ಭಾರತೀಯ ಕಾನೂನುಗಳ ಹೊಸ ಪೋಷಾಕು
ಗೃಹಸಚಿವರು ಈ ಕಾನೂನುಗಳ ಹೆಸರುಗಳನ್ನು ವೈಭವೋಪೇತವಾಗಿ ಭಾರತೀಯ, ನಾಗರಿಕ, ಸುರಕ್ಷ, ನ್ಯಾಯ, ಸಾಕ್ಷ್ಯ, ಸಂಹಿತಾ, ಮುಂತಾದ ಅಪ್ಪಟ ಸನಾತನ ಪದಗಳಿಂದ ಭರ್ತಿಮಾಡಿದರಾದರೂ ಅವುಗಳ ಅಗತ್ಯ ಮತ್ತು ಮಹತ್ವವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಲಿಲ್ಲ. ಪ್ರಾಯಃ ಅವರ ಮನದಾಳದ ಹಿಂದಿ ಹೇರಿಕೆಯ ತವಕ ಈ ಮೂಲಕ ಪೂರೈಸಿರಬಹುದು. ವಿಶೇಷವೆಂದರೆ ಈ ಕಾನೂನುಗಳನ್ನು ತಿದ್ದುಪಡಿಯ ಮೂಲಕವೂ ಜಾರಿಮಾಡಬಹುದಿತ್ತು. ಕಳೆದ 150 ವರ್ಷಗಳಿಂದ ಉಳಿದಿರುವ ಹಳೆಯ ಕಾನೂನುಗಳ ನಿರಸನದ ಮತ್ತು ಹೊಸ ಕಾನೂನುಗಳ ಜಾರಿಯ ಕುರಿತು ಅರ್ಥಪೂರ್ಣ ಹೋಗಲಿ, ಕಾಟಾಚಾರದ ಚರ್ಚೆಯೂ ನಡೆಯದೆ ಹೋಯಿತು.
2023ರಲ್ಲಿ ಒಕ್ಕೂಟ ಸರಕಾರವು (1) ಇಂಡಿಯನ್ ಪೀನಲ್ ಕೋಡ್ ಅಥವಾ ಭಾರತೀಯ ದಂಡ ಸಂಹಿತೆ, 1860 (2) ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಥವಾ ದಂಡ ಪ್ರಕ್ರಿಯಾ ಸಂಹಿತೆ, 1973, ಮತ್ತು (3) ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಅಥವಾ ಭಾರತೀಯ ಸಾಕ್ಷ್ಯ ಸಂಹಿತೆ, 1872 ಎಂಬ ಮೂರು ಕಾನೂನುಗಳನ್ನು ನಿರಸನಗೊಳಿಸಿ ಹೊಸ ಮೂರು ಕಾನೂನುಗಳನ್ನು ರಚಿಸಿತು. ನಿರಸನಗೊಂಡ ಈ ಮೂರೂ ಕಾಯ್ದೆಗಳು ಸಹಜವಾಗಿಯೇ ಪಾಶ್ಚಾತ್ಯ ಮೂಲದವು. ಆದರೆ ಭಾರತೀಯ ವಸಾಹತುವಿಗೆ ಬೇಕಾದಂತೆ ತಿದ್ದಿಕೊಂಡವುಗಳು. ಇಲ್ಲಿನ ಸಾಮಾಜಿಕ ಪರಂಪರೆ, ರೂಢೀಗತ ನಂಬಿಕೆ ಇವುಗಳಿಗೆ ಬೇಕಾದಂತೆ ರೂಪುಗೊಂಡವುಗಳು.
ಕಾಯ್ದೆಗಳ ಮೂಲವನ್ನು ಆರಂಭದಲ್ಲೇ ಪ್ರಸ್ತಾವಿಸಿದ್ದೇಕೆಂದರೆ ಈ ದೇಶದಲ್ಲಿ ಕಾನೂನಿನಲ್ಲಿ ದಂಡನೆಯ ಅಗತ್ಯ ಮತ್ತು ಅವಕಾಶವಿರುವುದನ್ನು ಯಾರೂ ಪ್ರಶ್ನಿಸುವುದಿಲ್ಲ. ಭಾರತದಲ್ಲಿ ಪ್ರಾಚೀನದಿಂದಲೂ ನಾವಿಂದು ಊಹಿಸಲೂ ಸಾಧ್ಯವಿಲ್ಲದಂತಹ ಅಂದರೆ-‘ಮನುಸ್ಮತಿ’ಯಂತಹ ಮತ್ತು ವರ್ಣಾಶ್ರಮ ಧರ್ಮದ ಹೆಸರಿನಲ್ಲಿ ಸಮಾಜದ ಕೆಳವರ್ಗ ಮತ್ತು ಕೆಳ ಎಂದೆನಿಸಲ್ಪಟ್ಟ ಜಾತಿಯ ಜನರು ಪಾಳೇಗಾರಿಕೆಯ ಅಕ್ರಮಕ್ಕೊಳಗಾಗುವ ದಂಡನೀತಿಯನ್ನು ಹೆಚ್ಚುಕಡಿಮೆ ಅಧಿಕೃತವೆಂಬಂತೆ ಒಪ್ಪಿಕೊಂಡಂತಿತ್ತು. ಆದರೆ ದಂಡನೆಗಿರುವ ದಾರಿಯ ಕುರಿತು ನ್ಯಾಯಪರತೆಯನ್ನು ಎಲ್ಲರೂ ಚಿಂತಿಸುತ್ತಾರೆ. ಅಧಿಕಾರದ ಒರಟು ನೀತಿಗೆ ಮೊದಲು ಬಲಿಯಾಗುವುದು ಆರೋಪವನ್ನು ಹೊತ್ತ ಪ್ರಜೆಗಳು. ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ಉದಾರ ನೀತಿಯ ಆಧಾರದಲ್ಲಿ ಭಾರತೀಯ ಸಾಕ್ಷ್ಯ ಸಂಹಿತೆಯು ರೂಪುಗೊಂಡಿತ್ತು. ಹೀಗಾಗಿ ಕ್ರಿಮಿನಲ್ ದಂಡ ಪ್ರಕ್ರಿಯಾ ಸಂಹಿತೆಯು 1973ರ ವರೆಗೂ ಬದಲಾವಣೆಯನ್ನು ಕಂಡರೆ, ಉಳಿದ ಎರಡು ಕಾನೂನುಗಳು ಕಳೆದ ಸುಮಾರು 150 ವರ್ಷಗಳ ಕಾಲ ಸಣ್ಣಪುಟ್ಟ ಕಾಲೋಚಿತ ಬದಲಾವಣೆಗಳನ್ನು ಹೊರತುಪಡಿಸಿ ಉಳಿದಂತೆ ತಮ್ಮ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದವು. ಉದಾಹರಣೆಗೆ ವಿದ್ಯುನ್ಮಾನ ಸಲಕರಣೆಗಳ ಆಗಮನದೊಂದಿಗೆ ಅವನ್ನು ಸಾಕ್ಷ್ಯವಾಗಿ ಹೇಗೆ ಸ್ವೀಕರಿಸಬೇಕು ಎಂಬ ಬಗ್ಗೆ ಭಾರತೀಯ ಸಾಕ್ಷ್ಯ ಸಂಹಿತೆಯಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿತ್ತು. ಹಾಗೆಯೇ ಆಧುನಿಕ ವಿಕೃತಿಯೊಂದಿಗೆ ಹೊಸರೀತಿಯ ಪಿಡುಗುಗಳು, ದೌರ್ಜನ್ಯಗಳು ನಡೆಯುವುದನ್ನು ಬಗೆಹರಿಸಲು ಕೆಲವಾರು ತಿದ್ದುಪಡಿಗಳು ಅವಶ್ಯವಾದವು. ಸಾಬೀತು ಪಡಿಸುವ ಹೊಣೆಯು ಅಭಿಯೋಜನೆಯದ್ದೇ ಆದರೂ, ಕೆಲವು ಪ್ರಕರಣ ಮತ್ತು ಸಂದರ್ಭಗಳಲ್ಲಿ ಅವನ್ನು ಆರೋಪಿಯ ಮೇಲೆ ಹೊರಿಸಲಾಯಿತು. ಇಷ್ಟಾದರೂ ಕಾನೂನು ತನ್ನ ಪಾಶ್ಚಾತ್ಯ ಮೂಲದ ಲಕ್ಷಣ ಮತ್ತು ವರ್ಚಸ್ಸನ್ನು ಕಳೆದುಕೊಳ್ಳಲಿಲ್ಲ. ಏಕೆಂದರೆ ಕಾನೂನು ಭಾರತೀಯ ಅರಳಿಕಟ್ಟೆ ನ್ಯಾಯದಿಂದ ಲಿಖಿತ ಧೋರಣೆಗೆ ಬದಲಾದದ್ದು ಈ ಪಾಶ್ಚಾತ್ಯ ಸೊಗಡಿನಿಂದಲೇ. ಅವು ಬದಲಾಗುತ್ತಿರುವ ಜಾಗತಿಕ ವ್ಯವಹಾರದಲ್ಲಿ ಸಹಜವಾಗಿಯೇ ಇದ್ದವು ಮತ್ತು ಅವನ್ನು ಬದಲಾಯಿಸುವುದು ಸುಲಭವಾಗಿರಲಿಲ್ಲ ಹಾಗೂ ಅಗತ್ಯವಾಗಿರಲಿಲ್ಲ.
ಈ ಮೂರು ಕಾಯ್ದೆಗಳ ಪೈಕಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳು ಕಾಲಾನುಕಾಲಕ್ಕೆ ಅಗತ್ಯವಾದವು ಎಂಬುದು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಅಥವಾ ದಂಡ ಪ್ರಕ್ರಿಯಾ ಸಂಹಿತೆ) 1973ರ ಇತಿಹಾಸವು ತೋರಿಸುತ್ತದೆ. ಈ ಕಾಯ್ದೆಯು ಅದಕ್ಕೆ ಮೊದಲು ಚಾಲ್ತಿಯಲ್ಲಿದ್ದ ಅದೇ ಹೆಸರಿನ 1898ರ ಕಾಯ್ದೆಯ ಮರಿ. ಈ ಕಾಯ್ದೆಯು ಅನೇಕ ಕಾರಣಗಳಿಂದಾಗಿ, ಮುಖ್ಯವಾಗಿ ಇಡೀ ದೇಶಕ್ಕೆ ಅನ್ವಯಿಸುವ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಿರಲಿಲ್ಲವೆಂಬ ಕಾರಣಕ್ಕೆ ಹುಟ್ಟಿತು. ಇದರ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಸ್ವಾತಂತ್ರ್ಯಪೂರ್ವ ಅಂದರೆ ಬ್ರಿಟಿಷ್ ಭಾರತದಲ್ಲಿ ವಿವಿಧ ಪ್ರಾಂತಗಳಿಗೆ ಮತ್ತು ಕೇಂದ್ರಾಡಳಿತ ಪಟ್ಟಣಗಳಿಗೆ ಅನ್ವಯಿಸುವ ವಿವಿಧ ಕಾಯ್ದೆಗಳಿದ್ದುವೇ ಹೊರತು ಏಕರೂಪದ ಪ್ರಕ್ರಿಯೆಗಳಿಗೆ ಅನುವು ಮಾಡಿಕೊಡುವ ಕಾಯ್ದೆಯಿರಲಿಲ್ಲ. ಈ ಪೈಕಿ ಕೇಂದ್ರಾಡಳಿತ ಪಟ್ಟಣಗಳಿಗೆ ಅನ್ವಯಿಸುವಂತೆ 1852ರಲ್ಲಿ ‘ಕ್ರಿಮಿನಲ್ ಪ್ರೊಸೀಜರ್ ಸುಪ್ರೀಂ ಕೋರ್ಟ್ಸ್’ ಕಾಯ್ದೆಯೆಂಬ ಏಕರೂಪದ ಕಾಯ್ದೆಯನ್ನು ಜಾರಿಮಾಡಿದರೆ, ಪ್ರಾಂತಗಳಿಗೆ ಅನ್ವಯಿಸುವಂತೆ 1861ರಲ್ಲಿ ‘ಕ್ರಿಮಿನಲ್ ಪ್ರೊಸೀಜರ್ ಕೋಡ್’ ಎಂಬ ಏಕರೂಪದ ಕಾಯ್ದೆಯನ್ನು ಜಾರಿಮಾಡಲಾಯಿತು. ಆನಂತರ 1865ರಲ್ಲಿ ಕ್ರಿಮಿನಲ್ ‘ಪ್ರೊಸೀಜರ್ ಸುಪ್ರೀಂ ಕೋರ್ಟ್ಸ್’ ಕಾಯ್ದೆಯನ್ನು ನಿರಸನಗೊಳಿಸಿ ‘ಹೈಕೋರ್ಟ್ ಕ್ರಿಮಿನಲ್ ಪ್ರೊಸೀಜರ್ ಕಾಯ್ದೆ, 1865’ನ್ನು ಜಾರಿಮಾಡಿ, ಆನಂತರ 1872ರಲ್ಲಿ ‘ಕ್ರಿಮಿನಲ್ ಪ್ರೊಸೀಜರ್ ಕೋಡ್, 1861’ನ್ನು ನಿರಸನಗೊಳಿಸಿ ‘ಕ್ರಿಮಿನಲ್ ಪ್ರೊಸೀಜರ್ ಕೋಡ್, 1872’ನ್ನು ಜಾರಿಮಾಡಲಾಯಿತು. ಈ ಕಾಯ್ದೆಯನ್ನೂ ನಿರಸನಗೊಳಿಸಿ ‘ಕ್ರಿಮಿನಲ್ ಪ್ರೊಸೀಜರ್ ಕೋಡ್, 1898’ನ್ನು ಚಾಲ್ತಿಗೊಳಿಸಲಾಯಿತು. ಇವೆಲ್ಲ ಬದಲಾಗುತ್ತಿದ್ದ ಸಾಮಾಜಿಕ ಮೌಲ್ಯಗಳಿಗನುಸಾರವಾಗಿ ಮಾಡಲಾಗಿತ್ತು. 1898ರ ಈ ಕಾಯ್ದೆಯನ್ನು ಸ್ವಾತಂತ್ರ್ಯಪೂರ್ವದಲ್ಲಿ 1923ರಲ್ಲೂ, ಸ್ವಾತಂತ್ರ್ಯಾನಂತರ 1955ರಲ್ಲೂ ಸರಳ ವಿಧಾನ ಮತ್ತು ತ್ವರಿತ ವಿಚಾರಣೆಗೆ ಅನುವು ಮಾಡಿಕೊಡುವ ದೃಷ್ಟಿಯಿಂದ ತಿದ್ದಲಾಯಿತು. ಅಲ್ಲದೆ ಭಾರತದ ಸಂವಿಧಾನದಲ್ಲಿ ಕಾನೂನು ಸಮುಚಿತ (ಅಂದರೆ ಒಕ್ಕೂಟ ಮತ್ತು ರಾಜ್ಯಗಳ ಅಧಿಕಾರದಲ್ಲಿ) ಪಟ್ಟಿಯಲ್ಲಿದ್ದುದರಿಂದ ರಾಜ್ಯಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿಯನ್ನು ಮಾಡಿಕೊಂಡವು. ಕಾನೂನು ಆಯೋಗವು 1958 ಮತ್ತು 1968ರಲ್ಲಿ ವರದಿಗಳನ್ನು ಸಲ್ಲಿಸಿತು. ತನ್ಮಧ್ಯೆ ಕಾನೂನು ಆಯೋಗವನ್ನು ಪುನರ‌್ರಚಿಸಲಾಯಿತು. ಈ ಆಯೋಗವು 1969ರಲ್ಲಿ ಸಲ್ಲಿಸಿದ ವರದಿಯನ್ವಯ 1970ರಲ್ಲಿ ಕರಡು ಮಸೂದೆಯು ಮಂಡಿಸಲ್ಪಟ್ಟು ಉಭಯ ಸದನಗಳ (ಲೋಕಸಭೆ ಮತ್ತು ರಾಜ್ಯಸಭೆ) ಜಂಟಿ ಸಂಸದೀಯ ಸಮಿತಿಯಲ್ಲಿ ಚರ್ಚೆಗೊಂಡು 1973ರ ಕಾಯ್ದೆಯ ರೂಪದಲ್ಲಿ ಜಾರಿಗೆ ಬಂತು.
09.12.2023ರಂದು ಭಾರತದ ಒಕ್ಕೂಟ ಸರಕಾರವು (1) ಇಂಡಿಯನ್ ಪೀನಲ್ ಕೋಡ್ (ಅಥವಾ ಭಾರತೀಯ ದಂಡ ಸಂಹಿತೆ), 1860, (2) ‘ಕ್ರಿಮಿನಲ್ ಪ್ರೊಸೀಜರ್ ಕೋಡ್ (ಅಥವಾ ದಂಡ ಪ್ರಕ್ರಿಯಾ ಸಂಹಿತೆ), 1973’ ಮತ್ತು (3) ‘ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ (ಅಥವಾ ಭಾರತೀಯ ಸಾಕ್ಷ್ಯ ಸಂಹಿತೆ), 1872’ ಎಂಬ ಈ ಮೂರೂ ಕಾಯ್ದೆಗಳನ್ನು ನಿರಸನಗೊಳಿಸಿ ಹೊಸದಾಗಿ ಅನುಕ್ರಮವಾಗಿ (1) ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’, (2) ‘ಭಾರತೀಯ ನ್ಯಾಯ ಸಂಹಿತೆ’ ಮತ್ತು (3) ‘ಭಾರತೀಯ ಸಾಕ್ಷ್ಯ ಅಧಿನಿಯಮ’ ಎಂಬ ಕಾಯ್ದೆಗಳನ್ನು ಮಂಡಿಸಿತು. ಇದನ್ನು ಮಂಡಿಸಿ ಗೃಹಸಚಿವರು ಕಳೆದ 150 ವರ್ಷಗಳಷ್ಟು ಹಳೆಯ ಕಾಯ್ದೆಗಳಲ್ಲಿ ಸೈದ್ಧಾಂತಿಕ ಪಲ್ಲಟಗಳನ್ನು ಕಾಣಿಸಿರುವುದಾಗಿ ಘೋಷಿಸಿದರು. (ಅವರ ಭಾಷಣದಲ್ಲಿ 1973ರ ಕಾಯ್ದೆ ಮಾತ್ರವಲ್ಲ, ಅದರಿಂದೀಚೆಗೆ ಆದ ತಿದ್ದುಪಡಿ/ಬದಲಾವಣೆಗಳ ಮಾಹಿತಿಯಾಗಲೀ ಉಲ್ಲೇಖವಾಗಲೀ ಇಲ್ಲ. ಅವನ್ನು ಅಲಕ್ಷಿಸಿ, ‘ದಂಡ ಪ್ರಕ್ರಿಯಾ ಸಂಹಿತೆ, 1898’ನ್ನು ತಾವು ನಿರಸನಗೊಳಿಸಿ ಹೊಸ ಕಾಯ್ದೆಯನ್ನು ತಂದಿದ್ದೇವೆಂದು ಘೋಷಿಸಿದರು. ಹಲವಾರು ನಿಯಮಗಳಿಗೆ ಆಗಿರುವ ಬದಲಾವಣೆಗಳನ್ನು ಉಲ್ಲೇಖಿಸಿ ತಾವು ‘ದಂಡನ್ಯಾಯ ವ್ಯವಸ್ಥೆ’ಗೆ (ಹೊಸ?) ಆತ್ಮವನ್ನು ನೀಡಿರುವುದಾಗಿ ಆತ್ಮಶ್ಲಾಘಿಸಿಕೊಂಡರು. ವೀಡಿಯೊ ರೆಕಾರ್ಡಿಂಗ್, ವಿಧಿವಿಜ್ಞಾನ ಮುಂತಾದ ಹೊಸ ಬೆಳವಣಿಗೆಗಳಿಗೆ ಬೇಕಾದಂತೆ ಕಾನೂನುಗಳನ್ನು ರೂಪಿಸಿ ನಿರೂಪಿಸಿರುವುದಾಗಿ ಮತ್ತು ಈ ಮೂಲಕ ಶೇ. 90 ಶಿಕ್ಷೆಯನ್ನು ಖಾತ್ರಿಮಾಡಿರುವುದಾಗಿ ಹೇಳಿದರು. ವಿಧಿವಿಜ್ಞಾನದ ಕುರಿತಂತೂ ಇದು ಭಾರತ ಜಗತ್ತಿಗೆ ನೀಡಿದ ವಿಶಿಷ್ಟ ಕೊಡುಗೆಯೆಂದೇ ಬಣ್ಣಿಸಿದರು. ಯಾವುದೇ ರೀತಿಯಲ್ಲೂ ಅಪರಾಧಿಗಳು ನ್ಯಾಯದ ಬಲೆಯಿಂದ ತಪ್ಪಿಸಿಕೊಳ್ಳದಂತೆ ಜಾಗ್ರತೆ ವಹಿಸಿರುವುದಾಗಿ ತಿಳಿಸಿದರು. ಅವರೇ ಹೇಳಿದಂತೆ ‘‘ಇಂದಿನಿಂದ ಯಾರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’’. (‘‘From now onwards no one can escape the law.’’)
ಗೃಹಸಚಿವರು ಈ ಕಾನೂನುಗಳ ಹೆಸರುಗಳನ್ನು ವೈಭವೋಪೇತವಾಗಿ ಭಾರತೀಯ, ನಾಗರಿಕ, ಸುರಕ್ಷ, ನ್ಯಾಯ, ಸಾಕ್ಷ್ಯ, ಸಂಹಿತಾ ಮುಂತಾದ ಅಪ್ಪಟ ಸನಾತನ ಪದಗಳಿಂದ ಭರ್ತಿಮಾಡಿದರಾದರೂ ಅವುಗಳ ಅಗತ್ಯ ಮತ್ತು ಮಹತ್ವವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಲಿಲ್ಲ. ಪ್ರಾಯಃ ಅವರ ಮನದಾಳದ ಹಿಂದಿ ಹೇರಿಕೆಯ ತವಕ ಈ ಮೂಲಕ ಪೂರೈಸಿರಬಹುದು. ವಿಶೇಷವೆಂದರೆ ಈ ಕಾನೂನುಗಳನ್ನು ತಿದ್ದುಪಡಿಯ ಮೂಲಕವೂ ಜಾರಿಮಾಡಬಹುದಿತ್ತು. ಕಳೆದ 150 ವರ್ಷಗಳಿಂದ ಉಳಿದಿರುವ ಹಳೆಯ ಕಾನೂನುಗಳ ನಿರಸನದ ಮತ್ತು ಹೊಸ ಕಾನೂನುಗಳ ಜಾರಿಯ ಕುರಿತು ಅರ್ಥಪೂರ್ಣ ಹೋಗಲಿ, ಕಾಟಾಚಾರದ ಚರ್ಚೆಯೂ ನಡೆಯದೆ ಹೋಯಿತು. ಭಾರತೀಯ ಸಾಕ್ಷ್ಯ ಕಾಯ್ದೆಯು ಕ್ರಿಮಿನಲ್ ಕಾನೂನೆಂದು ಈ ತನಕವೂ ಯಾರೂ ಹೇಳಿರಲಿಲ್ಲ. ಅದು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯದಲ್ಲಿ ಯಥೋಚಿತವಾಗಿ ಅನ್ವಯವಾಗುವ ಕಾಯ್ದೆ. ಸುಮಾರಾಗಿ ಭಾರತೀಯ ಸಾಕ್ಷ್ಯ ಸಂಹಿತೆಯೊಂದಿಗೇ ಜನ್ಮತಳೆದ ಮತ್ತು ವಸಾಹತುಶಾಹಿಯ ಕಾಲದ ಮತ್ತು ಈಗಲೂ ಚಾಲ್ತಿಯಲ್ಲಿರುವ ಆಸ್ತಿ ವರ್ಗಾವಣೆ ಕಾಯ್ದೆ, 1882, ಭಾರತೀಯ ಕ್ರಿಶ್ಚಿಯನ್ ಮದುವೆ ಕಾಯ್ದೆ, 1872, ಪಾಲುದಾರಿಕೆ ಕಾಯ್ದೆ, 1932, ಭಾರತೀಯ ವಿಶ್ವಸ್ತ ಕಾಯ್ದೆ, 1882, ಭಾರತೀಯ ಒಪ್ಪಂದ ಕಾಯ್ದೆ, 1872, ಭಾರತೀಯ ಮಾಮೂಲು ಹಕ್ಕಿನ ಕಾಯ್ದೆ, 1882 ಮುಂತಾದ ವಸಾಹತುಶಾಹೀ ಬಳುವಳಿಯ ಕಾಯ್ದೆಗಳೇಕೆ ಭಾರತೀಕರಣಕ್ಕೆ ಒಳಪಟ್ಟಿಲ್ಲ? ಎಂದು ಪ್ರಶ್ನಿಸಲಿಲ್ಲ. ಆಳುವ ಪಕ್ಷದ ಸಂಸದರಿಗೆ ಗೃಹಸಚಿವರನ್ನಾಗಲೀ, ಕಾನೂನಿನ ಸಕಾರಾತ್ಮಕತೆಯನ್ನಾಗಲೀ ಪ್ರಶ್ನಿಸುವ ಧೈರ್ಯವೇ ಇರಲಿಲ್ಲ; ಇನ್ನು ಮನಸ್ಸು ಎಲ್ಲಿ ಬರಬೇಕು? ಸಂಸದರಲ್ಲಿ ಅನೇಕ ನ್ಯಾಯವಾದಿಗಳು ನಿವೃತ್ತ ನ್ಯಾಯಾಧೀಶರು, ನ್ಯಾಯಮೂರ್ತಿಗಳು ಇದ್ದರೂ ಅವರು ಮೌನಸಮ್ಮತಿಯನ್ನು ನೀಡಿದರೇ ವಿನಾ ಇವುಗಳ ಚರ್ಚೆ ಅಗತ್ಯವೆಂದು ಮನಗಾಣಲೇ ಇಲ್ಲ. ತಾವು ಮಹತ್ತನ್ನು ಸಾಧಿಸಿದೆವು ಅಥವಾ ಯಾರನ್ನೋ ಸೋಲಿಸಿದೆವು ಎಂಬ ಒಂದು ರೀತಿಯ ಶುದ್ಧ ರಾಜಕಾರಣದ ಭಾವನೆಯಿಂದಲೇ ಇವು ಸ್ವೀಕೃತವಾದವು; ಜನಹಿತದಿಂದಲ್ಲ.
ಇಂತಹ ಘೋಷವಾಕ್ಯಗಳು ಅವುಗಳ ಹಿಂದಿನ ದೋಷಗಳನ್ನು ಮರೆಮಾಚಿದವು. ಈ ಕಾಯ್ದೆಗಳು 01.07.2024ರಿಂದ ನೆಲೆಗೊಂಡವು. ಈ ಕಾನೂನುಗಳು ಈಗ ಜಾರಿಯಲ್ಲಿವೆ. ಇವು ಮುಖ್ಯವಾಗಿ ಮಾಡಿದ್ದೇನೆಂದರೆ ಇರುವ ಕಲಮುಗಳನ್ನು ಹಿಂದುಮುಂದು ಅಥವಾ ಅಸ್ತವ್ಯಸ್ತಗೊಳಿಸಿದ್ದು. ಅನೇಕ ಕಡೆ ಇವು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಮಗುವಿನ ಬಳಿ ಬಣ್ಣಗಳ ಕರಡಿಗೆಯನ್ನು ಕೊಟ್ಟರೆ ಅದು ಹೇಗೆ ಅವನ್ನು ಚೆಲ್ಲಿ ಎಲ್ಲಕಡೆ ಹೆತ್ತ ತಾಯಿಗಷ್ಟೇ ಇಷ್ಟವಾಗುವ ಗೊಂದಲವನ್ನು ತಂದಿಡಬಲ್ಲುದೋ ಹಾಗೆಯೇ ಇವು ತಾಳ ತಪ್ಪುವಷ್ಟು ಹೊಸ ನಾಟ್ಯವನ್ನು ಸೃಷ್ಟಿಸಿವೆ. ದಶಕಗಳಿಂದ ಒಂದು ಕಾನೂನಿನ ಪರಿಚಯವನ್ನು ಮಾಡಿಕೊಂಡವರಿಗೆ ಈಗ ಗಲಿಬಿಲಿ. ವಿಷಯ ಹಾಗೇ ಇದೆ. ಪದಬಂಧ ಬದಲಾಗಿದೆ. ‘6’ ಎಂಬುದನ್ನು ಆಕಳಿಕೆಯೊಂದಿಗೆ ‘ಅರ್ಧಡಜನ್’ ಎಂದು ಕರೆಯಲು ಆರಂಭಿಸಿದ್ದೇವೆ. ನಾವು ಪರಿಚಿತವೆಂದು ಭಾವಿಸಿದ್ದ ಮನೆ ಈಗ ಅಲ್ಲಿಲ್ಲ; ಇನ್ನೆಲ್ಲಿಗೋ ಸ್ಥಳಾಂತರಗೊಂಡಿದೆ. ‘420’ ಎಂಬ ಕಲಮು ಒಂದು ನುಡಿಗಟ್ಟನ್ನೇ ಸೃಷ್ಟಿಸಿತ್ತು. ಅದೀಗ 318(4) ಆಗಿದೆ. ಕೊಲೆಯ ಕಲಮು 302 ಇತ್ತು; ಅದೀಗ 103(1) ಆಗಿದೆ. ‘ವಿಕ್ಟೋರಿಯಾ 302’ ಎಂಬ ಹಿಂದಿ ಸಿನೆಮಾ ಈಗ ಮರಳಿ ಪ್ರದರ್ಶಿತವಾದರೆ ಈ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತೇನೋ? ಯಾವುದೇ ದೂರು ಸಲ್ಲಿಕೆಯಾದಾಗ ಪೊಲೀಸರು ಪಡುವ ಬವಣೆ ಅವರ್ಣನೀಯ. ಪಾದ ಹಿಮ್ಮುಖವಾಗಿ ನಡೆದರೆ ಅದು ಭೂತವೆಂದು ಭಾಸವಾಗಬೇಕೇ ಹೊರತು ಬದುಕಿನ ಲಕ್ಷಣವಾಗುವುದಿಲ್ಲ.
ಕಾನೂನಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ವೃತ್ತಿಪರ ನ್ಯಾಯವಾದಿಗಳಿಗೂ, ನ್ಯಾಯಾಧೀಶರಿಗೂ, ನ್ಯಾಯಮೂರ್ತಿಗಳಿಗೂ ಮತ್ತು ಈ ಕಾನೂನುಗಳ ಅನುಷ್ಠಾನ ಯಂತ್ರಗಳಾದ ಪೊಲೀಸ್ ಮತ್ತಿತರ ಇಲಾಖೆಗೂ ಹೊಸದಾದ ವಿದ್ಯಾರ್ಥಿತನವನ್ನು ಕರುಣಿಸಿದ್ದು. ಸರಕಾರದಿಂದ ಸಂಬಳ ಪಡೆಯುವವರಿಗೆ ಸಂಬಳ ಸಹಿತ ತರಬೇತಿ ನೀಡಲಾಗಿದೆಯಂತೆ. ನ್ಯಾಯವಾದಿಗಳು ಏಕಲವ್ಯನಂತೆ ತಾವೇ ಹೊಸ ಕಾನೂನಿನ ಜ್ಞಾನದೀಪವನ್ನು ಹಚ್ಚಿಕೊಳ್ಳಬೇಕಿದೆ. ಆದರೆ ಅನಿವಾರ್ಯ. ಏಕೆಂದರೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಪ್ರತಿಭಟನೆಯ ಧ್ವನಿ ಕೇಳಿಸಿತಾದರೂ ಅವುಗಳ ಸದ್ದಡಗಿದವು. ಹಿಂದಿ, ಸಂಸ್ಕೃತ ಶೀರ್ಷಿಕೆಗಳ ಕುರಿತು ದಕ್ಷಿಣ ರಾಜ್ಯಗಳ ಒಂದಷ್ಟು ಮಂದಿ ಗೊಣಗಿದರೂ ಈ ಭಾಷಾ ಪಲ್ಲಟಗಳು ಅಸಾಂವಿಧಾನಿಕವೆಂದು ಹೇಳುವಂತಿ ರಲಿಲ್ಲ. ಇವುಗಳ ಅನುಷ್ಠಾನ ಪೂರ್ವಾನ್ವಯವೇ ಅಲ್ಲವೇ ಈ ಬಗ್ಗೆ ಚರ್ಚೆ ಅಡಗಿಲ್ಲ. ಬದಲಾವಣೆಗಾಗಿ ಬದಲಾವಣೆಯಾದರೆ ಹೀಗೇ ಅಗುವುದು.
ಅಂತೂ ವಯಸ್ಕರ ಹೊಸ ಶಿಕ್ಷಣ ಈ ರೂಪದಲ್ಲಿ ಬಂದಿದೆ. ಕಾನೂನಿನ ವೃತ್ತಿಯಲ್ಲಿ, ಉದ್ಯೋಗದಲ್ಲಿ ತೊಡಗಿರುವವರಿಗೆ ದಿನವೂ ಈ ಪುಸ್ತಕಗಳನ್ನು ಹುಡುಕುವ ತಡಕಾಟ ಮಾತ್ರ ಇನ್ನೂ ಅನೇಕ ಕಾಲ ಮುಂದುವರಿಯ ಬಹುದು. ಆನೆಯನ್ನು ನೋಡದವರು ಆನೆಯ ಚಿತ್ರ ಮಾಡಿದರೆ ಅದು ಏನೂ ಆಗಬಹುದು-ಆನೆಯ ಹೊರತಾಗಿ. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಶ್ರೀ ಎನ್.ವಿ.ರಮಣ ಹೇಳಿದ ಮಾತುಗಳು ಸತ್ಯ: ಕಾನೂ ನಿನ ಅರಿವಿಲ್ಲದವರು ಕಾನೂನನ್ನು ರೂಪಿಸಿದಾಗ ನ್ಯಾಯಾಂಗದ ಹೊಣೆ ಇನ್ನಷ್ಟು ಹೆಚ್ಚಾಗುತ್ತದೆ. ಇಂಡಿಯಾ ಅಂದರೆ ಭಾರತ ಎಂದು ಇರಬೇಕೇ ಹೊರತು ಇಂಡಿಯಾದ ಬದಲು ಭಾರತ ಎಂದಲ್ಲ. ಭಾರತದ ಸಂವಿಧಾನಕ್ಕೆ ತಿದ್ದುಪಡಿ ಬಂದಿವೆ ನಿಜ. ಹಾಗಂತ ಸಂವಿಧಾನವನ್ನೇ ನಿರಸನ ಗೊಳಿಸಿ ಹೊಸ ಸಂವಿಧಾನವನ್ನು ಸೃಷ್ಟಿಸುವ ಹುನ್ನಾರವೂ ಇದೇ ಆಶಯದ್ದು.