ಸುದ್ದಿಯಲ್ಲಿರುವವರೇ ಸಾಧಕರು...
ಸಾಧಕರು ಸುದ್ದಿಯಲ್ಲಿ ಇರಬಾರದು ಎಂದೇನಿಲ್ಲ. ಆದರೆ ಸುದ್ದಿಯಲ್ಲಿ ಇರುವವರು ಮಾತ್ರ ಸಾಧಕರು ಎಂಬ ಸಾಮಾನ್ಯ ಗ್ರಹಿಕೆಯಲ್ಲಿ ಬದಲಾವಣೆ ಬರಬೇಕು. ಸ್ವಾರ್ಥ, ಸ್ವಜನ ಪಕ್ಷಪಾತ, ಜಾತೀಯತೆ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿ ಉಳಿದಿಲ್ಲ. ಎಲ್ಲ ಕ್ಷೇತ್ರದಲ್ಲೂ ಆ ಪಿಡುಗು ಒಂದು ಸಾಂಕ್ರಾಮಿಕ ರೋಗದಂತೆ ಆವರಿಸಿದೆ. ದುಡ್ಡೇ ದೊಡ್ಡಪ್ಪ ಎನ್ನುವಂತೆ ಸುದ್ದಿಯಲ್ಲಿ ಇರುವವರೇ ಸಾಧಕರಾದರೆ ಕನ್ನಡ ಸಂಸ್ಕೃತಿ ಅವಸಾನದತ್ತ ಸಾಗುತ್ತಿದೆ ಎಂದೇ ಭಾವಿಸಬೇಕಾಗುತ್ತದೆ.
ಇಂದು ಕಾಲ ಬದಲಾಗಿದೆ. ಕಾಲ ಎಷ್ಟೊಂದು ಕ್ರೂರವಾಗಿ ಬದಲಾಗಿದೆಯೆಂದರೆ: ನಿಜವಾದ ಸಾಧಕರನ್ನು ಗುರುತಿಸಿ ಗೌರವಿಸುವುದು ವ್ಯರ್ಥ ಕಸರತ್ತು ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ. ವಿಶೇಷವಾಗಿ ಅಧಿಕಾರದಲ್ಲಿ ಇರುವವರು ಮತ್ತು ಅಧಿಕಾರ ಸ್ಥಾನಕ್ಕೆ ಹತ್ತಿರವಾಗಿರುವವರು ಈ ಮನೋಧರ್ಮವನ್ನು ರೂಢಿಸಿಕೊಂಡಿದ್ದಾರೆ. ಈ ಮನೋಭಾವ ಎಲ್ಲ ಕ್ಷೇತ್ರಗಳಲ್ಲಿ ವ್ಯಾಪಿಸಿದೆ. ಸಾಹಿತ್ಯ, ಸಂಗೀತ, ಲಲಿತ ಕಲೆ, ಮಾಧ್ಯಮ, ವಿಜ್ಞಾನ-ತಂತ್ರಜ್ಞಾನ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ನಿಜವಾದ ಸಾಧಕರು ಹಿಂದೆ ಸರಿದು ಸುದ್ದಿವೀರರೇ ವಿಜೃಂಭಿಸುತ್ತಿದ್ದಾರೆ..
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಗೊ.ರು. ಚನ್ನಬಸಪ್ಪ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ. ಇಲ್ಲಿ ಪ್ರತಿಭೆಗಿಂತಲೂ ಸದಾ ಸುದ್ದಿಯಲ್ಲಿರುವ ಅವರ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದಂತಿದೆ.. ಹಾಗೆ ನೋಡಿದರೆ ಗೊ.ರು. ಚನ್ನಬಸಪ್ಪ ಅವರು ಮಹಾನ್ ಪ್ರತಿಭಾವಂತ ಸಾಹಿತಿಯೇನೂ ಅಲ್ಲ. ಅವರ ಸಾಹಿತ್ಯ ಸಾಧನೆಗೆ ಹೋಲಿಸಿದರೆ ಹಲವಾರು ಜನ ಪ್ರತಿಭಾವಂತ ಸಾಹಿತಿಗಳು ಕನ್ನಡದಲ್ಲಿ ಇದ್ದಾರೆ.
ಸಮಾಧಾನದ ಸಂಗತಿಯೆಂದರೆ, ಗೊ.ರು. ಚನ್ನಬಸಪ್ಪ ಅವರು ಕೋಮುವಾದಿ ಮತ್ತು ವಿಚ್ಛಿದ್ರಕಾರಿ ಶಕ್ತಿಗಳ ಪರವಾಗಿಲ್ಲ. ಜಾನಪದ, ಶರಣ ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ ಹೊರತು ಯಾವೊಂದು ಕ್ಷೇತ್ರದಲ್ಲೂ ಮಹತ್ವದ ಸಾಧನೆ ಮಾಡಿಲ್ಲ. ಅವರನ್ನು ಸಾಹಿತ್ಯ ಕ್ಷೇತ್ರದ ಮಹಾನ್ ಸಾಧಕ ಎನ್ನುವುದಕ್ಕಿಂತಲೂ ಸಾಹಿತ್ಯ ಪರಿಚಾರಕ ಎಂದು ಗುರುತಿಸಬಹುದು. ಪ್ರೊ. ಕೆ.ಜಿ. ನಾಗರಾಜಪ್ಪ, ಡಾ. ಜಿ.ಎಸ್. ಸಿದ್ದಲಿಂಗಯ್ಯ, ಸಿ.ಎನ್. ರಾಮಚಂದ್ರನ್, ಡಾ. ಬಿ.ಎ. ವಿವೇಕ್ ರೈ, ಡಾ. ಕೆ.ವಿ. ನಾರಾಯಣ, ಬೋಳುವಾರು, ವೈದೇಹಿ, ವೀಣಾ ಶಾಂತೇಶ್ವರ, ಸ. ಉಷಾ ಅವರಂತೆ ನಿರ್ದಿಷ್ಟ ಸಾಹಿತ್ಯ ಪ್ರಕಾರಗಳಲ್ಲಿ ವಿಶೇಷ ಸಾಧನೆ ಮಾಡಿದವರಲ್ಲ. ಜಾನಪದ ಕ್ಷೇತ್ರದಲ್ಲೂ ಗೊ.ರು. ಚನ್ನಬಸಪ್ಪ ಅವರದು ತಜ್ಞತೆಯ ಕೆಲಸವಿಲ್ಲ. ಜಾನಪದ ಅಕಾಡಮಿಯ ಅಧ್ಯಕ್ಷರಾಗಿದ್ದರು, ಜಾನಪದ ವಿವಿ ಸ್ಥಾಪನೆಗೆ ಶ್ರಮಿಸಿದರು, ‘ಹೊನ್ನ ಬಿತ್ತೇವು ಹೊಲಕೆಲ್ಲ’ ಎಂಬಂತಹ ಕೃತಿಗಳನ್ನು ಹೊರ ತಂದರು ಎಂಬುದು ಅವರ ಹೆಗ್ಗಳಿಕೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎದ್ದು ಕಾಣುವ ಕೆಲಸ ಮಾಡಿದ್ದಾರೆ. ಶರಣ ಸಾಹಿತ್ಯದ ಪ್ರಸಾರಕ್ಕೆ ಜಿಲ್ಲಾ ಮಟ್ಟದಲ್ಲಿ ವೇದಿಕೆಗಳನ್ನು ನಿರ್ಮಿಸಿದ್ದಾರೆ.
ಇಷ್ಟಾಗಿಯೂ ಅವರ ಸಾಧನೆ ಜಾನಪದ, ಶರಣ ಸಾಹಿತ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಗಮನ ಸೆಳೆಯುವುದಿಲ್ಲ. ಅವರು ವಿವಿಧ ಸಂಸ್ಥೆಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರಿಂದ ಪ್ರತಿದಿನ ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿದ್ದರು. ಆ ಸುದ್ದಿಗಳನ್ನು ಓದಿದ ಕನ್ನಡ ಸಾರಸ್ವತ ಲೋಕ ಕನ್ನಡ ಸಾಹಿತ್ಯ ಲೋಕದ ಮಹಾನ್ ಸಾಧಕ ಎಂದು ಭಾವಿಸಿತು.
ಕನ್ನಡದಲ್ಲಿ ರಾಘವೇಂದ್ರ ಖಾಸನೀಸರು ಅತ್ಯುತ್ತಮ ಕತೆಗಳನ್ನು ಬರೆದವರು. ಕನ್ನಡ ಸಾಹಿತ್ಯವನ್ನು ಪ್ರೀತಿಯಿಂದ ಓದಿದವರಿಗೆ ಅವರ ಕತೆಗಳ ಶಕ್ತಿ ಗೊತ್ತಿರುತ್ತದೆ. ಆದರೆ ಅವರ ಸಾಧನೆ ಬಗ್ಗೆ ಸುದ್ದಿಗಳನ್ನು ಮಾತ್ರ ಗಮನಿಸಿ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವವರಿಗೆ ತಿಳಿದಿರುವುದಿಲ್ಲ. ಹತ್ತಿಪ್ಪತ್ತು ವರ್ಷಗಳ ಹಿಂದೆ ಸಾಹಿತ್ಯ ಸಾಧಕರಲ್ಲದವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದರೆ ಪ್ರತಿರೋಧ ಕಾಣಿಸುತಿತ್ತು.
ಧಾರವಾಡದ ಡಾ. ಆರ್.ಸಿ. ಹಿರೇಮಠ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಆಗ ವ್ಯಾಪಕ ಪ್ರತಿರೋಧ ವ್ಯಕ್ತವಾಗಿ ಪರ್ಯಾಯ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಹಾಗೆ ನೋಡಿದರೆ ಡಾ. ಆರ್.ಸಿ. ಹಿರೇಮಠ್ ಅವರು ಭಾಷಾ ವಿಜ್ಞಾನ ಮತ್ತು ಕನ್ನಡ ಶಾಸ್ತ್ರ ಸಾಹಿತ್ಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಶರಣ ಸಾಹಿತ್ಯದ ಪ್ರಕಟಣೆ, ಪ್ರಸಾರ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಸಾಹಿತ್ಯ ಕ್ಷೇತ್ರ ಮಾತ್ರವಲ್ಲ ಒಟ್ಟಾರೆ ಕನ್ನಡ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗುಣಗ್ರಾಹಿತನ ಮಾಯವಾಗುತ್ತಿದೆ.
ಕೇವಲ ಹದಿನೈದು ವರ್ಷಗಳ ಹಿಂದೆ ಕನ್ನಡದಲ್ಲಿ ಒಂದು ಒಳ್ಳೆಯ ಪುಸ್ತಕ ಪ್ರಕಟವಾದರೆ ಆ ಕೃತಿಯ ಕುರಿತು ಒಳ್ಳೆಯ ಅಥವಾ ಕೆಟ್ಟ ವಿಮರ್ಶೆ ಬರೆಯುತ್ತಿದ್ದರು. ಆದರೆ ಯಾರೊಬ್ಬರೂ ಆ ಕೃತಿಯನ್ನು ನಿರ್ಲಕ್ಷಿಸುತ್ತಿರಲಿಲ್ಲ. ಅತ್ಯುತ್ತಮ ಕೃತಿಯನ್ನು ಹೊಗಳಿಯೋ ತೆಗಳಿಯೋ ಚರ್ಚೆಗೆ ಒಳಪಡಿಸುತ್ತಿದ್ದರು. ಅತ್ಯುತ್ತಮ ಕಾವ್ಯ, ಕತೆ, ಕಾದಂಬರಿ ಮತ್ತು ವಿಮರ್ಶೆಯ ಕೃತಿಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ಹಾಗೆ ನೋಡಿದರೆ ಆಗ ಪತ್ರಿಕೆಗಳೇ ಸಾಹಿತ್ಯ ಸಂವಾದಕ್ಕೆ ವೇದಿಕೆಯೊದಗಿಸುತ್ತಿದ್ದವು. ಈಗ ಮಾಧ್ಯಮ ವಿಸ್ತರಣೆಗೊಂಡಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಯಾವ್ಯಾವುದೋ ವಿಷಯಗಳ ಚರ್ಚೆ ನಡೆಯುತ್ತದೆ. ಆದರೆ ಅತ್ಯುತ್ತಮ ಸಾಹಿತ್ಯ ಕೃತಿಗಳ ಕುರಿತು ಗಂಭೀರ ಸಂವಾದವೇ ನಡೆಯುವುದಿಲ್ಲ. ದಿನ ಪತ್ರಿಕೆಗಳಲ್ಲಿ ಸಾಹಿತ್ಯದ ಪ್ರಾಧಾನ್ಯತೆ ಕಡಿಮೆಯಾಗಿದೆ. ಒಂದೆರಡು ಪತ್ರಿಕೆಗಳು ಸಾಹಿತ್ಯಕ್ಕೆ ಅವಕಾಶ ಕಲ್ಪಿಸಿದರೂ ಒಂದು ಗುಂಪಿನ ಚರ್ಚಾ ಕೂಟದ ಸ್ವರೂಪ ಪಡೆದುಕೊಂಡಿದೆ.
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ, ಕರ್ನಾಟಕ ಸರಕಾರ ಕೊಡುವ ವಿವಿಧ ಪ್ರಶಸ್ತಿಗಳ ಆಯ್ಕೆಯಲ್ಲಿ ಸಾಧನೆ ಪರಿಗಣಿತವಾಗುತ್ತಿಲ್ಲ. ಪ್ರಶಸ್ತಿಗೆ ಆಯ್ಕೆಯಾಗುವ ವ್ಯಕ್ತಿ ಎಷ್ಟು ಜನಪ್ರಿಯ ಎನ್ನುವುದು ಮಾನದಂಡವಾಗುತ್ತಿದೆ. ಜನಪ್ರಿಯವಾಗುವುದೆಂದರೆ ಸದಾ ಸುದ್ದಿಯಲ್ಲಿರುವುದು. ಕೆಲವು ಪ್ರತಿಭಾವಂತ ಸಾಹಿತಿಗಳು ತಮ್ಮಷ್ಟಕ್ಕೆ ತಾವು ಅತ್ಯುತ್ತಮ ಸಾಹಿತ್ಯ ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಈ ಕಾಲದಲ್ಲಿ ಒಬ್ಬ ವ್ಯಕ್ತಿ ದೇಶ ಭಕ್ತ ಮತ್ತು ಸೆಕ್ಯುಲರ್ ಅನಿಸಿಕೊಳ್ಳುವುದು ಬಹಳ ಸರಳವಾಗಿದೆ. ಮೋದಿಯವರನ್ನು ವಾಚಾಮಗೋಚರವಾಗಿ ಟೀಕಿಸಿದರೆ ದಿನ ಬೆಳಗಾಗುವುದರಲ್ಲಿ ಆತ ಸೆಕ್ಯುಲರ್ ಅನಿಸಿಕೊಳ್ಳುತ್ತಾನೆ.. ಮುಸ್ಲಿಮ್ ಸಮುದಾಯವನ್ನು ಕಟುವಾಗಿ ಟೀಕಿಸಿದ ವ್ಯಕ್ತಿ ಬಿಜೆಪಿಯವರಿಗೆ ಪ್ರಿಯವಾದ ಉಗ್ರ ಹಿಂದೂ ಎನಿಸಿಕೊಳ್ಳುತ್ತಾನೆ.. ಪ್ರತಿದಿನ ಸಾಹಿತ್ಯ, ಸಂಸ್ಕೃತಿ ಕುರಿತು ಪತ್ರಿಕೆಗಳಲ್ಲಿ ಕರೆ ಕೊಡುತ್ತಾ ಸುದ್ದಿಯಲ್ಲಿದ್ದರೆ ಆ ವ್ಯಕ್ತಿ ಜನಸಾಮಾನ್ಯರ ಕಣ್ಣಲ್ಲಿ ಮಹಾನ್ ಸಾಹಿತಿ ಎನಿಸಿಕೊಳ್ಳುತ್ತಾನೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ, ತಾಲೂಕು ಸಾಹಿತ್ಯ ಸಮ್ಮೇಳನಗಳಿಗೆ ಸಾಹಿತ್ಯದ ಗಂಧ ಗಾಳಿಯೇ ಇಲ್ಲದವರು ಸಮ್ಮೇಳನಾಧ್ಯಕ್ಷರಾಗಿ ಮೆರೆಯುತ್ತಿದ್ದಾರೆ. ಹಾಗೆ ಮೆರೆಯಲು ಅವರಿಗೆ ಲಜ್ಜೆ ಕೂಡ ಅನಿಸುವುದಿಲ್ಲ.
ಈ ರೋಗ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಸಂಗೀತ ಕ್ಷೇತ್ರದಲ್ಲಿ ಹತ್ತಿಪ್ಪತ್ತು ವರ್ಷ ಹಗಲಿರುಳು ಸಾಧನೆ ಮಾಡಿದವರು ಎಲ್ಲೋ ಮೂಲೆಯಲ್ಲಿ ಇರುತ್ತಾರೆ. ನಾಲ್ಕೈದು ಜನಪ್ರಿಯ ಹಾಡುಗಳನ್ನು ಹಾಡಿದರೆ ದಿನ ಬೆಳಗಾಗುವುದರೊಳಗೆ ಆ ವ್ಯಕ್ತಿ ಸ್ಟಾರ್ ಪಟ್ಟ ಅಲಂಕರಿಸುತ್ತಾನೆ. ‘‘ಪ್ಯಾರ್‌ಗೆ ಆಗಿ ಬಿಟೈತಿ’’ ಅಂತ ಒಂದು ಕೆಟ್ಟ ಹಾಡು ವೈರಲ್ ಆಯಿತು. ಆ ಹಾಡು ಹಾಡಿದ ಗಾಯಕಿ ಸ್ಟಾರ್ ಆದರು. ಹಾಗೆ ನೋಡಿದರೆ ಒಂದು ಜನಾಂಗದ ಕನ್ನಡ ಭಾಷಾ ಸಾಮರ್ಥ್ಯವನ್ನು ಅಣಕಿಸುವ ಹಾಡು ಅದು. ಚಿತ್ರ ಮತ್ತು ಶಿಲ್ಪಕಲಾ ಕ್ಷೇತ್ರದಲ್ಲಿ ಯಾರು ನಿಜವಾದ ಸಾಧಕರು ಎಂಬುದನ್ನು ಗುರುತಿಸುವುದೇ ಕಷ್ಟಕರವಾಗಿದೆ. ಮೀಡಿಯಾ ಮ್ಯಾನೇಜ್ ಮಾಡಿ ಸುದ್ದಿಯಲ್ಲಿ ಇರುವ ಕಲಾವಿದ ಸ್ಟಾರ್ ಎನಿಸಿಕೊಳ್ಳುತ್ತಾನೆ. ಎಷ್ಟೋ ಜನ ಕಲಾವಿದರು ಬೇರೆಯವರಿಂದ ಕಲಾಕೃತಿಗಳನ್ನು ಮಾಡಿಸಿ ತಾವು ಹೆಸರು ಮಾಡುತ್ತಾರೆ. ಶಿಲ್ಪಗಳನ್ನು ಬೇರೆಯವರಿಂದ ಕೆತ್ತಿಸಿ ಶಿಲ್ಪಿಗಳು ಎನಿಸಿಕೊಂಡವರಿದ್ದಾರೆ. ರಾಮನ ಮೂರ್ತಿ ಕೆತ್ತಿದ ಶಿಲ್ಪಿ ಸಣ್ಣ ವಯಸ್ಸಿನವರು. ಆದರೆ ಸುದ್ದಿಯಲ್ಲಿದ್ದರು, ರಾಜ್ಯೋತ್ಸವದ ಪ್ರಶಸ್ತಿಗೆ ಭಾಜನನಾದರು. ಆದರೆ ಸುದ್ದಿಯಲ್ಲಿ ಇರದ ಮಹಾನ್ ಪ್ರತಿಭಾವಂತ ಶಿಲ್ಪಿಗಳು ಪ್ರಶಸ್ತಿ ಆಯ್ಕೆ ಸಮಿತಿಯ ಗಮನಕ್ಕೆ ಬರಲೇ ಇಲ್ಲ.
ರಾಜಕೀಯದಲ್ಲೂ ಅಷ್ಟೇ, ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದವರು, ಅತ್ಯುತ್ತಮ ಸಂಸದೀಯ ಪಟು ಎನಿಸಿಕೊಂಡವರಿಗೆ ಮಂತ್ರಿಗಿರಿ ಸೇರಿದಂತೆ ಯಾವ ಮಹತ್ವದ ಹುದ್ದೆ ದೊರೆಯುವುದಿಲ್ಲ. ಸದಾ ಸುದ್ದಿಯಲ್ಲಿರುವವರು, ದಡ್ಡರು, ಹಣವಂತರು ಉನ್ನತ ಸ್ಥಾನ ಅಲಂಕರಿಸುತ್ತಾರೆ, ಒಳ್ಳೆಯ ಖಾತೆಗಳಿಗೆ ಮಂತ್ರಿಯಾಗುತ್ತಾರೆ. ಮುಖ್ಯಮಂತ್ರಿಗೆ ಆಪ್ತರಾಗಿರುತ್ತಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿನ ನಡೆಯಷ್ಟೇ ಅಲ್ಲ ಎಲ್ಲ ಪಕ್ಷಗಳಲ್ಲೂ ಇದು ಸರ್ವೇ ಸಾಮಾನ್ಯವಾಗಿದೆ. ಬಿಜೆಪಿಯಲ್ಲಿ ವಿಜಯೇಂದ್ರ, ಹುಂಬ ಬಸನಗೌಡ, ಏನೂ ಗೊತ್ತಿಲ್ಲದ ಆರ್. ಅಶೋಕ್ ಮುಂತಾದವರು ನಾಯಕರು. ಸುರೇಶ್ ಕುಮಾರ್ ತರಹದ ಬುದ್ಧಿವಂತರು ಯಾರಿಗೂ ಬೇಡವಾಗಿದ್ದಾರೆ. ಜೆಡಿಎಸ್‌ನಲ್ಲಿ ಸಾ.ರಾ. ಮಹೇಶ್, ಬಂಡೆಪ್ಪ ಕಾಶೇಂಪುರ ಮುಂತಾದವರು ಕುಮಾರಸ್ವಾಮಿಗೆ ಆಪ್ತರು. ಜಿ.ಟಿ. ದೇವೇಗೌಡ ತರಹದವರು ಅಂಚಿಗೆ ತಳ್ಳಲ್ಪಡುತ್ತಾರೆ.
ಇನ್ನೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲೂ ಸುಧಾ ಮೂರ್ತಿ, ನಾರಾಯಣ ಮೂರ್ತಿ ತರಹದವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಅವರನ್ನೇ ಐ.ಟಿ. ಕ್ಷೇತ್ರದ ಮಹಾನ್ ದಿಗ್ಗಜರು ಎಂದು ಭಾವಿಸುತ್ತೇವೆ. ಇನ್ನೂ ಅಸಂಖ್ಯಾತ ಸಾಧಕರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುತ್ತಾರೆ. ಪಿ.ಆರ್.ಒ. ಇಟ್ಟುಕೊಂಡು ಸುದ್ದಿಯಲ್ಲಿರುವ ಐ.ಟಿ., ಬಿ.ಟಿ.ಯವರು, ವೈದ್ಯರು ಶ್ರೇಷ್ಠ ಸಾಧಕರು ಎನಿಸಿಕೊಳ್ಳುತ್ತಾರೆ. ಆದರೆ ತಮ್ಮ ಪಾಡಿಗೆ ತಾವು ಕೆಲಸ ಮಾಡುವವರು ಯಾರಿಗೂ ಕಾಣಿಸುವುದಿಲ್ಲ. ಹುಡುಕುವ ಗೋಜಿಗೂ ಯಾರೂ ಹೋಗುವುದಿಲ್ಲ.. ಇಲೆಕ್ಟ್ರಾನಿಕ್ ಮಾಧ್ಯಮಗಳು ಸಂದರ್ಶನಕ್ಕೆ ಆಯ್ಕೆ ಮಾಡುವುದೇ ವಿವಾದದ ಸುಳಿಯಲ್ಲಿ ಸಿಲುಕಿರುವ, ಸುದ್ದಿಯಲ್ಲಿರುವ ಪುಢಾರಿಗಳನ್ನೇ ಹೊರತು ನಿಜವಾದ ಕಾಳಜಿ ಮತ್ತು ಪ್ರತಿಭಾವಂತರನ್ನಲ್ಲ. ಕಾಲ ಬದಲಾಗುವುದು ಸಹಜ. ಆದರೆ ನಿಜವಾದ ಸಾಧಕರನ್ನು, ಪ್ರತಿಭಾವಂತರನ್ನು ಗುರುತಿಸದಷ್ಟು ಬದುಕು ಬದಲಾಗಬಾರದು. ನಿಜವಾದ ಸಾಧಕರಿಗೆ ಮನ್ನಣೆ ದೊರೆಯಲಿಲ್ಲ ಎಂಬ ಕಾರಣಕ್ಕೆ ಯಾವ ಸಾಧನೆ ಸಿದ್ಧಿಗಳು ಸ್ಥಗಿತಗೊಳ್ಳುವುದಿಲ್ಲ. ಆದರೆ ಎಲ್ಲ ಕ್ಷೇತ್ರದ ನೈಜ ಸಾಧಕರನ್ನು ಗುರುತಿಸಿ ಮನ್ನಣೆ ನೀಡುವುದು ಪ್ರಜ್ಞಾವಂತ ಸಮಾಜದ ಜವಾಬ್ದಾರಿಯಾಗಿರುತ್ತದೆ.
ರಾಜಕೀಯ ಕ್ಷೇತ್ರದಲ್ಲಿನ ಅತ್ಯುತ್ತಮ ಮಾದರಿಗಳನ್ನು ಗುರುತಿಸಿ ಮನ್ನಣೆ ನೀಡುವುದೆಂದರೆ, ಅತ್ಯುತ್ತಮ ಮಾದರಿಗಳ ಪರಂಪರೆ ಮುಂದುವರಿಯಲು ಉತ್ತೇಜಿಸಿದಂತೆ. ಜನಾರ್ದನ್ ರೆಡ್ಡಿ, ಶ್ರೀರಾಮುಲು, ಬಸನಗೌಡ, ಭೈರತಿ, ಝಮೀರ್ ಬದಲಿಗೆ ನಿಜವಾದ ಸಂಸದೀಯ ಪಟುಗಳನ್ನು ಗುರುತಿಸಿದರೆ ಮುಂದಿನ ಪೀಳಿಗೆಗೆ ಉತ್ತಮ ಮಾದರಿಗಳನ್ನು ತೋರಿಸಿಕೊಟ್ಟಂತೆ ಆಗುತ್ತದೆ.
ಕನ್ನಡ ಪರಂಪರೆಯೇ ಅತ್ಯುತ್ತಮ ಮಾದರಿಗಳನ್ನು ಸೃಷ್ಟಿಸುವಲ್ಲಿ ಹೆಸರು ವಾಸಿ. ಸಾಹಿತ್ಯ, ಸಂಸ್ಕೃತಿ, ಸಂಗೀತ, ಲಲಿತ ಕಲೆ, ಮಾತ್ರವಲ್ಲ ಹೋರಾಟ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಮಾದರಿಗಳಿಗೆ ತವರೂರಿನಂತಿದೆ. ಸುದ್ದಿಯಲ್ಲಿರುವವರೇ ಸಾಧಕರೆನಿಸಿಕೊಳ್ಳುವುದು ಕನ್ನಡ ಸಂಸ್ಕೃತಿಯನ್ನು ಅಪಮಾನಿಸಿದಂತೆ. ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವವರು ಕನ್ನಡದ ಸಾಕ್ಷಿಪ್ರಜ್ಞೆಯಂತಿರಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿಯವರು ಯಾರ್ಯಾರಿಗೋ ಸಮ್ಮೇಳನದ ಅಧ್ಯಕ್ಷರನ್ನಾಗಿಸಲು ತಯಾರು ನಡೆಸಿದ್ದರು. ಅದು ತಪ್ಪಿದ್ದು ಒಳ್ಳೆಯದೇ ಆಯಿತು. ಆದರೆ ಕನ್ನಡದ ನೈಜ ಸಾಧಕರನ್ನು ಎಲ್ಲ ಕ್ಷೇತ್ರಗಳಲ್ಲಿ ಕಡೆಗಣಿಸುತ್ತಿರುವುದು ದುರಂತದ ಸಂಗತಿ. ಸಾಧಕರು ಸುದ್ದಿಯಲ್ಲಿ ಇರಬಾರದು ಎಂದೇನಿಲ್ಲ. ಆದರೆ ಸುದ್ದಿಯಲ್ಲಿ ಇರುವವರು ಮಾತ್ರ ಸಾಧಕರು ಎಂಬ ಸಾಮಾನ್ಯ ಗ್ರಹಿಕೆಯಲ್ಲಿ ಬದಲಾವಣೆ ಬರಬೇಕು. ಸ್ವಾರ್ಥ, ಸ್ವಜನ ಪಕ್ಷಪಾತ, ಜಾತೀಯತೆ ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿ ಉಳಿದಿಲ್ಲ. ಎಲ್ಲ ಕ್ಷೇತ್ರದಲ್ಲೂ ಆ ಪಿಡುಗು ಒಂದು ಸಾಂಕ್ರಾಮಿಕ ರೋಗದಂತೆ ಆವರಿಸಿದೆ. ದುಡ್ಡೇ ದೊಡ್ಡಪ್ಪ ಎನ್ನುವಂತೆ ಸುದ್ದಿಯಲ್ಲಿ ಇರುವವರೇ ಸಾಧಕರಾದರೆ ಕನ್ನಡ ಸಂಸ್ಕೃತಿ ಅವಸಾನದತ್ತ ಸಾಗುತ್ತಿದೆ ಎಂದೇ ಭಾವಿಸಬೇಕಾಗುತ್ತದೆ.
ಸುದ್ದಿಯಲ್ಲಿ ಇರುವವರೇ ಸಾಧಕರು ಎಂಬ ಈ ತಪ್ಪು ಗ್ರಹಿಕೆಗೆ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಸರ್ವಾಧ್ಯಕ್ಷರ ಆಯ್ಕೆ ಒಂದು ತಾಜಾ ನಿದರ್ಶನವಷ್ಟೇ. ಆದರೆ ಈ ಮಾತಿಗೆ ಎಲ್ಲ ಕ್ಷೇತ್ರಗಳು ಹೊರತಾಗಿಲ್ಲ. ಎಲ್ಲ ಕ್ಷೇತ್ರದ ನೈಜ ಸಾಧಕರನ್ನು ಗುರುತಿಸಿ ಮನ್ನಣೆ ನೀಡುವ ಸತ್ಪರಂಪರೆ ಎಂದೆಂದಿಗೂ ಉಳಿದು ಮುಂದುವರಿಯಬೇಕು.. ಆಗ ಮಾತ್ರ ಕನ್ನಡ ಸಂಸ್ಕೃತಿ ಮತ್ತಷ್ಟು ಎತ್ತರಕ್ಕೆ ಬೆಳೆಯಬಲ್ಲದು.
ಸಮಾಜದಲ್ಲಿ ಮಾರುಕಟ್ಟೆ ಸಂಸ್ಕೃತಿ ಜಾಗತೀಕರಣದ ನಂತರ ವ್ಯಾಪಕವಾಗಿ ಆವರಿಸಿದೆ. ಸಂಸ್ಕೃತಿ ಮತ್ತು ಕಲಾ ಕ್ಷೇತ್ರ ಜಾಗತೀಕರಣದ ಪ್ರಭಾವದಿಂದ ಹೊರತಾಗಿರಲು ಸಾಧ್ಯವಿಲ್ಲ. ಆದರೆ ಸಂಸ್ಕೃತಿ ಮತ್ತು ಕಲೆಗಳನ್ನು ಗ್ರಾಹಕ ವಸ್ತುಗಳ ಮಟ್ಟಕ್ಕೆ ಇಳಿಸಬಾರದು. ಸುದ್ದಿಯಲ್ಲಿದ್ದರೆ ಮಾತ್ರ ಗ್ರಾಹಕ ವಸ್ತುಗಳು ಬಿಕರಿಯಾಗುತ್ತವೆ. ಕನ್ನಡ ಸಂಸ್ಕೃತಿಯ ಶ್ರೇಷ್ಠ ಉತ್ಪನ್ನಗಳಾದ ಸಾಹಿತ್ಯ, ಸಂಗೀತ, ಲಲಿತಕಲೆಗಳನ್ನು ಮಾರುಕಟ್ಟೆ ಸಂಸ್ಕೃತಿಯ ಸರಕುಗಳಂತೆ ಪರಿಗಣಿಸಬಾರದು. ಕನ್ನಡ ಬದುಕನ್ನು ಕೂಡ. ಸಮಾಜ ಮತ್ತು ಸರಕಾರದ ಮಟ್ಟದಲ್ಲಿ ಅತ್ಯುತ್ತಮ ಮಾದರಿಗಳಿಗೆ ಮಾನ್ಯತೆ ದೊರೆತರೆ ಎಲ್ಲ ವಲಯಗಳಲ್ಲೂ ಅದು ಅನುಕರಣೀಯ ನಡವಳಿಕೆಯಾಗುತ್ತದೆ.