‘ಕೈ’ಗೆ ಕೈಕೊಟ್ಟು ತಾವರೆ ಹಿಡಿದವರು

ಕಾಂಗ್ರೆಸ್ ಮನೆಯಲ್ಲಿ ಕೂತು ಔತಣ ಮಾಡಿದ್ದವರು, ಕಡೆಗೊಂದು ದಿನ ಕಾಂಗ್ರೆಸ್‌ಗೆ ಕೈಕೊಟ್ಟು ಹೊರಟಿದ್ದರು. ಎದುರು ಮನೆ ತಾವರೆಯ ಪಾಲಾದ ಆ ನಾಯಕರೆಲ್ಲ ಕಾಂಗ್ರೆಸ್ ವಿರುದ್ಧವೇ ಮಾತಾಡುವುದರಲ್ಲೂ ಬಹಳ ಬೇಗ ಪಳಗಿದ್ದರು. 2014ರ ನಂತರದ ರಾಜಕಾರಣವಂತೂ ಅಂಥ ನಾಯಕರ ಒಂದು ದಂಡನ್ನೇ ಸೃಷ್ಟಿಸಿತ್ತು. ಕಾಂಗ್ರೆಸ್ ಒಳಗೊಳಗೇ ಸಾಕಷ್ಟು ಸೊರಗುವುದಕ್ಕೂ ಈ ವಲಸೆ ಕಾರಣವಾಗಿತ್ತು

Update: 2024-12-17 11:38 GMT
Editor : Thouheed | Byline : ಆರ್. ಜೀವಿ

ಕಾಂಗ್ರೆಸ್‌ನಲ್ಲಿ ದಶಕಗಳ ಕಾಲ ದರ್ಬಾರು ಮಾಡಿದ, ಎಲ್ಲ ಬಗೆಯ ಅಧಿಕಾರದ ರುಚಿಯನ್ನೂ ಅನುಭವಿಸಿದ ನಾಯಕರು ಕಡೆಗೆ ಬಿಜೆಪಿ ಸೇರ್ಪಡೆಯಾದದ್ದು ಕಳೆದೊಂದು ದಶಕದಲ್ಲಿನ ಗಮನಾರ್ಹ ರಾಜಕೀಯ ವಿದ್ಯಮಾನ ಮಾತ್ರವಲ್ಲ, ರಾಜಕಾರಣದ ಬದಲಾದ ಸ್ವರೂಪವನ್ನು ಕೂಡ ಸೂಚಿಸುವ ಬೆಳವಣಿಗೆ. ಹಲವು ರಾಜ್ಯಗಳಲ್ಲಿ ಮಾಜಿ ಸಿಎಂಗಳೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದರು. ಮತ್ತೆ ಕೆಲವೆಡೆ ಮಾಜಿ ಸಿಎಂಗಳ ಮಕ್ಕಳು ಬಿಜೆಪಿಯಲ್ಲಿ ತಮ್ಮ ರಾಜಕೀಯದ ದಾರಿ ಹುಡುಕಿಕೊಂಡರು.

ಹಾಗೆ ಹೋದವರಲ್ಲಿ ಮೂರು ಬಗೆಯನ್ನು ಗುರುತಿಸಬಹುದು. ಒಂದು, ಪಕ್ಷದಲ್ಲಿ ಅವಕಾಶ ಸಿಗುತ್ತಿಲ್ಲ, ಟಿಕೆಟ್ ನಿರಾಕರಿಸಲಾಯಿತು ಎಂಬಿತ್ಯಾದಿ ಕಾರಣಗಳನ್ನು ಕೊಟ್ಟು, ಅಧಿಕಾರ ಬಯಸಿ ಹೊರಟವರ ವರ್ಗ.

ಎರಡು, ಬಿಜೆಪಿ ತೋರಿಸಿದ ಈ.ಡಿ., ಸಿಬಿಐ ಅಂಥ ತನಿಖಾ ಏಜೆನ್ಸಿಗಳ ಭಯದಿಂದಾಗಿ, ಬಚಾವಾದರೆ ಸಾಕು ಮತ್ತೇನೂ ಬೇಕಿಲ್ಲ ಎಂದು ಹೊರಟವರ ವರ್ಗ.

ಮೂರು, ಬಿಜೆಪಿಯ ತನಿಖಾ ಏಜೆನ್ಸಿಗಳ ಅಸ್ತ್ರಕ್ಕೆ ಹೆದರಿ ಅಲ್ಲಿಗೆ ಹೋದ ಬಳಿಕ ಬಿಜೆಪಿ ವಾಷಿಂಗ್ ಮಷಿನ್‌ನಲ್ಲಿ ಶುದ್ಧರಾಗಿ, ಅಲ್ಲಿಯೂ ಅಧಿಕಾರ ಅನುಭವಿಸಿದವರ, ಅನುಭವಿಸುತ್ತಿರುವವರ ವರ್ಗ.

ಪ್ರಮುಖವಾಗಿ 2013ರಿಂದ ಕಾಂಗ್ರೆಸ್ ನಾಯಕರ ವಲಸೆ ದೊಡ್ಡ ಮಟ್ಟದಲ್ಲಿ ಶುರುವಾಯಿತು. ಏಕೆಂದರೆ ಆಗಲೇ ಕಾಂಗ್ರೆಸ್ ನೇತೃತ್ವದ ಯುಪಿಎ 2014ರ ಲೋಕಸಭಾ ಚುನಾವಣೆಯಲ್ಲಿ ಸೋಲಲಿದೆ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಸುಳಿವು ಹಲವರಿಗೆ ಸಿಕ್ಕಿಬಿಟ್ಟಿತ್ತು. ಹಾಗೆ ಕಾಂಗ್ರೆಸ್ ತೊರೆದ ಹಿರಿಯ ನಾಯಕರಲ್ಲಿ ಕನಿಷ್ಠ 30 ಮಂದಿ ಹಲವು ಹಂತಗಳ ಅಧಿಕಾರ ಅನುಭವಿಸಿದವರೇ ಇದ್ದರು. ಮಾಜಿ ಕೇಂದ್ರ ಸಚಿವರು, ಲೋಕಸಭೆ, ರಾಜ್ಯಸಭೆಯ ಮಾಜಿ ಸದಸ್ಯರು, ತಮ್ಮ ರಾಜ್ಯಗಳಲ್ಲಿ ಸಿಎಂ ಹುದ್ದೆ ಅಥವಾ ಇತರ ಮಂತ್ರಿಗಿರಿಯನ್ನು ಅನುಭವಿಸಿದ್ದವರು, ಅಲ್ಲದೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷರಾಗಿದ್ದವರು ಕಡೆಗೊಂದು ದಿನ ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಯ ತಾವರೆಯನ್ನು ಹಿಡಿದಿದ್ದರು.

ಕಾಂಗ್ರೆಸ್ ಸರಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ, ಆದರೆ ಪಕ್ಷವನ್ನು ತೊರೆಯಲು ನಿರ್ಧರಿಸಿದ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಯುಪಿಎ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ, ಕರ್ನಾಟಕದ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರಂಥವರಿದ್ದರು. ಕಾಂಗ್ರೆಸ್ ತೊರೆದ ಹೊಸ ತಲೆಮಾರಿನ ನಾಯಕರಲ್ಲಿ ಕಾಂಗ್ರೆಸ್‌ನ ಭವಿಷ್ಯದ ನಾಯಕ ಎಂದು ಬಿಂಬಿತರಾದವರಲ್ಲಿ ಒಬ್ಬರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಥರದವರಿದ್ದರು.

ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್‌ನ ಹಲವಾರು ಮಾಜಿ ಮುಖ್ಯಮಂತ್ರಿಗಳು ಸಹ ಪಕ್ಷ ಬದಲಾಯಿಸಿದ್ದಾರೆ.

ಈ ಪಟ್ಟಿಯಲ್ಲಿ ಜೀವನದ ಕಡೇ ದಿನಗಳಲ್ಲಿ ಕಾಂಗ್ರೆಸ್ ತೊರೆದ ಎನ್.ಡಿ. ತಿವಾರಿಯೂ ಒಬ್ಬರು. ಅವರು ಉತ್ತರ ಪ್ರದೇಶ, ಉತ್ತರಾಖಂಡದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಕಡೆಗೆ ರಾಜ್ಯಪಾಲರೂ ಆಗಿ ಸೇವೆ ಸಲ್ಲಿಸಿದ್ದವರು. 2017ರಲ್ಲಿ ತಮ್ಮ ಪತ್ನಿ ಉಜ್ವಲಾ ಮತ್ತು ಮಗ ರೋಹಿತ್ ಅವರೊಂದಿಗೆ ಬಿಜೆಪಿ ಸೇರಿದ್ದರು. ಆಗ ಅವರಿಗೆ 92 ವರ್ಷ ವಯಸ್ಸು. ಮಾರನೇ ವರ್ಷವೇ ಅವರು ತೀರಿಕೊಂಡಿದ್ದರು.

ಕೇರಳದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ, ಮಾಜಿ ಸಿಎಂ ದಿ. ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಅವರು ಇದೇ ಮಾರ್ಚ್‌ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಕೇರಳದ ಮತ್ತೊಬ್ಬ ಪ್ರಮುಖ ಕಾಂಗ್ರೆಸ್ ನಾಯಕ, ಮಾಜಿ ರಕ್ಷಣಾ ಸಚಿವ, ಕೇರಳದ ಮಾಜಿ ಮುಖ್ಯಮಂತ್ರಿ ಎ.ಕೆ. ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಕಳೆದ ವರ್ಷ ಎಪ್ರಿಲ್‌ನಲ್ಲಿ ಬಿಜೆಪಿ ಸೇರಿದ್ದರು. ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಪಕ್ಷದಲ್ಲಿ ನವಜೋತ್ ಸಿಂಗ್ ಸಿಧು ಯಾವ ಕಾರಣಕ್ಕೂ ಸಿಎಂ ಆಗಕೂಡದೆಂದೇ ಕಾಂಗ್ರೆಸ್ ತೊರೆದು ತನ್ನದೇ ಪಕ್ಷ ಕಟ್ಟಿದರಾದರೂ, 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಅವರ ಆಟವಾಗಲಿ, ಕಾಂಗ್ರೆಸ್ ಆಟವಾಗಲಿ ನಡೆಯದೆ, ಎಎಪಿ ಅಧಿಕಾರಕ್ಕೆ ಬಂದಿತ್ತು. ಅದಾದ ಬಳಿಕ ಮಗಳೊಂದಿಗೆ ಅಮರಿಂದರ್ ಸಿಂಗ್ ಬಿಜೆಪಿ ಸೇರಿದರು.

ದೇಶದ ಕೊಂಕಣ ರಾಜಕೀಯದಲ್ಲಿ ಪ್ರಸಿದ್ಧರಾಗಿರುವ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚೌಹಾಣ್ 2024ರ ಫೆಬ್ರವರಿಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಮಹಾರಾಷ್ಟ್ರದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ 2019ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ಸಂಪುಟ ಸಹೋದ್ಯೋಗಿ ಹರ್ಷವರ್ಧನ್ ಪಾಟೀಲ್ ಅವರೊಂದಿಗೆ ಬಿಜೆಪಿ ಸೇರಿದರು.

ಗುಜರಾತ್‌ನ ಅತ್ಯಂತ ಹಿರಿಯ ಕಾಂಗ್ರೆಸಿಗರಲ್ಲಿ ಒಬ್ಬರಾದ, ರಾಜ್ಯದ ಮಾಜಿ ಮುಖ್ಯಮಂತ್ರಿ ಶಂಕರ್‌ಸಿನ್ಹಾ ವಘೇಲಾ 2019ರಲ್ಲಿ ಬಿಜೆಪಿ ಸೇರಿದರು. ವಘೇಲಾ ಯುಪಿಎ ಮೊದಲ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಮತ್ತು ನಂತರ ಗುಜರಾತ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದರು.

ಗೋವಾ ಕಾಂಗ್ರೆಸ್‌ನ ಪ್ರಮುಖ ಹೆಸರಾಗಿದ್ದ, ಮಾಜಿ ಸಿಎಂ ರವಿ ನಾಯಕ್ ಕೂಡ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ, 2002ರ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಮರಳಿ, ಅಂತಿಮವಾಗಿ 2017ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಗೋವಾದ ಮತ್ತೊಬ್ಬ ಪ್ರಮುಖ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ದಿಗಂಬರ್ ಕಾಮತ್ 1994ರಲ್ಲೊಮ್ಮೆ ಬಿಜೆಪಿ ಸೇರಿ, 2005ರಲ್ಲಿ ಕಾಂಗ್ರೆಸ್‌ಗೆ ಮರಳಿ, ಅಂತಿಮವಾಗಿ 2022ರಲ್ಲಿ ಮತ್ತೋರ್ವ ಹಿರಿಯ ಕಾಂಗ್ರೆಸಿಗ ಮೈಕೆಲ್ ಲೋಬೋ ಹಾಗೂ ಇತರ 6 ಕಾಂಗ್ರೆಸ್ ಶಾಸಕರೊಂದಿಗೆ ಬಿಜೆಪಿ ಸೇರಿದರು.

2016ರ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಉತ್ತರಾಖಂಡದ ಹಲವಾರು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದರು. ಅವರಲ್ಲಿ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ, ಉತ್ತರಾಖಂಡ ವಿಧಾನಸಭೆಯ ಮಾಜಿ ಸ್ಪೀಕರ್ ಯಶ್ಪಾಲ್ ಆರ್ಯ, ಸಚಿವರಾಗಿ ಸೇವೆ ಸಲ್ಲಿಸಿದ ಹರನ್ ಸಿಂಗ್, ಸತ್ಪಾಲ್ ಮಹಾರಾಜ್ ಪ್ರಮುಖರು.

ಉತ್ತರಪ್ರದೇಶದಲ್ಲಿಯೂ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲು ಪಕ್ಷವನ್ನು ತೊರೆದರು.

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ರೀಟಾ ಬಹುಗುಣ ಜೋಶಿ ಬಿಜೆಪಿ ಸೇರಲು ನಿರ್ಧರಿಸಿದರು. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಿ, ಅದಕ್ಕೂ ಮೊದಲು ಕಾಂಗ್ರೆಸ್‌ನ ಮಹಿಳಾ ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಕಡೆಗೆ ಆದಿತ್ಯನಾಥ್ ಸರಕಾರದಲ್ಲಿ ಸಚಿವೆಯಾದರು. ಉತ್ತರ ಪ್ರದೇಶ ಮಾಜಿ ಸಿಎಂ, ಕಾಂಗ್ರೆಸ್ ಘಟಕದ ಮತ್ತೊಬ್ಬ ಮಾಜಿ ಅಧ್ಯಕ್ಷ, ಲೋಕಸಭಾ ಸದಸ್ಯ ಜಗದಂಬಿಕಾ ಪಾಲ್ 2014ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡರು. ಉತ್ತರ ಪ್ರದೇಶ ಕಾಂಗ್ರೆಸ್‌ನಲ್ಲಿ ಒಮ್ಮೆ ಪ್ರಭಾವಿಯಾಗಿದ್ದ ಭೋಜ್‌ಪುರಿ ಟಿವಿ ನಟ ರವಿ ಕಿಶನ್, ಅಮರ್‌ಪಾಲ್ ತ್ಯಾಗಿ, ಧೀರೇಂದ್ರ ಸಿಂಗ್ ಅವರಂತಹ ನಾಯಕರು ಸಹ 2016ರ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು ಪಕ್ಷಾಂತರಗೊಂಡರು. ಉತ್ತರ ಪ್ರದೇಶದ ಇನ್ನೋರ್ವ ಪ್ರಭಾವೀ ಕಾಂಗ್ರೆಸ್ ಮುಖಂಡ, ರಾಹುಲ್ ಗಾಂಧಿ ಆಪ್ತ ವಲಯದಲ್ಲಿದ್ದ ಜಿತಿನ್ ಪ್ರಸಾದ್ 2021ರಲ್ಲಿ ಬಿಜೆಪಿ ಸೇರಿದರು. ಮೊದಲು ಆದಿತ್ಯನಾಥ್ ಸರಕಾರದಲ್ಲಿ ಸಚಿವರಾದ ಅವರು ಈಗ ಮೋದಿ ಸರಕಾರದಲ್ಲಿ ವಾಣಿಜ್ಯ ಖಾತೆಯ ರಾಜ್ಯ ಸಚಿವರು. ಕಾಂಗ್ರೆಸ್ ನಲ್ಲಿರುವಾಗ ಯುಪಿಎ ಸರಕಾರದಲ್ಲೇ ಸಚಿವ ಸ್ಥಾನ ಗಿಟ್ಟಿಸಿದ್ದ ಈ ಜಿತಿನ್ ಪ್ರಸಾದ್ ಈಗ ಬಿಜೆಪಿ ಸರಕಾರದಲ್ಲಿ ಸಚಿವರು.

ಛತ್ತೀಸ್‌ಗಡದಿಂದ ಕಾಂಗ್ರೆಸ್ ಮಾಜಿ ಕಾರ್ಯಾಧ್ಯಕ್ಷ ರಾಮದಯಾಳ್ ಉಯಿಕೆ 2018ರಲ್ಲಿ ಬಿಜೆಪಿ ಸೇರಿದರು.

ಈಶಾನ್ಯದಲ್ಲಿ, ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

ಮಣಿಪುರದ ಆಗಿನ ಕಾಂಗ್ರೆಸ್ ಮುಖ್ಯಮಂತ್ರಿ ಇಬೋಬಿ ಸಿಂಗ್ ಅವರೊಂದಿಗಿನ ಭಿನ್ನಾಭಿಪ್ರಾಯಗಳ ಬಳಿಕ ಅವರು ಬಿಜೆಪಿ ಸೇರಿದ್ದರು. ಅರುಣಾಚಲ ಪ್ರದೇಶದಲ್ಲಿ, ಪ್ರಸಕ್ತ ಬಿಜೆಪಿ ಮುಖ್ಯಮಂತ್ರಿ ಪ್ರೇಮಾ ಖಂಡು ಕೂಡ 2016ರಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದರು. ಅಸ್ಸಾಮಿನಲ್ಲೂ ಬಿಜೆಪಿ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಒಂದು ಕಾಲದಲ್ಲಿ ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರ ಆಪ್ತ ಸಹಾಯಕರಾಗಿದ್ದರು. ಆದರೆ 2016ರಲ್ಲಿ ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರ್ಪಡೆಯಾದರು.

ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಸಂಸದರು ಪಕ್ಷ ಬದಲಾಯಿಸಿದ್ದಾರೆ. ಅವರಲ್ಲಿ ರಾಜ್ಯಸಭಾ ಸಂಸದ ಮತ್ತು ಮೇಲ್ಮನೆಯಲ್ಲಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾಗಿದ್ದ ಭುವನೇಶ್ವರ್ ಕಲಿಟಿಯಾ, ಅಸ್ಸಾಮಿನ ಮಾಜಿ ಕಾಂಗ್ರೆಸ್ ಅಧ್ಯಕ್ಷ ಹಿರಣ್ಯ ಭೂಯಾನ್ ಮತ್ತು ಮಾಜಿ ರಾಜ್ಯಸಭಾ ಸಂಸದ ಸ್ಯಾಂಟಿಯುಸ್ ಕುಜುರ್ ಸೇರಿದ್ದಾರೆ. ಶೀಲಾ ದೀಕ್ಷಿತ್ ಸಂಪುಟದ ಮಾಜಿ ಸಚಿವರು ಮತ್ತು ದಿಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರುಗಳಾದ ಕೃಷ್ಣ ತಿರತ್, ರಾಜ್ ಕುಮಾರ್ ಚೌಹಾಣ್, ಕಾಂಗ್ರೆಸ್ ಮಹಿಳಾ ಮೋರ್ಚಾ ಅಧ್ಯಕ್ಷೆ ಬರ್ಖಾ ಸಿಂಗ್ ಕೂಡ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದಾರೆ.

ಕಾಂಗ್ರೆಸ್‌ನ ಹಿರಿಯ ವಕ್ತಾರ ಟಾಮ್ ವಡಕ್ಕನ್ 2019ರ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿದ್ದು, ಹಲವರನ್ನು ಅಚ್ಚರಿಗೊಳಿಸಿತ್ತು.

ವಿವಿಧ ರಾಜ್ಯಗಳ ಹಲವಾರು ಶಾಸಕರು ಕಾಂಗ್ರೆಸ್ ತೊರೆದಿದ್ದಾರೆ ಮತ್ತು ಕೆಲವು ಸಂದರ್ಭಗಳಲ್ಲಿ, ಅವರ ಪಕ್ಷಾಂತರಗಳು ಆ ರಾಜ್ಯಗಳಲ್ಲಿನ ಸರಕಾರಗಳ ಪತನಕ್ಕೂ ಕಾರಣವಾಗಿವೆ. ಉದಾಹರಣೆಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ 14 ಶಾಸಕರು ಪಕ್ಷ ತೊರೆದ ಪರಿಣಾಮವಾಗಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನವಾಯಿತು. ಈ ಶಾಸಕರು ಬಿಜೆಪಿ ಸೇರಲು ಪಕ್ಷ ತೊರೆದಿದ್ದರು. ನಂತರ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತು. ಅದೇ ರೀತಿ, ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಕನಿಷ್ಠ 22 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದರು. ಇದರ ಪರಿಣಾಮವಾಗಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರ ಪತನಗೊಂಡಿತು. ಗೋವಾದಲ್ಲಿ 15 ಶಾಸಕರಲ್ಲಿ 10 ಮಂದಿ ಬಿಜೆಪಿ ನೇತೃತ್ವದ ಸರಕಾರ ಸೇರಲು ಕಾಂಗ್ರೆಸ್ ಅನ್ನು ತ್ಯಜಿಸಿದ್ದರು.

ಮೋದಿ ಸರಕಾರದ ಈ.ಡಿ., ಸಿಬಿಐ ಅಸ್ತ್ರಕ್ಕೆ ಹೆದರಿ ಬಿಜೆಪಿ ಸೇರಿದ್ದ ಕಾಂಗ್ರೆಸ್ ನಾಯಕರೆಂದರೆ, ಎಸ್.ಎಂ. ಕೃಷ್ಣ, ಅಶೋಕ್ ಚೌಹಾಣ್, ರವಿ ನಾಯಕ್, ದಿಗಂಬರ್ ಕಾಮತ್, ಹಿಮಂತ ಬಿಸ್ವಾ ಶರ್ಮಾ.

ಇಲ್ಲಿ ಉಳಿಯದೆ ಅಲ್ಲಿಯೂ ಸಲ್ಲದ ಎಸ್.ಎಂ. ಕೃಷ್ಣ:

ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ, ಮಹಾರಾಷ್ಟ್ರ ರಾಜ್ಯಪಾಲ, ವಿದೇಶಾಂಗ ಸಚಿವ ಹೀಗೆ ಕಾಂಗ್ರೆಸ್‌ನಲ್ಲಿ ಕೃಷ್ಣ ಅನುಭವಿಸದೇ ಉಳಿದ ಹುದ್ದೆಗಳೇ ಇಲ್ಲ. ಅಷ್ಟಾಗಿಯೂ ಕಾಂಗ್ರೆಸ್ ಜೊತೆಗಿನ ಐದೂವರೆ ದಶಕಗಳ ಸಂಬಂಧವನ್ನು ತಮ್ಮ 85ನೇ ವಯಸ್ಸಿನಲ್ಲಿ ಕೊನೆಗೊಳಿಸಿಕೊಂಡರು. 1962ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದರೊಂದಿಗೆ ಶುರುವಾಗಿದ್ದ ಕೃಷ್ಣ ರಾಜಕಾರಣ ಕಾಂಗ್ರೆಸ್ ಮೂಲಕವೇ ಉತ್ತುಂಗ ಮುಟ್ಟಿತ್ತು. ಚುನಾವಣೆಗೆ ಮೊದಲು ಯಾತ್ರೆ ಹೊರಡುವ ಹೊಸ ರೂಢಿಯೊಂದನ್ನು 1999ರಲ್ಲಿ ತಮ್ಮ ಪಾಂಚಜನ್ಯ ಯಾತ್ರೆ ಮೂಲಕ ಪರಿಚಯಿಸಿದ ಕೃಷ್ಣ 1999ರಿಂದ 2004ರವರೆಗೆ ಕರ್ನಾಟಕದ ಪೂರ್ಣಾವಧಿ ಸಿಎಂ ಆಗಿದ್ದರು. 2004ರಲ್ಲಿ ಮಹಾರಾಷ್ಟ್ರ ರಾಜ್ಯಪಾಲರಾದರು. 2009ರಲ್ಲಿ ಯುಪಿಎ 2ನೇ ಅವಧಿಯಲ್ಲಿ ವಿದೇಶಾಂಗ ಸಚಿವರಾಗುವ ಯೋಗ ಪ್ರಾಪ್ತವಾಯಿತು. ಆದರೆ 2012ರಲ್ಲಿ ಹುದ್ದೆ ತ್ಯಜಿಸಿದ ಅವರು, ಬಳಿಕ ಹಾಗೂ ಹೀಗೂ 3 ವರ್ಷ ತಳ್ಳಿ 2017ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ‘‘ವಯಸ್ಸು ಎನ್ನುವುದು ಒಂದು ನಂಬರ್ ಅಷ್ಟೆ. ಕಾಂಗ್ರೆಸ್‌ಗೆ ಸಮರ್ಥ ನಾಯಕತ್ವ ಬೇಕಿಲ್ಲ. ಅದಕ್ಕೆ ಬೇಕಿರುವುದು ಮ್ಯಾನೇಜರ್‌ಗಳು’’ ಎಂದು ತನ್ನನ್ನು ಅಷ್ಟು ಕಾಲವೂ ಬೆಳೆಸಿದ ಪಕ್ಷದ ಬಗ್ಗೆ ತಿರಸ್ಕಾರದ ಮಾತನ್ನಾಡಿದ್ದರು. ವಿಪರ್ಯಾಸವೆಂದರೆ, ಹಾಗೆ ಹೇಳಿದ್ದವರು ಬಿಜೆಪಿಯೊಳಗೆ ಪೂರ್ತಿ ತಿರಸ್ಕೃತರಂತೆಯೇ ಉಳಿಯಬೇಕಾಯಿತು. ಬಹುಶಃ ಅವರು ಬಿಜೆಪಿ ಸೇರಿದ್ದರ ಹಿಂದೆ ಇದ್ದ ಅಸಲೀ ಕಾರಣದಿಂದಲೇ ಅವರು ಅಂಥ ತಿರಸ್ಕಾರಕ್ಕೆ ಒಳಗಾಗುವಂತಾಯಿತೆ? ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ಮುಂದಿಟ್ಟು ಬೆದರಿಸಿದ ಪರಿಣಾಮವಾಗಿ ಅವರು ಬಿಜೆಪಿಗೆ ಸೇರುವ ಸನ್ನಿವೇಶ ಸೃಷ್ಟಿಯಾಗಿತ್ತು ಎಂಬ ಮಾತುಗಳಿವೆ. ಪಕ್ಷಾಂತರ ಮಾಡುವ ಮೂಲಕ ಅಳಿಯನ ಅಕ್ರಮಗಳನ್ನು ಸಕ್ರಮಗೊಳಿಸಲು ಪ್ರಯತ್ನಿಸಿದ್ದರು. ಆದರೆ ಅದರಿಂದಲೂ ಅವರ ಕುಟುಂಬಕ್ಕೆ ವಿಶೇಷ ಪ್ರಯೋಜನವೇನೂ ಆಗದೇ ಹೋಗಿತ್ತು. ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಅವರ ಅಳಿಯ, ಕಾಫಿ ಡೇ ಮಾಲಕ ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡರು. ಹೆಸರಿಗಷ್ಟೇ ರಾಜಕೀಯದಲ್ಲಿ, ಬಿಜೆಪಿಯಲ್ಲಿ ಇದ್ದ ಕೃಷ್ಣ 2022ರಲ್ಲಿ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು.

ಅಶೋಕ್ ಚೌಹಾಣ್ ಎದುರು ಬಿಜೆಪಿ ಹಿಡಿದಿದ್ದ ಆ ಫೈಲ್ ಯಾವುದು?

ಮುಂಬೈನಲ್ಲಿನ ಆದರ್ಶ ಹೌಸಿಂಗ್ ಸೊಸೈಟಿ ಹಗರಣ ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು.

ಆಗ ಮಹಾರಾಷ್ಟ್ರ ಸಿಎಂ ಆಗಿದ್ದ ಅಶೋಕ್ ಚೌಹಾಣ್ ಹೆಸರು ಕೂಡ ಹಗರಣದಲ್ಲಿ ಕೇಳಿಬಂದಿತ್ತು. ಕಾರ್ಗಿಲ್ ಯುದ್ಧದ ವೀರರಿಗೆ ಮತ್ತು ಅಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗಾಗಿ ಕಟ್ಟಲಾಗಿದ್ದ ವಸತಿ ಸಂಕೀರ್ಣದಲ್ಲಿ ಬೇನಾಮಿಗಳಿಗೆ ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಿದ್ದ ಆರೋಪ ಚೌಹಾಣ್ ಮೇಲಿತ್ತು. ಅದರ ಹೊರತಾಗಿಯೂ ಕಾಂಗ್ರೆಸ್ ಅವರನ್ನು ಅಧಿಕಾರ ವಂಚಿತರನ್ನಾಗಿ ಮಾಡದೆ ಬೆಂಬಲಕ್ಕೆ ನಿಂತಿತ್ತು. ಸಂಸದರಾದರು. ಎಂಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲಾಯಿತು. 2019ರಲ್ಲಿ ಲೋಕಸಭೆ ಚುನಾವಣೆ ಸೋತಾಗಲೂ ವಿಧಾನಸಭೆಗೆ ಗೆಲ್ಲಿಸಲಾಯಿತು. 2023ರಲ್ಲಿ ಸಿಡಬ್ಲ್ಯುಸಿಗೆ ನಾಮನಿರ್ದೇಶನ ಮಾಡಲಾಯಿತು. ಆದರೂ ಚೌಹಾಣ್ 2024ರಲ್ಲಿ ಮೂರು ದಶಕಗಳ ಕಾಂಗ್ರೆಸ್ ಸಂಬಂಧವನ್ನು ಕಡಿದುಕೊಂಡು ಬಿಜೆಪಿ ಸೇರಿದರು. ಬಿಜೆಪಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತು.

ಚೌಹಾಣ್ ಅವರನ್ನು ಸೆಳೆಯಲೆಂದೇ ಬಿಜೆಪಿ ಆದರ್ಶ ಹೌಸಿಂಗ್ ಸೊಸೈಟಿ ಹಗರಣದ ಫೈಲ್ ಕ್ಲೋಸ್ ಮಾಡದೆ ಇಟ್ಟಿತ್ತು. ತನ್ನ ಮೇಲಿರುವ ಒತ್ತಡದ ಬಗ್ಗೆ ಚೌಹಾಣ್ ಕಾಂಗ್ರೆಸ್ ಹೈಕಮಾಂಡ್ ಬಳಿ ಗೋಳಾಡಿದ್ದರು ಎಂಬ ಮಾತುಗಳಿವೆ. ನಿಸ್ಸಹಾಯಕ ಚೌಹಾಣ್ ತಾನು ಸ್ವಇಚ್ಛೆಯಿಂದ ಬಿಜೆಪಿ ಸೇರಿದ್ದಾಗಿ ಹೇಳಿಕೊಂಡಿದ್ದರು.

ರವಿ ನಾಯಕ್ ಬೆಂಬತ್ತಿದ್ದ ನಾರ್ಕೋಟಿಕ್ ಕೇಸ್ ನೆಪ

2010ರಲ್ಲಿ ಗೋವಾದ ಅಂಜುನಾ ಬೀಚ್‌ನಲ್ಲಿ ವಿದೇಶಿ ಯುವತಿಯ ಸಾವು ಸಂಭವಿಸಿದಾಗ, ಆಕೆಗೆ ಡ್ರಗ್ಸ್ ನೀಡಿದ್ದ ಆರೋಪ ಆಗಿನ ಮಹಾರಾಷ್ಟ್ರ ಗೃಹಮಂತ್ರಿಯಾಗಿದ್ದ ರವಿ ನಾಯಕ್ ಪುತ್ರ ರಾಯ್ ನಾಯಕ್ ಮೇಲೆ ಬಂದಿತ್ತು.

ರವಿ ನಾಯಕ್ ರಾಜೀನಾಮೆ ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿ ಆಸೆಂಬ್ಲಿಯಲ್ಲಿ ಬಿಜೆಪಿ ದೊಡ್ಡ ಕೋಲಾಹಲವನ್ನೇ ಮಾಡಿತ್ತು. ಆದರೆ ರವಿ ನಾಯಕ್ ಅವರ ಇಬ್ಬರೂ ಪುತ್ರರು ರಾಯ್ ಮತ್ತು ರಿತೇಶ್ ಬಿಜೆಪಿ ಸೇರುವುದರೊಂದಿಗೆ ವಿವಾದಗಳೆಲ್ಲ ಇದ್ದಕ್ಕಿದ್ದಂತೆ ತಣ್ಣಗಾಗಿದ್ದವು. ಅದಾದ ಬಳಿಕ ಎರಡು ಬಾರಿ ರವಿ ನಾಯಕ್‌ಗೋವಾ ಸಿಎಂ ಆದರೂ, ಕೇಂದ್ರ ತನಿಖಾ ಏಜೆನ್ಸಿಯ ಬೆದರಿಕೆ ತೂಗುಗತ್ತಿಯಂತೆ ಅವರನ್ನು ಕಾಡುತ್ತಲೇ ಇತ್ತು. ಕಡೆಗೂ 2017ರಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

ದಿಗಂಬರ್ ಕಾಮತರ ಸಾವಿರಾರು ಕೋಟಿ ರೂ. ಲಂಚದ ಕಥೆ

ಈ.ಡಿ. ನದರು ತಮ್ಮ ಮೇಲೆ ಬಿದ್ದಾಗ ದಿಗಂಬರ್ ಕಾಮತ್ ಗೋವಾ ಅಸೆಂಬ್ಲಿಯ ವಿಪಕ್ಷ ನಾಯಕರಾಗಿದ್ದರು. ಗೋವಾ ಸಿಎಂ ಆಗಿದ್ದ ಅವಧಿಯಲ್ಲಿ ಕುಡಿಯುವ ನೀರು ಯೋಜನೆ ಗುತ್ತಿಗೆಯನ್ನು ವಿದೇಶಿ ಕಂಪೆನಿಗೆ ಕೊಡಲು 1,000 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬುದು ಅವರ ಮೇಲಿನ ಆರೋಪವಾಗಿತ್ತು. ಖಾಸಗಿ ಕಂಪೆನಿಗಳಿಗೆ ಅಕ್ರಮ ಗಣಿಗಾರಿಕೆಗೆ ದಾರಿ ಮಾಡಿಕೊಡಲು 35,000 ಕೋಟಿ ರೂ. ಲಂಚ ತೆಗೆದುಕೊಂಡಿರುವ ಮತ್ತೊಂದು ಆರೋಪವೂ ಅವರನ್ನು ಸುತ್ತಿಕೊಂಡಿತ್ತು.

ಬಿಜೆಪಿ ಅಧಿಕಾರಕ್ಕೆ ಬಂದಾಗ ತನಿಖೆಗೆ ಎಸ್‌ಐಟಿ ರಚನೆಯಾಗಿತ್ತು. ಅವರ ರಕ್ಷಣೆಗೆ ಕಾಂಗ್ರೆಸ್ ಕಸರತ್ತು ಮಾಡಿತಾದರೂ, 2022ರ ಅಸೆಂಬ್ಲಿ ಚುನಾವಣೆಯಲ್ಲಿ ಅದು ಬರೀ 11 ಸೀಟುಗಳನ್ನು ಗೆದ್ದಾಗ ಪರಿಸ್ಥಿತಿ ಕೈಮೀರಿತ್ತು. 8 ಶಾಸಕರೊಂದಿಗೆ ಕಾಮತ್ ಬಿಜೆಪಿಗೆ ಹೋಗಿಯೇ ಬಿಟ್ಟರು. ಅವರ ಮೇಲಿನ ಸಾವಿರಾರು ಕೋಟಿ ರೂ. ಲಂಚ ಪಡೆದ ಆರೋಪದ ಬಗ್ಗೆ ಆಮೇಲೆ ಎಲ್ಲೂ ಮಾತುಗಳೇ ಇರಲಿಲ್ಲ.

ಬಿಜೆಪಿ ವಾಷಿಂಗ್ ಮಷಿನ್‌ನಲ್ಲಿ ಕ್ಲೀನ್ ಆದ ಹಿಮಂತ ಬಿಸ್ವಾ ಶರ್ಮಾ:e

ಬಿಜೆಪಿ ಸೇರಿ ಅಸ್ಸಾಂ ಸಿಎಂ ಆಗಿರುವ ಹಿಮಂತ ಬಿಸ್ವಾ ಶರ್ಮಾ ಒಂದು ಕಾಲದಲ್ಲಿ ಮಾಜಿ ಸಿಎಂ ತರುಣ್ ಗೊಗೊಯಿ ಅವರ ಪರಮಾಪ್ತರಾಗಿದ್ದವರು. ಶಾರದಾ ಚಿಟ್ ಫಂಡ್ ಹಗರಣ, ಲೂಯಿಸ್ ಬರ್ಗರ್ ಹಗರಣದಂಥ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಅವರ ಹೆಸರಿತ್ತು. ಕಾಂಗ್ರೆಸ್‌ನಲ್ಲಿದ್ದಾಗ ಸಿಬಿಐ ವಿಚಾರಣೆಯೂ ನಡೆದಿತ್ತು. ಆಮೇಲೆ ಬಿಜೆಪಿ ಸೇರಿದ ಅವರು ಸಿಎಂ ಆಗಿದ್ದಾರೆ. ಅಮಿತ್ ಶಾಗೆ ಬಹಳ ಬೇಕಾದ ನಾಯಕ. ಹಾಗಾಗಿ ಅವರನ್ನು ಸುತ್ತಿಕೊಂಡಿದ್ದ ಹಗರಣಗಳು ಹಿಂದಕ್ಕೆ ಸರಿದಿವೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News