ನಾಟಕ ಕಟ್ಟುವ ಬಗೆ ಹೇಗೆ?
ನಗರದಲ್ಲಿರುವ ರಂಗತಂಡಗಳಿಗೆ ಬರುವವರಿಗೆ ನಟ/ನಟಿಯರಾಗಬೇಕೆಂಬ ಕನಸಿನೊಂದಿಗೆ ಇತರ ವಿಭಾಗಗಳನ್ನು ಪರಿಚಯಿಸುವುದು ಅತಿ ಮುಖ್ಯ. ಇದು ಜರೂರಾಗಬೇಕು...
- ಗಣೇಶ ಅಮೀನಗಡ
ರಂಗಭೂಮಿಗೆ ಹೊಸದಾಗಿ ಬರುವವರ ಕನಸುಗಳೇನು? ಸಮಸ್ಯೆಗಳೇನು? ಸವಾಲುಗಳೇನು? ಅವರ ಕಷ್ಟಗಳೇನು? - ಹೀಗೆ ರಂಗಭೂಮಿಗೆ ಬರುವವರ ಕುರಿತು ಮಾತನಾಡುತ್ತಾರೆ ಜಗದೀಶ್ ಆರ್.ಜಾಣಿ. ಅವರು ಚಿಕ್ಕಮಗಳೂರಿನವರು. ನೀನಾಸಂ ತಿರುಗಾಟದಲ್ಲಿ ಸಂಗೀತ ನಿರ್ವಹಿಸುತ್ತಿದ್ದ ಅವರು ನಂತರ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ)ಯಲ್ಲಿ ಕಲಿತ ನಂತರ ಸಾಣೇಹಳ್ಳಿಯ ರಂಗ ಪ್ರಯೋಗಶಾಲೆಯಲ್ಲಿ ಆರು ವರ್ಷಗಳವರೆಗೆ ಪ್ರಾಂಶುಪಾಲರು/ನಿರ್ದೇಶಕರಾಗಿದ್ದರು. ಅಲ್ಲಿಂದ ಹೊರ ಬಂದ ಮೇಲೆ ರಂಗ ಸಂಗೀತ ಶಿಬಿರಗಳನ್ನು ನಡೆಸುತ್ತ, ರಂಗ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತ, ನಾಟಕಗಳಿಗೆ ಸಂಗೀತ ನೀಡುತ್ತ, ನಾಟಕಗಳನ್ನು ನಿರ್ದೇಶಿಸುತ್ತ ಸಂಚರಿಸುತ್ತಿದ್ದಾರೆ. ಅವರು ರಂಗಭೂಮಿಗೆ ಹೊಸದಾಗಿ ಬರುವ ಹುಡುಗರೊಂದಿಗೆ ಒಡನಾಟ ಇಟ್ಟುಕೊಂಡಿರುವುದರಿಂದ ಅವರ ತವಕ, ತಲ್ಲಣಗಳ ಜೊತೆಗೆ ತಾಕಲಾಟಗಳ ಬಗ್ಗೆ ಅರಿತಿದ್ದಾರೆ. ಅವರೊಂದಿಗೆ ಮೈಸೂರಲ್ಲಿ ಎಂಟತ್ತು ದಿನಗಳಿಂದ ಒಡನಾಡಿದ ಪರಿಣಾಮ, ಅವರ ಮಾತುಗಳು ಪ್ರಸಕ್ತ ರಂಗಭೂಮಿ ಕುರಿತು ಮಾತನಾಡಿದ್ದು ಇಲ್ಲಿದೆ.
ರಂಗಪಠ್ಯವನ್ನು ಆಧರಿಸಿ ಭಾಷೆ ಮುಖ್ಯವಾಗುತ್ತದೆ. ನಟರ ಭಾಷೆ, ಉಚ್ಚಾರಣೆ ತಿದ್ದಬೇಕು. ಮೊದಲು ವಾಚಿಕರೂಪದಲ್ಲಿ ಮಾರ್ಗದರ್ಶನ ನೀಡಬೇಕು; ಪ್ರಾಯೋಗಿಕವಾಗಿ. ಉದಾಹರಣೆಗೆ ಇಂತಹ ಕ್ರಮಗಳಿಂದ ‘ಹ’ ಹಾಗೂ ‘ಅ’ ಕಾರಗಳ ವ್ಯತ್ಯಾಸ, ಜೊತೆಗೆ ‘ಸ’, ‘ಶ’ ಕಾರಗಳ ವ್ಯತ್ಯಾಸ ಗಮನಿಸದೆ ಮಾತನಾಡುವ ಕ್ರಮವನ್ನು ಸುಧಾರಿಸಬಹುದು. ರಂಗಪಠ್ಯದಲ್ಲಿರುವ ಭಾಷೆಯನ್ನು ಉಳಿಸುವ ಕ್ರಮ ಹೇಗೆ?
ನಾಟ್ಯಧರ್ಮಿ ಭಾಷೆ ಎಂದರೆ ಗ್ರಾಂಥಿಕ. ದೇವಾನುದೇವತೆಗಳು, ರಾಜಮಹಾರಾಜರು ಬಳಸುವ ಭಾಷೆ. ಲೋಕಧರ್ಮಿ ಭಾಷೆ ಎಂದರೆ ಶ್ರಮಿಕರು ಆಡುವ ಮಾತು. ಈ ಎರಡೂ ಭಾಷೆ ಬಳಸುವ ಹೊಸ ಪೀಳಿಗೆಯವರಿದ್ದಾರೆ. ಶ್ರೀಮಂತರಿಂದ ಹಿಡಿದು ಬಡತನದಲ್ಲಿರುವವರು ರಂಗಭೂಮಿಗೆ ಬರುತ್ತಿರುವುದರಿಂದ ಎಲ್ಲ ರೀತಿಯ ಭಾಷೆ ಮಿಶ್ರಣವಾಗುತ್ತಿದೆ. ಅವರ ಭಾಷೆಯನ್ನು ಹಾಗೆಯೇ ಬಳಸದೆ ರಂಗಪಠ್ಯದ ಮೂಲಕ ಅಂದರೆ ವಾಚಿಕದ ಮೂಲಕ ಸಂಪೂರ್ಣ ತಾಲೀಮು ಕೊಡಬೇಕು. ಮುಖ್ಯವಾಗಿ ಧ್ವನಿ, ಕಾಗುಣಿತ, ಭಾಷೆ, ಶಬ್ದಾರ್ಥಗಳ ವಿವರ, ವಾಕ್ಯರಚನೆ ಇವುಗಳ ನಂತರ ವಾಕ್ಯವೊಂದರಲ್ಲಿ ಯಾವ ಶಬ್ದಕ್ಕೆ ಒತ್ತು ಕೊಡಬೇಕು ಎಂಬುದನ್ನು ಕಲಿಸಬೇಕು. ಹಾಗೆ ಹೇಳಿಕೊಟ್ಟಾಗ ಕೇಳಲು ಸ್ಪಷ್ಟವಾಗಿರಬೇಕು ಮತ್ತು ಹಿತವಾಗಿರಬೇಕು. ಮುಖ್ಯವಾಗಿ ಕೇಳುವ ಪ್ರೇಕ್ಷಕರಿಗೆ ಅರ್ಥವಾಗಬೇಕು. ಇದನ್ನೆಲ್ಲ ಪಾತ್ರಧಾರಿಗಳಿಗೆ ಅರಿವು ಮೂಡಿಸಬೇಕು. ಪಠ್ಯದ ನಂತರ ಆಂಗಿಕ ಅಭಿನಯದಲ್ಲಿ ಪಳಗಿಸಬೇಕು. ಏಕೆಂದರೆ ಹೊಸಬರಿಗೆ ಭಯ ಕಾಡುವುದರಿಂದ. ಸರಿಯಾಗಿ ನಿಂತಿದ್ದೇನೋ ಇಲ್ಲವೋ? ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆಂಬ ಆತಂಕದಲ್ಲಿ ರಂಗದ ಮೇಲೆ ಜೀವಿಸುತ್ತಾರೆ. ಇದಕ್ಕಾಗಿ ರಂಗ ವ್ಯಾಯಾಮ ಹೇಳಿಕೊಡಬೇಕು. ಇನ್ನು ಅಭಿನಯ ಎನ್ನುವುದು ಚಿತ್ರವ್ಯಾಪಾರ. ಮಾತು ಮತ್ತು ಆಂಗಿಕ ಅಭಿನಯಕ್ಕೆ ಸಾಮ್ಯತೆ ಇರಬೇಕು. ಈ ಸಾಮ್ಯತೆ ಸಾಧಿಸಿದಾಗ ಸಾತ್ವಿಕತೆಯೆಡೆಗೆ ಸಾಗಲು ಸಾಧ್ಯವಾಗುವುದು. ಇದಕ್ಕೆ ಪರಿಪೂರ್ಣವಾಗಿ ಸಾಥ್ ನೀಡುವುದು ರಂಗ ಪರಿಕರ, ರಂಗ ವಿನ್ಯಾಸ, ವೇಷಭೂಷಣ. ಪಾತ್ರದಲ್ಲಿ ಲೀನವಾಗಲು ಇವೆಲ್ಲ ಪೂರಕವಾಗುತ್ತವೆ. ಮುಖ್ಯವಾಗಿ ಪಾತ್ರವನ್ನು ಕಟ್ಟಿಕೊಳ್ಳಲು. ಸಿದ್ಧತೆಯ ಕೊರತೆ:
ಈಚೆಗೆ ಬರುವ ಹೊಸ ಹುಡುಗರಿಗೆ ಪಾತ್ರ ಕೊಟ್ಟರೆ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಪಾತ್ರದ ಹೆಸರು, ವಯಸ್ಸು, ದೈನಂದಿನ ಚಟುವಟಿಕೆಗಳು, ಊಟ, ಉಪಾಹಾರ ಮುಖ್ಯವಾಗಿ ಪಾತ್ರದ ನಡವಳಿಕೆ ಅಥವಾ ದೈಹಿಕ ಊನತೆಗಳನ್ನು ಗಮನಿಸುವುದಿಲ್ಲ. ಇವೆಲ್ಲ ತಾಲೀಮಿನ ವೇಳೆಯಲ್ಲಿ ಆಗಬೇಕಾದವುಗಳು ಜೊತೆಗೆ ಸಂಗೀತ ಜ್ಞಾನ ಹಾಗೂ ಬೆಳಕಿನ ವಿನ್ಯಾಸವನ್ನು ನಟರು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ತಿಳಿಸಿಕೊಡಬೇಕು. ಇವುಗಳೊಂದಿಗೆ ರಂಗ ಪರಿಕರ, ವೇಷಭೂಷಣ ಬಳಸುವ ಬಗೆ, ರಂಗದ ಮೇಲೆ ಆಗುವ ಆಕಸ್ಮಿಕ ಘಟನೆಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವುದು ಗೊತ್ತಿರಬೇಕು. ಇವನ್ನೆಲ್ಲ ಕಲಿಸಬೇಕಾದುದು ನಾಟಕದ ನಿರ್ದೇಶಕನ ಕರ್ತವ್ಯ. ಏಕೆಂದರೆ ಈಚಿನ ಹಲವು ನಿರ್ದೇಶಕರು ಮತ್ತು ತರಬೇತುದಾರರು ನಟರಿಗೆ ಹೆಚ್ಚು ತರಬೇತಿ ನೀಡುವುದಿಲ್ಲ ಜೊತೆಗೆ ತಾವೇ ತಾಲೀಮು ಮಾಡುವುದಿಲ್ಲ. ಮುಖ್ಯವಾಗಿ ಅಪ್ಡೇಟ್ ಆಗುವುದಿಲ್ಲ. ಯಾವುದೇ ನಾಟಕ ತೆಗೆದುಕೊಂಡರೂ ಅದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಬೇಕು. ಹಾಗೆಯೇ ನಾಟಕ ಕುರಿತು ಚರ್ಚೆ, ವಿಮರ್ಶೆಗಳನ್ನು ಗಮನಿಸಬೇಕು. ಹೀಗೆ ನಾಟಕ ಗಟ್ಟಿಯಾಗುವ ಬಗೆಯನ್ನು ಅರಿಯಬೇಕು. ಇವುಗಳೊಂದಿಗೆ ಹೊಸ ತಲೆಮಾರಿನ ಹವ್ಯಾಸಿ ಕಲಾವಿದರಿಗೆ ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ತಾಲೀಮು ನಡೆಯುವಾಗಲೇ ಮೊಬೈಲ್ ನೋಡುವುದು, ಮಾತನಾಡುವುದನ್ನು ನಿಲ್ಲಿಸಬೇಕು. ಪ್ರಸಿದ್ಧ ನಟರಾಗಬೇಕೆಂಬ ಕನಸು ಹೊತ್ತು ಬರುವವರಿಗೆ ಶ್ರಮ, ಶ್ರದ್ಧೆ ಕಡಿಮೆ. ಇದರೊಂದಿಗೆ ನಿರ್ದೇಶಕರು ಹೇಳಿಕೊಟ್ಟಿದ್ದನ್ನು ಕನಿಷ್ಠ ಹತ್ತು ಬಾರಿಯಾದರೂ ತಾಲೀಮು ಮಾಡಬೇಕು. ಇದಕ್ಕಾಗಿ ಟಿಪ್ಪಣಿ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ರಂಗದ ಮೇಲೆ ಆರಾಮವಾಗಿ ಅಭಿನಯಿಸಬಹುದು. ಈಮೂಲಕ ಪಾತ್ರವನ್ನು ಅರ್ಥಪೂರ್ಣ ಹಾಗೂ ಪರಿಪೂರ್ಣವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಆದರೆ ರಂಗಭೂಮಿಗೆ ಬರುವ ಹೊಸಬರಿಗೆ ನಿರ್ದೇಶಕರು ಬೈದರೆಂದರೆ ಮರುದಿನದಿಂದ ತಾಲೀಮಿಗೆ ಬರದಿರುವುದು, ಕುಗ್ಗಿ ಹೋಗುವುದು ಹೆಚ್ಚುತ್ತಿದೆ. ಇದಕ್ಕಾಗಿ ಬಯ್ಯದೆ, ತಿಳಿವಳಿಕೆಯ ಮೂಲಕ ಅರ್ಥೈಸಿ ಮಾನಸಿಕ ವಿಕಸನಕ್ಕೆ ನೆರವಾಗಬೇಕು. ಅಂದರೆ ರಂಗಭೂಮಿಯು ಬದುಕುವ ಹುಮ್ಮಸ್ಸನ್ನು ಕಲಿಸುತ್ತದೆ ಎಂಬುದನ್ನು ಮನಗಾಣಿಸಬೇಕು. ಇದರೊಂದಿಗೆ ಯುವಕರಲ್ಲಿ ಚಟಗಳನ್ನು ಬಿಡಿಸಬೇಕು. ಮುಖ್ಯವಾಗಿ ಒಂದೆರಡು ನಾಟಕಗಳಲ್ಲಿ ಅಭಿನಯಿಸಿದ ಕೂಡಲೇ ಸಿದ್ಧಿ, ಪ್ರಸಿದ್ಧಿ ಸಿಗುತ್ತದೆ. ಟಿವಿ ಧಾರಾವಾಹಿಗಳಲ್ಲಿ ಇಲ್ಲವೇ ಸಿನೆಮಾಗಳಲ್ಲಿ ಛಾನ್ಸ್ ಸಿಕ್ಕಿಯೇ ಬಿಡುತ್ತದೆ ಎಂಬ ಭರವಸೆ ನೀಡದೆ ಬದುಕುವ ಭರವಸೆಯನ್ನು ತುಂಬಬೇಕು. ಹಾಗೆಯೇ ಪಾತ್ರಗಳಲ್ಲಿ ತಲ್ಲೀನವಾಗುವ ಕ್ರಮವನ್ನು, ಪಾತ್ರದ ಔಚಿತ್ಯವನ್ನು ಅರಿತು ಅಭಿನಯಿಸುವುದನ್ನು ಹೇಳಿಕೊಡಬೇಕು. ಎಲ್ಲಕ್ಕಿಂತ ಮೊದಲು ಜೀವಂತವಾದ ರಂಗಭೂಮಿಯ ಮೇಲೆ ಮಿಂಚುವುದನ್ನು ಕಲಿಯಿರಿ. ಈ ಮೂಲಕ ಯೋಗ್ಯತೆಯನ್ನು ಗಳಿಸಿ ಆಮೇಲೆ ಯೋಗವಿದ್ದರೆ ಇತರ ಮಾಧ್ಯಮಗಳಲ್ಲಿ ಅವಕಾಶ ಸಿಕ್ಕಿ ಮಿಂಚುತ್ತೀರಿ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.
ರಂಗಭೂಮಿಗೆ ಹೊಸದಾಗಿ ಬರುವವರಿಗೆಲ್ಲ ಪಾತ್ರಗಳನ್ನು ಹಂಚಿದ ಕೂಡಲೇ ಪಾತ್ರ ಸಣ್ಣದಾದರೂ ಮಿಂಚುವ ಸಾಧ್ಯತೆಗಳಿವೆ ಎಂಬುದನ್ನು ಮನಗಾಣಿಸಬೇಕು. ಪಾತ್ರ ಯಾವುದಾದರೇನು ಪರಕಾಯ ಪ್ರವೇಶ ಮಾಡಿ ಅಭಿನಯಿಸಬೇಕು ಎನ್ನುವುದನ್ನು ತಪ್ಪದೇ ತಿಳಿಸಬೇಕು. ಜೊತೆಗೆ ಪಾತ್ರಗಳೊಂದಿಗೆ ನೇಪಥ್ಯದ ಕೆಲಸವನ್ನೂ ನಿರ್ವಹಿಸಲು ಅವಕಾಶ ಕೊಡಬೇಕು. ಇಲ್ಲದಿದ್ದರೆ ಕೇವಲ ಅಭಿನಯಿಸುವುದಷ್ಟೇ ಮುಖ್ಯ ಎಂದು ಬರುವ ಹೊಸಬರಿಗೆ ನೇಪಥ್ಯದ ಕೆಲಸ ಅಪಥ್ಯ ಎಂದು ಬಗೆಯುತ್ತಾರೆ. ಇದನ್ನು ರಂಗಶಾಲೆಗಳಲ್ಲಿ ಅಲ್ಲಗಳೆಯುತ್ತಾರೆ. ಅಲ್ಲಿ ಅಭಿನಯದೊಂದಿಗೆ ಮೇಕಪ್, ಬೆಳಕು ಮೊದಲಾದ ನೇಪಥ್ಯದ ಕೆಲಸಗಳನ್ನು ಕಲಿಸುತ್ತಾರೆ. ಆದರೆ ನಗರದಲ್ಲಿರುವ ರಂಗತಂಡಗಳಿಗೆ ಬರುವವರಿಗೆ ನಟ/ನಟಿಯರಾಗಬೇಕೆಂಬ ಕನಸಿನೊಂದಿಗೆ ಇತರ ವಿಭಾಗಗಳನ್ನು ಪರಿಚಯಿಸುವುದು ಅತಿ ಮುಖ್ಯ. ಇದು ಜರೂರಾಗಬೇಕು...