'ಜಲಚಕ್ರ'ದಿಂದ ಕೆಳವರ್ಗದವರನ್ನು ದೂರವಿಟ್ಟಿರುವ 'ಭಾರತೀಯ ಪರಿಸರ'

Update: 2023-08-18 06:01 GMT

ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಮುನ್ನಾದಿನ ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ಇಂದ್ರ ಮೇಘವಾಲ್ ಎಂಬ ಹೆಸರಿನ ಒಂಭತ್ತು ವರ್ಷದ ದಲಿತ ಬಾಲಕ ಮೇಲ್ವರ್ಗದ ಶಿಕ್ಷಕನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ. ಮೇಲ್ವರ್ಗದ ಶಿಕ್ಷಕ ಇಂದ್ರನನ್ನು ಹೊಡೆದು ಕೊಂದಿದ್ದು ತನ್ನ ಪಾತ್ರೆಯಿಂದ ನೀರನ್ನು ಕುಡಿದನೆಂಬ ಕಾರಣಕ್ಕೆ.

ಇಂಥ ಘಟನೆ ಇದೊಂದೇ ಅಲ್ಲ. ದಲಿತ ವಿದ್ಯಾರ್ಥಿಗಳು ಭಾರತದಾದ್ಯಂತ ಶಾಲೆಗಳಲ್ಲಿ ಕುಡಿಯುವ ನೀರಿಗಾಗಿ ಹಿಂಸೆ ಮತ್ತು ತಾರತಮ್ಯವನ್ನು ಎದುರಿಸುತ್ತಲೇ ಇದ್ದಾರೆ. ಇಂದ್ರನ ಹತ್ಯೆಯ ನಂತರ ಒಂದರ ಬೆನ್ನಿಗೊಂದು ಇಂಥದೇ ಘಟನೆಗಳು ವರದಿಯಾದವು. ಫೆಬ್ರವರಿ 12, 2023ರಂದು ಉತ್ತರ ಪ್ರದೇಶದ ಬಿಜ್ನೋರ್‌ನ ಸಿರ್ವಾಸುಚಂದ್ ಗ್ರಾಮದ ಹದಿನಾರು ವರ್ಷದ ದಲಿತ ಹುಡುಗನನ್ನು ತನ್ನ ಬಾಟಲಿಯ ನೀರನ್ನು ಕುಡಿದಿದ್ದಕ್ಕಾಗಿ ಆತನ ಪ್ರಾಂಶುಪಾಲನೇ ಥಳಿಸಿದ್ದ. ಮಾರ್ಚ್ 2023ರಲ್ಲಿ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಮತ್ತೊಬ್ಬ ಒಂಭತ್ತು ವರ್ಷದ ದಲಿತ ಬಾಲಕನನ್ನು ಕೊಳದಿಂದ ನೀರು ಕುಡಿದ ಕಾರಣಕ್ಕೆ ಶಿಕ್ಷಕರೇ ಥಳಿಸಿದ್ದರು. ಜುಲೈ 2023ರಲ್ಲಿ ರಾಜಸ್ಥಾನದ ನೇತ್ರಾಡ್ ಗ್ರಾಮದ (ಬಾರ್ಮೇರ್ ಜಿಲ್ಲೆ) ದಲಿತ ಹುಡುಗನನ್ನು ಶಾಲೆಯ ಪಾತ್ರೆಯಲ್ಲಿನ ನೀರು ಕುಡಿದಿದ್ದಕ್ಕಾಗಿ ಶಿಕ್ಷಕರು ಹಲ್ಲೆ ನಡೆಸಿದ್ದರು.

ಅಸ್ಪಶ್ಯತೆಯನ್ನು ಭಾರತೀಯ ಸಂವಿಧಾನ ಏಳು ದಶಕಗಳ ಹಿಂದೆಯೇ ಕಾನೂನುಬದ್ಧವಾಗಿ ನಿರ್ಮೂಲನೆ ಮಾಡಿದೆ. 1989ರ ದೌರ್ಜನ್ಯ ತಡೆ ಕಾಯ್ದೆ, ಇಂದ್ರ ಮೇಘವಾಲ್‌ನನ್ನು ಕೊಂದಂಥ ದಾಳಿಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಆದರೂ, ಅಂಬೇಡ್ಕರ್ ನೇತೃತ್ವದಲ್ಲಿ 1927ರಲ್ಲಿ ಮಹಾಡ್ ಸತ್ಯಾಗ್ರಹ ನಡೆದು ಶತಮಾನದ ನಂತರವೂ ಕುಡಿಯುವ ನೀರನ್ನು ಕೆಳಜಾತಿಯ ಜನರು ಮುಟ್ಟಿದರೆ ದೌರ್ಜನ್ಯಕ್ಕೊಳಗಾಗುವ ಸ್ಥಿತಿ ಇರುವುದೇಕೆ?

ನೀರು ಮುಟ್ಟಿದ ಕಾರಣಕ್ಕೆ ಜಾತಿ ದೌರ್ಜನ್ಯದ ಘಟನೆಗಳು ನಡೆಯುತ್ತಿದ್ದರೂ, ನೀರಿನ ಕುರಿತ ಚರ್ಚೆಗಳಲ್ಲಿ ಜಾತಿಯ ವಿಚಾರ ಅಗೋಚರವಾಗಿಯೇ ಇರುವುದು ಭಾರತೀಯ ಪರಿಸರದಲ್ಲಿನ ಒಂದು ವಿಪರ್ಯಾಸ. ಜಾತಿ ಇಲ್ಲಿ ಮಿಸ್ಸಿಂಗ್ ಲಿಂಕ್ ಆಗಿಯೇ ಉಳಿದುಬಿಡುತ್ತದೆ. ಪರಿಸರದ ಚರ್ಚೆಯಲ್ಲಿ ಜಾತಿ ಹೇಗೆ ಕೇಂದ್ರವಾಗುವುದಿಲ್ಲ ಎಂಬುದನ್ನು ಮುಕುಲ್ ಶರ್ಮಾ ಅವರಂತಹ ವಿದ್ವಾಂಸರು ತೋರಿಸಿಕೊಟ್ಟಿದ್ದಾರೆ.

ಈ ನಿರ್ಲಕ್ಷ್ಯಕ್ಕೆ ಒಂದು ಪ್ರಮುಖ ಕಾರಣವೆಂದರೆ, ನೀರು ಸೇರಿದಂತೆ ಭಾರತೀಯ ಪರಿಸರ ಅಧ್ಯಯನಗಳಲ್ಲಿ ಮೇಲ್ಜಾತಿಯ ವಿದ್ವಾಂಸರು, ಸಂಶೋಧಕರು ಮತ್ತು ಶಿಕ್ಷಣತಜ್ಞರದ್ದೇ ಪ್ರಾಬಲ್ಯ. ಕುಡಿಯುವ ನೀರು ಮೂಲಭೂತ ಹಕ್ಕು ಎಂದು ಹೇಳಲಾಗುತ್ತಿದ್ದರೂ, ಈ ಮೂಲಭೂತ ಹಕ್ಕನ್ನು ಪಡೆಯುವಲ್ಲಿ ಜಾತಿ ಹೇಗೆ ಒಂದು ಪ್ರಮುಖ ತಡೆಗೋಡೆ ಯಾಗಿದೆ ಎಂಬುದನ್ನು ನಿರ್ಲಕ್ಷಿಸಲಾಗುತ್ತದೆ.

ನಮ್ಮ ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳು ನೀರಿನ ಚಕ್ರದ ಬಗ್ಗೆ ಹೇಳುತ್ತವೆ. ಸೂರ್ಯ, ಮೋಡಗಳು, ಪರ್ವತಗಳು, ನದಿಗಳು, ಸರೋವರಗಳು ಮತ್ತು ಸಾಗರಗಳ ಸುಂದರವಾದ ಚಿತ್ರದೊಂದಿಗೆ ಜಲವಿಜ್ಞಾನದ ಚಕ್ರವನ್ನು ಪರಿಚಯಿಸುತ್ತವೆ. ಜೊತೆಗೆ ಆವಿಯಾಗುವಿಕೆ, ಉತ್ಕರ್ಷಣ, ಘನೀಕರಣ, ಮಳೆ ಮತ್ತು ಕೆಲವೊಮ್ಮೆ ಅಂತರ್ಜಲದ ಪ್ರಕ್ರಿಯೆಯ ಜೊತೆಗೂ ಜಲಚಕ್ರವನ್ನು ಜೋಡಿಸಲಾಗುತ್ತದೆ. ಆದರೆ ಯಾವುದೇ ಭಾರತೀಯ ಪಠ್ಯಪುಸ್ತಕಗಳು ಜಲಚಕ್ರದ ಈ ಪರಿಚಯದಲ್ಲಿ ಜನರನ್ನು ಚಿತ್ರಿಸುವುದಿಲ್ಲ.

ವಾಸ್ತವವೇನೆಂದರೆ, ಪಟ್ಟಣ ಮತ್ತು ದೇಶದಾದ್ಯಂತ ಜನರು ಭೌತಿಕ ಜಲಚಕ್ರದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ನೀರಿನ ಬಿಕ್ಕಟ್ಟಿನ ಮೂಲ ಅಲ್ಲಿದೆ. ಉದಾಹರಣೆಗೆ, ನಾನು ಪ್ರಸಕ್ತ ನೆಲೆಸಿರುವ ಬೆಂಗಳೂರು ನಗರ, ಮಳೆಯ ರೂಪದಲ್ಲಿ ನೂರು ಕಿಲೋಮೀಟರ್ ದೂರದಲ್ಲಿರುವ ನದಿ ಮೂಲದಿಂದ ಒಂದು ವರ್ಷದಲ್ಲಿ ಬಹಳಷ್ಟು ನೀರನ್ನು ಪಡೆಯುತ್ತದೆ. ಹೊರತೆಗೆಯಲಾದ ಅಂತರ್ಜಲವನ್ನೂ ಸೇರಿಸಿ, ತ್ಯಾಜ್ಯವು ಮತ್ತೆ ಪರಿಸರಕ್ಕೆ ಹರಿಯುತ್ತದೆ. ಒಟ್ಟಾರೆ ಜಲವಿಜ್ಞಾನದ ಚಕ್ರದ ಮೇಲಿನ ಮಾನವ ಪ್ರಭಾವ ಭೌತಿಕ ಚಕ್ರದಲ್ಲಿ ಹಲವು ರೀತಿಯಲ್ಲಿ ಅಡ್ಡಿಯನ್ನು ಉಂಟುಮಾಡುತ್ತದೆ.

'Caste Lines in Bengaluru' ನಮ್ಮ ನೀರಿನ ಸಮಸ್ಯೆಗಳ ಕೇಂದ್ರ ನೆಲೆಯಲ್ಲಿ ಜಾತಿ ಇದೆ. ನಾವು ಇದನ್ನು ಅರ್ಥ ಮಾಡಿಕೊಂಡರೆ, ದಲಿತರು, ಆದಿವಾಸಿಗಳು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳು ಜಲಚಕ್ರದ ಪ್ರತಿಯೊಂದು ಹಂತದಲ್ಲೂ ಹೇಗೆ ಅನ್ಯಾಯವನ್ನು ಸಹಿಸಿಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಎಂಬ ಇತ್ತೀಚಿನ ಅಧ್ಯಯನದಲ್ಲಿ ಸಂಶೋಧಕ ಸುಮಂತೊ ಮಂಡಲ್ ಸ್ಥಳಶಾಸ್ತ್ರ ಮತ್ತು ಜಾತಿಯ ನಡುವಿನ ಸಂಬಂಧವನ್ನು ಅಧ್ಯಯನ ಮಾಡಿದರು. ಮಂಡಲ್ ಅವರು ಗುರುತಿಸಿರುವ ಪ್ರಕಾರ, ಬೆಂಗಳೂರಿನ ಹೆಚ್ಚಿನ ಎತ್ತರದ ಪ್ರದೇಶಗಳಲ್ಲಿ ನೆಲೆಸಿರುವವರು ಮೇಲ್ಜಾತಿಯವರು. ಆದರೆ ಗಣನೀಯ ಸಂಖ್ಯೆಯ ಕೆಳ ಜಾತಿಯ ಗುಂಪುಗಳನ್ನು ತಗ್ಗು ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸ್ಥಳಾಕೃತಿಯ ಈ ಅಸಮಾನತೆ ಜಲವಿಜ್ಞಾನದ ಚಕ್ರದ ಹೊರಚಿತ್ರವನ್ನು ನಿರ್ಧರಿಸುತ್ತದೆ. (ಬಾಕ್ಸ್ ನೋಡಿ).

ತಗ್ಗು ಪ್ರದೇಶಗಳ ನಿವಾಸಿಗಳು ಪ್ರವಾಹದಂತಹ ನೈಸರ್ಗಿಕ ಅಪಾಯಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಭಾರತೀಯ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಸ್ಥಳಾಕೃತಿಯ ನಕ್ಷೆಗಳು ಜಾತಿ ಶ್ರೇಣಿಯೊಂದಿಗೆ ಸಂಬಂಧಿಸಿರುವುದು ಏಕೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳದ ಹೊರತು ನಗರದ ಪ್ರವಾಹದ ಏರುಪೇರನ್ನು ಅರ್ಥ ಮಾಡಿಕೊಳ್ಳಲಾರೆವು.

ಜಾತಿ ದಲಿತರಿಗೆ ನೇರವಾದ ನೈಸರ್ಗಿಕ ಅಪಾಯವಾಗಿದೆ. ಅದು ದೇಶದೆಲ್ಲೆಡೆಯಲ್ಲಿಯಂತೆ ನಗರದಲ್ಲಿಯೂ ಅವರನ್ನು ಬೆಂಬತ್ತುತ್ತದೆ ಮತ್ತು ಬೇಟೆಯಾಡುತ್ತದೆ. ‘ದಿ ಹಿಂದೂ’ ವರದಿ ಮಾಡಿದಂತೆ, ಮೇ 2023ರಲ್ಲಿ, ಬೆಂಗಳೂರಿನ ಹೊರವಲಯದ ರಾಜನಕುಂಟೆಯಲ್ಲಿ ಇಬ್ಬರು ದಲಿತ ಯುವಕರನ್ನು ಮೇಲ್ಜಾತಿ ವ್ಯಕ್ತಿಗಳು ಹತ್ಯೆ ಮಾಡಿದರು. ಹೆಸರಘಟ್ಟದ ಹೊಟೇಲ್‌ನಲ್ಲಿ ಮೇಲ್ವರ್ಗದವರಿಗೆ ಮೀಸಲಿಟ್ಟಿದ್ದ ನೀರಿನ ಜಾರ್‌ನಿಂದ ನೀರು ಕುಡಿದರೆಂಬುದು ಹತ್ಯೆಗೆ ಕಾರಣ. ಜಲವಿಜ್ಞಾನದ ಚಕ್ರದ ಮೂಲಕ ನೀರು ಹೇಗೆ ಹರಿಯುತ್ತದೆ ಎಂಬುದಕ್ಕೂ ಈ ಜಾತಿಯ ಹರಿವಿಗೂ ವ್ಯತ್ಯಾಸವಿಲ್ಲ.

‘ಸ್ಪಶ್ಯ’ ಮತ್ತು ‘ಅಸ್ಪಶ್ಯ’ರ ನಡುವಿನ ಗಡಿಯನ್ನು ಕಾಪಾಡಿಕೊಳ್ಳಲು ನೀರು ಕೇಂದ್ರವಾಗಿದೆ ಎಂದು ಅಂಬೇಡ್ಕರ್ ವಾದಿಸಿದ್ದರು. ಈ ಗಡಿಯನ್ನು ಮೇಲ್ಜಾತಿಯವರು ಉಳಿಸಿಕೊಳ್ಳಲು ನೋಡುವುದೇ, ಭಾರತದಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲಿನ ಹಿಂಸಾತ್ಮಕ ಕಿರುಕುಳದ ಮೂಲ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) 2021ರ ವರದಿ ಪ್ರಕಾರ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯಗಳು ಕ್ರಮವಾಗಿ ಶೇ.1.2 ಮತ್ತು ಶೇ.6.4ರಷ್ಟು ಹೆಚ್ಚಾಗಿವೆ. ಇದಲ್ಲದೆ, ಎಸ್‌ಸಿ/ಎಸ್‌ಟಿಗಳ ಮೇಲಿನ ಹೆಚ್ಚಿನ ಜಾತಿ ದೌರ್ಜನ್ಯಗಳು ಕುಡಿಯುವ ನೀರಿನ ಮೂಲಗಳನ್ನು ಅವರು ಮುಟ್ಟಿದರು ಎಂಬ ಕಾರಣಕ್ಕೆ ಹೇಗೆ ಸಂಬಂಧಿಸಿವೆ ಎಂಬುದನ್ನು ವರದಿ ತೋರಿಸುತ್ತದೆ. 

‘‘ನಿಮ್ಮ ನೀರು ಎಲ್ಲಿಂದ ಬರುತ್ತದೆ ಮತ್ತು ನಿಮ್ಮ ತ್ಯಾಜ್ಯನೀರು ಎಲ್ಲಿಗೆ ಹೋಗುತ್ತದೆ’’ ಎಂಬ ಪ್ರಶ್ನೆಗಳನ್ನು ಕೇಳುವ ಮೇಲ್ಜಾತಿಯ ಜನರು, ‘‘ನೀರನ್ನು ಯಾರು ತರುತ್ತಾರೆ’’ ಅಥವಾ ತ್ಯಾಜ್ಯನೀರಿನ ಮೂಲಸೌಕರ್ಯವನ್ನು ‘‘ಯಾರು ನಿರ್ವಹಿಸುತ್ತಾರೆ’’ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ದುಃಖಕರ ವಿಚಾರ. ಅವರ ಜನ್ಮ ಆಧಾರಿತ ಗುರುತುಗಳ ಸವಲತ್ತಾದ ಅವರ ಜಾತಿ, ದಲಿತರು ಮತ್ತು ಅಂಚಿನಲ್ಲಿರುವ ಜನರ ಕಷ್ಟಗಳಿಂದ ಅವರನ್ನು ದೂರವಿಟ್ಟಿದೆ. ಜಲಸಂಪನ್ಮೂಲ ನಿರ್ವಹಣೆಯಲ್ಲಿ ವೃತ್ತಿಪರವಾಗಿ ತೊಡಗಿಸಿಕೊಂಡಿರುವ ದಲಿತನಾಗಿ, ಜಲವಿಜ್ಞಾನದ ಚಕ್ರದಲ್ಲಿ ಜಾತಿಯು ಬೀರುವ ನೆರಳನ್ನು ನಿರ್ಲಕ್ಷಿಸುವುದು ನನಗೆ ಸಾಧ್ಯವಿಲ್ಲ. ಜಲಚಕ್ರದೊಂದಿಗಿನ ನಿರಂತರ ಹೋರಾಟದಿಂದ ನನ್ನ ಜೀವನ ಚಕ್ರ ಸ್ಥಗಿತಗೊಂಡಿದೆ. ನನ್ನ ತಾಯಿಯ ಗರ್ಭದಲ್ಲಿ ತಂಗಿಯಿದ್ದ ಸಂದರ್ಭದಲ್ಲಿ, ಸಿದ್ಧಾರ್ಥ್ ನಗರದಲ್ಲಿ (ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ದಲಿತ ಕಾಲನಿ) ಮನೆಗೆ ನೀರು ಸಂಗ್ರಹಿಸಲು ಹೆಣಗಾಡಿದ್ದು, ಸಾರ್ವಜನಿಕ ಕೈಪಂಪ್‌ಗಳಿಂದ ನೀರು ತರಲು ನನ್ನ ತಂದೆಯ ಬೈಕ್‌ನಲ್ಲಿ ಹಲವಾರು ಸುತ್ತು ಹೋಗುತ್ತಿದ್ದುದು ಇನ್ನೂ ನೆನಪಿದೆ. ಅದಕ್ಕಾಗಿ ನಾನು ಆಗಾಗ ಶಾಲೆಯನ್ನೂ ತಪ್ಪಿಸಬೇಕಿರುತ್ತಿತ್ತು. ಬೇಸಿಗೆಯಲ್ಲಂತೂ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತಿತ್ತು.

ದಲಿತ ಮಕ್ಕಳಿಗೆ ನೀರಿನ ಸಂರಕ್ಷಣೆ ಅವರ ಸ್ವಭಾವವೇ ಆಗುವ ಅನಿವಾರ್ಯತೆಯಿತ್ತು. ಮೇಲ್ಜಾತಿ ಮಕ್ಕಳಿಗೆ ಧಾರಾಳ ವಾಗಿ ಪೈಪ್ ನೀರು ಮತ್ತು ಅವರ ದೊಡ್ಡ ಸಂಗ್ರಹಗಳಲ್ಲಿ ತುಂಬಿದ್ದ ನೀರು ಇರುತ್ತಿತ್ತು. ನನ್ನಂತಹ ಅದೃಶ್ಯ ಜನರಿಗೆ ನೀರು ಎಂದೂ ಕಾಣಿಸುತ್ತಿರಲಿಲ್ಲ. ನಿಸ್ಸಂದೇಹವಾಗಿ, ಹೆಚ್ಚು ಅಗೋಚರವಾಗಿ ರುವುದು ಸ್ವತಂತ್ರ ಭಾರತದ ಒಳಚರಂಡಿ ಶುದ್ಧಗೊಳಿಸುವವರು. ನಗರಗಳನ್ನು ಸುಸ್ಥಿತಿಯಲ್ಲಿರಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಅವರ ಸಾವಿನ ಸುದ್ದಿ ಬರುತ್ತಿರುತ್ತದೆ. ಆದರೆ, ಮೇಲ್ಜಾತಿಯ ‘ಜಲಚಕ್ರ’ದಿಂದ ಅವರ ಅಸ್ತಿತ್ವ ದೂರವೇ ಉಳಿಯುತ್ತದೆ.

ಪರಿಸರ ದೃಷ್ಟಿಕೋನಗಳಲ್ಲಿ ಬ್ರಾಹ್ಮಣ ಮತ್ತು ಪುರುಷ ಕೇಂದ್ರಿತ ಪ್ರಾಬಲ್ಯವೇ ಒಂದು ತಡೆಗೋಡೆ. ಅದು, ದೇಶದ ಶೈಕ್ಷಣಿಕ, ಶೈಕ್ಷಣಿಕೇತರ ಮತ್ತು ನೀತಿ ವೇದಿಕೆಗಳಲ್ಲಿ ಪರಿಸರದ ಶೈಕ್ಷಣಿಕ ವ್ಯಾಖ್ಯಾನದಲ್ಲಿ ದಲಿತರು ಮತ್ತು ಅಂಚಿನಲ್ಲಿರುವ ಜನರ ದೃಷ್ಟಿಕೋನಗಳು ಗಣನೆಗೆ ಬರದಂತೆ ನೋಡಿಕೊಳ್ಳುತ್ತದೆ.

ವಾಸ್ತವವಾಗಿ ಮಾನವ ಘನತೆ ಮತ್ತು ಭಾರತದ ಪ್ರತಿಯೊಬ್ಬ ವ್ಯಕ್ತಿಗೆ ನೀರಿನ ಪ್ರವೇಶದ ಸಮಾನ ಹಕ್ಕುಗಳನ್ನು ಖಾತ್ರಿಪಡಿಸಿಕೊಳ್ಳಲು ಜಾತಿ ಮತ್ತು ಜಲಚಕ್ರದ ನಡುವಿನ ಸಾಂವಿಧಾನಿಕ ಸಂಪರ್ಕಗಳನ್ನು ಅರ್ಥಮಾಡಿಕೊಳ್ಳಬೇಕು. ಜಲಚಕ್ರದ ಭಾಷೆಯಲ್ಲಿ ಹೇಳುವುದಾದರೆ, ನೀರಿನ ಬಾಷ್ಪೀಕರಣ ಎಂಬುದು ಜಲಚಕ್ರದಲ್ಲಿ ನೀರಿಗೆ ಸಿಗುವ ಒಂದು ಅಲ್ಪವಿರಾಮ. ಆದರೆ ಭಾರತದ ಜಾತಿ ಸಮಾಜದ ಅನಿಷ್ಟದಿಂದ ತಾತ್ಕಾಲಿಕ ತಪ್ಪಿಸಿಕೊಳ್ಳುವ ಇಂಥದೊಂದು ಆವರ್ತಕ ಬಿಡುವು ಕೂಡ ದಲಿತರು ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳಿಗೆ ಇಲ್ಲವಾಗಿದೆ. ಭಾರತೀಯ ಜಲವಿಜ್ಞಾನದ ಚಕ್ರಗಳು ಜಾತಿಯಲ್ಲಿ ಹೇಗೆ ಅಂತರ್ಗತವಾಗಿವೆ ಎಂಬುದನ್ನು ನಾವು ಗುರುತಿಸದ ಹೊರತು, ಭಾರತದ ದಲಿತರ ಪಾಲಿಗೆ ಜಲಚಕ್ರವು ಮುರಿದಿರುವ ವ್ಯವಸ್ಥೆಯಾಗಿಯೇ ಮುಂದುವರಿಯುತ್ತದೆ. ಅದರೊಳಗೆ ಅವರಿರುವುದಿಲ್ಲ.

thewire.in(ಕೃಪೆ: )

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Contributor - ಅಭಿಜಿತ್ ವಾಘ್ರೆ

contributor

Similar News