ಕರ್ನಾಟಕ ಮಾದರಿಯ ಸಮಸ್ಯೆಗಳು ಮತ್ತು ವೈರುಧ್ಯಗಳು

ಜನಸಾಮಾನ್ಯರಿಗೆ ಬೇಕಾದ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವುದು ಕೇವಲ ಜನಪರ ದೂರದೃಷ್ಟಿ ಉಳ್ಳ ಸಾರ್ವಜನಿಕ ಹೂಡಿಕೆಗೆ ಅರ್ಥಾತ್ ಸರಕಾರಿ ಹೂಡಿಕೆಗೆ ಮಾತ್ರ. ಆ ರೀತಿ ಉದ್ಯೋಗ ಸೃಷ್ಟಿಯಾದರೆ ಮಾತ್ರ ಜನರ ಆದಾಯ ಹೆಚ್ಚುತ್ತದೆ. ಆಗ ಮಾತ್ರ ಜನರು ಗ್ಯಾರಂಟಿಗಳ ಅನಿವಾರ್ಯ ಊರುಗೋಲನ್ನು ಅವಲಂಬಿಸದೆ ತಮ್ಮ ಕಾಲಮೇಲೆ ತಾವು ನಿಲ್ಲಲು ಸಾಧ್ಯ. ಆದರೆ ಮೋದಿ ಸರಕಾರದಂತೆ ಸಿದ್ದರಾಮಯ್ಯನವರ ಸರಕಾರವೂ ಹೂಡಿಕೆ ಎಂದರೆ ಕೇವಲ ಖಾಸಗಿ ಹೂಡಿಕೆಯೆಂದೇ ಅರ್ಥಮಾಡಿಕೊಂಡಿದೆ. ಸಿದ್ದರಾಮಯ್ಯನವರ ಬಜೆಟ್ನುದ್ದಕೂ ಅದೇ ಪ್ರತಿಫಲನಗೊಂಡಿದೆ.

Update: 2023-09-20 03:21 GMT

ಜನೋಪಕಾರಿ ಐದು ಗ್ಯಾರಂಟಿಗಳನ್ನು ಆಧರಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ‘ಕರ್ನಾಟಕ ಮಾದರಿ ಅಭಿವೃದ್ಧಿ’ ಮತ್ತು ಫ್ಯಾಶಿಸಂಗೆ ‘ಕರ್ನಾಟಕ ಮಾದರಿ ಪ್ರತಿರೋಧ’ವೆಂಬ ಪ್ರತಿಪಾದನೆಗಳು ಕರ್ನಾಟಕದಲ್ಲಿ ಮತ್ತು ದೇಶಾದ್ಯಂತ ವಿಸ್ತೃತವಾಗಿ ಚರ್ಚೆಯಾಗುತ್ತಿದೆ.

ನಾಗರಿಕ ಸಮಾಜದ ಪ್ರತಿರೋಧ- ಸಕಾರಾತ್ಮಕ ಆದರೆ ಉತ್ಪ್ರೇಕ್ಷಿತ

‘ಕರ್ನಾಟಕ ಮಾದರಿ ಪ್ರತಿರೋಧ’ವೆಂಬುದು ಕರ್ನಾಟಕದ ನಾಗರಿಕ ಸಮಾಜದ ಕೆಲವು ಸಂಘಟನೆಗಳು ಮತ್ತು ಒಕ್ಕೂಟಗಳು ಈ ಚುನಾವಣೆಯಲ್ಲಿ ಬಿಜೆಪಿಯ ವಿರೋಧವಾಗಿ ಸಕ್ರಿಯವಾಗಿ ನಡೆಸಿದ ಪ್ರಚಾರ ಹಾಗೂ ಬಿಜೆಪಿಯನ್ನು ಸೋಲಿಸಲು ಇತರ ರಾಜಕೀಯ ಪಕ್ಷಗಳ ಸಹಕಾರದೊಂದಿಗೆ ನಡೆಸಿದ ಕಾರ್ಯತಂತ್ರಗಳನ್ನೇ ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡಿದೆ. ಇದರ ಜೊತೆಗೆ ಚುನಾವಣಾ ಫಲಿತಾಂಶ ಬಂದು ಬಿಜೆಪಿ ಸೀಟಿನ ಲೆಕ್ಕದಲ್ಲಿ ಹೀನಾಯವಾಗಿ ಸೋತ ಮೇಲೆ ಈ ಪ್ರಾಮಾಣಿಕ ಹಾಗೂ ಫ್ಯಾಶಿಸ್ಟ್ ವಿರೋಧಿ ಗುಂಪುಗಳ ಪ್ರಯತ್ನಗಳು ಕರ್ನಾಟಕದ ಚುನಾವಣಾ ಫಲಿತಾಂಶದಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂಬ ಅಭಿಪ್ರಾಯಗಳೂ ಕೂಡ ‘ಕರ್ನಾಟಕ ಮಾದರಿ ಪ್ರತಿರೋಧ’ದ ಬಗ್ಗೆ ದೇಶಾದ್ಯಂತ ಅತ್ಯುತ್ಸಾಹಿ ಚರ್ಚೆಗಳು ನಡೆಯಲು ಕಾರಣವಾಗಿವೆ.

ಆದರೆ ಚುನಾವಣಾ ಫಲಿತಾಂಶ ತಂದುಕೊಟ್ಟ ನಿರಾಳ ವಾಸ್ತವದ್ದಾಗಿದ್ದರೂ, ಹಾಗೂ ಅದರಲ್ಲಿ ನಾಗರಿಕ ಸಮಾಜದ ಗುಂಪುಗಳ ಪಾತ್ರ ಅತ್ಯಂತ ಸಕಾರಾತ್ಮಕವಾಗಿದ್ದರೂ ಚುನಾವಣಾ ಫಲಿತಾಂಶದ ಬಗ್ಗೆ ಹಾಗೂ ನಾಗರಿಕ ಸಮಾಜದ ಪಾತ್ರದ ಬಗ್ಗೆ ಹೇಗೆ ಅತ್ಯಂತ ಉತ್ಪ್ರೇಕ್ಷಿತ ಚಿತ್ರಣ ನೀಡಲಾಗುತ್ತಿದೆ ಎಂಬುದನ್ನು ಈಗಾಗಲೇ ಈ ಅಂಕಣದಲ್ಲಿ ಹಲವಾರು ಲೇಖನದಲ್ಲಿ ಅಂಕಿಅಂಶ ಹಾಗೂ ವಿಶ್ಲೇಷಣೆಗಳ ಮೂಲಕ ವಿವರಿಸಲಾಗಿದೆ. ಹೀಗಾಗಿ ಅದನ್ನು ಈ ಲೇಖನದಲ್ಲಿ ಪುನರಾವರ್ತಿಸುವ ಅಗತ್ಯವಿಲ್ಲ. ಸಾರಾಂಶದಲ್ಲಿ ಹೇಳುವುದಾದರೆ ಬಿಜೆಪಿಯ ಚುನಾವಣಾ ಸೋಲು ನಿರಾಳ ತರುವಂತಿದ್ದರೂ ಕಾಂಗ್ರೆಸ್ನ ಗೆಲುವು ಸ್ಥಿರವಾಗುತ್ತಿರುವ ಮತ್ತು ಹೆಚ್ಚಾಗುತ್ತಿರುವ ಬಿಜೆಪಿಯ ಕೋಮುವಾದಿ ಸಾಮಾಜಿಕ ಹಾಗೂ ಸೈದ್ಧಾಂತಿಕ ನೆಲೆಯನ್ನು ಅಲುಗಾಡಿಸುವುದರಲ್ಲಿ ಯಶಸ್ವಿಯಾಗಿಲ್ಲ. ಇದು ಎಂತಹ ಬಲವಾದ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿಯ ವೋಟು ಶೇರು ಮಾತ್ರ ಸ್ಥಿರವಾಗಿರುವುದರಲ್ಲೂ ಹಾಗೂ ಕೋಮು ಗಲಭೆಗಳು ಮತ್ತು ಘಟನೆಗಳು ನಡೆದ ಪ್ರದೇಶಗಳಲ್ಲಿ ಕೋಮುವಾದವು ಬಿಜೆಪಿ ವಿರೋಧಿ ಅಸಮಾಧಾನಗಳನ್ನು ಮರೆಸಿರುವುದರಲ್ಲೂ ಸ್ಪಷ್ಟವಾಗುತ್ತದೆ. ಹಾಗೆಯೇ ನಾಗರಿಕ ಸಮಾಜದ ಗುಂಪುಗಳು ಮೊದಲಿಗಿಂತ ಹೆಚ್ಚು ಸಕ್ರಿಯವಾಗಿ ಜನರ ನಡುವೆ ಹೋಗಿ ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದರೂ ಅದು ಈಗಾಗಲೇ ದಲಿತರಲ್ಲಿ, ಮುಸ್ಲಿಮರಲ್ಲಿ ಹಾಗೂ ಮಹಿಳೆಯರಲ್ಲಿ ಸಂಘಟಿತವಾಗಿ ರೂಪುಗೊಂಡಿದ್ದ ಬಿಜೆಪಿ ವಿರೋಧಿ ಮತಚಲಾವಣೆಯ ನಿರ್ಧಾರಗಳಿಗೆ ಪೂರಕವಾಗಿ ಕೆಲಸ ಮಾಡಿದೆಯೇ ವಿನಾ ಕೇವಲ ನಾಗರಿಕ ಗುಂಪುಗಳು ಚುನಾವಣೆಗೆ ಎರಡು ತಿಂಗಳ ಮುನ್ನ ನಡೆಸಿದ ಪ್ರಚಾರ ಮಾತ್ರದಿಂದಲೇ ಸಂಘಪರಿವಾರ ಐದು ವರ್ಷಗಳಿಂದ ಪ್ರತಿನಿತ್ಯ ನಡೆಸುತ್ತಾ ಬಂದಿರುವ ಪ್ರಚಾರ ಹಾಗೂ ಸೈದ್ಧಾಂತಿಕ ಸಂಘಟನೆಗಳನ್ನು ಸೋಲಿಸಿಬಿಟ್ಟಿತು ಎಂದು ಭಾವಿಸುವುದು ಅತ್ಯುತ್ಪ್ರೇಕ್ಷೆಯ ಮಾತಾಗುತ್ತದೆ.

ಅದೇನೇ ಇರಲಿ, ನಾಗರಿಕ ಸಮಾಜದ ಸಂಘಟಿತ ಪ್ರಯತ್ನಗಳ ಪ್ರಭಾವದ ಬಗೆಗಿನ ಅಂದಾಜುಗಳ ಬಗ್ಗೆ ಏನೇ ವ್ಯತ್ಯಾಸಗಳಿದ್ದರೂ ಈ ಚುನಾವಣೆಯಲ್ಲಿ ನಾಗರಿಕ ಸಮಾಜ ಮೊದಲಿಗಿಂತ ಕ್ರಿಯಾಶೀಲವಾಗಿ ಜನರೊಂದಿಗೆ ಭಾಗವಹಿಸಿದ್ದು ದೀರ್ಘಕಾಲೀನ ದೃಷ್ಟಿಯಿಂದ ಕರ್ನಾಟಕಕ್ಕೆ ಒಳ್ಳೆಯದನ್ನೇ ಮಾಡುವ ಸಾಧ್ಯತೆ ಇದೆ.

ಆದ್ದರಿಂದ ಕರ್ನಾಟಕದ ನಾಗರಿಕ ಸಮಾಜ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ತನ್ನ ಕ್ರಿಯಾಶೀಲತೆಯನ್ನು ಉಳಿಸಿಕೊಂಡು, ಅಸೆಂಬ್ಲಿ ಚುನಾವಣೆಯ ಪ್ರಚಾರದಲ್ಲಿ ಆಗಿರಬಹುದಾದ ತಪ್ಪುಗಳಿಂದ ಕೆಲವು ಪಾಠಗಳನ್ನು ಕಲಿಯುವ ಅಗತ್ಯವಂತೂ ಇದ್ದೇ ಇದೆ. ಜನರಲ್ಲಿ ತಾನು ಜನರ ವಕ್ತಾರ ಎಂಬ ಅಭಿಪ್ರಾಯಕ್ಕಿಂತ ಕಾಂಗ್ರೆಸ್ ವಕ್ತಾರ ಎಂಬ ಪರೋಕ್ಷ ಅಭಿಪ್ರಾಯ ಬರದಂತೆ ಎಚ್ಚರವಹಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಪ್ರಧಾನವಾಗಿ ಸಂವಿಧಾನ ಪರ, ಜನಪರ ಹಾಗೂ ಫ್ಯಾಶಿಸ್ಟ್ ವಿರೋಧಿ ಅಜೆಂಡಾಗಳನ್ನು ಮುಂದುಮಾಡಿಕೊಂಡು ಜನರ ನಡುವೆ ಪ್ರಚಾರ ಮಾಡುವುದು ದೀರ್ಘ ಕಾಲೀನ ದೃಷ್ಟಿಯಿಂದ ಅಪೇಕ್ಷಣೀಯ ಮತ್ತು ಸ್ವಾಗತಾರ್ಹ ಕ್ರಮವಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಏರ್ಪಡಲಿರುವ ಮೈತ್ರಿಕೂಟದ ಹಿನ್ನೆಲೆಯಲ್ಲಿ ಈ ಪ್ರಚಾರದ ಚುನಾವಣಾ ಲಾಭ ಕಾಂಗ್ರೆಸ್ಗೆ ಆದರೂ, ಪ್ರಚಾರದ ರಾಜಕೀಯ ಮತ್ತು ಸೈದ್ಧಾಂತಿಕ ಲಾಭ ನಾಗರಿಕ ಸಮಾಜದ ದೂರಗಾಮಿ ಸಾಂವಿಧಾನಿಕ ಆಶಯಗಳಿಗೆ ತಕ್ಕಂತೆ ಪುನರ್ ರೊಪಿಸಿಕೊಳ್ಳುವ ಅಗತ್ಯವಂತೂ ಖಂಡಿತಾ ಇದ್ದೇ ಇದೆ ಹಾಗೂ ತಾನು ಜನಹಿತವನ್ನು ಕಾಯುವ ಶಾಶ್ವತ ಜನಪಕ್ಷವಾಗಿ ಉಳಿದರೆ ಮಾತ್ರ ಒಳಿತು ಸಾಧ್ಯ.

ಇದಿಷ್ಟು ಕರ್ನಾಟಕ ಮಾದರಿ ಪ್ರತಿರೋಧದ ಬಗ್ಗೆ .

‘ಕರ್ನಾಟಕ ಮಾದರಿ’ ಅಭಿವೃದ್ಧಿಯ ವೈರುಧ್ಯಗಳು

ಗ್ಯಾರಂಟಿಗಳ ಮಾದರಿಯ ವಾರಂಟಿಯೆಷ್ಟು?

ಆದರೆ ಇದರ ಜೊತೆಜೊತೆಗೆ ಇಂದಿನ ಸಂದರ್ಭದಲ್ಲಿ ಬಿಜೆಪಿಯ ವಿರುದ್ಧ ಕಾಂಗ್ರೆಸ್ನ ಐತಿಹಾಸಿಕ ಗೆಲುವಿಗೆ ಪ್ರಧಾನ ಕಾರಣಗಳಲ್ಲಿ ಒಂದಾದ ‘ಐದು ಗ್ಯಾರಂಟಿ’ಗಳು ಮತ್ತದರ ಸುತ್ತ ಕಟ್ಟಿಕೊಳ್ಳಲಾಗಿರುವ ಕಥನಗಳು ಇದು ಒಂದು ಕರ್ನಾಟಕ ಮಾದರಿ ಅಭಿವೃದ್ಧಿ ಎಂಬ ಉತ್ಪ್ರೇಕ್ಷಿತ ಕಥನವನ್ನೂ ಹುಟ್ಟುಹಾಕಿದೆ.

‘ಕರ್ನಾಟಕ ಮಾದರಿ’ಯ ಅಧಿಕೃತ ಪ್ರಸ್ತಾಪ ಈ ಸಾಲಿನ ಸಿದ್ದರಾಮಯ್ಯ ನವರ ಬಜೆಟ್ನಲ್ಲಿದೆ.

ಅದು ಸ್ಥೂಲವಾಗಿ ಗ್ಯಾರಂಟಿಗಳ ಮೂಲಕ ಮಾಡುತ್ತಿರುವ ವಿತರಣಾ ನ್ಯಾಯವನ್ನು ಕರ್ನಾಟಕ ಮಾದರಿ ಎಂದು ಹೇಳುತ್ತದೆ.

ಜನೋಪಕಾರಿ ಹಾಗೂ ಜನಕಲ್ಯಾಣದ ಸಾಂವಿಧಾನಿಕ ಜವಾಬ್ದಾರಿಯನ್ನು ಒಂದಷ್ಟು ಪೂರೈಸುವ ಗ್ಯಾರಂಟಿ ಕಾರ್ಯಕ್ರಮಗಳನ್ನು ಕರ್ನಾಟಕದ ಹಾಗೂ ರಾಷ್ಟ್ರೀಯ ಬಿಜೆಪಿ ಮತ್ತು ಪ್ರಧಾನಿ ಮೋದಿ ಅತ್ಯಂತ ಅನೈತಿಕವಾಗಿ ಹಾಗೂ ಕಾರ್ಪೊರೇಟ್ ಕುಲದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವಹೇಳನ ಮಾಡಲು ಮತ್ತು ಅವನ್ನು ಶತಾಯ ಗತಾಯ ವಿಫಲಗೊಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಹೀಗಾಗಿ ಜನಪರ ಸಂಘಟನೆಗಳು ಮತ್ತು ಚಿಂತಕರು ಮತ್ತು ವಿಶ್ಲೇಷಕರು ಗ್ಯಾರಂಟಿಗಳ ಜನೋಪಯೋಗಿ ಆರ್ಥಿಕ ಹಾಗೂ ಸಾಮಾಜಿಕ ಪ್ರಯೋಜನಗಳನ್ನು ಮುಂದಿಡುತ್ತಾ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳನ್ನು ಸಕಾರಣವಾಗಿ ಮತ್ತು ಸತರ್ಕವಾಗಿ ಸಮರ್ಥಿಸುತ್ತಿದ್ದಾರೆ. ಆ ಮೂಲಕ ಬಿಜೆಪಿಯ ಫ್ಯಾಶಿಸ್ಟ್ ರಾಜಕೀಯ ಸಿದ್ಧಾಂತದ ಹಿಂದಿನ ಜನವಿರೋಧಿ ಕಾರ್ಪೊರೇಟ್ ಹಿತಾಸಕ್ತಿಗಳನ್ನು ಸಮರ್ಥವಾಗಿ ಬಯಲು ಮಾಡುತ್ತಿದ್ದಾರೆ.

ಆದರೆ ಗ್ಯಾರಂಟಿಗಳ ಸಮರ್ಥನೆಗಳು ಕೆಲವು ವಲಯದಲ್ಲಿ ಇನ್ನೂ ಒಂದೆರೆಡು ಹೆಜ್ಜೆ ಮುಂದೆ ಹೋಗಿ ಅಪೇಕ್ಷಣೀಯ ಮತ್ತು ಕಾರ್ಯಸಾಧುವಾದ ಏಕೈಕ ಜನಪರ ಮಾದರಿ- ಕರ್ನಾಟಕ ಮಾದರಿ ಎಂಬ ಹಂತಕ್ಕೆ ತಲುಪುತ್ತಿದೆ ಹಾಗೂ ಮೂಲಭೂತವಾಗಿ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನೇ ಅಪ್ಪಿಕೊಂಡಿರುವ ಕಾಂಗ್ರೆಸ್ ಸರಕಾರ ಈ ಅವಕಾಶವನ್ನು ಬಳಸಿಕೊಂಡು ತನ್ನದೊಂದು ಪರ್ಯಾಯ ಆರ್ಥಿಕ ಮಾದರಿಯೆಂದು ಪ್ರತಿಪಾದಿಸುತ್ತಿದೆ.

ಆದರೆ ಕಾಂಗ್ರೆಸ್ ಮುಂದಿಟ್ಟಿರುವ ಗ್ಯಾರಂಟಿ ಮಾದರಿಯನ್ನು ಅನಿವಾರ್ಯ ಮಾತ್ರವಲ್ಲ ಅಪೇಕ್ಷಣೀಯ ‘ಕರ್ನಾಟಕ ಮಾದರಿ’ ಎಂದು ಒಪ್ಪಿಕೊಂಡರೆ ಕರ್ನಾಟಕ ಎಚ್ಚರ ತಪ್ಪುವ ಎಲ್ಲಾ ಅವಕಾಶಗಳೂ ಇವೆ.

ಏಕೆಂದರೆ ಈ ಕಥನದಲ್ಲಿ ಹಲವಾರು ಮೂಲಭೂತ ಸಮಸ್ಯೆಗಳಿವೆ. ಆಳವಾದ ಅಂತರ್ಗತ ವೈರುಧ್ಯಗಳಿವೆ.

1.ಕಾರ್ಪೊರೇಟ್ ಪರ ಅಭಿವೃದ್ಧಿ ವರ್ಸಸ್ ಸಾಮಾಜಿಕ ನ್ಯಾಯ

ಸಿದ್ದರಾಮಯ್ಯನವರ ಬಜೆಟನ್ನು ಗ್ಯಾರಂಟಿಗಳನ್ನು ಹೊರತುಪಡಿಸಿ ಕೂಲಂಕಷವಾಗಿ ವಿಶ್ಲೇಷಿಸಿದರೆ ಅದರಲ್ಲಿ ಪ್ರಸ್ತಾಪಿತವಾಗಿರುವ ಅಭಿವೃದ್ಧಿ ಮಾದರಿ (ಟ್ರಿಲಿಯನ್ ಡಾಲರ್ ಇಕಾನಮಿ ಮತ್ತು ಅದನ್ನು ಸಾಧಿಸಬೇಕೆಂದು ಹಾಕಿಕೊಂಡಿರುವ ಮಾದರಿ-ಮಾರ್ಗಗಳು ) ಮೋದಿ ಮಾದರಿಯ ನಕಲಾಗಿದೆ! ವಾಸ್ತವದಲ್ಲಿ ಬಜೆಟ್ನಲ್ಲಿ ಹಾಕಿಕೊಂಡಿರುವ ಗುರಿ ಮತ್ತು ಅದನ್ನು ಸಾಧಿಸಲು ಗುರುತಿಸಿರುವ ಮಾರ್ಗಗಳು ಮತ್ತು ಒಂಭತ್ತು ಕ್ಷೇತ್ರಗಳು ಎಲ್ಲವೂ ೨೦೨೨ರಲ್ಲಿ ಬೊಮ್ಮಾಯಿ ಸರಕಾರ ಕಾರ್ಪೊರೇಟ್ ಉದ್ಯಮಿ ಮೋಹನ್ ದಾಸ್ ಪೈ ಅವರ ನೇತೃತ್ವದಲ್ಲಿ ಮೋದಿಯವರ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನು ನನಸು ಮಾಡಲು ಹಾಕಿಕೊಟ್ಟ ಹೆಜ್ಜೆಗಳನ್ನೇ ಸಿದ್ದರಾಮಯ್ಯನವರ ಬಜೆಟೂ ಕೂಡ ಅನುಸರಿಸಿದೆ.

(/https://planning.karnataka.gov.in/storage/pdf-files/Latest News/Karnataka 2022-One Trillion GDP Vision-Mohandas Pai Nisha Holla.pdf)

ಇದರ ಅರ್ಥ ಗ್ಯಾರಂಟಿಗಳನ್ನು ಕೊಡುವುದನ್ನು ಬಿಟ್ಟರೆ ಅಭಿವೃದ್ಧಿ ಮಾದರಿಯಲ್ಲಿ ಮೋದಿ-ಬೊಮ್ಮಾಯಿಯವರ ಕಾರ್ಪೊರೇಟ್ ಪರ ನವ ಉದಾರವಾದಿ ಬಂಡವಾಳಶಾಹಿ ಅಭಿವೃದ್ಧಿ ಮಾದರಿಗೂ ಸಿದ್ದರಾಮಯ್ಯನವರ ಅಭಿವೃದ್ಧಿ ಮಾದರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದಾಯಿತಲ್ಲವೇ?

ಆದರೆ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿ ಸಾಮಾಜಿಕ ನ್ಯಾಯಕ್ಕೆ ತದ್ವಿರುದ್ಧವಾದ ಆಶಯ ಮತ್ತು ತತ್ವಗಳನ್ನು ಹೊಂದಿದೆ ಮತ್ತು ಸಾಮಾಜಿಕ ನ್ಯಾಯ ಎನ್ನುವುದು ಕೇವಲ ಅಭಿವೃದ್ಧಿ ಫಲಗಳ ವಿತರಣೆಗೆ ಸೀಮಿತವಾದ ತತ್ವವಲ್ಲ. ಅಭಿವೃದ್ಧಿ ಮಾದರಿಯಲ್ಲೂ ಅದು ಪ್ರತಿಫಲಿತವಾಗದಿದ್ದರೆ ವಾರಂಟಿಗೆ ಮುಂಚೆ ಗ್ಯಾರಂಟಿಗಳೂ ಕೂಡ ವಿಫಲವಾಗುತ್ತವೆ.

ಏಕೆಂದರೆ ಈ ಅಭಿವೃದ್ಧಿ ಮಾದರಿಯು ಕಾರ್ಪೊರೇಟ್ ಬಂಡವಾಳಕ್ಕೆ ಅಧಿಕ ಲಾಭ ತಂದುಕೊಂಡುವ ಅವಕಾಶಗಳನ್ನು ಸೃಷ್ಟಿಸಿ ಅವರ ಹೂಡಿಕೆಯನ್ನು ಉತ್ತೇಜಿಸಿ, ಕರ್ನಾಟಕದ ರಾಜ್ಯ ಜಿಡಿಪಿ ಹೆಚ್ಚಳವನ್ನು ಸಾಧಿಸುವ ಗುರಿಯನ್ನು ಹೊಂದಿದೆಯೇ ವಿನಾ ಉದ್ಯೋಗ ಸೃಷ್ಟಿಸುವ ಬಂಡವಾಳ ಹೂಡಿಕೆಯನ್ನಲ್ಲ. ಮೋದಿಯ ಅಭಿವೃದ್ಧಿ ಮಾದರಿಯಂತೆ ಕಾಂಗ್ರೆಸ್ನ ಅಭಿವೃದ್ಧಿ ಮಾದರಿಯ ಚಾಲಕ ಸ್ಥಾನದಲ್ಲಿರುವವರು ಸಹ ಕಾರ್ಪೊರೇಟ್ ಬಂಡವಾಳಶಾಹಿಗಳೇ ವಿನಾ ಈ ದೇಶದ ಬಹುಸಂಖ್ಯಾತರಾದ ಸಣ್ಣ ರೈತ, ರೈತ ಕೂಲಿ, ಕಾರ್ಮಿಕ, ಸಣ್ಣಪುಟ್ಟ ಉದ್ಯಮಿಗಳಲ್ಲ.

ಮೋದಿ ಅಭಿವೃದ್ಧಿ ಮಾದರಿಯು ವಿದೇಶದಿಂದ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸದ ಸೆಮಿ ಕಂಡಕ್ಟರ್, ಗ್ರೀನ್ ಹೈಡ್ರೋಜನ್ ಇನ್ನಿತ್ಯಾದಿ ಅಧಿಕ ಬಂಡವಾಳ ಮತ್ತು ಉನ್ನತ ತಂತ್ರಜ್ಞಾನ ಅವಲಂಬಿತ ಹೂಡಿಕೆಯನ್ನು ಅವಲಂಬಿಸಿದೆ ಮತ್ತು ಅದನ್ನೇ ದೇಶದ ಅಭಿವೃದ್ಧಿ ಎಂದು ಘೋಷಿಸುತ್ತದೆ. ಸಿದ್ದರಾಮಯ್ಯನವರ ಬಜೆಟ್ನಲ್ಲೂ ಔದ್ಯಮಿಕ ಅಭಿವೃದ್ಧಿ ಮಾದರಿ ಇದೇ ಆಗಿದೆ. ಜನಸಾಮಾನ್ಯರಿಗೆ ಬೇಕಾದ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವುದು ಕೇವಲ ಜನಪರ ದೂರದೃಷ್ಟಿ ಉಳ್ಳ ಸಾರ್ವಜನಿಕ ಹೂಡಿಕೆಗೆ ಅರ್ಥಾತ್ ಸರಕಾರಿ ಹೂಡಿಕೆಗೆ ಮಾತ್ರ. ಆ ರೀತಿ ಉದ್ಯೋಗ ಸೃಷ್ಟಿಯಾದರೆ ಮಾತ್ರ ಜನರ ಆದಾಯ ಹೆಚ್ಚುತ್ತದೆ. ಆಗ ಮಾತ್ರ ಜನರು ಗ್ಯಾರಂಟಿಗಳ ಅನಿವಾರ್ಯ ಊರುಗೋಲನ್ನು ಅವಲಂಬಿಸದೆ ತಮ್ಮ ಕಾಲಮೇಲೆ ತಾವು ನಿಲ್ಲಲು ಸಾಧ್ಯ. ಆದರೆ ಮೋದಿ ಸರಕಾರದಂತೆ ಸಿದ್ದರಾಮಯ್ಯನವರ ಸರಕಾರವೂ ಹೂಡಿಕೆ ಎಂದರೆ ಕೇವಲ ಖಾಸಗಿ ಹೂಡಿಕೆಯೆಂದೇ ಅರ್ಥಮಾಡಿಕೊಂಡಿದೆ. ಸಿದ್ದರಾಮಯ್ಯನವರ ಬಜೆಟ್ನುದ್ದಕೂ ಅದೇ ಪ್ರತಿಫಲನಗೊಂಡಿದೆ.

ಒಂದು ಜನಪರ ಮಾದರಿ ಸರಕಾರದ ಆರ್ಥಿಕ ದೃಷ್ಟಿಕೋನವು ಇಂದಿನ ಅಗತ್ಯ ಹಾಗೂ ಅನಿವಾರ್ಯವಾದ ಗ್ಯಾರಂಟಿಗಳನ್ನು ಖಾತರಿ ಮಾಡುತ್ತಲೇ ಗ್ಯಾರಂಟಿಗಳ ಅಗತ್ಯ ಬೀಳದ ಸಮಾಜ ಜನಪರ ಆರ್ಥಿಕತೆಯ ಸೃಷ್ಟಿಯನ್ನು ಒಳಗೊಂಡಿರಬೇಕು. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ನಾಡಿನ ಜಾಗೃತ ಜನಪರ ಚಿಂತಕರ ಸಭೆಯಲ್ಲಿ ಮಂತ್ರಿಗಳಾದ ಕೃಷ್ಣ ಬೈರೇಗೌಡರು ಸಮಸ್ಯೆ ಇರುವುದು ನವ ಉದಾರವಾದಿ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಲ್ಲಿ ಎಂಬುದನ್ನು ಖಡಾಖಂಡಿತವಾಗಿ ನಿರಾಕರಿಸಿದರು ಮತ್ತು ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಲಾಭದಿಂದ ವಂಚಿತರಾದ ಕೆಲವು ಸಮುದಾಯಗಳಿಗೆ ಗ್ಯಾರಂಟಿಗಳನ್ನು ಕೊಟ್ಟರೆ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅದೇ ರೀತಿ ಇತ್ತೀಚೆಗೆ ‘ದಿ ಹಿಂದೂ’ ಪತ್ರಿಕೆಯಲ್ಲಿ ಗ್ಯಾರಂಟಿಗಳನ್ನು ಸಮರ್ಥಿಸಿಕೊಳ್ಳುತ್ತಾ ಕಾಂಗ್ರೆಸ್ನ ಅಧಿಕೃತ ವಕ್ತಾರ ಹಾಗೂ ಅರ್ಥಶಾಸ್ತ್ರಜ್ಞ ಪ್ರವೀಣ್ ಚಕ್ರವರ್ತಿಯವರು ‘‘ನಿರುದ್ಯೋಗ ಎಂಬ ರೋಗ ನಿವಾರಣೆಗೆ ನಮ್ಮ ಆರ್ಥಿಕತೆಯಲ್ಲಿ ಪರಿಹಾರವಿಲ್ಲದಾಗ, ಗ್ಯಾರಂಟಿ ಎಂಬ ನೋವು ನಿವಾರಕ ಅಗತ್ಯ’’ ಎಂದು ಹೇಳುತ್ತಾ ಕಾರ್ಪೊರೇಟ್ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯ ಸೃಷ್ಟಿಯಾದ ನಿರುದ್ಯೋಗಕ್ಕೆ ಕಾಂಗ್ರೆಸ್ ಸರಕಾರದ ಬಳಿಯೂ ನಿವಾರಣೋಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

(https://www.thehindu.com/opinion/op-ed/do-subsidies-and-safety-nets-take-focus-away-from-generating-jobs/article67281155.ece)

ಹಾಗಿದ್ದಲ್ಲಿ ಇದು ಕರ್ನಾಟಕವು ಅಪೇಕ್ಷಿಸುವ ‘ಕರ್ನಾಟಕ ಮಾದರಿ’ ಹೇಗಾಗಲು ಸಾಧ್ಯ?

ವಾಸ್ತವವೆಂದರೆ ಈ ಬಗೆಯ ಮಾನವೀಯ ಮುಖವಾಡದ ಆದರೆ ಸಾರದಲ್ಲಿ ಕಾರ್ಪೊರೇಟ್ ಕ್ಯಾಪಿಟಲಿಸ್ಟ್ ಆರ್ಥಿಕತೆಗಳು ಇಂದಿನ ನವ ಉದಾರವಾದಿ ಯುಗದಲ್ಲಿ ವೆಲ್ಫೇರ್ಗಳನ್ನೂ ಕೂಡ ಗ್ಯಾರಂಟಿ ಮಾಡದೆ ಕ್ರಮೇಣವಾಗಿ ವಿಫಲವಾಗಿವೆ. ಅಪಾರ ಅಸಮಾನತೆಗಳನ್ನು ಮತ್ತು ಸಾಮಾಜಿಕ ಸಂಕ್ಷೋಭೆಗಳನ್ನು ಹುಟ್ಟಿಹಾಕಿವೆ. ಏಕೆಂದರೆ ಇಂದಿನ ನಿಯೋಲಿಬರಲ್ ಜಾಗತಿಕ ಬಂಡವಾಳಶಾಹಿ ಆರ್ಥ ವ್ಯವಸ್ಥೆಯಲ್ಲಿ ವೆಲ್ಫೇರ್ನ ಆಯಸ್ಸು ತುಂಬಾ ಕಡಿಮೆ. ಬದಲಿಗೆ ಅದರ ನಿಶ್ಚಿತ ವೈಫಲ್ಯದ ರಾಜಕೀಯ ಪರಿಣಾಮವಾಗಿ ಬಲಪಂಥೀಯ ಹಾಗೂ ನವ ಫ್ಯಾಶಿಸ್ಟ್ವಾದಿ ಆಳ್ವಿಕೆಗಳು ನೆಲೆಗೊಳ್ಳುತ್ತಿವೆ.

ಬಂಡವಾಳ ಶಾಹಿ ವ್ಯವಸ್ಥೆ ಬದಲಾಗದೆ ಜನಪರ, ಜನಹಿತ ಸಮಾಜ ಮಾದರಿ ಸಾಧ್ಯವಿಲ್ಲ.

ಮೇಲಾಗಿ, ಬಂಡವಾಳಶಾಹಿ ಅಭಿವೃದ್ಧಿ ಮಾದರಿಯು ಇಂದು ಜಾಗತಿಕ ತಾಪಮಾನ ಹೆಚ್ಚಳ ಇನ್ನಿತ್ಯಾದಿಗಳಿಗೆ ಕಾರಣವಾಗಿ, ವಾಯು ಮಂಡಲದಿಂದ ಹಿಡಿದು ಭೂಮಂಡಲದ ತನಕ ಜಗತ್ತಿನ ಅಸ್ತಿತ್ವಕ್ಕೆ ಸಂಚಕಾರ ತರುತ್ತಿರುವ ಸಂದರ್ಭದಲ್ಲಿ ಯಾವುದೇ ಜನಪರ ಮಾದರಿ ಅಥವಾ ಕರ್ನಾಟಕ ಮಾದರಿ, ಬಂಡವಾಳಶಾಹಿ ಮಾದರಿಯನ್ನು ನಿರಾಕರಿಸದೆ ಹೇಗೆ ತಾನೇ ಒಂದು ‘ಮಾದರಿಯಾಗಲು’ ಸಾಧ್ಯ?

ಬಿಜೆಪಿ ಸರಕಾರ ಎರಡೂ ಕೈಗಳಲ್ಲಿ ಕಾರ್ಪೊರೇಟ್ ಕತ್ತಿಗಳನ್ನು ಹಿಡಿದುಕೊಂಡು ಜನರ ಮೇಲೆ ಪ್ರಹಾರಗಳನ್ನು ನಡೆಸುತ್ತಿತ್ತು. ಈಗ ಕಾಂಗ್ರೆಸ್ ಸರಕಾರ ಒಂದು ಕೈಯಲ್ಲಿ ಕಾರ್ಪೊರೇಟ್ ಕತ್ತಿ ಮತ್ತೊಂದು ಕೈಯಲ್ಲಿ ಮುಲಾಮು (ಗ್ಯಾರಂಟಿ)ಗಳನ್ನು ಹಿಡಿದುಕೊಂಡಿದೆ. ಬಿಜೆಪಿಗಿಂತ ವಾಸಿ. ಆದರೆ ಸಂವಿಧಾನ ಕಾರ್ಪೊರೇಟ್ ಬಂಡವಾಳಶಾಹಿ ಪ್ರಹಾರದಿಂದ ಜನರನ್ನು ಸಂಪೂರ್ಣವಾಗಿ ಮುಕ್ತಮಾಡುವ ಜವಾಬ್ದಾರಿ ಮತ್ತು ಮಾದರಿಯನ್ನು ಪ್ರಭುತ್ವದ ಮುಂದಿಟ್ಟಿದೆಯಲ್ಲವೇ?

ಕರ್ನಾಟಕ ಮಾದರಿಯ ಚರ್ಚೆಯಲ್ಲಿ ಸಂವಿಧಾನ ಮಾದರಿಗೆ ಭಿನ್ನವಾದ ಮಾದರಿಗಳ ವೈಫಲ್ಯಗಳನ್ನು (ರಾಜಕೀಯ ಮತ್ತು ರಾಜಕೀಯ ಆರ್ಥಿಕತೆ ಬದಲಾಗದೆ ಯಾವ ಪಕ್ಷಗಳೂ ಇದಕ್ಕಿಂತ ಭಿನ್ನವಾದದ್ದನ್ನು ಮಾಡಲಾರವು ಎಂಬುದು ಬೇರೆ ವಿಚಾರ) ಚರ್ಚಿಸದೆ ಕೇವಲ ಗ್ಯಾರಂಟಿಗಳ ಸಕಾರಾತ್ಮಕ ಸಾಮಾಜಿಕ ಪರಿಣಾಮಗಳನ್ನು ಮಾತ್ರ ಪ್ರತಿಪಾದಿಸುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಿರಬಹುದು.

ಆದರೆ ಜನಪರ ಕರ್ನಾಟಕ ಮಾದರಿಯ ಅನ್ವೇಷಣೆ ಮಾಡುವವರು ಅಂತಹ ಮಿತಿಗಳನ್ನು ವಿಧಿಸಿಕೊಳ್ಳುವ ಅಗತ್ಯವಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News

ನಾಸ್ತಿಕ ಮದ