ಭಾರೀ ಮಳೆಗೆ ತತ್ತರಿಸಿದ ಬ್ರ್ಯಾಂಡ್ ಬೆಂಗಳೂರು

ಬಿಬಿಎಂಪಿಯ ಸಮಸ್ತ ಅಧಿಕಾರಿ ವರ್ಗ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದರೆ ಬೆಂಗಳೂರು ನಿವಾಸಿಗಳು ಪದೇಪದೇ ಮಳೆಯ ಹೊಡೆತಕ್ಕೆ ಸಿಕ್ಕಿ ನರಳುತ್ತಿರಲಿಲ್ಲ. ಮಳೆ ನೈಸರ್ಗಿಕ ಕ್ರಿಯೆ. ಅದು ಬರದಂತೆ ತಡೆಯುವುದು ನಮ್ಮ ಕೈಯಲ್ಲಿ ಇಲ್ಲ. ಎಷ್ಟೇ ಮಳೆ ಬಂದರೂ; ಬೆಂಗಳೂರಿನ ರಸ್ತೆ, ಬಡಾವಣೆ, ವಿಲ್ಲಾ, ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ನುಗ್ಗದಂತೆ ಮಾಡಲು ಯಾವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂಬುದು ಸರಕಾರದ ಪ್ರಮುಖ ಕಾಳಜಿಯಾಗಬೇಕು. ಬೆಂಗಳೂರು ನಗರ ನಿರ್ಮಾಣ ಮತ್ತು ನಿರ್ವಹಣೆಯಲ್ಲಿನ ವೈಫಲ್ಯಗಳಿಗೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಹೊಣೆ ಹೊರಬೇಕು.

Update: 2024-10-19 04:46 GMT

ಈಹೊತ್ತಿನ ಬೆಂಗಳೂರು ಮಹಾನಗರದ ದುರ್ಗತಿಗೆ ಒಂದು ಸರಕಾರ, ಒಬ್ಬ ಮುಖ್ಯಮಂತ್ರಿ ಅಥವಾ ಒಬ್ಬ ಮಂತ್ರಿಯನ್ನು ಗುರಿ ಮಾಡಿ ಟೀಕಿಸುವುದು ಅರ್ಧ ಸತ್ಯ ಮಾತ್ರ ಹೇಳಿದಂತಾಗುತ್ತದೆ. ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರದ ನಂತರ ಬಂದು ಹೋದ ಎಲ್ಲಾ ಸರಕಾರಗಳು, ಮುಖ್ಯಮಂತ್ರಿಗಳು ಮತ್ತು ವಿಶೇಷವಾಗಿ ಬೆಂಗಳೂರು ಮಹಾನಗರದ ಹೊಣೆ ಹೊತ್ತ ಮಂತ್ರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೆಂಗಳೂರು ಸಿಲಿಕಾನ್ ವ್ಯಾಲಿಯಾಗಿ ಪ್ರಪಂಚದಾದ್ಯಂತ ಖ್ಯಾತಿ ಪಡೆದಿದೆ. ಐಟಿಬಿಟಿ ಕಂಪೆನಿಗಳ ನೆಲೆವೀಡಾಗಿದೆ. ಆದರೆ ಪ್ರತಿವರ್ಷ ಸುರಿಯುವ ಭಾರೀ ಮಳೆಯಿಂದ ಅರ್ಧ ಬೆಂಗಳೂರು ಮುಳುಗಿ ಜನ ಪರದಾಡುವುದು, ನೀರು ನಿಂತು ಟ್ರಾಫಿಕ್ ಜಾಮ್ ಆಗುವುದು, ಅಪಾರ ಸಾವು-ನೋವು ಸಂಭವಿಸಿ ಈ ಮಹಾನಗರದ ಸಹವಾಸವೇ ಬೇಡ ಎಂಬ ಭಾವನೆ ಮೂಡುವಂತಾಗುವುದು ಇತ್ತೀಚಿನ ವರ್ಷಗಳಲ್ಲಿ ವಿಧಿಕ್ರಿಯೆಯಾಗಿಬಿಟ್ಟಿದೆ. ಪ್ರತಿವರ್ಷ ಪತ್ರಿಕೆಗಳು, ನ್ಯೂಸ್‌ಚಾನೆಲ್‌ಗಳು ಉಮೇದಿನಲ್ಲಿ ‘ಭಾರೀ ಮಳೆಗೆ ಬೆಂಗಳೂರು ಮುಳುಗಿದ ಸುದ್ದಿ’ ಬಿತ್ತರಿಸುವುದು, ಮುಖ್ಯಮಂತ್ರಿಗಳು ಸಿಟಿರೌಂಡ್ ಹೊಡೆದು ಸ್ಪಂದಿಸಿದ ನಾಟಕವಾಡುವುದು, ಮುಂದಿನ ವರ್ಷ ಈ ಎಲ್ಲಾ ಸಮಸ್ಯೆಗಳಿಗೆ ಖಾಯಂ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳ ತಂಡ ಬಣ್ಣದ ಕನಸುಗಳನ್ನು ಬಿತ್ತುವುದು ವಾಡಿಕೆಯಾಗಿದೆ.

ಎಸ್.ಎಂ. ಕೃಷ್ಣ ಅವರ ಕಾಲಕ್ಕೆ ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಗಮನಹರಿಸಿದ್ದು ನಿಜ. 2004ರ ವಿಧಾನಸಭಾ ಚುನಾವಣೆಯಲ್ಲಿ ಆ ಸರಕಾರವನ್ನು ಮತದಾರ ‘ಕರ್ನಾಟಕವನ್ನು’ ಸಮಾನ ಅಭಿವೃದ್ಧಿ ಪಡಿಸಲಿಲ್ಲ ಎಂಬ ಕಾರಣಕ್ಕೇ ತಿರಸ್ಕರಿಸಿದ್ದರು. ಐಟಿಬಿಟಿ ಕಂಪೆನಿಗಳು ಕರ್ನಾಟಕಕ್ಕೆ ಬಂದಿದ್ದು ಒಳ್ಳೆಯದೇ ಆಯಿತು. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗದ ಪ್ರಮುಖ ನಗರಗಳಲ್ಲೂ ಸಣ್ಣಪುಟ್ಟ ಕಂಪೆನಿ-ಕಾರ್ಖಾನೆಗಳು ನೆಲೆ ನಿಲ್ಲುವಂತೆ ನಿಗಾ ವಹಿಸಬೇಕಿತ್ತು. ಬೆಂಗಳೂರು ಮಹಾನಗರ ಪಾಲಿಕೆಯ ಸುತ್ತಮುತ್ತಲಿನ ಹತ್ತಾರು ನಗರಸಭೆಗಳನ್ನು ರಿಯಲ್ ಎಸ್ಟೇಟ್ ದಂಧೆಗೆ ಶಕ್ತಿ ತುಂಬಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವಿಲೀನಗೊಳಿಸಿ ಬಹುದೊಡ್ಡ ನಗರವನ್ನೇನೋ ಸೃಷ್ಟಿಸಲಾಯಿತು. ಬಿಬಿಎಂಪಿ ಮತ್ತು ಬಿಡಿಎ ಅರ್ಥಪೂರ್ಣ ಸಮನ್ವಯದೊಂದಿಗೆ ಕೆಲಸ ಮಾಡಿ ಅಕ್ರಮ ಬಡಾವಣೆಗಳಿಗೆ ಆಗಲೇ ಕಡಿವಾಣ ಹಾಕಿದ್ದರೆ ಬೆಂಗಳೂರಿಗೆ ಈ ದುರ್ಗತಿ ಒದಗಿ ಬರುತ್ತಿರಲಿಲ್ಲ. ಜಗತ್ತಿನಾದ್ಯಂತ ವಿಜ್ಞಾನ-ತಂತ್ರಜ್ಞಾನ ಅತ್ಯುತ್ಕೃಷ್ಟ ಗುಣಮಟ್ಟದೊಂದಿಗೆ ಬೆಳೆದು ನಿಂತಿದೆ. ಹೊರದೇಶಗಳಲ್ಲಿ ಕಟ್ಟಡ ತಂತ್ರಜ್ಞಾನ ಪವಾಡ ಸದೃಶ ಆವಿಷ್ಕಾರಗಳಿಂದ ಕ್ರಾಂತಿಕಾರಿ ಮೈಲಿಗಲ್ಲು ನಿರ್ಮಿಸಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯ ಇಂಜಿನಿಯರ್‌ಗಳಿಗೆ ಮಳೆ ನೀರನ್ನು ಇಂಗಿಸುವ ತಂತ್ರಜ್ಞಾನ ಗೊತ್ತಿಲ್ಲ.

ಆಯಿತು ವಾದಕ್ಕೆಂದು ಒಪ್ಪಿಕೊಳ್ಳೋಣ; ಬೆಂಗಳೂರು ಪ್ಲ್ಯಾನ್‌ಡ್‌ಸಿಟಿಯಲ್ಲ. ಮೆಜೆಸ್ಟಿಕ್, ಚಾಮರಾಜಪೇಟೆ, ಬಳೆಪೇಟೆ, ಚಿಕ್ಕಪೇಟೆ, ಕಲಾಸಿಪಾಳ್ಯ, ಸಂಪಂಗಿರಾಮನಗರ ಸೇರಿದಂತೆ ಹಳೆಯ ಬೆಂಗಳೂರು ನಗರದಲ್ಲಿ ಎಷ್ಟೇ ಮಳೆ ಬಿದ್ದರೂ ಜನಜೀವನ ಅಸ್ತವ್ಯಸ್ತಗೊಳ್ಳುವುದಿಲ್ಲ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಬಿಬಿಎಂಪಿ ಅನುಮತಿಯೊಂದಿಗೆ ನಿರ್ಮಾಣವಾದ ಬಡಾವಣೆ, ಅಪಾರ್ಟ್‌ಮೆಂಟ್‌ಗಳು ಭಾರೀ ಮಳೆ ಬಂದಾಗ ಮುಳುಗಡೆಯಾಗುತ್ತಿವೆ. ಮಳೆ ನೀರು ಇಂಗಲು ಮತ್ತು ಹರಿದು ಹೋಗಲು ಅವಕಾಶ ಮಾಡಿಕೊಡದಿದ್ದರೆ ಈ ಬಗೆಯ ಸಮಸ್ಯೆ ತಲೆದೋರುತ್ತದೆ. ಬೆಂಗಳೂರು ನಗರದಲ್ಲಿ ನಿರ್ಮಾಣವಾಗಿರುವ ಪ್ರಮುಖ ರಸ್ತೆಗಳಲ್ಲಿ ಯುಜಿಡಿ ವ್ಯವಸ್ಥೆ ಕಲ್ಪಿಸಿದ್ದರೂ ಮಳೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಬೆಂಗಳೂರಿನ ಅಂಡರ್ ಪಾಸ್‌ಗಳ ನಿರ್ಮಾಣದ ವಿನ್ಯಾಸ ಅದ್ಯಾವ ಇಂಜಿನಿಯರ್ ಮಾಡಿದ್ದಾನೋ ದೇವರೇ ಬಲ್ಲ. ಯಾವೊಂದು ಅಂಡರ್ ಪಾಸ್ ವೈಜ್ಞಾನಿಕವಾಗಿ ನಿರ್ಮಾಣವಾಗಿಲ್ಲ. ಎಷ್ಟೇ ಬಾರಿ ಮಳೆ ಸುರಿದರೂ ಪ್ರಮುಖ ರಸ್ತೆಗಳಲ್ಲಿ, ಅಂಡರ್‌ಪಾಸ್‌ಗಳಲ್ಲಿ ನೀರು ಸಂಗ್ರಹವಾಗಲೇಬಾರದು. ಬೆಂಗಳೂರು ಹೊರವಲಯದ ಬಡಾವಣೆಗಳಲ್ಲಿ ನಿರ್ಮಾಣವಾದ ಮನೆಗಳು, ವಿಲ್ಲಾಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗುವ ದೃಶ್ಯಗಳನ್ನು ನೋಡುತ್ತೇವೆಯೆಂದರೆ ಅದ್ಯಾವ ಅಡ್ನಾಡಿ ತಂತ್ರಜ್ಞಾನ ಅಳವಡಿಸಿಕೊಂಡಿರಬೇಕು?

ಬೆಂಗಳೂರಿನಲ್ಲಿ ಹತ್ತಿಪ್ಪತ್ತು ವರ್ಷಗಳ ಹಿಂದೆ ಕೆಲ ಖಾಸಗಿ ಬಡಾವಣೆಗಳು ಅಕ್ರಮವಾಗಿ ತಲೆಯೆತ್ತಿವೆ. ಕೆಲವು ಬಡಾವಣೆಗಳಲ್ಲಿ ಕಾಲುವೆ ಪಕ್ಕದಲ್ಲೇ ಮನೆ, ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗಿದೆ. ಕಿಕ್ಕಿರಿದ ಜನಸಂದಣಿ ಬೇರೆ. ಅವುಗಳನ್ನು ಸರಿಪಡಿಸಲು ವಿಶೇಷ ತಂತ್ರಜ್ಞಾನ ಮತ್ತು ಕಠಿಣ ಕಾನೂನು ಕ್ರಮದ ಅಗತ್ಯವಿರುತ್ತದೆ. ಈ ಮೊದಲು ಓಕುಳಿಪುರಂ ಮಾರ್ಗವಾಗಿ ರಾಜಾಜಿನಗರ, ಶಿವನಳ್ಳಿ ಸರ್ಕಲ್ ಮತ್ತು ಮಾಗಡಿ ರಸ್ತೆಯಲ್ಲಿ ಎಷ್ಟೇ ಪ್ರಮಾಣದ ಮಳೆ ಬಂದರೂ ನೀರು ನಿಲ್ಲುತ್ತಿರಲಿಲ್ಲ. ರೈಲ್ವೆ ಅಂಡರ್‌ಪಾಸ್ ಮುಂದೆ ತುಸು ಟ್ರಾಫಿಕ್ ಜಾಮ್ ಆಗುತ್ತಿತ್ತು. ಈಗ ಲುಲು ಮಾಲ್‌ಗೆ ಹೋಗಲು ಚಿತ್ರವಿಚಿತ್ರ ರೀತಿಯಲ್ಲಿ ಫ್ಲೈಓವರ್ ನಿರ್ಮಿಸಿದ್ದಾರೆ. ಅಷ್ಟೆಲ್ಲ ಫ್ಲೈಓವರ್ ನಿರ್ಮಿಸಿದ ಅಲ್ಲಿ ಟ್ರಾಫಿಕ್ ಜಾಮ್ ಆಗಬಾರದು. ಆದರೆ ಅಲ್ಲೀಗ ಟ್ರಾಫಿಕ್ ಜಾಮ್ ಹೆಚ್ಚಾಗಿದೆ ಮತ್ತು ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯೇ ಇಲ್ಲ. ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಹಲವು ಜೀವಗಳನ್ನು ಬಲಿಪಡೆದಿದೆ. ಈ ಹೊತ್ತಿಗೂ ಅಲ್ಲಿ ಮಳೆ ನೀರು ಇಂಗುವ ಅಥವಾ ಹರಿದು ಹೋಗುವ ದಾರಿಯೇ ಇಲ್ಲ. ಮೆಜೆಸ್ಟಿಕ್, ವಿಧಾನಸೌಧ ಮಲ್ಲೇಶ್ವರಂ ಸುತ್ತಮುತ್ತ ಹಲವಾರು ಅವೈಜ್ಞಾನಿಕ ಅಂಡರ್ ಪಾಸ್‌ಗಳನ್ನು ನಿರ್ಮಿಸಿದ್ದು, ಮಳೆಗಾಲದ ಅಪಾಯಕಾರಿ ಜಾಗಗಳೆನಿಸಿಕೊಂಡಿವೆ. ಹೆಮ್ಮೆಯ ಸಿಲಿಕಾನ್ ಸಿಟಿ ಮಳೆಗಾಲದಲ್ಲಿ ಅಕ್ಷರಶಃ ನೀರು ತುಂಬಿದ ಹೊಂಡವಾಗಿರುತ್ತದೆ.

ಇನ್ನು ಮಹಾನಗರದಿಂದ ತುಸು ದೂರದಲ್ಲಿರುವ ಬಡಾವಣೆಗಳು; ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್‌ಗೆ ಹೋಗುವ ಮಾರ್ಗದಲ್ಲಿ ಮತ್ತಷ್ಟು ದೂರ ಕ್ರಮಿಸಿ ಚಂದಾಪುರ, ಸರ್ಜಾಪುರ ಕಡೆ ಸಾಕಷ್ಟು ಬಡಾವಣೆಗಳಲ್ಲಿ ದುಬಾರಿ ವೆಚ್ಚದ ವಿಲ್ಲಾಗಳು, ಮನೆಗಳು, ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿವೆ. ಆದರೆ ಮಳೆಗಾಲದಲ್ಲಿ ಸಂಪೂರ್ಣ ಜಲಾವೃತವಾಗುತ್ತದೆ. ಬಡಾವಣೆಗಳ ನಿವಾಸಿಗಳ ಗೋಳು ಹೇಳತೀರದು. ಅವರೆಲ್ಲ ಬಿಬಿಎಂಪಿ ಅಧಿಕಾರಿಗಳು ಮತ್ತು ಸರಕಾರಕ್ಕೆ ಹಿಡಿಶಾಪ ಹಾಕುತ್ತಿರುತ್ತಾರೆ. ಆರ್. ಅಶೋಕ್, ರಾಮಲಿಂಗಾ ರೆಡ್ಡಿ ಸೇರಿದಂತೆ ಬೆಂಗಳೂರಿನಲ್ಲಿ ದರ್ಬಾರ್ ನಡೆಸಿದ ಎಲ್ಲ ಜನಪ್ರತಿನಿಧಿಗಳು ತಲೆತಗ್ಗಿಸಬೇಕಾದ ಗೋಳಿನ ಕಥೆಗಳು ಜಲಾವೃತಗೊಂಡ ಬಡಾವಣೆಗಳಲ್ಲಿ ನೋಡಲು ಸಿಗುತ್ತವೆ. ಅವೈಜ್ಞಾನಿಕ ರಸ್ತೆ, ಯುಜಿಡಿ, ಫ್ಲೈಓವರ್ ಮತ್ತು ಅಂಡರ್‌ಪಾಸ್‌ಗಳ ನಿರ್ಮಾಣದಿಂದ ಹುಟ್ಟಿಕೊಳ್ಳುವ ಅವಾಂತರಗಳು ಒಂದೆಡೆಯಾದರೆ ಎಲ್ಲೆಡೆ ಬಾಯಿ ತೆರೆದಿರುವ ರಸ್ತೆಗುಂಡಿಗಳು ಬ್ರ್ಯಾಂಡ್ ಬೆಂಗಳೂರಿನ ಮರ್ಯಾದೆ ಕಳೆಯುತ್ತಿವೆ. ಇಷ್ಟಾಗಿಯೂ ಬೆಂಗಳೂರಿನ ಮರ್ಯಾದೆ ಉಳಿಸಿದ್ದು ‘ನಮ್ಮ ಮೆಟ್ರೊ’. ಮೆಟ್ರೊ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಐಟಿಬಿಟಿಗಳು ಹೇಗೂ ಸಹಿಸಿಕೊಂಡು ಉಳಿದುಕೊಂಡಿವೆ.

ಒಂದು ಬಡಾವಣೆ, ಒಂದು ಮನೆ, ವಿಲ್ಲಾ ಅಥವಾ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ನೂರಾರು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಮನೆ, ಅಪಾರ್ಟ್‌ಮೆಂಟ್ ನಿರ್ಮಾಣದ ಹಂತದಲ್ಲಿ ವಾಟರ್ ಹಾರ್ವೆಸ್ಟಿಂಗ್ ವ್ಯವಸ್ಥೆ ಕಲ್ಪಿಸಿದ್ದನ್ನು ತಜ್ಞ ಇಂಜಿನಿಯರ್‌ಗಳು ಪರಿಶೀಲಿಸಿ ಪ್ರಮಾಣ ಪತ್ರ ನೀಡಿರುತ್ತಾರೆ. ರಸ್ತೆಯಲ್ಲಾದರೆ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿದೆಯೋ ಎಂಬುದನ್ನು ಪರೀಕ್ಷಿಸುತ್ತಾರೆ. ಎಲ್ಲವೂ ಸರಿ ಇದೆ ಎಂದು ಪ್ರಮಾಣ ಪತ್ರ ನೀಡಿದ ಮೇಲೆಯೇ ಜನ ವಾಸಿಸಲು ಮುಂದಾಗುತ್ತಾರೆ. ಬಿಬಿಎಂಪಿಯ ಸಮಸ್ತ ಅಧಿಕಾರಿ ವರ್ಗ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದ್ದರೆ ಬೆಂಗಳೂರು ನಿವಾಸಿಗಳು ಪದೇಪದೇ ಮಳೆಯ ಹೊಡೆತಕ್ಕೆ ಸಿಕ್ಕಿ ನರಳುತ್ತಿರಲಿಲ್ಲ. ಮಳೆ ನೈಸರ್ಗಿಕ ಕ್ರಿಯೆ. ಅದು ಬರದಂತೆ ತಡೆಯುವುದು ನಮ್ಮ ಕೈಯಲ್ಲಿ ಇಲ್ಲ. ಎಷ್ಟೇ ಮಳೆ ಬಂದರೂ; ಬೆಂಗಳೂರಿನ ರಸ್ತೆ, ಬಡಾವಣೆ, ವಿಲ್ಲಾ, ಅಪಾರ್ಟ್‌ಮೆಂಟ್‌ಗಳಲ್ಲಿ ನೀರು ನುಗ್ಗದಂತೆ ಮಾಡಲು ಯಾವ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂಬುದು ಸರಕಾರದ ಪ್ರಮುಖ ಕಾಳಜಿಯಾಗಬೇಕು. ಬೆಂಗಳೂರು ನಗರ ನಿರ್ಮಾಣ ಮತ್ತು ನಿರ್ವಹಣೆಯಲ್ಲಿನ ವೈಫಲ್ಯಗಳಿಗೆ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಹೊಣೆ ಹೊರಬೇಕು.

ಎಲ್ಲಾ ಪಕ್ಷದ ಜನಪ್ರತಿನಿಧಿಗಳು ‘ಸುರಕ್ಷಿತ ಬೆಂಗಳೂರಿನಲ್ಲಿ’ ವಾಸಿಸುತ್ತಿರಬಹುದು. ಆದರೆ ರಸ್ತೆಗಿಳಿದಾಗ ರಸ್ತೆಗುಂಡಿ ಸೇರಿದಂತೆ ಬೆಂಗಳೂರಿನ ಎಲ್ಲಾ ಬಗೆಯ ರಗಳೆಗಳಿಗೆ ತಲೆ ಕೊಡಲೇಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ ಜನತೆಯ ಆಕ್ರಂದನ, ಆಕ್ರೋಶ, ಹಿಡಿ ಶಾಪದಿಂದ ತಪ್ಪಿಸಿಕೊಳ್ಳಲು ಆಗದು. ಯಾಕೆಂದರೆ ಅವರೆಲ್ಲ ಚುನಾವಣೆ ಎದುರಿಸಲೇಬೇಕಾದ ಜನಪ್ರತಿನಿಧಿಗಳು.

ಬೆಂಗಳೂರಿನ ಹದಗೆಟ್ಟ ಈ ಸ್ಥಿತಿಗೆ ಬಿಬಿಎಂಪಿ ಭ್ರಷ್ಟ ವ್ಯವಸ್ಥೆ ಕಾರಣವೆಂಬುದು ಸಾಮಾನ್ಯವಾಗಿ ಎಲ್ಲರೂ ದೂರುತ್ತಾರೆ. ಅದೊಂದು ಅಮೂರ್ತ ವ್ಯವಸ್ಥೆಯೆಂದು ದೂರಿ ಸರಿಪಡಿಸಲಾಗದು ಎಂಬ ಹತಾಶೆಯಲ್ಲಿ ಕೈಚೆಲ್ಲಿ ಕೂರುತ್ತಾರೆ. ಬಿಬಿಎಂಪಿಯ ಭ್ರಷ್ಟ ವ್ಯವಸ್ಥೆ ಸ್ವಯಂಚಾಲಿತ ಯಂತ್ರವೇನಲ್ಲ. ಆ ವ್ಯವಸ್ಥೆಯನ್ನು ಆಡಳಿತದ ಚುಕ್ಕಾಣಿ ಹಿಡಿದಿರುವವರೇ ನಿಯಂತ್ರಿಸುತ್ತಿರುತ್ತಾರೆ. ಅವರೆಲ್ಲ ನಮ್ಮ ಕಣ್ಣಿಗೆ ಕಾಣುತ್ತಿರುತ್ತಾರೆ. ಇಂಗ್ಲೆಂಡ್, ಸಿಂಗಾಪುರ, ಜಪಾನ್, ಚೀನಾ, ಅಮೆರಿಕ ದೇಶಗಳಲ್ಲೂ ಒಂದು ಅಮೂರ್ತ ಆಡಳಿತ ವ್ಯವಸ್ಥೆ ಇರುತ್ತದೆ. ಆ ದೇಶಗಳಲ್ಲಿ ಅಷ್ಟೊಂದು ಸುಂದರ ನಗರಗಳನ್ನು ಯಾರು ನಿರ್ಮಿಸಿದರು? ಯಾರು ನಿರ್ವಹಿಸುತ್ತಿದ್ದಾರೆ? ಅಲ್ಲಿಯ ಜನಪ್ರತಿನಿಧಿಗಳಿಗೆ ಬಲವಾದ ರಾಜಕೀಯ ಇಚ್ಛಾಸಕ್ತಿ ಇದೆ. ಅದಕ್ಕೆ ಮನೆಗಳಷ್ಟೇ ಸುಂದರವಾದ ನಗರ, ಆಸ್ಪತ್ರೆ, ಶಾಲೆ, ಕಾಲೇಜು ನಿರ್ಮಿಸಿದ್ದಾರೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತದ ಚುಕ್ಕಾಣಿ ಹಿಡಿದು ಒಂದೂವರೆ ವರ್ಷವಾಯಿತು. ‘ಬ್ರ್ಯಾಂಡ್ ಬೆಂಗಳೂರು’ ಎಂಬ ಪದವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕ ಬದುಕಿನಲ್ಲಿ ತೇಲಿಬಿಟ್ಟು ಒಂದು ವರ್ಷ ಕಳೆದಿದೆ. ಬ್ರ್ಯಾಂಡ್ ಬೆಂಗಳೂರಿನ ಕನಸು ಬಿತ್ತಿದ, ಬೆಂಗಳೂರು ನಗರದ ಅಭಿವೃದ್ಧಿಯ ಹೊಣೆ ಹೊತ್ತಿರುವ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಕನಸುಗಾರ. ಒಂದೂವರೆ ವರ್ಷದಲ್ಲಿ ರಸ್ತೆ ಗುಂಡಿಗಳನ್ನಾದರೂ ಮುಚ್ಚಿಸಬಹುದಿತ್ತು. ರಾಜಾಕಾಲುವೆ ಅಕ್ಕಪಕ್ಕ ನಿರ್ಮಾಣವಾಗಿರುವ ಅಕ್ರಮ ಬಡಾವಣೆಗಳನ್ನು ತೆರವುಗೊಳಿಸಬಹುದಿತ್ತು. ಏನಿಲ್ಲವೆಂದರೂ ತಜ್ಞ ಇಂಜಿನಿಯರ್‌ಗಳ ತಂಡ ಕಟ್ಟಿ ಬೆಂಗಳೂರಿನಲ್ಲಿ ಭಾರೀ ಮಳೆಯಾದಾಗ ನೀರು ಸರಾಗವಾಗಿ ಹರಿದು ಹೋಗಲು ಏನು ಮಾಡಬಹುದೆಂದು ವೈಜ್ಞಾನಿಕವಾದ ಅಧ್ಯಯನ ವರದಿ ಸಿದ್ಧಪಡಿಸಬಹುದಿತ್ತು. ಕಳೆದ ವರ್ಷ ಮಳೆ ಬಂದಾಗಲೂ ಈಗ ಗೋಚರಿಸುತ್ತಿರುವ ಗೋಳಿನ ದೃಶ್ಯಗಳೇ ಚಾನೆಲ್‌ಗಳಲ್ಲಿ ಬಿತ್ತರವಾಗಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಡಿ.ಕೆ. ಶಿವಕುಮಾರ್ ಅವರು ಸಿಟಿ ರೌಂಡ್ ಹೋಗಿದ್ದರು. ಖಾಯಂ ಪರಿಹಾರದ ಮಾತುಗಳನ್ನಾಡಿದ್ದರು. ಆದರೆ ಬೆಂಗಳೂರಿನ ದುರ್ಗತಿ ಮುಂದುವರಿಯುವಂತಾಗಿದೆ. ನಮ್ಮ ರಾಜಕಾರಣಿಗಳು ಮನಸ್ಸು ಮಾಡಿದರೆ ಬೆಂಗಳೂರು ವಾಸಯೋಗ್ಯ ನಗರವನ್ನಾಗಿಸ (ಜಾಣ್ಮೆ, ತಿಳುವಳಿಕೆ ಇದೆ) ಬಲ್ಲರು.

ಬೆಂಗಳೂರಿನ ಒಬ್ಬ ಸಾಮಾನ್ಯ ಕಾರ್ಪೊರೇಟರ್ ಕೂಡ ತಜ್ಞ ಆರ್ಕಿಟೆಕ್ಟ್ ಸಲಹೆ ಪಡೆದು ಅರಮನೆಯಂತಹ ಅತ್ಯಾಧುನಿಕ ಸೌಲಭ್ಯದ ಮನೆ ಕಟ್ಟಿಸಿರುತ್ತಾನೆ. ಎಂಎಲ್‌ಎ, ಮಂತ್ರಿಗಳು ದುಬೈ, ಸಿಂಗಾಪುರದಲ್ಲಿರುವಂತಹ ಸುಂದರ ಮನೆಗಳು, ಸ್ವರ್ಗಸಮಾನವಾದ ಮಾಲ್‌ಗಳು, ತೋಟದ ಮನೆಗಳು ರೆಸಾರ್ಟ್‌ಗಳನ್ನು ಕಟ್ಟಿಸಿಕೊಟ್ಟ ಅನುಭವ ಪಡೆದಿರುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಸೇರಿ ಸಿದ್ದರಾಮಯ್ಯನವರ ಮಂತ್ರಿಮಂಡಲದ ಬಹುತೇಕ ಮಂತ್ರಿಗಳು ಸಿಂಗಾಪುರ, ದುಬೈ, ಅಮೆರಿಕದಂತಹ ಮುಂದುವರಿದ ದೇಶಗಳಿಗೆ ಹಲವಾರು ಬಾರಿ ಭೇಟಿ ನೀಡಿರುತ್ತಾರೆ. ಅಲ್ಲಿಯ ರಸ್ತೆ, ಬಡಾವಣೆ, ನಾಗರಿಕ ಸೌಲಭ್ಯಗಳ ಗುಣಮಟ್ಟದ ಬಗ್ಗೆ ಅಗತ್ಯದ ಮಾಹಿತಿ ಪಡೆದಿರುತ್ತಾರೆ. ಭಾರೀ ಮಳೆ ಬಂದಾಗ ಅಲ್ಲಿಯ ನಗರ ಪಾಲಿಕೆಗಳು ವ್ಯತ್ಯಾಸವಾಗದಂತೆ ಹೇಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುತ್ತವೆ ಎಂಬುದರ ಮಾಹಿತಿ ಇದ್ದೇ ಇರುತ್ತದೆ. ಹಾಗೆ ನೋಡಿದರೆ ಜಗತ್ತಿನ ಬಹುಪಾಲು ನಗರಗಳು ಬೆಂಗಳೂರಿನ ಹಾಗೆಯೇ ಸಹಜವಾಗಿ ಬೆಳೆದಿವೆೆ. ಕಾಲದ ಅಗತ್ಯಕ್ಕೆ ಅನುಗುಣವಾಗಿ ಆ ನಗರಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದ್ದಾರೆ. ಬೇರೆ ದೇಶದವರು ನಗರ ನಿರ್ಮಾಣದಲ್ಲಿ ವಿಜ್ಞಾನ-ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದಾರೆ.

ಕರ್ನಾಟಕ ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ನಾಡು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬ್ರಿಟಿಷರ ಕಾಲದಲ್ಲೇ ಸ್ಥಾಪಿತವಾಗಿತ್ತು. ಕಟ್ಟಡ ತಂತ್ರಜ್ಞಾನದಲ್ಲಿ ಬೆಂಗಳೂರು ಅತ್ಯುತ್ತಮ ಗುಣಮಟ್ಟದ ಕಿರೀಟ ತನ್ನದಾಗಿಸಿಕೊಂಡಿದೆ. ಬಿಬಿಎಂಪಿಯಲ್ಲಿ ಭ್ರಷ್ಟ ಅಧಿಕಾರಿಗಳು, ಇಂಜಿನಿಯರ್‌ಗಳು ಇರಬಹುದು. ಆದರೆ ತಂತ್ರಜ್ಞಾನದ ಅರಿವಿಲ್ಲದ ದಡ್ಡರೇನಲ್ಲ. ಬೆಂಗಳೂರಿನಲ್ಲಿ ಗುಣಮಟ್ಟದ ರಸ್ತೆ, ಫ್ಲೈಓವರ್ ನಿರ್ಮಿಸುವ ಗುತ್ತಿಗೆದಾರರಿದ್ದಾರೆ. ಅವರೆಲ್ಲರ ಪ್ರತಿಭಾ ಸಾಮರ್ಥ್ಯವನ್ನು ಇತ್ಯಾತ್ಮಕವಾಗಿ ಬಳಸಿಕೊಳ್ಳುವ ಪ್ರಬಲ ರಾಜಕೀಯ ಇಚ್ಛಾಸಕ್ತಿಯುಳ್ಳ ನಾಯಕ ಬೇಕಾಗಿದ್ದಾನೆ. ನೂರು ಕಾಲ ಬೆಂಗಳೂರು ನೆನಪಿಟ್ಟುಕೊಳ್ಳುವಂತಹ ಕೆಲಸ ಮಾಡುವ ಸದವಕಾಶ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೊರೆತಿದೆ. ಬೆಂಗಳೂರನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸುವ ಹೊಣೆಗಾರಿಕೆಯನ್ನು ಅವರೇ ಹೊತ್ತುಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಈ ಕ್ಷಣವೇ ಸಂಕಲ್ಪ ಮಾಡಿ ಕಾರ್ಯಪ್ರವೃತ್ತರಾದರೆ ನಾಡಪ್ರಭು ಕೆಂಪೇಗೌಡರ ಸಾಲಿನಲ್ಲಿ ನಿಲ್ಲುವ ಅವಕಾಶ ಪಡೆದುಕೊಳ್ಳುತ್ತಾರೆ. ಜಗತ್ತಿನ ಅತ್ಯುತ್ತಮ ತಂತ್ರಜ್ಞರು ಬೆಂಗಳೂರಿಗೆ ಬಂದು ಅಭಿವೃದ್ಧಿಪಡಿಸಲು ಸಿದ್ಧರಿದ್ದಾರೆ. ಆದರೆ ಮೊದಲಿಗೆ ಬಿಬಿಎಂಪಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು.

ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿಯ ಆಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಪ್ರಾಮಾಣಿಕತೆಗೆ ಜಾಗ ಕಲ್ಪಿಸಿದರೆ ನಾಳೆಯಿಂದಲೇ ಬೆಂಗಳೂರು ಹೊಸ ರೂಪ ಪಡೆದುಕೊಳ್ಳುವುದರತ್ತ ಹೆಜ್ಜೆ ಹಾಕುತ್ತದೆ. ಬೆಂಗಳೂರು ರಸ್ತೆ ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡಿಕೊಂಡರೆ ಪದೇ ಪದೇ ರಸ್ತೆ ಗುಂಡಿಗಳು ಬಾಯಿ ತೆರೆಯುವುದಿಲ್ಲ. ಅಪಾರ್ಟ್‌ಮೆಂಟ್, ಮನೆಗಳ ನಿರ್ಮಾಣಕ್ಕೆ ಬಿಬಿಎಂಪಿ ತಾಂತ್ರಿಕ ಒಪ್ಪಿಗೆಯೇನೋ ನೀಡುತ್ತದೆ. ಅನುಮೋದನೆಗೊಂಡ ವಿನ್ಯಾಸದಂತೆ ಕಟ್ಟಡಗಳು ನಿರ್ಮಾಣಗೊಂಡಿವೆಯೇ ಎಂಬುದು ತಜ್ಞ ಇಂಜಿನಿಯರ್‌ಗಳ ತಂಡ ಪರಿಶೀಲನೆ ನಡೆಸಿ ಖಾತ್ರಿಪಡಿಸಿದರೆ ಗುಣಮಟ್ಟದ ಕೆಲಸವಾಗುತ್ತದೆ. ಲಂಚ ತೆಗೆದುಕೊಂಡು, ಆಫೀಸ್‌ನಲ್ಲಿ ಕುಳಿತು ಓಸಿ ನೀಡಿದರೆ ಮುಂದಿನ ಎಲ್ಲಾ ಅವಘಡಗಳಿಗೆ ಹಾದಿಯಾಗುತ್ತದೆ. ರಸ್ತೆ, ಅಂಡರ್‌ಪಾಸ್, ಯುಜಿಡಿ, ಖಾಸಗಿ ವಿಲ್ಲಾ, ಅಪಾರ್ಟ್‌ಮೆಂಟ್‌ಗಳ ನಿರ್ಮಾಣದಲ್ಲಿ ಬಿಬಿಎಂಪಿ ರೂಪಿಸಿದ ಕಾನೂನನ್ನು ಯಾರೇ ಉಲ್ಲಂಘಿಸಿದರೂ ಕಠಿಣ ಶಿಕ್ಷೆಗೆ ಗುರಿಪಡಿಸಿದರೆ ತಪ್ಪುಗಳು ಮರುಕಳಿಸುವುದಿಲ್ಲ. ಬಿಬಿಎಂಪಿಯ ಭ್ರಷ್ಟ ವ್ಯವಸ್ಥೆಯನ್ನು ರಿಪೇರಿ ಮಾಡಲು ದೃಢ ಸಂಕಲ್ಪ ಮಾಡಬೇಕಷ್ಟೆ.

ಡಿ.ಕೆ. ಶಿವಕುಮಾರ್ ಅವರಿಗೆ ಗುಣಮಟ್ಟದ ಮನೆ, ಮಾಲ್ ಇತ್ಯಾದಿ ಕಟ್ಟಿಸಿಕೊಂಡ ಅನುಭವ ಇದೆ. ಬೆಂಗಳೂರನ್ನು ತನ್ನ ಮನೆ ಎಂದು ಭಾವಿಸಿ ಅಭಿವೃದ್ಧಿಪಡಿಸಲು ಮುಂದಾದರೆ ಮುಂದಿನ ಮೂರುವರೆ ವರ್ಷಗಳಲ್ಲಿ ಅಕ್ಷರಶಃ ಸಿಂಗಾಪುರ ಮಾಡಬಲ್ಲರು. ಮಹಾನಗರದ ಜನತೆ ಬ್ರ್ಯಾಂಡ್ ಬೆಂಗಳೂರಿನ ಮಾತುಗಳನ್ನು ಕಳೆದ ಒಂದೂವರೆ ವರ್ಷಗಳಿಂದ ಕೇಳಿಸಿಕೊಂಡಿದ್ದಾರೆ. ಈ ಬಾರಿಯ ಮಳೆಯಲ್ಲೂ ಬೆಂಗಳೂರು ಮುಳುಗಿದ್ದು ನೋಡಿ ಜನತೆ ಯಾರನ್ನು ನಂಬುವ ಸ್ಥಿತಿಯಲ್ಲಿಲ್ಲ. ಮಾತುಗಳು ಮೌಲ್ಯ ಕಳೆದುಕೊಂಡಾಗ ಕೆಲಸಗಳು ಮಾತಾಡುವಂತಾಗಬೇಕು. ಉಪಮುಖ್ಯಮಂತ್ರಿಯಾದವರು ಕಟ್ಟುನಿಟ್ಟಿನ ಕ್ರಮ ಜರುಗಿಸಿದರೆ ಬಿಬಿಎಂಪಿ ಮಾತ್ರವಲ್ಲ; ಯಾವುದೇ ಹದಗೆಟ್ಟ ವ್ಯವಸ್ಥೆಯನ್ನು ಸರಿದಾರಿಗೆ ತರಬಹುದು. ಕೆಟ್ಟ ಮತ್ತು ಒಳ್ಳೆಯ ವ್ಯವಸ್ಥೆಯನ್ನು ಮನುಷ್ಯರಾದ ನಾವೇ ರೂಪಿಸುತ್ತೇವೆ. ಸ್ವಂತದ ಮನೆ, ಮಾಲ್ ಕಟ್ಟುವಾಗ ಸಿಮೆಂಟ್, ಸ್ಟೀಲ್ ಬಳಕೆಯಲ್ಲಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ ಸರಕಾರಿ ಶಾಲೆ ಕಟ್ಟುವಾಗ ಯಾಕೆ ಕಳಪೆಯಾಗುತ್ತದೆ? ನಾಡಪ್ರಭು ಕೆಂಪೇಗೌಡರು ತಮ್ಮ ಬೆಂಗಳೂರು ಎಂಬ ಅಭಿಮಾನದಿಂದ ಕಟ್ಟಿದರು. ಹಾಗಾಗಿಯೇ ನಾಲ್ಕು ಕಾಲ ಬಾಳುವ ಬೆಂಗಳೂರು ನಿರ್ಮಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರು ಮಳೆಗೆ ತತ್ತರಿಸಿ ಬೀದಿ ಪಾಲಾದವರ ಸಂಕಟ ಕಾಡಿದರೆ ಮುಂದಿನ ವರ್ಷದ ಅಕ್ಟೋಬರ್ ಒಳಗೆ ರಸ್ತೆಗುಂಡಿ ಇಲ್ಲದ, ನೀರುಮಯವಾಗದ ಬೆಂಗಳೂರು ಕನಸು ಸಾಕಾರಗೊಂಡಿರುತ್ತದೆ. ಶಿವಕುಮಾರ್ ಅವರು ಕ್ರಿಯಾಶೀಲರು, ಕನಸುಗಾರರು, ಆಧುನಿಕ ಜಗತ್ತಿನ ಪರಿಚಯ ಉಳ್ಳವರು. ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲರು. ಕೆಂಪೇಗೌಡರ ಬೆಂಗಳೂರನ್ನು ವಾಸ ಯೋಗ್ಯ ಬೆಂಗಳೂರನ್ನಾಗಿಸಿದರೆ ಸಿಲಿಕಾನ್ ಸಿಟಿಯ ಗೌರವ ಉಳಿಯುತ್ತದೆ. ಆಂಧ್ರ, ತೆಲಂಗಾಣ ರಾಜ್ಯಗಳು ಐಟಿ ಸಿಟಿಗಳಾಗಲು ಬಕಪಕ್ಷಿಗಳಂತೆ ಕಾಯುತ್ತಿವೆ. ಅದಕ್ಕೆ ಅವಕಾಶವಾಗಬಾರದು.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News