವರ್ಷಕ್ಕೆ 120ಸೀಟುಗಳು ಅನಾಯಾಸವಾಗಿ ದಕ್ಕುತ್ತಿದ್ದವು.ಮೊದಲ ಬಾರಿಗೆ ಜೆಡಿಎಸ್;ದೇವೇಗೌಡ-ಕುಮಾರಾಸ್ವಾಮಿ ಮತ್ತು ಒಕ್ಕಲಿಗ ಸಮುದಾಯದ ಪಕ್ಷ ಎಂಬಂತಾಯಿತು.ಒಕ್ಕಲಿಗ ಮತಗಳನ್ನು ಸೆಳೆಯುವ ಶಕ್ತಿ ರಾಮಚಂದ್ರೇಗೌಡ,ಆರ್.ಅಶೋಕ್,ಶಕರಲಿಂಗೇಗೌಡ,ಬಚ್ಚೇಗೌಡರಿಗೆ ಇರಲಿಲ್ಲ.
ಬಿಜೆಪಿಯಲ್ಲಿನ ಜಾತಿ ರಾಜಕಾರಣದ ಪ್ರಾಬಲ್ಯವನ್ನು ಕಣ್ಣಾರೆ ಕಂಡ ಸಂಘ ಪ್ರಚಾರಕ,ಆಗಿನ ರಾಜ್ಯ ಬಿಜೆಪಿಯ ಸಂಘಟನಾ ಕಾರ‌್ಯದರ್ಶಿ ಬಿ.ಎಲ್.ಸಂತೋಷ್ ಯಡಿಯೂರಪ್ಪ ಅವರ ಜೊತೆಗಿದ್ದೇ ಒಂದು ಜಾತಿಯ ಪ್ರಾಬಲ್ಯ ಕಡಿಮೆ ಮಾಡುವ ಸಂಕಲ್ಪ ಮಾಡಿದರು.2011ರಲ್ಲಿ ಯಡಿಯೂರಪ್ಪ ಭ್ರಷ್ಟಾಚಾರದ ಆರೋಪ ಹೊತ್ತು ಮುಖ್ಯಮಂತ್ರಿ ಹುದ್ದೆ ತ್ಯಜಿಸುವ ಸಂದರ್ಭ ಬಂದಾಗ ಬಿ.ಎಲ್.ಸಂತೋಷ್ ಮುಖ್ಯಮಂತ್ರಿಯಾಗಬಹುದೆಂದು ಸುದ್ದಿ ಹರಡಿತ್ತು.ಆದರೆ ಆಗ ಅನಂತ ಕುಮಾರ್ ಜಗದೀಶ್ ಶೆಟ್ಟರ ಪರ ನಿಂತರೆ,ಯಡಿಯೂರಪ್ಪ ಡಿ.ವಿ.ಸದಾನಂದ ಗೌಡರ ಬೆಂಬಲಕ್ಕೆ ನಿಂತು ಮುಖ್ಯಮಂತ್ರಿಯನ್ನಾಗಿಸಿದರು.ಸದಾನಂದಗೌಡರು ‘ಕೈ’ ಕೊಟ್ಟಾಗ ಕೆರಳಿದ ಯಡಿಯೂರಪ್ಪ ಮತ್ತೆ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್ ಅವರನ್ನೇ ಅವಲಂಬಿಸಿ ಅವರನ್ನು ಸಿ.ಎಂ. ಹುದ್ದೆಗೆ ತಂದರು.ಅನಂತಕುಮಾರ್-ಬಿ.ಎಲ್.ಸಂತೋಷ್ ಸಮಾನ ಮನಸ್ಕರೇನಲ್ಲ.ಆದರೆ ಯಡಿಯೂರಪ್ಪ ಪ್ರಾಬಲ್ಯ ತಗ್ಗಿಸಲು ತಾತ್ಕಾಲಿಕವಾಗಿ ಒಂದಾಗಿದ್ದರು.ಲಿಂಗಾಯತ ಬಲ ತನ್ನೊಂದಿಗಿದೆ ಎಂಬ ಆತ್ಮವಿಶ್ವಾಸದಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದರು.ಬಸವರಾಜ ಬೊಮ್ಮಾಯಿ,ಲಕ್ಷ್ಮಣ ಸವದಿ,ಮುರುಗೇಶ ನಿರಾಣಿಯಂತಹ ಪ್ರಮುಖ ಲಿಂಗಾಯತ ನಾಯಕರು ಮತ್ತು ಫಲಾನುಭವಿಗಳು ಕೈ ಕೊಟ್ಟರು.ಕೆಲವರು ಅನಂತಕುಮಾರ್ ಮಾತು ಕೇಳಿ, ಇನ್ನೂ ಕೆಲವರು ಬಿ.ಎಲ್. ಸಂತೋಷ್ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಅನುಸರಿಸಲಿಲ್ಲ.
ಕೆಜೆಪಿ ಕಟ್ಟಿದ ಯಡಿಯೂರಪ್ಪ ತಾನು ಭಾವಿಸಿದ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.ಆದರೆ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ರಾಜ್ಯದಲ್ಲಿ ಬಿಜೆಪಿಗೆ ಡ್ಯಾಮೇಜ್ ಮಾಡಿದರು.‘ಲಿಂಗಾಯತರ’ ಕಣ್ಮಣಿ ಯಡಿಯೂರಪ್ಪ ಎನ್ನುವುದು ಕೆಜೆಪಿ ಫಲಿತಾಂಶ ತೋರಿಸಿಕೊಟ್ಟಿತು.ಆ ಫಲಿತಾಂಶ ಹೆಚ್ಚು ಕೆರಳಿಸಿದ್ದು ಬಿ.ಎಲ್.ಸಂತೋಷ್‌ಗೆ.ಯಡಿಯೂರಪ್ಪ ಹೊರತು ಪಡಿಸಿದ ಬಿಜೆಪಿ ಕಟ್ಟಲು ಅಂದಿನಿಂದ ಗಂಭೀರ ಪ್ರಯತ್ನ ನಡೆಸತೊಡಗಿದರು.ಮೊದಮೊದಲು ಜಾತಿ ಸಮೀಕರಣ ಮತ್ತು ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಬಿಜೆಪಿ ಗೆಲ್ಲಿಸಿಕೊಳ್ಳಲು ಯತ್ನಿಸಿದರು.ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್‌ಗೆ
ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಪ್ರಯೋಗ ಮಾಡಿದರು.2013ರ ವಿಧಾನಸಭಾ ಚುನಾವಣೆ ಎದುರಿಸುವಾಗ ಪ್ರಹ್ಲಾದ್ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು.ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ, ಆರ್. ಅಶೋಕ್, ಈಶ್ವರಪ್ಪ ಉಪಮುಖ್ಯಮಂತ್ರಿ ಹುದ್ದೆಯಲ್ಲಿದ್ದರು.ಬ್ರಾಹ್ಮಣ,ಲಿಂಗಾಯತ,ಕು
ರುಬ, ಒಕ್ಕಲಿಗ ಜಾತಿ ಸಮೀಕರಣ ಸರಿದೂಗಿಸಿರೂ ಬಿಜೆಪಿ ಆ ಚುನಾವಣೆುಲ್ಲಿ ಗೆಲುವು ಸಾಧಿಸಿದ್ದು ಕೇವಲ 40 ಸ್ಥಾನಗಳಲ್ಲಿ. ಆದರೆ ದೇವೇಗೌಡ -ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬಿಜೆಪಿಗೆ ಸಮವಾಗಿ 40 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.
ಯಡಿಯೂರಪ್ಪ ನೇತೃತ್ವದ ಕೆಜೆಪಿ ಪ್ರಯೋಗ ವಿಫಲವಾಯಿತೆಂದೇ ಸಂತೋಷ್ ಬೀಗಿದ್ದರು. ಅನಂತ ಕುಮಾರ್- ಸಂತೋಷ್ ಒಟ್ಟಿಗೆ ಸೇರಿಯೇ ಯಡಿಯೂರಪ್ಪ ಬಿಜೆಪಿ ಪ್ರವೇಶಕ್ಕೆ ಅಡ್ಡಗೋಡೆ ನಿರ್ಮಿಸಿದ್ದರು. 2014ರ ಲೋಕಸಭಾ ಚುನಾವಣೆ ಸಂತೋಷ ಲೆಕ್ಕಾಚಾರ ತಲೆ ಕೆಳಗಾಗುವಂತೆ ಮಾಡಿತು. ನರೆಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ನಿಗದಿಯಾದರು. ಮೋದಿ-ಅಮಿತ್ ಶಾ ಜೋಡಿಗೆ ಹೆಚ್ಚು ಸೀಟು ಗೆದ್ದು ದಿಲ್ಲಿ ಗದ್ದುಗೆ ಏರುವುದು ಅನಿವಾರ‌್ಯವಾಗಿತ್ತು. ವಾಜಪೇಯಿ, ಅಡ್ವಾಣಿಯಂತಹ ಅತಿರಥ ಮಹಾರಥರ ನೇತೃತ್ವದಲ್ಲಿ ಬಿಜೆಪಿ 197ರ ಸಂಖ್ಯೆ ದಾಟಲು ಸಾಧ್ಯವಾಗಿರಲಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಎಲ್.ಕೆ. ಅಡ್ವಾಣಿ ಪ್ರಧಾನಿ ಅಭ್ಯರ್ಥಿಯಾದರೂ ಮತದಾರರು ಬಿಜೆಪಿ ಪರ ಒಲವು ತೋರಲಿಲ್ಲ. ಹೀಗಾಗಿ ಮೋದಿ-ಅಮಿತ್ ಶಾ ಜೋಡಿಗೆ ಯಡಿಯೂರಪ್ಪ ಅನಿವಾರ‌್ಯವಾದರು. ದಿಲ್ಲಿ ಮಟ್ಟದಲ್ಲಿ ಮಾತು ಕತೆ ನಡೆದು ಬಿಜೆಪಿ ಸೇರಿದರು. ಆಗ ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಆಡಳಿತ ನಡೆಸುತ್ತಿತ್ತು. ಕೆಜೆಪಿಯಿಂದ ಬಂದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಲೋಕಸಭಾ ಅಭ್ಯರ್ಥಿಗಳಾದರು. 28 ಕ್ಷೇತ್ರಗಳ ಪೈಕಿ ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ರಚನೆಯಾಯಿತು. ಅನಂತ ಕುಮಾರ್ ಮಂತ್ರಿಯಾದರೂ ಪ್ರಮುಖ ಖಾತೆ ನೀಡಿರಲಿಲ್ಲ. ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿಸಿದರು. ಮೋದಿ-ಅಮಿತ್ ಶಾ ಗೌರವ ನೀಡತೋಡಗಿದರು. 2018ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದರು. ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಪ್ರಕಟಿಸಿದರು.
ಬಿ.ಎಲ್. ಸಂತೋಷ್ ಈ ನಿರ್ಧಾರದಿಂದ ಕುದಿಯತೊಡಗಿದ್ದರು. ಒಳಗೊಳಗೇ ಮಸಲತ್ತು ನಡೆಸತೊಡಗಿದರು. ಯಡಿಯೂರಪ್ಪ ಬಹುಮತದ ಸರಕಾರ ರಚಿಸುವಷ್ಟು ಶಾಸಕರನ್ನು ಗೆಲ್ಲಿಸಿಕೊಳ್ಳಲು ಹವಣಿಸುತ್ತಿದ್ದರು. ಸಂತೋಷ್-ಯಡಿಯೂರಪ್ಪ ಲೆಕ್ಕಾಟದಲ್ಲಿ 2018ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ದಕ್ಕಿಸಿಕೊಂಡಿದ್ದು 104 ಸೀಟುಗಳು ಮಾತ್ರ. ಒಂದು ವರ್ಷ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ಇತ್ತು. ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡದೇ ಹೋಗಿದ್ದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಕನಸು ಕಾಣಲೂ ಸಾಧ್ಯವಾಗುತ್ತಿರಲಿಲ್ಲ. 2019ರಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೂ ಮೊದಲ ದಿನದಿಂದಲೇ ಬಿ.ಎಲ್. ಸಂತೋಷ್ ಚಾಡಿಗೆ ಗುರಿಯಾಗಿದ್ದರು. ಈ ಬಾರಿ ಅನಂತ ಕುಮಾರ್ ಇರಲಿಲ್ಲ, ಅವರ ಜಾಗದಲ್ಲಿ ಪ್ರಹ್ಲಾದ ಜೋಶಿಯನ್ನು ಪ್ರತಿಷ್ಠಾಪಿಸುವ ಯೋಚನೆ ಇತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪರ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡ ಅಮಿತ್ ಶಾ-ಮೋದಿ ಜೋಡಿ ಬರೋಬ್ಬರಿ ರಾಜ್ಯದಿಂದ 26 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಸಂತೋಷ್ ಅನಂತಕುಮಾರ್‌ವಿರುದ್ಧ ಸೇಡು ತೀರಿಸಿಕೊಳ್ಳಲು ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಬೆಂಗಳೂರು ಲೋಕಸಭಾ (ದಕ್ಷಿಣ) ಕ್ಷೇತ್ರದ ಟಿಕೆಟ್ ತಪ್ಪಿಸಿದರು. ಅನಂತ ಕುಮಾರ್ ಶಿಷ್ಯ ಪ್ರಹ್ಲಾದ್ ಜೋಶಿ ಬಾಯಿ ಬಿಚ್ಚಲಿಲ್ಲ. ಪ್ರತಿ ಫಲವಾಗಿ ಮಂತ್ರಿಗಿರಿ ಗಿಟ್ಟಿಸಿಕೊಂಡರು. ಯಡಿಯೂರಪ್ಪ ಹೆಸರಿಗೆ ಮುಖ್ಯಮಂತ್ರಿ, ‘ಸಂತೋಷ್’ ಕ್ಯಾಬಿನೆಟ್ ಅಸ್ತಿತ್ವಕ್ಕೆ ಬಂತು. ಸೋತ ಲಕ್ಷ್ಮಣ ಸವದಿಗೆ ಸಂತೋಷ್ ಬಲದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ದೊರಕಿತು.
ಎರಡನೇ ಅವಧಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಗಳಿಗೆಯಿಂದಲೇ ಯಡಿಯೂರಪ್ಪ ಪದಚ್ಯುತಿಗೆ ಪ್ರಯತ್ನಗಳು ನಡೆದಿದ್ದವು. ಯತ್ತಾಳ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಟೀಕಿಸುತ್ತಿದ್ದರು. ಸಂತೋಷ್ ಶಿಷ್ಯ ನಳಿನ್ ಕುಮಾರ್ ಕಟೀಲು ರಾಜ್ಯಾಧ್ಯಕ್ಷರಾಗಿ ಭಿನ್ನಮತೀಯರನ್ನೇ ಬೆಂಬಲಿಸುತ್ತಿದ್ದರು. ನಾಮ್‌ಕೆವಾಸೆ ಸಿ.ಎಂ. ಆಗಿದ್ದ ಯಡಿಯೂರಪ್ಪ ಅವರನ್ನು ಮೋದಿ-ಅಮಿತ್ ಶಾ ಕಾಲಕಸ ಮಾಡಿಕೊಂಡಿದ್ದರು. ಸಂತೋಷ್ ಹೇಳಿದವರು ಮಂತ್ರಿ, ರಾಜ್ಯಸಭಾ, ವಿಧಾನ ಪರಿಷತ್ತಿನ ಸದಸ್ಯರಾಗತೊಡಗಿದರು. ಈರಣ್ಣ ಕಡಾಡಿ ಎಂಬ ಕತ್ತಿಗೆ ‘ರಾಜ್ಯಸಭಾ’ ಸದಸ್ಯ ಭಾಗ್ಯ ದೊರೆಯಿತು.
ಕೊನೆಗೂ ವಯಸ್ಸಿನ ನೆಪ ಮುಂದು ಮಾಡಿ ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಿದರು. ಸಂತೋಷ್ ಪ್ರಯತ್ನ ಯಶಸ್ವಿಯಾಯಿತು. ಆದರೆ ಜನತಾ ಪರಿವಾರ ಮೂಲ ಬಸವರಾಜ ಬೊಮ್ಮಾಯಿಯನ್ನು ಯಡಿಯೂರಪ್ಪ ಮಾತಿಗೆ ಕಟ್ಟು ಬಿದ್ದು ಮುಖ್ಯಮಂತ್ರಿ ಮಾಡಿದರು. ಲಗಾಮು ಮತ್ತು ಚಾಟಿ ಸಂತೋಷ್ ಕೈಗೆ ಒಪ್ಪಿಸಿದರು. ಬಿ.ಎಲ್. ಸಂತೋಷ್ ಸಿಎಂ ಆಗಿದ್ದರೂ ಇಷ್ಟು ಪ್ರಮಾಣದ ‘ಮತೀಯವಾದಿ’ ಸರಕಾರ ಇರುತ್ತಿರಲಿಲ್ಲವೇನೂ?
ಅಧಿಕಾರದ ಆಸೆಗಾಗಿ ಸಂತೋಷ್ ಆಡಿಸಿದಂತೆ ಆಡಿ ಬೊಮ್ಮಾಯಿ ಅಡ್ಡ ಹೆಸರಿಗೆ ಕಳಂಕ ಅಂಟಿಸಿದರು. 2023ರ ವಿಧಾನ ಸಭೆ ಚುಣಾವಣೆಯ ಸಂಪೂರ್ಣ ಹೊಣೆಗಾರಿಕೆ ಬಿ.ಎಲ್. ಸಂತೋಷ್‌ಗೆ ಒಪ್ಪಿಸಿದರು. ಜಾತಿ ಸಮೀಕರಣ ಮತ್ತು ರಾಜಕೀಯ ಪ್ರಾತಿನಿಧ್ಯದ ಹಾದಿ ತೊರೆದು ಹಿಂದೂ-ಮುಸ್ಲಿಮ್ ಮತ ಧ್ರುವೀಕರಣದ ಕೋಮುವಾದಿ ರಾಜಕಾರಣ ಮಾಡಲು ‘ಸಂತೋಷ್’ ಸರಕಾರ ಮತ್ತು ಪಕ್ಷದ ಯಂತ್ರಾಂಗವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಒಂದೊಂದೇ ಪ್ರಯೋಗ ಶುರು ಮಾಡಿಸಿದರು. ಹಿಂದಿ-ಇಂಗ್ಲಿಷ್ ಬಾರದ ಸಿ.ಟಿ.ರವಿಯನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿಸಿದರು. ಬೆಂಕಿಯುಗುಳುವ ನಾಯಕರನ್ನು ಸ್ಟಾರ್ ಪ್ರಚಾರಕನ್ನಾಗಿಸಿದರು. ಯತ್ನಾಳ್, ಸಿ.ಟಿ.ರವಿ, ಅಶ್ವತ್ಥ್ಥ್ ನಾರಾಯಣ, ರೋಹಿತ್ ಚಕ್ರತೀರ್ಥ, ಚಕ್ರವರ್ತಿ ಸೂಲಿಬೆಲೆ ಮುಂಚೂಣಿಗೆ ಬಂದರು.
ಯುಡಿಯೂರಪ್ಪ ನಾಯಕತ್ವ ಮತ್ತು ಲಿಂಗಾಯತ ಪ್ರಾಬಲ್ಯವಿಲ್ಲದ ಚುಣಾವಣೆ ನಡೆಸಿ ಯಶಸ್ಸು ಪಡೆಯಬೇಕೆಂಬುದು ಸಂತೋಷ್ ಕನಸಾಗಿತ್ತು. ಅಣ್ಣಾಮಲೈಯಂತಹ ಎಳಸು ನಿರ್ಣಾಯಕ ಸ್ಥಾನ ಪಡೆಯತೊಡಗಿದರು. ಸಂತೋಷ್ ಕಾರಣಕ್ಕೆ ಹಿಂದೂ-ಮುಸ್ಲಿಮ್ ಧ್ರುವೀಕರಣ ಆಧಾರದಲ್ಲಿ 150 ಸೀಟುಗಳ ಗುರಿ ಇಟ್ಟುಕೊಂಡಿದ್ದ ಸಂತೋಷ್ ವಿಚಿತ್ರ ಮತ್ತು ಜೀವ ವಿರೋಧಿ ಪ್ರಯೋಗಗಳಿಂದ ಮುಗ್ಗರಿಸಿದರು. 2024ರ ಲೋಕಸಭೆ ಚುಣಾವಣೆ ಬರುತ್ತಿದ್ದಂತೆ ಮೋದಿ-ಅಮಿತ್‌ಶಾಗೆ ಮತ್ತೆ ಯಡಿಯೂರಪ್ಪ ನೆನಪಾದರು. ಜೊತೆಗೆ ದೇವೇಗೌಡ-ಕುಮಾರಸ್ವಾಮಿ ಅಪ್ಪ-ಮಕ್ಕಳ ಜೋಡಿಯೂ ಅನಿವಾರ್ಯವಾಯಿತು. ಬಿ.ಎಲ್.ಸಂತೋಷ್ ಹೊರಗಿಟ್ಟು ಲೋಕಸಭೆಯ ಚುನಾವಣೆ ಗೆದ್ದಿದ್ದಾಯಿತು. ಆದರೆ ಆಟ ಅಷ್ಟಕ್ಕೇ ಮುಗಿಯಲಿಲ್ಲ. ವಿ.ಸೋಮಣ್ಣರನ್ನು ಕೇಂದ್ರ ಮಂತ್ರಿಯನ್ನಾಗಿಸಿ ಸಂತೋಷ್ ತನ್ನ ಶಕ್ತಿ ಏನೆಂಬುದು ರುಜುವಾತುಪಡಿಸಿದರು. ಯಡಿಯೂರಪ್ಪ ಮಗನನ್ನು ರಾಜ್ಯಾಧ್ಯಕ್ಷನನ್ನಾಗಿಸಿ ಬೀಗಿದರೂ ಸಂತೋಷ್ ಆಟಕ್ಕೆ ಬ್ರೇಕ್ ಹಾಕಿಸಲು ಸಾಧ್ಯವಾಗಲಿಲ್ಲ . ಮೋದಿ-ಅಮಿತ್‌ಶಾ ಸಂತೋಷ್ ಮೂಲಕ ಯಡಿಯೂರಪ್ಪ-ವಿಜಯೇಂದ್ರರನ್ನು ನಿಯಂತ್ರಿಸುತ್ತಿದ್ದಾರೆ. ಸಂತೋಷ್ ಸ್ಕ್ರಿಪ್ಟ್ ಬರೆದುಕೊಟ್ಟು ಯತ್ನಾಳ್-ರಮೇಶ್ ಜಾರಕಿಹೊಳಿ ಮೂಲಕ ಅಪ್ಪ-ಮಕ್ಕಳನ್ನು ದುರ್ಬಲಗೊಳಿಸಲು ನಿತ್ಯ ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ-ವಿಜಯೇಂದ್ರ ನಾಯಕತ್ವ ಮತ್ತು ಲಿಂಗಾಯತ ಪ್ರಾಬಲ್ಯ ಕುಗ್ಗಿಸುವುದು ಸಂತೋಷ್ ಗುರಿ. ಸಂತೋಷ್ ಕೈ ಮೇಲಾಗದಂತೆ ನೋಡಿಕೊಳ್ಳುವುದು ಯಡಿಯೂರಪ್ಪ ಅಂತಿಮ ಗುರಿ.
ಉಪಚುಣಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಹೀನಾಯವಾಗಿ ಸೋಲಿಸುವುದು ಸಂತೋಷ್ ಬಣದ ಧ್ಯೇಯವಾಗಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್‌ಗೆ ಟಿಕೇಟ್ ಕೊಟ್ಟಿದ್ದರೆ ಸಂತೋಷ್ ಬಣ ಮತ್ತು ಆರೆಸ್ಸೆಸ್ ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ಈಗ ಆ ಟೀಂ ನಿಖಿಲ್ ಕುಮಾರಸ್ವಾಮಿ, ಭರತ್ ಬೊಮ್ಮಾಯಿ ಮತ್ತು ಬಂಗಾರು ಹನುಮಂತು ಅವರನ್ನು ಸೋಲಿಸಲು ಕ್ರಿಯಾಶೀಲವಾಗುತ್ತದೆ. ಮೂರೂ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಸೋತರೆ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬಹುದು. ಆ ಜಾಗಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಸಂತೋಷ್ ಸೂಚಿಸುವ ಯಾರನ್ನಾದರೂ ಪ್ರತಿಷ್ಠಾಪಿಸಬಹುದು. ಬಿಜೆಪಿ ಮೇಲಿನ ಯಡಿಯೂರಪ್ಪ ಹಿಡಿತ ಕೊನೆಗೊಳಿಸುವುದು ಆ ಬಣದ ಹಠ. ಪರಸ್ಪರ ಮುಗಿಸಲು ಬಿಜೆಪಿಯಲ್ಲಿ ಎರಡು ಬಣಗಳು ಕ್ರಿಯಾಶೀಲವಾಗಿವೆ. ಈ ಯುದ್ದದಲ್ಲಿ ಬಿಜೆಪಿಯೇ ನಿರ್ನಾಮಗೊಳ್ಳಬಹುದು. ಕಾಂಗ್ರೆಸ್‌ನವರು ತುಸು ಈ ಕಡೆ ಗಮನಹರಿಸಿ ಅಂತಃಕಲಹದ ಲಾಭ ಪಡೆಯಲು ಮುಂದಾಗಬೇಕು.
ಮೋದಿ ಪ್ರಧಾನಿಯಾಗಿರುವ ತನಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಬಹುದು. ಸಂತೋಷ್ ಬಣದ ಮೇಲುಗೈಯಾದರೂ ಜೆಡಿಎಸ್ ವಿಚಲಿತವಾಗುತ್ತದೆ. ಯತ್ನಾಳ್-ವಿಜಯೇಂದ್ರ ನೆಪವಾಗಿ ಆರೆಸ್ಸೆಸ್ ಬಿಜೆಪಿ ಅಂತಃಕಲಹ ತಾರಕಕ್ಕೇರಿದೆ. ಜೆಡಿಎಸ್ ಅವಕಾಶವಾದಿಯಾಗಿ ಅವರೊಂದಿಗೆ ಕೈ ಜೋಡಿಸಿದೆಯಷ್ಟೇ. ಕಾಂಗ್ರೆಸ್ ಪಕ್ಷ ಮತ್ತು ಸರಕಾರ ಜನಪರವಾಗಿ ಕ್ರಿಯಾಶೀಲವಾದರೆ 2028ರ ಚುನಾವಣೆಯಲ್ಲೂ ಬಿಜೆಪಿಯನ್ನು ಪ್ರತಿಪಕ್ಷದಲ್ಲೇ ಕೂರಿಸಬಹುದು. ಆಡಳಿತ ವಿರೋಧಿ ಅಲೆ ಮೊದಲು ಶುರುವಾಗುವುದು ಪಕ್ಷದ ಕಾರ್ಯಕರ್ತರ ವಲಯದಲ್ಲಿ. ಕಾಂಗ್ರೆಸ್ ಪಕ್ಷ ತುರ್ತು ಎಚ್ಚರಿಕೆ ವಹಿಸಬೇಕು. ಸೈದ್ಧ್ದಾಂತಿಕವಾಗಿ ಪಕ್ಷ ಮತ್ತು ಕಾರ್ಯಕರ್ತರು ಗಟ್ಟಿಯಾಗಿದ್ದರೆ ಕಾಂಗ್ರೆಸ್ ಆಡಳಿತ ಅಬಾಧಿತವಾಗಿ ಮುಂದುವರಿಯುತ್ತದೆ. ವಕ್ಫ್ ವಿವಾದದ ಕ್ರೆಡಿಟ್ ಪಡೆದುಕೊಳ್ಳಲು ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಭದ್ರವಾಗಿ ನೆಲೆೆಯೂರಲು ಅತ್ಯಂತ ಸೂಕ್ತ ಕಾಲ ಇದು.