‘ಬಸವ ದ್ರೋಹಿ’ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಸವಾದಿ ಶರಣರ ತತ್ವ ಆದರ್ಶಗಳ ಪರಿಚಯವೇ ಇಲ್ಲ. ಅವರ ವಿಚಾರಧಾರೆ ತಿಳಿದುಕೊಂಡು ಸೈದ್ಧಾಂತಿಕ ನೆಲೆಯಲ್ಲಿ ಭಿನ್ನಾಭಿಪ್ರಾಯ ತೋರಿದರೆ ಅದಕ್ಕೊಂದು ಘನತೆ ಇರುತ್ತಿತ್ತು. ಆದರೆ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಆ ಬಗೆಯ ತಿಳುವಳಿಕೆಯೇ ಇಲ್ಲ. ಸ್ವಯಂಘೋಷಿತ ಆ ‘ಹಿಂದೂ ಹುಲಿ’ಗೆ ಹಿಂದೂ ಧರ್ಮದ ಮೂಲ ಆಶಯವೇ ಗೊತ್ತಿಲ್ಲ. ಆರೆಸ್ಸೆಸ್ ಪ್ರತಿಪಾದಿಸುವ ಹಿಂದೂ ಧರ್ಮ ಯಾವುದು? ಸ್ವಾಮಿ ವಿವೇಕಾನಂದ, ಗಾಂಧಿ, ರಾಮಕೃಷ್ಣ ಪರಮಹಂಸರು ಪತಿಪಾದಿಸಿದ ಹಿಂದೂ ಧರ್ಮ ಯಾವುದು? ಎಂಬ ಕನಿಷ್ಠ ಜ್ಞಾನ ಇದ್ದಿದ್ದರೆ ಬಸನಗೌಡ ಯತ್ನಾಳ್ ಬಸವಣ್ಣನವರ ಕುರಿತು ಕೆಟ್ಟ ಮಾತು ಆಡುತ್ತಿರಲಿಲ್ಲ.
‘‘ದಯವಿಲ್ಲದ ಧರ್ಮವದಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ’’
-ಬಸವಣ್ಣ
ಬಸವಣ್ಣನವರನ್ನು ಕರ್ನಾಟಕ ಸರಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೂರಾರು ಬಾರಿ ‘ಅನುಭವ ಮಂಟಪದ ರೂವಾರಿ’ ಎಂದು ಹೇಳಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವ ಪಕ್ಷದವರೂ ಬಸವಣ್ಣನವರನ್ನು ಕುರಿತು ಹಗುರವಾಗಿ ಮಾತನಾಡಿಲ್ಲ. ಬಸವಣ್ಣನವರ ತತ್ವ ಆದರ್ಶಗಳಲ್ಲಿ ನಂಬಿಕೆ ಇಲ್ಲದವರೂ ಅವರನ್ನು ಸಮಾಜ ಸುಧಾರಕರು ಎಂದು ಗೌರವಿಸುತ್ತಾರೆ. ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಯಾರೊಬ್ಬರೂ ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದ ನಿದರ್ಶನ ದೊರೆಯುವುದಿಲ್ಲ. ಆದರೆ ಬಿಜೆಪಿಯ ಬಂಡುಕೋರ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಸವಣ್ಣ ಹೊಳ್ಯಾಗ ಹಾರಿದ ಅಂದರೆ ಆತ್ಮಹತ್ಯೆ ಮಾಡಿಕೊಂಡರು ಎಂಬರ್ಥದಲ್ಲಿ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ್ ವಿರುದ್ಧ ರಾಜಕೀಯ ನಾಯಕರು ಮಾತ್ರವಲ್ಲ ಬಹುಪಾಲು ಮಠಾಧೀಶರು ಕಟುವಾಗಿ ಟೀಕಿಸಿ ಮಾತನಾಡಿದ್ದಾರೆ. ಯತ್ನಾಳ್ ಅವರು ಆಡಿದ ಮಾತಿಗೆ ವ್ಯಾಪಕ ಟೀಕೆ ವ್ಯಕ್ತವಾದ ಮೇಲಾದರೂ ಆತ ಕ್ಷಮೆಯಾಚಿಸಬೇಕಿತ್ತು. ಬಸವಣ್ಣನವರ ಕುರಿತು ಹಗುರವಾಗಿ ಮಾಡುವುದೆಂದರೆ ಯಡಿಯೂರಪ್ಪ ಮತ್ತಿತರ ಬಿಜೆಪಿ ನಾಯಕರನ್ನು ಟೀಕಿಸಿದಂತೆ ಎಂದು ಭಾವಿಸಿದಂತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರನ್ನು ಪ್ರತಿನಿತ್ಯ ಆಚಾರವಿಲ್ಲದ ನಾಲಿಗೆಯಿಂದ ಟೀಕಿಸಿ ರೂಢಿಯಾಗಿದೆ. ಅದೇ ಭರಾಟೆಯಲ್ಲಿ ‘ಹೊಳ್ಯಾಗ ಹಾರಿದ ಬಸವಣ್ಣನಂತೆ’ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಹೇಳಿಕೇಳಿ ಬಸನಗೌಡ ಪಾಟೀಲ್ ಯತ್ನಾಳ್ ಆರೆಸ್ಸೆಸ್ ಗರಡಿಯಲ್ಲಿ ಬೆಳೆದವರು. ಅವರಿಗೆ ಬಸವಣ್ಣನವರ ಬಗ್ಗೆ ಪೂರ್ವಗ್ರಹ ಇದ್ದಿರುತ್ತದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಇಟ್ಟುಕೊಳ್ಳುವುದಕ್ಕೂ ವ್ಯಕ್ತಿಯ ಘನತೆಗೆ ಚ್ಯುತಿ ಬರುವಂತೆ ಟೀಕಿಸುವುದಕ್ಕೂ ವ್ಯತ್ಯಾಸ ಇದೆ. ಅಷ್ಟಕ್ಕೂ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಸವಾದಿ ಶರಣರ ತತ್ವ ಆದರ್ಶಗಳ ಪರಿಚಯವೇ ಇಲ್ಲ. ಅವರ ವಿಚಾರಧಾರೆ ತಿಳಿದುಕೊಂಡು ಸೈದ್ಧಾಂತಿಕ ನೆಲೆಯಲ್ಲಿ ಭಿನ್ನಾಭಿಪ್ರಾಯ ತೋರಿದರೆ ಅದಕ್ಕೊಂದು ಘನತೆ ಇರುತ್ತಿತ್ತು. ಆದರೆ ಬಸನಗೌಡ ಪಾಟೀಲ್ ಯತ್ನಾಳ್ ಆ ಬಗೆಯ ತಿಳುವಳಿಕೆಯೇ ಇಲ್ಲ. ಸ್ವಯಂಘೋಷಿತ ಆ ‘ಹಿಂದೂ ಹುಲಿ’ಗೆ ಹಿಂದೂ ಧರ್ಮದ ಮೂಲ ಆಶಯವೇ ಗೊತ್ತಿಲ್ಲ. ಆರೆಸ್ಸೆಸ್ ಪ್ರತಿಪಾದಿಸುವ ಹಿಂದೂ ಧರ್ಮ ಯಾವುದು? ಸ್ವಾಮಿ ವಿವೇಕಾನಂದ, ಗಾಂಧಿ, ರಾಮಕೃಷ್ಣ ಪರಮಹಂಸರು ಪತಿಪಾದಿಸಿದ ಹಿಂದೂ ಧರ್ಮ ಯಾವುದು? ಎಂಬ ಕನಿಷ್ಠ ಜ್ಞಾನ ಇದ್ದಿದ್ದರೆ ಬಸನಗೌಡ ಯತ್ನಾಳ್ ಬಸವಣ್ಣನವರ ಕುರಿತು ಕೆಟ್ಟ ಮಾತು ಆಡುತ್ತಿರಲಿಲ್ಲ.
ಬಸನಗೌಡ ಪಾಟೀಲ್ ಯತ್ನಾಳ್ ಮೂಲತಃ ಫ್ಯೂಡಲ್ ಮನಸ್ಥಿತಿಯ ಅರೆಬೆಂದ ರಾಜಕಾರಣಿ. ಬಿಜೆಪಿಯ ಸುರೇಶ್ ಕುಮಾರ್, ಸದಾನಂದ ಗೌಡ ಅವರಿಗಿರುವ ಕನಿಷ್ಠ ಪ್ರಮಾಣದ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ. ಯತ್ನಾಳ್ ದೃಷ್ಟಿಯಲ್ಲಿ ಹಿಂದುತ್ವ ಎಂದರೆ ಮುಸ್ಲಿಮ್ ಸಮುದಾಯವನ್ನು ಬಾಯಿಗೆ ಬಂದಂತೆ ನಿಂದಿಸುವುದು ಎಂದು ಭಾವಿಸಿದ್ದಾರೆ. ಉಗ್ರ ಹಿಂದುತ್ವದ ಚಾಂಪಿಯನ್ ಆಗಲು ಯತ್ನಿಸಿ ಅನಂತ ಕುಮಾರ್ ಹೆಗಡೆ, ಕೆ.ಎಸ್. ಈಶ್ವರಪ್ಪ, ಪ್ರತಾಪ ಸಿಂಹ ಮುಂತಾದವರು ಮುಗ್ಗರಿಸಿದ್ದು. ಸಿ.ಟಿ. ರವಿ, ಆರಗ ಜ್ಞಾನೇಂದ್ರ, ಅಶ್ವತ್ಥನಾರಾಯಣ್, ಅರವಿಂದ ಲಿಂಬಾವಳಿ ಮುಂತಾದವರು ಉಗ್ರ ಹಿಂದುತ್ವದ ಪ್ರತಿಪಾದಕರೇ ಆದರೂ ಬಾಯಿ ಬಡುಕರಂತೆ ಮಾತನಾಡುವುದಿಲ್ಲ. ಅವರೆಲ್ಲ ಅಷ್ಟೋ ಇಷ್ಟೋ ಸಂಘ ಪರಿವಾರದ ಮೂಲಕ ಪಡೆದ ಹಿಂದುತ್ವದ ತಿಳುವಳಿಕೆಯ ಹಿನ್ನೆಲೆಯಲ್ಲಿ ಮಾತಾಡುತ್ತಿರುತ್ತಾರೆ. ಯತ್ನಾಳ್‌ಗೆ ಅದೂ ಇಲ್ಲ.
ಬಸನಗೌಡ ಪಾಟೀಲ್ ಯತ್ನಾಳ್ 1994ರಿಂದ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ವಿಜಯ ಸಂಕೇಶ್ವರ ಕೃಪೆಯಿಂದ ಒಂದು ಬಾರಿ ಕೇಂದ್ರದಲ್ಲಿ ರಾಜ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೆ ಎಲ್ಲಿಯೂ ಅತ್ಯುತ್ತಮ ಸಂಸದೀಯ ಪಟುವೆನ್ನುವುದನ್ನು ಸಾಬೀತು ಪಡಿಸಿಲ್ಲ. ಕೇವಲ ಎರಡು ಮೂರು ಅವಧಿಗೆ ಶಾಸಕರಾಗಿರುವ ಕೃಷ್ಣಬೈರೇಗೌಡ ರಾಜ್ಯದ ಬಜೆಟ್ ಮೇಲೆ ಅತ್ಯುತ್ತಮವಾಗಿ ಮಾತನಾಡಬಲ್ಲ ಸಾಮರ್ಥ್ಯ ದಕ್ಕಿಸಿಕೊಂಡಿದ್ದಾರೆ. ಕೇವಲ ಒಂದು ಅವಧಿಗೆ ಶಾಸಕ, ಮಂತ್ರಿಯಾಗಿದ್ದ ಎನ್. ಮಹೇಶ್ ಅತ್ಯುತ್ತಮ ಸಂಸದೀಯ ಪಟು ಎನ್ನುವುದನ್ನು ರುಜುವಾತು ಪಡಿಸಿದ್ದಾರೆ. ಪಿ. ರಾಜೀವ್ ಸದನದಲ್ಲಿ ತಯಾರಿ ಮಾಡಿಕೊಂಡೇ ಮಾತನಾಡುತ್ತಾರೆ. ಆದರೆ ಬಸನಗೌಡ ಯತ್ನಾಳ್ ಉಡಾಫೆ ಮಾತುಗಳಿಗೆ ಸುದ್ದಿಯಾಗಿದ್ದಾರೆ ಹೊರತು ಅಪಾರ ಜ್ಞಾನಿಯಂತೆ ಯಾವತ್ತೂ ನಡೆದುಕೊಂಡಿಲ್ಲ.
ಬಸನಗೌಡ ಪಾಟೀಲ್ ಯತ್ನಾಳ್ ಲಿಂಗಾಯತ ಪಂಚಮಸಾಲಿ ಜಾತಿಯಲ್ಲಿ ಹುಟ್ಟಿದ್ದರೂ ಬಸವಾದಿ ಶರಣರ ತತ್ವಾದರ್ಶಗಳ ಪ್ರಭಾವ ಪ್ರೇರಣೆಯಲ್ಲಿ ಬೆಳೆದಿಲ್ಲ ಎಂಬುದು ಅವರ ಮಾತು-ನಡವಳಿಕೆಯಲ್ಲೇ ಗೊತ್ತಾಗುತ್ತದೆ. ಪಂಚಮಸಾಲಿ ಸಮುದಾಯದಲ್ಲಿ ಮಹಾನ್ ಚಿಂತಕರು, ಕಲಾವಿದರು, ಸಂಗೀತಗಾರರು ಹುಟ್ಟಿ ಸಾಧಕರಾಗಿದ್ದಾರೆ. ಆ ಕುರಿತು ಈ ಅಜ್ಞಾನಿಗೆ ಕನಿಷ್ಠ ತಿಳುವಳಿಕೆ ಇಲ್ಲ. ಖ್ಯಾತ ರಂಗಕರ್ಮಿ ಏಣಗಿ ಬಾಳಪ್ಪ, ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ, ಕ್ರಾಂತಿಕಾರಿ ಕಾದಂಬರಿಕಾರ ಬಸವರಾಜ ಕಟ್ಟೀಮನಿ ಮುಂತಾದವರು ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಪಂಚಮಸಾಲಿ ಸಮುದಾಯದ ಮೊದಲ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿಯವರಲ್ಲಿ ವಚನಗಳ ಪಾಠ ಹೇಳಿಸಿಕೊಂಡಿದ್ದರೂ ಯತ್ನಾಳ್‌ಗೆ ಶರಣ ಸಂಸ್ಕಾರ ದೊರೆಯುತ್ತಿತ್ತು. ಬಸನಗೌಡ ಪಾಟೀಲ್ ಮೂಲತಃ ಫ್ಯೂಡಲ್ ಮತ್ತು ಹುಂಬನಾಗಿರುವುದರಿಂದಲೇ ಬಿ.ಎಲ್. ಸಂತೋಷ್ ದಾಳವನ್ನಾಗಿ ಬಳಸಿಕೊಳ್ಳುತ್ತಿರುವುದು. ಇಲ್ಲಿಯವರೆಗೆ ಕರ್ನಾಟಕದಲ್ಲಿ ಕೇವಲ ಜಾತಿ-ಉಪಜಾತಿ ಬಲದ ಮೇಲೆ ದೊಡ್ಡ ಜನನಾಯಕನಾಗಿ ರೂಪುಗೊಂಡಿಲ್ಲ. ಯತ್ನಾಳ್ ಪರಮ ಸ್ವಾರ್ಥ ಮತ್ತು ಹೇಡಿಯಾಗಿರುವುದರಿಂದ ಪಂಚಮಸಾಲಿ ಸಮುದಾಯವೇ ಇವರನ್ನು ನಾಯಕನೆಂದು ಒಪ್ಪಿಕೊಂಡಿಲ್ಲ.
ಕುರುಬ ಸಮುದಾಯದಲ್ಲಿ ಸಾಕಷ್ಟು ನಾಯಕರಿದ್ದರು. ಆದರೆ ಆ ಸಮುದಾಯ ಜನನಾಯಕನೆಂದು ಒಪ್ಪಿಕೊಂಡಿದ್ದು ಸಿದ್ದರಾಮಯ್ಯನವರನ್ನು ಮಾತ್ರ. ಹಣಬಲ, ಮಾತಿನ ಬಲ ಉಳ್ಳವರು ಅನೇಕರಿದ್ದರು. ಕೆ.ಎಸ್. ಈಶ್ವರಪ್ಪ ಕೂಡ ಹಿಂದೂ ಹುಲಿಯೆಂದೇ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ದುರಂತವೆಂದರೆ ಆತ ಕುರುಬ ಸಮುದಾಯವು ಒಪ್ಪಿಕೊಳ್ಳುವ ನಾಯಕ ಆಗಲಿಲ್ಲ. ಈಶ್ವರಪ್ಪ ಅವರನ್ನೂ ಕೆಲವರು ದಾಳವನ್ನಾಗಿ ಬಳಸಿಕೊಂಡು ಬಿಸಾಡಿದರು. ಯತ್ನಾಳ್‌ಗೆ ಹೋಲಿಸಿದರೆ ಈಶ್ವರಪ್ಪ ಸದನದಲ್ಲಿ ಚೆನ್ನಾಗಿ ಮಾತನಾಡುತ್ತಿದ್ದರು. ಆದರೆ ಹಿಂದೂ ಹುಲಿಯಾಗಲು ಹೋಗಿ ಇಲಿಯಾದರು. ಹಾಗೆ ನೋಡಿದರೆ ಕುರುಬ ಸಮುದಾಯದಲ್ಲಿ ನಾಯಕರೇ ಕಡಿಮೆ; ಪಂಚಮಸಾಲಿ ಸಮುದಾಯಕ್ಕೆ ಹೋಲಿಸಿದರೆ. ಸಿದ್ದರಾಮಯ್ಯ ಹೊರತುಪಡಿಸಿದರೆ ಹೆಚ್ಚು ಬಾರಿ ಶಾಸಕರು, ಮಂತ್ರಿಯೂ ಆಗಿದ್ದ ಈಶ್ವರಪ್ಪ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರು. ಅಷ್ಟಾಗಿಯೂ ಅವರಿಗೆ ಸಮುದಾಯದ ನಾಯಕನಾಗಲು ಸಾಧ್ಯವಾಗಲಿಲ್ಲ. ಯಾವುದೇ ನಾಯಕನನ್ನು ಮೊದಲು ತಮ್ಮ ಸಮುದಾಯ ನಾಯಕನೆಂದು ಒಪ್ಪಿಕೊಳ್ಳಬೇಕು. ಬಸನಗೌಡ ಯತ್ನಾಳ್‌ಗೆ ಮೊದಲು ಪಂಚಮಸಾಲಿ ಸಮುದಾಯ ನಾಯಕನೆಂದು ಒಪ್ಪಿಕೊಳ್ಳಬೇಕು. ಆಮೇಲೆ ಸಮಸ್ತ ಲಿಂಗಾಯತರ ನಾಯಕನಾಗಬೇಕು. ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡುವ ಬಸನಗೌಡ ಯತ್ನಾಳ್‌ರನ್ನು ಲಿಂಗಾಯತರು ನಾಯಕನೆಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಯತ್ನಾಳ್ ಅವರ ಒಡಕು ಬಾಯಿಗೆ ಬಹುಪಾಲು ಮಠಾಧೀಶರು ಆಕ್ರೋಶ ವ್ಯಕ್ತಪಡಿಸಿ ಅವರ ನಡೆಯನ್ನು ಖಂಡಿಸಿದ್ದಾರೆ.
ಪಂಚಮಸಾಲಿ ಸಮುದಾಯದಲ್ಲಿ ಹಲವಾರು ನಾಯಕರಿದ್ದಾರೆ. ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್ ಶಾಸಕರಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಸಮುದಾಯ ಮತ್ತು ಮಠಮಾನ್ಯಗಳ ಜೊತೆಗೆ ಗುರುತಿಸಿಕೊಂಡಿದ್ದಾರೆ. ಹೀಗಿದ್ದೂ ಅವರ್ಯಾರಿಗೂ ಸಮುದಾಯದ ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಬಸನಗೌಡ ಪಾಟೀಲ್ ಯಾವ ಲೆಕ್ಕ? ಹಿಂದೂ ಹುಲಿಯಾಗಲು ಹಾತೊರೆಯುವವರ ಸಂಖ್ಯೆ ಬಿಜೆಪಿಯಲ್ಲಿ ದೊಡ್ಡದಿದೆ. ಕೆ.ಎಸ್. ಈಶ್ವರಪ್ಪ ಮುಸ್ಲಿಮ್ ಸಮುದಾಯದ ವಿರುದ್ಧ ಮಾತನಾಡಿ ಏನೆಲ್ಲ ಕಸರತ್ತು ಮಾಡಿದರೂ ಉಪಮುಖ್ಯಮಂತ್ರಿ ಹುದ್ದೆಯಾಚೆ ಮುಂದೆ ಹೋಗಲಿಲ್ಲ. ಈಗಂತೂ ಅವರನ್ನು ಬಿಜೆಪಿಯಿಂದಲೇ ಹೊರಹಾಕಲಾಗಿದೆ. ಪಂಚಮಸಾಲಿ ಸಮುದಾಯದ ಸಿ.ಸಿ. ಪಾಟೀಲ್, ನಿರಾಣಿ ತುಸು ಕ್ರಿಯಾಶೀಲರಾಗಿದ್ದರೆ ಆ ಸಮುದಾಯದ ನಾಯಕರಾಗುವ ಅವಕಾಶ ಪಡೆದಿದ್ದರು. ಅವರ ನಿಷ್ಕ್ರಿಯತೆಯನ್ನೇ ಬಸನಗೌಡ ಪಾಟೀಲ್ ಯತ್ನಾಳ್ ಬಂಡವಾಳ ಮಾಡಿಕೊಂಡು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ ಮತ್ತು ನಿರಾಣಿ ನಡುವೆ ಭಿನ್ನಾಭಿಪ್ರಾಯ ಮೂಡದೆ ಹೋಗಿದ್ದರೆ ಯತ್ನಾಳ್‌ಗೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಗುರುತಿಸಿಕೊಳ್ಳಲೂ ಅವಕಾಶ ಸಿಗುತ್ತಿರಲಿಲ್ಲ. ಅಷ್ಟಕ್ಕೂ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹಿಂದೂಗಳ ಬಗ್ಗೆಯಾಗಲೀ, ಪಂಚಮಸಾಲಿ ಸಮುದಾಯದ ಕುರಿತಾಗಲೀ ಕನಿಷ್ಠ ಪ್ರಮಾಣದ ಪ್ರೀತಿ, ಗೌರವ ಇಲ್ಲ. ಅವರು ನಡೆಸುವ ಶಾಲೆ, ಕಾಲೇಜುಗಳಲ್ಲಿ ಯಾವ ಬಡ ಹಿಂದೂಗಳ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡುವುದಿಲ್ಲ. ಪಂಚಮಸಾಲಿಗಳು ಬಡವರಾಗಿದ್ದರೆ ಅವರನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ. ದುಡ್ಡಿರುವ ಹಿಂದೂಗಳು ಮತ್ತು ಪಂಚಮಶಾಲಿಗಳಿಗೆ ಈತನ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ನೀಡುವುದಾದರೆ ಇವರಿಗೂ ಶಿಕ್ಷಣ ವ್ಯಾಪಾರಿಗೂ ಇರುವ ವ್ಯತ್ಯಾಸವೇನು? ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹಂಬಲಿಸಿದ ಎಂ.ಬಿ. ಪಾಟೀಲ್ ಕೂಡ ಬಡ ಲಿಂಗಾಯತರ ಶಿಕ್ಷಣಕ್ಕಾಗಿ ವಿಶೇಷ ವ್ಯವಸ್ಥೆಯೇನೂ ಮಾಡಿಲ್ಲ. ಬಸನಗೌಡ ಪಾಟೀಲ್ ಹಿಂದೂ ಮತ್ತು ಪಂಚಮಸಾಲಿಯ ಹೆಸರಲ್ಲಿ ಶಿಕ್ಷಣ ವ್ಯಾಪಾರ ಮಾಡುತ್ತಾರೆ. ಆದರೆ ಆ ಸಮುದಾಯದ ಬಡ ಮಕ್ಕಳಿಗೆ ಎಲ್ಲೂ ಅವಕಾಶ ನೀಡುವುದಿಲ್ಲ. ಬಸವನ ಹೆಸರಿಟ್ಟು ಕೊಂಡಿರುವ ಯತ್ನಾಳ್ ಹಿಂದೂ ಮತ್ತು ಬಡ ಪಂಚಮಸಾಲಿ ಸಮುದಾಯದವರಿಗೆ ಒಂದೇ ಒಂದು ಜನ ಮೆಚ್ಚುವ ಕೆಲಸ ಮಾಡಿದ ಉದಾಹರಣೆ ದೊರೆಯುವುದಿಲ್ಲ. ಚಿಂಚೋಳಿ ಸಮೀಪ ಸಕ್ಕರೆ ಕಾರ್ಖಾನೆ ಸ್ಥಾಪಿಸಿರುವ ಯತ್ನಾಳ್ ಅಲ್ಲೂ ಸ್ವಾರ್ಥವೇ ಮರೆದಿದ್ದಾರೆ. ರೈತರ ಮತ್ತು ಬಡವರ ಹಿತದ ಸಣ್ಣ ಕುರುಹು ಅಲ್ಲಿ ದೊರೆಯುವುದಿಲ್ಲ.
ಭ್ರಷ್ಟಾಚಾರ ಮತ್ತು ವಂಶಾಡಳಿತದ ವಿರುದ್ಧ ನಿತ್ಯ ಮಾತನಾಡುತ್ತಿರುವ ಯತ್ನಾಳ್ ಆತ್ಮಸಾಕ್ಷಿ ಮುಟ್ಟಿಕೊಂಡು ಸಿದ್ದೇಶ್ವರರ ಮೇಲೆ ಪ್ರಮಾಣ ಮಾಡಿ ಹೇಳಬೇಕು: ಸುದೀರ್ಘ ರಾಜಕೀಯ ಬದುಕಿನಲ್ಲಿ ಭ್ರಷ್ಟಾಚಾರವೇ ಮಾಡಿಲ್ಲವೆಂದು. ಈತ ನಿಜಕ್ಕೂ ಸತ್ಯ ಹರಿಶ್ಚಂದ್ರ ಆಗಿದ್ದರೆ ಒಂದೇ ಒಂದು ಚುನಾವಣೆ ಎದುರಿಸಿ ಗೆಲುವು ಸಾಧಿಸುತ್ತಿರಲಿಲ್ಲ. ದುಬಾರಿ ಶಾಲಾ-ಕಾಲೇಜುಗಳನ್ನು, ಸಕ್ಕರೆ ಫ್ಯಾಕ್ಟರಿಯನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ವಂಶಾಡಳಿತದ ವಿರುದ್ಧ ಮಾತನಾಡುವ ಯತ್ನಾಳ್ ಈಗಾಗಲೇ ಮಗ ರಾಮನಗೌಡನನ್ನು ರಾಜಕೀಯಕ್ಕೆ ತಂದಾಗಿದೆ. ಅಪ್ಪನ ನಂತರ ಮಗ ಬೇಡ ಎಂಬ ತತ್ವದಲ್ಲಿ ನಂಬಿಕೆ ಇದ್ದರೆ ಡಾ. ಎಂ.ಆರ್. ತಂಗಾ ಅವರಂತೆ ತನ್ನ ಉತ್ತರಾಧಿಕಾರಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗುತ್ತಾನೆ ಎಂದು ಘೋಷಿಸಲಿ. ಶಿಕ್ಷಣ ವ್ಯಾಪಾರ, ಸಕ್ಕರೆ ವ್ಯಾಪಾರ, ರೈತರ ಶೋಷಣೆ, ವಂಶದ ಕುಡಿ ರಾಮನಗೌಡ ರಾಜಕೀಯ ಪ್ರವೇಶ ಮತ್ತು ತರಬೇತಿ ಏನನ್ನು ಸೂಚಿಸುತ್ತದೆ? ರಾಮಕೃಷ್ಣ ಹೆಗಡೆಯವರು ತಮ್ಮ ಮಗ ಭರತ್ ಹೆಗಡೆಯವರನ್ನು ತಾವಿರುವ ವೇದಿಕೆ ಹತ್ತಲು ಬಿಡುತ್ತಿರಲಿಲ್ಲ. ಹಿರಿಯ ಮುತ್ಸದ್ದಿ ನಾಯಕ ನಿಜಲಿಂಗಪ್ಪನವರು ತಮ್ಮ ಮಕ್ಕಳನ್ನು ರಾಜಕೀಯದ ಸೋಂಕು ತಗಲದಂತೆ ನಿಗಾ ವಹಿಸಿದ್ದರು. ಕೆ.ಎಸ್. ಈಶ್ವರಪ್ಪ ಅವರ ಮಗ ಕಾಂತೇಶ ಹಾವೇರಿ ಲೋಕಸಭಾ ಟಿಕೆಟ್ ಕೇಳಿದಾಗ ಅದು ವಂಶವಾದ ಅನಿಸುವುದಿಲ್ಲ. ಬಸವರಾಜ ಬೊಮ್ಮಾಯಿ ಮಗ ಭರತ್ ಬೊಮ್ಮಾಯಿ ಶಿಗ್ಗಾಂವಿ ಅಭ್ಯರ್ಥಿಯಾಗಿದ್ದರು. ಆತನನ್ನು ಗೆಲ್ಲಿಸಲು ಯತ್ನಾಳ್‌ಹೋಗಿದ್ದರು. ಅರವಿಂದ ಲಿಂಬಾವಳಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆಗ ಅವರು ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕೊಡಿ ಅಂತ ಕೇಳಲೇ ಇಲ್ಲ. ತನಗೆ ಇಲ್ಲ ಅಂದರೆ ತನ್ನ ಹೆಂಡತಿಗೆ ಕೊಡಿ ಎಂದು ಕೇಳಿ ಟಿಕೆಟ್ ಪಡೆದರು. ಕುಮಾರ ಬಂಗಾರಪ್ಪ ಯತ್ನಾಳ್ ಜೊತೆಗೆ ಸೇರಿಕೊಂಡಿದ್ದಾರೆ. ಅವರು ತಮಗೆ ಅವಕಾಶ ಸಿಕ್ಕಿಲ್ಲ ಎಂದು ಬಂಡಾಯ ಗುಂಪು ಸೇರಿದ್ದಾರೆ ಹೊರತು ಪಕ್ಷದ ಸಾಮಾನ್ಯ ಕಾರ್ಯಕರ್ತರ ಒಳಿತಿಗಾಗಿ ಅಲ್ಲ. ಸ್ವಾರ್ಥಿಗಳ ಗುಂಪಿನ ನಾಯಕ ಯತ್ನಾಳ್, ಪರಮ ಸ್ವಾರ್ಥಿ ಎಂಬುದು ಬಿಡಿಸಿ ಹೇಳಬೇಕಿಲ್ಲ.
ಬಸನಗೌಡ ಪಾಟೀಲ್ ಯತ್ನಾಳ್ ದೊಡ್ಡ ಸಂಶೋಧಕನಂತೂ ಅಲ್ಲವೇ ಅಲ್ಲ. ಸ್ವಾರ್ಥ ಸಾಧನೆಗಾಗಿ ಚಿಲ್ಲರೆ ರಾಜಕಾರಣ ಮಾಡುತ್ತಿರುವ ಮರಿಪುಢಾರಿಯಷ್ಟೇ ಸಮಯ ಸಾಧಕ ಪುಢಾರಿಯೊಬ್ಬ ಬಸವಣ್ಣನವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂಬರ್ಥದ ಮಾತುಗಳನ್ನಾಡಿದಾಗ ರಾಜ್ಯ ಸರಕಾರ ತಕ್ಷಣವೇ ಆತನನ್ನು ಅರೆಸ್ಟ್ ಮಾಡಬೇಕಿತ್ತು. ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಅಪಮಾನಿಸುವುದೆಂದರೆ ಸಮಸ್ತ ಸಾಂಸ್ಕೃತಿಕ ಲೋಕವನ್ನು ತಿರಸ್ಕಾರ ಮನೋಭಾವದಿಂದ ಕಂಡಂತಾಗುತ್ತದೆ. ಬಸವಣ್ಣ ಒಂದು ಜಾತಿ, ಮತ, ಪಂಥಕ್ಕೆ ಸೀಮಿತವಾದ ನಾಯಕ ಅಲ್ಲ. ಘನವಾದ ತತ್ವ ಆದರ್ಶಗಳನ್ನು ಪ್ರತಿನಿಧಿಸುತ್ತಾರೆ. ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇಟ್ಟಿರುವ ಸಮಸ್ತ ಪ್ರಜ್ಞಾವಂತ ಸಮುದಾಯ ಯತ್ನಾಳ್ ಎಂಬ ರಣಹೇಡಿಯ ನೀಚ ಕೃತ್ಯವನ್ನು ಖಂಡಿಸಬೇಕು. ಭಾರತೀಯ ಜನತಾ ಪಕ್ಷಕ್ಕೆ, ಆ ಪಕ್ಷದ ನಾಯಕ ನರೇಂದ್ರ ಮೋದಿಯವರಿಗೆ ಬಸವಣ್ಣನವರ ಬಗ್ಗೆ ನಿಜವಾದ ಗೌರವ ಇದ್ದಿದ್ದರೆ ಯತ್ನಾಳ್‌ರನ್ನು ಪಕ್ಷದಿಂದ ಹೊರ ಹಾಕಬೇಕಿತ್ತು. ಬಿಜೆಪಿಗೆ ಬಸವಾದಿ ಶರಣರ ತತ್ವಗಳಲ್ಲಿ ನಂಬಿಕೆ ಇಲ್ಲ. ಬಸವಣ್ಣನ ಬಗ್ಗೆ ಕನಿಷ್ಠ ಗೌರವವೂ ಇಲ್ಲ. ಆದರೆ ಬಸವಾನುಯಾಯಿಗಳ ಮತ ಬೇಕು.
ಬಸನಗೌಡ ಯತ್ನಾಳ್‌ಗೆ ಹಿಂದೂ ಪ್ರತಿಪಾದಕ ಎಂದರೆ; ಮುಸ್ಲಿಮ್‌ಸಮುದಾಯವನ್ನು ಬಾಯಿಗೆ ಬಂದಂತೆ ಟೀಕಿಸುವುದು ಎಂಬ ಭಾವನೆ ಇದೆ. ಹಿಂದೂ ಧರ್ಮದ ಬಗ್ಗೆಯೇ ಆತನಿಗೆ ಗೌರವ ಇಲ್ಲ. ಮುಸ್ಲಿಮರನ್ನು ದ್ವೇಷಿಸುವುದು ಮಾತ್ರ ಹಿಂದೂ ಧರ್ಮದ ತಿರುಳು ಎಂದು ಆತ ಭಾವಿಸಿದಂತಿದೆ. ಮಹಾತ್ಮಾ ಗಾಂಧಿಯವರ ಈ ಮಾತುಗಳು ಎಲ್ಲಾ ಸಮುದಾಯದ ಮತಾಂಧರಿಗೂ ಅನ್ವಯಿಸುತ್ತದೆ. ಯತ್ನಾಳ್‌ರಂತಹವರಿಗೆ ಹೆಚ್ಚು ಅನ್ವಯಿಸುತ್ತದೆ. ಗಾಂಧಿ ಬರೆಯುತ್ತಾರೆ: ‘‘ತಪ್ಪು ತಿಳುವಳಿಕೆ ಬೇಡ ಎನ್ನುವವರು ಕುರ್‌ಆನ್‌ನ್ನೇ ಓದಲಿ. ಅದರಲ್ಲಿ ಹಿಂದೂಗಳಿಗೆ ಸಮ್ಮತವಾಗುವಂತಹ ನೂರಾರು ಮಾತುಗಳು ಸಿಗುತ್ತವೆ. ಕುರ್‌ಆನ್‌ನಲ್ಲಿ ನನಗೆ ಅರ್ಥವಾಗದ ಕೆಲವು ವಾಕ್ಯಗಳಿವೆ. ಅದಕ್ಕಾಗಿ ನಾನು ಮುಸಲ್ಮಾನರನ್ನು ತಿರಸ್ಕರಿಸಲೇ? ಎರಡೂ ಕೈ ಸೇರಿ ಚಪ್ಪಾಳೆ. ಇಬ್ಬರು ಕಲೆತು ಜಗಳ. ನನಗೆ ಜಗಳ ಬೇಡ ಎಂದರೆ ಮುಸಲ್ಮಾನರು ಏನು ಮಾಡಬಲ್ಲರು? ಹಾಗೆಯೇ ಮುಸಲ್ಮಾನರು ನನ್ನೊಡನೆ ಜಗಳವಾಡಲು ಸಿದ್ಧವಾಗಿಲ್ಲದಿದ್ದರೆ ನಾನೇನು ಮಾಡಬಲ್ಲೆ? ಗಾಳಿಯನ್ನು ಗುದ್ದಿದರೆ ಮೈನೋವು ಅಲ್ಲವೇ? ಪ್ರತಿಯೊಬ್ಬನೂ ತನ್ನ ಧರ್ಮದ ತಿರುಳನ್ನು ಅರಿತು ಅದರಂತೆ ನಡೆದರೆ, ಕಪಟಿ ಮತೋಪದೇಶಕರು ಹೇಳಿದಂತೆ ಕೇಳದಿದ್ದರೆ ಜಗಳಕ್ಕೆ ಅವಕಾಶವೇ ಇರದು’’ ಎಂದು.
ಫ್ಯೂಡಲ್ ಮನಸ್ಥಿತಿಯ ಬಸನಗೌಡ ಯತ್ನಾಳ್ ಮತಾಂಧ ಆಗಿರುವುದರಿಂದ ‘ಬಸವ ದ್ರೋಹಿ’ ಎನಿಕೊಂಡಿದ್ದಾರೆ. ಬಸವಾದಿ ಶರಣರ ತತ್ವ ಆದರ್ಶಗಳಲ್ಲಿ ನಂಬಿಕೆ ಇಟ್ಟಿರುವ ಸಮುದಾಯ ಯತ್ನಾಳ್‌ರಂತಹ ಕೂಗುಮಾರಿಯನ್ನು ತಿರಸ್ಕರಿಸಿದರೆ ಅಷ್ಟರಮಟ್ಟಿಗೆ ಕೋಮುವಾದವನ್ನು ಹಿಮ್ಮೆಟ್ಟಿಸಿದಂತೆ. ಈಗ ಯತ್ನಾಳ್‌ರನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸುತ್ತಿರುವ ಶಕ್ತಿಗಳೇ ಮುಂದೊಂದು ಕಷ್ಟ ದಿನ ಕಸದ ಬುಟ್ಟಿಗೆ ಎಸೆಯಬಹುದು. ಈ ಕೂಗುಮಾರಿಯೇ ಒಂದು ದಿನ ಸೂತ್ರದಾರನಿಗೆ ತಲೆನೋವು ತರಬಹುದು. ಅದೇನೇ ಇದ್ದರೂ ‘ದಯವೇ ಧರ್ಮದ ಮೂಲವಯ್ಯ’ ಎಂಬ ಬಸವಣ್ಣ ನವರ ಕಾಳಜಿಯ ಮಾತನ್ನು ಏಕಕಾಲಕ್ಕೆ ಬಸನಗೌಡ ಯತ್ನಾಳ್‌ಗೆ, ಆತನನ್ನು ಆಡಿಸುತ್ತಿರುವ ಸೂತ್ರದಾರನಿಗೆ ಗಟ್ಟಿದನಿಯಲ್ಲಿ ಹೇಳಬೇಕಿದೆ.