ಅಂತರಿಕ್ಷದಲ್ಲಿ ಮಿನುಗುತ್ತಿದೆ ಸುನೀತಾ ಎಂಬ ಚುಕ್ಕಿ!

Update: 2024-12-01 04:28 GMT

ಶಿಕ್ರಾನ್ ಶರ್ಫುದ್ದೀನ್ ಎಂ.

ಸಿತಾರೋಂ ಕೆ ಆಗೆ ಜಹಾಂ ಔರ್ ಭಿ ಹೈ...!

-ಸರ್ ಮುಹಮ್ಮದ್ ಇಕ್ಬಾಲ್, ಕವಿ

ಅಂತರಿಕ್ಷದಲ್ಲಿ ಅತೀ ಹೆಚ್ಚು ಬಾರಿ (ಏಳು ಸಲ) ಅಂತರಿಕ್ಷ ನಡಿಗೆ ಮತ್ತು ಅಂತರಿಕ್ಷದ ನಡಿಗೆಯಲ್ಲಿ ಅತೀ ಹೆಚ್ಚು ಸಮಯ ಕಳೆದ (50 ಗಂಟೆ, 40 ನಿಮಿಷಗಳು) ದಾಖಲೆಯನ್ನು ನಿರ್ಮಿಸಿದ ಏಕೈಕ ಗಗನಯಾತ್ರಿ ಸುನೀತಾ ವಿಲಿಯಮ್ಸ್’. ಅಂತರಿಕ್ಷದಲ್ಲಿ ಮ್ಯಾರಥಾನ್ ಓಟ ನಡೆಸಿದ ಮೊತ್ತಮೊದಲ ಗಗನಯಾತ್ರಿಯೂ ಸುನೀತಾ ವಿಲಿಯಮ್ಸ್ ಆಗಿದ್ದಾರೆ. ಅವರು ಸರಿಸುಮಾರು 485 ದಿನಗಳು ಅಂತರಿಕ್ಷದಲ್ಲಿ ಕಳೆದು ಇನ್ನೊಂದು ಮುರಿಯಲಾಗದ ದಾಖಲೆಯನ್ನೂ ನಿರ್ಮಿಸಿದ್ದಾರೆ. (ಸದ್ಯಕ್ಕೆ ಅವರು ಅಂತರಿಕ್ಷದಲ್ಲಿಯೇ ಇದ್ದಾರೆ).

ಹಿಂದೆ ಅಮೆರಿಕದ ನಿವೃತ್ತ ನೌಕಾದಳದ ಅಧಿಕಾರಿಯಾಗಿದ್ದವರು ಸುನೀತಾ. ಪ್ರಸಕ್ತ ದಿನಗಳಲ್ಲಿ ಅವರು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ಗಗನಯಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2012ರಲ್ಲಿ ಅವರು ಎಕ್ಸ್ಪೆಡಿಷನ್-32 ಅಂತರಿಕ್ಷ ಯಾತ್ರೆಯಲ್ಲಿ ಫ್ಲೈಟ್ ಇಂಜಿನಿಯರ್ ಆಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು; ನಂತರ, ಎಕ್ಸ್ಪೆಡಿಷನ್-33ರಲ್ಲಿ ಕಮಾಂಡರ್ ಆಗಿ ತಮ್ಮ ಕರ್ತವ್ಯವನ್ನು ಮುಂದುವರಿಸಿದರು.

2024ರಲ್ಲಿ, ಅವರು ಬೋಯಿಂಗ್ ಸ್ಟಾರ್‌ಲೈನರ್‌ನ ಮೊದಲ ಮಾನವ ಸಹಿತ ಯೋಜನೆಯ ಪ್ರಯೋಗಕ್ಕಾಗಿ ಬೋಯಿಂಗ್ ಕ್ರೀವ್ ಫ್ಲೈಟ್‌ನಲ್ಲಿ ಐಎಸ್‌ಎಸ್(ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್)ಗೆ ತಮ್ಮ ಪಯಣವನ್ನು ಬೆಳೆಸಿದ್ದರು; ಈಗ, ಅವರು ಭೂಮಿಗೆ ಮರಳುವುದು ಫೆಬ್ರವರಿ 2025ರವರೆಗೆ ವಿಳಂಬವಾಗಿದೆ. ಈ ವಿಳಂಬದಿಂದಾಗಿ ಅವರು ಬಾಹ್ಯಾಕಾಶದಲ್ಲಿ ಹೆಚ್ಚು ಕಾಲದ ವಾಸ್ತವ್ಯದಿಂದಾಗಿ ಗಂಭೀರ ಅರೋಗ್ಯ ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ. ಆಮ್ಲಜನಕದ ಕೊರತೆಯಿಂದಾಗಿ ಅವರ ಮೆದುಳಿಗೆ ಹಾನಿಯಾಗುವ ಸಂಭಾವ್ಯತೆಯಂತಹ ಗಂಭೀರತೆಯನ್ನೂ ಎದುರಿಸುತ್ತಿದ್ದಾರೆ. ಇಂತಹ ಸವಾಲುಗಳ ಹೊರತಾಗಿಯೂ ಅವರು ಎದೆಗುಂದದೆ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭೂಮಿಗೆ ಮರಳುವವರೆಗೆ ವಿವಿಧ ವೈಜ್ಞಾನಿಕ ಪ್ರಯೋಗಗಳ ಪರೀಕ್ಷೆಗಳನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.


 



ಗುಜರಾತಿನ ಮೆಹ್ಸಾನಾ ಜಿಲ್ಲೆಯ ನರರೋಗಶಾಸ್ತ್ರಜ್ಞ ದೀಪಕ್ ಪಾಂಡ್ಯ ಮತ್ತು ಉರ್ಸುಲಿನ್ ಬೋನಿ ಪಾಂಡ್ಯ ದಂಪತಿಯ ಕಿರಿಯ ಮಗಳಾಗಿ ಜನಿಸಿದ್ದ ಸುನೀತಾ ವಿಲಿಯಮ್ಸ್ ಅವರು ತಮ್ಮ ಪದವಿ ಶಿಕ್ಷಣವನ್ನು 1983ರಲ್ಲಿ ಪಡೆದು, ನಂತರ ಅವರು ಅಮೆರಿಕದ ನೇವಲ್ ಅಕಾಡಮಿಯಿಂದ 1987ರಲ್ಲಿ ಬಿ.ಎಸ್ಸಿ. ಪದವಿಯನ್ನು ಪಡೆದರು. 1995ರಲ್ಲಿ ಫ್ಲಾರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅವರು ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಪಡೆದರು.

1983ರಲ್ಲಿ ಸುನೀತಾ ಅವರು ಮೇರಿಲ್ಯಾಂಡಿನ ಅನ್ನಾಪೊಲಿಸ್‌ನ ಯುಎಸ್ ನೇವಲ್ ಅಕಾಡಮಿಯಲ್ಲಿ ತರಬೇತಿಗಾಗಿ ದಾಖಲಿಸಿಕೊಂಡರು. 1989ರಲ್ಲಿ ಅವರು ಯುದ್ಧ ಹೆಲಿಕಾಪ್ಟರ್ ಅನ್ನು ಹಾರಿಸುವ ತರಬೇತಿಯನ್ನು ಪಡೆದರು. ಪರ್ಷಿಯನ್ ಗಲ್ಫ್ ಯುದ್ಧದ ಹೊಸ್ತಿಲಿನಲ್ಲಿ ಮತ್ತು ಇರಾಕಿನ ಕುರ್ದಿಶ್ ಪ್ರದೇಶಗಳ ಮೇಲೆ ಹಾರಾಟ-ನಿಷೇಧ ವಲಯಗಳ ಸ್ಥಾಪನೆಯ ಕಾಲದಲ್ಲಿ ಅವರು ಸ್ಕ್ವಾಡ್ರನ್‌ಗಳಲ್ಲಿ ಹೆಲಿಕ್ಯಾಪ್ಟರ್ ಅನ್ನು ಹಾರಿಸಿದ್ದರು; ಅದರೊಂದಿಗೆ 1992ರಲ್ಲಿ ಅವರು ಮಿಯಾಮಿಯಲ್ಲಿ ಅಪ್ಪಳಿಸಿದ್ದ ಆಂಡ್ರ್ಯೂ ಚಂಡಮಾರುತದ ಸಮಯದಲ್ಲಿ ಪರಿಹಾರ ಕಾರ್ಯಾಚರಣೆಗಳಲ್ಲಿ ಹೆಲಿಕಾಪ್ಟರ್ ಮೂಲಕ ಮಾನವೀಯ ನೆರವನ್ನು ಒದಗಿಸಿದ್ದರು.

ಆನಂತರ 1993ರಲ್ಲಿ ಅವರು ನೌಕಾಪಡೆಯಲ್ಲಿ ಪೈಲಟ್ ಆದರು; ನಂತರ, ಅವರು ಪರೀಕ್ಷಾ ಪೈಲಟ್ ತರಬೇತಿದಾರರಾದರು. ಅವರು 30ಕ್ಕೂ ಹೆಚ್ಚು ವಿವಿಧ ರೀತಿಯ ವಿಮಾನಗಳನ್ನು ಹಾರಿಸಿ ತಮ್ಮ ಉಡ್ಡಯನದ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಆನಂತರ 1998ರಲ್ಲಿ ಗಗನಯಾತ್ರಿಯ ತರಬೇತಿಗೆ ಆರಿಸಲ್ಪಟ್ಟರು. ಆಗಸ್ಟ್ 1998ರಲ್ಲಿ ಅವರು ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿ ಅಭ್ಯರ್ಥಿಯಾಗಿ ತರಬೇತಿಯನ್ನು ಪ್ರಾರಂಭಿಸಿದರು. ಈ ಮೂಲಕ ಕೊಲಂಬಿಯಾ ದುರಂತದಲ್ಲಿ ಮಡಿದ ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಕ್ಕೆ ಹೋದ ಭಾರತೀಯ ಮೂಲದ ಎರಡನೇ ಅಮೆರಿಕನ್ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಸುನೀತಾ ವಿಲಿಯಮ್ಸ್ ಅವರು ಪಾತ್ರರಾದರು!

ಎಸ್‌ಟಿಎಸ್-116

ಸುನೀತಾ ವಿಲಿಯಮ್ಸ್ ಅವರನ್ನು ಡಿಸೆಂಬರ್ 9, 2006ರಂದು ಎಕ್ಸ್ಪೆಡಿಶನ್-14ರ ಸಿಬ್ಬಂದಿಯೊಂದಿಗೆ ಸೇರಲು ಎಸ್‌ಟಿಎಸ್-116ನಲ್ಲಿ ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಬಾಹ್ಯಾಕಾಶ ನೌಕೆ ‘ಡಿಸ್ಕವರಿ’ಯಲ್ಲಿ ಕಳುಹಿಸಿಕೊಡಲಾಯಿತು. ಇದು ಸುನೀತಾ ಅವರ ಪ್ರಪ್ರಥಮ ಬಾಹ್ಯಾಕಾಶ ಯಾತ್ರೆಯಾಗಿತ್ತು!

ಬಾಹ್ಯಾಕಾಶ ನಿಲ್ದಾಣದಲ್ಲಿ ಅವರು ತಂಗಿದ್ದ ಕಾಲದಲ್ಲಿ, ಅವರು ನೌಕೆಯ ಹೊರಗೆ ಒಟ್ಟು 29 ಗಂಟೆಗಳಿಗಿಂತ ಹೆಚ್ಚು ಕಾಲ ನಾಲ್ಕು ಅಂತರಿಕ್ಷ ನಡಿಗೆಗಳನ್ನು ಸಫಲವಾಗಿ ನೆರವೇರಿಸಿದರು; ಇದೊಂದು ಬಾಹ್ಯಾಕಾಶದಲ್ಲಿ ನಿರ್ಮಿತ ದಾಖಲೆಯಾಗಿದೆ.

ಆಗಸ್ಟ್ 2012ರ ಹೊತ್ತಿಗೆ, ಸುನೀತಾ ವಿಲಿಯಮ್ಸ್ ಅವರು ಒಟ್ಟು 50 ಗಂಟೆ 40 ನಿಮಿಷಗಳ ಕಾಲ ಏಳು ಬಾಹ್ಯಾಕಾಶ ನಡಿಗೆಗಳಲ್ಲಿ ಕಳೆದುದರಿಂದ, ಆ ಸಮಯದಲ್ಲಿ ಅವರಿಗೆ ಅತ್ಯಂತ ಅನುಭವಿ ಬಾಹ್ಯಾಕಾಶ ನಡಿಗರ ಪಟ್ಟಿಯಲ್ಲಿ ಐದನೇ ಸ್ಥಾನ ದೊರೆತಿತ್ತು. (ರಶ್ಯದ ಅನಾಟೊಲಿ ಸೊಲೊವಿಯೆವ್ ಅವರು 82 ಗಂಟೆ 22 ನಿಮಿಷಗಳನ್ನು ಬಾಹ್ಯಾಕಾಶ ನಡಿಗೆಯಲ್ಲಿ ಕಳೆದು ಅತ್ಯಂತ ಅನುಭವಿ ಬಾಹ್ಯಾಕಾಶ ನಡಿಗರ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ)

ಮೇ 2020ರಲ್ಲಿ, ಸುನೀತಾ ವಿಲಿಯಮ್ಸ್ ಅವರು ಅಮೆರಿಕದಲ್ಲಿ 5,00,000ಕ್ಕೂ ಹೆಚ್ಚು ಭಾರತೀಯ ಮತ್ತು ಇತರ ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ವಾಶಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವಿದ್ಯಾರ್ಥಿ ಕೇಂದ್ರ ಆಯೋಜಿಸಿದ್ದ ವರ್ಚುವಲ್ ಸಂದರ್ಶನದಲ್ಲಿ ಉಪನ್ಯಾಸ ನೀಡಿದ್ದಾರೆ.

ಬಾಹ್ಯಾಕಾಶದಲ್ಲಿ ಹುಟ್ಟುಹಬ್ಬ

ಬಾಹ್ಯಾಕಾಶದಲ್ಲಿ ಎರಡು ಸಲ ಹುಟ್ಟುಹಬ್ಬವನ್ನೂ ಆಚರಿಸಿದ ಹಿರಿಮೆ ಸುನೀತಾ ಅವರಿಗೆ ಸಲ್ಲುತ್ತದೆ; ಹಿಂದೆ 2012ರಲ್ಲಿ ಅವರು ಬಾಹ್ಯಾಕಾಶದಲ್ಲಿ ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವರ್ಷ ಅವರು 59ನೇ ಹುಟ್ಟುಹಬ್ಬವನ್ನು ಬಾಹ್ಯಾಕಾಶದಲ್ಲಿ ಆಚರಿಸಿ ವಿಚಿತ್ರ ದಾಖಲೆಯನ್ನು ನಿರ್ಮಿಸಿದರು. ಸುನೀತಾ ವಿಲಿಯಮ್ಸ್ ಅವರನ್ನು ಶೀಘ್ರವೇ ಭೂಮಿಗೆ ವಾಪಸ್ ಕರೆತರಲು ನಾಸಾ ವಿವಿಧ ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ನಮ್ಮ ದೇಶದ ಹೆಮ್ಮೆಯ ಸುಪುತ್ರಿಯಾಗಿರುವ ಸುನೀತಾ ವಿಲಿಯಮ್ಸ್ ಸುರಕ್ಷಿತರಾಗಿ ಭೂಮಿಗೆ ಮರಳಿ ಬರಲಿ ಎಂದು ಹಾರೈಸೋಣ.




 


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಮೌನದ ಬಲ