ಭಾರತದ ಭಾಗ್ಯ ವಿಧಾತ ಅಂಬೇಡ್ಕರ್

Update: 2023-12-06 05:03 GMT

Photo: twitter

ಸಂವಿಧಾನದ ಸೃಷ್ಟಿಕರ್ತ, ಪ್ರಜಾಪ್ರಭುತ್ವದ ನಿರ್ಮಾಪಕ, ಮಹಾ ಮಾನವತಾವಾದಿ ಆಧುನಿಕ ಇತಿಹಾಸದಲ್ಲಿ ತಮ್ಮ ಸಾಧನೆಯನ್ನು ಅಜರಾಮರಾಗಿದ್ದಾರೆ. ಅರಿವಿನ ಲೋಕವನ್ನು ಜನತೆಗೆ ತಿಳಿಸಿದ ಮಹಾ ಚಿಂತಕ ಅಂಬೇಡ್ಕರ್. ಭಾರತದ ರಾಜಕೀಯ ಭೂಪಟದಲ್ಲಿ ಹಲವು ಸಾಧನೆ ಮಾಡಿದ ಧೀಮಂತ ಚೇತನ ಅಂಬೇಡ್ಕರ್. ತಮ್ಮ ಬುದ್ಧಿಶಕ್ತಿ ಮೂಲಕ ಅವರು ಕಾನೂನು, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಕಾರ್ಮಿಕ ನಾಯಕ ಹಾಗೂ ರಾಜಕಾರಣಿ ಹೀಗೆ ಹಲವು ವಿಷಯಗಳಲ್ಲಿ ಸಾಧನೆ ಮಾಡಿದ ಮಹಾವ್ಯಕ್ತಿಯಾಗಿದ್ದರು. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಡಿಸೆಂಬರ್ 6ರಂದು ಆಚರಿಸಲಾಗುತ್ತದೆ. ಆ ಸಂದರ್ಭದಲ್ಲಿ ಅವರನ್ನು ನೆನಪಿಸುವುದು ಪ್ರತೀ ಭಾರತೀಯನ ಕರ್ತವ್ಯವಾಗಿದೆ.

ದಲಿತ ಸಮುದಾಯವು ಶತ ಶತಮಾನಗಳಿಂದಲೂ ಹಿಂದೂ ಸವರ್ಣೀಯರಿಂದ ಅಸ್ಪಶ್ಯರು ಎಂದು ಪರಿಗಣಿಸಲ್ಪಟ್ಟವರು. ಸ್ವತಂತ್ರ ಭಾರತದಲ್ಲಿ ಸಂವಿಧಾನವನ್ನು ಅಂಗೀಕರಿಸುವ ಪೂರ್ವದವರೆಗೆ ಈ ಸಮುದಾಯಗಳನ್ನು ಮುಟ್ಟಬಾರದು ಮತ್ತು ನೋಡಬಾರದು ಮತ್ತು ಸಮೀಪ ಬರಲು ಬಿಡಬಾರದು ಎಂಬ ಭಾವನೆಯಲ್ಲಿ ಅಂದಿನ ಸಮಾಜ ಇತ್ತು. ಈಗಲೂ ಇದು ಸಂಪೂರ್ಣವಾಗಿ ತೊಲಗಿಲ್ಲ. ಇದರ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಿದ ಮಹಾ ನಾಯಕ ನಮ್ಮ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್. ಎಲ್ಲಾ ರೀತಿಯಲ್ಲಿ ಶೋಷಿಸಲ್ಪಟ್ಟ ದಲಿತ ಸಮುದಾಯಕ್ಕೆ ಮಾನವ ಹಕ್ಕುಗಳನ್ನು ದೊರಕಿಸಿಕೊಟ್ಟವರು ಅಂಬೇಡ್ಕರ್.

ಒಮ್ಮೆ ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಫೆಡರೇಶನ್ ನಾಯಕರ ಮತ್ತು ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ‘‘ಕೇವಲ ರಾಜಕೀಯದ ಕಡೆ ಗಮನ ಕೊಡ ಬೇಡಿರಿ; ನಮ್ಮ ಸಮುದಾಯವು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ. ಹಳ್ಳಿಗಾಡಿನ ಜನರಿಗೆ ಸೌಲಭ್ಯಗಳನ್ನು ಒದಗಿಸಿರಿ; ಅವರನ್ನು ಹೋರಾಟಕ್ಕೆ ಸಜ್ಜುಗೊಳಿಸಿರಿ; ಕಳೆದು ಒಂದೂವರೆ ದಶಕದಲ್ಲಿ ನಾವು ಪರಿಶಿಷ್ಟ ಜಾತಿಗಳ ಮಧ್ಯೆ ಕೆಲಸ ಮಾಡಿದ್ದೇವೆ. ಇನ್ನು ನಮ್ಮ ಕಾರ್ಯಕ್ಷೇತ್ರವನ್ನು ವಿಸ್ತಾರ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಸಂಕುಚಿತ ದೃಷ್ಟಿಕೋನ ನಮ್ಮದಾಗಬಾರದು; ಸಮುದಾಯದ ಹಿತವನ್ನು ಕಡೆಗಣಿಸುವುದೂ ಸಲ್ಲದು.’’ ಎಂದು ಎಚ್ಚರಿಸಿದರು. ಆದರೆ ಈ ಮಾತು ಅಂದಿನಿಂದ ಇಂದಿನವರೆಗೂ ಯಾವ ನಾಯಕನ ಕಿವಿಗೂ ತಟ್ಟುತ್ತಿಲ್ಲ. ಸಮುದಾಯದ ಈಗಿನ ನಾಯಕರು ತಮ್ಮ ಸ್ವಹಿತ ಮತ್ತು ಸ್ವಾರ್ಥದ ಬದುಕಿನಲ್ಲಿ ಮುಳುಗಿದ್ದಾರೆ. ಹೀಗಾಗಿ ಅಂಬೇಡ್ಕರ್ ಅವರ ಕನಸು ನನಸಾಗುತ್ತಿಲ್ಲ.

ಕೊನೆಯ ದಿನಗಳಲ್ಲಿ ಅಂಬೇಡ್ಕರ್ ಅವರಿಗೆ ದೈಹಿಕ ಆರೋಗ್ಯ ಬಿಗಡಾಯಿಸುತ್ತಿದ್ದರೂ ಅವರ ಬೌದ್ಧಿಕ ಕ್ಷಮತೆ ಎಳ್ಳಷ್ಟು ಕುಗ್ಗಿರಲಿಲ್ಲ. ಅದು ಇನ್ನೂ ಚುರುಕಾಗಿತ್ತು. ಶತ ಶತಮಾನಗಳಿಂದ ಶೋಷಣೆಗೊಂಡ ಸಮುದಾಯಗಳ ಬದುಕಿಗೆ ಭರವಸೆಯನ್ನು ಮೂಡಿಸುವ ಪ್ರಯತ್ನವನ್ನು ಅವರು ಎಂದೂ ಕೈ ಬಿಡಲಿಲ್ಲ.

ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಬಳಿಕ ಕೆಲವು ದಿನಗಳವರೆಗೆ ಅಂಬೇಡ್ಕರ್ ತುಂಬಾ ಸಂತೋಷದ ಗೆಲುವಿನಲ್ಲಿ ಇದ್ದರು. ಬೌದ್ಧ ಧರ್ಮದ ವಿಚಾರಗಳನ್ನು ದಿಲ್ಲಿ, ಉತ್ತರಪ್ರದೇಶ, ಪಂಜಾಬ್ ಮುಂತಾದ ಪ್ರದೇಶಗಳಲ್ಲಿ ಪ್ರಚಾರ ಮಾಡಲು ಕಾರ್ಯಕ್ರಮವನ್ನು ರೂಪಿಸುತ್ತಿದ್ದರು. ಬೌದ್ಧ ಧರ್ಮವನ್ನು ಒಂದು ಧರ್ಮವಾಗಿಯಲ್ಲದೆ ಒಂದು ಸಾಮಾಜಿಕ ಸಿದ್ಧಾಂತವೆಂದು ತಾವು ಪರಿಗಣಿಸುವುದಾಗಿ ಹೇಳುತ್ತಿದ್ದರು. ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಅಂಬೇಡ್ಕರ್ ಬೌದ್ಧ ಧರ್ಮ ಸೇರಿದ ವಿಚಾರ ವಿಶ್ವ ಚರಿತ್ರೆಯಲ್ಲಿ ಅನುಪಮವಾದುದಾಗಿತ್ತು.

ಅಂಬೇಡ್ಕರ್ ಅವರ ಕೊನೆಯ ದಿನದ ಘಟನಾವಳಿಗಳು ನೋಡುವುದಾದರೆ, ಒಮ್ಮೆ ಊಟದ ಮೇಜಿನ ಬಳಿ ಹೋಗುವಾಗ ತುಸು ದೂರದಲ್ಲಿದ್ದ ಒಂದೆರಡು ಕಪಾಟುಗಳ ಬಳಿ ಹೋಗಿ ನಾಲ್ಕಾರು ಪುಸ್ತಕಗಳನ್ನು ಎತ್ತಿಕೊಂಡು, ತಮ್ಮ ಸಹಾಯಕ ರತ್ತುಗೆ ಕೊಟ್ಟು ಅವುಗಳನ್ನು ಮಂಚದ ಪಕ್ಕ ಇರುವ ಟೇಬಲ್ ಮೇಲಿಡಲು ಸೂಚಿಸಿದರು. ಅಂಬೇಡ್ಕರ್ ಸ್ವಲ್ಪ ಊಟ ಮಾಡಿ ನಂತರ ರತ್ತುರವರಿಂದ ತಮ್ಮ ಹಣೆ ಒತ್ತಿಸಿಕೊಂಡರು, ಅದಾದ ಬಳಿಕ ಅವರು ಎದ್ದು ಕಬೀರನ ಹಾಡುಗಳನ್ನು ಹಾಡಿಕೊಳ್ಳುತ್ತಾ ಮಲಗುವ ಕೋಣೆಗೆ ಹೋದರು. ಕಪಾಟುಗಳಿಂದ ತಂದಿದ್ದ ಪುಸ್ತಕಗಳನ್ನು ಸ್ವಲ್ಪಕಾಲ ಓದಿದ ನಂತರ ಅಂಬೇಡ್ಕರ್ ಅವರು ರಾತ್ರಿ 11:45 ಗಂಟೆಗೆ ಮಲಗಿದರು. ಅಂಬೇಡ್ಕರ್ ಮಲಗಿದ ನಂತರ ರತ್ತು ತಮ್ಮ ಮನೆಗೆ ತೆರಳಿದರು. ಹಾಸಿಗೆ ಮೇಲೆ ಅಂಬೇಡ್ಕರ್ ಮಲಗುತ್ತಲೇ ಅವರನ್ನು ಸಾವು ಕರೆಯುತ್ತಿತ್ತೋ ಏನೋ ಯಾರಿಗೂ ತಿಳಿದಿರಲಿಲ್ಲ.

ಡಿಸೆಂಬರ್ 6 ಬೆಳಗ್ಗೆ ಅಂಬೇಡ್ಕರ್ ಪತ್ನಿ ಅಂಬೇಡ್ಕರ್ ಮಲಗಿದ್ದ ಕೋಣೆ ಕಡೆಗೆ ಕಣ್ಣು ಹಾಯಿಸಿದಾಗ ಅಂಬೇಡ್ಕರ್ ಇನ್ನು ಮಲಗಿದ್ದರು. ಅವರ ಪತ್ನಿ ಈ ಮಧ್ಯೆ ವಾಯು ವಿಹಾರವನ್ನು ಮುಗಿಸಿಕೊಂಡು ಬಂದು ನೋಡಿದರೆ ಇನ್ನೂ ಅಂಬೇಡ್ಕರ್ ಮಲಗಿದ್ದರು. ಇದನ್ನು ಗಮನಿಸಿದ ಅವರ ಪತ್ನಿ ಕೈ ಮುಟ್ಟುತ್ತ ಎಬ್ಬಿಸಲು ಪ್ರಯತ್ನಿಸುವಾಗ ಅಂಬೇಡ್ಕರ್ ಜೀವ ಹೊರಟು ಹೋಗಿತ್ತು ಎಂಬುದು ಅವರ ಅರಿವಿಗೆ ಬಂತು. ಅವರು ಕುಸಿದು ಬಿದ್ದರು, ನಂತರ ಸಾವರಿಸಿಕೊಂಡು ಸುದಾಮನ ಮೂಲಕ ರತ್ತುರವರನ್ನು ಕರೆದುಕೊಂಡು ಬರಲು ಕಳಿಸಿದರು. ರತ್ತು ಬಂದು ನೋಡಿದಾಗ ಅಂಬೇಡ್ಕರ್ ಮಲಗಿದ್ದಾಗಲೇ ಅವರ ಜೀವ ಹೊರಟು ಹೋಗಿತ್ತು. ಕಳೆದ ಎರಡು ವರ್ಷಗಳಿಂದ ಅಶಕ್ತವಾಗಿದ್ದ ಅವರ ಹೃದಯ ಬಡಿತವನ್ನು ನಿಲ್ಲಿಸಿತ್ತು. ಅಂಬೇಡ್ಕರ್ ನಿಧನರಾದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ಕೇಂದ್ರ ಸರಕಾರದ ಹಲವಾರು ಮಂತ್ರಿಗಳು ಧಾವಿಸಿ ಬಂದರು. ಅಂಬೇಡ್ಕರ್ ಅಭಿಮಾನಿಗಳು ಭಾರತದ ಮಹಾ ನಾಯಕನ ಪಾರ್ಥಿವ ಶರೀರದ ದರ್ಶನಕ್ಕಾಗಿ ಸಾಲುಗಟ್ಟಿದ್ದರು. ಈ ಮಧ್ಯೆ ದಿಲ್ಲಿಯಿಂದ ಪಾರ್ಥಿವ ಶರೀರವನ್ನು ಮುಂಬೈಗೆ ಕೊಂಡೊಯ್ಯಲು ನಿರ್ಧಾರವಾಯಿತು. ಪ್ರಧಾನಿ ನೆಹರೂ ತಮ್ಮ ಮಂತ್ರಿಮಂಡಲದ ಸದಸ್ಯರೊಂದಿಗೆ ಬಂದು ಅಂಬೇಡ್ಕರ್ ಅವರ ಪತ್ನಿಯನ್ನು ಸಾಂತ್ವನಗೊಳಿಸಿದರು.ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಸಂಪರ್ಕ ಮಂತ್ರಿ ಜಗಜೀವನ್ ರಾಮ್ ವಿಮಾನ ವ್ಯವಸ್ಥೆ ಮಾಡಿದರು. ವಿಮಾನವು ಮುಂಬೈ ತಲುಪಿದ ಬಳಿಕ ಮುಖ್ಯ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಅಲ್ಲಿ ಲಕ್ಷಾಂತರ ಅನುಯಾಯಿಗಳು ಭಾಗಿಯಾದರು. ಆನಂತರ ಬೌದ್ಧ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಅಂಬೇಡ್ಕರ್ ಅವರು ಅಜರಾಮರಾಗಿ ಭಾರತದ ಇತಿಹಾಸದ ಪುಟದಲ್ಲಿ ಜೀವಂತವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಭೀಮಾಶಂಕರ ದಾದೆಲಿ ಹಳಿಸಗರ, ಶಹಾಪುರ

contributor

Similar News

ಬಯಲರಿವು