ಅಳಿವಿನಂಚಿನಲ್ಲಿ ವಿಶ್ವವಿದ್ಯಾನಿಲಯಗಳು

ವಿವಿಗಳಲ್ಲಿ ಗುಣಮಟ್ಟದ ಸಂಶೋಧನೆ ಮತ್ತೆ ಜೀವ ಪಡೆಯಬೇಕೆಂದರೆ ಕನ್ನಡ ವಿವಿಯನ್ನು ಅತ್ಯುತ್ತಮ ಸಂಶೋಧನಾ ಕೇಂದ್ರವನ್ನಾಗಿ ರೂಪಿಸಬೇಕು. ಉಳಿದೆಲ್ಲ ವಿವಿಗಳ ಸಂಶೋಧನಾ ಗುಣಮಟ್ಟದ ಮೇಲೆ ನಿರಂತರ ನಿಗಾ ಇಡುವ ನೋಡಲ್ ಕೇಂದ್ರದಂತೆ ಕಾರ್ಯನಿರ್ವಹಿಸಬೇಕು. ಉಳಿದೆಲ್ಲ ವಿವಿಗಳನ್ನು ಹುದ್ದೆಗಳ ಭರ್ತಿ ಮಾಡುವ ಮೂಲಕ ರಿಪೇರಿ ಮಾಡಬಹುದು. ಆದರೆ ಕನ್ನಡ ವಿವಿ ತನ್ನ ಮೂಲ ಉದ್ದೇಶವನ್ನೇ ಮರೆತು ರಿಪೇರಿ ಮಾಡಲಾಗದಷ್ಟು ವಿರೂಪಗೊಂಡಿದೆ. ವಿಶೇಷ ಕಾಳಜಿ ವಹಿಸಿ ಕನ್ನಡ ವಿವಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ವಿಶ್ವವಿದ್ಯಾನಿಲಯಗಳು ವ್ಯವಹಾರದ ಕೇಂದ್ರಗಳಾಗಿವೆ. ಸರಕಾರ ಅವುಗಳನ್ನು ಮತ್ತೆ ಅತ್ಯುತ್ತಮ ಗುಣಮಟ್ಟದ ಜ್ಞಾನದ ಕೇಂದ್ರಗಳಾಗಿ ಮರುರೂಪಿಸಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಾಸಂಕಲ್ಪ ಮಾಡಿ ವಿಶ್ವವಿದ್ಯಾನಿಲಯಗಳ ಆಮೂಲಾಗ್ರ ಬದಲಾವಣೆಗೆ ಮುಂದಾಗಬೇಕು. ರಾಜ್ಯಪಾಲರು ಸೇರಿ ಎಲ್ಲಾ ಟೀಕಾಕಾರರಿಗೆ ಕೆಲಸಗಳ ಮೂಲಕ ಉತ್ತರ ನೀಡಲಿ.

Update: 2024-10-05 05:47 GMT

ಒಂದು ಕಾಲದಲ್ಲಿ ಕರ್ನಾಟಕದಲ್ಲಿನ ವಿಶ್ವವಿದ್ಯಾನಿಲಯಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದವು. ವಿಶ್ವವಿದ್ಯಾನಿಲಯಗಳ ಕುಲಪತಿಗಳಿಗೆ ರಾಜಮರ್ಯಾದೆ ಇತ್ತು. ಯಾರೇ ಮುಖ್ಯಮಂತ್ರಿಯಿರಲಿ, ಯಾವುದೇ ಪಕ್ಷದ ಸರಕಾರವಿರಲಿ ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ ಉನ್ನತ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದ್ದರು. ಕುಲಪತಿಗಳನ್ನು ಸರಕಾರಿ ನೌಕರರೆಂದು ಯಾರೂ ಪರಿಗಣಿಸುತ್ತಿರಲಿಲ್ಲ. ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದಾಗ ಸ್ವತಹ ಉನ್ನತ ಶಿಕ್ಷಣ ಸಚಿವರೇ ಕರೆ ಮಾಡಿ ವಿವಿಯ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿದ್ದರಂತೆ. ಡಾ. ಚಂದ್ರಶೇಖರ ಕಂಬಾರರು ಕನ್ನಡ ವಿವಿ ಕುಲಪತಿಯಾಗಿದ್ದಾಗ ಆಗಿನ ಎಲ್ಲಾ ಮುಖ್ಯಮಂತ್ರಿಗಳು ಸಾಕಷ್ಟು ಅನುದಾನ ನೀಡಿದ್ದಾರೆ. ಅಷ್ಟು ಮಾತ್ರವಲ್ಲ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯ ರಾಜ್ಯದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯಗಳು. ರಾಜ್ಯದ ಬಿಜೆಪಿ ಮುಖಂಡರಿಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಶಿಕ್ಷಣದ ಬಗ್ಗೆ ಕನಿಷ್ಠ ಕಾಳಜಿಯಿದ್ದಿದ್ದರೂ ಆ ಎರಡು ವಿವಿಗಳನ್ನು ಕೇಂದ್ರೀಯ ವಿಶ್ವವಿದ್ಯಾನಿಲಯಗಳನ್ನಾಗಿ ಪರಿವರ್ತಿಸಿ ನೂರಾರು ಕೋಟಿ ರೂ. ಅನುದಾನ ಮಂಜೂರು ಮಾಡುತ್ತಿದ್ದರು.

ಕರ್ನಾಟಕ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ ಮಾತ್ರವಲ್ಲ ಬೆಂಗಳೂರು ವಿವಿ, ಮಂಗಳೂರು ವಿವಿ, ಗುಲಬರ್ಗ ವಿವಿ, ಶಿವಮೊಗ್ಗದ ಕುವೆಂಪು ವಿವಿಗಳು ನಾಡಿನ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳೂ ಆಯಾ ಭಾಗದ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಸೇರಿದ್ದವು. ಆಗ ಕುಲಪತಿಗಳ ನೇಮಕಾತಿಯಲ್ಲಿ ಆಡಳಿತಾತ್ಮಕ ಅನುಭವ ಮತ್ತು ಶೈಕ್ಷಣಿಕ ಸಾಧನೆಯನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತಿತ್ತು. ಜಾತಿ ಅಲ್ಪ ಪ್ರಮಾಣದಲ್ಲಿ ಕೆಲಸ ಮಾಡುತ್ತಿತ್ತಾದರೂ ಅದೇ ನಿರ್ಣಾಯಕವಾಗಿರಲಿಲ್ಲ. ಕುಲಪತಿಗಳ ನೇಮಕಾತಿಯಲ್ಲಿ ಹಣದ ಪಾತ್ರ ಏನೇನೋ ಇರಲಿಲ್ಲ. ಸಿಂಡಿಕೇಟ್ ಸದಸ್ಯರನ್ನು ಕುಲಪತಿಗಳ ಸಲಹೆ ಮೇರೆಗೆ ನೇಮಕ ಮಾಡುತ್ತಿದ್ದರು. ವಿವಿಯ ಆಡಳಿತದಲ್ಲಿ, ಬೋಧಕ/ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಅಷ್ಟಾಗಿ ಇರುತ್ತಿರಲಿಲ್ಲ. ಉನ್ನತ ಶಿಕ್ಷಣ ಸಚಿವರು ಪ್ರಾಮಾಣಿಕರೂ, ಶೈಕ್ಷಣಿಕ ಸುಧಾರಣೆಯ ಬಗ್ಗೆ ಅಪಾರ ಕಾಳಜಿ ಉಳ್ಳವರೂ ಇರುತ್ತಿದ್ದರು. ಎಲ್ಲಕ್ಕೂ ಮಿಗಿಲಾಗಿ ಕುಲಪತಿಗಳನ್ನು, ಪ್ರಾಧ್ಯಾಪಕರನ್ನು ಮಹಾಜ್ಞಾನಿಗಳೆಂದು ಪರಿಗಣಿಸಿ ಮಂತ್ರಿಗಳೇ ಗೌರವಿಸುತ್ತಿದ್ದರು. ಪ್ರತೀ ಕುಲಪತಿಯು ನಿಗದಿತ ಮೂರು ವರ್ಷಗಳ ಅವಧಿಯಲ್ಲಿ ತಮ್ಮ ಕನಸಿನ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದರು. ಸಿಬ್ಬಂದಿ ನೇಮಕಾತಿಯಲ್ಲಿ ಪ್ರತಿಭೆಗೆ ಮೊದಲ ಆದ್ಯತೆ ಕೊಡುತ್ತಿದ್ದರು. ಹಣಕ್ಕಾಗಿ ಯಾರಿಗೂ ನೌಕರಿಗಳನ್ನು ಮಾರಾಟ ಮಾಡುತ್ತಿರಲಿಲ್ಲ.

ಕುವೆಂಪು, ಎಚ್.ಎನ್. ನರಸಿಂಹಯ್ಯ, ಡಿ.ಎಂ. ನಂಜುಂಡಪ್ಪ ಸೇರಿದಂತೆ ಹಲವು ಜನ ಕುಲಪತಿಗಳು ಪ್ರಾಮಾಣಿಕರು, ಕನಸುಗಾರರು, ಕ್ರಿಯಾಶೀಲರು ಮತ್ತು ದೂರ ದೃಷ್ಟಿಯುಳ್ಳವರೂ ಆಗಿದ್ದರು. ಒಂದು ವಿಶ್ವವಿದ್ಯಾನಿಲಯವನ್ನು ಭೌತಿಕವಾಗಿ ಮಾತ್ರವಲ್ಲ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯನ್ನಾಗಿ ಹೇಗೆ ರೂಪಿಸಬೇಕು ಎನ್ನುವುದಕ್ಕೆ ‘ಮಾದರಿ’ ಬಿಟ್ಟು ಹೋದವರು. ಗುಲಬರ್ಗಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಡಾ. ಹಾ.ಮಾ. ನಾಯಕರು ಜನಸಾಮಾನ್ಯರ ಕುಲಪತಿ ಎನಿಸಿಕೊಂಡಿದ್ದರು. ಅವರಿಗೆ ಚುನಾಯಿತ ಸಿಂಡಿಕೇಟ್ ಸದಸ್ಯರು ಹೆದರಿ ಗೌರವ ಕೊಡುತ್ತಿದ್ದರು. ಆಗಿನ ವಿದ್ಯಾರ್ಥಿ ಸಂಘಟನೆಗಳು ಶೈಕ್ಷಣಿಕ ಸಮಸ್ಯೆಗಳ ಇತ್ಯರ್ಥಕ್ಕೆ ಮಾತ್ರ ಹೋರಾಟ ನಡೆಸುತ್ತಿದ್ದವು. ಎಸ್ಎಫ್ಐ, ಎಐಎಸ್ಎಫ್, ಎಬಿವಿಪಿಯಂತಹ ವಿದ್ಯಾರ್ಥಿ ಸಂಘಟನೆಗಳು ಮತ್ತು ಮುಖಂಡರು ತಾತ್ವಿಕ ಭಿನ್ನಾಭಿಪ್ರಾಯಗಳ ನಡುವೆಯೂ ಅತ್ಯುತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದರು. ಪ್ರಸಂಗ ಬಂದರೆ ವಿದ್ಯಾರ್ಥಿಗಳ ಒಳಿತಿಗಾಗಿ ಒಗ್ಗಟ್ಟಿನಿಂದ ಹೋರಾಟ ರೂಪಿಸುತ್ತಿದ್ದರು. ವಿದ್ಯಾರ್ಥಿ ಸಂಘಟನೆಗಳ ಮುಖಂಡರನ್ನು ಖುದ್ದು ಕುಲಪತಿಗಳೇ ಗೌರವದಿಂದ ಕಾಣುತ್ತಿದ್ದರು. ಬಹುಪಾಲು ವಿಶ್ವವಿದ್ಯಾನಿಲಯಗಳ ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಗುಣಮಟ್ಟದ ವಿಚಾರ ಸಂಕಿರಣ, ಚರ್ಚೆ, ವಾಗ್ವಾದ ನಿರಂತರ ನಡೆಯುತ್ತಿದ್ದವು. ಹಲವು ಅಂತರ್ಜಾತಿಯ ವಿವಾಹಗಳಿಗೆ ವಿವಿಗಳೇ ಸಾಕ್ಷಿಯಾಗಿದ್ದವು.

ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮುಖ್ಯಮಂತ್ರಿ, ಮಂತ್ರಿ, ಶಾಸಕರಿಗೆ ಆಸಕ್ತಿ ಇರುತ್ತಿತ್ತು. ಆ ಕಾರಣಕ್ಕೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರನ್ನು ವಿಶ್ವವಿದ್ಯಾನಿಲಯಗಳ ಅಕಾಡಮಿ ಕೌನ್ಸಿಲ್ನ ಸದಸ್ಯರನ್ನಾಗಿ ಸಭಾಪತಿ ಕಚೇರಿಯಿಂದಲೇ ನಾಮ ನಿರ್ದೇಶನವಾಗುತ್ತಿತ್ತು. ಆ ಪದ್ಧತಿ ಈಗಲೂ ಜಾರಿಯಲ್ಲಿದೆ. ಶಾಸನಸಭೆಯ ಪ್ರತಿಯೊಬ್ಬ ಸದಸ್ಯನಿಗೆ ಶೈಕ್ಷಣಿಕ ವಲಯದ ವಿದ್ಯಮಾನಗಳ ಅರಿವು ಇರಬೇಕು ಎಂಬುದು ಅದರ ಉದ್ದೇಶ. ಸಾಮಾನ್ಯವಾಗಿ ಬಹುಪಾಲು ಶಾಸಕರು ಅಕಾಡಮಿ ಕೌನ್ಸಿಲ್ ಸಭೆಗೆ ಹಾಜರಾಗುವುದಿಲ್ಲ. ಒಂದು ವೇಳೆ ಹಾಜರಾದರೂ ಗಂಭೀರ ಶೈಕ್ಷಣಿಕ ಕಾಳಜಿಯೇನೂ ಇರುವುದಿಲ್ಲ. ಈ ಹಿಂದೆ ವಿಜಯಾನಂದ ಕಾಶಪ್ಪನವರನ್ನು ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ವಿವಿಗೆ ಶಾಸನಸಭೆ ಸದಸ್ಯರಾಗಿದ್ದಕ್ಕೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ್ದರು. ಆತ ಆಸಕ್ತಿ ತೋರಲೇ ಇಲ್ಲ. ಲಾಭ ದೊರೆಯುವ ವಿವಿಗಳಿಗೆ ಮಾತ್ರ ಹೋಗುತ್ತಾರೆ. ಜನಪ್ರತಿನಿಧಿಗಳಿಗೆ ವಿಶ್ವವಿದ್ಯಾನಿಲಯಗಳು ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳಾಗಿ ಹೊರಹೊಮ್ಮಬೇಕು ಎಂಬ ಕಾಳಜಿಯೇ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಡಳಿತದ ಚುಕ್ಕಾಣಿ ಹಿಡಿಯುವ ಮೊದಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ನಿಜವಾದ ಅರ್ಥದಲ್ಲಿ ರಾಜ್ಯ ವಿವಿಗಳಿಗೆ ಕಾಮಧೇನುವಾಗಿತ್ತು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ನೀತಿ ನಿರೂಪಣಾ ಘಟಕವಾಗಿದೆ. ಕೇಂದ್ರ ಸರಕಾರದ ವ್ಯಾಪ್ತಿಯ ಕೇಂದ್ರೀಯ ವಿಶ್ವವಿದ್ಯಾನಿಲಯಗಳಿಗೆ ನೂರಾರು ಕೋಟಿ ರೂ. ಅನುದಾನ ಹರಿದು ಹೋಗುತ್ತದೆ. ಆದರೆ ಬಹುಪಾಲು ಕೇಂದ್ರೀಯ ವಿವಿಗಳು ಆರೆಸ್ಸೆಸ್ ಅಡ್ಡೆಗಳಾಗಿವೆ.

ಕರ್ನಾಟಕದಲ್ಲಿ ಹೆಚ್ಚು ಕಡಿಮೆ ೩೨ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದ ವಿವಿಗಳಿಗೆ ಅನುದಾನವೂ ಇಲ್ಲ, ಸಿಬ್ಬಂದಿಯೂ ಇಲ್ಲ. ಸ್ವಂತ ಕಟ್ಟಡ ಮತ್ತು ಜಾಗ ಯಾವಾಗ ಸಿಗುತ್ತದೆಯೋ ಗೊತ್ತಿಲ್ಲ. ಹಳೆಯ ವಿಶ್ವವಿದ್ಯಾನಿಲಯಗಳಿಗೆ ದೊಡ್ಡ ದೊಡ್ಡ ಕ್ಯಾಂಪಸ್ಗಳಿವೆ. ಶಿಥಿಲವಾದ ಕಟ್ಟಡಗಳಿವೆ. ಆದರೆ ಖಾಯಂ ಸಿಬ್ಬಂದಿಯ ಕೊರತೆ ಎದುರಿಸುತ್ತಿವೆ. ೨೦ ವರ್ಷಗಳ ಹಿಂದೆ ನಿವೃತ್ತಿಯಿಂದ ಖಾಲಿಯಾದ ಹುದ್ದೆಗಳಿಗೆ ಇಲ್ಲಿಯವರೆಗೆ ಭರ್ತಿ ಮಾಡಲಾಗಿಲ್ಲ. ಬಹುಪಾಲು ಹಳೆಯ ವಿಶ್ವವಿದ್ಯಾನಿಲಯಗಳಲ್ಲಿ ನೂರಕ್ಕೆ ೬೦ರಷ್ಟು ಹುದ್ದೆಗಳು ಖಾಲಿ ಇವೆ. ಯುಜಿಸಿ ನಿಯಮಾನುಸಾರ ಕರ್ನಾಟಕದ ಎಲ್ಲಾ ವಿವಿಗಳು ಮಾನ್ಯತೆ ಕಳೆದುಕೊಳ್ಳುವ ಹಂತ ತಲುಪಿವೆ. ಖಾಯಂ ಬೋಧಕ ಸಿಬ್ಬಂದಿ ಇಲ್ಲವೆಂದ ಮೇಲೆ ಅಲ್ಲಿ ಸಂಶೋಧನಾ ಚಟುವಟಿಕೆಗಳು ನಡೆಯುವಂತಿಲ್ಲ. ಹಳೆಯ ಮತ್ತು ಹೊಸ ವಿಶ್ವವಿದ್ಯಾನಿಲಯಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದ. ಗುತ್ತಿಗೆ ಆಧಾರದ (ಹೊರಗುತ್ತಿಗೆ) ಮೇಲೆ ಗುಮಾಸ್ತರು ನೇಮಕಗೊಂಡು ಆಡಳಿತ ನಡೆಸುವಂತಾಗಿದೆ. ಹೊಸ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿ ಮತ್ತು ಇಬ್ಬರು ಕುಲ ಸಚಿವರು ಮಾತ್ರ ಖಾಯಂ ಸಿಬ್ಬಂದಿ. ಉಳಿದವರು ಹೊರಗುತ್ತಿಗೆಯಿಂದ ಬಂದವರು ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವವರು. ಕೆಲವರಂತೂ ಅತಿಥಿ ಉಪನ್ಯಾಸಕರಾಗಿಯೇ ನಿವೃತ್ತಿ ಹೊಂದುತ್ತಿದ್ದಾರೆ.

ಯುಜಿಸಿ ನಿಯಮದ ಪ್ರಕಾರ ಅತಿಥಿ ಉಪನ್ಯಾಸಕರು ಸ್ನಾತಕೋತ್ತರ ಪದವಿಗೆ ಪಾಠ ಮಾಡಬಹುದು. ಆದರೆ ಪಿಎಚ್.ಡಿ. ಅಧ್ಯಯನಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವಂತಿಲ್ಲ. ಬಹುಪಾಲು ವಿಶ್ವವಿದ್ಯಾನಿಲಯಗಳಲ್ಲಿ ಹಲವಾರು ವಿಭಾಗಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತವೆ. ಅಂತಹ ವಿಭಾಗಗಳಿಗೆ ಬೇರೆ ವಿಭಾಗದ ಖಾಯಂ ಪ್ರಾಧ್ಯಾಪಕ ಸಮನ್ವಯಾಧಿಕಾರಿಯಾಗಿಯೋ, ಮುಖ್ಯಸ್ಥರಾಗಿಯೋ ಕಾರ್ಯನಿರ್ವಹಿಸುತ್ತಾರೆ. ಅತಿಥಿ ಉಪನ್ಯಾಸಕರ ಪಾಠ ಪ್ರವಚನದಿಂದ ಪ್ರತಿವರ್ಷ ಒಂದು ವಿಭಾಗದಿಂದ ಗರಿಷ್ಠ ೩೦ರಿಂದ ೪೦ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪೂರೈಸಿ ಹೊರ ಬರುತ್ತಾರೆ. ಸ್ನಾತಕೋತ್ತರ ಪದವಿ ಜೊತೆ ಪಿಎಚ್.ಡಿ. ಪಡೆದರೆ ಆ ವಿದ್ಯಾರ್ಥಿ ಯಾವುದಾದರೂ ಕಾಲೇಜು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಪಡೆಯಲು ಅರ್ಹತೆ ಪ್ರಾಪ್ತವಾಗುತ್ತದೆ. ನೌಕರಿ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ. ಖಾಯಂ ಬೋಧಕ ಸಿಬ್ಬಂದಿ ಇಲ್ಲದೇ ಇರುವುದರಿಂದ ಆ ವಿಭಾಗದಿಂದ ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಅಧ್ಯಯನ ಕೈಗೊಳ್ಳುವ ಅವಕಾಶವೇ ದೊರೆಯುವುದಿಲ್ಲ. ಖಾಯಂ ಬೋಧಕ ಸಿಬ್ಬಂದಿ ಇರುವ ವಿವಿಯಲ್ಲಿ ಪಿಎಚ್.ಡಿ. ಸೀಟು ಪಡೆದುಕೊಳ್ಳುವುದು ಕಷ್ಟ. ಯಾಕೆಂದರೆ; ಸ್ನಾತಕೋತ್ತರ ಪದವಿ ಪೂರೈಸಿದ ಅಸಂಖ್ಯಾತ ವಿದ್ಯಾರ್ಥಿಗಳು ಅವರಲ್ಲಿಯೇ ಇರುತ್ತಾರೆ. ಎಲ್ಲಾ ವಿವಿಗಳಲ್ಲಿ ಖಾಯಂ ಬೋಧಕ ಸಿಬ್ಬಂದಿ ಕೊರತೆಯಿರುವುದರಿಂದ ಪಿಎಚ್.ಡಿ. ಸೀಟು ದೊರೆಯುವುದಿಲ್ಲ. ಆದರೆ ಯುಜಿಸಿ; ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಪಿಎಚ್.ಡಿ. ಕಡ್ಡಾಯಗೊಳಿಸಿ ನಿಯಮ ರೂಪಿಸುತ್ತದೆ. ಇತ್ತೀಚೆಗೆ ಅದೇ ಯುಜಿಸಿ ಪಿಎಚ್.ಡಿ. ಸೀಟು ಪಡೆದುಕೊಳ್ಳಲು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ಉತ್ತೀರ್ಣವಾಗುವುದನ್ನು ಕಡ್ಡಾಯಗೊಳಿಸಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದವರಿಗೆ ಈ ಎಲ್ಲಾ ಶೈಕ್ಷಣಿಕ ಸಮಸ್ಯೆಗಳ ಅರಿವಿಲ್ಲ ಎಂಬುದು ಗೊತ್ತಾಗುತ್ತದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಪ್ರತೀ ವಿಭಾಗದ ಒಂದು ಪಿಎಚ್.ಡಿ. ಸೀಟಿಗೆ ಸರಾಸರಿ ನೂರು ವಿದ್ಯಾರ್ಥಿಗಳು ಆಕಾಂಕ್ಷಿಗಳಾಗಿರುತ್ತಾರೆ. ಪಿಎಚ್.ಡಿ. ಅಧ್ಯಯನ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರೇ ದೊರೆಯುತ್ತಿಲ್ಲವೆಂದರೆ; ಸಂಶೋಧನಾ ಗುಣಮಟ್ಟದ ಅಧೋಗತಿ ಮನವರಿಕೆ ಮಾಡಿಕೊಳ್ಳಬಹುದು. ಮಾನವಿಕ ಅಧ್ಯಯನಕ್ಕೆ ಅತ್ಯುತ್ತಮ ಗ್ರಂಥಾಲಯ, ಉತ್ತಮ ಸಂಶೋಧನಾಸಕ್ತಿಯುಳ್ಳ ಖಾಯಂ ಅಧ್ಯಾಪಕ ಇದ್ದರೆ ಸಾಕು ಅತ್ಯುತ್ತಮ ಸಂಶೋಧನೆ ಸಾಧ್ಯವಾಗುತ್ತದೆ. ಆದರೆ ವಿಜ್ಞಾನ ವಿಭಾಗಗಳಲ್ಲಿ ಅತ್ಯುತ್ತಮ ಗುಣಮಟ್ಟದ ಪ್ರಯೋಗಾಲಯ ಬೇಕಾಗುತ್ತದೆ. ಅನುದಾನ ಕೊರತೆಯ ನೆಪದಲ್ಲಿ ವಿಶ್ವವಿದ್ಯಾನಿಲಯಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಿವೆ. ಕರ್ನಾಟಕದಲ್ಲಿನ ಎಲ್ಲ ವಿಶ್ವವಿದ್ಯಾನಿಲಯಗಳು ಪ್ರತಿವರ್ಷ ಕೇವಲ ಸ್ನಾತಕೋತ್ತರ ಪದವೀಧರರನ್ನು ಉತ್ಪಾದಿಸುವ ಕೇಂದ್ರಗಳಾಗಿವೆ. ಅವರು ಜೀವನಪೂರ್ತಿ ನಿರುದ್ಯೋಗಿಗಳಾಗಿ ಬದುಕು ಸವೆಸಬೇಕಾಗುತ್ತದೆ. ಪ್ರತಿಶತ ಒಂದರಷ್ಟು ವಿದ್ಯಾರ್ಥಿಗಳು ಪಿಎಚ್.ಡಿ. ಪದವಿ ಪೂರೈಸಿ ಲಂಚ ಕೊಟ್ಟು ಎಲ್ಲೋ ಒಂದು ಕಡೆ ಉಪನ್ಯಾಸಕ ಹುದ್ದೆ ಗಿಟ್ಟಿಸಿಕೊಳ್ಳುತ್ತಾರೆ. ಲಂಚ ಕೊಟ್ಟು ನೌಕರಿ ಪಡೆದವರು ಸಂಶೋಧನೆ ಮರೆಯುತ್ತಾರೆ.

ಕರ್ನಾಟಕದಲ್ಲಿನ ಎಲ್ಲಾ ವಿಶ್ವವಿದ್ಯಾನಿಲಯಗಳು ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದರೂ ವಿವಿಗಳ ಕುಲಾಧಿಪತಿಯೂ ಆಗಿರುವ ಸನ್ಮಾನ್ಯ ಗೌರವಾನ್ವಿತ ರಾಜ್ಯಪಾಲರು ಶೈಕ್ಷಣಿಕ ವಲಯದ ಒಳಿತಿಗೆ ರಾಜ್ಯ ಸರಕಾರಕ್ಕೆ ಒಂದೇ ಒಂದು ನೋಟಿಸ್ ಕೊಟ್ಟಿಲ್ಲ. ಎಲ್ಲ ಕುಲಪತಿಗಳ ಸಭೆ ಕರೆದು ವಿವಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಿಗೆ ಅಗತ್ಯದ ಕ್ರಮ ಜರುಗಿಸಿ ಎಂದು ಸೂಚನೆ ನೀಡಬಹುದಿತ್ತು. ರಾಜ್ಯಪಾಲರು ಕೇಂದ್ರದ ಸೂಚನೆ ಪಾಲನೆ ಮಾಡಲು ವಿವಾದಾತ್ಮಕ ನಿರ್ಧಾರ ಕೈಗೊಂಡು ಅನಗತ್ಯ ಗೊಂದಲ ಸೃಷ್ಟಿಸುವುದರ ಬದಲು ರಾಜ್ಯದ ಶೈಕ್ಷಣಿಕ ಒಳಿತಿಗಾಗಿ ಶ್ರಮಿಸಿದ್ದರೆ ಜನ ನೆನಪಿಸಿಕೊಳ್ಳುತ್ತಿದ್ದರು. ರಾಜ್ಯಪಾಲರೇ ವಿಶ್ವವಿದ್ಯಾನಿಲಯಗಳು ಹಾಳಾಗುತ್ತಿರುವುದನ್ನು ನೋಡಿಯೂ ಸುಮ್ಮನಿರುವಾಗ ಉಳಿದವರಿಂದ ಏನು ತಾನೆ ನಿರೀಕ್ಷಿಸಬಹುದು? ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಐದು ತಿಂಗಳು ಕಳೆದಿವೆ. ಅವರು ಮಾಡಿದ ಒಂದೇ ಒಂದು ಅತ್ಯುತ್ತಮ ಕೆಲಸವೆಂದರೆ ಶೈಕ್ಷಣಿಕ ಹಿನ್ನೆಲೆಯುಳ್ಳ ಪ್ರಾಮಾಣಿಕರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ನೇಮಿಸಿದ್ದು. ಉಳಿದಂತೆ ಉನ್ನತ ಶಿಕ್ಷಣ ಇಲಾಖೆ ಬಿಜೆಪಿ ಸರಕಾರದಲ್ಲಿ ಇದ್ದ ವ್ಯವಸ್ಥೆಯನ್ನೇ ಮುಂದುವರಿಸಿದೆ. ನಾಲ್ಕು ವರ್ಷಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ. ಅಶ್ವತ್ಥ್ ನಾರಾಯಣ್ ವಿದ್ಯಾನಿಲಯಗಳನ್ನು, ಇಲಾಖೆಯನ್ನು ಅದೆಷ್ಟು ಹಾಳು ಮಾಡಿದ್ದಾರೆಂದರೆ; ಡಾ. ಸುಧಾಕರ್ ಕೊಳೆ ತೊಳೆಯಲು ಇನ್ನೂ ಆರು ತಿಂಗಳು ಬೇಕಾಗುತ್ತದೆ. ಡಾ. ಅಶ್ವತ್ಥ್ ನಾರಾಯಣ್ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ವೃತ್ತಿಪರ ನೌಕರಿ ಮಾರಾಟ ಮಾಡುವ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಅವರ ದಂಧೆಯ ಸ್ವರೂಪ ತಿಳಿದುಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ.

ನಾಲ್ಕು ವರ್ಷಗಳ ಕಾಲ ಉನ್ನತ ಶಿಕ್ಷಣ ಸಚಿವರಾಗಿದ್ದ ಅಶ್ವತ್ಥ್ ನಾರಾಯಣ್ ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯತ್ವ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಹೆಚ್ಚು ಹಣಕ್ಕೆ ಮಾರಾಟ ಮಾಡಿದ ಮಹಾನುಭಾವ ಎಂಬ ಆರೋಪವಿದೆ. ರಾಜ್ಯಪಾಲರ ಕಚೇರಿಗೂ ಲಂಚದ ರುಚಿ ತೋರಿಸಿದವರು ಎಂಬ ಆರೋಪವಿದೆ. ಉಪಮುಖ್ಯಮಂತ್ರಿಯಾಗಿದ್ದ ಅವಧಿಯೂ ಸೇರಿದಂತೆ ಒಮ್ಮೆಯೂ ಅಶ್ವತ್ಥ್ ನಾರಾಯಣ್ ಕುಲಪತಿಗಳ ಸಭೆ ಕರೆದು ವಿವಿಗಳ ಕಾಯಕಲ್ಪಕ್ಕೆ ಏನು ಮಾಡಬಹುದು ಎಂದು ಸಲಹೆ ಕೂಡ ಕೇಳಲಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಡಾ. ಅಶ್ವತ್ಥ್ ನಾರಾಯಣ್ ಅಕ್ಷರಶಃ ಹಿಂಡುವ ಹೆಮ್ಮೆಯಂತೆ ಬಳಸಿಕೊಂಡರು ಎಂಬ ಆರೋಪವಿದೆ. ಈಗಲೂ ಅದು ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆಯಂತೆ. ಬಡವರು, ದಲಿತರು, ಹಿಂದುಳಿದವರು ಅತಿಯಾಗಿ ಅವಲಂಬನೆಯಾಗಿರುವುದು ಕರ್ನಾಟಕ ಸರಕಾರದ ಅಧೀನದಲ್ಲಿರುವ ವಿಶ್ವವಿದ್ಯಾನಿಲಯಗಳ ಮೇಲೆ. ಶ್ರೀಮಂತರ ಮಕ್ಕಳಿಗೆ ವಿದೇಶಿ ವಿಶ್ವವಿದ್ಯಾನಿಲಯಗಳಿವೆ. ಮಾಧ್ಯಮ ವರ್ಗದವರು ಸ್ವಾಯತ್ತ ಮತ್ತು ಡೀಮ್ಡ್ ವಿವಿಗಳನ್ನು ಅವಲಂಬಿಸಿದ್ದಾರೆ. ಅಲ್ಲಿಯ ದುಬಾರಿ ಫೀಸು ಬಡವರಿಗೆ ನಿಲುಕುವುದಿಲ್ಲ. ಬಡವರ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಬೇಕೆಂದರೆ ನಾಡಿನ ವಿಶ್ವವಿದ್ಯಾನಿಲಯಗಳನ್ನು ಪುನರುಜ್ಜೀವನಗೊಳಿಸಬೇಕಿದೆ. ಕುಲಪತಿಗಳ ನೇಮಕಾತಿಯಲ್ಲಿ ಹಣದ ವಹಿವಾಟು ಸಂಪೂರ್ಣ ನಿಲ್ಲಬೇಕು. ಅಷ್ಟು ಮಾತ್ರವಲ್ಲ ವಿವಿಗಳಲ್ಲಿ ಖಾಲಿ ಇರುವ ಎಲ್ಲಾ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಮೆರಿಟ್ ಆಧಾರದಲ್ಲಿ ಲಂಚಕ್ಕೆ ಅವಕಾಶವಿಲ್ಲದಂತೆ ಭರ್ತಿ ಮಾಡಿಕೊಳ್ಳಬೇಕು.

ವಿವಿಗಳಲ್ಲಿ ಗುಣಮಟ್ಟದ ಸಂಶೋಧನೆ ಮತ್ತೆ ಜೀವ ಪಡೆಯಬೇಕೆಂದರೆ ಕನ್ನಡ ವಿವಿಯನ್ನು ಅತ್ಯುತ್ತಮ ಸಂಶೋಧನಾ ಕೇಂದ್ರವನ್ನಾಗಿ ರೂಪಿಸಬೇಕು. ಉಳಿದೆಲ್ಲ ವಿವಿಗಳ ಸಂಶೋಧನಾ ಗುಣಮಟ್ಟದ ಮೇಲೆ ನಿರಂತರ ನಿಗಾ ಇಡುವ ನೋಡಲ್ ಕೇಂದ್ರದಂತೆ ಕಾರ್ಯನಿರ್ವಹಿಸಬೇಕು. ಉಳಿದೆಲ್ಲ ವಿವಿಗಳನ್ನು ಹುದ್ದೆಗಳ ಭರ್ತಿ ಮಾಡುವ ಮೂಲಕ ರಿಪೇರಿ ಮಾಡಬಹುದು. ಆದರೆ ಕನ್ನಡ ವಿವಿ ತನ್ನ ಮೂಲ ಉದ್ದೇಶವನ್ನೇ ಮರೆತು ರಿಪೇರಿ ಮಾಡಲಾಗದಷ್ಟು ವಿರೂಪಗೊಂಡಿದೆ. ವಿಶೇಷ ಕಾಳಜಿ ವಹಿಸಿ ಕನ್ನಡ ವಿವಿಯನ್ನು ಅಭಿವೃದ್ಧಿಪಡಿಸಬೇಕಾಗಿದೆ. ವಿಶ್ವವಿದ್ಯಾನಿಲಯಗಳು ವ್ಯವಹಾರದ ಕೇಂದ್ರಗಳಾಗಿವೆ. ಸರಕಾರ ಅವುಗಳನ್ನು ಮತ್ತೆ ಅತ್ಯುತ್ತಮ ಗುಣಮಟ್ಟದ ಜ್ಞಾನದ ಕೇಂದ್ರಗಳಾಗಿ ಮರುರೂಪಿಸಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಾಸಂಕಲ್ಪ ಮಾಡಿ ವಿಶ್ವವಿದ್ಯಾನಿಲಯಗಳ ಆಮೂಲಾಗ್ರ ಬದಲಾವಣೆಗೆ ಮುಂದಾಗಬೇಕು. ರಾಜ್ಯಪಾಲರು ಸೇರಿ ಎಲ್ಲಾ ಟೀಕಾಕಾರರಿಗೆ ಕೆಲಸಗಳ ಮೂಲಕ ಉತ್ತರ ನೀಡಲಿ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಡಾ. ರಾಜಶೇಖರ ಹತಗುಂದಿ

contributor

Similar News