ಅಮಿತ್ ಶಾರಂತಹವರಿಗೆ ಅಂಬೇಡ್ಕರ್ ಹೆಸರು ಫ್ಯಾಷನ್ ಆಗಿಯೇ ಕಾಣುತ್ತದೆ ಏಕೆಂದರೆ...
ಸುಳ್ಳು ಹೇಳಿ, ಇತಿಹಾಸದ ಯಾವುದೋ ಒಂದು ಮೂಲೆಯ ಒಂದು ಅಂಶವನ್ನು ಎತ್ತಿಕೊಂಡು, ಪತ್ರದ ಯಾವುದೋ ಒಂದು ಸಾಲು ಎತ್ತಿಕೊಂಡು ತಮಗೆ ಬೇಕಾದ ನಿರೂಪಣೆಯನ್ನು ಕಟ್ಟುವ ಅಮಿತ್ ಶಾರಂತಹವರಿಗೆ ಅಂಬೇಡ್ಕರ್ ಹೆಸರನ್ನು ಹೇಳುವುದು ಫ್ಯಾಷನ್ ಆಗಿಯೇ ಕಾಣುತ್ತದೆ ಮತ್ತು ಅಂಥವರು ಅಂಬೇಡ್ಕರ್ ವಿಚಾರಗಳ ಆಳದಲ್ಲಿನ ವೈಚಾರಿಕ ಪ್ರಖರತೆಯನ್ನು ಎದುರಿಸುವುದು ಎಂದೆಂದಿಗೂ ಸಾಧ್ಯವಿಲ್ಲ. ಮತ್ತೊಮ್ಮೆ ಶಾ ಥರದವರು ಸುಳ್ಳುಗಳದ್ದೇ ಮೊರೆಹೋಗುತ್ತಾರೆ, ಸುಳ್ಳುಗಳ ಮರೆಯಲ್ಲಿ ನಿಂತೇ ರಾಜಕೀಯ ಮಾಡುತ್ತಾರೆ. ಗೋಳ್ವಾಲ್ಕರ್, ಹೆಡ್ಗೆವಾರ್, ಸಾವರ್ಕರ್, ಗೋಡ್ಸೆಯನ್ನು ಆರಾಧಿಸುವವರು ಮತ್ತೊಂದು ಕಡೆಯಿಂದ ಅಂಬೇಡ್ಕರ್ ಅವರ ಹೆಸರನ್ನೂ ತೆಗೆದುಕೊಳ್ಳುವುದರ ಹಿಂದೆ ಇರುವುದು ಗೌರವವಲ್ಲ, ರಾಜಕಾರಣ ಮಾತ್ರ.
ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಈಗ ಫ್ಯಾಷನ್ ಆಗಿಬಿಟ್ಟಿದೆ ಎಂದು ಅಮಿತ್ ಶಾ ಹೇಳಿದ್ದು ದೊಡ್ಡ ವಿವಾದ ಸೃಷ್ಟಿಸಿದೆ. ‘ಅಂಬೇಡ್ಕರ್’ ‘ಅಂಬೇಡ್ಕರ್’ ಎಂದು ಆರು ಬಾರಿ ಪುನರಾವರ್ತಿಸಿ, ಅದು ಫ್ಯಾಷನ್ ಆಗಿಬಿಟ್ಟಿದೆ ಎಂದಿದ್ದರು. ‘‘ಅಂಬೇಡ್ಕರ್ ಹೆಸರನ್ನು ಹೇಳುವುದು ಫ್ಯಾಷನ್ ಆಗಿಬಿಟ್ಟಿದೆ. ಅಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮದವರೆಗೆ ಸ್ವರ್ಗವಾದರೂ ಸಿಗುತ್ತಿತ್ತು’’ ಎಂದು ಶಾ ಹೇಳಿದ್ದರು. ಬಿಜೆಪಿ ಮತ್ತು ಆರೆಸ್ಸೆಸ್ ಮೊದಲು ಗಾಂಧಿಯನ್ನು, ಆನಂತರ ನೆಹರೂ ಅವರನ್ನು ಅವಹೇಳನ ಮಾಡಿಕೊಳ್ಳುತ್ತಲೇ ಬಂದಿವೆ. ಈಗ ಅಂಬೇಡ್ಕರ್ ಅವರನ್ನು ಅವಹೇಳನ ಮಾಡಲಾಗುತ್ತಿದೆ. ಆದರೆ ಇಲ್ಲೊಂದು ವ್ಯತ್ಯಾಸವೇನೆಂದರೆ, ಅಂಬೇಡ್ಕರ್ ಅವರನ್ನು ನೇರವಾಗಿ ನಿಂದಿಸದೆ, ಅವರ ಬಗ್ಗೆ ಗೌರವ ಪ್ರಕಟಿಸಿದಂತೆ ಮಾಡುತ್ತಲೇ ಅವರನ್ನು ತನ್ನ ರಾಜಕಾರಣದಲ್ಲಿ ಅಪ್ರಸ್ತುತವಾಗಿಸುವ ಪಿತೂರಿಯನ್ನು ಅದು ನಡೆಸಿದೆ. ಡಾ. ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿಹಾಕಲು ಸಾಧ್ಯವಿರುವ ಎಲ್ಲಾ ಕೊಳಕು ತಂತ್ರಗಳನ್ನು ಬಿಜೆಪಿ ಮತ್ತು ಆರೆಸ್ಸೆಸ್ ಹೂಡುತ್ತಲೇ ಬಂದಿವೆ.
ಬಿಜೆಪಿ ಮತ್ತು ಆರೆಸ್ಸೆಸ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ವಿಚಾರಗಳನ್ನು ನೋಡುತ್ತಾ ಬಂದಿರುವುದಾದರೂ ಹೇಗೆ?:
1925ರಲ್ಲಿ ಆರೆಸ್ಸೆಸ್ ರಚನೆಯಾದ ಹಲವು ದಶಕಗಳ ನಂತರ, ಹಿಂದೂಗಳನ್ನು ಒಗ್ಗೂಡಿಸುವ ಅದರ ಮೂಲಭೂತ ಉದ್ದೇಶಕ್ಕೆ ಎರಡು ಪ್ರಮುಖ ಘಟನೆಗಳಿಂದ ಹಿನ್ನಡೆಯಾಗಿದೆ. ಮೊದಲನೆಯದು, ಅಂಬೇಡ್ಕರ್ ನೇತೃತ್ವದಲ್ಲಿ ದಲಿತರ ದೊಡ್ಡ ಪ್ರಮಾಣದ ಮತಾಂತರ. 1956ರಲ್ಲಿ ವಿಜಯದಶಮಿ ದಿನ, ನಾಗ್ಪುರದ ರೇಷಂಬಾಗ್‌ನಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಆರೆಸ್ಸೆಸ್ ಸರಸಂಘಚಾಲಕರು ತಮ್ಮ ಸಾಂಪ್ರದಾಯಿಕ ವಾರ್ಷಿಕ ಭಾಷಣ ಮಾಡುತ್ತಿದ್ದಾಗಲೇ, ಅಂಬೇಡ್ಕರ್ ಸುಮಾರು 5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧಧರ್ಮ ಸ್ವೀಕರಿಸಿದರು. ಅದಾಗಿ ಇನ್ನೂ 25 ವರ್ಷಗಳ ನಂತರ, ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನೂರಾರು ಕೆಳಜಾತಿಯ ಹಿಂದೂಗಳು ಇಸ್ಲಾಂಗೆ ಮತಾಂತರಗೊಂಡ ನಂತರ, ದಲಿತರನ್ನು ತನ್ನತ್ತ ಸೆಳೆಯಲು ಆರೆಸ್ಸೆಸ್ ಶುರು ಮಾಡಿತು. ವಿವಿಧ ಸ್ಥಳಗಳಲ್ಲಿ ಹಿಂದೂ ಸಮಾಗಮಗಳು ಅಥವಾ ಕೂಟಗಳನ್ನು ಆಯೋಜಿಸುವುದಕ್ಕೆ ತೊಡಗಿತು. 1989ರಲ್ಲಿ, ಹೆಡ್ಗೆವಾರ್ ಜನ್ಮ ಶತಮಾನೋತ್ಸವದ ವರ್ಷ, ಪ್ರತಿಯೊಂದು ಆರೆಸ್ಸೆಸ್ ಶಾಖೆ ತನ್ನ ವ್ಯಾಪ್ತಿಯ ದಲಿತ ಪ್ರದೇಶಗಳಲ್ಲಿ ಕನಿಷ್ಠ ಒಂದು ಶಿಕ್ಷಣ ಕೇಂದ್ರ ನಡೆಸುವಂತೆ ಸೂಚಿಸಲಾಯಿತು ಮತ್ತು ಅಂಥ ಚಟುವಟಿಕೆಗಳನ್ನು ನೋಡಿಕೊಳ್ಳಲು ಆರೆಸ್ಸೆಸ್‌ನಲ್ಲಿ ಸೇವಾ ವಿಭಾಗಗಳನ್ನು ಸ್ಥಾಪಿಸಲಾಯಿತು. 1990ರಲ್ಲಿ ಆರೆಸ್ಸೆಸ್ ಅಂಬೇಡ್ಕರ್ ಮತ್ತು ದಲಿತ ಸುಧಾರಕ ಜ್ಯೋತಿಬಾ ಫುಲೆ ಅವರ ಶತಮಾನೋತ್ಸವ ವರ್ಷವನ್ನು ಆಚರಿಸಿತು. ಆರೆಸ್ಸೆಸ್ ದಲಿತರನ್ನು ಓಲೈಸುವುದರಿಂದ ಬಿಜೆಪಿಗೆ ಹೆಚ್ಚಿನ ರಾಜಕೀಯ ಲಾಭವೇನೂ ಇತ್ತೀಚಿನವರೆಗೂ ಸಿಕ್ಕಿರಲಿಲ್ಲ. ಉತ್ತರ ಪ್ರದೇಶದಲ್ಲಿ ಕಾನ್ಶಿರಾಮ್ ಮತ್ತು ಮಾಯಾವತಿ ಮತ್ತು ಬಿಹಾರದಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರಂತಹ ದಲಿತ ನಾಯಕರ ಮುಂದೆ ಬಿಜೆಪಿ ಆಟ ನಡೆಯಲಿಲ್ಲ. ಮೇಲ್ಜಾತಿಯ ಪಕ್ಷ ಎಂಬ ಹಣೆಪಟ್ಟಿಯೇ ಅದಕ್ಕೆ ಅಂಟಿಕೊಂಡಿತು. ಇತ್ತೀಚಿನ ವರ್ಷಗಳಲ್ಲಂತೂ ಅದು ದಲಿತ ಮತಗಳ ಮೇಲೆ ಕಣ್ಣಿಟ್ಟುಕೊಂಡೇ ಅಂಬೇಡ್ಕರ್ ಅವರನ್ನು ಹೈಜಾಕ್ ಮಾಡಲು ನೋಡುತ್ತಿದೆ. ದಲಿತರಿಗೆ, ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಅದು ಮಾಡಿರುವ, ಮಾಡುತ್ತಿರುವ ಉಪಕಾರ ಅಷ್ಟರಲ್ಲೇ ಇದೆಯಾದರೂ, ಅಂಬೇಡ್ಕರ್ ಸ್ಮಾರಕಗಳನ್ನು ತಾನು ನಿರ್ಮಿಸಿದೆ ಎಂಬುದನ್ನು ಬಿಜೆಪಿ ದೊಡ್ಡದಾಗಿ ಹೇಳಿಕೊಳ್ಳುತ್ತಿದೆ. ಮೊನ್ನೆ ಕೂಡ ಮತ್ತೊಮ್ಮೆ ಅಮಿತ್ ಶಾ ಅದನ್ನೇ ಮಾಡಿದರು.
ರಾಜ್ಯಸಭೆಯಲ್ಲಿ ಅಂಬೇಡ್ಕರ್ ಕುರಿತ ಹೇಳಿಕೆ ಮೂಲಕ ಬಿಜೆಪಿ ಮತ್ತು ಅಮಿತ್ ಶಾ, ಅಂಬೇಡ್ಕರ್ ಅವಹೇಳನವನ್ನು ಮಾತ್ರ ಮಾಡಿರುವುದಲ್ಲ. ಬದಲಿಗೆ ಇತಿಹಾಸದ ಸತ್ಯಗಳನ್ನೂ ಮರೆಮಾಚಲಾಗಿದೆ. ಅದರೊಂದಿಗೆ ಬಿಜೆಪಿಯವರ ಪರಮ ಸುಳ್ಳುಗಳ ಸಂಚು ಮುಂದುವರಿದಿದೆ. ಅಂಬೇಡ್ಕರ್ ಹೆಸರನ್ನು ಹೇಳುವುದು ಫ್ಯಾಷನ್ ಆಗಿದೆ ಎಂಬ ಹೇಳಿಕೆಯ ಬೆನ್ನಲ್ಲೇ ಶಾ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಂಪುಟದಿಂದ ಅಂಬೇಡ್ಕರ್ ಏಕೆ ಹೊರಬಂದರು ಎಂಬುದಕ್ಕೆ ಮೂರು ಕಾರಣಗಳನ್ನು ಉಲ್ಲೇಖಿಸಿದರು. 370ನೇ ವಿಧಿ, ನೆಹರೂ ಅವರ ವಿದೇಶಾಂಗ ನೀತಿ ಮತ್ತು ಪರಿಶಿಷ್ಟ ವಿಭಾಗ ಮತ್ತು ಪರಿಶಿಷ್ಟ ಪಂಗಡದ ಜನರ ಹಕ್ಕುಗಳಿಗಾಗಿ ಸಮರ್ಥ ನಡೆಗಳ ಕೊರತೆ - ಆ ಮೂರು ಕಾರಣಗಳು. ಇಲ್ಲಿ ಮುಖ್ಯ ಕಾರಣವಾದ ಹಿಂದೂ ಕೋಡ್ ಬಿಲ್ ಅನ್ನು ಅಮಿತ್ ಶಾ ಪ್ರಸ್ತಾಪಿಸಲೇ ಇಲ್ಲ.
ಅದರಲ್ಲಿ, ಅಂಬೇಡ್ಕರ್ ಅವರು 370ನೇ ವಿಧಿಯನ್ನು ವಿರೋಧಿಸಿದ್ದರು ಎಂಬುದು ಸತ್ಯಕ್ಕೆ ದೂರವಾದದ್ದು. ಮೋದಿ ಸರಕಾರ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಸ್ವಾಯತ್ತತೆಯನ್ನು ಕೊನೆಗೊಳಿಸಿದಾಗಿನಿಂದ ಸಂಘ ಪರಿವಾರ ಮತ್ತು ಬಿಜೆಪಿ ಇದೇ ಸುಳ್ಳನ್ನು ಹರಡುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ಕಾಶ್ಮೀರ ವಿವಾದವನ್ನು ಪರಿಹರಿಸಲು ಅಗತ್ಯವಿದ್ದರೆ 370ನೇ ವಿಧಿ ರದ್ದುಗೊಳಿಸುವುದನ್ನು ಬೆಂಬಲಿಸುವ ಬದಲು, ಕಾಶ್ಮೀರ ಕಣಿವೆಯಲ್ಲಿ ವಲಯ ವಾರು ಜನಾಭಿಪ್ರಾಯ ಸಂಗ್ರಹಣೆಯನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಕೇಂದ್ರ ವಿದೇಶಾಂಗ ಸಚಿವಾಲಯ ಸಂಗ್ರಹಿಸಿದ ಅಂಬೇಡ್ಕರ್ ಅವರ ಬರಹಗಳನ್ನು ಸೂಕ್ಷ್ಮ ವಾಗಿ ಗಮನಿಸಿದರೆ, ಇದು ಗೊತ್ತಾಗುತ್ತದೆ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ. ಜನಾಭಿಪ್ರಾಯದಿಂದ ಸಮಸ್ಯೆಯನ್ನು ಬಹಳ ಬೇಗ ಬಗೆಹರಿಸಬಹುದು ಮತ್ತು ದೇಶದ ಭಾರೀ ರಕ್ಷಣಾ ಬಜೆಟ್ ಕಡಿತಗೊಳಿಸಲು ಕಾಶ್ಮೀರ ವಿವಾದವನ್ನು ತಕ್ಷಣವೇ ಪರಿಹರಿಸಬೇಕು ಎಂಬುದು ಅವರ ಪ್ರತಿಪಾದನೆಯಾಗಿತ್ತು.
ನೆಹರೂ ಅವರ ವಿದೇಶಾಂಗ ನೀತಿಯನ್ನು ಅಂಬೇಡ್ಕರ್ ವಿರೋಧಿಸಿದ್ದರು ಎಂಬ ಶಾ ಹೇಳಿಕೆ ನಿಜವಿರಬಹುದು. ಕಾಶ್ಮೀರವನ್ನು ಭಾರತಕ್ಕೆ ಸಂಪರ್ಕಿಸುವ ಸುರಂಗ ಯೋಜನೆ ಅತ್ಯಂತ ಅಪಾಯಕಾರಿ ಕೆಲಸಗಳಲ್ಲಿ ಒಂದಾಗಿದೆ ಎಂದು ಅಂಬೇಡ್ಕರ್ ಭಾವಿಸಿದ್ದರು. ಸುರಂಗ ತನ್ನ ಬಳಕೆಗೆ ಮಾತ್ರ ಎಂದು ಪ್ರಧಾನಿ ಭಾವಿಸಿರಬಹುದು. ಆದರೆ ಹಾಗಾಗು ವುದಿಲ್ಲ. ಇನ್ನೊಂದು ಬದಿಯಲ್ಲಿ ಬಂದು ಕಾಶ್ಮೀರವನ್ನು ವಶಪಡಿಸಿಕೊಂಡವರು ನೇರವಾಗಿ ಪಠಾಣ್‌ಕೋಟ್‌ಗೆ ಬರಬಹುದು ಮತ್ತು ಬಹುಶಃ ಪ್ರಧಾನಿಯ ನಿವಾಸಕ್ಕೇ ಬರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.
ಇನ್ನು ಹಿಂದೂ ಸಂಹಿತೆ ಮಸೂದೆ ವಿಚಾರವೇ ಅಂಬೇಡ್ಕರ್ ರಾಜೀನಾಮೆಗೆ ಮುಖ್ಯ ಕಾರಣವಾಗಿದ್ದರೂ, ಅದನ್ನು ಅಮಿತ್ ಶಾ ಆಗಲಿ, ಅವರ ಬಿಜೆಪಿಯಾಗಲಿ ಹೇಳುವುದಿಲ್ಲ. ಯಾಕೆಂದರೆ, ನೆಹರೂ ಮತ್ತು ಅಂಬೇಡ್ಕರ್ ನಡುವೆ ಭಿನ್ನಮತವಿತ್ತು ಎಂದು ಬಿಂಬಿಸುವುದನ್ನೇ ಬಿಜೆಪಿ ಮತ್ತು ಆರೆಸ್ಸೆಸ್‌ನವರು ಬಯಸುತ್ತಾರೆ. ಒಂದು ವೇಳೆ ಹಿಂದೂ ರಾಜ್ ಅಸ್ತಿತ್ವಕ್ಕೆ ಬಂದರೆ, ಅದು ಈ ದೇಶಕ್ಕೆ ದೊಡ್ಡ ವಿಪತ್ತಾಗುವುದರಲ್ಲಿ ಸಂದೇಹವಿಲ್ಲ ಎಂದೇ ಅವತ್ತು ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಎಂಥದೇ ಸ್ಥಿತಿಯಲ್ಲೂ ಭಾರತ ಹಿಂದೂ ರಾಷ್ಟ್ರವಾಗುವುದನ್ನು ತಡೆಯಬೇಕಾಗಿದೆ ಎಂದೇ ಅಂಬೇಡ್ಕರ್ ಪ್ರತಿಪಾದಿಸಿದ್ದರು. ಇವತ್ತು ಬಿಜೆಪಿ ಸಂಸದರು ಹಿಂದೂ ರಾಷ್ಟ್ರಕ್ಕೆ ಜೈಕಾರ ಹಾಕುವ ಮಟ್ಟಿಗೆ ಬಿಜೆಪಿಯ ಕೋಮು ಮನಃಸ್ಥಿತಿ ಬೆಳೆದಿದೆ. ಯಾವುದನ್ನು ಅಂಬೇಡ್ಕರ್ ವಿರೋಧಿಸಿದ್ದರೋ ಅದನ್ನು ಬಿಜೆಪಿಯವರು ದೇಶದ ಸಂಸತ್ ಭವನದಲ್ಲಿ ನಿಂತು ಮಾಡುತ್ತಿದ್ಧಾರೆ.
ನೆಹರೂ ಕ್ಯಾಬಿನೆಟ್‌ನಿಂದ ಅಂಬೇಡ್ಕರ್ ಹೊರಬರುವುದಕ್ಕೆ ಏನೆಲ್ಲ ಕಾರಣವಾಯಿತು?:
ಆನಂದ್ ತೇಲ್ತುಂಬ್ಡೆ ಬರೆದಿರುವ ‘ಐಕೊನೊಕ್ಲಾಸ್ಟ್’ನಲ್ಲಿ ಇರುವ ಹಾಗೆ, ಸರಕಾರದ ನೀತಿಯ ಬಗ್ಗೆ ಅಂಬೇಡ್ಕರ್ ಅಸಮಾಧಾನ ಹೊಂದಿರುತ್ತಾರೆ. ಆದರೆ 370ನೇ ವಿಧಿ ಬಗ್ಗೆ ಅಂಬೇಡ್ಕರ್ ಬೇಸರ ಹೊಂದಿದ್ದರು ಎಂಬುದನ್ನು ಮಾತ್ರವೆ ಅಮಿತ್ ಶಾ ಎತ್ತಿಹೇಳುವುದರ ಹಿಂದಿನ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬಹುದು. ತೇಲ್ತುಂಬ್ಡೆ ಪುಸ್ತಕದಲ್ಲಿ ಅಂಬೇಡ್ಕರ್ ರಾಜೀನಾಮೆ ಹಿಂದೆ ಕಾಶ್ಮೀರ ವಿಚಾರ ಇದ್ದುದರ ಪ್ರಸ್ತಾಪ ಇಲ್ಲ. ‘ಇಂಡಿಯಾ ಆಫ್ಟರ್ ಗಾಂಧಿ’ ಎಂಬ ರಾಮಚಂದ್ರ ಗುಹಾ ಅವರ ಪುಸ್ತಕದಲ್ಲಿ ಹಿಂದೂ ಸಂಹಿತೆ ಮಸೂದೆಯನ್ನು ಆರೆಸ್ಸೆಸ್ ವಿರೋಧಿಸಿದ್ದರ ಬಗ್ಗೆ ಹೇಳಲಾಗಿದೆ. ಆಗ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಸಮ್ಮೇಳನದಲ್ಲಿ ಆರೆಸ್ಸೆಸ್ ನಾಯಕರು ಒಬ್ಬರ ಬೆನ್ನಲ್ಲೊಬ್ಬರು ಅದನ್ನು ಟೀಕಿಸಿದ್ದರು. ಅಣುಬಾಂಬ್ ಎಂದು ಕರೆದಿದ್ದರು. ನೆಹರೂ ಮತ್ತು ಅಂಬೇಡ್ಕರ್ ಚಿತ್ರವನ್ನು ದಹನ ಮಾಡಲಾಗಿತ್ತು.
ಹಿಂದೂ ಸಂಹಿತೆ ಮಸೂದೆಯನ್ನು ಆರೆಸ್ಸೆಸ್ ಏಕೆ ವಿರೋಧಿಸಿತು ಎಂಬುದನ್ನು ಅಮಿತ್ ಶಾ ಹೇಳುವುದೇ ಇಲ್ಲ.
ಬಿ.ಸಿ. ರಾಯ್ ಬರೆದ ಪತ್ರದ ಬಗ್ಗೆ ಮಾತ್ರ ಹೇಳುವ ಅಮಿತ್ ಶಾ, ಅಂಬೇಡ್ಕರ್ ಅವರಿಗೆ ನೆಹರೂ ಬರೆದಿದ್ದ ಪತ್ರದ ಬಗ್ಗೆ ಹೇಳುವುದಿಲ್ಲ. ಬಿ.ಸಿ. ರಾಯ್‌ಗೆ ನೆಹರೂ ಬರೆದ ಪತ್ರ ದೀರ್ಘವಾಗಿದ್ದು, ಅದರಲ್ಲಿನ ನೆಹರೂ ಅವರ ಒಂದು ವಾಕ್ಯವನ್ನಷ್ಟೇ ತೆಗೆದುಕೊಂಡು ಅಮಿತ್ ಶಾ ಸಂಸತ್ತಿನಲ್ಲಿ ದಾರಿ ತಪ್ಪಿಸುತ್ತಾರೆ. ಅದೇ ವೇಳೆ ಅಂಬೇಡ್ಕರ್ ಅವರಿಗೂ ನೆಹರೂ ಬರೆದಿದ್ದು, ಅದರ ಉಲ್ಲೇಖವನ್ನೇ ಅಮಿತ್ ಶಾ ಮಾಡಲಿಲ್ಲ. ಅಂಬೇಡ್ಕರ್ ರಾಜೀನಾಮೆ ಕೊಟ್ಟ ದಿನವೇ ಅವರಿಗೆ ನೆಹರೂ ಪತ್ರ ಬರೆಯುತ್ತಾರೆ.
‘‘ನೀವು ರಾಜೀನಾಮೆ ಕೊಡಲಿರುವ ವಿಚಾರ ಪತ್ರಿಕೆಗಳಲ್ಲಿ ಎರಡು ದಿನಗಳ ಹಿಂದೆ ಬಂದಾಗಲೇ ನೋವಾಗಿತ್ತು. ನೀವು ಆರೋಗ್ಯದ ಕಾರಣ ಕೊಟ್ಟಿದ್ದೀರಿ ಮತ್ತು ನಿಮ್ಮ ಆರೋಗ್ಯ ಸರಿಯಿಲ್ಲ ಎನ್ನುವುದು ನನಗೂ ಗೊತ್ತಿದೆ. ಹೀಗಿರುವಾಗ ಹುದ್ದೆಯಲ್ಲಿರಲು ನಿಮ್ಮನ್ನು ಬಲವಂತ ಮಾಡಲಾರೆ. ಇಷ್ಟು ಕಾಲ ನೀವು ನಮ್ಮೊಂದಿಗೆ ಸೇರಿ ಮಾಡಿದ ಕೆಲಸವನ್ನು ಶ್ಲಾಘಿಸಲೇಬೇಕು. ಎಷ್ಟೋ ಸಲ ನಮ್ಮ ನಡುವೆ ಸಹಮತ ಇರಲಿಲ್ಲ. ಆದರೆ ನೀವು ಉತ್ತಮ ಕೆಲಸಗಳನ್ನು ಮಾಡಿದ್ದೀರಿ. ನೀವು ಸಂಪುಟ ಬಿಡುತ್ತಿರುವುದು ದುಃಖಕರ. ಹಿಂದೂ ಸಂಹಿತೆ ಮಸೂದೆ ವಿಚಾರದಲ್ಲಿ ನಿಮಗೆ ಬೇಸರವಾಗಿದೆ ಎಂಬುದು ಗೊತ್ತಿದೆ. ನೀವು ಅದಕ್ಕಾಗಿ ಹಾಕಿದ್ದ ಪರಿಶ್ರಮ ದೊಡ್ಡದು. ಆದರೆ ಸಂಸತ್ತಿನ ನಿಯಮಗಳು ನನ್ನನ್ನು ಕಟ್ಟಿಹಾಕಿವೆ. ಎಲ್ಲರ ಒಳಿತಿಗಾಗಿ ರೂಪಿಸಲಾಗಿದ್ದ ಅದರ ಪರ ನನ್ನ ಹೋರಾಟ ಮುಂದುವರಿಯಲಿದೆ’’ ಎಂದು ಅಂಬೇಡ್ಕರ್ ಅವರಿಗೆ ಬರೆದ ಪತ್ರದಲ್ಲಿ ನೆಹರೂ ಹೇಳಿದ್ದರು. ಈ ಅಂಶದಿಂದ ಅವರಿಬ್ಬರ ಮಧ್ಯೆ ಪರಸ್ಪರ ಎಂಥ ಆದರಣೀಯ ಸಂಬಂಧ ಇತ್ತೆಂಬುದು ಅರ್ಥವಾಗುತ್ತದೆ.