ವ್ಯಕ್ತಿ ಸೂಚಕ ‘ಮನುಷ್ಯ’, ಜಾತಿ ಸೂಚಕವಾಗಿ ‘ಮನ್ಸ’, ‘ಮನ್ಸರ್’ ಎನಿಸಿಕೊಂಡವರ ಕಥೆ-ವ್ಯಥೆ!

Update: 2024-11-27 04:30 GMT

ಎರಡು ಸಾವಿರ ವರ್ಷಗಳ ಇತಿಹಾಸವಿರುವ ವರ್ಣ ಅಥವಾ ಜಾತಿ ಪದ್ಧತಿಯಲ್ಲಿ ಶೂದ್ರ ಮತ್ತು ಪಂಚಮ ಎಂದು ಕರೆಸಿಕೊಳ್ಳುವ ಅಸ್ಪಶ್ಯರನ್ನು, ಎಂಥ ಹೀನಾಯ ಪರಿಸ್ಥಿತಿಯಲ್ಲಿ ನಡೆಸಿಕೊಳ್ಳುತ್ತಿತ್ತು ಎಂಬ ಅಂಶ ಮುಖ್ಯವಾಗುತ್ತದೆ. ಮೇಲ್ಜಾತಿ-ವರ್ಗದ ಜನ ಅತ್ಯಂತ ಕೀಳಾಗಿ ಅಹಂಕಾರ ಅಥವಾ ಗರ್ವದಿಂದ ಇಂತಹ ಅತ್ಯಂತ ತಳ ಸಮುದಾಯದವರನ್ನು ಕರೆಯುತ್ತಿದ್ದ ಹಾಗೂ ರೂಢಿಗೆ ಬಂದಿದ್ದ ಪದಗಳೇ ‘ಜಾತಿ’ಗಳಾಗಿ ಪರಿವರ್ತಿತವಾಗಿರುವುದು ಅಥವಾ ಅವುಗಳೇ ‘ಜಾತಿ’ಗಳಾಗಿ ಪರಿಗಣಿತವಾಗಿರುವುದು ದುರ್ದೈವವೇ ಸರಿ.

ಮೇಲ್ಜಾತಿ-ವರ್ಗಗಳ ದಬ್ಬಾಳಿಕೆ-ದೌರ್ಜನ್ಯಕ್ಕೆ ಸಾಕ್ಷೀಕರಿಸಿದಂತೆ ಮನುಷ್ಯ ಎಂಬ ವ್ಯಕ್ತಿ ಸೂಚಕ ಪದವೊಂದು ಜಾತಿ ಸೂಚಕವಾಗಿ ‘ಮನ್ಸ’ ಮತ್ತು ‘ಮನ್ಸರ್’ ಎಂಬ ಅನಿಷ್ಠಕಾರಕವಾಗಿ ಪರಿವರ್ತನೆಯಾಗಿರುವುದು, ವಸಾಹತು ಕಾಲಘಟ್ಟದಲ್ಲಿ ಮದ್ರಾಸ್ ಪ್ರಾಂತದ ಭಾಗವಾಗಿದ್ದು, ಸ್ವಾತಂತ್ರ್ಯ ಗಳಿಸಿದ ನಂತರ ರಾಜ್ಯಗಳ ಪುನರ್ವಿಂಗಡಣೆಯ ಸಂದರ್ಭದಲ್ಲಿ ಮೈಸೂರು (ಕರ್ನಾಟಕ) ಪ್ರಾಂತಕ್ಕೆ ಸೇರಿಕೊಂಡ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ.

ತಾಯಿ ಗರ್ಭದಿಂದ ಹೊರಬರುವಾಗ ಎಲ್ಲರೂ ಮನುಷ್ಯರೇ. ಆದರೆ, ಮನುಷ್ಯ ಜಾತಿ ಆಧಾರದ ಮೇಲೆ ಕ್ರಮೇಣ ವಿಂಗಡಿಸಲ್ಪಡುತ್ತಾನೆ. ಸಾಮಾಜಿಕ ವ್ಯವಸ್ಥೆಯಿಂದಾಗಿ ಅದರಲ್ಲಿ ನಿಕೃಷ್ಟರು ಎನ್ನಬಹುದಾದ ಪರಿಶಿಷ್ಟ ಜಾತಿ ಅಥವಾ ಅಸ್ಪಶ್ಯರದೂ ಒಂದು. ಅತೀ ಕೀಳು ಎನಿಸಿಕೊಂಡ, ಪಾಲಿಗೆ ಬಂದ ಕಸುಬು ಮಾಡುವ ಈ ಜನ ಮೇಲ್ಜಾತಿ ಜನರಂತೆ ತಲೆಯೆತ್ತಿ ನಡೆಯಲಾರರು. ಆದರೆ ಅವರು ಹೇಳಿದಂತೆ ನಡೆದುಕೊಳ್ಳಬೇಕಷ್ಟೆ. ಇಲ್ಲವೆಂದರೆ ದಬ್ಬಾಳಿಕೆ ಎಂಬ ಅಸ್ತ್ರ ಪ್ರಯೋಗಿಸಿ ಹೇಳಿದಂತೆ ಕೇಳುವ ಹಾಗೆ ಮಾಡಿಕೊಳ್ಳುವರು. ಸಂಖ್ಯಾ ದೃಷ್ಟಿಯಿಂದ ಕಡಿಮೆ ಜನರನ್ನು ಹೊಂದಿರುವುದು, ಅತ್ಯಂತ ಹೇಯವಾಗಿ ಬದುಕುತ್ತಾ ಆರ್ಥಿಕ ಮತ್ತು ಶೈಕ್ಷಣಿಕ ಈ ಎರಡೂ ಸ್ತರಗಳಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದು ಮತ್ತು ಇವೇ ಮುಂತಾದವುಗಳನ್ನು ನಿತ್ಯ ಬದುಕಾಗಿಸಿಕೊಂಡಿರುವ ಇವರನ್ನು ಮೇಲ್ಜಾತಿ-ವರ್ಗದವರು ಅತ್ಯಂತ ಅನಾಗರಿಕವಾಗಿ ನಡೆಸಿಕೊಳ್ಳುವುದಕ್ಕೆ ಇರುವ ಅತಿ ಮುಖ್ಯ ಕಾರಣಗಳು. ಈ ಪ್ರಸ್ತಾವಕ್ಕೆ ಇತ್ತೀಚಿನ ಒಂದು ಪ್ರಸಂಗವೇ ಪುರಾವೆಯಾಗಿದೆ.

ನಾನು ಈ ಹಿಂದೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯವರೆಂದು ಹೇಳಿಕೊಂಡ ಕೆಲವು ಜನ ಅರ್ಜಿಯೊಂದನ್ನು ಹಿಡಿದುಕೊಂಡು ನನ್ನನ್ನು ಭೇಟಿಯಾದರು. ಕುತೂಹಲದಿಂದ ಅರ್ಜಿಯಲ್ಲಿ ಏನಿದೆ ಎಂದು ಓದಿಕೊಂಡೆ. ಅರ್ಜಿಯಲ್ಲಿರುವ ವಿಷಯಗಳನ್ನು ನೋಡಿ ಮೇಲ್ನೋಟಕ್ಕೆ ಅದರಲ್ಲಿ ಅಂತಹದು ಏನೂ ಇಲ್ಲ ಎಂದು ನನಗನ್ನಿಸಿತು. ಆದರೆ ಅರ್ಜಿ ನೀಡಲು ಬಂದವರಲ್ಲೊಬ್ಬ ವಿಸ್ತೃತವಾಗಿ ವಿವರಣೆ ನೀಡಿದ. ವಿವರಣೆಯಂತೆ ಅರ್ಜಿ ನೀಡಲು ಬಂದ ಜನ ಸಮುದಾಯದ ಮೂಲ ಜಾತಿ ಯಾವುದು ಎಂದು ಅವರಿಗೇ ಸರಿಯಾಗಿ ತಿಳಿಯದಿರುವುದು. ಅವರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಮಾತ್ರ ಅವರಿಗೆ ಗೊತ್ತು. ಆದರೆ ಭಾರತ ಸರಕಾರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಪರಿಶಿಷ್ಟ ಜಾತಿಯ ನೂರೊಂದು ಜಾತಿಗಳಲ್ಲಿ ಯಾವುದು ಎಂಬುದನ್ನೇ ಸರಿಯಾಗಿ ಅರಿಯದ, ಆದರೆ ಗೊಂದಲದಲ್ಲಿರುವ ಜನ ಅವರು. ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಗಳಲ್ಲಿ ಹೊಲೆಯ, ಹಸಲರು ಮತ್ತು ಯಾವುದಾದರೂ ಜಾತಿ ಇರಲೇಬೇಕು, ಇಲ್ಲಿ ಆಗಿರುವ ಜಾತ್ಯಂತರವನ್ನು ಗಮನಿಸಿ. ಜಾತಿ ಹೆಸರಿಗೆ ಬದಲಾಗಿ ಮೇಲ್ಜಾತಿ-ವರ್ಗಗಳಿಂದ ‘ಮನ್ಸ’ ಅಥವಾ ‘ಮನ್ಸರ್’ ಅಂಥ ಕರೆಸಿಕೊಂಡು ಅವುಗಳನ್ನು ಜಾತಿ ಸೂಚಕವಾಗಿ ಬಳಸಿ ಆ ಹೆಸರುಗಳನ್ನೇ ದಾಖಲು ಮಾಡಿಸಿಕೊಂಡು ಇಂದಿಗೂ ಅದನ್ನು ನಿವಾರಿಸಿಕೊಳ್ಳಲಾಗದೆ ಸಿಕ್ಕ ಸಿಕ್ಕವರಲ್ಲಿ ಅಲವತ್ತು ಕೊಳ್ಳುವುದು ನಿಜಕ್ಕೂ ವ್ಯಥೆ ತರುವ ವಿಷಯ.

ಮತ್ತೊಂದು ಆಶ್ಚರ್ಯ ಮತ್ತು ಯಾತನೆಯ ವಿಷಯವೆಂದರೆ, ‘ಮನ್ಸ’ ಎಂಬ ಜಾತಿಯವರಲ್ಲೇ ಒಡಕಿರುವುದು. ಮಗದೊಂದು ದಿನ ಬೇರೊಂದು ಗುಂಪು ಬಂದು ನನ್ನನ್ನು ಭೇಟಿ ಮಾಡಿತು. ‘ಮನ್ಸ’ ಎಂದು ನಮ್ಮನ್ನು ಕರೆಯುವುದುಂಟು. ಆದರೆ ಈ ‘ಜಾತಿ’ ಹೆಸರು ಅಧಿಕೃತ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿಲ್ಲ. ಆಯೋಗದವರು ಸಮೀಕ್ಷೆ ನಡೆಸಲು ಸಿದ್ಧಪಡಿಸಲಿರುವ ಕೈಪಿಡಿಯಲ್ಲಿ ಕರ್ನಾಟಕದ ಜಾತಿ ಉಪಜಾತಿಗಳ ಪಟ್ಟಿ ಮಾಡುತ್ತಿರುವ ವಿಷಯ ಪ್ರಕಟಣೆ ಮೂಲಕ ತಿಳಿದು ಬಂತು. ಹಾಗಾಗಿ ನಮ್ಮ ಜಾತಿ ‘ಮನ್ಸ’ ಅಥವಾ ‘ಮನ್ಸರ್’ ಇವುಗಳನ್ನು ಕೈಪಿಡಿಯಲ್ಲಿ ಜಾತಿಯ ಪಟ್ಟಿಗಳೊಡನೆ ಸೇರಿಸಬೇಕೆಂದು ಅರ್ಜಿ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನು ಕೇಳಿ ನನಗೆ ಅತೀವ ಸಂಕಟವಾಯಿತು.

ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಬೇಕೆಂತಲೋ ಅಥವಾ ಪಟ್ಟಿಗೆ ಸೇರಿಸಬೇಕೆಂತಲೋ ನಾಗರಿಕರಿಂದ ಯಾವುದೇ ಅರ್ಜಿಯನ್ನು ಸ್ವೀಕರಿಸಿದ ನಂತರ, ಆಯೋಗದ ಕಚೇರಿಯಲ್ಲಾಗಲಿ ಅಥವಾ ಅರ್ಜಿ ಕೊಟ್ಟವರ ಜಿಲ್ಲೆಯ ಕೇಂದ್ರ ಸ್ಥಾನದಲ್ಲಾಗಲಿ ವಿಚಾರಣೆ ನಡೆಸುವುದು ಆಯೋಗದ ಪ್ರಕಾರ್ಯಗಳಲ್ಲೊಂದು.

ಅರ್ಜಿದಾರರ ವಾದ ಈ ಮೇಲಿನಂತಿರಲಿಲ್ಲ. ಅವರದೇ ಆದ ಜಾತಿಯ ಕೆಲವು ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು, ಆಯೋಗ ಕರ್ನಾಟಕದ ಸಮಗ್ರ ಸಮೀಕ್ಷೆಯನ್ನು ಮಾಡಲೋಸುಗ ಕರ್ನಾಟಕದ ಜಾತಿ ಉಪಜಾತಿ ಪಟ್ಟಿಗಳನ್ನು ಮಾಡುವ ನಿಟ್ಟಿನಲ್ಲಿದ್ದ ಸಂದರ್ಭದಲ್ಲಿ, ಪರಿಶಿಷ್ಟ ಜಾತಿಗೆ ಸೇರಿದ ಈ ವ್ಯಕ್ತಿಗಳು, ನಮ್ಮನ್ನು ‘ಮನ್ಸ’ ಅಥವಾ ‘ಮನ್ಸರ್’ ಎಂದು ಮೇಲ್ಜಾತಿ ಸಮುದಾಯದವರು ಕರೆಯುತ್ತಾರೆ ಮತ್ತು ನಾವು ಪರಿಶಿಷ್ಟ ಜಾತಿಗಳೆನಿಸಿಕೊಂಡರು ನಿರ್ದಿಷ್ಟವಾಗಿ ನಮ್ಮ ಜಾತಿ ಯಾವುದು ಎಂದು ತಿಳಿಯದ ಕಾರಣ ಈ ಮೇಲಿನ ಎರಡೂ ಹೆಸರುಗಳನ್ನು ಆಯೋಗ ತಾನು ತಯಾರಿಸುತ್ತಿರುವ ಕೈಪಿಡಿಯಲ್ಲಿ ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ದಾಖಲೆ ಮತ್ತು ಸಂಭವನೀಯ ಆರೋಪಗಳಿಗೆ ಗುರಿಯಾಗಬಾರದೆಂಬ ಕಾರಣಕ್ಕಾಗಿ ಮನವಿದಾರರ ಹೆಸರನ್ನು ಇಲ್ಲಿ ಪ್ರಸ್ತಾಪಿಸುವುದು ಅನಿವಾರ್ಯವಾಗಿದೆ. 1. ರವಿ, ಆದಿ ದ್ರಾವಿಡ ಮುಖಂಡರು, ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ(ರಿ.), ಸಿ. ಎನ್.ಜಿ.ಎಸ್. - 266, ಬಾಳೆಹೊಳೆ ಕಳಸ ಹೋ., ಮೂಡಿಗೆರೆ ತಾ., ಚಿಕ್ಕಮಗಳೂರು ಜಿ. 2. ಮಂಜುನಾಥ, ಕರ್ನಾಟಕ ಆದಿ ದ್ರಾವಿಡ ಮಹಾಮಂಡಲ(ರಿ.) ಸಕಲೇಶಪುರ ಘಟಕ, ಸಕಲೇಶಪುರ ತಾ., ಹಾಸನ ಜಿ. 3. ಎಂ. ಸೀನ, ನಿವೃತ್ತ ಬ್ಯಾಂಕ್ ಅಧಿಕಾರಿ, ಮೂಡುಬಿದಿರೆ, ದ.ಕ. ಜಿಲ್ಲೆ, 4. ರಾಮಕೃಷ್ಣ ವಿ.ನಾಯಕ, ಆನಂದ ಹೆರಿಟೇಜ್, ಗ್ರೀನ್ ರಸ್ತೆ, ಕಾರವಾರ ಜಿ.

ಈ ಎಲ್ಲಾ ಮನವಿದಾರರು ಒಂದೇ ವಿಷಯದ ಮೇಲೆ ಮನವಿಗಳನ್ನು ನೀಡಿರುವುದರಿಂದ ಎಲ್ಲಾ ಮನವಿಗಳನ್ನು ಒಟ್ಟಿಗೆ ಸೇರಿಸಿ ಆಯೋಗ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ವಿಚಾರಣೆ ನಡೆಸಿದೆ. ಮನವಿದಾರರ ಮನವಿಯಲ್ಲಿ, ಆಯೋಗದ ವತಿಯಿಂದ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ಸಂಬಂಧ ಹೊರ ತರಲಾದ ಕೈಪಿಡಿಯಲ್ಲಿ ‘ಮನ್ಸ’ ಮತ್ತು ‘ಮನ್ಸರ್’ ಎಂಬ ಜಾತಿ ಸೂಚಕಗಳ ಪದಗಳನ್ನು ಸೇರಿಸಲಾಗಿದೆ ಹಾಗೂ ದೇಶ ಮತ್ತು ರಾಜ್ಯದಲ್ಲಿ ಈ ಹಿಂದೆ ಹಲವಾರು ಆಯೋಗಗಳು ಸಮೀಕ್ಷೆ ನಡೆಸಿರುತ್ತವೆ, ಆದರೆ ಯಾವ ಆಯೋಗದಲ್ಲಿಯೂ ಮನ್ಸ ಮತ್ತು ಮನ್ಸರ್ ಎಂಬ ಜಾತಿ ಸೂಚಕ ಪದಗಳನ್ನು ಬಳಸಿರುವುದಿಲ್ಲ. ಕೆಲವು ಸ್ವಾರ್ಥಿಗಳು ಈ ಎರಡೂ ಜಾತಿ ಸೂಚಕ ಪದಗಳನ್ನು ಸೇರ್ಪಡೆಗೊಳಿಸಿರುತ್ತಾರೆ. ಸಂವಿಧಾನದ ವಿಧಿ 341 ಮತ್ತು 342ರ ಪ್ರಕಾರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸಮೀಕ್ಷೆಗಳನ್ನು ಆಯೋಗ ಮಾಡುವ ಪ್ರಕ್ರಿಯೆ ಇದೆ. ಹಾಗೆಯೇ ನಿಯಮ ಕೂಡ ಇದೆ. ಯಾರೋ ಮನವಿ ಸಲ್ಲಿಸಿದ ತಕ್ಷಣ ಜಾತಿ ಪಟ್ಟಿಗೆ ಸೇರ್ಪಡೆ ಮಾಡಿರುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆ. ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಯವರನ್ನು ಮೇಲು ಜಾತಿಯವರು ಕರೆಯುವ ಈ ಶಬ್ದಗಳು ಅನಾಗರಿಕವಾಗಿವೆ. ಈ ಎರಡೂ ಪದಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿರುವುದಿಲ್ಲ.

ಆದಿ ದ್ರಾವಿಡ ಸಮಾಜದ ಕೆಲವೇ ಕೆಲವು ಅತೃಪ್ತರಿಂದ ಈ ಪ್ರಮಾದವಾಗಿರುತ್ತದೆ. ಜನಾಭಿಪ್ರಾಯವಿಲ್ಲದೆ ಮತ್ತು ವಿಚಾರ ವಿನಿಮಯ ಮಾಡದೆ ಏಕಪಕ್ಷೀಯವಾಗಿ ಈ ಜಾತಿ ಪದಗಳನ್ನು ಸೇರಿಸಿರುತ್ತಾರೆ. ಆದ್ದರಿಂದ ಕೈಪಿಡಿಯ ಪುಟ ಸಂಖ್ಯೆ 86ರಲ್ಲಿರುವ ಕ್ರಮ ಸಂಖ್ಯೆ 799 ಮತ್ತು ಕ್ರಮ ಸಂಖ್ಯೆ 800ರಲ್ಲಿ ಕ್ರಮವಾಗಿ ‘ಮನ್ಸ’ ಮತ್ತು ‘ಮನ್ಸರ್’ ಪದಗಳನ್ನು ಕೈ ಬಿಡಬೇಕೆಂದು ಕೋರಿರುತ್ತಾರೆ.

ನವೆಂಬರ್ 20, 2018ರಂದು ನಡೆದ ಬಹಿರಂಗ ವಿಚಾರಣೆಯಲ್ಲಿ ಮನವಿದಾರರ ಪರವಾಗಿ, ಎಸ್.ಆರ್. ರವಿ ಎಂಬವರು ಹೇಳಿಕೆ ನೀಡಿರುತ್ತಾರೆ. ಮನವಿಯಲ್ಲಿರುವುದನ್ನೇ ಬಹುತೇಕ ಪುನರುಚ್ಚರಿಸಿದ್ದಾರೆ. ಅದು - ‘‘ಮನ್ಸ ಹಾಗೂ ಮನ್ಸರ್ ಇವು ಜಾತಿಗಳ ಹೆಸರಲ್ಲ ಭೂಮಾಲಕರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಆದಿ ದ್ರಾವಿಡ ಅಥವಾ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯಗಳನ್ನು ಕರೆಯುವ ಅಭ್ಯಾಸವಿತ್ತು ಅಷ್ಟೇ. ‘ಮನ್ಸ’ ಹಾಗೂ ‘ಮನ್ಸರ್’ ಎರಡು ಪದಗಳನ್ನು ಜಾತಿ ಎಂದು ಪರಿಗಣಿಸಿದರೆ ಅದು ಸಂವಿಧಾನದ ವಿಧಿ 341 ಮತ್ತು 342ರ ತತ್ವಕ್ಕೆ ವಿರುದ್ಧವಾಗುತ್ತದೆ. ಅಷ್ಟೇ ಅಲ್ಲ ಮನ್ಸ ಹಾಗೂ ಮನ್ಸರ್ ಅವುಗಳನ್ನು ಜಾತಿಗಳೆಂದು ಪರಿಗಣಿಸಿದ್ದಲ್ಲಿ ನಮ್ಮನ್ನು ಹೀನಾಯವಾಗಿ ಕರೆಯುವ ಪದಗಳಾಗಿ ಅವು ಉಳಿಯುತ್ತವೆ..... ಮನ್ಸ ಹಾಗೂ ಮನ್ಸರ್ ಅವು ಜಾತಿಗಳು ಎಂದು ಹೇಳಲು ಯಾವುದೇ ಆಧಾರಗಳಿಲ್ಲ. ಮನ್ಸ ಹಾಗೂ ಮನ್ಸರ್ ಪದಗಳು ಜಾತಿಯನ್ನಾಗಿ ಗುರುತಿಸಲು ಆಯೋಗಕ್ಕೆ ನೀಡಿರುವ ಮನವಿಗಳು ಆಧಾರರಹಿತ. ಆದುದರಿಂದ ಮನ್ಸ ಹಾಗೂ ಮನ್ಸರ್ ಪದಗಳನ್ನು ಜಾತಿಯನ್ನಾಗಿ ಗುರುತಿಸಬಾರದು. ಒಂದು ಪಕ್ಷ ಗುರುತಿಸಿದಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಯಾದ ಆದಿ ದ್ರಾವಿಡ ಸಮಾಜಕ್ಕೆ ತೀರ ಅನ್ಯಾಯವಾಗುತ್ತದೆ ಅಷ್ಟೇ ಅಲ್ಲ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುವಾಗ ದುರುಪಯೋಗವಾಗುವ ಅವಕಾಶಗಳು ಹೆಚ್ಚಾಗುತ್ತದೆ ಎಂಬ ವಿಷಯವನ್ನು ಆಯೋಗದ ಗಮನಕ್ಕೆ ತರುತ್ತೇನೆ’’

ಮನವಿಗಳು ಮತ್ತು ವಿಚಾರಣೆಯಲ್ಲಿ ಹೇಳಿದ ವಿಷಯಗಳನ್ನು ಪರಿಶೀಲನಾಂಶಗಳಿಗೆ ಒಳಪಡಿಸಿದಾಗ, ಸಮೀಕ್ಷೆಯಲ್ಲಿ ಮನ್ಸ ಮತ್ತು ಮನ್ಸರ್ ಎರಡೂ ಅಸ್ತಿತ್ವದಲ್ಲಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಸಮಾಜ ವಿಜ್ಞಾನಿಗಳು ಮಾಡಿರುವ ಯಾವುದೇ ಜಾತಿ ಪುಸ್ತಕದಲ್ಲಿ ದಾಖಲಾಗಿರುವುದಿಲ್ಲ. ಆದರೂ ಆ ಹೆಸರುಗಳ ‘ಜಾತಿಗಳು’ ಅಸ್ತಿತ್ವದಲ್ಲಿವೆ ಎಂದು ಆ ಜಾತಿಗಳ ವ್ಯಕ್ತಿಗಳೇ ಖುದ್ದು ಅಂಕಿ ಅಂಶಗಳನ್ನು ನೀಡಿರುವುದರಿಂದ, ಸಂಖ್ಯೆಯಲ್ಲಿ ಕಡಿಮೆಯಾದರೂ ಈ ಹೆಸರಿನ ಜಾತಿಗಳು ಅಸ್ತಿತ್ವದಲ್ಲಿರುವ ಬಗ್ಗೆ ಆಯೋಗ ಮನಗಂಡಿದೆ. ಆದಕಾರಣ ಆಯೋಗವು ಸರಕಾರಕ್ಕೆ ಅಧಿನಿಯಮ 1995 ಕಲಂ 9(1)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಮನವಿದಾರರ ಕೋರಿಕೆಯಂತೆ ‘ಮನ್ಸ’, ‘ಮನ್ಸರ್’ ಜಾತಿಗಳನ್ನು ಕೈಪಿಡಿ ಪಟ್ಟಿಯಿಂದ ತೆಗೆಯಲು ಸಾಧ್ಯವಿಲ್ಲವಾದ್ದರಿಂದ ಮನವಿದಾರರ ಕೋರಿಕೆಯನ್ನು ತಿರಸ್ಕರಿಸಲು ಸರಕಾರಕ್ಕೆ ಆಯೋಗ ಸಲಹೆ ನೀಡಿದೆ.

ದಿನಾಂಕ 17.11.24ರಂದು ತುಳುನಾಡ ‘ಮನ್ಸ’ ಸಮಾಜ ಸೇವಾ ಸಂಘ (ರಿ) ಎಂಬ ಸಂಸ್ಥೆ ವತಿಯಿಂದ ಮೂಡುಬಿದಿರೆಯಲ್ಲಿ ನಡೆದ ವಿಚಾರ ಸಂಕಿರಣ ಒಂದರಲ್ಲಿ ‘ಮನ್ಸ’, ‘ಮನ್ಸರ್’ ಎಂಬ ಪದಗಳನ್ನೇ ‘ಜಾತಿ’ ಎಂದು ಪರಿಗಣಿಸಲು ತೀರ್ಮಾನಿಸಲಾಗಿದೆ ಎಂಬ ವಿಷಯ ತಿಳಿದು ಬಂತು. ಆ ಹಿನ್ನೆಲೆಯಲ್ಲಿ ವಿಷಯಕ್ಕೆ ಲೇಖನದ ಸ್ವರೂಪ ಕೊಡಬೇಕೆಂಬ ಉದ್ದೇಶವಷ್ಟೆ. ಇದರಲ್ಲಿ ಯಾವುದೇ ಪೂರ್ವಗ್ರಹ ಇರುವುದಿಲ್ಲ. ಲೇಖನದಲ್ಲಿರುವ ಅಂಶಗಳು ವಾಸ್ತವತೆಯಿಂದ ಕೂಡಿವೆ.

ಎರಡು ಸಾವಿರ ವರ್ಷಗಳ ಇತಿಹಾಸವಿರುವ ವರ್ಣ ಅಥವಾ ಜಾತಿ ಪದ್ಧತಿಯಲ್ಲಿ ಶೂದ್ರ ಮತ್ತು ಪಂಚಮ ಎಂದು ಕರೆಸಿಕೊಳ್ಳುವ ಅಸ್ಪಶ್ಯರನ್ನು, ಎಂಥ ಹೀನಾಯ ಪರಿಸ್ಥಿತಿಯಲ್ಲಿ ನಡೆಸಿಕೊಳ್ಳುತ್ತಿತ್ತು ಎಂಬ ಅಂಶ ಮುಖ್ಯವಾಗುತ್ತದೆ. ಮೇಲ್ಜಾತಿ-ವರ್ಗದ ಜನ ಅತ್ಯಂತ ಕೀಳಾಗಿ ಅಹಂಕಾರ ಅಥವಾ ಗರ್ವದಿಂದ ಇಂತಹ ಅತ್ಯಂತ ತಳ ಸಮುದಾಯದವರನ್ನು ಕರೆಯುತ್ತಿದ್ದ ಹಾಗೂ ರೂಢಿಗೆ ಬಂದಿದ್ದ ಪದಗಳೇ ‘ಜಾತಿ’ಗಳಾಗಿ ಪರಿವರ್ತಿತವಾಗಿರುವುದು ಅಥವಾ ಅವುಗಳೇ ‘ಜಾತಿ’ಗಳಾಗಿ ಪರಿಗಣಿತವಾಗಿರುವುದು ದುರ್ದೈವವೇ ಸರಿ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಎನ್. ಲಿಂಗಪ್ಪ

contributor

Similar News

ನಾಸ್ತಿಕ ಮದ