ಜೆಡಿಎಸ್ ಈಗ ಪತನದ ಅಂಚಿನಲ್ಲಿದೆಯೇ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ ಏಟು ತಿಂದಿದ್ದ ಜೆಡಿಎಸ್ ಪಾಲಿಗೆ ಮೊನ್ನೆಯ ಉಪ ಚುನಾವಣೆ ಕೂಡ ಒಂದು ಭರವಸೆಯಾಗಿ ಒದಗಲಿಲ್ಲ. ಅಲ್ಲಿಗೆ ಅದರ ಹತಾಶೆ ಇನ್ನಷ್ಟಾಗಿದೆ. ಅದರ ಬಲವೇ ಆಗಿದ್ದ ಒಕ್ಕಲಿಗರು ನಿಜವಾಗಿಯೂ ಅದನ್ನು ಕೈಬಿಟ್ಟರಾ ಎಂಬ ಪ್ರಶ್ನೆಯೂ ಎದ್ದಿದೆ. ಈ ಹಂತದಲ್ಲೇ, ದೇವೇಗೌಡರ ತವರು ಹಾಸನದಲ್ಲಿ ನಡೆದ ಶಕ್ತಿ ಪ್ರದರ್ಶನ ಸಮಾವೇಶದಲ್ಲಿ ಸಿದ್ದರಾಮಯ್ಯ ಗುಡುಗಿದ್ದಾರೆ. ಹಾಸನದ ಎಲ್ಲ ವಿಧಾನಸಭೆ ಕ್ಷೇತ್ರಗಳನ್ನು ಗೆದ್ದು ತೋರಿಸುವುದಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಹೇಳಿದ್ದಾರೆ.

Update: 2024-12-10 10:02 GMT
Editor : Thouheed | Byline : ಆರ್. ಜೀವಿ

ಜೆಡಿಎಸ್ ಎಂದೇ ಪರಿಚಿತವಾಗಿರುವ ಜನತಾ ದಳ (ಜಾತ್ಯತೀತ), ಪ್ರಾಥಮಿಕವಾಗಿ ಕರ್ನಾಟಕದ ಪ್ರಾದೇಶಿಕ ರಾಜಕೀಯ ಪಕ್ಷ. ಕೇರಳ ರಾಜ್ಯದಲ್ಲಿಯೂ ಅಸ್ತಿತ್ವ ಹೊಂದಿದೆ. 1999ರಲ್ಲಿ ರೂಪು ತಳೆದ ಜೆಡಿಎಸ್ ಮೂಲವಿರುವುದು ಜನತಾ ಪಕ್ಷದಲ್ಲಿ. ದೇವೇಗೌಡರು, ಸಿದ್ದರಾಮಯ್ಯ ಸೇರಿದಂತೆ ಬಹುತೇಕ ನಾಯಕರ ಮೂಲ ಮನೆ ಜನತಾ ಪರಿವಾರವೇ ಆಗಿದೆ. 1977ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆಯಲೆಂದೇ ಹಲವಾರು ಸಣ್ಣ ಪಕ್ಷಗಳ ಒಕ್ಕೂಟವಾಗಿ ಅಸ್ತಿತ್ವಕ್ಕೆ ಬಂದದ್ದು ಜನತಾ ಪಕ್ಷ. 1988ರಲ್ಲಿ ಜನತಾ ಪಕ್ಷ ಮತ್ತು ಇತರ ಸಣ್ಣ ಪಕ್ಷಗಳು ವಿಲೀನಗೊಂಡು ಜನತಾ ದಳ ಅಸ್ತಿತ್ವಕ್ಕೆ ಬಂತು. ಇದು ಯುನೈಟೆಡ್ ಫ್ರಂಟ್ (ಯುಎಫ್) ಎಂದು ಕರೆಯಲ್ಪಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಹೊಸ ವಿರೋಧಿ ಗುಂಪಾಗಿತ್ತು. 8 ವರ್ಷಗಳ ನಂತರ ಯುನೈಟೆಡ್ ಫ್ರಂಟ್ ಸಮ್ಮಿಶ್ರ ಸರಕಾರದ ಪ್ರಧಾನಿಯಾಗಿ ದೇವೇಗೌಡರು ಆಯ್ಕೆಯಾಗುವ ಮೂಲಕ ಜನತಾ ದಳ ರಾಜಕೀಯವಾಗಿ ತನ್ನ ಉತ್ತುಂಗವನ್ನು ಮುಟ್ಟಿತೆಂದೇ ಹೇಳಬೇಕು. ಆದರೆ 1999ರಲ್ಲಿ ಜನತಾ ದಳ ವಿಭಜನೆಯಾಯಿತು. ಆಗ ದೇವೇಗೌಡರ ನೇತೃತ್ವದ ಬಣ ಜನತಾ ದಳ (ಜಾತ್ಯತೀತ) ಎಂದು ಗುರುತಿಸಿಕೊಂಡಿತು. ದೇವೇಗೌಡರು ಅದರ ರಾಷ್ಟ್ರೀಯ ಅಧ್ಯಕ್ಷ ರಾದರು. ಮಧು ದಂಡವತೆ, ಸಿದ್ದರಾಮಯ್ಯರಂತಹ ನಾಯಕರು ದೇವೇಗೌಡರೊಂದಿಗೆ ನಿಂತರು.

ವಿಪರ್ಯಾಸ ನೋಡಿ. ಅವತ್ತು ಬಿಜೆಪಿ ನೇತೃತ್ವದ ಸರಕಾರಕ್ಕೆ ಜನತಾ ದಳದ ಕೆಲ ನಾಯಕರು ಕೈಗೂಡಿಸಲು ಮುಂದಾಗಿದ್ದನ್ನು ವಿರೋಧಿಸಿ ಹೊರಬಂದವರಾಗಿದ್ದ ದೇವೇಗೌಡರೇ ಕಡೆಗೆ ಜೆಡಿಎಸ್ ಅನ್ನು ಬಿಜೆಪಿಯ ದೋಸ್ತಿ ಪಕ್ಷವಾಗಿಸಿಬಿಟ್ಟಿದ್ದಾರೆ. ಜನತಾದಳ ಎರಡು ಹೋಳಾದಾಗ ಜೆಡಿಎಸ್ ಹೊರತಾದ ಮತ್ತೊಂದು ಬಣ ಜನತಾದಳ (ಯುನೈಟೆಡ್) ಅಥವಾ ಜೆಡಿಯು ಎಂದಾಯಿತು ಮತ್ತು ಅದು ಎನ್‌ಡಿಎ ಭಾಗವಾಯಿತು. ಈಗ ಜೆಡಿಎಸ್ ಕೂಡ ಅದೇ ಸಾಲಿನಲ್ಲಿ ಹೋಗಿ, ಸಿದ್ಧಾಂತ, ಬದ್ಧತೆ ಎಲ್ಲವನ್ನೂ ಕಳೆದುಕೊಂಡು ಮಂಕಾಗಿದೆ. ಆರಂಭದಲ್ಲಿ ಜೆಡಿಎಸ್ ಬಿಜೆಪಿಯಿಂದ ಮಾತ್ರವಲ್ಲ, ಕಾಂಗ್ರೆಸ್‌ನಿಂದಲೂ ರಾಜಕೀಯವಾಗಿ ಅಂತರ ಕಾಯ್ದುಕೊಂಡಿತ್ತು. ಕಡೆಗೆ ರಾಜಕೀಯ ಸ್ಥಿತ್ಯಂತರಗಳಲ್ಲಿ ಅಧಿಕಾರದ ಆಸೆಗೆ ಬಿದ್ದ ಜೆಡಿಎಸ್ ಯಾವಾಗೆಂದರೆ ಆವಾಗ ಕಾಂಗ್ರೆಸ್ ಜೊತೆಗೂ, ಬಿಜೆಪಿ ಜೊತೆಗೂ ಹೋಗುವುದು ಶುರುವಾಯಿತು. ಸದ್ಯಕ್ಕೆ ಅದು ಬಿಜೆಪಿಯ ಮಿತ್ರಪಕ್ಷ.

ಅದೇನೇ ಇದ್ದರೂ, ರಾಜ್ಯದ ಒಕ್ಕಲಿಗರ ಬೆಂಬಲವನ್ನು ಪಡೆಯುತ್ತ ಬಂದಿರುವ ಜೆಡಿಎಸ್ ರಾಜಕೀಯ ಆಟ ಸಾಮಾನ್ಯವಾಗಿ ಕಿಂಗ್‌ಮೇಕರ್ ಆಗುವ ಅವಕಾಶವನ್ನೇ ನೆಚ್ಚಿ ನಡೆದಿದೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅದರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲೇ ಮಣ್ಣು ಮುಕ್ಕಿಸಿದ್ದ ಒಕ್ಕಲಿಗರು ಕಿಂಗ್ ಮೇಕರ್ ಆಗುವ ಅದರ ಕನಸನ್ನೂ ನುಚ್ಚುನೂರು ಮಾಡಿದ್ದರು. ಈಗ ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಕೂಡ ಒಕ್ಕಲಿಗ ಮತದಾರರು ಅದರ ಕೈಹಿಡಿದಿಲ್ಲ.

ಚುನಾವಣಾ ರಾಜಕೀಯದ ಆರಂಭ ಜೆಡಿಎಸ್ ಪಾಲಿಗೆ ನೀರಸವಾಗಿತ್ತು. ಕರ್ನಾಟಕ ರಾಜ್ಯ ವಿಧಾನಸಭೆಗೆ 1999ರ ಚುನಾವಣೆಯಲ್ಲಿ 224ರಲ್ಲಿ 203 ಸ್ಥಾನಗಳಿಗೆ ಸ್ಪರ್ಧಿಸಿದ್ದ ಅದು ಗೆದ್ದದ್ದು 10ರಲ್ಲಿ ಮಾತ್ರ. ಅದಾಗಿ 5 ವರ್ಷಗಳ ನಂತರ ವಿಧಾನಸಭೆಯಲ್ಲಿ 58 ಸ್ಥಾನಗಳನ್ನು ಗಳಿಸಿದ್ದೇ ಅದರ ಈವರೆಗಿನ ದಾಖಲೆ. ಆ ಗೆಲುವಿನ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರಕಾರ ರಚಿಸಲು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತು. ಅಲ್ಲಿಗೆ ಅದು ಮೈತ್ರಿ ಕುರಿತ ತನ್ನ ನೀತಿಯನ್ನು ತಾನೇ ನಿರಾಕರಿಸಿತ್ತು. ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್‌ನ ಧರಂ ಸಿಂಗ್ ಮುಖ್ಯಮಂತ್ರಿಯಾದರು. ಆದರೆ ಸರಿಯಾಗಿ 20 ತಿಂಗಳಿಗೆ ಜೆಡಿಎಸ್ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿತು. ಬಿಜೆಪಿಯ ಯಡಿಯೂರಪ್ಪನವರೊಂದಿಗೆ ಗುಟ್ಟಾಗಿ ಒಪ್ಪಂದ ಮಾಡಿಕೊಂಡಿದ್ದ ಕುಮಾರಸ್ವಾಮಿ ಮತ್ತೊಂದು ಸಮ್ಮಿಶ್ರ ಸರಕಾರಕ್ಕೆ ಸಜ್ಜಾಗಿದ್ದರು. 20 ತಿಂಗಳ ಬಳಿಕ ಅಧಿಕಾರ ಬಿಟ್ಟುಕೊಡುವ ಭರವಸೆಯೊಂದಿಗೆ ಯಡಿಯೂರಪ್ಪನವರ ಬೆಂಬಲ ಪಡೆದು ಮುಖ್ಯಮಂತ್ರಿಯಾದ ಕುಮಾರಸ್ವಾಮಿ, 2006ರ ಫೆಬ್ರವರಿಯಿಂದ 2007ರ ಅಕ್ಟೋಬರ್ ವರೆಗೆ ಹುದ್ದೆಯಲ್ಲಿದ್ದರು. ಅದಾದ ಮೇಲೂ ಮೊದಲೇ ಒಪ್ಪಿದ್ದಂತೆ ಅಧಿಕಾರ ಬಿಟ್ಟುಕೊಡಲು ತಯಾರಾಗಲಿಲ್ಲ. ಬಳಿಕ ಮನಸ್ಸು ಬದಲಾಯಿಸಿ ಬಿಜೆಪಿಗೆ ಬೆಂಬಲ ನೀಡಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ಆದರೆ ಒಂದೇ ವಾರದೊಳಗೆ ಭಿನ್ನಮತ ಉಲ್ಬಣಗೊಂಡು ಬೆಂಬಲ ವಾಪಸ್ ಪಡೆದರು ಕುಮಾರಸ್ವಾಮಿ. ಯಡಿಯೂರಪ್ಪ ರಾಜೀನಾಮೆ ಕೊಡಬೇಕಾಯಿತು.

2008ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 28 ಸ್ಥಾನಗಳನ್ನು ಮಾತ್ರ ಗೆದ್ದಾಗ, ಸರಕಾರ ರಚನೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯೇ ಉಳಿಯಲಿಲ್ಲ. 110 ಸ್ಥಾನಗಳನ್ನು ಗೆದ್ದ ಬಿಜೆಪಿ ಸ್ವತಂತ್ರ ಅಭ್ಯರ್ಥಿಗಳ ಬೆಂಬಲದೊಂದಿಗೆ ಮತ್ತೊಂದು ಸಮ್ಮಿಶ್ರ ಸರಕಾರವನ್ನು ರಚಿಸಿತು. 2013ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ರೈತರ ಪರವಾದ ಹಲವಾರು ಕ್ರಮಗಳನ್ನು ಪ್ರಸ್ತಾಪಿಸಿತು. ರೈತರು, ನೇಕಾರರು, ಮೀನುಗಾರರು ಮತ್ತು ಕುಶಲಕರ್ಮಿಗಳ ಎಲ್ಲಾ ಸಾಲಗಳನ್ನು ಮನ್ನಾ ಮಾಡುವ ಭರವಸೆ ನೀಡಿತು. ಅದು ಗೆದ್ದ ಸ್ಥಾನಗಳು 40ಕ್ಕೆ ಏರಿದ್ದವು.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗಿನ ಹಿಂದಿನ ಮೈತ್ರಿಗಳ ಹೊರತಾಗಿಯೂ ಜೆಡಿಎಸ್ ರಾಷ್ಟ್ರೀಯ ರಾಜಕೀಯ ರಂಗದಲ್ಲಿ ಹೇಳಿಕೊಳ್ಳುವಂಥ ಮಹತ್ವವನ್ನೇನೂ ಪಡೆದಿಲ್ಲ. ಲೋಕಸಭೆಯಲ್ಲಿ ಅದರ ಪ್ರಾತಿನಿಧ್ಯ ಒಂದು, ಎರಡು, ಮೂರರೊಳಗೇ ಏರಿಳಿಯುತ್ತಿರುತ್ತದೆ. ಕಳೆದ ಲೋಕಸಭೆ ಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ಭಾರೀ ಚರ್ಚೆಯಲ್ಲಿತ್ತು. ಈ ನಡುವೆಯೂ ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳಿದ್ದವು. ಸ್ವಜನ ಪಕ್ಷಪಾತದ ಕಾರಣದಿಂದಾಗಿ, ತಂದೆ ಮಕ್ಕಳ ಪಕ್ಷವೆಂಬ ಟೀಕೆಗೆ ತುತ್ತಾಗಿರುವ ಜೆಡಿಎಸ್, ಅದೆಲ್ಲದರ ಹೊರತಾಗಿಯೂ ಪ್ರಭಾವಶಾಲಿಯಾಗಿರುವುದು ಹೇಗೆ? ಕರ್ನಾಟಕದಲ್ಲಿ ಕಾಣಿಸಿಕೊಂಡ ಇತರ ಹಲವು ಪ್ರಾದೇಶಿಕ ಪಕ್ಷಗಳೆಲ್ಲ ವಿಫಲವಾಗಿರುವಾಗ, ಜೆಡಿಎಸ್ ಅಸ್ತಿತ್ವ ಭದ್ರವಾಗಿರುವುದರ ಮರ್ಮವೇನು?

ದೇವೇಗೌಡರು ಪ್ರಧಾನಿಯಾದದ್ದು ಆಕಸ್ಮಿಕವೇ ಆಗಿತ್ತಾದರೂ, ಅದು ಕರ್ನಾಟಕದ ಎರಡನೇ ಅತಿ ದೊಡ್ಡ ಸಮುದಾಯವಾದ ಒಕ್ಕಲಿಗರ ನಾಯಕರಾಗಿ ಅವರು ಹೊರಹೊಮ್ಮುವುದಕ್ಕೆ ಕಾರಣವಾಗಿತ್ತು. ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದ್ದು, ಆ ಒಕ್ಕಲಿಗ ಮತಗಳೇ ಜೆಡಿಎಸ್ ಅನ್ನು ಬಹುಕಾಲದಿಂದ ಕಾಯ್ದುಕೊಂಡು ಬಂದಿವೆ. ಜೆಡಿಎಸ್ ಅಸ್ತಿತ್ವಕ್ಕೆ ಬರುವ ಮೊದಲು, ಸಂಯುಕ್ತ ರಂಗದ ಭಾಗವಾಗಿದ್ದ ಜನತಾ ದಳದಿಂದ ದೇವೇಗೌಡರು ಪ್ರಧಾನಿಯೂ ಆಗಿ 11 ತಿಂಗಳು, ಅಂದರೆ ಜೂನ್ 1996ರಿಂದ ಎಪ್ರಿಲ್ 1997ರವರೆಗೆ ಅಧಿಕಾರ ನಡೆಸಿದ ಬಳಿಕ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿದ್ದರು.

ಜೆಡಿಎಸ್ ಮೈತ್ರಿ ರಾಜಕಾರಣವನ್ನು ನೋಡುವ ಮೊದಲು, ಚುನಾವಣಾ ರಾಜಕಾರಣದಲ್ಲಿ ಅದು ಹೇಗೆ ಯಶಸ್ಸಿನ ಸೂತ್ರಗಳನ್ನು ಕಂಡುಕೊಂಡಿತು ಎಂಬುದನ್ನು ಗಮನಿಸಬೇಕು. ಪ್ರತ್ಯೇಕ ಪಕ್ಷವಾಗಿ ಎದುರಿಸಿದ ಮೊದಲ ಚುನಾವಣೆಯಲ್ಲಿ ಜೆಡಿಎಸ್ ಗೆಲುವು 10 ಸ್ಥಾನಗಳಿಗೆ ಮಾತ್ರವೇ ಸೀಮಿತವಾದಾಗ ದೇವೇಗೌಡರಿಗೆ ಹೊಳೆದದ್ದು ರಾಜ್ಯದಲ್ಲಿ ಪ್ರಬಲವಾಗುತ್ತಿರುವ ಬಿಜೆಪಿಯಿಂದ ಬೆದರಿಕೆ ಎದುರಿಸುತ್ತಿರುವ ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪಕ್ಷವನ್ನು ಬಲಪಡಿಸಬಹುದೆಂಬ ವಿಚಾರ. ಆ ಹೊತ್ತಿನಲ್ಲಿ ರಾಜ್ಯದ ಜನಸಂಖ್ಯೆಯ ಶೇ.12ರಷ್ಟಿದ್ದ ಮುಸ್ಲಿಮ್ ಸಮುದಾಯದ ಮತದಾರರನ್ನು ಸೆಳೆಯುವ ಮೂಲಕ ಜೆಡಿಎಸ್ ರಾಜಕೀಯಕ್ಕೆ ಹೊಸ ಆಯಾಮ ಒದಗಿತ್ತು. ಕೇವಲ 10 ಸ್ಥಾನಗಳನ್ನು ಗೆದ್ದಿದ್ದ ಐದೇ ವರ್ಷಗಳ ಬಳಿಕ, ಅಂದರೆ 2004ರಲ್ಲಿ ಜೆಡಿಎಸ್ 58 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಅತಂತ್ರ ವಿಧಾನಸಭೆ ಸನ್ನಿವೇಶ ತಲೆದೋರಿ, ಜೆಡಿಎಸ್ ನಿಜವಾದ ಆಟಗಾರನಾಗಿ ಮುನ್ನೆಲೆಗೆ ಬಂತು.

2004-ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ:

ಜೆಡಿಎಸ್ ಮೊದಲ ಬಾರಿಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಆಗ. ಕಾಂಗ್ರೆಸ್-ಜೆಡಿಎಸ್ ಪರಸ್ಪರ ಕೈಜೋಡಿಸಿ 2004ರಲ್ಲಿ ಸರಕಾರ ರಚಿಸಿದವು. ಆ ಸಂದರ್ಭದಲ್ಲಿ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ನಿಜವಾಗಿಯೂ ಅಧಿಕಾರದ ದಾಹಕ್ಕೆ ಒಳಗಾದ ಜೆಡಿಎಸ್, ಬಹಳ ಬೇಗ ಮತ್ತೊಂದು ದಿಕ್ಕು ಹಿಡಿಯಿತು.

2006-ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರಕಾರ:

2006ರಲ್ಲಿ ಬಿಜೆಪಿ ಜೊತೆ ಜೆಡಿಎಸ್‌ನ ಕುಮಾರಸ್ವಾಮಿ ಕೈಜೋಡಿಸುವುದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಪರ್ವ ಶುರುವಾಯಿತು. ಮುಖ್ಯಮಂತ್ರಿಯಾಗುವುದಕ್ಕಾಗಿ ಕಾಂಗ್ರೆಸ್‌ನ ಧರಂಸಿಂಗ್ ಸರಕಾರಕ್ಕೆ ಕೈಕೊಟ್ಟು, ತಮ್ಮ ಪಕ್ಷದ 46 ಶಾಸಕರೊಡನೆ ಹೊರಬಂದ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರು. 2006ರ ಫೆಬ್ರವರಿ 3ರಂದು ಅವರು ಮುಖ್ಯಮಂತ್ರಿಯಾದರು. ಜೆಡಿಎಸ್, ಬಿಜೆಪಿ ತಲಾ 20 ತಿಂಗಳ ಸರಕಾರ ನಡೆಸುವ ಒಪ್ಪಂದ ಅದಾಗಿತ್ತು. ಆದರೆ 2007ರ ಅಕ್ಟೋಬರ್ 8ರವರೆಗೆ ಸಿಎಂ ಹುದ್ದೆಯಲ್ಲಿ ಮುಂದುವರಿದ ಕುಮಾರಸ್ವಾಮಿ, ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿ, ಹೊರಬಂದರು. ಬಿಜೆಪಿ ಜೊತೆ ಕುಮಾರಸ್ವಾಮಿ ಕೈಜೋಡಿಸಿ ಸರಕಾರ ರಚಿಸಿದಾಗ, ಅದು ತಮ್ಮ ಸಮ್ಮತಿಯಿಲ್ಲದೆ ಆಗಿರುವ ಬೆಳವಣಿಗೆ ಎಂದು ದೇವೇಗೌಡರು ಹೇಳಿಕೊಂಡರು. ಮುಸ್ಲಿಮ್ ಸಮುದಾಯದ ವಿಶ್ವಾಸವನ್ನು ಉಳಿಸಿಕೊಳ್ಳುವುದು, ಅವರ ಮತಗಳು ಜೆಡಿಎಸ್‌ನಿಂದ ದೂರವಾಗದಂತೆ ನೋಡಿಕೊಳ್ಳುವುದು ದೇವೇಗೌಡರ ಉದ್ದೇಶವಾಗಿತ್ತು ಎಂದೇ ಆಗ ವಿಶ್ಲೇಷಿಸಲಾಗಿತ್ತು.

2018-ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರಕಾರ:

2018ರಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಅತಂತ್ರ ವಿಧಾನಸಭೆ ತಲೆದೋರಿತು. ಅದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರಲು ದಾರಿ ಮಾಡಿಕೊಟ್ಟಿತು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತಂತ್ರದ ಭಾಗವಾಗಿ, 78 ಸ್ಥಾನಗಳ ಬಲ ಹೊಂದಿದ್ದ ಕಾಂಗ್ರೆಸ್, 38 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್‌ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು ಸಮ್ಮಿಶ್ರ ಸರಕಾರ ರಚಿಸಿತು. ಕುಮಾರಸ್ವಾಮಿ 2018ರ ಮೇ 23ರಂದು ಮತ್ತೆ ಮುಖ್ಯಮಂತ್ರಿಯಾದರು. ಇಲ್ಲೊಂದು ರಾಜಕೀಯ ವಿಪರ್ಯಾಸವಿತ್ತು. 1999ರಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಬಂದಿದ್ದ ವರ್ಷ ಇದೇ ಕುಮಾರಸ್ವಾಮಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಅವರಿಗೆ ಎದುರಾಳಿಯಾಗಿ ಸೋಲಿಸಿದ್ದವರು ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್. ಅದೇ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, 2018ರಲ್ಲಿ ಸಮ್ಮಿಶ್ರ ಸರಕಾರ ರಚನೆಯ ಹಿಂದೆ ಮಹತ್ವದ ಪಾತ್ರ ವಹಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಕ್ಕೆ ಕಾರಣರಾಗಿದ್ದರು. ಆದರೆ ಒಂದೇ ವರ್ಷದಲ್ಲಿ ಕಾಂಗ್ರೆಸ್ ಜೆಡಿಎಸ್‌ನ 17 ಶಾಸಕರು ಬಿಜೆಪಿ ಸೇರಿ ಆ ಮೈತ್ರಿ ಸರಕಾರ ಪತನವಾಯಿತು. 2023ರ ವಿಧಾನಸಭೆ ಚುನಾವಣೆ ಬಳಿಕ ಮತ್ತೊಮ್ಮೆ ಕಿಂಗ್ ಮೇಕರ್ ಆಗುವ ಕನಸು ಕಂಡಿದ್ದ ಜೆಡಿಎಸ್‌ಗೆ ಮತದಾರರರು ದೊಡ್ಡ ಪೆಟ್ಟು ಕೊಟ್ಟಿದ್ದರು. ಅದರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿಯೇ ಕಾಂಗ್ರೆಸ್ ಹೆಚ್ಚುವರಿ ಸ್ಥಾನಗಳನ್ನು ಗೆಲ್ಲುವುದರೊಂದಿಗೆ, ನಿರೀಕ್ಷಿಸಿಯೇ ಇರದ ಮಟ್ಟಿಗೆ ಜೆಡಿಎಸ್ ಮುಗ್ಗರಿಸುವಂತಾಯಿತು. ಮುಂದಿನ ಲೋಕಸಭೆ ಚುನಾವಣೆಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಜೆಡಿಎಸ್ ಪಾಲಿಗೆ ಮುಖ್ಯವಾದದ್ದು ಇದೇ ಕಾರಣದಿಂದ. ಕಾಂಗ್ರೆಸ್ ಕೆಡವಿರುವ ತನ್ನ ಕೋಟೆಯನ್ನು ಹಳೇ ಮೈಸೂರು ಭಾಗದಲ್ಲಿ ಮತ್ತೆ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರ ಜೆಡಿಎಸ್‌ನದ್ದಾಗಿತ್ತು.

2019ರಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ:

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವೇ ಅಸ್ತಿತ್ವದಲ್ಲಿದ್ದುದರಿಂದ ಅದು ಸಹಜ ದೋಸ್ತಿ ಎನ್ನುವಂತೆ ಕಂಡಿತ್ತು. ಆದರೆ, ಎರಡೂ ಪಕ್ಷಗಳಿಗೂ ಆ ಮೈತ್ರಿ ಮುಖಗೇಡಿ ಸ್ಥಿತಿಯನ್ನು ತಂದಿಟ್ಟಿತ್ತು. ಎರಡೂ ಪಕ್ಷಗಳು ಗೆದ್ದಿದ್ದು ತಲಾ ಒಂದೊಂದು ಸೀಟು ಮಾತ್ರ. 25 ಕ್ಷೇತ್ರಗಳು ಬಿಜೆಪಿಯ ಪಾಲಾಗಿದ್ದವು. ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದಿದ್ದರು. ಅದಕ್ಕೇ ಜಿ. ಪರಮೇಶ್ವರ್‌ರಂತಹ ಕಾಂಗ್ರೆಸ್ ನಾಯಕರು, ‘‘ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಅನುಭವಿಸಿ ಆಗಿದೆ’’ ಎಂದು ಹೇಳುತ್ತಿರುವುದು. ಕುಮಾರಸ್ವಾಮಿಯವರೂ ಕಾಂಗ್ರೆಸ್ ಜೊತೆ ಮೈತ್ರಿಗಿಂತ ಬಿಜೆಪಿ ಜೊತೆ ಹೋಗುವುದಕ್ಕೇ ಹೆಚ್ಚು ಆಸಕ್ತಿ ತೋರಿಸಿಕೊಂಡು ಬಂದಿದ್ದಾರೆ.

2024ರ ಲೋಕಸಭೆ ಚುನಾವಣೆಗಾಗಿ ಮೈತ್ರಿ:

ಲೋಕಸಭೆ ಚುನಾವಣೆಗಾಗಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ ರಾಜಕೀಯ ಮಹತ್ವ ಪಡೆಯಿತು. ಜಾತ್ಯತೀತ ಎಂದು ಹೆಸರಿಟ್ಟುಕೊಂಡವರು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಜೆಡಿಎಸ್‌ನವರು ಸೇರಿಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿಯೇ ಮೈತ್ರಿ ಎಂದು ದೇವೇಗೌಡರು ಸಮರ್ಥಿಸಿಕೊಂಡಿದ್ದರು. ರಾಜ್ಯದ ಹಿತರಕ್ಷಣೆಗಾಗಿ ಮೈತ್ರಿ ಎಂದು ಕುಮಾರಸ್ವಾಮಿಯವರು ಹೇಳಿದ್ದರು. ಮೈತ್ರಿ ಮತ್ತದರ ಫಲಿತಾಂಶಗಳ ವಿಚಾರ ಏನೇ ಇರಲಿ, ಆದರೆ ರಾಜ್ಯದ ಅಥವಾ ದೇಶದ ಹಿತದೃಷ್ಟಿ ಎಂಬ ನೆಪ ಮುಂದೆ ಮಾಡಿದ್ದು ಮಾತ್ರ ಹಾಸ್ಯಾಸ್ಪದವೂ, ಅದಕ್ಕಿಂತ ಹೆಚ್ಚಾಗಿ ಆತಂಕಕಾರಿಯೂ ಆಗಿತ್ತು. ಕುಮಾರಸ್ವಾಮಿಯವರಿಗೆ ಈಗ ಮಗ ನಿಖಿಲ್‌ಗೆ ಒಂದು ರಾಜಕೀಯ ನೆಲೆ ಕಲ್ಪಿಸಬೇಕೆನ್ನುವ ಆತುರ. ಎರಡು ಚುನಾವಣೆಗಳಲ್ಲಿ ಸೋತಿದ್ದ ಪುತ್ರನನ್ನು ಮೊನ್ನೆಯ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲ್ಲಿಸುವ ಹಠ ತೊಟ್ಟಿದ್ದರು. ಆದರೆ ಮೂರನೇ ಸಲವೂ ನಿಖಿಲ್‌ಗೆ ಸೋಲಾಗಿದೆ.

ಈ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ತನ್ನ ನೆಲ ಎಂದ ಕುಮಾರಸ್ವಾಮಿ. ಲೋಕಸಭೆ ಚುನಾವಣೆ ವೇಳೆ ಮಂಡ್ಯ ತನ್ನ ನೆಲ ಎಂದಿದ್ದರು. ಅಧಿಕಾರದ ಆಸೆಯಿಂದ ಕೋಮುವಾದಿ ಪಕ್ಷದ ಜೊತೆ ಹೋದರು. ಅಧಿಕಾರಕ್ಕಾಗಿಯೇ ಹಸಿರು ಶಾಲು ಬದಿಗಿಟ್ಟು, ದತ್ತಮಾಲಾಧಾರಿಗಳ ಜೊತೆ ನಿಂತರು. ಭಜರಂಗಿಗಳಿಗಿಂತಲೂ ಭಯಂಕರವಾಗಿ ಕೋಮುವಾದಿ ನಿಲುವು ಪ್ರದರ್ಶಿಸಿದರು. ಪ್ರಚೋದನೆ ಮಾಡಲು ಹಿಂಜರಿಯದೆ ಹೋದರು. ಮುಸ್ಲಿಮರ ಮತಗಳು ಬೇಡ ಎಂದರು. ಯಾವ ನೈತಿಕತೆಯನ್ನು ಜೆಡಿಎಸ್ ಉಳಿಸಿಕೊಂಡಿದೆ?

ದೇಶದ ರಾಜಕೀಯದ ಮಹತ್ವದ ಘಟ್ಟದಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿದ್ದ ರಾಜಕೀಯ ಒಕ್ಕೂಟದ ಒಂದು ಭಾಗ ಇವತ್ತು ಯಾವ ಬದ್ಧತೆಯೂ ಇಲ್ಲದೆ, ಸಿದ್ಧಾಂತವಿಲ್ಲದೆ, ನೈತಿಕತೆಯಿಲ್ಲದೆ ಬರೀ ಅಧಿಕಾರಕ್ಕಾಗಿ ಹಪಹಪಿಸುತ್ತ, ಈಗ ಪತನದ ಅಂಚಿನಲ್ಲಿದೆಯೇ? ಕರ್ನಾಟಕದ ಬಹಳ ಪ್ರಮುಖ ಪ್ರಾದೇಶಿಕ ಪಕ್ಷವಾಗಬಹುದಾಗಿದ್ದ ಎಲ್ಲ ಅವಕಾಶ ಮತ್ತು ಶಕ್ತಿಯಿದ್ದ ಜೆಡಿಎಸ್ ಒಂದು ಕುಟುಂಬದ ರಾಜಕೀಯ ಲಾಲಸೆಗೆ ಬಲಿಯಾಗುತ್ತಿದೆಯೇ? ಅದೇ ಜೆಡಿಎಸ್ ವರಿಷ್ಠ ದೇವೇಗೌಡರ ತವರು ಹಾಸನದಲ್ಲಿ ಮೊನ್ನೆ ನಡೆದ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಸಮಾವೇಶ ಜೆಡಿಎಸ್‌ನ ಕೊನೆಯ ದಿನಗಳನ್ನು ಸೂಚಿಸುವ ವಿದ್ಯಮಾನವೂ ಆಗಿದೆಯೆ?

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News