ಸಾಮರಸ್ಯ ಕೆಡಿಸುತ್ತಿರುವ ಚರಿತ್ರೆಯ ಕಹಿ ನೆನಪುಗಳು

ರಾಜಸತ್ತೆಯ ವ್ಯವಸ್ಥೆಯಲ್ಲಿ ಹಿಂದೂ ದೊರೆ, ಮುಸ್ಲಿಮ್ ದೊರೆ ಎಂದು ಪ್ರತ್ಯೇಕಿಸಿ ನೋಡುವುದೇ ತಪ್ಪು. ಹಾಗೆ ನೋಡಿದರೆ; ಟಿಪ್ಪು, ನಿಝಾಮ, ಅಷ್ಟು ಮಾತ್ರವಲ್ಲ ದಿಲ್ಲಿ ದೊರೆ ಅಕ್ಬರನ ಆಸ್ಥಾನದಲ್ಲೂ ಬ್ರಾಹ್ಮಣ ಸಮುದಾಯದ ಮಂತ್ರಿಗಳು ಇರುತ್ತಿದ್ದರು. ದಿವಾನ್ ಪೂರ್ಣಯ್ಯನ ತಪ್ಪಿಗಾಗಿ ಇಂದಿನ ಬ್ರಾಹ್ಮಣ ಸಮುದಾಯವನ್ನು ದೂಷಿಸುವುದು ಹೇಗೆ ತಪ್ಪೋ, ಹಾಗೆಯೇ ಮುಸ್ಲಿಮ್ ದೊರೆಗಳ ತಪ್ಪು ನಿರ್ಧಾರಗಳಿಗೆ ಇಂದಿನ ಮುಸ್ಲಿಮ್ ಸಮುದಾಯವನ್ನು ಹೊಣೆಗಾರರನ್ನಾಗಿಸುವುದೂ ತಪ್ಪೇ. ನಮ್ಮನ್ನು ಇನ್ನೂರು ವರ್ಷಗಳ ಕಾಲ ಅತ್ಯಂತ ಕ್ರೂರವಾಗಿ ಆಳಿದ ಬ್ರಿಟಿಷರ ದೇಶದಲ್ಲಿ ನಮ್ಮ ಮಕ್ಕಳು ವಾಸಿಸುವುದು, ಒಡನಾಡುವುದು ಹೆಮ್ಮೆಯ ಪ್ರತೀಕ ಎಂದು ಭಾವಿಸಿದ್ದೇವೆ. ಆದರೆ ರಜಾಕಾರರ ಕುಕೃತ್ಯದ ಕಹಿನೆನಪುಗಳನ್ನು ನಮ್ಮ ಕಾಲದ ಮುಸ್ಲಿಮ್ ಸಮುದಾಯದ ತಲೆಗೆ ಯಾಕೆ ಕಟ್ಟಬೇಕು?

Update: 2024-11-23 04:00 GMT

ಚರಿತ್ರೆಯ ಕಹಿ ನೆನಪುಗಳು ಕೆಲವರಿಗೆ ಬಂಡವಾಳ. ಅವರ ರಾಜಕೀಯ ಅಸ್ತಿತ್ವವೇ ಹಳೆಯ ಗಾಯಗಳನ್ನು ಕೆರೆದು ರಕ್ತ ಬರುವಂತೆ ಮಾಡುವುದರಲ್ಲಿದೆ. ರಾಜಕೀಯದ ನೆನಪುಗಳನ್ನು ಮರು ಸೃಷ್ಟಿಸಿ ಸೆೇಡಿನ ಕಥಾನಕ ಪ್ರಚಾರ ಮಾಡಿ ರಾಜಕೀಯ ಫಸಲು ತೆಗೆಯುವುದು ಅವರ ಉದ್ದೇಶ. ಚರಿತ್ರೆಯ ಕಹಿ ನೆನಪುಗಳು ಮರು ಸೃಷ್ಟಿ ಮಾಡುವ ಕೆಟ್ಟ ಚಾಳಿ ಉಳಿಸಿಕೊಂಡರೆ ವರ್ತಮಾನ ಎಂಬುದು ಅಕ್ಷರಶಃ ರಣರಂಗವಾಗಿಬಿಡುತ್ತದೆ. ಸೈತಾನನ ಕುಣಿತ ಸಾರ್ವಜನಿಕ ಬದುಕನ್ನಾವರಿಸಿಕೊಳ್ಳುತ್ತದೆ. ಕಣ್ಣೆದುರಿಗಿನ ಕಟುವಾಸ್ತವಕ್ಕೆ ಬಣ್ಣ ತುಂಬಿ ಬದುಕು ಸಹ್ಯವಾಗುವಂತೆ ಮಾಡುವುದು ಅಧಿಕಾರ ರಾಜಕಾರಣ ದಲ್ಲಿರುವವರ ಆದ್ಯ ಕರ್ತವ್ಯವಾಗಬೇಕು. ನಮ್ಮ ಯುವ ಪೀಳಿಗೆಗೆ ಚಂದವಾಗಿ ಬದುಕುವುದು ಬೇಕಾಗಿದೆ. ತಂಟೆ ತಕರಾರು ಇಲ್ಲದ ದ್ವೇಷ-ಅಸೂಯೆಗೆ ಅವಕಾಶ ಮಾಡಿಕೊಡದ ಸುಂದರ ಸಾಮಾಜಿಕ ಬದುಕಿನಲ್ಲಿ ನಕ್ಕು ನಲಿದು ಜೀವನ ನಡೆಸಬೇಕಾಗಿದೆ. ವಿಶೇಷವಾಗಿ ಇಂಗ್ಲೆಂಡ್ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯರು ತಮ್ಮ ಪೂರ್ವಿಕರ ಗಾಯಗಳನ್ನು ಕೆರೆದುಕೊಂಡರೆ ಅಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುವುದೇ ಇಲ್ಲ.

ಇನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರು ಭಾರತೀಯರನ್ನು ಅಕ್ಷರಶಃ ಪಶು ಪಕ್ಷಿಗಳಂತೆ ನಡೆಸಿಕೊಂಡಿದ್ದಾರೆ. ಜಲಿಯಾನ್ ವಾಲಾಬಾಗ್ ಹತ್ಯಾಕಾಂಡದ ಕಥಾನಕವನ್ನು ಮರು ಸೃಷ್ಟಿಸಿ ಇಂಗ್ಲೆಂಡ್ನಲ್ಲಿ ವಾಸವಿರುವ ಭಾರತೀಯರಿಗೆ ತೋರಿಸಿದರೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಾರೆ. ಆದರೆ ಅದರಿಂದ ಬರುವ ಲಾಭವಾದರೂ ಏನು? ಭಾರತ ಮಾತ್ರವಲ್ಲ; ವಸಾಹತುಶಾಹಿಗಳಿಂದ ಆಳಿಸಿಕೊಂಡ ಎಲ್ಲಾ ದೇಶಗಳ ನಾಗರಿಕರ ಅನುಭವ ಅದೇ ಆಗಿರುತ್ತದೆ. ಬಿಳಿಯರಿಂದ ಬರ್ಬರ ಹಿಂಸೆಗೊಳಗಾದ ಕರಿಯರು ಹಳೆಯ ಗಾಯಗಳನ್ನು ಕೆರೆದುಕೊಂಡು ಕ್ರುದ್ಧರಾದರೆ ಅರಾಜಕತೆಯೇ ಸೃಷ್ಟಿಯಾಗುತ್ತದೆ. ಬ್ರಿಟಿಷ್ ಆಳ್ವಿಕೆಯ ಭಾರತದಲ್ಲಿ ಸ್ವಾಭಿಮಾನ ಮೆರೆದ ರಾಜರು ವಿಪರೀತ ತೊಂದರೆ ಅನುಭವಿಸಿರಬೇಕಾದರೆ; ಜನಸಾಮಾನ್ಯರ ಪಾಡು ಏನಾಗಿರಬೇಡ? ಆ ಕಥೆಗಳನ್ನು ಕೇಳಿಸಿಕೊಂಡರೆ ರಕ್ತ ಕುದಿಯುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲೆಕ್ಕವಿಲ್ಲದಷ್ಟು ಹೋರಾಟಗಾರರು ವೀರ ಮರಣವನ್ನಪ್ಪಿದ್ದಾರೆ. ಅಸಂಖ್ಯಾತ ವೀರರು ಬ್ರಿಟಿಷ್ ಕುಣಿಕೆಗೆ ಕೊರಳು ಕೊಟ್ಟಿದ್ದಾರೆ. ಸಂಗೊಳ್ಳಿ ರಾಯಣ್ಣ, ಕಿತ್ತೂರ ಚೆನ್ನಮ್ಮರ ಕಥೆಗಳೇ ಆಕ್ರೋಶಗೊಳ್ಳುವಂತೆ ಮಾಡುತ್ತವೆ. ಪಶು ಪಕ್ಷಿಗಳಿಗಿಂತಲೂ ಕಡೆಯಾಗಿ ಜೀವ ಕಳೆದುಕೊಂಡಿರುವ ಸಾಮಾನ್ಯ ಭಾರತೀಯರ ಸಂಖ್ಯೆ ಲೆಕ್ಕಕ್ಕೆ ಸಿಗುವುದಿಲ್ಲ.

ಬ್ರಿಟಿಷ್ ಆಳ್ವಿಕೆಯ ಭಾರತೀಯ ಜನಜೀವನ ಕುರಿತು ಕಥೆ -ಕಾದಂಬರಿ ಮತ್ತು ಇತಿಹಾಸ ಪುಸ್ತಕಗಳು ಪ್ರಕಟವಾಗಿವೆ. ಆ ಎಲ್ಲಾ ಕೃತಿಗಳನ್ನು ಭಾರತೀಯರು, ಬ್ರಿಟಿಷರು ಹಾಗೂ ಬೇರೆಲ್ಲ ದೇಶದವರು ಓದಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಹಿಂಸೆಗೊಳಗಾದ ಭಾರತೀಯರ ವಂಶಸ್ಥರು ಮತ್ತು ಹಿಂಸೆ ನೀಡಿದ ಬ್ರಿಟಿಷ್ ಅಧಿಕಾರಿಗಳ ಮೊಮ್ಮಕ್ಕಳೂ ವಿಕೃತಿಯ ವಿರಾಟ್ ಸ್ವರೂಪವನ್ನು ಓದಿ ತಿಳಿದುಕೊಂಡಿರುತ್ತಾರೆ. ಭಾರತೀಯರ ಕಣ್ಣಲ್ಲಿ ನೀರು, ಎದೆಯಲ್ಲಿ ಆಕ್ರೋಶ, ಪೂರ್ವಿಕರ ಬಗ್ಗೆ ಹೆಮ್ಮೆ ಅಭಿಮಾನ ಮೂಡಿರುತ್ತದೆ. ಅದರಾಚೆ ಅವರ್ಯಾರೂ ಈಗಿನ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂದು ಯೋಚಿಸುವುದಿಲ್ಲ. ಹಿಂಸೆಗೆ ಕಾರಣವಾದ ಅಧಿಕಾರಿಯ ವಂಶಸ್ಥರು ಆ ಕಥಾನಕವನ್ನು ಓದಿದರೆ ಹೇಗೆ ಪ್ರತಿಕ್ರಿಯಿಸಬಹುದು? ಓದಿದವ ಸೊಕ್ಕಿನ ಮನುಷ್ಯನಾಗಿದ್ದರೆ ತನ್ನ ಹಿರೀಕರ ಕೃತ್ಯದ ಬಗ್ಗೆ ಹೆಮ್ಮೆಪಡಬಹುದು. ಸೂಕ್ಷ್ಮ ಸಂವೇದನಾಶೀಲನಾಗಿದ್ದರೆ ತುಸು ಹೊತ್ತು ಅಪರಾಧಿಪ್ರಜ್ಞೆಯಿಂದ ನರಳಬಹುದು. ದುರದೃಷ್ಟಕರ ಎಂದು ಲೊಚಗುಟ್ಟಬಹುದು. ಚರಿತ್ರೆಯಲ್ಲಿನ ತಪ್ಪುಗಳನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಚರಿತ್ರೆಯ ಭಾಗವಾಗಿರುವ ಕಹಿ ನೆನಪುಗಳು ಗಾಢ ವಿಶಾದವನ್ನುಂಟುಮಾಡಬಹುದು. ಅದಕ್ಕೂ ಮೀರಿ ದ್ವೇಷ ಭಾವನೆ ಇಟ್ಟುಕೊಂಡರೆ ಅನಾಗರಿಕ ನಡೆ ಎನಿಸಿಕೊಳ್ಳುತ್ತದೆ.

ಹಾಗೆ ನೋಡಿದರೆ ಭಾರತದ ಕುಲೀನ ವರ್ಗ ಬ್ರಿಟಿಷರು ನಮ್ಮನ್ನಾಳುವ ಹೊತ್ತಿನಲ್ಲೂ ಇಂಗ್ಲೆಂಡಿಗೆ ಹೋಗಿ ಶಿಕ್ಷಣ ಪಡೆದು ಬರುತ್ತಿದ್ದರು. ಹೆಮ್ಮೆಯಿಂದ ಬೀಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಭಾರತದ ಬಡ ಮಧ್ಯಮ ವರ್ಗದವರೂ ಉನ್ನತ ಶಿಕ್ಷಣವನ್ನು ಇಂಗ್ಲೆಂಡ್ನಲ್ಲಿ ಪೂರೈಸಿ, ಅಲ್ಲೇ ನೆಲೆಸುವ ಅವಕಾಶ ಪಡೆದಿದ್ದಾರೆ. ಭಾರತೀಯರು, ಬ್ರಿಟಿಷರು ಸ್ನೇಹ ಭಾವದಿಂದ ಕೂಡಿ ಬದುಕುತ್ತಿದ್ದಾರೆ. ಆಫ್ರಿಕಾ ಸೇರಿದಂತೆ ಬಹುಪಾಲು ರಾಷ್ಟ್ರಗಳ ವಿದ್ಯಾವಂತ ಯುವ ಪೀಳಿಗೆ ಒಂದು ಕಾಲದಲ್ಲಿ ತಮ್ಮ ಪೂರ್ವಿಕರ ರಕ್ತ ಹೀರಿದವರ ದೇಶದಲ್ಲಿ ಸೌಹಾರ್ದಯುತವಾಗಿ ಬದುಕು ನಡೆಸುತ್ತಿದ್ದಾರೆ. ಕೆಲವರು ಮದುವೆ ಸಂಬಂಧ ಬೆಳೆಸಿ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲಾ ದೇಶಗಳ ಯುವ ಸಮುದಾಯಕ್ಕೆ ನೆಮ್ಮದಿಯ ಜೀವನ ಮೊದಲ ಆದ್ಯತೆಯಾಗಿದೆ. ದೇವರು, ಧರ್ಮ, ಮತ, ಪಂಥ ತೀರಾ ಖಾಸಗಿ ಬದುಕಿನ ಭಾಗ ಎಂದು ಭಾವಿಸಿದ್ದಾರೆ. ಇಂಗ್ಲೆಂಡ್ನಲ್ಲಿ ಎಲ್ಲಾ ದೇಶದ ಜನ ನೆಲೆಸಿದ್ದಾರೆ. ಚರಿತ್ರೆಯ ಪುಟಗಳನ್ನು ಕಪ್ಪು ಬಿಳುಪಿನಲ್ಲಿ ಓದಿದಾಗಲೂ ಬ್ರಿಟಿಷರ ಹಿರೀಕರ ಕುಕೃತ್ಯಗಳಿಗೆ ಈಗಿನ ಇಂಗ್ಲೆಂಡ್ ಜನರನ್ನು ಹೊಣೆಗಾರರನ್ನಾಗಿಸಲಾಗದು. ಅಷ್ಟಕ್ಕೂ ವಾಸ್ತವದಲ್ಲಿ ಬದುಕು ಕಪ್ಪು ಬಿಳುಪು ರೂಪದಲ್ಲಿ ಇರುವುದಿಲ್ಲ. ಕೊಲೆಗಡುಕ ಬ್ರಿಟಿಷ್ ಅಧಿಕಾರಿಗಳು ಇದ್ದಂತೆ ಅನೇಕ ಭಾಷಾ ವಿಜ್ಞಾನಿಗಳು ಅವರೇ ಆಗಿದ್ದರು. ಕಿಟಲ್ ಅವರನ್ನು ಕನ್ನಡಿಗರು ಪ್ರೀತಿಸದೇ ಇರಲು ಸಾಧ್ಯವೇ?

ಹಿರಿಯ ನಟ ಆಮಿರ್ ಖಾನ್ ನಟಿಸಿರುವ ಹಿಂದಿ ಚಲನಚಿತ್ರ ‘ಲಗಾನ್’ ಎಲ್ಲರೂ ಮೆಚ್ಚಿಕೊಂಡಿರುವ ಅಪರೂಪದ ಚಿತ್ರ. ಬ್ರಿಟಿಷರು ಬರಗಾಲದಲ್ಲೂ ಹೆಚ್ಚು ತೆರಿಗೆ ವಿಧಿಸಿರುತ್ತಾರೆ. ತೆರಿಗೆ ವಿನಾಯಿತಿ ಸಿಗಬೇಕೆಂದರೆ; ಬ್ರಿಟಿಷ್ ಕ್ರಿಕೆಟ್ ತಂಡದ ವಿರುದ್ಧ ಭಾರತೀಯ ತಂಡದವರು ಆಟ ಆಡಿ ಗೆಲ್ಲ ಬೇಕಾಗಿರುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಿದ ಭುವನ್ ನೇತೃತ್ವದ ಭಾರತೀಯ ತಂಡಕ್ಕೆ ಕ್ರಿಕೆಟ್ ಅಪರಿಚಿತ ಆಟ. ಭುವನ್ ಸಾಹಸವನ್ನು ವ್ಯಕ್ತಿಗತವಾಗಿ ಮೆಚ್ಚಿಕೊಳ್ಳುತ್ತಿದ್ದ ಬ್ರಿಟಿಷ್ ಮಹಿಳೆ ಎಲಿಝಬೆತ್ ರಸ್ಸೆಲ್ ಗುಟ್ಟಾಗಿ ಬಂದು ಕೆಲವು ಕ್ರಿಕೆಟ್ ಟೆಕ್ನಿಕ್ಗಳನ್ನು ಹೇಳಿಕೊಡುತ್ತಾಳೆ. ಭಾರತೀಯ ತಂಡ ಆ ಆಟದಲ್ಲಿ ಗೆಲುವು ಸಾಧಿಸುತ್ತದೆ. ಆ ಗೆಲುವಿನಲ್ಲಿ ಎಲಿಝಬೆತ್ ಪಾತ್ರ ಬಹಳ ದೊಡ್ಡದು. ಬ್ರಿಟಿಷ್ ಅಧಿಕಾರಶಾಹಿಯ ಜನವಿರೋಧಿ ಆಡಳಿತ ಒಂದು ತೂಕವಾದರೆ, ಎಲಿಝಬೆತ್ಳ ಮಾನವೀಯ ತುಡಿತ ಅಳತೆಗೆ ಮೀರಿದ್ದು. ಬ್ರಿಟಿಷ್ ಅಧಿಕಾರಿಗಳ ಕ್ರೌರ್ಯ ಅಕ್ಷಮ್ಯ ಎಂಬುದನ್ನು ಒಪ್ಪಿಕೊಳ್ಳುತ್ತಲೇ ಸಾರ್ವಜನಿಕ ಬದುಕಿನಲ್ಲಿ ಬೆರೆತು ಮಾನವೀಯತೆ ತೋರಿದ ಅನೇಕರನ್ನು ಬ್ರಿಟಿಷರು ಎಂಬ ಕಾರಣಕ್ಕೇ ದ್ವೇಷಿಸಲಾಗದು. ಎಲ್ಲಾ ದೇಶಗಳ ಚರಿತ್ರೆಯಲ್ಲೂ ಕಹಿ ನೆನಪುಗಳ ಖಜಾನೆಯೇ ಇದೆ. ಅದರಿಂದ ಪಾಠ ಕಲಿತರೆ ಅತ್ಯುತ್ತಮ ನಾಗರಿಕರಾಗಿ ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ. ಹಳೆ ಗಾಯಗಳನ್ನು ಕೆರೆಯುತ್ತಾ ಕೂತರೆ ರಕ್ತಸಿಕ್ತ ಇತಿಹಾಸವನ್ನು, ಜನಾಂಗೀಯ ದ್ವೇಷದ ಕಥಾನಕವನ್ನು ಮರು ಸೃಷ್ಟಿಸಿಕೊಂಡು ವರ್ತಮಾನವನ್ನು ನರಕವನ್ನಾಗಿಸುತ್ತೇವೆ.

ಭಾರತದ ಚರಿತ್ರೆಯುದ್ದಕ್ಕೂ ಕಹಿ ನೆನಪುಗಳ ಸರಮಾಲೆ ಕಾಣಿಸುತ್ತದೆ. ಅದನ್ನು ಎರಡು ಪ್ರಭುತ್ವಗಳ ನಡುವಿನ ಅಧಿಕಾರ ಲಾಲಸೆಯೇ ಕಾರಣವಾದ ಸಂಘರ್ಷ ಎಂದು ಭಾವಿಸಬಹುದು. ಆ ರಾಜರುಗಳು ಪ್ರತಿನಿಧಿಸುತ್ತಿರುವ ಜಾತಿ, ಧರ್ಮ, ಮತ, ಪಂಥಗಳನ್ನು ಪರಿಗಣನೆಗೆ ತೆಗೆದುಕೊಂಡು ಜನಾಂಗೀಯ ಅಥವಾ ಧರ್ಮಗಳ ಸಂಘರ್ಷವನ್ನಾಗಿ ವ್ಯಾಖ್ಯಾನಿಸಬಹುದು. ಆದರೆ ಭಾರತದ ಚರಿತ್ರೆಯಲ್ಲಿ ರಾಜರುಗಳ ಸಂಘರ್ಷದ ಸ್ವರೂಪ ಸಂಕೀರ್ಣವಾಗಿದೆ. ಮೊಗಲರ-ರಜಪೂತರ ಕದನಗಳು ಇತಿಹಾಸ ಪ್ರಸಿದ್ಧವಾಗಿವೆ. ಇಷ್ಟನ್ನೇ ಪರಿಗಣನೆಗೆ ತೆಗೆದುಕೊಂಡರೆ ಹಿಂದೂ-ಮುಸ್ಲಿಮ್ ಸಂಘರ್ಷದ ಅದ್ಭುತ ಕಥಾನಕ ಸೃಷ್ಟಿಸಿ ಎಂದೆಂದಿಗೂ ಲಾಭ ಮಾಡಿಕೊಳ್ಳಬಹುದು. ಆದರೆ ರಜಪೂತ ಸಮುದಾಯದ ಜೋಧಾಬಾಯಿ ಮೊಗಲ್ ಸಾಮ್ರಾಜ್ಯದ ಬಾದಷಹಾ ಅಕ್ಬರ್ನನ್ನು ಅದಮ್ಯವಾಗಿ ಪ್ರೀತಿಸಿದ್ದು, ಗಡಿ ಎಲ್ಲೆ ಕಟ್ಟುಗಳನ್ನು ದಾಟಿ ದಿಲ್ಲಿಯ ದೊರೆಸಾನಿಯಾದದ್ದು, ಮಕ್ಕಳ ಹೆತ್ತು ತುಂಬು ಕುಟುಂಬ ಜೀವನ ನಡೆಸಿದ್ದು, ಅಂತರಂಗ ಮತ್ತು ಬಹಿರಂಗದ ಕೃಷ್ಣ ಭಕ್ತಿಯನ್ನು ದಿಲ್ಲಿ ಸುಲ್ತಾನರ ಮಹಲಿನಲ್ಲೂ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಹೇಗೆ? ಔರಂಗಜೇಬನ ಧರ್ಮಾಂಧತೆಗೆ ಸಹೋದರ ದಾರಾಶಿಕೊ ಮತ್ತು ಸೂಫಿಗಳು ಬಲಿಯಾದದ್ದು ಏನನ್ನು ಪತಿಪಾದಿಸುತ್ತದೆ? ಅಕ್ಕಮಹಾದೇವಿ, ಮೀರಾ ನಿರಂತರ ಶೋಷಣೆಯ ಭಾಗವಾಗಲು ಒಪ್ಪದೆ ಧಿಕ್ಕರಿಸಿ ಬಂದಿದ್ದು ಸ್ವಧರ್ಮ, ಸ್ವಜಾತಿಯ ‘ಗಂಡ’ ಎಂಬ ಅಹಂಕಾರ ಭಾವವನ್ನು. ಅಕ್ಕ, ಮೀರಾ ಅವರದು ಜಾತಿ-ಧರ್ಮ ಮೀರಿದ ಬಂಡಾಯ.

ಪೇಶ್ವೆಯ ಹೆಮ್ಮೆಯ ಸಂತತಿ ಭಾಜಿರಾವ್ ಮುಸ್ಲಿಮ್ ಸಮುದಾಯದ ಮಸ್ತಾನಿಯ ಪ್ರೇಮ ಪಾಶದಲ್ಲಿ ಸಿಲುಕಿದ್ದು ಜಾತಿ-ಧರ್ಮಗಳ ಗಡಿದಾಟಿ. ಆದರೆ ಅದೇ ಪೇಶ್ವೆಗಳು ಹೈದರಾಬಾದ್ ನಿಝಾಮನ ವಿರುದ್ಧ ಕತ್ತಿ ಝಳಪಿಸುತ್ತಲೇ ಇರುತ್ತಾರೆ. ಧರ್ಮಪತ್ನಿ ಕಾಶಿಬಾಯಿಯ ಹತಾಶ ಪ್ರಯತ್ನದ ನಡುವೆಯೂ ಭಾಜಿರಾವ್ ಮಸ್ತಾನಿಯ ಪ್ರೀತಿಗಾಗಿ, ಕೇವಲ ಪ್ರೀತಿಗಾಗಿ ಧರ್ಮದ ಗಡಿಯಾಚೆ ಸಂಬಂಧ ಚಾಚಿಕೊಳ್ಳುತ್ತಾನೆ. ಮರಾಠಾ ಸಾಮ್ರಾಜ್ಯದ ಪ್ರಭಾವಶಾಲಿ ದೊರೆ ಪೇಶ್ವೆ ಭಾಜಿರಾವ್ ಮಸ್ತಾನಿ ಎದುರು ಮಂಡಿಯೂರಿ ಪ್ರೇಮಕ್ಕಾಗಿ ಹಂಬಲಿಸಿದ್ದು, ಹಾತೊರೆದಿದ್ದು ಮನುಷ್ಯ ಸಹಜವಾದ ಪ್ರೇಮಭಾವದಿಂದ. ಭಾರತೀಯ ಇತಿಹಾಸದಲ್ಲಿನ ಕಹಿ ನೆನಪುಗಳನ್ನು ಮೀರಿಸುವಂತೆ ಮಧುರ ಬಾಂಧವ್ಯಗಳಿವೆ. ಇತಿಹಾಸವನ್ನು ಕೇವಲ ಕಹಿಪ್ರಸಂಗಗಳ ಕಾರಣಕ್ಕೆ ನೆನಪಿಸಿಕೊಳ್ಳಬಾರದು. ಜಾತಿ, ಮತ, ಪಂಥ, ಧರ್ಮ ಮೀರಿದ ಸಾಮರಸ್ಯದ, ಸೌಹಾರ್ದ ಬದುಕಿನ ನಿದರ್ಶನಗಳಿಗಾಗಿ ನೆನಪಿಸಿಕೊಳ್ಳಬೇಕು. ಭಾರತದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಸಾಮರಸ್ಯದ-ಮಧುರ ಬಾಂಧವ್ಯದ ಸಾವಿರಾರು ನಿದರ್ಶನಗಳನ್ನು ಚರಿತ್ರೆಯ ಪುಟಗಳಿಂದಲೇ ಆಯ್ದುಕೊಡಬಹುದು. ಆದರೆ ನೂರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್ ಮುಖಂಡರ ಚಿತ್ತ ಅತ್ತ ಹರಿಯುವುದೇ ಇಲ್ಲ.

ಹೈದರಾಬಾದಿನ ರಜಾಕಾರರ ಗುಂಪು ನಡೆಸಿದ ಕೊಲೆ ಸುಲಿಗೆಗಳನ್ನು ಎಲ್ಲರೂ ಕುಕೃತ್ಯವೆಂದೇ ಭಾವಿಸಿದ್ದಾರೆ. ಹೈದರಾಬಾದಿನ ಕೊನೆಯ ದೊರೆ ಮಿರ್ ಉಸ್ಮಾನ್ ಅಲಿಖಾನ್ ಭಾರತದಲ್ಲಿ ವಿಲೀನಗೊಳ್ಳಲು ಮಾನಸಿಕವಾಗಿ ತಯಾರಾಗಿದ್ದರು. ಆದರೆ ಖಾಸಿಂ ರಿಝ್ವಿಯ ಕುಮ್ಮಕ್ಕಿನಿಂದ ದುರಾಸೆಗೊಳಗಾದರು. ಖಾಸಿಂ ರಿಝ್ವಿಯ ರಜಾಕಾರರ ಪಡೆ ಕೊಲೆ ಸುಲಿಗೆ, ದಾಂಧಲೆ ನಡೆಸಿ ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸಿದ್ದು ನಿಜ. ಅಂದಿನ ಗೃಹ ಸಚಿವ ಸರದಾರ್ ವಲ್ಲಭಭಾಯಿ ಪಟೇಲ್ ಅವರು ರಜಾಕಾರರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾದರು. ಮಿರ್ ಉಸ್ಮಾನ್ ಅಲಿಖಾನ್ ಅವರು ಅನಿವಾರ್ಯವಾಗಿ ವಿಲೀನಕ್ಕೆ ಒಪ್ಪಿಕೊಂಡರು. ಕೇಂದ್ರ ಸರಕಾರ ನೀಡಿದ ಸ್ಥಾನಮಾನಗಳನ್ನು ಒಪ್ಪಿಕೊಂಡು ರಾಜಮರ್ಯಾದೆ ಅನುಭವಿಸಿದರು. ಆದರೆ ಖಾಸಿಂ ರಿಝ್ವಿ ಒಂದಷ್ಟು ಕಾಲ ಸೆರೆವಾಸ ಅನುಭವಿಸಿ, ಕೊನೆಗೆ ಕೋರಿಕೆಯಂತೆ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡಲಾಯಿತು. ರಜಾಕಾರರ ಪಡೆ ಕೊಲೆ-ಸುಲಿಗೆ ಮಾಡಿದ್ದು ನಿಜ. ಅವರ ಉದ್ದೇಶ ಕೇವಲ ಹಿಂದೂಗಳನ್ನು ಕೊಲ್ಲುವುದಾಗಿರಲಿಲ್ಲ. ಅವರ ಹುಚ್ಚಾಟಕ್ಕೆ ಮುಸ್ಲಿಮರೂ ಬಲಿಯಾಗಿದ್ದಾರೆ. ಹಿಂದೂ-ಮುಸ್ಲಿಮ್ ತಾರತಮ್ಯ ಮಾಡಿದ್ದು ಕೆಳಹಂತದ ರಜಾಕಾರರ ಕಾರ್ಯಕರ್ತರು. ಅವರ ಮೂಲ ಉದ್ದೇಶ ಅರಾಜಕತೆ ಸೃಷ್ಟಿಸುವುದು, ತಮ್ಮ ಶಕ್ತಿ ಪ್ರದರ್ಶಿಸಿ ಹೈದರಾಬಾದನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಉಳಿಸಿಕೊಳ್ಳುವುದಾಗಿತ್ತು. ರಜಾಕಾರರು ನಡೆಸಿದ ದಾಂಧಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ತಾಯಿ, ತಂಗಿ ಬಲಿಯಾದದ್ದು ಇತಿಹಾಸದ ಕಹಿ ನೆನಪಿನ ಭಾಗವಾಗಿದೆ. ಆ ಕಹಿ ನೆನಪನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೆನಪಿಸಿಕೊಂಡಿದ್ದು ಮತ್ತು ಬಳಸಿಕೊಂಡಿದ್ದು ಹಿಂದೂ ಮತದಾರರಲ್ಲಿ ಮುಸ್ಲಿಮ್ ದ್ವೇಷ ಭಾವನೆ ಬಿತ್ತಲು. ಆ ಮೂಲಕ ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣ ಮಾಡಿ ಚುನಾವಣೆ ಗೆಲ್ಲುವುದು ಅವರ ತಕ್ಷಣದ ಉದ್ದೇಶ.

ಆದರೆ ರಜಾಕಾರರ ದಾಂದಲೆಯ ಆರ್ಭಟ ಕಾಲದಲ್ಲಿನ ಅನೇಕ ಪ್ರಸಂಗಗಳನ್ನು ಇತಿಹಾಸಕಾರರು ದಾಖಲೆ ಮಾಡಿಲ್ಲ. ಪಕ್ಕದ ಊರಿನಲ್ಲಿ ರಜಾಕಾರರು ದಾಂಧಲೆ ನಡೆಸುವ ಸುದ್ದಿ ತಿಳಿಯುತ್ತಲೇ ಮುಸ್ಲಿಮ್ ಸಮುದಾಯದ ಅನೇಕರು ಹಿಂದೂಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿ ರಕ್ಷಿಸಿದ್ದಾರೆ. ಒಬ್ಬ ಅತ್ತೆ ಹಿಂದೂ ಯುವಕನನ್ನು ರಕ್ಷಿಸಲು ಆತನನ್ನು ತನ್ನ ಸೊಸೆಯ ಪಕ್ಕದಲ್ಲಿ ಮಲಗಿಸಿ ಮಗ-ಸೊಸೆ ಮಲಗಿದ್ದಾರೆ ಎಂದು ಹೇಳಿ ಕಳುಹಿಸಿದ ನಿದರ್ಶನ ಬಹಳ ಜನರಿಗೆ ಗೊತ್ತಿಲ್ಲ. ರಾಯಚೂರಿನ ಗಝಲ್ ಗುಂಡಮ್ಮ ಖ್ಯಾತ ಸಂಗೀತಕಾರ್ತಿ. ಅವರು ಚಿಕ್ಕ ವಯಸ್ಸಿನಲ್ಲೇ ಕಲಬುರ್ಗಿಯಲ್ಲಿ ವಾಸವಾಗಿರುತ್ತಾರೆ. ಆಗ ರಜಾಕಾರರ ಹಾವಳಿ ಜೋರಾಗಿರುತ್ತದೆ. ಕಲಬುರಗಿಯಲ್ಲಿ ರಜಾಕಾರರ ದಾಂಧಲೆ ಶುರುವಾಗುತ್ತದೆ ಎಂದರಿತ ಮುಸ್ಲಿಮರು ರಾತ್ರೋರಾತ್ರಿ ಸುರಕ್ಷಿತವಾಗಿ ಗುಂಡಮ್ಮ ಅವರನ್ನು ಟ್ರಕ್ಕಿನಲ್ಲಿ ಕೂರಿಸಿ ರಾಯಚೂರಿಗೆ ಸಾಗಿಸುತ್ತಾರೆ. ಹಿಂದೂ ಸಂಘಟನೆಗಳ ಯುವಕರು ಮುಸ್ಲಿಮ್ ಸಮುದಾಯದಲ್ಲಿ ಭಯ ಹುಟ್ಟಿಸಲು ದಾಂಧಲೆ ನಡೆಸುತ್ತಾರೆ. ಆಗ ಮುಸ್ಲಿಮ್ ಸಮುದಾಯದ ಅಸಂಖ್ಯಾತ ಜನರನ್ನು ಹಿಂದೂಗಳು ತಮ್ಮ ಮನೆಗಳಲ್ಲಿ ಆಶ್ರಯ ನೀಡಿ ರಕ್ಷಿಸಿದ ಸಾವಿರಾರು ನಿದರ್ಶನಗಳು ದೊರೆಯುತ್ತವೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದವರು ರಜಾಕಾರರ ಹಾವಳಿಯ ಕಾಲದಲ್ಲಿನ ಪ್ರಸಂಗಗಳನ್ನು ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತಂದಿದ್ದರೆ ಮುಸ್ಲಿಮ್ ಸಮುದಾಯವು ರಜಾಕಾರರ ವಿರುದ್ಧ ಕಾರ್ಯನಿರ್ವಹಿಸಿತ್ತು ಎಂಬುದಕ್ಕೆ ದಾಖಲೆ ಲಭ್ಯವಿರುತ್ತಿತ್ತು. ಕನ್ನಡದ ಹಿರಿಯ ಸಾಹಿತಿ ಶಾಂತರಸರ ಬಹುಪಾಲು ಕಥೆಗಳು ರಜಾಕಾರರ ಹಾವಳಿ ಕಾಲದಲ್ಲಿನ ಹಿಂದೂ-ಮುಸ್ಲಿಮ್ ಬಾಂಧವ್ಯದ ಹಲವು ಆಯಾಮಗಳನ್ನು ಕಟ್ಟಿಕೊಡುತ್ತದೆ.

ಕರ್ನಾಟಕ ಚರಿತ್ರೆಯಲ್ಲಿ ಹಿಂದೂ-ಮುಸ್ಲಿಮ್ ಸಂಘರ್ಷಕ್ಕೆ ನಿದರ್ಶನವಾಗಿ ಟಿಪ್ಪು ಮತ್ತು ರಜಾಕಾರರ ಹಾವಳಿಯನ್ನು ಮತ್ತೆ ಮತ್ತೆ ಪ್ರಸ್ತಾವಿಸಿ ಕೋಮು ವಿಷಬೀಜ ಬಿತ್ತಲು ಯತ್ನಿಸುತ್ತಾರೆ. ಆದರೆ ಕರ್ನಾಟಕದಲ್ಲಿನ ಅಸಂಖ್ಯಾತ ದರ್ಗಾಗಳು, ದೇವಾಲಯಗಳು, ಜಾತ್ರೆಗಳು ಮತೀಯ ಸಾಮರಸ್ಯಕ್ಕೆ, ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿ ನಿಂತಿವೆ. ವಿಶೇಷವಾಗಿ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾವೈಕ್ಯತಾ ಭಾವಕ್ಕೆ ಲಕ್ಷ ಲಕ್ಷ ನಿದರ್ಶನಗಳು ದೊರೆಯುತ್ತವೆ. ಈಗಿನ ವಿಜಯಪುರ ದೊರೆಯಾಗಿದ್ದ ಎರಡನೇ ಇಬ್ರಾಹೀಂ ಆದಿಲ್ ಶಾಹ ದಿಲ್ಲಿ ಸುಲ್ತಾನ ಅಕ್ಬರ್ ಅವರ ಕಿರಿಯ ಸಮಕಾಲೀನರು. ಆದಿಲ್ ಶಾಹ ಸಾಹಿತ್ಯ-ಸಂಗೀತದ ಪ್ರೇಮಿ ಮಾತ್ರವಲ್ಲ ಸ್ವತಃ ಕಲಾವಿದರಾಗಿದ್ದರು. ಆದಿಲ್ ಶಾಹ ಕಲಾವಿದರಿಗಾಗಿ ನವರಸಪುರ ನಿರ್ಮಾಣ ಮಾಡಿದ್ದರು. ಸಂಗೀತ ಕಲೆಯನ್ನು ಒಲಿಸಿಕೊಳ್ಳಲು ಇಬ್ರಾಹೀಂ ಆದಿಲ್ ಶಾಹ ಸರಸ್ವತಿಯ ಆರಾಧನೆ ಮಾಡುತ್ತಿದ್ದರು. ಯಾವತ್ತೂ ಹಿಂದೂ-ಮುಸ್ಲಿಮ್ ಭೇದಭಾವ ಮಾಡದ ಎರಡನೇ ಇಬ್ರಾಹೀಂ ಆದಿಲ್ ಶಾಹ ಕನ್ನಡ ನಾಡು ಹೆಮ್ಮೆಪಡುವ ‘ಕಿತಾಬ್ ಎ ನೌರಸ್’ ಕೃತಿಯ ಲೇಖಕರಾಗಿದ್ದರು. ಚರಿತ್ರೆಯಲ್ಲಿನ ನೆನಪುಗಳು ಆ ಕಾಲದ ಕಠೋರ ಸತ್ಯ. ಹಾಗಂತ ಕೇವಲ ಕಹಿ ನೆನಪಿನ ಗಾಯಗಳನ್ನು ಕೆರೆದುಕೊಳ್ಳುತ್ತಾ ಅಂದಿನ ತಪ್ಪಿಗೆ ನಮ್ಮ ಕಾಲದ ಆ ಸಮುದಾಯದವರನ್ನು ಹೊಣೆಗಾರರನ್ನಾಗಿಸುವುದು ಅನಾಗರಿಕ ಲಕ್ಷಣವೇ ಸರಿ. ಮೊಗಲರು ಸೇರಿದಂತೆ ಭಾರತದ ಅನೇಕ ಮುಸ್ಲಿಮ್ ದೊರೆಗಳು ಸ್ಥಳೀಯ ಜನ ಸಂಸ್ಕೃತಿಯೊಂದಿಗೆ ಬೆರೆತು ಆಡಳಿತ ನಡೆಸಿದ್ದರು. ದೊರೆಯಾದವನು ಹಿಂದೂವೇ ಆಗಿರಲಿ, ಮುಸ್ಲಿಮ್ ಸಮುದಾಯಕ್ಕೆ ಸೇರಿದವನೇ ಆಗಿರಲಿ ರಾಜಸತ್ತೆಯ ಮಿತಿಗೊಳಪಟ್ಟು ಕಾರ್ಯನಿರ್ವಹಿಸಿರುತ್ತಾನೆ. ಅವನ ಮಿತಿಯನ್ನು ಆತ ಪ್ರತಿನಿಧಿಸುವ ಧರ್ಮ, ಜಾತಿಯೊಂದಿಗೆ ಸಮೀಕರಿಸಬಾರದು. ಕಾಲ ಮತ್ತು ಆಡಳಿತ ವ್ಯವಸ್ಥೆಯ ಮಿತಿಯಾಗಿರುತ್ತದೆ.

ಔರಂಗಜೇಬ್ ತನ್ನ ಒಡಹುಟ್ಟಿದ ಸಹೋದರ ದಾರಾಶಿಕೊ ಕುರಿತೂ ಕಠೋರವಾಗಿದ್ದ. ತನ್ನ ವಿಚಾರಧಾರೆಯನ್ನು ಬೆಂಬಲಿಸಿದ ಎಲ್ಲರನ್ನೂ (ಹಿಂದೂಗಳು ಸೇರಿ) ಜೊತೆಗೆ ಇಟ್ಟುಕೊಂಡಿದ್ದ. ವಿರೋಧಿಸುವ ಎಲ್ಲರನ್ನೂ ಮುಲಾಜಿಲ್ಲದೆ ದಂಡಿಸುತ್ತಿದ್ದ. ಟಿಪ್ಪುವನ್ನು ಏಕಪಕ್ಷೀಯವಾಗಿ ಟೇಕಿಸುವವರಿದ್ದಾರೆ. ಟಿಪ್ಪು ತಪ್ಪು ಮಾಡಿದ್ದ ಎನ್ನುವುದಾದರೆ; ದಿವಾನ್ ಪೂರ್ಣಯ್ಯನೂ ಅದರ ಅಧಿಕೃತ ಪಾಲುದಾರ. ರಾಜಸತ್ತೆಯ ವ್ಯವಸ್ಥೆಯಲ್ಲಿ ಹಿಂದೂ ದೊರೆ, ಮುಸ್ಲಿಮ್ ದೊರೆ ಎಂದು ಪ್ರತ್ಯೇಕಿಸಿ ನೋಡುವುದೇ ತಪ್ಪು. ಹಾಗೆ ನೋಡಿದರೆ; ಟಿಪ್ಪು, ನಿಝಾಮ, ಅಷ್ಟು ಮಾತ್ರವಲ್ಲ ದಿಲ್ಲಿ ದೊರೆ ಅಕ್ಬರನ ಆಸ್ಥಾನದಲ್ಲೂ ಬ್ರಾಹ್ಮಣ ಸಮುದಾಯದ ಮಂತ್ರಿಗಳು ಇರುತ್ತಿದ್ದರು. ದಿವಾನ್ ಪೂರ್ಣಯ್ಯನ ತಪ್ಪಿಗಾಗಿ ಇಂದಿನ ಬ್ರಾಹ್ಮಣ ಸಮುದಾಯವನ್ನು ದೂಷಿಸುವುದು ಹೇಗೆ ತಪ್ಪೋ, ಹಾಗೆಯೇ ಮುಸ್ಲಿಮ್ ದೊರೆಗಳ ತಪ್ಪು ನಿರ್ಧಾರಗಳಿಗೆ ಇಂದಿನ ಮುಸ್ಲಿಮ್ ಸಮುದಾಯವನ್ನು ಹೊಣೆಗಾರರನ್ನಾಗಿಸುವುದೂ ತಪ್ಪೇ. ನಮ್ಮನ್ನು ಇನ್ನೂರು ವರ್ಷಗಳ ಕಾಲ ಅತ್ಯಂತ ಕ್ರೂರವಾಗಿ ಆಳಿದ ಬ್ರಿಟಿಷರ ದೇಶದಲ್ಲಿ ನಮ್ಮ ಮಕ್ಕಳು ವಾಸಿಸುವುದು, ಒಡನಾಡುವುದು ಹೆಮ್ಮೆಯ ಪ್ರತೀಕ ಎಂದು ಭಾವಿಸಿದ್ದೇವೆ. ಆದರೆ ರಜಾಕಾರರ ಕುಕೃತ್ಯದ ಕಹಿನೆನಪುಗಳನ್ನು ನಮ್ಮ ಕಾಲದ ಮುಸ್ಲಿಮ್ ಸಮುದಾಯದ ತಲೆಗೆ ಯಾಕೆ ಕಟ್ಟಬೇಕು?

Writer - ವಾರ್ತಾಭಾರತಿ

contributor

Editor - Mushaveer

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News