ಒಳಮೀಸಲಾತಿ ಜಾರಿ ಇನ್ನೂ ಕಗ್ಗಂಟಾಗಿರುವುದು ಯಾಕೆ?

ಒಳಮೀಸಲಾತಿ ಪರಿಶಿಷ್ಟ ಜಾತಿಗಳ ಆಂತರಿಕ ಸಾಮಾಜಿಕ ಸಮಸ್ಯೆಗೆ ಪರಿಹಾರ ಒದಗಿಸುವ ದಾರಿಯಾಗಿದೆಯೇ ಹೊರತು, ರಾಜಕೀಯ ಮೇಲಾಟದ ಸಂಕೇತವಲ್ಲ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವನ್ನು ನಂಬದ ಪಕ್ಷ ರಾಜಕಾರಣ ಯಾವಾಗಲೂ ಸಾಂಸ್ಥಿಕ ಸಮಸ್ಯೆಯನ್ನು ಜೀವಂತವಾಗಿಡಲು ಬಯಸುತ್ತದೆ. ಆದರೆ ಮುತ್ಸದ್ದಿ ಸಂಸದೀಯ ರಾಜಕಾರಣ ಸದಾ ಸಮಾಜೋ ಸಾಂಸ್ಥಿಕ ಸಮಸ್ಯೆಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಪರಿಹಾರ ಹುಡುಕಲು ಬಯಸುತ್ತದೆ. ಈ ದಿಸೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅತ್ಯಂತ ವೈಜ್ಞಾನಿಕವಾಗಿ ಮಂಡಿತವಾಗಿ ಪರಿಶಿಷ್ಟ ಜಾತಿಗಳ ಜನರೆಲ್ಲರೂ ಒಮ್ಮತದಿಂದ ಸ್ವೀಕರಿಸುವ ಸ್ವರೂಪದಲ್ಲಿ ಹೊರಬಂದರೆ, ಆಗ ಯಾವುದೇ ರಾಜಕೀಯ ಮೇಲಾಟಕ್ಕೆ ಆಸ್ಪದವಿರದು ಎನ್ನುತ್ತಾರೆ ಪರಿಣಿತರು.;

Update: 2025-01-28 15:38 IST
Editor : Thouheed | Byline : ಆರ್.ಜೀವಿ
ಒಳಮೀಸಲಾತಿ ಜಾರಿ ಇನ್ನೂ ಕಗ್ಗಂಟಾಗಿರುವುದು ಯಾಕೆ?
  • whatsapp icon

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿಯೇ ಅತ್ಯಂತ ಹಿಂದುಳಿದ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಅಧಿಕಾರ ರಾಜ್ಯಗಳಿಗೆ ಇದೆ. ಇದು, 2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನ ಮುಖ್ಯಾಂಶ. ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಎಸ್‌ಸಿ, ಎಸ್‌ಟಿ ಒಳಮೀಸಲಾತಿಗೆ ಒಪ್ಪಿಗೆ ನೀಡಿತು. ಹೆಚ್ಚು ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಎಸ್‌ಸಿ ಮತ್ತು ಎಸ್‌ಟಿಗಳಲ್ಲಿಯೇ ಒಳಮೀಸಲಾತಿ ನೀಡಬಹುದು ಮತ್ತು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಈ ಮೀಸಲಾತಿ ಜಾರಿಗೆ ತರಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಹುಮತದ ತೀರ್ಪು ಅದಕ್ಕೂ ಹಿಂದೆ ಒಳಮೀಸಲಾತಿಯನ್ನು ತಿರಸ್ಕರಿಸಿದ್ದ ಇ.ವಿ. ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ಪ್ರಕರಣದಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠ ನೀಡಿದ್ದ 2004ರ ತೀರ್ಪನ್ನು ರದ್ದುಗೊಳಿಸಿದೆ.

ಮೀಸಲಾತಿ ವರ್ಗದ ಸಮುದಾಯಗಳ ಒಳಮೀಸಲಾತಿ ಒಳಗೊಂಡಿರುವ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ(ಸೇವೆಗಳಲ್ಲಿ ಮೀಸಲಾತಿ) ಕಾಯ್ದೆ, 2006ರ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು, ರಾಜ್ಯ ಸರಕಾರಗಳು ಒಳಮೀಸಲಾತಿ ಜಾರಿಗೊಳಿಸುವ ನಿಟ್ಟಿನಲ್ಲಿ ಅನುವು ಮಾಡಿಕೊಡುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಅತಿ ಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರಕಾರಗಳ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾದುದಾಗಿದೆ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಆಗ ಪ್ರತಿಕ್ರಿಯಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನದ ಹಾದಿಯಲ್ಲಿನ ಮುಖ್ಯ ಅಡ್ಡಿಯೊಂದು ನಿವಾರಣೆಯಾಗಿದೆ. ತೀರ್ಪಿನಲ್ಲಿರುವ ವಿವಾದಾತ್ಮಕ ಕೆನೆಪದರದ ಬಗೆಗಿನ ಅಂಶವೂ ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ, ಹಿಂದೆ ಕಾಂಗ್ರೆಸ್ ಸರಕಾರವೇ ರಚಿಸಿದ್ದ ನ್ಯಾ. ಎ.ಜೆ. ಸದಾಶಿವ ಅಧ್ಯಕ್ಷತೆಯ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದಾಗಿ ನೀಡಿದ್ದ ಭರವಸೆಗೆ ಸರಕಾರ ಬದ್ಧ ಎಂದೂ ಸಿದ್ದರಾಮಯ್ಯ ಹೇಳಿದ್ದರು. 2023ರ ವಿಧಾನಸಭಾ ಚುನಾವಣೆಗೂ ಮೊದಲು ರಾಜ್ಯದಲ್ಲಿನ ಆಗಿನ ಬಿಜೆಪಿ ಸರಕಾರ ಒಳಮೀಸಲಾತಿ ಬಗ್ಗೆ ಅವಸರದಲ್ಲಿ ತೀರ್ಮಾನ ಕೈಗೊಂಡು ಕೇಂದ್ರ ಸರಕಾರಕ್ಕೆ ಕಳುಹಿಸಿಕೊಟ್ಟಿತ್ತು. ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅನುಷ್ಠಾನಗೊಳಿಸಬಹುದು ಎಂದು ಕೇಂದ್ರ ಸರಕಾರವೇ ರಚಿಸಿದ್ದ ಉಷಾ ಮೆಹ್ರಾ ಸಮಿತಿ ಸ್ಪಷ್ಟವಾಗಿ ತಿಳಿಸಿದ್ದರೂ ಕೇಂದ್ರ ಸರಕಾರ ಇಲ್ಲಿಯವರೆಗೆ ತೀರ್ಮಾನ ಕೈಗೊಳ್ಳದೆ ಮೂಲೆಗೆ ಸರಿಸಿತ್ತು ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾ. ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಅಗತ್ಯ ಬಿದ್ದರೆ ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಾಲೋಚನೆ, ಸಂಧಾನದ ಮೂಲಕ ಒಳಮೀಸಲಾತಿ ಬಗ್ಗೆ ಸ್ಪಷ್ಟವಾದ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದರು.

ಅದಾದ ಬಳಿಕ, ಒಳಮೀಸಲಾತಿ ಕುರಿತು ಪರಿಶೀಲಿಸುವುದಕ್ಕಾಗಿ ಆಯೋಗ ರಚಿಸಲು ಆಗಸ್ಟ್ 24ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆನಂತರ ನವೆಂಬರ್‌ನಲ್ಲಿ, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರಕಾರ ಆಯೋಗ ರಚನೆ ಮಾಡಿ ಆದೇಶ ಹೊರಡಿಸಿದೆ. ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕಸದಸ್ಯ ಆಯೋಗ ರಚನೆ ಮಾಡಿದ ಸರಕಾರ, ಎರಡು ತಿಂಗಳೊಳಗೆ ಸೂಕ್ತ ಶಿಫಾರಸಿನೊಂದಿಗೆ ವರದಿ ಸಲ್ಲಿಸಲು ಸೂಚಿಸಿದೆ. ಒಳಮೀಸಲಾತಿ ಜಾರಿ ನಿಟ್ಟಿನಲ್ಲಿ ಅಗತ್ಯ ದತ್ತಾಂಶ ಸಂಗ್ರಹಣೆಯನ್ನು ಎಲ್ಲಿಂದ ಮಾಡಬೇಕು ಎಂಬುದನ್ನು ಪರಿಶೀಲಿಸಲು ಈ ಆಯೋಗವನ್ನು ರಚಿಸಲಾಗಿದೆ. ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ ಬರಬೇಕಿದ್ದು, ಅದರ ನಡುವೆ ಹಲವು ವಾದಗಳು, ಒತ್ತಾಯಗಳು, ಬೇಡಿಕೆಗಳು, ಪ್ರತಿಪಾದನೆಗಳು ಸುದ್ದಿಯಲ್ಲಿವೆ. ಅವುಗಳನ್ನು ನೋಡುವ ಮೊದಲು ಒಳಮೀಸಲಾತಿ ಕುರಿತ ಹೋರಾಟದ ಇತಿಹಾಸವನ್ನೊಮ್ಮೆ ಸ್ಥೂಲವಾಗಿ ಗಮನಿಸಬೇಕು.

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡುವ ಮೂಲಕ ಅಸ್ಪಶ್ಯ ಜಾತಿಗಳಿಗೆ ಸೇರಿದವರಿಗೆ ನ್ಯಾಯ ಒದಗಿಸಬೇಕೆಂದು ರಾಜ್ಯದಲ್ಲಿ ನಡೆದಿರುವ ಹೋರಾಟ ಹೆಚ್ಚುಕಡಿಮೆ ಮೂರು ದಶಕಗಳಷ್ಟು ಹಳೆಯದು. ಕರ್ನಾಟಕದಲ್ಲಿ ಶುರುವಾದ ಹೋರಾಟಕ್ಕೆ ಪ್ರೇರಣೆಯಾದದ್ದು ಅವಿಭಜಿತ ಆಂಧ್ರಪ್ರದೇಶದಲ್ಲಿನ ಹೋರಾಟ. ಮತ್ತದು ಒಳಮೀಸಲಾತಿಯ ಇತಿಹಾಸದಲ್ಲೇ ನಿರ್ಣಾಯಕ ಹೋರಾಟವಾಗಿತ್ತು. ಆಂಧ್ರದಲ್ಲಿ ಒಳಮೀಸಲಾತಿಗೆ ಒತ್ತಾಯಿಸಿ 1990ರ ದಶಕದಲ್ಲಿ ಮಾದಿಗ ದಂಡೋರಾ ಸಂಘಟನೆ ಹೋರಾಟಕ್ಕಿಳಿದಿತ್ತು. ಆಗ ಆಂಧ್ರದಲ್ಲಿ ರಾಜ್ಯದ ಜನಸಂಖ್ಯೆಯ ಶೇ.8.5ರಷ್ಟು ಮಾದಿಗರಿದ್ದರು. ಅಂದರೆ, ಪರಿಶಿಷ್ಟ ಜಾತಿಗಳ ಪೈಕಿ ಅವರ ಪ್ರಮಾಣ ಶೇ.53 ಆಗಿತ್ತು. ಅವರ ಒತ್ತಾಯದ ಹಿನ್ನೆಲೆಯಲ್ಲಿ, ಆಂಧ್ರಪ್ರದೇಶ ಸರಕಾರ 1996ರಲ್ಲಿ ನ್ಯಾ.ರಾಮಚಂದ್ರರಾಜು ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಆಯೋಗದ ಶಿಫಾರಸಿನ ಅನ್ವಯ ಆಂಧ್ರ ವಿಧಾನಸಭೆ ತಂದಿದ್ದ ಒಳಮೀಸಲಾತಿ ಕಾಯ್ದೆ ವಿಚಾರ ಸುಪ್ರೀಂ ಕೋರ್ಟ್‌ವರೆಗೂ ಹೋಯಿತು.

ಇ.ವಿ. ಚನ್ನಯ್ಯ ವರ್ಸಸ್ ಆಂಧ್ರಪ್ರದೇಶ ಪ್ರಕರಣದಲ್ಲಿ 2004ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠ ಆಂಧ್ರಪ್ರದೇಶದ ಕಾಯ್ದೆಯನ್ನು ರದ್ದುಗೊಳಿಸಿತ್ತಲ್ಲದೆ, ಈ ಸಂಬಂಧ ಕಾನೂನು ತರುವ ಅಧಿಕಾರ ಸಂಸತ್‌ಗೆ ಮಾತ್ರ ಇರುತ್ತದೆ ಎಂದು ತೀರ್ಪು ನೀಡಿತ್ತು. ಇದಾದ ಬಳಿಕ 2020ರಲ್ಲಿ ಪಂಜಾಬ್ ಸರಕಾರದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಒಳಮೀಸಲಾತಿಯನ್ನು ಎತ್ತಿಹಿಡಿದಾಗಲೇ ಈ ವಿಷಯ ಮತ್ತೊಮ್ಮೆ ಜೀವ ಪಡೆಯಲು ಸಾಧ್ಯವಾಯಿತು. ಆದರೆ ಒಳಮೀಸಲಾತಿ ನ್ಯಾಯಸಮ್ಮತವಾದುದೇ ಎಂಬುದನ್ನು ನಿರ್ಧರಿಸಲು ಏಳು ನ್ಯಾಯಾಧೀಶರ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು. ಅದಾದ ಬಳಿಕ 2024ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠದ ತೀರ್ಪು ಬಂದಿದೆ. ಒಳಮೀಸಲಾತಿಯ ಭರವಸೆ ಮತ್ತೆ ಮೂಡಿರುವುದೇ ಆ ತೀರ್ಪಿನಿಂದಾಗಿ.

ಆಂಧ್ರಪ್ರದೇಶದಲ್ಲಿ ಮಾದಿಗ ಒಳಮೀಸಲಾತಿಗಾಗಿ ನಡೆದ ಹೋರಾಟವೇ ಕರ್ನಾಟಕಕ್ಕೂ ವ್ಯಾಪಿಸಿತು. 1997ರಲ್ಲಿ ಶಂಕರಪ್ಪ ಅವರು ಬೆಂಗಳೂರಿನ ಶಿವಾಜಿನಗರ ಕ್ರೀಡಾಂಗಣದಲ್ಲಿ ಸಾವಿರಾರು ಮಾದಿಗರನ್ನು ಸೇರಿಸಿ, ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ರೂಪಿಸಿದರು. ಅದಾಗಿ ಹಲವು ವರ್ಷಗಳಲ್ಲಿ ಒಳಮೀಸಲಾತಿಯ ಪರಿಕಲ್ಪನೆ ಬೆಳೆಯುತ್ತ ಬಂತು, ಹೆಚ್ಚು ಸ್ಪಷ್ಟವಾಗುತ್ತ ಬಂತು. ಆ ಸಮುದಾಯದ ಸ್ವಾಮೀಜಿಗಳು, ರಾಜಕೀಯ ನಾಯಕರು, ಪ್ರಗತಿಪರ ಹೋರಾಟಗಾರರು, ದಲಿತ ಸಂಘಟನೆಗಳು, ದಲಿತ ವಿದ್ಯಾರ್ಥಿ ಸಂಘಟನೆಗಳು, ಮಾದಿಗ ನೌಕರ ಸಂಘಟನೆಗಳು ಒಳಮೀಸಲಾತಿಗಾಗಿ ಸರಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿವೆ. ಎಸ್.ಎಂ. ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಒಳಮೀಸಲಾತಿ ಬಗ್ಗೆ ಬೇಡಿಕೆ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಆಯೋಗ ರಚಿಸುವ ಪ್ರಸ್ತಾವ ಸರಕಾರದ ಮುಂದೆ ಇತ್ತು. ಆನಂತರದ ಧರಂಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ 2005ರಲ್ಲಿ ನ್ಯಾ. ಎ.ಜೆ. ಸದಾಶಿವ ನೇತೃತ್ವದಲ್ಲಿ ಆಯೋಗವನ್ನು ರಚಿಸಿತು. ದಲಿತ ಸಂಘರ್ಷ ಸಮಿತಿ ಹಾಗೂ ಜನಪರ ಸಂಘಟನೆಗಳು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಟ ಮಾಡಿದ್ದರ ಪರಿಣಾಮವಾಗಿ ಆ ಆಯೋಗದ ರಚನೆಯಾಗಿತ್ತು. ಏಳು ವರ್ಷ ಅಧ್ಯಯನ ನಡೆಸಿದ್ದ ಆಯೋಗ 2012ರಲ್ಲಿ ಡಿ.ವಿ. ಸದಾನಂದಗೌಡ ನೇತೃತ್ವದ ಬಿಜೆಪಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆಗ ಪರಿಶಿಷ್ಟ ಜಾತಿಗಳಿಗೆ ಇದ್ದ ಶೇ.15ರ ಮೀಸಲಾತಿಯನ್ನು ತನ್ನ ಶಿಫಾರಸಿನಲ್ಲಿ ಎ.ಜೆ. ಸದಾಶಿವ ಆಯೋಗ ವಿಭಾಗಿಸಿದ್ದು ಹೀಗೆ:

ಎಡಗೈ ಸಮುದಾಯಕ್ಕೆ ಶೇ.6

ಬಲಗೈ ಸಮುದಾಯಕ್ಕೆ ಶೇ.5

ಬೇಡ, ಜಂಗಮ ಸೇರಿ 42 ಜಾತಿಗಳಿಗೆ ಶೇ.3

ಬಂಜಾರ, ಭೋವಿ, ಕೊರಚ, ಕೊರಮ ಮತ್ತಿತರ ಜಾತಿಗಳಿಗೆ ಶೇ.1

ಸದಾಶಿವ ಆಯೋಗದ ವರದಿ ವಿಚಾರವಾಗಿ ದೊಡ್ಡ ರಾಜಕೀಯವೇ ನಡೆಯುತ್ತಿದೆ. ವರದಿ ಸಲ್ಲಿಕೆಯಾದಾಗಿನಿಂದಲೂ ಒಳಮೀಸಲಾತಿಯ ಬೇಡಿಕೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಲೇ ಬಂದಿದೆ. ಬಸವರಾಜ ಬೊಮ್ಮಾಯಿ ಸರಕಾರವಂತೂ ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳು ಇನ್ನು ಮುಂದೆ ಅಪ್ರಸ್ತುತ ಎಂದುಬಿಟ್ಟಿತ್ತು. 2023ರ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಅದು ಮುಸ್ಲಿಮರಿಗಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಳ ಮಾಡಿತ್ತು. ಒಳಮೀಸಲಾತಿ ಕುರಿತು ರಚಿಸಲಾಗಿದ್ದ ಸಂಪುಟ ಉಪಸಮಿತಿ 2011ರ ಜನಗಣತಿಯಂತೆ 101 ಪರಿಶಿಷ್ಟ ಜಾತಿಗಳನ್ನು 4 ವರ್ಗಗಳಾಗಿ ವಿಂಗಡಿಸಿ ಶೇಕಡಾವಾರು ಮೀಸಲಾತಿ ನಿಗದಿಪಡಿಸಿ ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಅದರ ಪ್ರಕಾರ,

ಒಟ್ಟು ಮೀಸಲಾತಿ ಶೇ.17

ಎಡಗೈ ಸಮುದಾಯಕ್ಕೆ ಶೇ.6

ಬಲಗೈ ಸಮುದಾಯಕ್ಕೆ ಶೇ.5.5

ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳಿಗೆ ಶೇ.4.5

ಈ ಯಾವುದೇ ಗುಂಪುಗಳಿಗೆ ಸೇರಿರದ ಜಾತಿಗೆ ಶೇ.1

ದೊಡ್ಡ ಸಮಸ್ಯೆಯೇನೆಂದರೆ, ಪರಿಶಿಷ್ಟ ಜಾತಿಗಳ ಮೀಸಲಾತಿಯ ವಿಚಾರವನ್ನು ರಾಜಕೀಯ ಪಕ್ಷಗಳು ಒಂದು ದಾಳದಂತೆ ಬಳಸುತ್ತ ಬಂದಿವೆ. ಎ.ಜೆ. ಸದಾಶಿವ ಆಯೋಗದ ವರದಿ ಸ್ವೀಕರಿಸಿದ್ದ ಬಿಜೆಪಿ ಸರಕಾರ ಅದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಬೊಮ್ಮಾಯಿ ಸರಕಾರವಂತೂ ಅದರ ಶಿಫಾರಸುಗಳು ಅಪ್ರಸ್ತುತ ಎನ್ನುವ ಮಟ್ಟಕ್ಕೆ ಹೋಯಿತು. ನಂತರ ಬಂದಿರುವ ಕಾಂಗ್ರೆಸ್ ಸರಕಾರದಲ್ಲೂ ಸಮಸ್ಯೆಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನಸ್ಸಿದ್ದರೂ, ಸಚಿವ ಸಂಪುಟ ಹಾಗೂ ಪಕ್ಷದ ಶಾಸಕರ ವಿರೋಧದಿಂದಾಗಿ ಅದರ ಅನುಷ್ಠಾನ ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ.

ಈಗ, ಒಳಮೀಸಲಾತಿ ಕಲ್ಪಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಗಳಿಗೆ ನೀಡಿರುವ ಹಿನ್ನೆಲೆಯಲ್ಲಿ, ಒಳಮೀಸಲಾತಿ ಜಾರಿಯ ಅನಿವಾರ್ಯತೆ ಮತ್ತು ಸವಾಲು ಎರಡೂ ಸಿದ್ದರಾಮಯ್ಯ ಸರಕಾರದ ಎದುರು ಇದೆ. ಆದರೆ, ಪ್ರಶ್ನೆಯಿರುವುದು ಯಾವ ದತ್ತಾಂಶವನ್ನು ಸ್ವೀಕರಿಸಬೇಕು ಎನ್ನುವುದರ ಬಗ್ಗೆ. ಎ.ಜೆ. ಸದಾಶಿವ ಆಯೋಗದ ವರದಿ ಇದೆಯಲ್ಲವೇ ಎನ್ನುವವರಿದ್ದಾರೆ. ಬಿಜೆಪಿ ಸರಕಾರದ ವಿಂಗಡಣೆ ಸೂತ್ರವೇ ಸಾಕು ಎನ್ನುವವರಿದ್ದಾರೆ. ಅದೇನೇ ಇದ್ದರೂ, ತೋಚಿದ ಹಾಗೆ ದತ್ತಾಂಶ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುವ ಹಾಗಿಲ್ಲ. ನಾಳೆ ಯಾವುದೇ ಬಗೆಯ ಕಾನೂನಾತ್ಮಕ ತೊಂದರೆಗಳು ತಲೆದೋರದ ಹಾಗೆ ದತ್ತಾಂಶ ವೈಜ್ಞಾನಿಕವಾಗಿರಬೇಕು, ಯಾವುದೇ ಪ್ರಶ್ನೆಗೆ ಆಸ್ಪದ ಇರಕೂಡದು. ಅಂಥ ದತ್ತಾಂಶವನ್ನು ಶಿಫಾರಸು ಮಾಡಲಿ ಎಂದೇ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗವನ್ನು ರಚಿಸಲಾಗಿದೆ. ಆಯೋಗದ ಎದುರು ಬಹಳ ಕಡಿಮೆ ಸಮಯವಿದೆ, ಆದರೆ ಮಾಡಬೇಕಿರುವ ಕೆಲಸ ಬಹಳ ದೊಡ್ಡದಾಗಿದೆ. ಎಲ್ಲ ದತ್ತಾಂಶಗಳನ್ನು ಪರಿಗಣಿಸಿ, ಪರಿಣಿತರ ಜೊತೆ ಸಮಾಲೋಚಿಸಿ, ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದು ದತ್ತಾಂಶದ ಬಗ್ಗೆ ನಿರ್ಣಯಿಸಲು ಅದು ಕಾರ್ಯನಿರತವಾಗಿದೆ.

ಜಾತಿಗಣತಿ ವರದಿ ಬಂದರೆ ಅದರ ದತ್ತಾಂಶವನ್ನೂ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂಬ ವಿಚಾರವನ್ನು ನ್ಯಾ.ನಾಗಮೋಹನ್ ದಾಸ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ. ಒಳಮೀಸಲಾತಿ ಜಾರಿಯಾದರೆ ತಮ್ಮ ಮೀಸಲಾತಿಗೆ ಕುತ್ತು ಬರುತ್ತದೆಯೇ ಎಂಬ ಭಯವೂ ಕೆಲವರಿಗೆ ಇದೆ. ಆದರೆ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಯಾವುದೇ ಜಾತಿಗೆ ಮೀಸಲಾತಿ ನಿರಾಕರಣೆಯ ಪ್ರಶ್ನೆ ಇಲ್ಲವೇ ಇಲ್ಲ. ಮೀಸಲಾತಿ ಪಡೆಯದೇ ಇರುವವರನ್ನು ಸೇರಿಸುವ ಪ್ರಯತ್ನವೂ ಇದಲ್ಲ ಎನ್ನುತ್ತಾರೆ ಅವರು.

ನೂರೆಂಟು ಜಾತಿಗಳಿವೆ. ಕೆಲವು ಜಾತಿಗಳಿಗೆ ಸರಕಾರಿ ನೌಕರಿ ಸಿಕ್ಕಿಲ್ಲ, ಪಂಚಾಯತ್ ಸದಸ್ಯತ್ವವೂ ಸಿಗದಷ್ಟು ಮಟ್ಟಿಗೆ ಅವರು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿದ್ದಾರೆ. ದತ್ತಾಂಶಕ್ಕಾಗಿ 2011ರ ಜನಗಣತಿಯನ್ನೇ ಅವಲಂಬಿಸಬೇಕಿರುವುದರಿಂದ ಹೊಸ ಯಾವ ದತ್ತಾಂಶ ಕೊಡಲು ಸಾಧ್ಯ ಎಂಬ ಪ್ರಶ್ನೆಯೂ ಇದೆ. ಆದರೆ ಇದೇ ವೇಳೆ ಮಾಧುಸ್ವಾಮಿ ಸಮಿತಿ ದತ್ತಾಂಶಕ್ಕಾಗಿ ಅನುಸರಿಸಿದ ಹಾದಿ ಅವೈಜ್ಞಾನಿಕವಾಗಿತ್ತು ಎಂಬ ತಕರಾರುಗಳೂ ಇವೆ. ದತ್ತಾಂಶ ಎಂದರೆ ಪ್ರತಿಯೊಂದು ಪರಿಶಿಷ್ಟ ಜಾತಿಗಳ ಒಳಗುಂಪುಗಳು ಹೊಂದಿರುವ ಪ್ರಗತಿಯನ್ನು ನಿರ್ಧರಿಸುವ ಅಳತೆಗೋಲು. ಇದರಲ್ಲಿ ಅಡಕವಾಗುವ ಅಂಶಗಳಾದ ಶೈಕ್ಷಣಿಕ ಸಾಧನೆ, ಆರ್ಥಿಕ ಮುನ್ನಡೆ, ಸಾರ್ವಜನಿಕ ಉದ್ಯೋಗಗಳಲ್ಲಿ ಪಡೆದಿರುವ ಪ್ರಾತಿನಿಧ್ಯ ಮತ್ತು ವಿವಿಧ ರಾಜಕೀಯ ಕ್ಷೇತ್ರಗಳಲ್ಲಿ ಸ್ವೀಕರಿಸಿರುವ ಪ್ರಾತಿನಿಧ್ಯಗಳನ್ನು ಪುಷ್ಟೀಕರಿಸುವ ಪ್ರಾಯೋಗಿಕ ದತ್ತಾಂಶಗಳಂತೂ ಇಲ್ಲವೇ ಇಲ್ಲ. ವಾದಿರಾಜು ಆಯೋಗದ ಮುಂದೆ ಪ್ರತಿಪಾದಿಸಿದಂತೆ ಕೇವಲ 6.10 ಲಕ್ಷ ಜನಸಂಖ್ಯೆಗೆ ಶೇ. 1ರಷ್ಟು ಮೀಸಲಾತಿ ನೀಡಿರುವುದಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ. ಪರಿಶಿಷ್ಟ, ಹಿಂದುಳಿದ ಸಮುದಾಯಗಳ ಒಳಗುಂಪುಗಳ ಅಂತರ, ಹಿಂದುಳಿದಿರುವಿಕೆಯನ್ನು ಕೇವಲ ಪರಿಮಾಣಾತ್ಮಕ ಅಂಶಗಳಿಂದ ಅಳೆಯಲು ಸಾಧ್ಯವಿಲ್ಲ. ಈ ವಿಚಾರಗಳೇ ನ್ಯಾ. ನಾಗಮೋಹನ್ ದಾಸ್ ಆಯೋಗದ ಮುಂದಿರುವ ಅಸಲಿ ಸವಾಲುಗಳಾಗಿವೆ. ಅವುಗಳನ್ನು ಹೇಗೆ ಸಂಪಾದಿಸಬೇಕೆಂಬ ಮಾರ್ಗಗಳ ಹುಡುಕಾಟದಲ್ಲಿ ಆಯೋಗ ತನ್ನ ಹೊಣೆಗಾರಿಕೆಯಿಂದ ನಿರತವಾಗಿದೆ.

ಬಿಜೆಪಿ ಸರಕಾರ ಮಾಡಿದ್ದ ಒಳಮೀಸಲಾತಿ ವಿಂಗಡಣೆಯೇ ಬೇಕೆನ್ನುವವರು ಮೊದಲು ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಒಳಮೀಸಲಾತಿ ನ್ಯಾಯಾಂಗ ಪರಾಮರ್ಶೆಗೆ ಒಳಪಡುತ್ತದೆ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಈಗ ನ್ಯಾ.ನಾಗಮೋಹನ ದಾಸ್ ಆಯೋಗದ ಮುಂದೆ ಅಲ್ಪಾವಧಿಯಲ್ಲಿ ಅಧಿಕ ದತ್ತಾಂಶಗಳನ್ನು ಕ್ರೋಡೀಕರಿಸುವ ಮಹತ್ವದ ಸವಾಲು ಇದೆ. ವಿವಿಧ ಸಮುದಾಯಗಳು ನೀಡುವ ದತ್ತಾಂಶಗಳು ಪ್ರಕಟಿತ ಮತ್ತು ದೃಢೀಕೃತ ಮೂಲಗಳಿಂದ ಪಡೆದದ್ದಾಗಿರಬೇಕು ಮತ್ತು ಅವುಗಳ ನೈಜತೆ ಪಾರದರ್ಶಕವಾಗಿರಬೇಕು. ಕಾಂತರಾಜು ಸಮೀಕ್ಷಾ ವರದಿ ಹೊರಬಂದರೆ, ಒಳಮೀಸಲಾತಿ ಇತ್ಯರ್ಥಕ್ಕೆ ಅದನ್ನು ನೀಡಿದರೆ ಬಹುತೇಕ ಸಮಸ್ಯೆಗೆ ಪರಿಹಾರ ಸಿಗಲಿದೆ. ಜನಗಣತಿ ಕಾಯ್ದೆ, 1949ರ ವ್ಯಾಖ್ಯಾನದ ಪ್ರಕಾರ, ಜನಗಣತಿ ಮಾಡುವ ಪರಮಾಧಿಕಾರ ಕೇಂದ್ರಕ್ಕೆ ಮಾತ್ರವಿದೆ. ರಾಜ್ಯಗಳು ಮತ್ತು ಸ್ಥಳೀಯ ಆಡಳಿತಗಳು ಅದರ ಆಣತಿಯಂತೆ ಉದ್ದೇಶಗಳ ಈಡೇರಿಕೆಗೆ ಸಹಕಾರ ನೀಡುವ ಹೊಣೆಗಾರಿಕೆಯನ್ನು ಹೊಂದಿವೆ. ಈ ದೃಷ್ಟಿಯಲ್ಲಿ ಹಿಂದಿನ ಸದಾಶಿವ ಆಯೋಗ, ಅಂಕಿಅಂಶಗಳ ಕ್ರೋಡೀಕರಣಕ್ಕೆ ಮನೆ ಮನೆಗಳ ಪ್ರಾಯೋಗಿಕ ಸಮೀಕ್ಷೆ ನಮೂನೆ ನೀಡಿ ಮಾಹಿತಿಗಳನ್ನು ಸಂಗ್ರಹಿಸಿತ್ತು. ಹಿಂದಿನ ಕಾಂಗ್ರೆಸ್ ಸರಕಾರದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದಾಗ ರಾಜ್ಯ ಸರಕಾರ ಇದು ಜನಗಣತಿಯಲ್ಲ ಎಂದು ಪ್ರತಿಪಾದಿಸಿತ್ತು. ಆದುದರಿಂದ, ನ್ಯಾಯಮೂರ್ತಿ ಸದಾಶಿವ ಆಯೋಗದ ಅಂಕಿಅಂಶಗಳನ್ನು ಆಕರವಾಗಿ ಸ್ವೀಕರಿಸಿದರೆ ಯಾವುದೇ ಕಾನೂನಿನ ತೊಡಕು ಬರುವುದಿಲ್ಲ ಎಂಬುದು ಪರಿಣಿತರ ಅಭಿಪ್ರಾಯ.

ಮಾಧುಸ್ವಾಮಿ ಸಮಿತಿ ವರದಿ ಕೆಲವರನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಿದ ಹಾಗಿದೆ ಎಂಬ ಆರೋಪ ಗಳಿವೆ. ಸುಪ್ರೀಂ ಕೋರ್ಟ್ ನೀಡಿರುವ 5 ಅಂಶಗಳಡಿ ಸಮಾನ ಅಂತರ, ಸಾಮಾಜಿಕ ನ್ಯಾಯ ಸೂತ್ರದಡಿ ಒಳಮೀಸಲಾತಿಗೆ ಪೂರಕ ದತ್ತಾಂಶಗಳಡಿ ಇದು ಅಂತಿಮ ರೂಪ ಪಡೆಯಬೇಕಿದೆ. ಒಳಮೀಸಲಾತಿ ರಾಜಕೀಯ ಪಕ್ಷಗಳ ಅಜೆಂಡಾ ಅಲ್ಲ. ಅದು ಪರಿಶಿಷ್ಟ ಜಾತಿಗಳ ಆಂತರಿಕ ಪುರೋಭಿವೃದ್ಧಿಯ ಕಾರ್ಯಸೂಚಿಯಾಗಿದೆ ಎಂಬುದು ತಜ್ಞರ ಅಭಿಮತ. ಒಳಮೀಸಲಾತಿ ಪರಿಶಿಷ್ಟ ಜಾತಿಗಳ ಆಂತರಿಕ ಸಾಮಾಜಿಕ ಸಮಸ್ಯೆಗೆ ಪರಿಹಾರ ಒದಗಿಸುವ ದಾರಿಯಾಗಿದೆಯೇ ಹೊರತು, ರಾಜಕೀಯ ಮೇಲಾಟದ ಸಂಕೇತವಲ್ಲ. ಸೈದ್ಧಾಂತಿಕವಾಗಿ ಪ್ರಜಾಪ್ರಭುತ್ವವನ್ನು ನಂಬದ ಪಕ್ಷ ರಾಜಕಾರಣ ಯಾವಾಗಲೂ ಸಾಂಸ್ಥಿಕ ಸಮಸ್ಯೆಯನ್ನು ಜೀವಂತವಾಗಿಡಲು ಬಯಸುತ್ತದೆ. ಆದರೆ ಮುತ್ಸದ್ದಿ ಸಂಸದೀಯ ರಾಜಕಾರಣ ಸದಾ ಸಮಾಜೋ ಸಾಂಸ್ಥಿಕ ಸಮಸ್ಯೆಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಪರಿಹಾರ ಹುಡುಕಲು ಬಯಸುತ್ತದೆ. ಈ ದಿಸೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅತ್ಯಂತ ವೈಜ್ಞಾನಿಕವಾಗಿ ಮಂಡಿತವಾಗಿ ಪರಿಶಿಷ್ಟ ಜಾತಿಗಳ ಜನರೆಲ್ಲರೂ ಒಮ್ಮತದಿಂದ ಸ್ವೀಕರಿಸುವ ಸ್ವರೂಪದಲ್ಲಿ ಹೊರಬಂದರೆ, ಆಗ ಯಾವುದೇ ರಾಜಕೀಯ ಮೇಲಾಟಕ್ಕೆ ಆಸ್ಪದವಿರದು ಎನ್ನುತ್ತಾರೆ ಪರಿಣಿತರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್.ಜೀವಿ

contributor

Similar News