ವಾರದ ಬಡ್ಡಿ ಸಂಘಗಳೆಂಬ ಆಧುನಿಕ ಜೀತ

Update: 2024-11-18 06:05 GMT

ಸಾಮಾನ್ಯ ಬಡಜನರ ಸಹಾಯದ ನೆಪವಾಗಿ ಬಂದ ಸಾಲ ಕೊಡುವ ಸಂಘಗಳು ಇಂದು ಅಕ್ಷರಶಃ ಆರ್ಥಿಕವಾಗಿ ಹಿಂದುಳಿದ, ದುರ್ಬಲರ ಪಾಲಿಗೆ ಸಿಹಿಲೇಪಿತ ವಿಷದುಂಡೆಗಳಾಗಿ ಪರಿಣಮಿಸಿವೆ. ವೈಯಕ್ತಿಕ ಸಾಲಗಳ ಮೇಲೆ ನಮ್ಮ ಬ್ಯಾಂಕ್‌ಗಳು ಶೇ. 10ರಿಂದ 16ರವರೆಗೆ ಬಡ್ಡಿದರದಲ್ಲಿ ಸಾಲ ನೀಡಿದರೆ, ಮೈಕ್ರೋ ಫೈನಾನ್ಸ್ (ಜನಭಾಷೆಯಲ್ಲಿ ಸಂಘ) ಶೇ. 24ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಸಾಮಾನ್ಯ ಜನರು ಸಿಬಿಲ್ ಸ್ಕೋರ್‌ನ ತಲೆನೋವು, ಅಡಮಾನಗಳ ಅವಶ್ಯಕತೆ ಇಲ್ಲದೆ, ಕೇವಲ ಆಧಾರ್ ಕಾರ್ಡ್ ದಾಖಲೆಯ ಮೇಲೆ ಸಾಲ ಪಡೆಯುವುದರಿಂದ ಈ ಶೇ. 24 ಬಡ್ಡಿಯ ಪ್ರಮಾಣದ ಕುರಿತು ಅವರು ಗಮನ ಹರಿಸುವುದಕ್ಕೆ ಹೋಗುವುದಿಲ್ಲ.

ಭಾರತದಲ್ಲಿ ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದಲ್ಲಿ ಸಹಕಾರಿ ಸಂಘಗಳಿಗೆ ಒಂದು ವಿಶೇಷ ಇತಿಹಾಸವಿದೆ. ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ ಎಂಬ ಕೂಡುವಿಕೆ ಇದೆ, ಬದುಕಿದೆ, ಪರಸ್ಪರ ಸಾಮರಸ್ಯವಿದೆ. ಇದು 1905ರಲ್ಲಿ ಹುಟ್ಟಿಕೊಂಡ ಸಹಕಾರಿ ಸಂಘಗಳಾದಿಯಾಗಿ ಇತ್ತೀಚಿನ ಕೃಷಿ ಪತ್ತಿನ ಸಹಕಾರಿ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ದುಡಿಯುವ ವರ್ಗದ ಸಂಘಗಳವರೆಗೆ ಮುಂದುವರಿದಿದೆ. ಇಲ್ಲಿ ಕೆಲವು ಜನರು ಕೂಡಿಕೊಂಡು ತಮ್ಮ ದುಡಿಮೆಯ ಇಂತಿಷ್ಟು ಭಾಗದ ಹಣವನ್ನು ಉಳಿತಾಯ ಮಾಡುತ್ತಾರೆ. ಕೂಡಿಟ್ಟ ಹಣವನ್ನು ಅವಶ್ಯಕತೆಯ ಆಧಾರದಲ್ಲಿ ಸಂಗ್ರಹದ ಒಟ್ಟಾರೆಯ ಒಂದಿಷ್ಟು ಭಾಗವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ಎಂದು ತಮ್ಮ-ತಮ್ಮಲ್ಲೇ ಒಬ್ಬೊಬ್ಬರೆಂದು ಬಳಸಲು ಪರಸ್ಪರ ಸದಸ್ಯರಿಂದ ಅನುಮತಿಸಲಾಗುತ್ತದೆ. ಈ ಕಿರುಸಾಲ ಪದ್ಧತಿಯು ಸಮಗ್ರ ಸಮುದಾಯದ ಅಭಿವೃದ್ಧಿಯನ್ನು ಸಾಧಿಸಲು ಆರ್ಥಿಕವಾಗಿ ಬೆನ್ನೆಲುಬಾಗಿ ನಿಲ್ಲುತ್ತದೆ. ಆದರೆ ಇಂತಹ ಸಂಘಗಳ ಹೆಸರಲ್ಲಿ ಇಂದು ಹಲವಾರು ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಖಾಸಗಿ ಲೇವಾದೇವಿಗಾರರು, ವಾರದ ಬಡ್ಡಿ, ಮೀಟರ್ ಬಡ್ಡಿ ಭೂತಗಳು ಜನರ ನೆಮ್ಮದಿಯನ್ನು ಕೆಡಿಸಿರುವುದಷ್ಟೇ ಅಲ್ಲ, ಹಲವು ಜೀವಗಳನ್ನು ಬಲಿ ತೆಗೆದುಕೊಂಡಿವೆ ಎಂಬುದು ಅರ್ಥವಾಗುತ್ತದೆ.

ಆದರೆ ದುರ್ಬಲರ ಅನಿವಾರ್ಯತೆ ಮತ್ತು ಸಹಕಾರಿ ಕ್ಷೇತ್ರದ ಭಾಗವಾಗಿ ಜನಸೇವೆಯ ಮುಖವಾಡ ಹೊತ್ತ ಬಂಡವಾಳಶಾಹಿಗಳ ಲಾಭಕೋರತನ ಕಿರುಸಾಲ ವ್ಯವಸ್ಥೆಗೆ ಕಾಲಿಟ್ಟು ಹಲವು ದಶಕಗಳೇ ಕಳೆದಿವೆ. ಆದರೆ ಸೇವೆಗಳ ಹೆಸರಲ್ಲಿ ಜನ ಸಮುದಾಯಗಳ ಮೇಲೆ ಇವುಗಳ ಆಕ್ರಮಣ ಇಂದು ಮುಗಿಲು ಮುಟ್ಟಿದೆ. ಜೊತೆಗೆ ಜನರ ಅಕ್ರಂದನವೂ ಕೂಡ.

ಈ ವ್ಯವಸ್ಥೆಯ ಪರಿಣಾಮಗಳು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಗಾಢವಾಗಿ ಗೋಚರವಾಗುತ್ತದೆ. ಈ ಸಾಲಮೂಲಗಳ ಕಪಿಮುಷ್ಟಿಗೆ ಸಿಲುಕಿಕೊಂಡ ಸಾಮಾನ್ಯ ಜನರ ಗೋಳಾಟ ನಿತ್ಯವೂ ಕಾಣಸಿಗುತ್ತದೆ. ಇನ್ನು ವಾರದ ನಿಗದಿತ ದಿನ ಬಂತೆಂದರೆ ಸಾಕು ಇಲ್ಲಿನ ಜನರ ಪೇಚಾಟ ಇನ್ನೂ ಹೆಚ್ಚಾಗುತ್ತದೆ. ಏಕೆಂದರೆ ಬಹುತೇಕ ಸಂಘಗಳ ಸದಸ್ಯರು ವಾರಕ್ಕೊಮ್ಮೆ ಸೇರುವುದರಿಂದ ಅದು ವಾರದ ಮರುಪಾವತಿಯೂ ಕೂಡ ಆ ದಿನ ಆಗಿರುತ್ತದೆ. ಈ ಕಿರು ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದುಕೊಂಡ ಕುಟುಂಬಗಳ ಚಿತ್ರಣವನ್ನು ಗಮನಿಸಿದರೆ ಅವರ ಆತಂಕ ಅರ್ಥವಾಗುತ್ತದೆ.

ಘಟನೆ ಒಂದು

ಯುವಕನ ಹೆಸರು ರಾಜು, ಮೂರು ಜನ ಅಣ್ಣ ತಮ್ಮಂದಿರು ಇದ್ದಾರೆ. ಜೀವನ ನಿರ್ವಹಣೆಗೆ ತಂದೆಯ ಪೈಂಟರ್ ಕೆಲಸ. ಅವಿಭಕ್ತ ಕುಟುಂಬವಾದುದರಿಂದ ಇವರ ತಂದೆಗೆ ಮನೆಯ ಜವಾಬ್ದಾರಿ ಹೆಚ್ಚು. ಹೇಗೋ ಸಾಗುತ್ತಿದ್ದ ಬದುಕು ಕಾಲಕ್ರಮೇಣ ಸಾಲದ ಗಾಳಕ್ಕೆ ಸಿಲುಕಿಕೊಂಡಿತ್ತು. ನಂತರ ಮಗಳ ಮದುವೆ, ಮಗನ ಮದುವೆಗೆ ಮತ್ತೊಂದಿಷ್ಟು ಸಾಲ ಸೇರ್ಪಡೆಯಾಯಿತು. ಅದನ್ನು ತೀರಿಸಲು ಜನಸೇವೆಯ ಮುಖವಾಡ ಹೊತ್ತ ಸಂಘವೊಂದರಿಂದ ಸಾಲ ಮಾಡಿಕೊಂಡರು. ನಂತರ ದಿನನಿತ್ಯದ ಖರ್ಚುಗಳಿಗೆ ಮತ್ತು ಈ ಸಂಘಗಳಲ್ಲಿನ ಸಾಲಗಳನ್ನು ತೀರಿಸಲು ಟಾಟಾ ಕ್ಯಾಪಿಟಲ್ ಮತ್ತು ಇತರ ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಮಾಡಿಕೊಂಡಿದ್ದಾರೆ. ನಂತರ ಈ ಸಾಲದ ಕಂತುಗಳನ್ನು ಕಟ್ಟಲು ತಮ್ಮ ಶಕ್ತಿ ಮೀರಿದಾಗ ಸುಲಭಕ್ಕೆ ಸಿಗುವ ಕಡೆಗಳಲ್ಲೆಲ್ಲಾ ಖಾಸಗಿ ಲೇವಾದೇವಿಗಾರರ ಬಳಿ ಮಿತಿಮೀರಿದ ಬಡ್ಡಿಗೆ ಸಾಲ ತೆಗೆದುಕೊಂಡಿದ್ದಾರೆ. ಕೊನೆಗೆ ಆ ಸಾಲಗಾರರ ಒತ್ತಡ ತಾಳಲಾರದೆ ಭಯ ಮತ್ತು ಅವಮಾನದಿಂದ ತಂದೆ ತಾಯಿಗಳ ಸಮೇತ ಹುಟ್ಟೂರು ಬಿಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.

ಇವರ ಈಗಿನ ಕಥೆ ಎಷ್ಟು ದಾರುಣವಾಗಿದೆ ಎಂದರೆ ಹಿರಿಯ ಮಗ ಪೈಂಟರ್ ಕೆಲಸ ಮಾಡುತ್ತಾ ಶಿವಮೊಗ್ಗ, ಕೊಪ್ಪಳ ಎಂದು ಉದ್ಯೋಗವರಸಿ ಸಾಲ ತೀರಿಸಲು ಹೆಣಗಾಡುತ್ತಿದ್ದರೆ, ತಮ್ಮಂದಿರು ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸಾಲದೆಂಬಂತೆ ಅವರ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿಯೂ, ತಾಯಿ ಅವರಿವರ ಮನೆಗಳಲ್ಲಿ ಕೆಲಸ ಮಾಡುತ್ತಾ ಸಾಲ ತೀರಿಸಲು ಹೆಣಗಾಡುತ್ತಿದ್ದಾರೆ. ಇನ್ನು ಹಡಗಲಿಯಲ್ಲಿ ಇವರು ಹುಟ್ಟಿ-ಬೆಳೆದ ಗುಬ್ಬಿಗೂಡಿನಂತಹ ಪುಟ್ಟ ಮನೆಗೆ ವಾರದ ಬಡ್ಡಿಯ ಹಾಗೆ ಇಪ್ಪತ್ತು ಸಾವಿರ ರೂ. ಸಾಲ ನೀಡಿದ ವ್ಯಕ್ತಿಯ ಕಣ್ಣು ಬಿದ್ದಿದೆ. ಯಾರೂ ವಾಸವಿಲ್ಲದೆ, ಮನೆ ಬಳಕೆಯ ಸಾಮಾನು, ಸರಂಜಾಮುಗಳು ಮಾತ್ರ ಇರುವ ಈ ಪುಟ್ಟ ಮನೆಗೆ ತನ್ನದೆಂಬಂತೆ ಬೀಗ ಹಾಕಿದ್ದಾನೆ. ಮನೆಯವರು ಬಾಗಿಲು ತೆಗೆಯಲು ಬಂದರೆ ‘‘ನೀವು ಬಡ್ಡಿ ಸೇರಿ 70ರಿಂದ 80 ಸಾವಿರ ರೂ. ನೀಡಬೇಕಿದೆ, ಹಾಗಾಗಿ ಈ ಮನೆಯನ್ನು ಬಾಡಿಗೆಗೆ ನೀಡಿ ಸಾಲ ವಸೂಲಿ ಮಾಡುತ್ತೇನೆ’ ಎಂದು ಮನೆ ತನ್ನ ವಶಕ್ಕೆ ತೆಗೆದು ಕೊಳ್ಳುವ ದರ್ಪ ತೋರಿಸುತ್ತಾನೆ. ಒಟ್ಟಿನಲ್ಲಿ ಈ ಮನೆಯವರಿಗೆ ಸಾಲ ತೀರಿಸುವ ಜೀತದ ಹೊರತು ಬದುಕಿನ ಕುರಿತು ಯಾವುದೇ ಆಶಾಭಾವನೆ ಉಳಿದಿಲ್ಲ. ಬದುಕಬೇಕೆಂದರೆ ಜೀತ ಮಾಡಬೇಕಷ್ಟೆ.

ಘಟನೆ ಎರಡು

ಸಾಲದ ಶೂಲಕ್ಕೆ ಮಹಿಳೆ ಬಲಿಯಾದ ಮತ್ತೊಂದು ಘಟನೆ ನೋಡುವುದಾದರೆ ಕೂಲಿ ಕೆಲಸ ಮಾಡುವ ಮಕ್ಕಳು, ಗಂಡನ ಸಣ್ಣ ಬೀಡಿ ಅಂಗಡಿಯಿಂದ ನೆಮ್ಮದಿಯಾಗಿ ನಡೆಯುತ್ತಿದ್ದ ಸಂಸಾರ ಮನೆಯ ಸದಸ್ಯರ ಯಾವುದೋ ಅನಿವಾರ್ಯಕ್ಕೆ ಸಾಲಕ್ಕೆ ತುತ್ತಾಯಿತು. ಇಲ್ಲಿ ಜನಸೇವೆಯ ಮುಖವಾಡ ಹೊತ್ತ ಸಂಘವೊಂದರಿಂದ ಆದಿಯಾಗಿ ಅನೇಕ ಫೈನಾನ್ಸ್ ಗಳಲ್ಲಿ ಸಾಲ ಮಾಡುವ ಪರಿಸ್ಥಿತಿ ಎದುರಾಯಿತು. ಈ ಅನಿವಾರ್ಯತೆಯ ಗಂಡಾಂತರ ಕ್ರಮೇಣ ವಾರದ ಬಡ್ಡಿಯ ಮೂಲಕ ಸಾಲ ಪಡೆಯುವವರೆಗೂ ಮುಂದುವರಿಯುತ್ತದೆ. ಈ ರೀತಿ ಕಾನೂನುಬಾಹಿರ ಮೂಲಗಳಿಂದ ಸಾಲ ಪಡೆದುಕೊಂಡು ಅವರ ಬದುಕು ಎಷ್ಟು ಕ್ರೌರ್ಯಕ್ಕೊಳಗಾಗಿತ್ತೆಂದರೆ, ಕೊನೆಗೆ ಈ ಮಹಿಳೆ ಸಾಲದ ಮರುಪಾವತಿಗೆ ಪರಿಹಾರ ದೊರಕದೆ ನೇಣಿಗೆ ತನ್ನ ಕೊರಳೊಡ್ಡಬೇಕಾಯಿತು. ಇಲ್ಲಿಗೆ ಅವಳು ತನ್ನ ಹೆಸರಲ್ಲೇ ಸಾಲ ತೆಗೆದುಕೊಂಡಿದ್ದ ಕೆಲವು ಮೈಕ್ರೋ ಫೈನಾನ್ಸ್ ಗಳ ಸಾಲ ಸಮಾಪ್ತಿಯಾಗಬಹುದು. ಆದರೆ ಈ ಮಹಿಳೆಯು ಗುಂಪು ಸಂಘದ ಇತರ ಸದಸ್ಯರ ಹೆಸರಿನಲ್ಲಿಯೂ ಕೂಡ ಸಾಲ ಪಡೆದುಕೊಂಡಿರುವುದು, ತನ್ಮೂಲಕ ಸಾಲಕ್ಕೆ ಸಹಿ ಹಾಕಿದ ಆ ಮಹಿಳೆಯರಿಗೆ ಸ್ವತಃ ತಾವೇ ಆ ಸಾಲ ತೀರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಒಂದು ಜೀವ ಬಲಿ ಪಡೆದ ವಾರದ ಬಡ್ಡಿ ನೀಡುವ ಖಾಸಗಿ ಲೇವಾದೇವಿದಾರರು ಕೈಕೈಹಿಸಿಕೊಳ್ಳುವಂತಾಗಿದೆ. ಹೀಗೆ ಆರ್ಥಿಕ ಸಮಸ್ಯೆಯೂ ಸಾಮಾಜಿಕ ಸಮಸ್ಯೆಯಾಗಿ ಬದಲಾಗಿ ಮೆರೆಯುತ್ತಿರುವ ಈ ಕ್ರೌರ್ಯಕ್ಕೆ ಏನು ಕಾರಣ ಎಂದು ವಿಮರ್ಶಿಸುವುದಾದರೆ ಅನೇಕ ಅಂಶಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ.

ಮೈಕ್ರೋ ಫೈನಾನ್ಸ್‌ಗಳ ಹಾವಳಿ:

ಸಾಮಾನ್ಯ ಬಡಜನರ ಸಹಾಯದ ನೆಪವಾಗಿ ಬಂದ ಸಾಲ ಕೊಡುವ ಸಂಘಗಳು ಇಂದು ಅಕ್ಷರಶಃ ಆರ್ಥಿಕವಾಗಿ ಹಿಂದುಳಿದ, ದುರ್ಬಲರ ಪಾಲಿಗೆ ಸಿಹಿಲೇಪಿತ ವಿಷದುಂಡೆಗಳಾಗಿ ಪರಿಣಮಿಸಿವೆ. ವೈಯಕ್ತಿಕ ಸಾಲಗಳ ಮೇಲೆ ನಮ್ಮ ಬ್ಯಾಂಕ್‌ಗಳು ಶೇ. 10ರಿಂದ 16ರವರೆಗೆ ಬಡ್ಡಿದರದಲ್ಲಿ ಸಾಲ ನೀಡಿದರೆ, ಮೈಕ್ರೋ ಫೈನಾನ್ಸ್ (ಜನಭಾಷೆಯಲ್ಲಿ ಸಂಘ) ಶೇ. 24ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಸಾಮಾನ್ಯ ಜನರು ಸಿಬಿಲ್ ಸ್ಕೋರ್‌ನ ತಲೆನೋವು, ಅಡಮಾನಗಳ ಅವಶ್ಯಕತೆ ಇಲ್ಲದೆ, ಕೇವಲ ಆಧಾರ್ ಕಾರ್ಡ್ ದಾಖಲೆಯ ಮೇಲೆ ಸಾಲ ಪಡೆಯುವುದರಿಂದ ಈ ಶೇ. 24 ಬಡ್ಡಿಯ ಪ್ರಮಾಣದ ಕುರಿತು ಅವರು ಗಮನ ಹರಿಸುವುದಕ್ಕೆ ಹೋಗುವುದಿಲ್ಲ. ಮುಖ್ಯವಾಗಿ ಯಾವುದೇ ಮೈಕ್ರೋ ಫೈನಾನ್ಸ್‌ಗಳ ಉದ್ಯೋಗಿಗಳ ಬಳಿ ಸಾಲಕ್ಕೆ ಪ್ರತಿಯಾಗಿ ಬಡ್ಡಿ ಎಷ್ಟು ವಿಧಿಸುತ್ತೀರಿ ಎಂದರೆ ಒಂದು ರೂಪಾಯಿ ಅಷ್ಟೇ ಎಂದು ಸುಳ್ಳು ಹೇಳುತ್ತಾರೆ. ವಾಸ್ತವದಲ್ಲಿ ಅಲ್ಲಿ ರೂ.2ಕ್ಕೂ ಅಧಿಕ ಬಡ್ಡಿ ವಿಧಿಸಲಾಗುತ್ತದೆ. ಆದರೆ ಸಾಲ ಪಡೆದ ತಪ್ಪಿಗೆ ತಮ್ಮ ದುಡಿಮೆಯ ಬಹುಪಾಲನ್ನು ನಿರಂತರವಾಗಿ ಕಟ್ಟುತ್ತಲೇ ಹೋಗುತ್ತಾರೆ. ಈ ಮಾದರಿಯನ್ನೇ ಇಟ್ಟುಕೊಂಡು ಇಂದು ಟಾಟಾ ಕ್ಯಾಪಿಟಲ್, ಸಂಜೀವಿನಿ, ಚೈತನ್ಯ ಮತ್ತು ಇತರ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಚಲಾವಣೆಯಲ್ಲಿವೆ. ಇವು ಲಾಭಕ್ಕಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಮುಕ್ತವಾಗಿ ಹೇಳಿಕೊಳ್ಳುತ್ತವೆ. ಆದರೆ ಸಮಾಜ ಸೇವೆಯ ಘೋಷಿತ ಮುಖ ಹೊತ್ತ ಸಂಸ್ಥೆಗಳೇ ಜನರ ಬದುಕಿನ ಆತಂಕಗಳಿಗೆ ಕಾರಣವಾಗಿದೆ.

ಈ ಸಂಘಗಳ ಮತ್ತೊಂದು ವಿಶೇಷವೆಂದರೆ ಇಲ್ಲಿ ಗುಂಪು ಸದಸ್ಯರಲ್ಲಿ ಒಬ್ಬರು ಸಾಲ ಮರು ಪಾವತಿಸದಿದ್ದರೆ ಆ ಕಟ್ಟಲಾಗದ ವ್ಯಕ್ತಿಯ ಸಾಲ ಮರುಪಾವತಿ ಮಾಡುವ ಸಂಪೂರ್ಣ ಜವಾಬ್ದಾರಿ ಉಳಿದ ಸದಸ್ಯರು ಹೊತ್ತುಕೊಳ್ಳಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ ಆ ಕಟ್ಟಲಾಗದ ವ್ಯಕ್ತಿ ಉಳಿದವರ ಕೋಪ, ಸಿಟ್ಟು, ದ್ವೇಷ ಮತ್ತು ಮತ್ಸರಕ್ಕೂ ಗುರಿಯಾಗಬೇಕಾಗುತ್ತದೆ. ಇಂತಹ ಸಿಟ್ಟು, ದ್ವೇಷ, ಕೋಪ, ಮತ್ಸರಗಳೆಂಬ ಸಾಮಾಜಿಕ ಕಾರಣಗಳೇ ಆತ್ಮಹತ್ಯೆಗೆ ಕಾರಣವಾಗುತ್ತಿರುವುದು.

ಎಲ್ಲಾ ಮೂಲವನ್ನು ಮೀರಿಸಿದ

ವಾರದ ಬಡ್ಡಿಯ ದಬ್ಬಾಳಿಕೆ:

ಪ್ರಸಕ್ತ ಅಧ್ಯಯನಕ್ಕೆಂದು ಹೂವಿನಹಡಗಲಿಯ ಸಾಲಬಾಧಿತ ಕುಟುಂಬಗಳನ್ನು ಸಂದರ್ಶಿಸಿದಾಗ ಆ ಕುಟುಂಬಗಳು ಅತಿ ಹೆಚ್ಚಾಗಿ ವಾರದ ಬಡ್ಡಿ ಸಾಲಬಾಧೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಇಲ್ಲಿ ಒಮ್ಮೆ ವಾರದ ಬಡ್ಡಿ ಮೂಲಕ ಒಬ್ಬ ವ್ಯಕ್ತಿ ಸಾಲ ಪಡೆದನೆಂದರೆ ಈ ವಿಷವರ್ತುಲದಿಂದ ಅವನು/ಅವಳು ಪಾರಾಗುವುದು ಕಷ್ಟಸಾಧ್ಯ. ಏಕೆಂದರೆ ಯಾವುದೋ ಅನಿವಾರ್ಯ ಕಾರಣಕ್ಕೆ ಪಡೆದ ಇಂತಹ ಸಾಲಗಳನ್ನು ತೀರಿಸುವುದು ತೀರಾ ಕಷ್ಟಸಾಧ್ಯ. ಏಕೆಂದರೆ ಈ ವಾರದ ಬಡ್ಡಿ ಸಾಲ ದೊರಕುವುದು ಹೆಚ್ಚಾಗಿ ಶೇ. 10ರಷ್ಟು ವಾರದ ಬಡ್ಡಿಯ ದರದಲ್ಲಿ.

ಹೂವಿನಹಡಗಲಿಯ ತಾಲೂಕು ಕೇಂದ್ರವಾದರೂ ಈ ಪ್ರದೇಶದ ಹೆಚ್ಚಿನ ಜನರ ದುಡಿಮೆ ಬೇಲ್ದಾರ್ (ಗಾರೆ) ಕೆಲಸ, ಸಣ್ಣಪುಟ್ಟ ವ್ಯಾಪಾರ ಮತ್ತು ಇತರ ಕೂಲಿ ಹಿನ್ನೆಲೆಯದ್ದು. ಇವರ ದಿನಗೂಲಿಯ ಪ್ರಮಾಣವು ದಿನಕ್ಕೆ ರೂ. 300ರಿಂದ 600 ಮಾತ್ರ. ಪರಿಸ್ಥಿತಿ ಹೀಗಿರುವಾಗ ಒಮ್ಮೆ ಸಾಲಗಾರರಿಂದ 50,000 ರೂ. ಸಾಲ ಪಡೆದರೆ ಪ್ರತೀ ವಾರಕ್ಕೆ ಸರಿಯಾಗಿ 5,000 ರೂ. ಬಡ್ಡಿ ಕೊಡಬೇಕಾಗುತ್ತದೆ. ಇನ್ನೊಂದು ವಿಶೇಷವೇನೆಂದರೆ ಈ ಸಾಲಗಾರರು ಸಾಲ ಕೊಡುವ ಸಮಯದಲ್ಲೇ ಮೊದಲ ವಾರದ ಬಡ್ಡಿ ಶೇ. ಹತ್ತರಷ್ಟು ಅಂದರೆ 5,000 ರೂ. ಬಡ್ಡಿ ಎಂದು ಮುರಿದುಕೊಂಡೇ ಸಾಲ ಕೊಡುತ್ತಾರೆ. ಹೀಗೆ ಆರಂಭವಾಗುವ ಈ ಆಧುನಿಕ ಜೀತ ಪದ್ಧತಿಯು ಮುಂದುವರಿಯುತ್ತಾ ಹೋಗುತ್ತದೆ. ಸಮಯಕ್ಕೆ ಸರಿಯಾಗಿ ಬಡ್ಡಿ ಪಾವತಿಸದಿದ್ದರೆ ಸಾಲಗಾರರ ಪಿತ್ತ ನೆತ್ತಿಗೇರಿ, ಹಣ ಪಡೆದವರ ಮನೆಯ ಹೆಣ್ಣು ಮಕ್ಕಳ ಮಾನ ಇವರ ಬಾಯಲ್ಲಿ ಲೀಲಾಜಾಲವಾಗಿ ಬೀದಿ ಹರಾಜಾಗುತ್ತದೆ. ಇವರ ಈ ದರ್ಪಕ್ಕೆ ಸಾಲ ತೆಗೆದುಕೊಂಡ ವ್ಯಕ್ತಿ ಕುಗ್ಗುವುದಷ್ಟೇ ಅಲ್ಲ, ಆ ಮನೆಯ ಶಾಂತಿ ಕದಡಿ ಅನೇಕ ಸಾಮಾಜಿಕ ಕಲಹಗಳಿಗೆ, ಮನಸ್ತಾಪಗಳಿಗೆ ಕಾರಣವಾಗಿ ಸಾವು ನೋವುಗಳಿಗೆ ಕಾರಣವಾಗುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಂಡುಕೊಂಡ ಅಂಶವಾಗಿದೆ.

ಸುಲಭ ಗಳಿಕೆಯ ಹಣದ ದಾಹ:

ಈ ವಾರದ ಬಡ್ಡಿ ದಂಧೆಯೂ ಕೇವಲ ಕೆಲವು ಶ್ರೀಮಂತ ವ್ಯಕ್ತಿಗಳಿಂದ ಅಷ್ಟೇ ಅಲ್ಲ, ತಮ್ಮ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಕೂಡಿಟ್ಟು ಆರ್ಥಿಕ ಶಿಸ್ತು ಪಾಲಿಸಿದ ಕೆಲವು ಮಧ್ಯಮ ವರ್ಗದ ಜನರಿಂದಲೂ ನಡೆಯುತ್ತಿದೆ. ಇದಕ್ಕೆ ಮೂಲ ಕಾರಣವೇ ಈ ದಂಧೆ ಅಲ್ಪಾವಧಿಯಲ್ಲಿ ಅಧಿಕ ಗಳಿಕೆಯ ಹಾದಿಯಾಗಿ ಕಂಡಿರುವುದು. ಇವರು ನೀಡುವ ಸಾಲಕ್ಕೆ ವಾರಕ್ಕೆ ಶೇ. 10 ಬಡ್ಡಿದರ ಆಗಿರುವುದರಿಂದ ಬಡ್ಡಿಯ ಭಾಗವಾಗಿಯೇ ಹತ್ತು ವಾರಕ್ಕೆ ಅಂದರೆ ಕೇವಲ ಎರಡೂವರೆ ತಿಂಗಳಿಗೆ ಇವರ ಮೂಲ ಹಣ ಮರುಪಾವತಿ ಆಗಿರುತ್ತದೆ. ಅದರ ನಂತರದ್ದು ಏನಾದರೂ ಶೋಷಣೆ ಮತ್ತು ಲಾಭ ಅಷ್ಟೇ.

ತಾಲೂಕಿನ ಅನೇಕ ಭಾಗಗಳಲ್ಲಿ ಜಾತಿ, ಧರ್ಮ, ಲಿಂಗ ಸಮುದಾಯಕ್ಕೂ ಮೀರಿ ಈ ಬಡ್ಡಿ ದಂಧೆಯು ಬೆಳೆದು ನಿಂತಿರುವುದು ನೋಡಿದರೆ ಇದರ ವಿಸ್ತಾರ ಸುಲಭಕ್ಕೆ ದಕ್ಕುವಂತದ್ದಲ್ಲ. ಬಡ್ಡಿ ನಿಷೇಧವಾಗಿರುವ ಮುಸ್ಲಿಮ್ ಸಮುದಾಯದಲ್ಲಿಯೂ ಕೂಡ ಈ ಶೋಷಕರ ಹಾವಳಿ ವ್ಯಾಪಿಸಿದ್ದು, ಈ ಹರಾಮಿ ಗಳಿಕೆಯ ಹಾದಿ ಬಿಟ್ಟುಬಿಡಿ ಎಂದು ಮಸೀದಿಯಲ್ಲಿ ಮೌಲ್ವಿಗಳು ಕೇಳಿಕೊಂಡರೂ ಕೂಡ ಕೆಲವರು ಮಸೀದಿಯಿಂದ ಹೊರಗೆ ಬಂದ ಮೇಲೆ ಅದೇ ದಾರಿ ತುಳಿಯುತ್ತಿದ್ದಾರೆ. ವಾರದ ಬಡ್ಡಿಗೆ ಸಾಲ ನೀಡುವವರು ಸುಲಭವಾಗಿ ಮತ್ತು ಅಲ್ಪಾವಧಿಯಲ್ಲೇ ಹೆಚ್ಚಿನ ಹಣ ಗಳಿಕೆಯ ಮೋಹಕ್ಕೆ ಬಲಿಯಾಗಿದ್ದಾರೆ ಎಂದು ಸಮುದಾಯದ ಗೆಳೆಯರೊಬ್ಬರು ವಿಷಾದ ವ್ಯಕ್ತಪಡಿಸುತ್ತಾರೆ. ಯಾವುದೇ ಧರ್ಮದ ಯುವ ಸಮುದಾಯವಾಗಲಿ ತನ್ನ ಸಮುದಾಯದಲ್ಲಿನ ಕಂದಾಚಾರ, ಮೂಢನಂಬಿಕೆ, ಅವೈಜ್ಞಾನಿಕತೆಯಿಂದ ಹೊರಬಂದು ವೈಚಾರಿಕತೆಗೆ ತೆರೆದುಕೊಳ್ಳಬೇಕೆಂದು ಬಯಸಿದರೂ, ಸಮುದಾಯದ ಯುವಕರ ಇಂತಹ ನಕಾರಾತ್ಮಕ ಬೆಳವಣಿಗೆಯು ಸಮಾಜಕ್ಕೆ ಆತಂಕ ಎಂದೇ ಪರಿಗಣಿಸಬೇಕಾಗುತ್ತದೆ.

ಮಧ್ಯಮ ವರ್ಗಗಳ ಮೇಲಿನ ಈ ಸಂಕಟಕ್ಕೆ ಕಾರಣವಾಗಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಸಮರ್ಥಿಸಿಕೊಳ್ಳಲು ತಮ್ಮದೇ ಆದ ಕಾನೂನಾತ್ಮಕ ಹಾದಿಗಳು, ಸಾಕಷ್ಟು ಮಟ್ಟಿಗೆ ಪ್ರಭುತ್ವಗಳ ಬೆಂಬಲವು ಇರುವುದು ಸ್ಪಷ್ಟವಾಗಿದೆ. ಆದರೆ ಕಾನೂನಿನ ಎಲ್ಲೆ ಮೀರಿರುವ ಖಾಸಗಿ ವ್ಯಕ್ತಿಗಳ ಅಪರಿಮಿತವಾದ ವೈಯಕ್ತಿಕ ಬಡ್ಡಿ ವ್ಯವಹಾರಕ್ಕೆ ಕಾನೂನಿನ ಅಂಕೆಯಿದ್ದರೂ ಇವರ ಶೋಷಣೆ ರಾಜಾರೋಷವಾಗಿ ಮುಂದುವರಿಯುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬಡ್ಡಿ ವಿಧಿಸಿ ಸಾಲಗಾರರು ಅವಾಚ್ಯ ಶಬ್ದಗಳಿಂದ ಶೋಷಣೆಗೊಳಪಡಿಸಿದರೂ, ಸಾಲ ತೆಗೆದುಕೊಂಡವರು ಪೊಲೀಸ್ ಠಾಣೆಯ ಮೆಟ್ಟಿಲೇರಲು ಅಂಜುತ್ತಾರೆ. ನಿಮಗೆ ಕಾನೂನು ಬೆಂಬಲ ಸಿಗುತ್ತದೆ ಮುಂದುವರಿಯಿರಿ ಶೋಷಣೆ ನಿಲ್ಲುತ್ತದೆ ಎಂದು ಹೇಳಿದರೆ, ಇದಕ್ಕೆ ಪ್ರತಿಕ್ರಿಯಿಸಿದ ಸಾಲ ಪಡೆದವರು ‘‘ಸಾಲ ಪಡೆದುಕೊಂಡಿದ್ದೇವೆ ಕೊಟ್ಟ ಮಾತಿನಂತೆ ತೀರಿಸಿದರಾಯಿತು ಬಿಡಿ, ನಮ್ಮ ಕರ್ಮ’’ ಎಂದು ಅಂಜುತ್ತಾರೆ. ತಾಲೂಕು ಕೇಂದ್ರದಲ್ಲೇ ಇಷ್ಟು ಸಾವು ನೋವುಗಳಿಗೆ ಕಾರಣವಾಗಿ ಸಮಸ್ಯೆ ಇಷ್ಟು ಭೀಕರವಾಗಿರುವಾಗ ಪೊಲೀಸ್ ಮತ್ತು ಆಡಳಿತ ವಿಭಾಗ ಕಠಿಣ ಕ್ರಮ ಕೈಗೊಳ್ಳುವುದಿಲ್ಲವೇ ಎಂದು ಜನರಿಗೆ ಕೇಳಿದರೆ, ಸಾಲ ಕೊಟ್ಟವರು ಅದೆಲ್ಲ ಮ್ಯಾನೇಜ್ ಮಾಡದೆ ಇರುವಷ್ಟು ದಡ್ಡರೇ..? ಎಂದು ಯುವ ಗೆಳೆಯರು ಮರು ಪ್ರಶ್ನಿಸುತ್ತಾರೆ. ಇಲ್ಲಿ ಸಾಲ ನೀಡಿದವರದಷ್ಟೇ ಅಲ್ಲ, ದುಡ್ಡು ಸಿಗುತ್ತದೆ ಎಂಬ ಕಾರಣಕ್ಕೆ, ಆರ್ಥಿಕ ಅಶಿಸ್ತನ್ನೇ ಮೈಗೂಡಿಸಿಕೊಂಡ ಸಾಮಾನ್ಯ ಜನರದ್ದು ಕೂಡ ಅಷ್ಟೇ ತಪ್ಪಿದೆ. ಆದರೆ ಪರಿಸ್ಥಿತಿ ಏನೇ ಇದ್ದರೂ ಪೊಲೀಸ್ ಮತ್ತು ಆಡಳಿತ ವಿಭಾಗ ತಮ್ಮ ಎಲ್ಲಾ ಮಿತಿಯನ್ನು ಬದಿಗಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಇಲ್ಲಿನ ಜನರ ನೆಮ್ಮದಿ ಮತ್ತು ಭವಿಷ್ಯವನ್ನು ಕಾಪಾಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಡಾ. ದಾದಾ ಹಯಾತ್ ಬಾವಾಜಿ

contributor

Similar News