ಟ್ರಂಪ್ ಗೆಲ್ಲಲು ಕಾರಣಗಳೇನು?
ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ಇದನ್ನು ಐತಿಹಾಸಿಕ ಗೆಲುವು ಎಂದೇ ಬಣ್ಣಿಸಲಾಗುತ್ತಿದೆ. ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ದೊಡ್ಡ ಗೆಲುವು ಹೇಗೆ ಸಾಧ್ಯವಾಯಿತು? ಟ್ರಂಪ್ ಅವರ ಎಲ್ಲ ಅತಿರೇಕಗಳು, ವೈಫಲ್ಯಗಳ ಹೊರತಾಗಿಯೂ ಅವರಿಗೆ ಇಷ್ಟು ದೊಡ್ಡ ಜಯ ಸಿಕ್ಕಿದ್ದು ಹೇಗೆ? ಟ್ರಂಪ್ ಅಳವಡಿಸಿಕೊಂಡ ಚುನಾವಣಾ ರಣತಂತ್ರವೇನು? ಸ್ವಿಂಗ್ ಸ್ಟೇಟ್ಸ್ ಅಥವಾ ಫಲಿತಾಂಶ ನಿರ್ಧರಿಸುವ ಪ್ರಮುಖ ಏಳು ರಾಜ್ಯಗಳಲ್ಲೂ ಟ್ರಂಪ್ ಗೆದ್ದಿದ್ದು ಹೇಗೆ? ಕಮಲಾ ಹ್ಯಾರಿಸ್ ಸೋಲಿಗೆ ಕಾರಣವಾದ ಅಂಶಗಳೇನು? ಜನಪ್ರಿಯ ಮತಗಳಲ್ಲೂ ಟ್ರಂಪ್‌ಗೆ ಗೆಲುವಾಗಲು ಕಾರಣಗಳೇನು?
ಅಮೆರಿಕದ ಹೊಸ ಅಧ್ಯಕ್ಷರಾಗಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರ 2ನೇ ಅವಧಿಯ ದರ್ಬಾರ್ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಶ್ವೇತ ಭವನಕ್ಕೆ ಅವರ ಪುನರಾಗಮನದ ಮೂಲಕ 130 ವರ್ಷಗಳ ನಂತರ ಅಮೆರಿಕದಲ್ಲಿ ಮಾಜಿ ಅಧ್ಯಕ್ಷರೊಬ್ಬರು ಅಧಿಕಾರಕ್ಕೆ ಮರಳಿದ ಐತಿಹಾಸಿಕ ವಿದ್ಯಮಾನ ಘಟಿಸಿದೆ. 78 ವರ್ಷ ವಯಸ್ಸಿನ ಟ್ರಂಪ್ ಈ ಹುದ್ದೆಗೇರುತ್ತಿರುವ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
ವಿವರವಾದ ಚುನಾವಣಾ ಫಲಿತಾಂಶಗಳನ್ನು ಪ್ರತೀ ರಾಜ್ಯದಲ್ಲಿ ಅಧಿಕೃತವಾಗಿ ದೃಢೀಕರಿಸಲು ಇನ್ನೂ ಕೆಲ ದಿನಗಳು ಅಥವಾ ವಾರಗಳೇ ಆಗಬಹುದು. ಆದರೂ, ಟ್ರಂಪ್ ಅವರು ವಿಜಯಿ ಎಂಬುದು ಸ್ಪಷ್ಟ. ಅದರಲ್ಲಿ ಯಾವುದೇ ಸಂಶಯವಿಲ್ಲ. ವಿಶ್ವವಿಡೀ ಇದನ್ನು ಒಪ್ಪಿಕೊಂಡಿದೆ ಮತ್ತು ಟ್ರಂಪ್ 2.0 ಹೇಗೆ ಇರಲಿದೆ ಎಂಬುದರ ಕುರಿತು ವಿಶ್ಲೇಷಣೆಗಳು ಆರಂಭಗೊಂಡಿವೆ.
ಸಾಂಪ್ರದಾಯಿಕ ಡೆಮಾಕ್ರಟ್ ಭದ್ರಕೋಟೆಗಳಾಗಿರುವ ಅನೇಕ ರಾಜ್ಯಗಳನ್ನೂ ಟ್ರಂಪ್ ಗೆದ್ದುಬಿಟ್ಟಿದ್ದಾರೆ. ಮತದಾನ ಮುಗಿದು, ಎಣಿಕೆ ಮುಂದುವರಿಯುತ್ತಿದ್ದಂತೆ ಇಲೆಕ್ಟೋರಲ್ ಕಾಲೇಜ್ ಮತದಾನದ ನಕ್ಷೆಯಲ್ಲಿನ ನೀಲಿ ಬಣ್ಣವನ್ನು ಆಕ್ರಮಿಸುತ್ತ ಕ್ರಮೇಣ ಕೆಂಪು ಬಣ್ಣ ವ್ಯಾಪಿಸತೊಡಗಿತು ಎಂದು ವಿಶ್ಲೇಷಣೆಗಳು ಬಣ್ಣಿಸ ತೊಡಗಿದ್ದವು. ಈಗ ಅದೆಲ್ಲಾ ಸ್ಪಷ್ಟವಾಗಿದೆ. ಕೆಂಪು ರಾರಾಜಿಸುತ್ತಿದೆ. ನೀಲಿ ಮೌನವಾಗಿದೆ. ಕೆಂಪು ಬಣ್ಣ ರಿಪಬ್ಲಿಕನ್ ಅನ್ನೂ, ನೀಲಿ ಡೆಮಾಕ್ರಟ್‌ಗಳನ್ನೂ ಸೂಚಿಸುತ್ತದೆ.
ಟ್ರಂಪ್ ಅವರು ಅಧಿಕಾರಕ್ಕೆ ಅಗತ್ಯವಿರುವ 270 ಚುನಾವಣಾ ಮತಗಳ ಗೆರೆಯನ್ನು ದಾಟುತ್ತಿದ್ದಂತೆ ಆರಂಭಿಕ ಮುನ್ನಡೆಯಲ್ಲಿದ್ದ ಡೆಮಾಕ್ರಟಿಕ್ ಪಾಲಿನ ಭರವಸೆಗಳು ಭಗ್ನಗೊಂಡಿದ್ದವು. ಗೆದ್ದರೆ ಆ ಹುದ್ದೆ ಏರಿದ ಮೊದಲ ಮಹಿಳೆಯಾಗಲಿದ್ದ ಕಮಲಾ ಹ್ಯಾರಿಸ್ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
2020ರ ಚುನಾವಣೆಯ ಸಮಯದಲ್ಲಿ, ಚುನಾವಣಾ ನಕ್ಷೆ ಎಣಿಕೆಯ ಆರಂಭಿಕ ಗಂಟೆಗಳಲ್ಲಿ ಕೆಂಪು ಬಣ್ಣದ್ದಾಗಿತ್ತು. ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುವ ರಾಜ್ಯಗಳಲ್ಲಿನ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು ಟ್ರಂಪ್ ಆರಂಭಿಕ ವಿಜಯ ಪಡೆದಿದ್ದರು. ಮೇಲ್-ಇನ್ ಮತಪತ್ರಗಳನ್ನು ಎಣಿಸಿದ ನಂತರ ಫಲಿತಾಂಶಗಳು ಮುಕ್ತಾಯಗೊಂಡು, ಡೆಮಾಕ್ರಟ್ ಜೋ ಬೈಡನ್ ವಿಜೇತರಾಗಿ ಹೊರಹೊಮ್ಮಿದ್ದರು. ಅಂಚೆ ಮತಗಳ ಎಣಿಕೆಯ ನಂತರ ಅವರು ಪೆನ್ಸಿಲ್ವೇನಿಯಾ, ಜಾರ್ಜಿಯಾ, ಮಿಚಿಗನ್ ಮತ್ತು ವಿಸ್ಕಾನ್ಸಿನ್ ಅನ್ನು ಮರಳಿ ಗೆದ್ದಿರುವುದು ಸ್ಪಷ್ಟವಾಗಿತ್ತು.
ಡೆಮಾಕ್ರಟಿಕ್ ಪ್ರಾಬಲ್ಯವಿರುವ ಕೆಲವು ರಾಜ್ಯಗಳಲ್ಲಿ 2016ರ ಚುನಾವಣೆಯಲ್ಲೂ ರಿಪಬ್ಲಿಕನ್ನರು ಗೆದ್ದಿದ್ದರು.
ಈ ಸಲವಂತೂ ರಿಪಬ್ಲಿಕನ್ ಗೆಲುವು ಮೊದಲು ಮರೀಚಿಕೆ ಎಂಬಂತೆ ಗೋಚರವಾಗಿ, ಕಡೆಗೆ ಅಧ್ಯಕ್ಷ ಸ್ಥಾನ ಪಡೆಯಲು ಅಗತ್ಯವಿರುವ 270ನ್ನೂ ದಾಟಿ ಬಹಳ ಮುಂದಕ್ಕೆ ಹೋಗುವು ದರೊಂದಿಗೆ, ಫಲಿತಾಂಶ ಏರಪೇರಾಗುವುದರ ಸಂಭವವನ್ನೇ ಇಲ್ಲವಾಗಿಸಿತು. ಬ್ಲೂ ವಾಲ್ ಅನ್ನು ಟ್ರಂಪ್ ಮತ್ತೊಮ್ಮೆ ಕೆಡವಿಬಿಟ್ಟಿದ್ದರು.
ಏನಿದು ಬ್ಲೂ ವಾಲ್ ರಾಜ್ಯ?:
ಬ್ಲೂ ವಾಲ್ ರಾಜ್ಯ ಅಮೆರಿಕದಲ್ಲಿ ಡೆಮಾಕ್ರಟ್‌ಗಳ ಭದ್ರಕೋಟೆ. ಅದು ಗೆಲ್ಲುತ್ತಲೇ ಬಂದಿರುವ ರಾಜ್ಯ. ಸ್ಪಷ್ಟವಾಗಿ ಹೇಳಬೇಕೆಂದರೆ, ಅವು 1992ರಿಂದ 2012ರ ಅವಧಿಯಲ್ಲಿನ ಪ್ರತೀ ಚುನಾವಣೆಯಲ್ಲಿ ಡೆಮಾಕ್ರಟ್‌ಗಳಿಗೆ ಮತ ಹಾಕಿದ ರಾಜ್ಯಗಳಾಗಿವೆ. ಅವುಗಳೆಂದರೆ, ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ಇಲಿನಾಯ್ಸ್, ಪೆನ್ಸಿಲ್ವೇನಿಯಾ, ಮಿಚಿಗನ್, ನ್ಯೂಜೆರ್ಸಿ, ವಾಶಿಂಗ್ಟನ್, ಮ್ಯಾಸಚೂಸೆಟ್ಸ್, ಮೇರಿಲ್ಯಾಂಡ್, ಮಿನ್ನೆಸೋಟ, ವಿಸ್ಕಾನ್ಸಿನ್, ಒರೆಗಾನ್, ಕನೆಕ್ಟಿಕಟ್, ರೋಡ್ ಐಲ್ಯಾಂಡ್, ಡೆಲವೇರ್ ಮತ್ತು ವರ್ಮೊಂಟ್ ಹಾಗೂ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ.
2016ರಲ್ಲಿ ಟ್ರಂಪ್ ಈ ಬ್ಲೂ ವಾಲ್ ಭೇದಿಸಿ, ಡೆಮಾಕ್ರಟ್ ಹಿಲರಿ ಕ್ಲಿಂಟನ್ ವಿರುದ್ಧ ಚುನಾವಣೆಯಲ್ಲಿ ಆ ರಾಜ್ಯಗಳಲ್ಲಿ ಒಂದು ಪಾಲು ಗೆದ್ದಿದ್ದರು. ಅಂಥವುಗಳಲ್ಲಿ ಪೆನ್ಸಿಲ್ವೇನಿಯಾ, ವಿಸ್ಕಾನ್ಸಿನ್ ಮತ್ತು ಮಿಚಿಗನ್ ಸೇರಿದ್ದವು. 2020ರಲ್ಲಿ ಅಧ್ಯಕ್ಷ ಜೋ ಬೈಡೆನ್ ಈ ಎಲ್ಲಾ ಮೂರು ರಾಜ್ಯಗಳನ್ನು ಮರಳಿ ಗೆಲ್ಲುವ ಮೂಲಕ ಬ್ಲೂ ವಾಲ್ ಅನ್ನು ಮರು ಸ್ಥಾಪಿಸಿದ್ದರು. ಈ ಸಲ ಆ ಮೂರೂ ನಿರ್ಣಾಯಕ ರಾಜ್ಯಗಳನ್ನು ಟ್ರಂಪ್ ಮತ್ತೆ ಗೆದ್ದರು. ಅದರೊಂದಿಗೆ ಕಮಲಾ ಹ್ಯಾರಿಸ್ ಗೆಲುವಿನ ಆಸೆ ಕಮರಿಹೋಯಿತು. ಕಮಲಾ ಹ್ಯಾರಿಸ್ ಅವರನ್ನು ಹಿಂದಿಕ್ಕಿ ಟ್ರಂಪ್ ಗೆಲುವನ್ನು ಆ ಮೂರೂ ರಾಜ್ಯಗಳು ಬರೆದವು.
ಸ್ವಿಂಗ್ ರಾಜ್ಯಗಳು ಯಾವುವು?:
ರಾಜ್ಯವ್ಯಾಪಿ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಥವಾ ರಿಪಬ್ಲಿಕನ್ ಅಭ್ಯರ್ಥಿ ಗೆಲ್ಲಬಹುದಾದ ರಾಜ್ಯಗಳಿವು. ಈ ರಾಜ್ಯಗಳು ಸಾಂಪ್ರದಾಯಿಕವಾಗಿ ನೀಲಿ ಡೆಮಾಕ್ರಟ್ ಅಥವಾ ಕೆಂಪು ರಿಪಬ್ಲಿಕನ್ನರನ್ನು ಬೆಂಬಲಿಸುವುದಿಲ್ಲವಾದ್ದರಿಂದ, ನೇರಳೆ ರಾಜ್ಯಗಳು ಎಂದು ಕರೆಯಲಾಗುತ್ತದೆ. ಅಮೆರಿಕದ ಜನಸಂಖ್ಯೆಯ ಕೇವಲ ಐದನೇ ಒಂದು ಭಾಗದಷ್ಟನ್ನು ಹೊಂದಿರುವ ಈ ರಾಜ್ಯಗಳು ಪ್ರತೀ ಚುನಾವಣೆಯಲ್ಲೂ ಮುಂದಿನ ಅಧ್ಯಕ್ಷರನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ಆ ಏಳು ರಾಜ್ಯಗಳೆಂದರೆ, ಪೆನ್ಸಿಲ್ವೇನಿಯಾ (19 ಇಲೆಕ್ಟೋರಲ್ ಕಾಲೇಜ್ ಮತಗಳು), ನೆವಾಡಾ (6 ಮತಗಳು), ಉತ್ತರ ಕೆರೊಲಿನಾ (16 ಮತಗಳು), ಜಾರ್ಜಿಯಾ (16 ಮತಗಳು), ಅರಿಜೋನಾ (11 ಮತಗಳು), ಮಿಚಿಗನ್ (15 ಮತಗಳು), ವಿಸ್ಕಾನ್ಸಿನ್ (10 ಮತಗಳು).
ಈಗಾಗಲೇ ಟ್ರಂಪ್ ವಿಸ್ಕಾನ್ಸಿನ್, ಮಿಚಿಗನ್, ಪೆನ್ಸಿಲ್ವೇನಿಯಾ, ಉತ್ತರ ಕೆರೋಲಿನಾ, ಜಾರ್ಜಿಯಾ, ನೆವಾಡಾ ಮತ್ತು ಅರಿಜೋನಾವನ್ನು ತಮ್ಮದಾಗಿಸಿಕೊಂಡಿದ್ದಾರೆ. ಎಲ್ಲಾ ಸ್ವಿಂಗ್ ಸ್ಟೇಟ್ಸ್‌ನಲ್ಲಿ ಜಯ ಸಾಧಿಸಿದ್ದಾರೆ.
ಸ್ವಿಂಗ್ ರಾಜ್ಯಗಳಲ್ಲಿನ ಮತ ಚಲಾವಣೆ ಸ್ವರೂಪ:
ಪೆನ್ಸಿಲ್ವೇನಿಯಾ: ಟ್ರಂಪ್ ಈ ಸಲ ಡೆಮಾಕ್ರಟ್‌ಗಳಿಂದ ಈ ನಿರ್ಣಾಯಕ ರಾಜ್ಯವನ್ನು ತಮ್ಮ ವಶ ಮಾಡಿಕೊಂಡರು. ಟ್ರಂಪ್ ಪಡೆದ ಜನಪ್ರಿಯ ಮತಗಳು ಶೇ. 50.9, ಕಮಲಾ ಹ್ಯಾರಿಸ್ ಪಡೆದ ಜನಪ್ರಿಯ ಮತಗಳು ಶೇ.48.2
ವೈವಿಧ್ಯಮಯ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿರುವ ನಗರ, ಉಪನಗರ ಮತ್ತು ಗ್ರಾಮೀಣ ಮತದಾರರ ಮಿಶ್ರಣವನ್ನು ಈ ರಾಜ್ಯದಲ್ಲಿ ಕಾಣಬಹುದು.
ಉತ್ತರ ಕೆರೋಲಿನಾ: ಆಗ್ನೇಯ ರಾಜ್ಯದಲ್ಲೂ ಅಧ್ಯಕ್ಷ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಟ್ರಂಪ್ ಗೆದ್ದಿದ್ದಾರೆ.
ಟ್ರಂಪ್ ಪಡೆದ ಜನಪ್ರಿಯ ಮತಗಳು ಶೇ.51.1, ಕಮಲಾ ಹ್ಯಾರಿಸ್ ಪಡೆದ ಜನಪ್ರಿಯ ಮತಗಳು ಶೇ.47.7
ಈ ರಾಜ್ಯ ಟೆಕ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಯುವ ವೃತ್ತಿಪರರನ್ನು ಹೊಂದಿದೆ. ಹೆಚ್ಚು ವೈವಿಧ್ಯಮಯ ಜನಸಂಖ್ಯೆ ಇಲ್ಲಿದೆ.
ಜಾರ್ಜಿಯಾ: ಇದು ಸಾಂಪ್ರದಾಯಿಕ ರಿಪಬ್ಲಿಕನ್ ಭದ್ರಕೋಟೆ. ಟ್ರಂಪ್ ಈ ರಾಜ್ಯವನ್ನು ಡೆಮಾಕ್ರಟ್‌ಗಳಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಟ್ರಂಪ್ ಪಡೆದ ಜನಪ್ರಿಯ ಮತಗಳು ಶೇ.50.8, ಕಮಲಾ ಹ್ಯಾರಿಸ್ ಪಡೆದ ಜನಪ್ರಿಯ ಮತಗಳು ಶೇ.48.5
ಅಲ್ಪಸಂಖ್ಯಾತರು ಮತ್ತು ಕಿರಿಯ ಮತದಾರರಲ್ಲಿ ಗಮನಾರ್ಹ ಹೆಚ್ಚಳದೊಂದಿಗೆ ಈ ರಾಜ್ಯ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮತ್ತು ವೈವಿಧ್ಯಮಯ ಜನಸಮುದಾಯಕ್ಕಾಗಿ ಹೆಸರಾಗಿದೆ.
ನೆವಾಡಾ: ಟ್ರಂಪ್ ಈ ರಾಜ್ಯವನ್ನು ತಮ್ಮ ಕಡೆಗೆ ತಿರುಗಿಸಿಕೊಂಡಿದ್ಧಾರೆ. ಡೆಮಾಕ್ರಟ್‌ಗಳ ದಶಕದಷ್ಟು ಹಳೆಯ ಪ್ರಾಬಲ್ಯದಿಂದ ದೂರವಾಗಿಸಿದ್ದಾರೆ.
ಟ್ರಂಪ್ ಪಡೆದ ಜನಪ್ರಿಯ ಮತಗಳು ಶೇ.51.5, ಕಮಲಾ ಹ್ಯಾರಿಸ್ ಪಡೆದ ಜನಪ್ರಿಯ ಮತಗಳು ಶೇ.46.8
ನೆವಾಡಾದ ಮತದಾರರು ಪ್ರಸಕ್ತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗಿಂತ ಮೊದಲು ಡೆಮಾಕ್ರಟ್ ಒಬಾಮಾ ಮತ್ತು ಕ್ಲಿಂಟನ್ ಅವರನ್ನು ಬೆಂಬಲಿಸಿದ್ದರು.
ಈ ಪಶ್ಚಿಮ ಅಮೆರಿಕ ರಾಜ್ಯ ದೊಡ್ಡ ಪ್ರಮಾಣದಲ್ಲಿ ಹಿಸ್ಪಾನಿಕ್ ಸಮುದಾಯದ ಜನಸಂಖ್ಯೆಯನ್ನು ಹೊಂದಿದೆ.
ಬೆಳೆಯುತ್ತಿರುವ ಏಶ್ಯನ್ ಅಮೆರಿಕನ್ ಸಮುದಾಯ ಮತ್ತು ಕಾರ್ಮಿಕ ಸಂಘಗಳಿಂದ ಪ್ರಬಲವಾಗಿದೆ. ಈ ಗುಂಪುಗಳು ಸಾಮಾನ್ಯವಾಗಿ ಡೆಮಾಕ್ರಟ್‌ಗಳ ಕಡೆಗೆ ವಾಲುತ್ತವೆ. ಆದರೆ ಈ ಸಲ ರಾಜಕೀಯವಾಗಿ ಇದು ಬದಲಾಗಿದೆ.
ಅರಿರೆನಾ: ವಲಸಿಗರ ಬಿಕ್ಕಟ್ಟಿರುವ ಮೆಕ್ಸಿಕೊ ಗಡಿ ರಾಜ್ಯ ಇದು. ಇಲ್ಲಿ ಟ್ರಂಪ್ ಪಡೆದ ಜನಪ್ರಿಯ ಮತಗಳು ಶೇ.50.9, ಕಮಲಾ ಹ್ಯಾರಿಸ್ ಪಡೆದ ಜನಪ್ರಿಯ ಮತಗಳು ಶೇ.48.3
2000ದಿಂದ 2016ರವರೆಗೆ ರಿಪಬ್ಲಿಕನ್ ಅಭ್ಯರ್ಥಿಗಳನ್ನು ದೃಢವಾಗಿ ಬೆಂಬಲಿಸಿದ ನಂತರ, 2020ರಲ್ಲಿ ಕೇವಲ ಶೇ.0.3 ಮತಗಳ ಅಂತರದಿಂದ ಬೈಡನ್ ಕಡೆಗೆ ತಿರುಗಿತ್ತು. ಈ ಸಲ ಟ್ರಂಪ್ ಮುನ್ನಡೆಯಲ್ಲಿದ್ದಾರೆ.
ವಿಸ್ಕಾನ್ಸಿನ್: 2016ರಲ್ಲಿ ಟ್ರಂಪ್ ಮತ್ತು 2020ರಲ್ಲಿ ಬೈಡನ್ ಇಲ್ಲಿ ತೀರಾ ಕಡಿಮೆ ಅಂತರದ ಗೆಲುವು ಸಾಧಿಸಿದ್ದರು. ಈ ಸಲ ಮತ್ತೆ ರಾಜ್ಯ ಟ್ರಂಪ್ ಪಾಲಾಗಿದೆ.
ಟ್ರಂಪ್ ಪಡೆದ ಜನಪ್ರಿಯ ಮತಗಳು ಶೇ.51, ಕಮಲಾ ಹ್ಯಾರಿಸ್ ಪಡೆದ ಜನಪ್ರಿಯ ಮತಗಳು ಶೇ.47.6
ಮಿಚಿಗನ್: ಟ್ರಂಪ್ ಈ ಸಾಂಪ್ರದಾಯಿಕ ಡೆಮಾಕ್ರಟಿಕ್ ಭದ್ರಕೋಟೆಯನ್ನು ಗೆದ್ದಿದ್ದಾರೆ.
ಟ್ರಂಪ್ ಪಡೆದ ಜನಪ್ರಿಯ ಮತಗಳು ಶೇ.51.1, ಕಮಲಾ ಹ್ಯಾರಿಸ್ ಪಡೆದ ಜನಪ್ರಿಯ ಮತಗಳು ಶೇ.47.2
ಡೆಮಾಕ್ರಟಿಕ್ ಬ್ಲೂವಾಲ್‌ನ ಭಾಗವಾಗಿದ್ದ ಮಿಚಿಗನ್ 2016ರಲ್ಲಿಯೂ ಟ್ರಂಪ್ ಪಾಲಾಗಿತ್ತು. 2020ರಲ್ಲಿ ಬೈಡೆನ್ ಗೆದ್ದಿದ್ದರು. ಈ ರಾಜ್ಯ ಉತ್ಪಾದನಾ ಉದ್ಯೋಗ ನಷ್ಟಗಳು ಮತ್ತು ಉದಾರೀಕರಣಗೊಂಡ ಜಾಗತಿಕ ವ್ಯಾಪಾರ ನೀತಿಗಳಿಂದ ಈಚಿನ ವರ್ಷಗಳಲ್ಲಿ ಹಾನಿ ಎದುರಿಸುತ್ತಿದೆ.
ಟ್ರಂಪ್ ಬ್ಲೂ ವಾಲ್ ಭೇದಿಸಿದ್ದು ಹೇಗೆ?
ಮೊದಲನೆಯದಾಗಿ, ಜನರ ಮನಸ್ಸಿನಲ್ಲೇನಿದೆ ಎಂಬುದನ್ನು ಅಲಕ್ಷಿಸುವುದರ ಜೊತೆಗೆ ಆರ್ಥಿಕ ಸಮಸ್ಯೆಗಳನ್ನು ಸರಕಾರ ಸರಿಯಾಗಿ ನಿರ್ವಹಿಸದೇ ಇದ್ದದ್ದು ಟ್ರಂಪ್ ಗೆಲುವಿಗೆ ಕಾರಣವಾಯಿತು ಎಂದು ವಿಶ್ಲೇಷಕರು ಗುರುತಿಸುತ್ತಾರೆ.
ಆದರೆ ಅಮೆರಿಕದಲ್ಲಿ ಬೈಡನ್ ಅವಧಿಯಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ ಎಂದು ರಿಪಬ್ಲಿಕನ್ ಪಕ್ಷ ಹಾಗೂ ಡೊನಾಲ್ಡ್ ಟ್ರಂಪ್ ತಂಡ ವ್ಯವಸ್ಥಿತ ಅಪಪ್ರಚಾರ ನಡೆಸಿತ್ತು ಎಂದೂ ಹೇಳಲಾಗುತ್ತಿದೆ. ಕಾರ್ಮಿಕ ವರ್ಗದ ಮತದಾರರನ್ನು ಆಕರ್ಷಿಸುವ ಆರ್ಥಿಕ ನೀತಿಗಳಂತಹ ವಿಷಯಗಳನ್ನು ಬಿಟ್ಟು ಗರ್ಭಪಾತ ವಿಷಯಕ್ಕೆ ಅನಗತ್ಯವಾಗಿ ಹೆಚ್ಚು ಗಮನ ಹರಿಸಿದ್ದರಿಂದ ಡೆಮಾಕ್ರಟ್‌ಗಳು ಮೂರು ಬ್ಲೂ ವಾಲ್ ರಾಜ್ಯಗಳಲ್ಲಿ ಹಿನ್ನಡೆ ಕಾಣುವಂತಾಗಿದೆ. ಎಡಿಸನ್ ರಿಸರ್ಚ್ ನಡೆಸಿದ ಸಮೀಕ್ಷೆಯ ಪ್ರಕಾರ, ಆರ್ಥಿಕತೆಯನ್ನು ನಿಭಾಯಿಸುವ ವಿಚಾರಕ್ಕೆ ಕಮಲಾ ಹ್ಯಾರಿಸ್ ಅವರನ್ನು ನಂಬಿದ್ದವರು ಶೇ.47ರಷ್ಟು ಮತದಾರರು ಮಾತ್ರ. ಆದರೆ ಶೇ.51ರಷ್ಟು ಮತದಾರರು ಈ ವಿಚಾರದಲ್ಲಿ ಟ್ರಂಪ್ ಮೇಲೆ ವಿಶ್ವಾಸ ಇರಿಸಿದ್ದರು. ಎಕ್ಸಿಟ್ ಪೋಲ್ ಪ್ರಕಾರ, ಶೇ.31ರಷ್ಟು ಮತದಾರರು ತಮ್ಮ ಮತದಾನದ ನಿರ್ಧಾರದ ಹಿಂದೆ ಆರ್ಥಿಕತೆ ವಿಷಯವಿದೆ ಎಂದಿದ್ದರು. ಆದರೆ ಗರ್ಭಪಾತ ವಿಷಯವನ್ನು ಉಲ್ಲೇಖಿಸಿದವರು ಶೇ.14ರಷ್ಟು ಮಾತ್ರ. ಕಮಲಾ ಹ್ಯಾರಿಸ್ ಪ್ರಚಾರ, ಮಧ್ಯಮ ವರ್ಗಕ್ಕೆ ತನ್ನ ನೀತಿಗಳು ಹೇಗೆ ಸಹಾಯಕ ಎಂಬುದನ್ನು ವಿವರಿಸುವಲ್ಲಿ ವಿಫಲವಾಯಿತು ಎಂಬುದನ್ನು ಕೂಡ ವಿಶ್ಲೇಷಕರು ಗಮನಿಸಿದ್ದಾರೆ.
ಎರಡನೆಯದಾಗಿ, ಈ ಚುನಾವಣೆಯನ್ನು ಎದುರಿಸುವಾಗ ಡೆಮಾಕ್ರಟ್‌ಗಳು ಮಾಡಿದ ಹಲವಾರು ತಪ್ಪುಗಳಲ್ಲಿ ಉಪಾಧ್ಯಕ್ಷ ಅಭ್ಯರ್ಥಿಯ ಆಯ್ಕೆಯಲ್ಲಿನ ಯಡವಟ್ಟು ಕೂಡ ಒಂದು ಎನ್ನುತ್ತಿದ್ದಾರೆ ವಿಶ್ಲೇಷಕರು. ಪೆನ್ಸಿಲ್ವೇನಿಯಾ ಗವರ್ನರ್ ಜೋಶ್ ಶಾಪಿರೊ ಬದಲು ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಹ್ಯಾರಿಸ್ ಅವರ ದೊಡ್ಡ ಪ್ರಮಾದವೆನ್ನಲಾಗಿದೆ. ಹ್ಯಾರಿಸ್‌ಗೆ ಯಾವುದೇ ಸ್ವಿಂಗ್ ರಾಜ್ಯಗಳನ್ನು ಗೆಲ್ಲಲು ವಾಲ್ಜ್ ನೆರವಾಗಲಿಲ್ಲ ಎಂಬುದು ಇದಕ್ಕೆ ಕಾರಣ. ಮಿನ್ನೇಸೋಟ 1976ರಿಂದಲೂ ಪ್ರತೀ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷವನ್ನು ಗೆಲ್ಲಿಸುತ್ತ ಬಂದ ರಾಜ್ಯ. ಹಾಗಾಗಿ, ಹ್ಯಾರಿಸ್ ಪೆನ್ಸಿಲ್ವೇನಿಯಾ ಕಡೆ ಗಮನ ಕೊಡುವುದು ಅಗತ್ಯವಾಗಿತ್ತು.
ಮೂರನೆಯದಾಗಿ, ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಕಾರ್ಮಿಕ ವರ್ಗದ ಮತದಾರರನ್ನು ಮುಟ್ಟುವಲ್ಲಿ ಕಮಲಾ ಹ್ಯಾರಿಸ್ ವಿಫಲರಾದದ್ದು ಟ್ರಂಪ್‌ಗೆ ವರದಾನವಾಯಿತು. ಹ್ಯಾರಿಸ್ ಪೆನ್ಸಿಲ್ವೇನಿಯಾವನ್ನು ಕಳೆದುಕೊಳ್ಳಲು ಕಾರ್ಮಿಕ ವರ್ಗದ ಮತದಾರರನ್ನು ಅಲಕ್ಷಿಸಿದ್ದೇ ಕಾರಣ. ಗರ್ಭಪಾತ ವಿಷಯ ಮಹಿಳೆಯರ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ತರುತ್ತದೆ ಮತ್ತು ತಮ್ಮ ಗೆಲುವಿಗೆ ನೆರವಾಗುತ್ತದೆ ಎಂದೇ ಅವರು ಭಾವಿಸಿದ್ದರು. ರಿಪಬ್ಲಿಕನ್ನರಿಗಿಂತ ಡೆಮಾಕ್ರಟ್‌ಗಳು ಮಹಿಳಾ ಹಕ್ಕುಗಳ ವಿಷಯಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದರು. ಆದರೂ ಎಕ್ಸಿಟ್ ಪೋಲ್ ಪ್ರಕಾರ, ಹ್ಯಾರಿಸ್ ಅವರಿಗೆ ಸಿಕ್ಕಿರುವುದು ರಾಜ್ಯದ ಶೇ.54ರಷ್ಟು ಮಹಿಳೆಯರ ಬೆಂಬಲ. 2020ರಲ್ಲಿ ಬೈಡನ್ ಇಲ್ಲಿ ಶೇ.57 ಮಹಿಳೆಯರ ಬೆಂಬಲ ಪಡೆದಿದ್ದರು.
ನಾಲ್ಕನೆಯದಾಗಿ, ವಿಸ್ಕಾನ್ಸಿನ್ ದಶಕಗಳಿಂದಲೂ ಡೆಮಾಕ್ರಟಿಕ್ ಪಕ್ಷದ ನೆಲೆಯಾಗಿತ್ತು. ಆದರೆ ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳು ಹಾಗೆಯೇ ಸಂಬಳ ಮತ್ತು ಬಡತನದ ಬಗ್ಗೆ ಚಿಂತಿತರಾಗಿರುವ ಬಹುತೇಕ ಶ್ವೇತವರ್ಣೀಯ ಕಾರ್ಮಿಕ ವರ್ಗದ ಮತದಾರರನ್ನು ಸೆಳೆಯುವ ಮೂಲಕ ಟ್ರಂಪ್ 2016ರಲ್ಲಿ ಕ್ಲಿಂಟನ್ ವಿರುದ್ಧ ಗೆಲುವು ಸಾಧಿಸಿದ್ದರು. ಈ ಸಲ ಹ್ಯಾರಿಸ್ ವಿಸ್ಕಾನ್ಸಿನ್ ರಾಜ್ಯದಲ್ಲಿ ಸೋತಿದ್ದಾರೆ. ಅವರು ಕಾರ್ಮಿಕ ವರ್ಗ, ಮಹಿಳೆಯರು ಮತ್ತು ಯುವ ಮತದಾರರ ಮನ ಗೆಲ್ಲದೆ ಹೋದದ್ದು ಈ ಸೋಲಿಗೆ ಕಾರಣ. ನಿರ್ದಿಷ್ಟವಾಗಿ ಹೇಳುವುದಾದರೆ, ಅಮೆರಿಕದಲ್ಲಿನ ಮಾದಕ ದ್ರವ್ಯ ಬಿಕ್ಕಟ್ಟಿನ ದೊಡ್ಡ ಬಲಿಪಶು ವಿಸ್ಕಾನ್ಸಿನ್ ರಾಜ್ಯ. ಅಲ್ಲಿನ ಮತದಾರರಿಗೆ ಆರೋಗ್ಯ ಪ್ರಮುಖ ವಿಷಯ ಎಂಬುದನ್ನು ಅನೇಕ ಸಮೀಕ್ಷೆಗಳು ಹೇಳಿದ್ದವು. ವಿಸ್ಕಾನ್ಸಿನ್ ಡಿಪಾರ್ಟ್‌ಮೆಂಟ್ ಆಫ್ ಹೆಲ್ತ್ ಸರ್ವಿಸಸ್ ಪ್ರಕಾರ, 2022ರಲ್ಲಿ ವಿಸ್ಕಾನ್ಸಿನ್‌ನಲ್ಲಿ 1,828 ಜನರು ಡ್ರಗ್ ಓವರ್‌ಡೋಸ್‌ನಿಂದ ಸಾವನ್ನಪ್ಪಿದ್ದಾರೆ. ಇದು 2015ರಲ್ಲಿನದಕ್ಕಿಂತ ಎರಡು ಪಟ್ಟು ಹೆಚ್ಚು.
ಇದೆಲ್ಲದರ ಹಿನ್ನೆಲೆಯಲ್ಲಿನ ಭಯ ನಿವಾರಿಸುವ ಕೆಲಸಕ್ಕೆ ಆದ್ಯತೆ ನೀಡದೆ ಹೋದದ್ದು ಹ್ಯಾರಿಸ್ ವೈಫಲ್ಯವಾಗಿತ್ತು.
ಐದನೆಯದಾಗಿ, ಮಿಚಿಗನ್‌ನಲ್ಲಿ ಡೆಮಾಕ್ರಟ್‌ಗಳ ಇಸ್ರೇಲ್ ಪರ ನಿಲುವು ಮುಳುವಾಯಿತು. 1976 ರಿಂದ 1988ರವರೆಗೆ ರಿಪಬ್ಲಿಕನ್ನರು ಯಾವಾಗಲೂ ಮಿಚಿಗನ್‌ನಲ್ಲಿ ಗೆದ್ದಿದ್ದಾರೆ. ಆದರೂ, ಮಿಚಿಗನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ಯಾವಾಗಲೂ ಪೈಪೋಟಿಯದ್ದೇ ಆಗಿರುತ್ತದೆ. ಈ ಚುನಾವಣೆಯ ಸಮಯದಲ್ಲಿ, ಗಾಝಾ ಮೇಲಿನ ಇಸ್ರೇಲ್‌ನ ಯುದ್ಧ ಮಿಚಿಗನ್‌ನಲ್ಲಿ ಪ್ರಮುಖ ವಿಷಯವಾಗಿತ್ತು. ವರ್ಲ್ಡ್ ಪಾಪ್ಯುಲೇಶನ್ ರಿವ್ಯೆ ಪ್ರಕಾರ, ಮಿಚಿಗನ್ ಅತ್ಯಧಿಕ ಸಂಖ್ಯೆಯ ಅರಬ್ ಅಮೆರಿಕನ್ನರನ್ನು ಹೊಂದಿರುವ ರಾಜ್ಯವಾಗಿದೆ. ಅವರ ಸಂಖ್ಯೆ 2,11,225 ಇದೆ. ಗಾಝಾ ಮೇಲಿನ ಯುದ್ಧದಲ್ಲಿ ಇಬ್ಬರೂ ಅಭ್ಯರ್ಥಿಗಳು ಇಸ್ರೇಲ್‌ಗೆ ನಿಸ್ಸಂದಿಗ್ಧ ಬೆಂಬಲ ವ್ಯಕ್ತಪಡಿಸಿದ್ದರಿಂದ ಇಲ್ಲಿನ ಮತದಾರರು ಟ್ರಂಪ್ ಮತ್ತು ಹ್ಯಾರಿಸ್ ಇಬ್ಬರ ಬಗ್ಗೆಯೂ ಅಸಮಾಧಾನ ಹೊಂದಿದ್ದರು. ಗಾಝಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಒತ್ತಾಯಿಸುವ ಮತ್ತು ಅಂತರ್‌ರಾಷ್ಟ್ರೀಯ ಕಾನೂನಿಗೆ ಇಸ್ರೇಲ್ ಅನ್ನು ಹೊಣೆಯಾಗಿಸುವ ಭರವಸೆ ನೀಡಿದ್ದ ಗ್ರೀನ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಜಿಲ್ ಸ್ಟೀನ್ ಪರ ಅನೇಕ ಅರಬ್ ಅಮೆರಿಕನ್ನರು ಒಲವು ತೋರಿದ್ದರು. ಆದರೆ ಅಂತಿಮವಾಗಿ ಇಲ್ಲಿ ಟ್ರಂಪ್ ಗೆದ್ದಿದ್ದಾರೆ.
ಆರನೆಯದಾಗಿ, ಗ್ರೀನ್ ಪಾರ್ಟಿ ಅಭ್ಯರ್ಥಿ ಜಿಲ್ ಸ್ಟೀನ್ ಡೆಮಾಕ್ರಟ್‌ಗಳಿಂದ ದೊಡ್ಡ ಪ್ರಮಾಣದ ಮತಗಳನ್ನು ಕಸಿದರೇ? ಎಂಬ ಪ್ರಶ್ನೆಯೂ ಎದ್ದಿದೆ. ಸ್ಟೀನ್ ಕಣದಲ್ಲಿರುವುದರಿಂದ ಡೆಮಾಕ್ರಟ್ ಮತಗಳನ್ನು ಕಸಿಯಲಿದ್ದು, ಇದರಿಂದ ಸ್ವಿಂಗ್ ರಾಜ್ಯಗಳನ್ನು ಟ್ರಂಪ್ ಗೆಲ್ಲಲು ಮತ್ತು ಆ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಲು ಅನುಕೂಲವಾಗಲಿದೆ ಎಂದು ಡೆಮಾಕ್ರಟ್‌ಗಳು ಮಾತ್ರವಲ್ಲ, ಯುರೋಪಿಯನ್ ಗ್ರೀನ್ ಪಾರ್ಟಿ ಸದಸ್ಯರು ಕೂಡ ಎಚ್ಚರಿಸಿದ್ದರು. ಮಿಚಿಗನ್‌ನಲ್ಲಿ, ಅವರು ಶೇ.0.8 ಮತಗಳನ್ನು ಗೆದ್ದರು. ಹಾಗೆಯೇ ಪೆನ್ಸಿಲ್ವೇನಿಯಾದಲ್ಲಿ ಶೇ.0.5 ಮತಗಳನ್ನು ಮತ್ತು ವಿಸ್ಕಾನ್ಸಿನ್‌ನಲ್ಲಿ ಶೇ.0.4 ಮತಗಳನ್ನು ಗಳಿಸಿದರು. ಮಿಚಿಗನ್‌ನಲ್ಲಿ, ಸ್ಟೀನ್ ಮತ್ತು ಇತರ ಮೂರನೇ ಪಕ್ಷದ ಅಭ್ಯರ್ಥಿಗಳು ಒಟ್ಟುಗೂಡಿಸಿ ಇದುವರೆಗಿನ ಎಣಿಕೆಯ ಆಧಾರದ ಮೇಲೆ ಶೇ.2ರಷ್ಟು ಜನಪ್ರಿಯ ಮತಗಳನ್ನು ಅಂದರೆ, 1,09,777 ಮತಗಳನ್ನು ಗಳಿಸಿದರು. ರಾಜ್ಯದಲ್ಲಿ ಟ್ರಂಪ್ ಅವರು ಹ್ಯಾರಿಸ್ ಅವರನ್ನು 81,750 ಮತಗಳಿಂದ ಸೋಲಿಸಿದರು.
ಟ್ರಂಪ್ ಈಗ ಅಧ್ಯಕ್ಷರೇ?:
ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ಇನ್ನೂ ಸಮಯವಿದೆ. ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾಗುತ್ತಾರೆ ಮತ್ತು ಅವರ ಸಹವರ್ತಿ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಟ್ರಂಪ್ 2025ರ ಜನವರಿ 20ರಂದು ಅಧ್ಯಕ್ಷ ರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಆ ಸಮಾರಂಭದಲ್ಲಿಯೇ ಅವರು ಅಧ್ಯಕ್ಷೀಯ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಕಾನೂನುಬದ್ಧವಾಗಿ ವಹಿಸಿಕೊಳ್ಳುತ್ತಾರೆ.
2016ರ ಚುನಾವಣೆಯಲ್ಲಿ ಮೊದಲ ಸಲ ಗೆದ್ದ ನಂತರ ಟ್ರಂಪ್ 2017ರ ಜನವರಿಯಲ್ಲಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು ಮತ್ತು 2021ರವರೆಗೆ ಸೇವೆ ಸಲ್ಲಿಸಿದ್ದರು.