ಕಾಂಗ್ರೆಸ್: ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ

ಬೀದರ್‌ನಿಂದ ಚಾಮರಾಜನಗರದವರೆಗೆ, ಬೆಳಗಾವಿಯಿಂದ ಚಿಕ್ಕಮಗಳೂರುವರೆಗೆ ಕಾಂಗ್ರೆಸ್ ಪಕ್ಷದ ಯಾರೇ ನಿಷ್ಠಾವಂತ ಕಾರ್ಯಕರ್ತರನ್ನು ಮಾತನಾಡಿಸಿದರೂ ‘‘ಇದು ನಮ್ಮ ಸರಕಾರ’’ ಎಂಬ ಭಾವನೆ ಮೂಡುತ್ತಿಲ್ಲ ಎಂದೇ ಅಸಮಾಧಾನ ಹೊರಹಾಕುತ್ತಾರೆ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಪಕ್ಷದ ವಕ್ತ್ತಾರರು, ಪದಾಧಿಕಾರಿಗಳು ‘‘ಈ ಸರಕಾರದಲ್ಲಿ ಒಂದೇ ಒಂದು ಕೆಲಸ ಆಗುತ್ತಿಲ್ಲ’’ ಎಂದು ದೂರುತ್ತಾರೆ. ಸೋತ ಅಭ್ಯರ್ಥಿಗಳು ಎಲ್ಲೂ ಸಲ್ಲುತ್ತಿಲ್ಲ. ‘‘ನಿಮಗೆ ಎಂಎಲ್‌ಎ ಟಿಕೆಟ್ ಕೊಟ್ಟಿದ್ದೇ ದೊಡ್ಡದು, ಯಾವುದೇ ಸ್ಥಾನಮಾನ ಕೇಳಬೇಡಿ’’ ಎಂದು ಸೋತವರಿಗೆ ಹೇಳಿದ್ದರಿಂದ ಹಣಬಲ ಇಲ್ಲದ ಸೋತ ಅಭ್ಯರ್ಥಿಗಳು ‘‘ರಾಜಕೀಯದ ಸಹವಾಸವೇ ಬೇಡ’’ ಎನ್ನುತ್ತಿದ್ದಾರೆ.

Update: 2024-10-13 05:44 GMT

ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರು ಆಧಾರ ಸ್ತಂಭ ಇದ್ದಂತೆ. ಪಕ್ಷ ಅಧಿಕಾರದಲ್ಲಿ ಇರಲಿ ಬಿಡಲಿ ಬಾವುಟ ಹಿಡಿದು ಪಕ್ಷವನ್ನು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳುವವರು ಕಾರ್ಯಕರ್ತರೇ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ ಯಾವ ಪಕ್ಷವೂ ಉದ್ಧಾರವಾಗಿಲ್ಲ. ಕೆಲವು ಪಕ್ಷಗಳು ನಿರ್ನಾಮವಾಗಿ ಹೋಗಿವೆ. ಪಕ್ಷ ಅಧಿಕಾರದಲ್ಲಿದ್ದಾಗ ಮಾತ್ರವಲ್ಲ ಅಧಿಕಾರ ಇಲ್ಲದಿದ್ದಾಗಲೂ ಕಾರ್ಯಕರ್ತರನ್ನು ಪೊರೆಯುವ ಪಕ್ಷ ಮಾತ್ರ ಮತ್ತೆ ಜನರ ವಿಶ್ವಾಸಕ್ಕೆ ಪಾತ್ರವಾಗುತ್ತದೆ. ಹಾಗೆ ನೋಡಿದರೆ; ಕಮ್ಯುನಿಸ್ಟ್ ಪಕ್ಷಗಳಲ್ಲಿ ಆ ಪಕ್ಷದ ಮುಖ್ಯಮಂತ್ರಿಗಿಂತಲೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಿರ್ಣಾಯಕ ಸ್ಥಾನದಲ್ಲಿದ್ದರು. ಪಶ್ಚಿಮ ಬಂಗಾಳದಲ್ಲಿ ನಿರಂತರ ಮೂರು ದಶಕಗಳ ಕಾಲ ಅಧಿಕಾರದಲ್ಲಿದ್ದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಒಂದೇ ಒಂದು ಬಾರಿ ಸೋಲುಂಡು ಮತ್ತೆ ಮೇಲೇಳಲೇ ಇಲ್ಲ. ಪಕ್ಷ ಸೋತಾಗ ಕಾರ್ಯಕರ್ತರನ್ನು ವಿಶ್ವಾಸದಲ್ಲಿಟ್ಟುಕೊಳ್ಳಲು ಅಲ್ಲಿಯ ನಾಯಕತ್ವಕ್ಕೆ ಸಾಧ್ಯವಾಗಲಿಲ್ಲ. ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ವಲಸೆ ಹೋದರು. ಕಮ್ಯುನಿಸ್ಟರ ಭದ್ರಕೋಟೆಯಲ್ಲಿ ಬಿಜೆಪಿ ನೆಲೆ ಕಂಡುಕೊಂಡಿದ್ದೇ ಸೋಜಿಗದ ಸಂಗತಿ. ಅಲ್ಲಿ ಮಮತಾ ಬ್ಯಾನರ್ಜಿಯವರಿಗೆ ಬಹುದೊಡ್ಡ ಸವಾಲು ಒಡ್ಡಿರುವುದು ಬಿಜೆಪಿ ಕಾರ್ಯಕರ್ತರು. ಯಾಕೆಂದರೆ ಬಿಜೆಪಿ ಸೋತಾಗಲೂ ಕಾರ್ಯಕರ್ತರನ್ನು ಪೊರೆಯುತ್ತದೆ.

ಕೇರಳದ ಕಮ್ಯುನಿಸ್ಟರು ಸೋಲು ಗೆಲುವನ್ನು ಸಮಾನವಾಗಿ ಕಂಡವರು. ಪಕ್ಷ ಅಧಿಕಾರದಿಂದ ಹೊರಗಿದ್ದಾಗಲೂ ನಿಷ್ಠಾವಂತ ಕಾರ್ಯಕರ್ತರ ಹಿತ ಕಾಪಾಡುತ್ತಿರುತ್ತಾರೆ. ಹಾಗಾಗಿ ಕಾರ್ಯಕರ್ತರೂ ಪಕ್ಷಕ್ಕೆ ಸದಾ ನಿಷ್ಠರಾಗಿರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ನಿರಂತರ ಅಧಿಕಾರದಲ್ಲಿದೆ. ದಕ್ಷಿಣ ಭಾರತCongress: Neglect of loyal workersದಲ್ಲಿ ಕರ್ನಾಟಕ ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರದ ಹತ್ತಿರವೂ ಸುಳಿದಿಲ್ಲ. ಆದರೆ ಪಕ್ಷದ ಕಾರ್ಯಕರ್ತರ ಉತ್ಸಾಹ ಬತ್ತದಂತೆ ನಿಗಾವಹಿಸುತ್ತಲೇ ಇದ್ದಾರೆ. ಕೇರಳ, ತಮಿಳುನಾಡಿನ ಬಿಜೆಪಿ ನಾಯಕರಿಗೂ ಕೇಂದ್ರದಲ್ಲಿ ಮಂತ್ರಿಗಿರಿಯ ಅವಕಾಶ ನೀಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ನಡೆಸಿದ್ದು ಕೇವಲ 10 ವರ್ಷಗಳ ಕಾಲ ಮಾತ್ರ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಯಾರೇ ದೊಡ್ಡ ನಾಯಕರು ಪಕ್ಷ ನಿಷ್ಠೆ ಬದಲಿಸಿದರೂ ನಿಷ್ಠಾವಂತ ಕಾರ್ಯಕರ್ತರು, ಆರೆಸ್ಸೆಸ್ ತತ್ವದಲ್ಲಿ ಅಚಲ ನಂಬಿಕೆ ಇಟ್ಟವರು ಪಕ್ಷ ತೊರೆಯುವ ಕನಸೂ ಕಾಣುವುದಿಲ್ಲ. ಯಾಕೆಂದರೆ ಪಕ್ಷ ಮತ್ತು ಸಂಘಟನೆ ಕಾರ್ಯಕರ್ತರ ಯೋಗ ಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತವೆ. ಈಗ ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳಲ್ಲಿ ಎಲ್ಲಾ ಸಮುದಾಯಕ್ಕೆ ಸೇರಿದ ಕಾರ್ಯಕರ್ತರು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಕಾರ್ಯಕರ್ತರ ಹಿತ ಕಾಪಾಡಲು ಸಂಘ ಪರಿವಾರದ ಮುಖಂಡರು ಪ್ರಯತ್ನಿಸುತ್ತಲೇ ಇರುತ್ತಾರೆ. ಶಾಸಕರು, ಸಚಿವರ ಹಿಂದೆ ಮುಂದೆ ತಿರುಗಾಡುವ ಕಾರ್ಯಕರ್ತರು ಹೇಗೂ ಅನುಕೂಲ ಮಾಡಿಕೊಂಡಿರುತ್ತಾರೆ. ಆದರೆ ಪಕ್ಷದ ತತ್ವ ಸಿದ್ಧಾಂತಗಳಿಗೆ ನಿಷ್ಠರಾಗಿ ಕಾರ್ಯನಿರ್ವಹಿಸುವ ಕಾರ್ಯಕರ್ತರ ಯೋಗ ಕ್ಷೇಮ ನೋಡಿಕೊಳ್ಳುವ ಒಂದು ಪಡೆಯೇ ಅಲ್ಲಿದೆ.

ಬಿಜೆಪಿ-ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತರ ಹಿತ ಕಾಪಾಡುವ ಸಂದರ್ಭದಲ್ಲೂ ಅವರು ಸೋಶಿಯಲ್ ಇಂಜಿನಿಯರಿಂಗ್-ಸಮೀಕರಣ ಚೆನ್ನಾಗಿ ಮಾಡುತ್ತಾರೆ. ಬಿಜೆಪಿ ಸಂಘ ಪರಿವಾರದವರ ಸಿದ್ಧಾಂತವನ್ನು ಒಪ್ಪದವರೂ ಅವರ ಶಿಸ್ತುಬದ್ಧ ಕಾರ್ಯಶೈಲಿ, ನಿಷ್ಠಾವಂತ ಕಾರ್ಯಕರ್ತರ ಹಿತ ಕಾಪಾಡುವ ಬದ್ಧತೆಯನ್ನು ಮೆಚ್ಚಿಕೊಳ್ಳಲೇಬೇಕು. ದತ್ತಾತ್ರೇಯ ಹೊಸಬಾಳೆ, ಸಿ.ಆರ್. ಮುಕುಂದ್ ವಾದಿರಾಜ್, ತಿಪ್ಪೇಸ್ವಾಮಿ, ರಘುನಂದನ್ ಅವರಿಂದ ಹಿಡಿದು ಹುಬ್ಬಳ್ಳಿಯ ಶ್ರೀಧರ್ ನಾಡಿಗೇರ್, ಅಥಣಿಯ ದೇಶಪಾಂಡೆವರೆಗೆ ಬದ್ಧತೆ-ಕಾಳಜಿಯುಳ್ಳ ಟೀಮ್ ಇದೆ. ಪಕ್ಷ-ಸಂಘಕ್ಕಾಗಿ ದುಡಿಯುವ ಯಾರನ್ನೂ ಬೀದಿ ಪಾಲಾಗಲು ಬಿಡುವುದಿಲ್ಲ. ಪಕ್ಷದ ಸರಕಾರ ಇದ್ದಾಗ ಒಂದಲ್ಲ ಒಂದು ರೀತಿ ಸಹಾಯ ಹಸ್ತ ಚಾಚುತ್ತಾರೆ. ಅವಕಾಶವಿದ್ದಾಗ ಉನ್ನತ ಹುದ್ದೆ ನೀಡುತ್ತಾರೆ. ಸಂಘ ಪರಿವಾರದ ಪೂರ್ಣಾವಧಿ ಕಾರ್ಯಕರ್ತರು; ಸದಾ ಪಕ್ಷ-ಸಂಘನಿಷ್ಠ ಕಾರ್ಯಕರ್ತರ ಯೋಗ ಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಿರುತ್ತಾರೆ. ನಿಷ್ಠಾವಂತ ಕಾರ್ಯಕರ್ತರ ಬೆಂಬಲವಿಲ್ಲದೆ ಯಾವ ಸಂಘಟನೆಯನ್ನೂ ಬಲಿಷ್ಠವಾಗಿ ರೂಪಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಸಂಘಪರಿವಾರದ ಮುಖಂಡರಿಗೆ ಚೆನ್ನಾಗಿ ಗೊತ್ತಿದೆ. ನಾನೇ ಕಂಡ ಓದು ನಿದರ್ಶನ ಇಲ್ಲಿ ವಿವರಿಸುತ್ತೇನೆ. ಡಾ. ಬಿ.ವಿ. ವಸಂತ ಕುಮಾರ್ ಹಿಂದುಳಿದ ಸಮುದಾಯಕ್ಕೆ ಸೇರಿದ ಕನ್ನಡ ಅಧ್ಯಾಪಕ. ಬಾಲ್ಯದಿಂದಲೂ ಸಂಘ ಪರಿವಾರದ ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ವಸಂತಕುಮಾರ್ ಎಬಿವಿಪಿ ರಾಜ್ಯಾಧ್ಯಕ್ಷರೂ ಆಗಿದ್ದರು. ಈಗವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಡಾ. ಬಿ.ವಿ. ವಸಂತಕುಮಾರ್ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯ, ಕನ್ನಡ ವಿವಿ ಸಿಂಡಿಕೇಟ್ ಮೆಂಬರ್ ಮತ್ತು ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿಸಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಲೇ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ್ದರು. 2019ರಲ್ಲಿ ಎರಡನೇ ಅವಧಿಗೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ಡಾ. ಬಿ.ವಿ. ವಸಂತಕುಮಾರ್ ಮಾತ್ರವಲ್ಲ ಬಿಜೆಪಿ-ಸಂಘ ಪರಿವಾರಕ್ಕೆ ನಿಷ್ಠರಾಗಿರುವ ಅಸಂಖ್ಯಾತ ಕಾರ್ಯಕರ್ತರಿಗೆ ಒಂದಲ್ಲ ಒಂದು ಅವಕಾಶ ಕಲ್ಪಿಸಿದ್ದಾರೆ. ಹಾಗೆ ಲಾಭ ಮಾಡಿಕೊಂಡವರಲ್ಲಿ ಬೇಳೂರು ಸುದರ್ಶನ್, ಡಾ. ಜಿ.ಬಿ. ಹರೀಶ್, ಆರ್. ಭೀಮಸೇನ್, ಪ್ರಭುದೇವ್ ಕಪ್ಪಗಲ್, ಕೊಟ್ರೇಶ್, ಅಜಕ್ಕಳ ಗಿರೀಶ್ ಭಟ್, ಮಹೇಂದ್ರ ಸೇರಿದಂತೆ ಸಾವಿರಾರು ಜನ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರ ಹಿಡಿಯುತ್ತಲೇ ಸಂಘ ಪರಿವಾರದ ಮುಖಂಡರು ಮಾಡುವ ಮೊದಲ ಕೆಲಸವೆಂದರೆ ಪ್ರಾಥಮಿಕ-ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಸ್ಥಾನ ಸಂಘ ಪರಿವಾರದ ಮೂಲದ ಶಾಸಕರಿಗೆ ಸಿಗುವಂತೆ ನೋಡಿಕೊಳ್ಳುತ್ತಾರೆ. ಎಲ್ಲಾ ವಿವಿಗಳ ಸಿಂಡಿಕೇಟ್, ಅಕಾಡಮಿ ಕೌನ್ಸಿಲ್‌ಗೆ ಎಬಿವಿಪಿ ಕಾರ್ಯಕರ್ತರನ್ನೇ ಸದಸ್ಯರನ್ನಾಗಿ ನೇಮಿಸುತ್ತಾರೆ. ಈ ಕ್ರಮ ಸರಿಯಾದುದಲ್ಲ: ಅಲ್ಲಿ ಶಿಕ್ಷಣ ತಜ್ಞರಿಗೆ ಅವಕಾಶ ಕಲ್ಪಿಸಬೇಕು. ಆದರೆ ಕಾರ್ಯಕರ್ತರ ಹಿತ ಕಾಪಾಡಲು, ತಮ್ಮ ಸಂಘಟನೆಯ ವಿಸ್ತರಣೆಗೆ ವಿದ್ಯಾಸಂಸ್ಥೆಗಳನ್ನು ಬಳಸಿಕೊಳ್ಳುತ್ತಾರೆ. ವಿವಿಗಳಿಗೆ ಸಂಘ ಪರಿವಾರದ ಹಿನ್ನೆಲೆಯುಳ್ಳ ಪ್ರಾಧ್ಯಾಪಕರನ್ನು ಕುಲಪತಿ, ಕುಲಸಚಿವರನ್ನಾಗಿ ನೇಮಿಸುತ್ತಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಕಾಡಮಿ, ಪ್ರಾಧಿಕಾರಗಳ ಅಧ್ಯಕ್ಷ-ಸದಸ್ಯ ಸ್ಥಾನಕ್ಕೆ ಸಂಘನಿಷ್ಠರನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತಾರೆ. ವಿಷಯ ತಜ್ಞತೆ, ಸಾಧನೆ ಎರಡನೇ ಆದ್ಯತೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ರಚನೆಯಲ್ಲೂ ಸಂಘನಿಷ್ಠರಿಗೇ ಮಣೆ. ಪ್ರಶಸ್ತಿ ನೀಡುವಿಕೆಯಲ್ಲೂ ಸಂಘನಿಷ್ಠೆ ಪ್ರಧಾನ ಪಾತ್ರ ವಹಿಸುತ್ತದೆ. ಸಾಧನೆ-ಸಿದ್ಧಿಗೆ ನಂತರದ ಸ್ಥಾನ. ತಮ್ಮ ಪಕ್ಷದ ಸರಕಾರ ಒಂದಿದೆಯೆಂದರೆ; ಸಂಘದ ವಿಚಾರಧಾರೆಗಳನ್ನು, ಸಂಘಟನೆಯನ್ನು ವಿಸ್ತರಿಸುವುದು, ಎಲ್ಲೆಡೆ ಆವರಿಸುವುದು ಮೊದಲ ಆದ್ಯತೆಯಾಗಿ ಪರಿಗಣಿಸುತ್ತಾರೆ. ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ಶಿಕ್ಷಣ ತಜ್ಞರಿಗಿಂತಲೂ ಸಂಘನಿಷ್ಠ ವ್ಯಕ್ತಿ ಅವರ ಮೊದಲ ಆದ್ಯತೆಯಾಗಿರುತ್ತದೆ. ಆದರೆ ಕಾಂಗ್ರೆಸ್, ಜನತಾದಳ ಅಧಿಕಾರಕ್ಕೆ ಬಂದಾಗ ನಿಷ್ಠಾವಂತ ಕಾರ್ಯಕರ್ತರನ್ನು ಮರೆತುಬಿಡುತ್ತವೆೆ. ತತ್ವನಿಷ್ಠೆ, ಪಕ್ಷನಿಷ್ಠೆ, ಸಾಧನೆ-ಸಿದ್ಧಿ ಯಾವುದೂ ಪರಿಗಣನೆಗೆ ಬರುವುದಿಲ್ಲ. ನಾಯಕನಿಷ್ಠೆ, ಕುಟುಂಬ ನಿಷ್ಠೆ, ಜಾತಿ ನಿಷ್ಠೆ, ಭಟ್ಟಂಗಿತನ ಪ್ರಧಾನ ಮಾನದಂಡಗಳಾಗಿ ಪರಿಗಣನೆಯಾಗುತ್ತದೆ. ಮಕ್ಕಳು, ಅಳಿಯಂದಿರು, ಪವರ್ ಬ್ರೋಕರ್‌ಗಳು ನಿರ್ಣಾಯಕ ಸ್ಥಾನದಲ್ಲಿ ನಿಲ್ಲುತ್ತಾರೆ. ಸೈದ್ಧಾಂತಿಕ ಬದ್ಧತೆ ಎಂಬುದು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಬಳಸಿ ಬಿಸಾಡುವ ವಸ್ತು.

ಬೀದರ್‌ನಿಂದ ಚಾಮರಾಜನಗರದವರೆಗೆ, ಬೆಳಗಾವಿಯಿಂದ ಚಿಕ್ಕಮಗಳೂರುವರೆಗೆ ಕಾಂಗ್ರೆಸ್ ಪಕ್ಷದ ಯಾರೇ ನಿಷ್ಠಾವಂತ ಕಾರ್ಯಕರ್ತರನ್ನು ಮಾತನಾಡಿಸಿದರೂ ‘‘ಇದು ನಮ್ಮ ಸರಕಾರ’’ ಎಂಬ ಭಾವನೆ ಮೂಡುತ್ತಿಲ್ಲ ಎಂದೇ ಅಸಮಾಧಾನ ಹೊರಹಾಕುತ್ತಾರೆ. ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಪಕ್ಷದ ವಕ್ತ್ತಾರರು, ಪದಾಧಿಕಾರಿಗಳು ‘‘ಈ ಸರಕಾರದಲ್ಲಿ ಒಂದೇ ಒಂದು ಕೆಲಸ ಆಗುತ್ತಿಲ್ಲ’’ ಎಂದು ದೂರುತ್ತಾರೆ. ಸೋತ ಅಭ್ಯರ್ಥಿಗಳು ಎಲ್ಲೂ ಸಲ್ಲುತ್ತಿಲ್ಲ. ‘‘ನಿಮಗೆ ಎಂಎಲ್‌ಎ ಟಿಕೆಟ್ ಕೊಟ್ಟಿದ್ದೇ ದೊಡ್ಡದು, ಯಾವುದೇ ಸ್ಥಾನಮಾನ ಕೇಳಬೇಡಿ’’ ಎಂದು ಸೋತವರಿಗೆ ಹೇಳಿದ್ದರಿಂದ ಹಣಬಲ ಇಲ್ಲದ ಸೋತ ಅಭ್ಯರ್ಥಿಗಳು ‘‘ರಾಜಕೀಯದ ಸಹವಾಸವೇ ಬೇಡ’’ ಎನ್ನುತ್ತಿದ್ದಾರೆ.

ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆಯಲ್ಲಿ ಮನೆಮಠ ಬಿಟ್ಟು ಸಕ್ರಿಯವಾಗಿ ಭಾಗವಹಿಸಿದ ಕಾರ್ಯಕರ್ತರು ಹತಾಶೆಯಿಂದ ಒಳಗೊಳಗೆ ಕುದಿಯುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ತಮ್ಮ ಮತ ಕ್ಷೇತ್ರದಲ್ಲಿ ಗೆಲುವಿಗೆ ಪೂರಕವಾಗಿ ನಿಲ್ಲುವ ಬಲಶಾಲಿ ಕಾರ್ಯಕರ್ತರನ್ನು ಮಾತ್ರ ನಿಗಮ- ಮಂಡಳಿ ನೇಮಕಾತಿಯಲ್ಲಿ ಪರಿಗಣಿಸುತ್ತಾರೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಮತಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರ ಹಿತ ಮಾತ್ರ ಕಾಪಾಡುತ್ತಾರೆ. ಅದು ಚುನಾವಣಾ ಗೆಲುವಿಗೆ ಪೂರಕವಾಗಿ ಗೆಲ್ಲುವ ಜಾತಿಗಳಿಗೆ ಅವಕಾಶ ದೊರೆಯುತ್ತದೆ. ಇನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರು ತಮಗೆ ಅನುಕೂಲವಾಗುವ ರೀತಿಯಲ್ಲಿ ಎಂಎಲ್‌ಸಿ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮಗನ ಮತಕ್ಷೇತ್ರದ ಜಾತಿ ಸಮೀಕರಣ ಗಟ್ಟಿಗೊಳಿಸಿಕೊಳ್ಳಲು ವಸಂತಕುಮಾರ್, ಬಾದರ್ಲಿ, ಜಗದೇವ ಗುತ್ತೇದಾರ್ ಅವರನ್ನು ಎಂಎಲ್‌ಸಿ ಮಾಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಿಂತಲೂ ಮಗ ಯತೀಂದ್ರ, ಆಪ್ತ ಗೋವಿಂದರಾಜು ಎಂಎಲ್‌ಸಿ ಆಗುವುದು ಮೊದಲ ಆದ್ಯತೆಯಾಗಿರುತ್ತದೆ. ಭೀಮಾ ನಾಯಕರಿಗೆ ಲಂಬಾಣಿ ಸಮುದಾಯದ ಪ್ರತಿಭಾವಂತ ವ್ಯಕ್ತಿ ಕೆಪಿಎಸ್‌ಸಿ ಸದಸ್ಯನಾಗುವುದು ಬೇಕಿಲ್ಲ. ಮೂಟೆಗಟ್ಟಲೆ ಹಣ ತಂದುಕೊಡುವ ಪರಮ ಭ್ರಷ್ಟನನ್ನು ಕೆಪಿಎಸ್‌ಸಿ ಸದಸ್ಯನ್ನಾಗಿಸುತ್ತಾರೆ.

ಕಾಂಗ್ರೆಸ್ ಸರಕಾರ ಇಲ್ಲಿಯವರೆಗೂ ನೇಮಕ ಮಾಡಿದ ನಿಗಮ-ಮಂಡಳಿಗಳ ಅಧ್ಯಕ್ಷರ-ಸದಸ್ಯರ ಪಟ್ಟಿಯಲ್ಲಿ ನಿಷ್ಠಾವಂತ ಕಾರ್ಯಕರ್ತರ ಸಂಖ್ಯೆ ಬಹಳ ಕಡಿಮೆ ಇದೆ. ಹಿರಿಯ ನಾಯಕರ ಬಾಲ ಬಡುಕರಿಗೆ, ಹಣ ಉಳ್ಳವರಿಗೆ ಸ್ಥಾನ ದೊರೆತಿವೆ. ದೇವರಾಜ ಅರಸು ಕಾಲದಲ್ಲಿ ಸಾಮಾನ್ಯ ಕಾರ್ಯಕರ್ತನೂ ವಿಧಾನ ಪರಿಷತ್ ಸ್ಥಾನಕ್ಕೆ ನೇಮಕಗೊಳ್ಳುತ್ತಿದ್ದ. ಈಗ ಎಂಎಲ್‌ಸಿ ಆಗುವುದು ಒತ್ತಟ್ಟಿಗಿರಲಿ ನಿಗಮ-ಮಂಡಳಿಯ ಅಧ್ಯಕ್ಷ-ಸದಸ್ಯನಾಗುವುದೂ ದುಸ್ತರವಾಗುತ್ತಿದೆ. ಬಿಜೆಪಿ -ಸಂಘ ಪರಿವಾರದಲ್ಲಿ ಇರುವಂತೆ; ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ಕಲ್ಪಿಸುವ ಸಂವೇದನಾಶೀಲ ವ್ಯವಸ್ಥೆಯೇ ಇಲ್ಲ. ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೇಮಕಾತಿಯಲ್ಲಿ ಬಿಜೆಪಿ ಸರಕಾರ ಸಂಘ ನಿಷ್ಠೆಯನ್ನು ಪ್ರಮುಖ ಮಾನದಂಡವನ್ನಾಗಿ ಪರಿಗಣಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನತಂತ್ರದ ಆಶಯಗಳಲ್ಲಿ ನಂಬಿಕೆ ಇರುವ ಯಾರೂ ಬಿಜೆಪಿಯ ಸಂಘನಿಷ್ಠೆಯ ಮಾನದಂಡವನ್ನು ಒಪ್ಪಲಾಗದು. ಆದರೆ ಕಾಂಗ್ರೆಸ್ ಸರಕಾರ ‘ಮಾದರಿ’ ಎನಿಸುವ ಮಾನದಂಡವನ್ನಾದರೂ ಅನುಸರಿಸಬಹುದಿತ್ತು. ಕಾಂಗ್ರೆಸ್ ಪಕ್ಷದಲ್ಲಿ ವಿದ್ಯಾರ್ಥಿ ಸಂಘಟನೆ ಸಕ್ರಿಯವಾಗಿದೆ. ಆ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳವರನ್ನು ವಿವಿಗಳ ಸಿಂಡಿಕೇಟ್ ಸದಸ್ಯತ್ವಕ್ಕೆ ಪರಿಗಣಿಸಬಹುದಿತ್ತು. ಅಷ್ಟರಮಟ್ಟಿಗೆ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮತ್ತು ಪ್ರತಿಭಾವಂತ ಕಾರ್ಯಕರ್ತರಿಗೆ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಭಾವಂತ ಸಾಹಿತಿ-ಬುದ್ಧಿಜೀವಿಗಳಿದ್ದಾರೆ. ಅಂತಹವರನ್ನು ಮತ್ತು ಅವರ ಸಲಹೆಯನ್ನು ಅಕಾಡಮಿ-ಪ್ರಾಧಿಕಾರಿಗಳ ನೇಮಕಾತಿಯಲ್ಲಿ ಬಳಸಿಕೊಳ್ಳಬಹುದಿತ್ತು. ಇಲ್ಲಿ ಸಾಂಸ್ಕೃತಿಕ ಲೋಕದ ಶ್ರೇಷ್ಠರನ್ನು ತೊಡಗಿಸಿಕೊಳ್ಳಬೇಕು. ಅವರಿಗೆ ಕಾಂಗ್ರೆಸ್ ಸರಕಾರದ ಬಗ್ಗೆ ಸದಭಿಪ್ರಾಯ ಮೂಡುವಂತಾಗುತ್ತದೆ.

ಕಾಂಗ್ರೆಸ್ ಪಕ್ಷಕ್ಕೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ನೇಮಕಾತಿಯಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇರದೆ ಹೋಗಿದ್ದರಿಂದ ಪ್ರತೀ ಬಾರಿ ಸಂವೇದನಾಶೀಲ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಮುಜುಗರ ಅನುಭವಿಸಬೇಕಾಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ವಕ್ತಾರರು ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ ಸೈದ್ಧಾಂತಿಕ ವಾಗ್ವಾದ ನಡೆಸಿರುತ್ತಾರೆ. ಹಿರೇಮಗಳೂರು ಕಣ್ಣನ್, ಕೃಪಾ ಫಡಕೆಯವರಿಗೆ ಕಾಂಗ್ರೆಸ್ ಸರಕಾರದಲ್ಲಿ ಸ್ಥಾನಮಾನ ದೊರೆತರೆ ಕಾರ್ಯಕರ್ತರ ನೈತಿಕ ಬಲ ಕುಗ್ಗುತ್ತದೆ. ಕಳೆದ ಒಂದೂವರೆ ವರ್ಷಗಳಿಂದ ಯಾವುದಾದರೂ ಸ್ಥಾನ ದೊರೆಯಬಹುದೆಂದು ಕಾದು ಕುಳಿತ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ‘‘ಈ ಸರಕಾರವೇ ನಮ್ಮದಲ್ಲ’’ ಎಂಬ ಭಾವನೆ ಗಟ್ಟಿಗೊಳ್ಳುತ್ತದೆ. ಒಂದು ಸಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಳಲು ಆಲಿಸುವ ಕಾರ್ಯಕ್ರಮ ಆಯೋಜಿಸಿದ್ದರು. ಎಲ್ಲದಕ್ಕೂ ಮುಖ್ಯಮಂತ್ರಿಯೇ ಇರಬೇಕೆಂದೇನೂ ಇಲ್ಲ. ಪ್ರತೀ ವಾರ ಒಬ್ಬ ಮಂತ್ರಿ ಕೆಪಿಸಿಸಿ ಕಚೇರಿಗೆ ಬಂದು ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕೊಡಿಸಿದರೆ ಕಾರ್ಯಕರ್ತರ ಉತ್ಸಾಹ ನೂರ್ಮಡಿಸುತ್ತದೆ.

ಆಡಳಿತ ವಿರೋಧಿ ಅಲೆ ಮೊದಲು ಬೀಜಾಂಕುರಗೊಳ್ಳುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮನದಲ್ಲಿ. ಒಮ್ಮೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ‘‘ಇದು ನಮ್ಮ ಸರಕಾರವಲ್ಲ’’ ಎಂದು ಅನಿಸಿದರೆ ಅದು ಜನಸಾಮಾನ್ಯರ ಮನದಲ್ಲೂ ಪ್ರತಿಫಲಿಸುತ್ತದೆ. ಹರ್ಯಾಣ, ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಿದೆಯೆಂದರೆ ಕಾರ್ಯಕರ್ತರ ಶ್ರಮ ಸಾಕಷ್ಟಿರುತ್ತದೆ. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿರುವುದು ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆಯಿಂದ. ಪ್ರಶ್ನಿಸುವ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇಲ್ಲ. ಕವಿತಾ ರೆಡ್ಡಿಯವರಿಗೆ ಆದ ಗತಿ ತಮಗೂ ಎದುರಾಗಬಹುದು ಎಂದು ಹೆದರಿ ಸುಮ್ಮನಿರುತ್ತಾರೆ. ಆದರೆ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ನೊಂದು ಕೊಂಡಿರುವುದು ಸತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News