ದಿಲ್ಲಿಯಲ್ಲಿ ಎಎಪಿಯ ಹ್ಯಾಟ್ರಿಕ್ ಗೆಲುವು ಸಾಧ್ಯವೇ?
70 ಸದಸ್ಯ ಬಲದ ದಿಲ್ಲಿ ವಿಧಾನಸಭೆಗೆ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ರಾಜಕಾರಣ ಕುತೂಹಲ ಕೆರಳಿಸಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದೂ ದೇಶದ ರಾಜಧಾನಿಯಲ್ಲಿ ತನ್ನ ಅಧಿಕಾರ ಸಾಧಿಸಲಾಗದ ಹತಾಶೆಯಲ್ಲಿ ಬಿಜೆಪಿ ಇದೆ. ಎರಡೂವರೆ ದಶಕಗಳಿಗೂ ಹೆಚ್ಚು ಸಮಯದ ಅಧಿಕಾರದ ಹಸಿವಿನಿಂದ ಅದು ಬೇಯುತ್ತಿದೆ. ತನಿಖಾ ಏಜೆನ್ಸಿಗಳನ್ನು ಬಳಸಿ ಅದು ಎಎಪಿಯನ್ನು ಹೇಗೆಲ್ಲಾ ಹಣಿಯಲು ನೋಡಿತು ಎಂಬುದೂ ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗಲೇ ಎದುರಾಗುತ್ತಿರುವ ಮತ್ತೊಂದು ಚುನಾವಣೆ ದಿಲ್ಲಿಯತ್ತ ಎಲ್ಲರ ಗಮನ ಹರಿಯುವಂತೆ ಮಾಡಿದೆ.
ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹ್ಯಾಟ್ರಿಕ್ ಸಾಧಿಸಬಹುದೇ? ಪಕ್ಷ ತನ್ನ ತಳಮಟ್ಟದ ಆಕರ್ಷಣೆ, ಉತ್ತಮ ಆಡಳಿತ ದಾಖಲೆ ಮತ್ತು ವೈವಿಧ್ಯಮಯ ಮತದಾರರ ನೆಲೆಯೊಂದಿಗೆ ಹೊಂದಿರುವ ಪರಿಣಾಮಕಾರಿ ಸಂಪರ್ಕದಿಂದ ನಿರಂತರವಾಗಿ ಜನರ ಮನಸ್ಸನ್ನು ಗೆಲ್ಲುತಲೇ ಬಂದಿದೆ. ಎಎಪಿಯ ಚುನಾವಣಾ ನಿರೀಕ್ಷೆಗಳು ಪ್ರಬಲವಾಗಿವೆ. ಆದರೂ, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಎದುರಾಗಬಹುದಾದ ಸವಾಲುಗಳು ತ್ರಿಕೋನ ಸ್ಪರ್ಧೆಗೆ ಕಾರಣವಾಗಲಿವೆ. ಅದರ ಸಾಧ್ಯತೆ ಕೂಡ ಕುತೂಹಲಕಾರಿಯಾಗಿದೆ.
2014ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಲೋಕಸಭೆಗೆ ಪಾದಾರ್ಪಣೆ ಮಾಡಿದ ಒಂದು ದಶಕದ ನಂತರ, 2024ರ ಡಿಸೆಂಬರ್‌ನಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಕ್ಷಕ್ಕೆ ಕಡೆಗೂ ಹಳೆಯ ಸಂಸತ್ತಿನ ಕಟ್ಟಡದಲ್ಲಿ ಒಂದು ಕೊಠಡಿ ನೀಡಲಾಗಿದೆ. ಸಂವಿಧಾನ ಸದನದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 118ಬಿ ಒಂದು ಸಣ್ಣ ಗೆಲುವನ್ನು ಸೂಚಿಸುತ್ತದೆ. ಎಎಪಿ ಅಂತಿಮವಾಗಿ 8 ಸಂಸದರನ್ನು ಹೊಂದುವ ಮಾನದಂಡವನ್ನು ಪೂರೈಸಿದಂತಾಗಿದೆ. ಮೂವರು ಲೋಕಸಭೆ ಸದಸ್ಯರು ಮತ್ತು 10 ರಾಜ್ಯಸಭಾ ಸದಸ್ಯರು ಒಟ್ಟು 13 ಸಂಸದರನ್ನು ಹೊಂದುವ ಮೂಲಕ ಎಎಪಿ ಉತ್ಸಾಹಭರಿತವಾಗಿ ಕಾಣುತ್ತದೆ. ಆದರೂ, ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮಾಡು ಇಲ್ಲವೇ ಮಡಿ ಸನ್ನಿವೇಶ ಎಎಪಿ ಎದುರು ಇದೆ.
2025ರ ದಿಲ್ಲಿ ಚುನಾವಣೆ ಅಷ್ಟು ಸುಲಭದ್ದಾಗಿಲ್ಲ. ದಿಲ್ಲಿಯ ತನ್ನ ಭದ್ರಕೋಟೆ ಉಳಿಸಿಕೊಳ್ಳಲು ಹೋರಾಡುತ್ತಿರುವ ಎಎಪಿಯ ಮುಂದಿನ ರಾಜಕೀಯ ಹಾದಿ ಕಠಿಣವಿದೆ. ಅದರ ಉಚಿತ ಕೊಡುಗೆಗಳ ರಾಜಕೀಯ ಈ ಸಲವೂ ಕೈಹಿಡಿಯುವುದೇ ನೋಡಬೇಕಿದೆ. 2029ರ ಲೋಕಸಭಾ ಚುನಾವಣೆಗಳವರೆಗೆ ರಾಜಕೀಯವಾಗಿ ಪ್ರಸ್ತುತವಾಗಿರಲು ಹೋರಾಡುವ ಅನಿವಾರ್ಯತೆ ಅದರೆದುರು ಇದೆ.
2024 ಎಎಪಿಗೆ ಪ್ರಕ್ಷುಬ್ಧ ವರ್ಷವಾಗಿತ್ತು. ಕಳೆದ ಎರಡು ವರ್ಷಗಳಲ್ಲಿ, ಪಕ್ಷ ತನ್ನ ಉನ್ನತ ನಾಯಕರು ಜೈಲಿನಲ್ಲಿರುವುದನ್ನು ನೋಡಬೇಕಾಗಿ ಬಂದಿತ್ತು. ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಎಲ್ಲರೂ ಜೈಲು ಕಂಡು ಬಂದರು. 2024ರ ಲೋಕಸಭಾ ಚುನಾವಣೆ ಘೋಷಣೆಯಾದ ಕೇವಲ ಐದು ದಿನಗಳ ನಂತರ 2024ರ ಮಾರ್ಚ್ 21ರಂದು ಎಎಪಿ ಸಂಚಾಲಕ ಮತ್ತು ದಿಲ್ಲಿಯ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದಾಗ ಅದು ಎಎಪಿಗೆ ದೊಡ್ಡ ಬಿಕ್ಕಟ್ಟಿನ ಸ್ಥಿತಿಯಾಗಿತ್ತು. ದಿಲ್ಲಿಯಲ್ಲಿ ಕೇವಲ ಎರಡು ತಿಂಗಳ ನಂತರ ಮತದಾನ ನಡೆಯಬೇಕಿತ್ತು. ಆದರೆ ಅದರ ಉನ್ನತ ನಾಯಕರೆಲ್ಲ ಜೈಲಿನಲ್ಲಿದ್ದರು. ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಉಳಿಯಬೇಕೇ ಬೇಡವೇ ಎಂಬ ಔಚಿತ್ಯದ ಪ್ರಶ್ನೆಯ ಜೊತೆಗೆ, ಆಡಳಿತ ಅನನುಭವಿ ಸಚಿವರ ತಂಡದ ಕೈಗೆ ಬರುವ ದೊಡ್ಡ ಪ್ರಶ್ನೆಯೂ ಇತ್ತು. ದಿಲ್ಲಿ, ಪಂಜಾಬ್, ಹರ್ಯಾಣ, ಗೋವಾ ಮತ್ತು ಗುಜರಾತ್‌ಗಳಿಗೆ ಭಾರತದ ಮಿತ್ರ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ವ್ಯವಸ್ಥೆಯನ್ನು ಅಂತಿಮಗೊಳಿಸಲು ಎಎಪಿ ನೋಡುತ್ತಿದ್ದ ಸಮಯ ಅದಾಗಿತ್ತು. ಅಂತಿಮವಾಗಿ 2024ರ ಚುನಾವಣಾ ಫಲಿತಾಂಶಗಳು ಎಎಪಿ ಪಾಲಿಗೆ ಕಹಿಯಾಗಿದ್ದವು. ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದ ಎಎಪಿ ಒಂದೇ ಒಂದು ಸ್ಥಾನವನ್ನು ಕೂಡ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗೆ, 2015ರಿಂದ ಪಕ್ಷದ ಕೈಯಲ್ಲಿದ್ದ ದಿಲ್ಲಿಯಲ್ಲಿ ತೀವ್ರ ಮುಖಭಂಗವಾಗಿತ್ತು.
ಪಂಜಾಬ್‌ನಲ್ಲೂ ಲೋಕಸಭೆ ಚುನಾವಣೆ ವೇಳೆ 2022ರ ವಿಧಾನಸಭಾ ಚುನಾವಣೆಯಲ್ಲಿನ ನಿರ್ಣಾಯಕ ಗೆಲುವಿನ ಲಾಭವನ್ನು ಬಳಸಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಪಂಜಾಬ್‌ನಿಂದ ಇಬ್ಬರು ಸಂಸದರನ್ನು ಆಗಲೇ ಹೊಂದಿದ್ದ ಎಎಪಿ 2024ರಲ್ಲಿ ಆ ಸಾಲಿಗೆ ಮತ್ತೊಬ್ಬರನ್ನು ಸೇರಿಸಿಕೊಳ್ಳಲು ಮಾತ್ರವೇ ಸಾಧ್ಯವಾಯಿತು. ಆನಂತರದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿಯೂ ಎಎಪಿ ಕೇಜ್ರಿವಾಲ್ ಅವರ ಹೈ-ಪಿಚ್ ಪ್ರಚಾರದ ಹೊರತಾಗಿಯೂ ಯಾವುದೇ ಪರಿಣಾಮ ಬೀರಲು ವಿಫಲವಾಯಿತು. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ದೋಡಾ ವಿಧಾನಸಭಾ ಸ್ಥಾನದಿಂದ ಮೆಹರಾಜ್ ಮಲಿಕ್ ಗೆಲ್ಲುವುದರೊಂದಿಗೆ ಅಲ್ಲಿಯೂ ಎಎಪಿ ನೆಲೆಯೂರಿದಂತಾಗಿದೆ.
ಈಗ 2025 ಎಎಪಿ ಪಾಲಿಗೆ ನಿರ್ಣಾಯಕ ವರ್ಷವಾಗಲಿದೆ. ಇದು ಎಎಪಿಗೆ ಅತಿದೊಡ್ಡ ರಾಜಕೀಯ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ. ದಿಲ್ಲಿಯನ್ನು ಎಎಪಿ 10 ವರ್ಷಗಳಿಂದ ಆಳಿದೆ. ಸ್ಪಷ್ಟವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ತನ್ನ ಶಾಸಕರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಶಾಸಕರನ್ನು ಕೈಬಿಟ್ಟಿರುವುದರಿಂದ ಅದರ ನೆಗೆಟಿವ್ ಪರಿಣಾಮಗಳ ಬಗ್ಗೆಯೂ ಅದಕ್ಕೆ ತಿಳಿದಿದೆ. 2020ರ ಚುನಾವಣಾ ಪ್ರಣಾಳಿಕೆಯಲ್ಲಿ ಎಎಪಿ 10 ಭರವಸೆಗಳನ್ನು ನೀಡಿತ್ತು. ದಿಲ್ಲಿಯನ್ನು ಕಸ ಮತ್ತು ಭಗ್ನಾವಶೇಷ ಮುಕ್ತಗೊಳಿಸಲಾಗುವುದು, ಮಾಲಿನ್ಯ ತಗ್ಗಿಸಲಾಗುವುದು ಮತ್ತು ದಿಲ್ಲಿಯ ಕೊಳೆಗೇರಿ ನಿವಾಸಿಗಳಿಗೆ ಗೌರವಾನ್ವಿತ ಜೀವನಕ್ಕಾಗಿ ಮನೆಗಳನ್ನು ಒದಗಿಸಲಾಗುವುದು ಎಂಬ ಮೂರು ಭರವಸೆಗಳು ಇನ್ನೂ ಈಡೇರಿಸಿಲ್ಲ. ಈಗ ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳು, ಬೆಳೆಯುತ್ತಿರುವ ಕಸದ ರಾಶಿ, ಬಿಡಾಡಿ ದನಗಳ ಕಾಟ, ಹೆಚ್ಚುತ್ತಿರುವ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಇವೆಲ್ಲವೂ ಜನರನ್ನು ಕಾಡುತ್ತಿವೆ. 2022ರಲ್ಲಿ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯ ಗಳಿಸಿದ ನಂತರ, ಕಳಪೆ ನಾಗರಿಕ ಸೌಲಭ್ಯಗಳ ಜವಾಬ್ದಾರಿಯಿಂದ ಎಎಪಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಅದು ತನ್ನ ಭರವಸೆಗಳನ್ನು ಈಡೇರಿಸಬೇಕಾಗುತ್ತದೆ. 2020ರ ಚುನಾವಣೆಯಲ್ಲಿ 70 ವಿಧಾನಸಭಾ ಕ್ಷೇತ್ರಗಳ ಪೈಕಿ 62 ಕ್ಷೇತ್ರಗಳನ್ನು ಗೆದ್ದಿದ್ದರೂ, ಈ ಬಾರಿ ಎಎಪಿ ಅನಿಶ್ಚಿತತೆ ಎದುರಿಸುತ್ತಿದೆ. ಅದರ ರಾಜಕೀಯ ಉಳಿವು 2025ರ ಆರಂಭದಲ್ಲಿನ ಈ ಅಗ್ನಿಪರೀಕ್ಷೆಯ ಮೇಲೆ ಅವಲಂಬಿತವಾಗಿದೆ.
ರಾಜಕೀಯಕ್ಕೆ ಎಎಪಿ ಪ್ರವೇಶ ಕುರಿತು ಒಮ್ಮೆ ಹೊರಳಿ ನೋಡುವುದಾದರೆ, 2013ರ ದಿಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಚುನಾವಣಾ ಚೊಚ್ಚಲ ಪ್ರವೇಶ ಮಾಡಿದ ಎಎಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಸರಕಾರವನ್ನು ರಚಿಸುವಲ್ಲಿ ಯಶಸ್ವಿಯಾಯಿತು. ಕೇಜ್ರಿವಾಲ್ ದಿಲ್ಲಿಯ ಮುಖ್ಯಮಂತ್ರಿಯಾದರು. ಆದರೆ ಕಾಂಗ್ರೆಸ್ ಬೆಂಬಲದ ಕೊರತೆಯಿಂದಾಗಿ ಜನಲೋಕಪಾಲ್ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲು ಸಾಧ್ಯವಾಗದೆ, 49 ದಿನಗಳ ನಂತರ ಅವರ ಸರಕಾರ ರಾಜೀನಾಮೆ ನೀಡಿತು. ದಿಲ್ಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆಯ ನಂತರ 2015ರ ಚುನಾವಣೆಯಲ್ಲಿ ಎಎಪಿ ವಿಧಾನಸಭೆಯ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿತು. ಕೇಜ್ರಿವಾಲ್ ಮತ್ತೆ ದಿಲ್ಲಿಯ ಮುಖ್ಯಮಂತ್ರಿಯಾದರು. 2020ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ, 70 ರಲ್ಲಿ 62 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಿತು.
ದಿಲ್ಲಿಯ ಹೊರಗೆ, 2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗಳಿಸಿದ ಎಎಪಿ, ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದಾಗ ಅದರ ಜನಪ್ರಿಯತೆ ಹೆಚ್ಚಾಯಿತು. 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 92 ಸ್ಥಾನಗಳನ್ನು ಗೆದ್ದು ಸರಕಾರ ರಚಿಸಿತು. ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾದರು. 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜಕೀಯದ ಮೂರನೇ ರಂಗವಾಗಿ ಎಎಪಿ ಹೊರಹೊಮ್ಮಿತು. ಗೋವಾದಲ್ಲಿಯೂ ಎಎಪಿಗೆ ರಾಜ್ಯ ಪಕ್ಷದ ಸ್ಥಾನಮಾನ ಸಿಕ್ಕಿದೆ. 2024ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿಯೂ ಅದು ತನ್ನ ಖಾತೆ ತೆರೆದಿದೆ. ಛತ್ತೀಸ್‌ಗಡ, ಹರ್ಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ, ಉತ್ತರಪ್ರದೇಶಗಳಲ್ಲಿ ಎಎಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಲೇ ಇದ್ದರೂ ಈವರೆಗೆ ಖಾತೆ ತೆರೆಯಲು ಆಗಿಲ್ಲ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಎದುರು ದಿಟ್ಟತನದಿಂದ ನಿಂತು ಅಧಿಕಾರದಲ್ಲಿರುವ ಎಎಪಿಗೆ ದಿಲ್ಲಿ ಗದ್ದುಗೆ ನಿರಾಳವಾದದ್ದಾಗಿಯೇನೂ ಉಳಿದಿಲ್ಲ. ಮೊದಲನೆಯದಾಗಿ, ಅದು ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಉಪಟಳವನ್ನು ಎದುರಿಸುತ್ತಲೇ ಬಂದಿದೆ. ಎರಡನೆಯದಾಗಿ, ಸರಕಾರಕ್ಕೆ ಅದರ ಅಧಿಕಾರಿಗಳೇ ವೈರಿಗಳು. ಮೂರನೆಯದಾಗಿ, ಎಎಪಿ ವಿರುದ್ಧ ಮುಗಿಬೀಳುವ ಬಿಜೆಪಿಗೆ ಅದರ ಎಲ್‌ಜಿ ಮತ್ತು ಅಧಿಕಾರಿಗಳೇ ಅಸ್ತ್ರ.
ದಿಲ್ಲಿ ಸರಕಾರದ ದೈನಂದಿನ ವ್ಯವಹಾರಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಎಎಪಿ ಸರಕಾರ ಪದೇ ಪದೇ ಆರೋಪಿಸಿದೆ. ಸರಕಾರ ಮತ್ತು ಎಲ್‌ಜಿ ನಡುವಿನ ಸಂಬಂಧ ಹದಗೆಟ್ಟಿದ್ದು, ಅಬಕಾರಿ ನೀತಿ, ಫಿನ್‌ಲ್ಯಾಂಡ್‌ನಲ್ಲಿ ಶಿಕ್ಷಕರ ತರಬೇತಿ, ಉಚಿತ ಯೋಗ ತರಗತಿಗಳು, ಮೊಹಲ್ಲಾ ಚಿಕಿತ್ಸಾಲಯಗಳು, ಅಧಿಕಾರಿಗಳ ವರ್ಗಾವಣೆ, ನಿಧಿ ಮಂಜೂರು, ಭ್ರಷ್ಟಾಚಾರ ನಿಗ್ರಹ ಶಾಖೆಯ ಮೇಲಿನ ನಿಯಂತ್ರಣ ಮತ್ತು ಗ್ರಾಹಕರಿಗೆ ವಿದ್ಯುತ್ ಸಬ್ಸಿಡಿ ವಿಸ್ತರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಆಗಾಗ ಘರ್ಷಣೆಗಳು ಉಂಟಾದವು. ದಿಲ್ಲಿ ಸರಕಾರದ ಚಿಂತಕರ ಚಾವಡಿಯ ಮಾಜಿ ಉಪಾಧ್ಯಕ್ಷೆ ಜಾಸ್ಮಿನ್ ಶಾ ಅವರ ಕರ್ತವ್ಯಗಳನ್ನು ರಾಜಕೀಯ ಉದ್ದೇಶಗಳಿಗಾಗಿ ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಎಲ್‌ಜಿ ಕಚೇರಿ ನಿರ್ಬಂಧಿಸಿತು. ದಿಲ್ಲಿ ಅಬಕಾರಿ ನೀತಿ 2021-22ರ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಎಲ್‌ಜಿ ಶಿಫಾರಸು ಮಾಡಿದಾಗ ಸಂಬಂಧಗಳು ಉಲ್ಬಣಗೊಂಡವು. ವಾಹನ ಮಾಲಿನ್ಯ ನಿಗ್ರಹಿಸುವ ಗುರಿ ಹೊಂದಿದ್ದ ರೆಡ್ ಲೈಟ್ ಆನ್ ಗಾಡಿ ಆಫ್ ಮತ್ತು ವಿದ್ಯುತ್ ಸಬ್ಸಿಡಿ ವಿಸ್ತರಣೆ ಸೇರಿದಂತೆ ಎಲ್ಲದಕ್ಕೂ ಎಲ್‌ಜಿ ತಡೆಯಾಗುತ್ತಿದ್ದಾರೆ, ವಿಳಂಬ ಮಾಡುತ್ತಿದ್ದಾರೆ. ಅದರಲ್ಲಿ ನೀರು ಸರಬರಾಜು ಹೆಚ್ಚಿಸಲು ಮತ್ತು ಯಮುನಾ ನದಿಯನ್ನು ಸ್ವಚ್ಛಗೊಳಿಸಲು ದಿಲ್ಲಿ ಜಲ ಮಂಡಳಿಯ ಯೋಜನೆಗಳು ಸೇರಿವೆ ಎಂದು ಎಎಪಿ ಆರೋಪಿಸಿತು. ಮೊಹಲ್ಲಾ ಚಿಕಿತ್ಸಾಲಯಗಳಲ್ಲಿನ ವಿದ್ಯುತ್ ಬಿಲ್‌ಗಳು, ಬಾಡಿಗೆ, ಲ್ಯಾಬ್ ಪರೀಕ್ಷೆಗಳು ಮತ್ತು ವೈದ್ಯರ ಸಂಬಳ ಪಾವತಿಗೆ ಲೆಫ್ಟಿನೆಂಟ್ ಗವರ್ನರ್ ಅವರ ಆದೇಶದ ಮೇರೆಗೆ ಹಣಕಾಸು ಇಲಾಖೆ ಹಣವನ್ನು ಮಂಜೂರು ಮಾಡಿಲ್ಲ ಎಂದು ಅದು ಆರೋಪಿಸಿದೆ.
ಈಗ ಚುನಾವಣೆ ಎದುರು ಇರುವ ಹೊತ್ತಿನಲ್ಲಿ ಇನ್ನಷ್ಟು ತೊಡಕುಗಳು ಕೂಡ ಎಎಪಿಗೆ ಎದುರಾಗಿವೆ. ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ಮತ್ತು ಮತದಾರರಿಗೆ ಬಿಜೆಪಿಯಿಂದ ಹಣ ಹಂಚಿಕೆ ಕುರಿತು ಎಎಪಿ ಮಾಡಿರುವ ಆರೋಪಗಳು ದೊಡ್ಡ ಗದ್ದಲ ಎಬ್ಬಿಸಿದವು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಮತದಾರರ ಪಟ್ಟಿಯಿಂದ ಸಾಮೂಹಿಕವಾಗಿ ಹೆಸರುಗಳನ್ನು ಅಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಆ ಬಗ್ಗೆ 3,000 ಪುಟಗಳ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿಯೂ ಹೇಳಿದ್ದರು. ಬಡವರು, ದಲಿತರು, ಅದರಲ್ಲೂ ಕೊಳೆಗೇರಿ ನಿವಾಸಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಪ್ರತಿಯೊಂದು ಮತವೂ ಮೌಲಿಕವಾಗಿದೆ. ಆದರೆ ಮತದಾರರ ಹೆಸರು ಅಳಿಸುವ ಮೂಲಕ, ಅವರ ಹಕ್ಕನ್ನೇ ಕಸಿಯಲಾಗುತ್ತಿದೆ ಎಂದು ಆರೋಪಿಸಿದ್ದರು. ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ಅಳಿಸುವ ಪ್ರಕ್ರಿಯೆ ಕೂಡಲೇ ನಿಲ್ಲಬೇಕು ಮತ್ತು ಅದಕ್ಕಾಗಿ ಅರ್ಜಿ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಾಗಬೇಕು ಎಂದು ಅವರು ಆಗ್ರಹಿಸಿದ್ದರು. ಅದಾದ ಬಳಿಕ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಒಳಗೊಳ್ಳುವಿಕೆ ಮೂಲಕ ಸಂಪೂರ್ಣ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ದಿಲ್ಲಿಯಲ್ಲಿರುವ ತನ್ನ ಚುನಾವಣಾ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ ಎಂದು ವರದಿಯಾಗಿತ್ತು. ಆದರೆ ಎಎಪಿ ಆರೋಪವನ್ನು ಬಿಜೆಪಿ ನಿರಾಕರಿಸಿತ್ತು.
ಬದಲಾಗಿ, ದಿಲ್ಲಿಯಲ್ಲಿ ತಂಗಿರುವ ಅಕ್ರಮ ರೊಹಿಂಗ್ಯಾ ಮತ್ತು ಬಾಂಗ್ಲಾದೇಶೀಯರನ್ನು ಚುನಾವಣೆಯಲ್ಲಿ ಮತಬ್ಯಾಂಕ್‌ಗಳಾಗಿ ಬಳಸಿಕೊಳ್ಳಲು ದಾಖಲೆಗಳು ಮತ್ತು ಹಣದ ಮೂಲಕ ಎಎಪಿ ಮತ್ತು ಕೇಜ್ರಿವಾಲ್ ಸಹಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.
ಈ ನಡುವೆ, ಎಎಪಿ ಚುನಾವಣಾ ಭರವಸೆಗಳ ಬಗ್ಗೆ ದಿಲ್ಲಿ ಸರಕಾರದ ಇಲಾಖೆಗಳೇ ನೋಟಿಸ್ ಹೊರಡಿಸಿದ್ದು ವಿಚಿತ್ರವಾದರೂ ಸತ್ಯ. ಅಲ್ಲದೆ, ಎಎಪಿ ಸರಕಾರದ ಸಿಎಂ ಆತಿಶಿ ಅವರನ್ನು ಬಂಧಿಸುವ ಸಂಚು ನಡೆದಿದೆ ಎಂಬ ಆರೋಪವನ್ನೂ ಅರವಿಂದ ಕೇಜ್ರಿವಾಲ್ ಮಾಡಿದರು. ಎಎಪಿ ತನ್ನ ಚುನಾವಣಾ ಭರವಸೆಗಳನ್ನಾಗಿ ಎರಡು ಯೋಜನೆಗಳನ್ನು ಘೋಷಿಸಿತ್ತು. ಒಂದು, ಸಂಜೀವನಿ ಯೋಜನೆ. ಇದರ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ಸಿಗಲಿದೆ. 60 ವರ್ಷ ಮೇಲ್ಪಟ್ಟ ಎಲ್ಲರಿಗೂ ದಿಲ್ಲಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಒದಗಿಸಲಾಗುವುದು ಎಂಬುದು ಎಎಪಿ ಭರವಸೆಯಾಗಿದೆ. ಇನ್ನು ಎರಡನೇ ಯೋಜನೆ ಮಹಿಳಾ ಸಮ್ಮಾನ್. 18 ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರಿಗೆ ಮಾಸಿಕ 1,000 ರೂ. ನೀಡುವ ಯೋಜನೆ ಈಗಾಗಲೇ ಇದೆ. ಚುನಾವಣೆಯಲ್ಲಿ ಎಎಪಿ ಗೆದ್ದರೆ ಈ ಮೊತ್ತವನ್ನು 2,100 ರೂ.ಗೆ ಏರಿಸಲಾಗುವುದು ಎಂದು ಎಎಪಿ ಘೋಷಿಸಿದೆ. ಈ ಎರಡೂ ಯೋಜನೆಗಳಿಗಾಗಿ ಜನರು ಮುಗಿಬಿದ್ದು ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳುವುದೂ ಶುರುವಾಗಿದೆ.
ಆದರೆ, ಎಎಪಿ ಮಾಡಿರುವ ಘೋಷಣೆಗಳ ವಿರುದ್ಧ ದಿಲ್ಲಿ ಸರಕಾರದ ಎರಡು ಸಚಿವಾಲಯಗಳೇ ನೋಟಿಸ್ ಹೊರಡಿಸಿವೆ. ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಾರ್ವಜನಿಕ ತಿಳುವಳಿಕೆ ನೋಟಿಸ್ ಪ್ರಕಟಿಸಿದವು. ಅಂತಹ ಯಾವುದೇ ಯೋಜನೆಗಳು ಅಸ್ತಿತ್ವದಲ್ಲಿ ಇಲ್ಲ. ಅಂತಹ ಪ್ರಚಾರವನ್ನು ನಂಬಬೇಡಿ ಮತ್ತು ನೋಂದಣಿ ಹೆಸರಲ್ಲಿ ಮೋಸ ಹೋಗಬೇಡಿ ಎಂದು ನೋಟಿಸ್ ಎಚ್ಚರಿಸಿತ್ತು.
ಇದರ ಬೆನ್ನಲ್ಲೇ, ಬಿಜೆಪಿ ನಿರ್ದೇಶನದ ಮೇರೆಗೆ ಸಿಬಿಐ, ಈ.ಡಿ., ಐಟಿ ಇಲಾಖೆ ಅಧಿಕಾರಿಗಳ ಸಭೆ ನಡೆದಿದೆ. ಆತಿಶಿ ಬಂಧನಕ್ಕೆ ಮೇಲಿನವರಿಂದ ಸೂಚನೆಗಳು ಬಂದಿರುವ ಮಾಹಿತಿ ಲಭ್ಯವಾಗಿದೆ. ಆತಿಶಿ ಅವರ ವಿರುದ್ಧ ಸಾರಿಗೆ ಇಲಾಖೆಯಲ್ಲಿ ನಕಲಿ ಪ್ರಕರಣ ರೂಪಿಸುವ ಯತ್ನ ನಡೆದಿದೆ ಎಂದೆಲ್ಲ ಕೇಜ್ರಿವಾಲ್ ಆರೋಪಿಸಿದ್ದರು.
ಅರವಿಂದ ಕೇಜ್ರಿವಾಲ್ ಅವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಡಿಸೆಂಬರ್ 30ರಂದು ಪತ್ರ ಬರೆದಿದ್ದಾರೆ. ದಿಲ್ಲಿಯಲ್ಲಿ ಮತಗಳನ್ನು ಖರೀದಿಸಲು ಬಿಜೆಪಿ ನಾಯಕರು ಹಣ ಹಂಚುತ್ತಿದ್ದಾರೆ. ಇದನ್ನು ಆರೆಸ್ಸೆಸ್ ಬೆಂಬಲಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ದಿಲ್ಲಿಯಲ್ಲಿ ದಲಿತರು ಮತ್ತು ಪೂರ್ವಾಂಚಲಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಅಳಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಸರಿ ಎಂದು ಆರೆಸ್ಸೆಸ್‌ಗೆ ಅನಿಸುತ್ತಿದೆಯೇ? ಎಂಬ ಪ್ರಶ್ನೆಯನ್ನೂ ಅವರು ಹಾಕಿದ್ದಾರೆ. ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಆರೆಸ್ಸೆಸ್ ಮತ ಕೇಳಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದಕ್ಕೂ ಮೊದಲು, ಕಳೆದ ಕೆಲವು ದಿನಗಳಲ್ಲಿ ಬಿಜೆಪಿ ಮಾಡಿರುವ ತಪ್ಪುಗಳನ್ನು ಆರೆಸ್ಸೆಸ್ ಬೆಂಬಲಿಸುತ್ತದೆಯೇ ಎಂಬುದನ್ನು ಜನರು ನಿಮ್ಮಿಂದ ತಿಳಿದುಕೊಳ್ಳಲು ಬಯಸಿದ್ದಾರೆ ಎಂದು ಕೇಳಿದ್ದಾರೆ. ಬಿಜೆಪಿ ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ? ಎಂಬ ಪ್ರಶ್ನೆಯನ್ನೂ ಭಾಗವತ್ ಎದುರು ಕೇಜ್ರಿವಾಲ್ ಇಟ್ಟಿದ್ದಾರೆ.
ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಎಎಪಿಗೆ ತೊಡಕೆನ್ನಿಸುವ ಸಂಗತಿಗಳು ಏನು?:
ಒಂದು, ಚುನಾವಣೆ ಹೊತ್ತಲ್ಲಿಯೇ ಎಎಪಿ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಎರಡು, ಎಎಪಿ ಏಕಾಂಗಿ ಸ್ಪರ್ಧೆ ಕೂಡ ಸ್ವತಃ ಅದಕ್ಕೇ ಸವಾಲಾಗಬಹುದು
ಎಎಪಿ ಮಾಜಿ ಶಾಸಕ ಮತ್ತು ಪಕ್ಷದಲ್ಲಿ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದ ನಾಯಕ ಸುಖ್ಬೀರ್ ದಲಾಲ್ ಜೈನ್ ಬಿಜೆಪಿ ಸೇರಿದ್ದಾರೆ. ಗುರುದ್ವಾರ ನಿರ್ವಹಣಾ ಸಮಿತಿಯ ಕಾರ್ಯಕಾರಿ ಸದಸ್ಯ ಬಲ್ಬೀರ್ ಸಿಂಗ್, ಮುಂಡ್ಕಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆಯಿಂದಾಗಿ ಎಎಪಿ ತೊರೆದಿಲ್ಲ. ಬದಲಾಗಿ ಬಿಜೆಪಿ ನೀತಿಯಲ್ಲಿ ವಿಶ್ವಾಸ ಹುಟ್ಟಿ ಈ ನಿರ್ಧಾರ ನಡೆಸಿರುವುದಾಗಿ ಅವರು ಹೇಳಿದ್ದಾರೆ. ಅರವಿಂದ ಕೇಜ್ರಿವಾಲ್ ಅವರ ಶೀಶಾ ಮಹಲ್ ಕಟ್ಟಿದಾಗಿನಿಂದ ಎಎಪಿ ಭ್ರಷ್ಟಾಚಾರ ಮಿತಿ ಮೀರಿದೆ. ಎಎಪಿ ಸರಕಾರ ಅಭಿವೃದ್ಧಿ ಮತ್ತು ಗ್ರಾಮೀಣ ಪ್ರದೇಶವನ್ನು ನಿರ್ಲಕ್ಷಿಸಿ, ಭ್ರಷ್ಟಾಚಾರವನ್ನೇ ಆದ್ಯತೆಯಾಗಿ ಪರಿಗಣಿಸಿದೆ ಎಂದು ಅವರು ಹರಿಹಾಯ್ದಿದ್ದಾರೆ. ಪ್ರಧಾನಿ ಸಿಖ್ ಸಮುದಾಯಕ್ಕೆ ಸಾಕಷ್ಟು ಕೆಲಸ ಮಾಡಿರುವುದು ಬಿಜೆಪಿ ಸೇರಲು ತನಗೆ ಪ್ರೇರಣೆಯಾಯಿತು ಎಂದಿದ್ದಾರೆ. ಚುನಾವಣೆ ಹೊತ್ತಲ್ಲಿ ಎಎಪಿಯ ಅನೇಕ ನಾಯಕರು ಪಕ್ಷ ತೊರೆದು ಬಿಜೆಪಿ ಸೇರುವ ಮೂಲಕ ಎಎಪಿಗೆ ಆಘಾತ ಮೂಡಿಸಿರುವುದಂತೂ ಸುಳ್ಳಲ್ಲ. ಕೈಲಾಶ್ ಗೆಹ್ಲೋಟ್ ಮತ್ತು ಹರ್ಶರಣ್ ಸಿಂಗ್ ಬಲ್ಲಿ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ದಿಲ್ಲಿ ಚುನಾವಣೆಯಲ್ಲಿ ಎಎಪಿ ಸ್ವತಂತ್ರ ಸ್ಪರ್ಧೆ ಕೂಡ ಮತ್ತೊಂದು ಗಮನಿಸಬೇಕಾದ ಅಂಶ. ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಕೇಜ್ರಿವಾಲ್ ಘೋಷಿಸಿದ್ದು, ಮೈತ್ರಿ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ದಿಲ್ಲಿಯಲ್ಲಿ ಈ ಸಲ ಮತ್ತೆ ಎಎಪಿ ಮೆರೆಯಲು ಸಾಧ್ಯವಾಗುವುದೇ?:
ಇದು ಬಹಳ ದೊಡ್ಡ ಪ್ರಶ್ನೆ. ಯಾಕೆಂದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದೂ, ರಾಜಧಾನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಾಗದ ಬಿಜೆಪಿ ಹತಾಶೆ ಈ ಬಾರಿ ಎಎಪಿಗೆ ದೊಡ್ಡ ಸವಾಲು. ಕೇಜ್ರಿವಾಲ್ ಅವರ ಜನಪ್ರಿಯತೆ, ಪ್ರಮುಖ ಕಾರ್ಯಕ್ರಮಗಳು, ಪಕ್ಷದ ಚುನಾವಣಾ ಪ್ರಚಾರದ ಪ್ರಮುಖ ಚಾಲಕ ಶಕ್ತಿಯಾಗಲಿವೆ. ಆದರೆ ಅವೆಲ್ಲವೂ ಅಂತಿಮವಾಗಿ ಮತ ತರಲಿವೆಯೇ ಎಂಬುದು ಈ ಸಲ ಸುಲಭದ ಪ್ರಶ್ನೆಯಾಗಿ ಉಳಿದಿಲ್ಲ. ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹ್ಯಾಟ್ರಿಕ್ ಸಾಧಿಸಬಹುದೇ? ಪಕ್ಷ ತನ್ನ ತಳಮಟ್ಟದ ಆಕರ್ಷಣೆ, ಬಲವಾದ ಆಡಳಿತ ದಾಖಲೆ ಮತ್ತು ವೈವಿಧ್ಯಮಯ ಮತದಾರರ ನೆಲೆಗೆ ಪರಿಣಾಮಕಾರಿ ಸಂಪರ್ಕದಿಂದ ನಿರಂತರವಾಗಿ ಹೆಚ್ಚುಗಾರಿಕೆ ಉಳಿಸಿಕೊಂಡೇ ಬಂದಿದೆ.
ಎಎಪಿಯ ಚುನಾವಣಾ ನಿರೀಕ್ಷೆಗಳು ಪ್ರಬಲವಾಗಿವೆ. ಆದರೂ, ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಎದುರಾಗಿರುವ ಸವಾಲುಗಳು ತ್ರಿಕೋನ ಸ್ಪರ್ಧೆಯ ಸನ್ನಿವೇಶ ಸೃಷ್ಟಿಸಿವೆ. ಇದರ ಹೊರತಾಗಿಯೂ,
1. ಸ್ಥಳೀಯ ನಾಯಕತ್ವ ಮತ್ತು ಆಡಳಿತ ದಾಖಲೆಯೊಂದಿಗೆ ಎಎಪಿ ಬಲವಾದ ನೆಲೆಯನ್ನು ಹೊಂದಿದೆ.
2. ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ನೀರು ಮತ್ತು ವಿದ್ಯುತ್‌ನಂತಹ ಸಬ್ಸಿಡಿ ಸೌಲಭ್ಯಗಳ ಮೇಲೆ ಪಕ್ಷ ಗಮನ ಹರಿಸಿರುವುದು, ವಿಶೇಷವಾಗಿ ನಗರ ಪ್ರದೇಶದ ಬಡವರು ಮತ್ತು ಮಧ್ಯಮ ವರ್ಗದವರಲ್ಲಿ ಅದರ ಪಾಲಿಗೆ ನಿಷ್ಠಾವಂತ ಮತದಾರರನ್ನು ಸೃಷ್ಟಿಸಿದೆ.
3. ದಿಲ್ಲಿಯ ಸರಕಾರಿ ಶಾಲೆಗಳ ಪರಿವರ್ತನೆ ಮತ್ತು ಮೊಹಲ್ಲಾ ಚಿಕಿತ್ಸಾಲಯಗಳ ಯೋಜನೆ ವ್ಯಾಪಕ ಮೆಚ್ಚುಗೆ ಗಳಿಸಿವೆ.
4. ಸಾರ್ವಜನಿಕ ಸೇವೆಗಳಲ್ಲಿನ ಈ ಪ್ರಮುಖ ಕಾರ್ಯಕ್ರಮಗಳು ಮತದಾರರು ಅದರ ಜೊತೆಗಿರುವ ಸಾಧ್ಯತೆಯನ್ನು ಹೆಚ್ಚಿಸಿವೆ ಮತ್ತು ಎಎಪಿಯನ್ನು ಅದರ ಪ್ರತಿಸ್ಪರ್ಧಿಗಳಿಂದ ಭಿನ್ನವಾಗಿಸಿವೆ.
5. ದಿಲ್ಲಿಯ ಎಲ್ಲಾ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆಯನ್ನು ನೀಡುವ ಅರವಿಂದ ಕೇಜ್ರಿವಾಲ್ ಅವರ ಇತ್ತೀಚಿನ ಘೋಷಣೆಯಾದ ಸಂಜೀವನಿ ಯೋಜನೆಯನ್ನು ಒಂದು ಮಾಸ್ಟರ್‌ಸ್ಟ್ರೋಕ್ ಎಂದೇ ಹೇಳಲಾಗುತ್ತಿದೆ.
6. ಹಿರಿಯ ನಾಗರಿಕ ಮತದಾರರ ಬೆಂಬಲ ಹೆಚ್ಚಲು ಈ ಯೋಜನೆ ನೆರವಾಗಬಹುದು ಎಂದು ಅನೇಕರು ಭಾವಿಸುತ್ತಾರೆ.
7. ಕೆಲ ಸಮಯದ ಜೈಲು ವಾಸದ ನಂತರವೂ ಕೇಜ್ರಿವಾಲ್ ಅವರ ಜನಪ್ರಿಯತೆಗೆ ಯಾವುದೇ ಧಕ್ಕೆಯಾಗಿಲ್ಲ.
8. ಅನೇಕರು ಅವರನ್ನು ತಮ್ಮ ಕಲ್ಯಾಣಕ್ಕೆ ನಿರಂತರವಾಗಿ ಆದ್ಯತೆ ನೀಡಿದ ಸಮರ್ಪಿತ ನಾಯಕ ಎಂದೇ ಭಾವಿಸಿದ್ದಾರೆ.
9. ಬಿಜೆಪಿ ಮತ್ತು ಕಾಂಗ್ರೆಸ್‌ನ ವಿಶಾಲ ರಾಷ್ಟ್ರೀಯ ಅಜೆಂಡಾಗಳಿಗೆ ವಿರುದ್ಧವಾಗಿ ಕೇಜ್ರಿವಾಲ್ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ.
10. ಪಕ್ಷದ ಸುಸಂಘಟಿತ ಕಾರ್ಯಕರ್ತರ ಪಡೆ ಮತ್ತು ಮನೆ ಮನೆ ಪ್ರಚಾರಕ್ಕೆ ಹೆಚ್ಚಿನ ಗಮನ ಕೊಟ್ಟಿರುವುದು ಉತ್ತಮ ಪರಿಣಾಮ ತರಬಲ್ಲದು ಎನ್ನಲಾಗುತ್ತದೆ.
11. ತಂತ್ರಜ್ಞಾನ ಮತ್ತು ಡೇಟಾ ಚಾಲಿತ ಸಂವಹನ ತಂತ್ರಗಳ ಬಳಕೆಯಲ್ಲಿಯೂ ಎಎಪಿ ಮುಂದಿದೆ.
ಆದರೆ ಬಿಜೆಪಿಯ ಸವಾಲನ್ನು ಅದು ಅಷ್ಟು ಸುಲಭವಾಗಿ ಕಡೆಗಣಿಸುವ ಹಾಗಿಲ್ಲ. 2013ರಿಂದ ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಎಎಪಿ ನಿರಂತರವಾಗಿ ಬಿಜೆಪಿಗಿಂತ ಹೆಚ್ಚಿನ ಸಾಧನೆ ಮಾಡುತ್ತಿರುವುದು ಹೌದಾದರೂ, ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಇರುವ ಪ್ರಾಬಲ್ಯ ಮತ್ತದರ ಸಂಪನ್ಮೂಲಗಳಿಂದಾಗಿ ಅದು ಪ್ರಬಲ ಎದುರಾಳಿ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕೂಡ ಬಿಜೆಪಿಗೆ ಇರುವ ದೊಡ್ಡ ಬಲವಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಇರುವ ಸಾಮರ್ಥ್ಯ ಕೂಡ ಗಮನಾರ್ಹ ಸವಾಲನ್ನು ಒಡ್ಡಲಿದೆ. ದಿಲ್ಲಿಯ ಮತದಾರರನ್ನು ಆಕರ್ಷಿಸಲು ಕಾನೂನು ಮತ್ತು ಸುವ್ಯವಸ್ಥೆ, ನಗರ ಮೂಲಸೌಕರ್ಯ ಮತ್ತು ರಾಷ್ಟ್ರೀಯ ಭದ್ರತೆಯಂತಹ ವಿಷಯಗಳನ್ನು ಬಳಸಿಕೊಳ್ಳಲು ಬಿಜೆಪಿ ಯತ್ನಿಸಬಹುದು.