ಕಟ್ಟಡ ತ್ಯಾಜ್ಯಕ್ಕೆ ಮುಕ್ತಿ ಇಲ್ಲವೇ?
ಕಟ್ಟಡ ತ್ಯಾಜ್ಯವನ್ನು ಕೇವಲ ಒಂದು ತ್ಯಾಜ್ಯ ಎಂದು ಪರಿಗಣಿಸದೆ ಅದೊಂದು ಸಂಪನ್ಮೂಲ ಎಂದು ಪರಿಗಣಿಸಿದರೆ ಅದರಿಂದ ಒಂದಿಷ್ಟು ಮರುಬಳಕೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಪರಿಸರ ಮತ್ತು ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಕಟ್ಟಡ ತ್ಯಾಜ್ಯ ಮರುಬಳಕೆ ಇಂದಿನ ಅನಿವಾರ್ಯತೆ ಮತ್ತು ಅಗತ್ಯವಾಗಿದೆ.
ನಾವು ಚಿಕ್ಕವರಿದ್ದಾಗ ನಮ್ಮ ಹೊಳಗುಂದಿಯಂತೆ ಬಹುತೇಕ ಊರಿನ ಮನೆಗಳು ಗುಡಿಸಲು ಅಥವಾ ಮಣ್ಣಿನ ಮನೆಗಳಾಗಿದ್ದವು. ಕೆಲವೇ ಕೆಲವು ಮನೆಗಳಿಗೆ ಗಾರೆ ಬಳಸಲಾಗಿತ್ತು. ಅಂತೆಯೇ ಆಗ ನಮ್ಮೂರಿನ ಸಿದ್ದೇಶ್ವರ ದೇವಸ್ಥಾನದ ಗೋಪುರವೂ ಗಾರೆಯಿಂದ ನಿರ್ಮಾಣವಾಗಿತ್ತು. ದೇವಸ್ಥಾನದ ಕೆಳಭಾಗದಲ್ಲಿ ಒಂದು ವೃತ್ತಾಕಾರದ ಕಾಲುವೆಯಂತಹ ನಿರ್ಮಾಣವಿತ್ತು. ಅದರಲ್ಲಿ ಒಂದು ದೊಡ್ಡದಾದ ಕಲ್ಲಿನ ಗಾಲಿಯೂ ಇತ್ತು. ಇದನ್ನು ಇಲ್ಲೇಕೆ ಹೀಗೆ ಇಟ್ಟಿದ್ದಾರೆ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಇದು ಗಾರೆ ತಯಾರಿಕೆಗಾಗಿ ಮಾಡಿಕೊಂಡ ಒಂದು ವ್ಯವಸ್ಥೆ ಎಂದು ನಂತರ ತಿಳಿಯಿತು.
ಗಾರೆ ಈಗಿನ ಸಿಮೆಂಟ್‌ಗಿಂತ ಗಟ್ಟಿಯಾದ ಮತ್ತು ಪರಿಸರ ಸ್ನೇಹಿಯಾದ ವಸ್ತು. ಅದರ ನಿರ್ಮಾಣದಲ್ಲಿ ಸುಣ್ಣದ ಕಲ್ಲು, ಲೋಳೆಸರ ಬಳಸಲಾಗುತ್ತಿತ್ತು. ಗಾರೆಯಿಂದ ನಿರ್ಮಾಣವಾದ ಕೆಲವು ಪುರಾತನ ದೇವಾಲಯಗಳನ್ನು ಈಗಲೂ ಕಾಣಬಹುದು. ಹಂಪಿಯ ಪರಿಸರದಲ್ಲಂತೂ ಗಾರೆಯ ಬಳಕೆ ಯಥೇಚ್ಛವಾಗಿರುವುದನ್ನು ಗಮನಿಸಬಹುದು. ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮೂರಿನಲ್ಲಿದ್ದ ಸಿಮೆಂಟ್ ಮನೆಗಳ ಸಂಖ್ಯೆ ಎರಡಂಕಿ ತಲುಪಿರಲಿಲ್ಲ. ಕಟ್ಟಡ ನಿರ್ಮಾಣದಲ್ಲಿ ಸಿಮೆಂಟ್ ಬಳಕೆ ಪ್ರಾರಂಭವಾದ ನಂತರ ಮಣ್ಣಿನ ಮನೆಗಳೆಲ್ಲ ಕ್ರಮೇಣವಾಗಿ ಮಾಯವಾದವು. ಮಣ್ಣಿನ ಮನೆಗಳ ನಿರ್ಮಾಣದಲ್ಲಿ ಕಟ್ಟಡ ತ್ಯಾಜ್ಯ ಎಂದರೇನು ಎಂಬುದೇ ಬಹುತೇಕರಿಗೆ ತಿಳಿದಿರಲಿಲ್ಲ. ಆದರೆ ಸಿಮೆಂಟ್ ಮನೆಗಳ ನಿರ್ಮಾಣದಲ್ಲಿ ಕಟ್ಟಡ ತ್ಯಾಜ್ಯ ಸಹಜ ಎಂಬತಾಯಿತು.
ಇತ್ತೀಚಿನ ವರ್ಷಗಳಲ್ಲಿ ಹಳ್ಳಿ ನಗರ ಎನ್ನದೆ ಎಲ್ಲೆಡೆಯೂ ಸಿಮೆಂಟ್ ಕಟ್ಟಡಗಳದ್ದೇ ಕಾರುಬಾರು. ಪ್ರತೀ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ ೨೫ರಿಂದ ೫೦ ಟನ್ ತ್ಯಾಜ್ಯ ಉಂಟಾಗುತ್ತದೆ. ಹೀಗೆ ಉಂಟಾದ ಕಟ್ಟಡ ತ್ಯಾಜ್ಯವನ್ನು ರಸ್ತೆಯ ಅಕ್ಕಪಕ್ಕದಲ್ಲಿ ಅಥವಾ ಬಯಲಿನಲ್ಲಿ ತಂದು ಗುಡ್ಡೆ ಹಾಕಲಾಗುತ್ತದೆ. ಅದರಲ್ಲಿನ ಮರಳು, ಇಟ್ಟಿಗೆ, ಜಲ್ಲಿಕಲ್ಲು, ಕಬ್ಬಿಣದ ತುಣುಕುಗಳು, ಕಟ್ಟಿಗೆಯ ತುಣುಕುಗಳು, ರಬ್ಬರ್ ಮತ್ತು ಪ್ಲಾಸ್ಟಿಕ್‌ನ ತುಣುಕುಗಳೂ ಇರುತ್ತವೆ. ಇವುಗಳನ್ನು ಮರುಬಳಕೆ ಮಾಡುವಂತಿದ್ದರೆ ಎಷ್ಟೊಂದು ಸಂಪನ್ಮೂಲವನ್ನು ಪುನಃ ಬಳಸಬಹುದಲ್ಲವೇ? ಎನ್ನಿಸದಿರದು. ಏಕೆಂದರೆ ಕಟ್ಟಡ ತ್ಯಾಜ್ಯವು ಕೇವಲ ಆರ್ಥಿಕತೆಯ ನಷ್ಟ ಮಾತ್ರವಲ್ಲ, ಬದಲಿಗೆ ಪರಿಸರ ನಷ್ಟವೂ ಆಗಿದೆ.
ನಗರೀಕರಣವು ವೇಗಗೊಳ್ಳುತ್ತಿರುವುದರಿಂದ ಕಟ್ಟಡ ನಿರ್ಮಾಣವೂ ವೇಗಗೊಳ್ಳುತ್ತಿದೆ. ಜೊತೆಜೊತೆಗೆ ಕಟ್ಟಡ ತ್ಯಾಜ್ಯದ ಪ್ರಮಾಣವೂ ಅಧಿಕವಾಗುತ್ತಿದೆ. ಇದರಿಂದಾಗಿ ಸಂಪನ್ಮೂಲಗಳು ಅನಗತ್ಯವಾಗಿ ಮಣ್ಣುಪಾಲಾಗುತ್ತಿವೆ. ಇದನ್ನು ತಪ್ಪಿಸಲು ಕಟ್ಟಡ ತ್ಯಾಜ್ಯ ಮರುಬಳಕೆ ಇಂದಿನ ತುರ್ತು ಅಗತ್ಯವಾಗಿದೆ. ಆದರೆ ಕಟ್ಟಡ ತ್ಯಾಜ್ಯ ಮರುಬಳಕೆ ಮಾಡಲು ಬೇಕಾದ ಮಾನಸಿಕ ಸಿದ್ಧತೆ ನಮ್ಮಲ್ಲಿನ್ನೂ ಮೂಡಿಬರದಿರುವುದು ಶೋಚನೀಯ. ಕಟ್ಟಡ ತ್ಯಾಜ್ಯ ಮರುಬಳಕೆ ಮಾಡದಿರಲು ಕೆಲವು ಕಾರಣಗಳೂ ಇವೆ. ಮುಖ್ಯವಾಗಿ ಕಟ್ಟಡ ತ್ಯಾಜ್ಯವನ್ನು ಹೊರತೆಗೆಯುವಾಗ ಅದರಲ್ಲಿನ ಮಿಶ್ರಣಗಳನ್ನು ಪ್ರತ್ಯೇಕಿಸದೆ ಹೊರತೆಗೆಯುವುದರಿಂದ ಮರುಬಳಕೆಯ ವಿಧಾನಗಳು ಸ್ಪಷ್ಟವಾಗಿಲ್ಲ. ಕೆಲವೊಮ್ಮೆ ಪ್ರತ್ಯೇಕವಾಗಿ ಬೇರ್ಪಡಿಸಿದ ವಸ್ತುಗಳು ಕಲುಷಿತವಾಗಿರುವುದರಿಂದ ಮರುಬಳಕೆಗೆ ಉಪಯುಕ್ತವಾಗಿರುವುದಿಲ್ಲ. ಪ್ರತ್ಯೇಕಿಸಲ್ಪಟ್ಟ ತ್ಯಾಜ್ಯವು ಬಹುತೇಕ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಅಥವಾ ಮರದ ತುಂಡುಗಳಿಂದ ಮಿಶ್ರಿತವಾಗಿರುತ್ತವೆ. ಹೆಚ್ಚಿನ ವೇಳೆ ಕಟ್ಟಡ ತ್ಯಾಜ್ಯದಲ್ಲಿನ ಕಾಂಕ್ರಿಟ್, ಆಸ್ಫಾಲ್ಟ್, ಲೋಹಗಳು, ಇಟ್ಟಿಗೆಗಳು, ಗಾಜು, ಪ್ಲಾಸ್ಟಿಕ್‌ಗಳು, ಕಟ್ಟಿಗೆಯ ತುಂಡುಗಳು, ಪೈಪ್‌ಗಳ ತುಂಡು, ಕೇಬಲ್‌ಗಳ ತುಂಡು, ಮುರಿದ ಬಾಗಿಲುಗಳು, ಕಿಟಕಿಗಳು ಮತ್ತು ಇನ್ನಿತರ ಸಾಮಗ್ರಿಗಳನ್ನು ಪ್ರತ್ಯೇಕಿಸುವುದೇ ಒಂದು ಬಹುದೊಡ್ಡ ಸಮಸ್ಯೆಯಾಗಿರುತ್ತದೆ. ಇದರಲ್ಲಿನ ಯಾವ ಸಾಮಗ್ರಿಗಳನ್ನು ಎಷ್ಟು ಪ್ರಮಾಣದಲ್ಲಿ ಮರುಬಳಕೆ ಮಾಡಬಹುದು ಎಂಬುದರ ಕುರಿತು ನಿಖರ ಮಾಹಿತಿಗಳಿಲ್ಲ. ಅಲ್ಲದೆ ಕಟ್ಟಡ ತ್ಯಾಜ್ಯವನ್ನು ಹೊರತೆಗೆಯುವ ಸಾಂಪ್ರದಾಯಿಕ ವಿಧಾನಗಳನ್ನು ಹೊರತುಪಡಿಸಿ ನವೀನ ವಿಧಾನಗಳನ್ನು ಇನ್ನೂ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕಟ್ಟಡ ತ್ಯಾಜ್ಯ ಮರುಬಳಕೆಯ ವಿಧಾನಗಳನ್ನು ನಿರ್ವಹಿಸುವಲ್ಲಿ ನಾವು ವಿಫಲರಾಗಿದ್ದೇವೆ. ಹಾಗಂತ ಸುಮ್ಮನೆ ಇದ್ದರೆ ಭವಿಷ್ಯದಲ್ಲಿ ಕಟ್ಟಡ ಸಾಮಗ್ರಿಗಳ ಕೊರತೆಯನ್ನು ಎದುರಿಸುವ ದಿನಗಳು ದೂರವಿಲ್ಲ. ಏಕೆಂದರೆ ಪ್ರಸಕ್ತ ವರ್ಷಗಳಲ್ಲಿ ಕಟ್ಟಡ ನಿರ್ಮಾಣಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಇದಕ್ಕನುಗುಣವಾಗಿ ಕಟ್ಟಡ ಸಾಮಗ್ರಿಗಳ ಬೇಡಿಕೆ ಹೆಚ್ಚುತ್ತಲೇ ಇದೆ. ಪ್ಲಾಸ್ಟಿಕ್ ಹೊರತುಪಡಿಸಿ ಬಹುತೇಕ ಸಾಮಗ್ರಿಗಳನ್ನು ಭೂಮಿಯಿಂದಲೇ ಪಡೆಯುತ್ತಿದ್ದೇವೆ. ಸಿಮೆಂಟ್ ತಯಾರಿಕೆಗೆ ಭೂಸಂಪನ್ಮೂಲಗಳೇ ಆಧಾರ. ಮರಳು, ಮರ, ಸುಣ್ಣದ ಕಲ್ಲು, ಜಿಪ್ಸಂ, ಕಬ್ಬಿಣ ಸೇರಿದಂತೆ ಇನ್ನಿತರ ಲೋಹಗಳೆಲ್ಲವೂ ಭೂಸಂಪನ್ಮೂಲಗಳ ಕೊಡುಗೆಗಳಾಗಿವೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಹೊರತೆಗೆಯುವಿಕೆಯು ಮಣ್ಣಿನ ಗುಣಮಟ್ಟದ ಅವನತಿಗೆ ಕಾರಣವಾಗುತ್ತದೆ. ಇದು ಅರಣ್ಯನಾಶಕ್ಕೆ ಕಾರಣವಾಗಬಹುದು. ಇದು ಜೀವವೈವಿಧ್ಯತೆಯ ಮೇಲೆ ವಿನಾಶವನ್ನು ಉಂಟುಮಾಡಬಹುದು ಮತ್ತು ಇದು ಜನರ ಸ್ಥಳಾಂತರಕ್ಕೆ ಕಾರಣವಾಗಲೂಬಹುದು. ಅಲ್ಲದೇ ಕಟ್ಟಡ ತ್ಯಾಜ್ಯಗಳನ್ನು ಖಾಲಿಜಾಗದಲ್ಲಿ ಗುಡ್ಡೆ ಹಾಕುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ.
ಆದರೆ ಒಂದಿಷ್ಟು ವಿಭಿನ್ನ ಮತ್ತು ಹೊಸ ಆಲೋಚನೆಗಳೊಂದಿಗೆ ಈ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು. ಹಳೆ ಕಟ್ಟಡಗಳನ್ನು ತೆರವುಗೊಳಿಸುವಾಗ ಒಂದಿಷ್ಟು ಯೋಜಿತ ಇಚ್ಛಾಶಕ್ತಿಯನ್ನು ಅನುಸರಿಸಿದರೆ ತ್ಯಾಜ್ಯದಲ್ಲಿನ ವಸ್ತುಗಳನ್ನು ಪ್ರತ್ಯೇಕಿಸಿ ಮರುಬಳಕೆ ಮಾಡಬಹುದು. ಹಳೆ ಕಟ್ಟಡ ತೆರವುಗೊಳಿಸುವ ಮೊದಲು ಅದರಲ್ಲಿನ ಕಿಟಕಿ ಬಾಗಿಲುಗಳನ್ನು ಪ್ರತ್ಯೇಕಿಸಿದರೆ ಮರುಬಳಕೆ ಮಾಡಬಹುದು. ಅಂತೆಯೇ ನೆಲಹಾಸು (ಕಡಪಾ ಬಂಡೆ, ಟೈಲ್ಸ್, ಮಾರ್ಬಲ್ಸ್ ಇತ್ಯಾದಿ) ಕಲ್ಲುಗಳಿದ್ದರೆ ಅವುಗಳನ್ನು ತೆಗೆದು ಮರುಬಳಕೆ ಮಾಡಬಹುದು. ಒಂದು ವೇಳೆ ನೆಲ ಹಾಸು ಅಥವಾ ಮೇಲ್ಛಾವಣಿಗೆ ಕಾಂಕ್ರಿಟ್ ಬಳಸಿದ್ದರೆ ಯಂತ್ರದ ಸಹಾಯದಿಂದ ಅದನ್ನು ಬೇರ್ಪಡಿಸಿ ಅದರಲ್ಲಿನ ಕಬ್ಬಿಣ ಮತ್ತು ಜಲ್ಲಿಕಲ್ಲು ಮಿಶ್ರಿತ ಕಾಂಕ್ರಿಟನ್ನು ನೆಲಭರ್ತಿಗೆ ಅಥವಾ ರಸ್ತೆ ನಿರ್ಮಾಣದಲ್ಲಿ ಬಳಸಬಹುದು. ಕಟ್ಟಡವನ್ನು ಯಂತ್ರಬಳಸಿ ನೆಲಸಮಗೊಳಿಸುವ ಬದಲು ಮಾನವ ಸಂಪನ್ಮೂಲ ಬಳಸಿದರೆ ಕಟ್ಟಡ ನಿರ್ಮಾಣದಲ್ಲಿ ಬಳಸಿದ ಇಟ್ಟಿಗೆ, ಕಲ್ಲು, ಸಿಮೆಂಟ್ ಇತ್ಯಾದಿಗಳನ್ನು ಪ್ರತ್ಯೇಕಿಸಲು ಅನುಕೂಲವಾಗುತ್ತದೆ. ಹೀಗೆ ಪ್ರತ್ಯೇಕಿಸಿದ ವಸ್ತುಗಳನ್ನು ಮರುಬಳಕೆ ಮಾಡಬಹುದು. ಕಟ್ಟಡ ತ್ಯಾಜ್ಯವನ್ನು ಕೇವಲ ಒಂದು ತ್ಯಾಜ್ಯ ಎಂದು ಪರಿಗಣಿಸದೆ ಅದೊಂದು ಸಂಪನ್ಮೂಲ ಎಂದು ಪರಿಗಣಿಸಿದರೆ ಅದರಿಂದ ಒಂದಿಷ್ಟು ಮರುಬಳಕೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಪರಿಸರ ಮತ್ತು ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಕಟ್ಟಡ ತ್ಯಾಜ್ಯ ಮರುಬಳಕೆ ಇಂದಿನ ಅನಿವಾರ್ಯತೆ ಮತ್ತು ಅಗತ್ಯವಾಗಿದೆ. ಕಟ್ಟಡ ತ್ಯಾಜ್ಯ ಮರುಬಳಕೆಯ ಮೂಲಕವೂ ಪರಿಸರ ಸಂರಕ್ಷಣೆ ಸಾಧ್ಯ. ಅಲ್ಲವೇ?