ಐನ್ ಸ್ಟೈನ್: ವಿಜ್ಞಾನಿ, ನೈತಿಕವಾದಿ

ಐನ್ಸ್ಟೈನ್ರನ್ನು ಸಾಮಾನ್ಯವಾಗಿ ಇಪ್ಪತ್ತನೇ ಶತಮಾನದ ಶ್ರೇಷ್ಠ ವಿಜ್ಞಾನಿ ಎಂದು ಗುರುತಿಸಲಾಗುತ್ತದೆ. ಇತರ ಪ್ರಸಿದ್ಧ ವಿಜ್ಞಾನಿ ಗಳಿಗಿಂತ ಭಿನ್ನವಾಗಿ, ತಮ್ಮ ಕೆಲಸ ಮತ್ತು ವೃತ್ತಿಜೀವನದ ಬಗ್ಗೆ ಅವರಿಗೆ ವಿಶಿಷ್ಟವಾದ ಗೀಳು ಇತ್ತು. ಐನ್ಸ್ಟೈನ್ ವಿಜ್ಞಾನದ ಆಚೆಗಿನ ಪ್ರಪಂಚದಲ್ಲಿಯೂ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಅವರಿಗೆ ಶಾಸ್ತ್ರೀಯ ಸಂಗೀತವೆಂದರೆ ಬಹಳ ಪ್ರಿಯವಾಗಿತ್ತು. ಅವರು ಸ್ವತಃ ನಿಪುಣ ಪಿಟೀಲು ವಾದಕರಾಗಿದ್ದರು.

Update: 2023-07-30 07:57 GMT

ನಾನು ಈ ವಾರದ ಆರಂಭದಲ್ಲಿ ಕ್ರಿಸ್ಟೋಫರ್ ನೋಲನ್ ಅವರ ಓಪನ್ ಹೈಮರ್ ಚಿತ್ರವನ್ನು ನೋಡಿದೆ. ಚಿತ್ರ ದಲ್ಲಿನ ಮುಖ್ಯ ಪಾತ್ರ, ಜೆ. ರಾಬರ್ಟ್ ಓಪನ್ ಹೈಮರ್, ಒಬ್ಬ ಭೌತವಿಜ್ಞಾನಿ. ಅವರದು ಯಹೂದಿ ಕುಟುಂಬ. ಅವರು ಪ್ರಿನ್ಸ್ಟನ್ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದರು. ಈ ವಿಷಯಗಳಲ್ಲಿ ಅವರು ಆಲ್ಬರ್ಟ್ ಐನ್ಸ್ಟೈನ್ರಿಗೆ ಸಮವಿದ್ದರು. ಚಲನಚಿತ್ರದಲ್ಲಿ ಐನ್ಸ್ಟೈನ್ ಹಲವು ಸಲ ಕಾಣಿಸಿಕೊಳ್ಳುತ್ತಾರೆ.

ಕೆಲವು ಬೌದ್ಧಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ಐನ್ಸ್ಟೈನ್ ಬಗ್ಗೆ ಓಪನ್ ಹೈಮರ್ ಅಪಾರ ಗೌರವವುಳ್ಳವರಾಗಿದ್ದರು. ಡಿಸೆಂಬರ್ ೧೯೬೫ರಲ್ಲಿ ಪ್ಯಾರಿಸ್ನಲ್ಲಿ ಯುನೆಸ್ಕೋ ಹೌಸ್ನಲ್ಲಿ ಮಾತನಾಡುತ್ತಾ, ಓಪನ್ ಹೈಮರ್ ಹೇಳಿದ್ದು ಹೀಗಿತ್ತು: ‘‘ವಿಜ್ಞಾನಕ್ಕೆ ಅಗಾಧ ಕೊಡುಗೆಗಳ ಹೊರತಾಗಿಯೂ, ಐನ್ಸ್ಟೈನ್ ಅತ್ಯಂತ ಸದ್ಭಾವನೆಯ ಮತ್ತು ಮಾನವೀಯತೆಯುಳ್ಳ ವ್ಯಕ್ತಿಯಾಗಿದ್ದರು. ನಿಜವಾಗಿಯೂ, ಮನುಷ್ಯನ ಸಂಕಷ್ಟಗಳ ಬಗೆಗಿನ ಅವರ ಧೋರಣೆಗೆ ಒಂದೇ ಒಂದು

ಪದವನ್ನು ಬಳಸುವುದಾದರೆ, ಯಾರನ್ನೂ ನೋಯಿಸದ, ನಿರುಪದ್ರವಿ ಎಂಬ ಅರ್ಥವುಳ್ಳ, ಅಹಿಂಸಾ ಎಂಬ ಸಂಸ್ಕೃತ ಪದವನ್ನು ನಾನು ಆರಿಸಿ ಕೊಳ್ಳುತ್ತೇನೆ.’’ ಐನ್ಸ್ಟೈನ್ರನ್ನು ಸಾಮಾನ್ಯವಾಗಿ ಇಪ್ಪತ್ತನೇ ಶತಮಾನದ ಶ್ರೇಷ್ಠ ವಿಜ್ಞಾನಿ ಎಂದು ಗುರುತಿಸಲಾಗುತ್ತದೆ. ಇತರ ಪ್ರಸಿದ್ಧ ವಿಜ್ಞಾನಿ ಗಳಿಗಿಂತ ಭಿನ್ನವಾಗಿ, ತಮ್ಮ ಕೆಲಸ ಮತ್ತು ವೃತ್ತಿಜೀವನದ ಬಗ್ಗೆ ಅವರಿಗೆ ವಿಶಿಷ್ಟವಾದ ಗೀಳು ಇತ್ತು. ಐನ್ಸ್ಟೈನ್ ವಿಜ್ಞಾನದ ಆಚೆಗಿನ ಪ್ರಪಂಚ ದಲ್ಲಿಯೂ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಅವರಿಗೆ ಶಾಸ್ತ್ರೀಯ ಸಂಗೀತವೆಂದರೆ ಬಹಳ ಪ್ರಿಯವಾಗಿತ್ತು. ಅವರು ಸ್ವತಃ ನಿಪುಣ ಪಿಟೀಲು ವಾದಕರಾಗಿದ್ದರು. ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ರಾಜಕೀಯದ ಬಗ್ಗೆಯೂ ಅವರಿಗೆ ತೀವ್ರ ಕುತೂಹಲವಿತ್ತು. ರಾಷ್ಟ್ರಗಳ ನಡುವೆ ಮತ್ತು ಆಂತರಿಕವಾಗಿ ಮಾನವ ಸಂಬಂಧಗಳನ್ನು ಹೇಗೆ ಸಾಧ್ಯವಾಗಿಸಬೇಕು ಎಂಬುದರ ಕುರಿತು ತಮ್ಮದೇ ದೃಷ್ಟಿಕೋನ ಹೊಂದಿದ್ದರು.

ವಿಜ್ಞಾನಿ ಐನ್ಸ್ಟೈನ್ ಬಗ್ಗೆ ಬರೆಯಲು ನಾನು ಸಂಪೂರ್ಣವಾಗಿ ಅಸಮರ್ಥ. ಆದರೆ ಒಬ್ಬ ನೈತಿಕವಾದಿಯಾಗಿದ್ದ ಐನ್ಸ್ಟೈನ್ ಅವರನ್ನು ಈ ಅಂಕಣದಲ್ಲಿ ನೋಡಬಯಸುತ್ತೇನೆ. ಜರ್ಮನ್-ಅಮೆರಿಕನ್ ಇತಿಹಾಸಕಾರ ಫ್ರಿಟ್ಜ್ ಸ್ಟೈನ್ ಅವರ ಪುಸ್ತಕದ ನನ್ನ ಓದು ಇದರ ಹಿನ್ನೆಲೆಯಲ್ಲಿದೆ. Einstein’s Germany ಎಂಬ ಹೆಸರಿನ, ೧೯೯೯ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಈ ಪುಸ್ತಕ, ಜರ್ಮನಿಯ ೨೦ನೇ ಶತಮಾನದ ಮತ್ತು ನಿರ್ದಿಷ್ಟವಾಗಿ, ಈ ಇತಿಹಾಸದಲ್ಲಿ ಯಹೂದಿಗಳ ಸ್ಥಾನದ ವ್ಯಾಪಕ ನೋಟವನ್ನು ಕೊಡುತ್ತದೆ.

ಪುಸ್ತಕದಲ್ಲಿನ ಪ್ರಮುಖ ಪ್ರಬಂಧ ಐನ್ಸ್ಟೈನ್ ಅವರ ಕುರಿತಾಗಿದೆ. ಪುಸ್ತಕದ ಇತರ ಅಧ್ಯಾಯಗಳಲ್ಲಿಯೂ ಐನ್ಸ್ಟೈನ್ ಕುರಿತ ವಿವರಗಳು ಬರುತ್ತವೆ. ಪತ್ರಗಳು ಮತ್ತು ಭಾಷಣಗಳಂಥ ಪ್ರಾಥಮಿಕ ಆಕರಗಳ ಆಧಾರದ ಮೇಲೆ ಫ್ರಿಟ್ಜ್ ಸ್ಟೈನ್ ಅವರ ವಿಶ್ಲೇಷಣೆಯಿದೆ. ಆತನ ಪೋಷಕರಿಗೆ ಐನ್ಸ್ಟೈನ್ ಆಪ್ತ ಸ್ನೇಹಿತರಾಗಿದ್ದರು ಎಂಬ ಅಂಶವೂ ಇಲ್ಲಿನ ವಿವರಗಳಿಂದ ಗೊತ್ತಾಗುತ್ತದೆ.

ಐನ್ಸ್ಟೈನ್ನ ಗಮನಾರ್ಹ ಚಿಂತನೆಗಳಲ್ಲಿ ಕೆಲವನ್ನು ಇಲ್ಲಿ ಇಡುತ್ತಿದ್ದೇನೆ. ಇವು ವಿಜ್ಞಾನದ ಹೊರತಾದ, ನೈತಿಕತೆ ಮತ್ತು ರಾಜಕೀಯ ವಿಚಾರಗಳ ಕುರಿತಾಗಿವೆ. ಮೊದಲ ಉಲ್ಲೇಖವಾಗಿ, ೧೯೦೧ರಲ್ಲಿ ಐನ್ಸ್ಟೈನ್ ತಮ್ಮ ಇಪ್ಪತ್ತರ ಆರಂಭದಲ್ಲಿದ್ದಾಗ ಹೇಳಿದ್ದ ಮಾತು - ‘‘ಅಧಿಕಾರದಲ್ಲಿನ ಕುರುಡು ನಂಬಿಕೆಯು ಸತ್ಯದ ಕೆಟ್ಟ ಶತ್ರು’’. ಇಲ್ಲಿ ಐನ್ಸ್ಟೈನ್ ಮುಖ್ಯವಾಗಿ ವೈಜ್ಞಾನಿಕ ಅಧಿಕಾರವನ್ನು ಮನಸ್ಸಿನಲ್ಲಿಟ್ಟು ಕೊಂಡಿದ್ದರು ಎಂದೊಬ್ಬರು ಊಹಿಸುತ್ತಾರೆ. ಆದರೂ, ಯುವಕರ ದೃಷ್ಟಿಯಿಂದ, ಪೋಷಕರ ನಿಯಂತ್ರಣದಲ್ಲಿ ಕುರುಡು ನಂಬಿಕೆ ಎಂಬುದೂ ತಪ್ಪಾಗಬಹುದು. ಎಲ್ಲಾ ವಯಸ್ಸಿನ ಮತ್ತು ಎಲ್ಲಾ ರಾಷ್ಟ್ರೀಯತೆಗಳ ಪುರುಷರು ಮತ್ತು ಮಹಿಳೆಯರಿಗೆ, ರಾಜಕೀಯ ಅಧಿಕಾರದಲ್ಲಿನ ಕುರುಡು ನಂಬಿಕೆ ಎಂಬುದು ಎಲ್ಲ ಸಮಯದಲ್ಲಿ ಯೂ ಪ್ರಸ್ತುತವಾಗುವುದಿಲ್ಲ.

ಜರ್ಮನ್ ಸಾಮ್ರಾಜ್ಯದಲ್ಲಿ ಜನಿಸಿದ ಐನ್ಸ್ಟೈನ್ ತಮ್ಮ ಹದಿಹರೆ ಯದಲ್ಲಿ ಸ್ವಿಟ್ಸರ್ಲ್ಯಾಂಡ್ಗೆ ತೆರಳಿದರು. ಆರಂಭದಲ್ಲಿ ಅವರು ಕೆಲಸ ಮಾಡಿದ್ದು ಜ್ಯೂರಿಚ್ನಲ್ಲಿ. ೧೯೧೩ರಲ್ಲಿ ಅವರು ತಮ್ಮ ಮೂವತ್ತರ ಹರೆಯದಲ್ಲಿದ್ದಾಗ, ಜರ್ಮನಿಯ ಮತ್ತು ಜರ್ಮನ್ ವಿಜ್ಞಾನದ ರಾಜಧಾನಿಯಾದ ಬರ್ಲಿನ್ಗೆ ಹೋಗಬೇಕಾಯಿತು. ಐನ್ಸ್ಟೈನ್ ತಮ್ಮ ಹೊಸ ವೈಜ್ಞಾನಿಕ ಸಹೋದ್ಯೋಗಿಗಳನ್ನು ಇಷ್ಟಪಟ್ಟರಾದರೂ, ಜರ್ಮನ್ನರ ರೀತಿ ರಿವಾಜು, ಕೈಸರ್ ಮತ್ತು ಫಾದರ್ಲ್ಯಾಂಡ್ ಕುರಿತ ವಿಮರ್ಶಕ ನಿಲುವಿನಿಂದಾಗಿ ದೊಡ್ಡ ಸಮಸ್ಯೆಯನ್ನು ಎದುರಿಸುವಂತಾ ಯಿತು. ಜನವರಿ ೧೯೧೪ರಲ್ಲಿ ಅವರು ‘ಮುಕ್ತ, ನಿರ್ಭೀತ ನೋಟ ಸಾಮಾನ್ಯವಾಗಿ (ವಯಸ್ಕ) ಜರ್ಮನ್ನರಿಗೆ ಹೊಸದಾಗಿದೆ’ ಎಂದು ಬರೆದರು. ಮತ್ತೊಂದೆಡೆ, ಐನ್ಸ್ಟೈನ್ ಜರ್ಮನ್ನರ ‘ಜನ್ಮಜಾತ ದಾಸ್ಯ’ದ ಬಗ್ಗೆ ಮಾತನಾಡಿದರು.(ಈ ಹೇಳಿಕೆಗಳು ಇಂದು ಭಾರತದಲ್ಲಿ ಆಗುತ್ತಿರುವುದನ್ನು ಹೋಲುತ್ತವೆ).

ಅದೇ ವರ್ಷದ ನಂತರ ಮೊದಲ ಮಹಾಯುದ್ಧ ಪ್ರಾರಂಭ ವಾಯಿತು. ಐನ್ಸ್ಟೈನ್ ತಮ್ಮ ಸುತ್ತಲಿನ ಅತಿರೇಕದ ದೇಶಭಕ್ತಿಯಿಂದ ಗಾಬರಿಗೊಂಡಿದ್ದರು. ೧೯೧೫ರಲ್ಲಿ ಅವರು, ಅಧಿಕಾರದ ಹಸಿವು ಮತ್ತು ದುರಾಸೆ, ಹಾಗೆಯೇ ದ್ವೇಷ ಮತ್ತು ಯುದ್ಧವನ್ನು ತಿರಸ್ಕಾರಯೋಗ್ಯ ದುರ್ಗುಣಗಳೆಂದು ಪರಿಗಣಿಸುವುದನ್ನು ಕಲಿಯುವಂತೆ ಯುದ್ಧೋ ನ್ಮಾದಿ ಜರ್ಮನ್ನರನ್ನು ಕೇಳಿಕೊಂಡರು. ಜರ್ಮನ್ನರು ತಮ್ಮನ್ನು ಕ್ರಿಶ್ಚಿಯನ್ನರೆಂದು ಪ್ರತಿಪಾದಿಸಿಕೊಂಡರು ಮತ್ತು ಕ್ರಿಶ್ಚಿಯನ್ ನಂಬಿಕೆಗೆ ತಮ್ಮ ಬದ್ಧತೆಯ ಬಗ್ಗೆ ಅಭಿಮಾನಪಡುವುದಾಗಿಯೂ, ಅದಕ್ಕೆ ಅನುಗುಣವಾಗಿ ನಡೆಯುತ್ತಿರುವುದಾಗಿಯೂ ಹೇಳಿಕೊಂಡರು. ಇದನ್ನು ಬೂಟಾಟಿಕೆ ಎಂದು ಕರೆದ ಐನ್ಸ್ಟೈನ್, ಜರ್ಮನ್ನರಿಗೆ ಹೇಳಿದರು: ‘‘ಕ್ರಿಸ್ತನನ್ನು ನೀವು ಗೌರವಿಸಬೇಕಿರುವುದು ಶಬ್ದಗಳು ಮತ್ತು ಸ್ತೋತ್ರಗಳಿಂದ ಅಲ್ಲ. ಬದಲಾಗಿ, ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಕೆಲಸಗಳ ಮೂಲಕ.’’

ಅದೇ ವರ್ಷ ೧೯೧೫ರಲ್ಲಿ, ಕಲಾವಿದರು ಮತ್ತು ವಿಜ್ಞಾನಿಗಳ ವೇದಿಕೆಯಾದ ಬರ್ಲಿನ್ ಗೊಥೆಬಂಡ್ ಐನ್ಸ್ಟೈನ್ಗೆ ಯುದ್ಧದ ಬಗ್ಗೆ ಅಭಿಪ್ರಾಯಗಳನ್ನು ಹೇಳುವಂತೆ ಕೇಳಿಕೊಂಡಿತು. ಐನ್ಸ್ಟೈನ್ ಉತ್ತರಿಸಿದರು: ‘‘ನನ್ನ ಅಭಿಪ್ರಾಯದಲ್ಲಿ, ಯುದ್ಧದ ಮಾನಸಿಕ ಬೇರುಗಳು ಜೈವಿಕವಾಗಿ ಪುರುಷರ ಆಕ್ರಮಣಕಾರಿ ಗುಣಲಕ್ಷಣಗಳಲ್ಲಿ ಸ್ಥಾಪಿತ ವಾಗಿವೆ.’’ ಖಂಡಿತ. ಹಿಂಸೆಯೆಡೆಗಿನ ಪುರುಷ ಪ್ರವೃತ್ತಿ ಸ್ವತಃ ಪ್ರಕಟವಾಗುವುದು ರಾಷ್ಟ್ರಗಳ ನಡುವಿನ ಯುದ್ಧಗಳಲ್ಲಿ ಮಾತ್ರವಲ್ಲ. ಇಂದು ಭಾರತ ವನ್ನು ಮತ್ತೊಮ್ಮೆ ಗಮನಿಸಿದರೆ, ಯುವಕರು ಧರ್ಮ ಮತ್ತು/ಅಥವಾ ರಾಜಕೀಯದ ಹೆಸರಿನಲ್ಲಿನ ಹಿಂಸಾಚಾರದಲ್ಲಿ ಮುಂದಿದ್ದಾರೆ.

ಆಲ್ಬರ್ಟ್ ಐನ್ಸ್ಟೈನ್ ಪತ್ರವ್ಯವಹಾರವನ್ನಿಟ್ಟುಕೊಂಡಿದ್ದವರಲ್ಲಿ ಸ್ವಿಸ್-ಫ್ರೆಂಚ್ ಕಾದಂಬರಿಕಾರ ರೊಮೈನ್ ರೋಲ್ಯಾಂಡ್ ಒಬ್ಬರು. ಅವರು ಗಾಂಧಿ ಮತ್ತು ಟಾಗೋರ್ ಅವರಿಗೂ ಸ್ನೇಹಿತರಾಗಿದ್ದರು. ೧೯೧೭ರ ಆಗಸ್ಟ್ನಲ್ಲಿ ಐನ್ಸ್ಟೈನ್ ರೋಲ್ಯಾಂಡ್ಗೆ ಬರೆದರು: ‘೧೯ನೇ ಶತಮಾನದ ಉತ್ತರಾರ್ಧದಲ್ಲಿ ಜರ್ಮನಿಯ ಮಿಲಿಟರಿ ವಿಜಯದ ಪರಿಣಾಮವಾಗಿ ದೇಶದ ಅಧಿಕಾರಸ್ಥರಲ್ಲಿ ಧಾರ್ಮಿಕ ನಂಬಿಕೆ ಬೆಳೆಯಿತು. ಇದು (ಅತಿ ರಾಷ್ಟ್ರೀಯವಾದಿ ಮತ್ತು ಯಹೂದಿ ವಿರೋಧಿ ಇತಿಹಾಸಕಾರ ಹೆನ್ರಿಕ್ ವಾನ್) ಟ್ರಿಚ್ಕೆ ಬರವಣಿಗೆಯಲ್ಲಿ ಕಂಡುಬರುತ್ತದೆ. ಈ ಧರ್ಮವು ಬಹುತೇಕ ಎಲ್ಲಾ ಸುಸಂಸ್ಕೃತ ಗಣ್ಯರ ಮನಸ್ಸಿನಲ್ಲಿ ಪ್ರಾಬಲ್ಯ ಹೊಂದಿದೆ; ಇದು ಗೊಥೆ-ಷಿಲ್ಲರ್ ಯುಗದ ಆದರ್ಶಗಳನ್ನು ಸಂಪೂರ್ಣವಾಗಿ ಹೊರಹಾಕಿದೆ.’ ಮತ್ತೊಮ್ಮೆ, ಸಮಕಾಲೀನ ಭಾರತದೊಳಗಿನ ಇಂಥದೇ ನಿಲುವುಗಳು ಖಿನ್ನತೆ ಮೂಡಿಸುವಷ್ಟು ಸ್ಪಷ್ಟವಾಗಿವೆ. ಹಿಂದುತ್ವದ ಅಧಿಕಾರ ವ್ಯಾಮೋಹದ ಧರ್ಮವು ಟಾಗೋರ್-ಗಾಂಧಿ ಯುಗದ ಆದರ್ಶಗಳನ್ನು ಅಳಿಸಿಹಾಕುವಷ್ಟು ಪ್ರಭಾವಶಾಲಿಯಾಗಿದೆ.

‘‘ಐನ್ಸ್ಟೈನ್ ಯಾವುದೇ ರೂಪದ ರಾಷ್ಟ್ರೀಯವಾದಿ ಸಂಕುಚಿತ ತೆಯ ಬಗ್ಗೆ ತಿರಸ್ಕಾರವನ್ನು ಹೊಂದಿದ್ದರು’’ ಎನ್ನುತ್ತಾರೆ ಫ್ರಿಟ್ಜ್ ಸ್ಟೈನ್. ಅದೇ ಸಮಯದಲ್ಲಿ, ಯುರೋಪಿನಲ್ಲಿ ಯಹೂದಿಗಳ ನಿರಂತರ ಉಪದ್ರವ ತಾಯ್ನಾಡಿಗಾಗಿ ತಮ್ಮದೇ ಆದ ಹುಡುಕಾಟದ ಸಮರ್ಥನೆ ಯಾಗಿದೆ ಎಂದು ಐನ್ಸ್ಟೈನ್ ನಂಬಿದ್ದರು. ಯಹೂದಿಗಳು ಫೆಲೆಸ್ತೀನ್ಗೆ ವಲಸೆ ಹೋಗುವುದನ್ನು ಅವರು ಬೆಂಬಲಿಸಿದರು. ‘‘ಈ ಭೂಮಿಯ ಮೇಲೆ ನಮ್ಮ ಸಮುದಾಯದ ಸದಸ್ಯರು ಅನ್ಯರೆಂಬಂತೆ ಆಗಿರಬಾರದು ಎಂಬ ಒಂದು ಸಣ್ಣ ಗುರುತು ಇರಬೇಕು’’ ಎಂಬ ನಂಬಿಕೆ ಮತ್ತು ಭರವಸೆ ಆ ನಿಲುವಿನ ಹಿಂದೆ ಇತ್ತು. ಈ ಅರ್ಥದಲ್ಲಿ ಅವರು ಯಹೂದಿ ರಾಷ್ಟ್ರವಾದಿಯಾಗಿದ್ದರು. ಅವರು ಮಧ್ಯಪ್ರಾಚ್ಯದಲ್ಲಿ ಯಹೂದಿ ರಾಜ್ಯ ನಿರ್ಮಾಣವನ್ನು ಅನುಮೋದಿಸಿದರು. ಅದೇನೇ ಇದ್ದರೂ, ಈ ರಾಜ್ಯದ ನಿವಾಸಿಗಳು ಜರ್ಮನ್ನರಂತೆ ಸ್ವಾರ್ಥಿ ಮತ್ತು ಸಂಕುಚಿತ ಮನೋಭಾವದ ವರಾಗುವುದನ್ನು ಅವರು ಬಯಸಲಿಲ್ಲ. ಆದ್ದರಿಂದ, ಅಕ್ಟೋಬರ್ ೧೯೧೯ರಲ್ಲಿ ಐನ್ಸ್ಟೈನ್ ಬರೆದಂತೆ, ಒಬ್ಬನು ತನ್ನ ಸಮುದಾಯದ ಹಿತಾಸಕ್ತಿಗಳನ್ನು ಮರೆಯದೆ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಯೋಚಿಸಬಹುದು. (ಈ ಸೂತ್ರೀಕರಣ, ಅಂತರ್ಗತ ಮತ್ತು ಅತಿರೇಕದ್ದಲ್ಲದ ರಾಷ್ಟ್ರೀಯತೆಯನ್ನು ಜಗತ್ತಿಗೆ ಮುಕ್ತತೆಯೊಂದಿಗೆ ಬೆರೆಸಲು ಪ್ರಯತ್ನಿಸಿದ ಟಾಗೋರ್ಗಿಂತ ಭಿನ್ನವಾಗಿಲ್ಲ ಎಂಬುದನ್ನು ನಾವು ಗಮನಿಸಬಹುದು.)

ಐನ್ಸ್ಟೈನ್ ಜರ್ಮನ್ನರ ಜನಾಂಗೀಯ ರಾಷ್ಟ್ರೀಯತೆಯನ್ನು ವಿರೋಧಿಸಿದರು ಮತ್ತು ಯಹೂದಿಗಳು ತಾವು ನಿರ್ಮಿಸಲು ಬಯಸಿದ ಹೊಸ ತಾಯ್ನಾಡಿನಲ್ಲಿ ಈ ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಅವರಿಗೆ ಮೀಸಲಾದದ್ದು ಎಂದು ಭಾವಿಸಿದ್ದರು. ೧೯೨೯ರಲ್ಲಿ, ಫೆಲೆಸ್ತೀನ್ನಲ್ಲಿ ಅರಬ್ಬರು ಮತ್ತು ಯಹೂದಿ ವಸಾಹತುಗಾರರ ನಡುವೆ ಹಿಂಸಾತ್ಮಕ ಘರ್ಷಣೆಗಳು ಉಂಟಾದ ನಂತರ, ಐನ್ಸ್ಟೈನ್ ಪ್ರಮುಖ ಯಹೂದಿ ರಾಷ್ಟ್ರವಾದಿ ಚೈಮ್ ವೈಜ್ಮನ್ಗೆ (ನಂತರ ಇಸ್ರೇಲ್ನ ಮೊದಲ ಅಧ್ಯಕ್ಷರಾದರು) ‘‘ನಾವು ಅರಬ್ಬರೊಂದಿಗೆ ಪ್ರಾಮಾಣಿಕ ಸಹಕಾರ ಮತ್ತು ಪ್ರಾಮಾಣಿಕ ಮಾತುಕತೆಗೆ ಮಾರ್ಗವನ್ನು ಕಂಡುಕೊಳ್ಳದಿದ್ದರೆ, ನಾವು ನಮ್ಮ ೨,೦೦೦ ವರ್ಷಗಳ ದುಃಖದಿಂದ ಏನನ್ನೂ ಕಲಿತಿಲ್ಲ ಎಂದಾಗುತ್ತದೆ ಮತ್ತು ನಂತರ ನಮಗೆ ಒದಗುವ ಸ್ಥಿತಿಗೆ ನಾವೇ ಹೊಣೆಯಾಗುತ್ತೇವೆ’’ ಎಂದು ಬರೆದರು. ಇಂದು ಇಸ್ರೇಲ್ನಲ್ಲಿ ಏನಾಗುತ್ತಿದೆ ಎಂಬುದು ಐನ್ಸ್ಟೈನ್ನ ಹೇಳಿಕೆಗಳಲ್ಲಿದ್ದ ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ. ಮತಾಂಧ ಬಲಪಂಥೀಯ ಸರಕಾರ ಅಧಿಕಾರದಲ್ಲಿದ್ದು, ಉದಾರವಾದಿ ಯಹೂದಿಗಳಿಗೆ ಹಿನ್ನಡೆಯಾಗಿರುವ ಸನ್ನಿವೇಶದಲ್ಲಿ, ಅರಬ್ಬರೊಂದಿಗೆ ಪ್ರಾಮಾಣಿಕ ಸಹಕಾರದ ಕಡೆಗೆ ಅಗತ್ಯ ಮಾರ್ಗ ಕಂಡುಕೊಳ್ಳುವುದರಲ್ಲಿ ಇಸ್ರೇಲ್ ಹಿಂದೆಂದಿಗಿಂತಲೂ ಮುಂದಿದೆ.

ತನ್ನ ಜೀವನದುದ್ದಕ್ಕೂ ಐನ್ಸ್ಟೈನ್, ಒಬ್ಬ ವ್ಯಕ್ತಿ ಜಗತ್ತಿಗೆ ಹೇಗೆ ಸಂಬಂಧಿಸಿರಬೇಕೆಂಬುದನ್ನು ಆಳವಾಗಿ ಧ್ಯಾನಿಸಿದರು. ನಿಕಟ ಸ್ನೇಹಿತರೂ ಆಗಿದ್ದ ಅನೇಕ ಇತರ ಶ್ರೇಷ್ಠ ವಿಜ್ಞಾನಿಗಳಿಗಿಂತ ಭಿನ್ನವಾಗಿ, ತಮ್ಮ ಕೆಲಸ ಮತ್ತು ವೃತ್ತಿಜೀವನವನ್ನು ಮಾತ್ರ ಕೇಂದ್ರೀಕರಿಸದೆ, ಅವರು ಮಾನವ ಸಂಬಂಧಗಳನ್ನು ಆಳವಾಗಿ ಪಾಲಿಸಿದರು. ವೈಯಕ್ತಿಕ ಜೀವನವು ಇತರರ ಬದುಕಿನೊಂದಿಗೆ ನಿರ್ಮಿಸಿದ ಸಂಪರ್ಕಗಳ ಜಾಲದಲ್ಲಿ ಅರ್ಥವನ್ನು ಕಂಡುಕೊಳ್ಳುತ್ತದೆ ಎಂದು ಅವರು ತಿಳಿದಿದ್ದರು.

ಅವರ ಕಾಲದ ಪಾಶ್ಚಿಮಾತ್ಯ ಬಂಡವಾಳಶಾಹಿ ಸಮಾಜ, ಐನ್ ರಾಂಡ್ ಕರೆದಂತೆ ಖ್ಯಾತವಾಗಿದ್ದ (ಅಥವಾ ಕುಖ್ಯಾತವಾಗಿದ್ದ) ‘ಸ್ವಾರ್ಥದ ಸದ್ಗುಣ’ವನ್ನು ಆಚರಿಸುತ್ತಿದ್ದರೆ, ಮತ್ತೊಂದೆಡೆ ಐನ್ಸ್ಟೈನ್ - ಯಾವಾಗಲೂ ಯಶಸ್ಸು ಸಿಗದಿದ್ದರೂ - ನಾವು ನಿಸ್ವಾರ್ಥತೆಯ ಸದ್ಗುಣ ಎಂದು ಕರೆಯಬಹುದಾದ ರೀತಿಯಲ್ಲಿ ಬದುಕಲು ಪ್ರಯತ್ನಿಸಿದರು.

೧೯೫೪ರಲ್ಲಿ ಪ್ರಿನ್ಸ್ಟನ್ನಲ್ಲಿ, ಸಹ ಭೌತವಿಜ್ಞಾನಿ ರುಡಾಲ್ಫ್ ಲಾಡೆನ್ಬರ್ಗ್ ಅಂತ್ಯಕ್ರಿಯೆ ಸಂದರ್ಭದ ಭಾಷಣದಲ್ಲಿ ಐನ್ಸ್ಟೈನ್ರ ಪುರುಷಾಹಂಕಾರ ವಿರೋಧಿ ಮತ್ತು ಆತ್ಮರತಿ ವಿರೋಧಿ ಫಿಲಾಸಫಿ ಸುಂದರವಾಗಿ ವ್ಯಕ್ತಗೊಂಡಿದೆ. ಅದನ್ನಿಲ್ಲಿ ಉಲ್ಲೇಖಿಸುತ್ತೇನೆ:

‘‘ಸಂಕ್ಷಿಪ್ತ ಸಮಯದ ನಮ್ಮ ಈ ಇರುವಿಕೆ ನಮ್ಮದಲ್ಲದ ಮನೆಗೆ ಕ್ಷಣಿಕ ಭೇಟಿಯಂತೆ. ನಡೆಯಬೇಕಾದ ದಾರಿ ಮಿನುಗುವ ಪ್ರಜ್ಞೆಯಿಂದ ಮಂದವಾಗಿ ಕಾಣಿಸುತ್ತದೆ. ಅವೆರಡರ ನಡುವೆ ಮಿತಗೊಳಿಸುವ ಮತ್ತು ಪ್ರತ್ಯೇಕಿಸುವ ನಾನು ಎಂಬುದಿದೆ.

ನಮ್ಮ ಬೆತ್ತಲೆ ಅಸ್ತಿತ್ವ ಮತ್ತು ಬದುಕಿನ ಬಗೆಗಿನ ತೀವ್ರ ಭಾವನೆ ಎರಡನ್ನೂ ಪರಿಗಣಿಸಿ ನಮ್ಮ ಸ್ವಭಾವವನ್ನು ಒಪ್ಪಲು ಈ ನಾನು ಅಡ್ಡಿಯಾಗುತ್ತದೆ. ನಾವೇನು ಎಂಬುದು ಮನವರಿಕೆಯಾದ ಹಂತದಲ್ಲಿ ನಾನು ಎಂಬುದು ಇಲ್ಲವಾಗಿ ನಾವು ಎಂಬುದು ಸಾಧ್ಯವಾಗುತ್ತದೆ ಮತ್ತು ಹೀಗೆ ನಾನು ಎಂಬುದರಿಂದ ಇತರರೆಡೆಗೆ ಸಾಗುವ ಸೇತುವೆ ಜೀವನ ಸಾಹಸದಷ್ಟೇ ಸೂಕ್ಷ್ಮ ಮತ್ತು ಅನಿಶ್ಚಿತವಾಗಿದೆ.

ವ್ಯಕ್ತಿಗಳ ಒಂದು ಗುಂಪು ‘ನಾವು’ ಎಂದಾದಾಗ, ಸಾಮರಸ್ಯ ಅಖಂಡವಾದಾಗ, ಜೀವಿಗಳಾಗಿ ತಲುಪಬಹುದಾದ ಅತ್ಯುನ್ನತ ಮಟ್ಟವನ್ನು ತಲುಪಲು ಮನುಷ್ಯರಿಗೆ ಸಾಧ್ಯವಾಗುತ್ತದೆ.’’ ನಾನು ಈ ಅಂಕಣವನ್ನು ಆಲ್ಬರ್ಟ್ ಐನ್ಸ್ಟೈನ್ರ ಮಾತುಗಳಿಗಿಂತ, Einstein’s Germany ಕೃತಿಯ ಲೇಖಕನ ಮಾತು ಗಳೊಂದಿಗೆ ಕೊನೆಗೊಳಿಸುತ್ತೇನೆ. ಸ್ವತಃ ಹಿಟ್ಲರ್ ಮತ್ತು ನಾಝಿಗಳಿಂದ ದೇಶಭ್ರಷ್ಟನಾಗಿದ್ದ, ಅವನ ಕಾಲದ ನೋವಿನ, ಹಿಂಸೆ, ದ್ವೇಷ ಮತ್ತು ಹಿಂಸಾಚಾರ ತುಂಬಿದ ಇತಿಹಾಸವನ್ನು ದಾಖಲಿಸುವಾಗ ಫ್ರಿಟ್ಜ್ ಸ್ಟೈನ್ ಹೇಳಿದ್ದು ಹೀಗೆ: ‘ಸಭ್ಯ ನಾಗರಿಕರ ನಿಷ್ಕ್ರಿಯತೆಯು ತರಬಹು ದಾದ ದುಷ್ಪರಿಣಾಮಗಳಿಂದ ಯಾವುದೇ ದೇಶ ಅಥವಾ ಯಾವುದೇ ಸಮಾಜವೂ ರಕ್ಷಿಸಲ್ಪಟ್ಟಿಲ್ಲ. ಅದು ನಮ್ಮೆಲ್ಲರಿಗೂ ಇಪ್ಪತ್ತನೇ ಶತಮಾನದ ಜರ್ಮನ್ ಪಾಠ.’

ramachandraguha@yahoo.in

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ರಾಮಚಂದ್ರ ಗುಹಾ

contributor

Similar News

ಸಂವಿಧಾನ -75