ರಾಜ್ಯದಲ್ಲಿ ವಕ್ಫ್ ಭೂಮಿಯ ವಾಸ್ತವ

Update: 2024-11-04 08:40 GMT
Editor : Thouheed | Byline : ಆರ್. ಜೀವಿ

ವಕ್ಫ್, ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಪ್ರತ್ಯೇಕವಾಗಿ ಮೀಸಲಾದ ಆಸ್ತಿಗಳನ್ನು ಸೂಚಿಸುತ್ತದೆ.

ವಕ್ಫ್ ಎಂಬುದು ದತ್ತಿ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಆಸ್ತಿಯನ್ನು ಸಮರ್ಪಿಸುವುದಾಗಿರುತ್ತದೆ. ವಕ್ಫ್ 1,400 ವರ್ಷಗಳ ಹಿಂದೆಯೇ ಪ್ರಾರಂಭವಾದ ವ್ಯವಸ್ಥೆ. ವ್ಯಕ್ತಿಗಳು ಮರಣ ಹೊಂದುವ ಮೊದಲು ತಮ್ಮ ಸ್ವಂತ ಸ್ವತ್ತನ್ನು ಸಮುದಾಯದ ಬಡ ಜನರ ಅಭಿವೃದ್ಧಿಗೆ ಹಾಗೂ ಅನುಕೂಲಕ್ಕೆ ಬಳಕೆ ಮಾಡಲೆಂದು ದೇವರ ಹೆಸರಿನಲ್ಲಿ ದಾನ ಮಾಡುವ ಪದ್ಧತಿಯನ್ನು ವಕ್ಫ್ ಎಂದು ಕರೆಯಲಾಗುತ್ತದೆ.

ವಕ್ಫ್ ಸ್ವತ್ತುಗಳನ್ನು ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ಪೂಜಾ ಸ್ಥಳಗಳು ಹೀಗೆ ಮುಸ್ಲಿಮ್ ಸಮುದಾಯಕ್ಕಾಗಿ ವಿವಿಧ ಕಾರಣಗಳಿಗಾಗಿ ಬಳಸಬಹುದು. ಒಮ್ಮೆ ವಕ್ಫ್ ಮಾಡಿದ ಸೊತ್ತು ಶಾಶ್ವತವಾಗಿ ವಕ್ಫ್ ಸೊತ್ತಾಗಿಯೇ ಉಳಿಯುತ್ತದೆ.

ದೇವರ ಹೆಸರಲ್ಲಿ ವಕ್ಫ್ ಮಾಡಿದ ಸೊತ್ತನ್ನು ಮತ್ತೆ ಮರು ಮಾರಾಟ ಹಾಗೂ ವರ್ಗಾವಣೆ ಮಾಡುವಂತಿಲ್ಲ, ಅಡಮಾನ ಇಡುವಂತಿಲ್ಲ, ಉಡುಗೊರೆಯಾಗಿ ಕೊಡುವಂತಿಲ್ಲ. ಹಲವಾರು ವರ್ಷಗಳಿಂದ ಜಾರಿಯಲ್ಲಿರುವ ವಕ್ಫ್ ಪದ್ಧತಿಗೆ ಬ್ರಿಟಿಷರ ಕಾಲದಲ್ಲಿ ಒಂದು ವ್ಯವಸ್ಥೆ ಕಲ್ಪಿಸಲಾಯಿತು. ವಕ್ಫ್ ಮಾಡಲಾದ ಸ್ವತ್ತನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ವಕ್ಫ್ ಬೋರ್ಡ್, ವಕ್ಫ್ ಕಾಯ್ದೆಗಳು ಬಂದವು.

ಹೈದರಲಿ, ಟಿಪ್ಪು ಸುಲ್ತಾನ್, ಆದಿಲ್ ಶಾಹಿಗಳು, ಹೈದರಾಬಾದ್‌ನ ನಿಝಾಮರು ಹೀಗೆ ರಾಜರ ಕಾಲದಲ್ಲೂ ಸಾವಿರಾರು ಎಕರೆ ಜಮೀನು ಹಾಗೂ ಸ್ವತ್ತನ್ನು ವಕ್ಫ್ ಮಾಡಲಾಗಿದೆ.

ವಕ್ಫ್ ಕಾಯ್ದೆ 1995 ಪ್ರಕಾರ ಈ ಸ್ವತ್ತನ್ನು ಯಾರಿಗೂ ಮಾರಾಟ ಮಾಡುವ ಹಾಗಿಲ್ಲ. ಆದರೆ ಬಾಡಿಗೆ ಅಥವಾ ಲೀಜ್‌ಗೆ ಕೊಡಬಹುದಾಗಿದೆ. ದೇಶದಲ್ಲಿ ರೈಲ್ವೆ ಮತ್ತು ರಕ್ಷಣಾ ಇಲಾಖೆಯ ನಂತರ ವಕ್ಫ್ ಮಂಡಳಿಯೇ ಮೂರನೇ ಅತಿ ದೊಡ್ಡ ಭೂಮಾಲಕ ಸಂಸ್ಥೆ.

ವಕ್ಫ್ ಮಂಡಳಿಗಳು ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ವ್ಯಾಪ್ತಿಯ 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತವೆ. ಇದರ ಅಂದಾಜು ಮೌಲ್ಯ ರೂ. 1.2 ಲಕ್ಷ ಕೋಟಿ.

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಎರಡು ಶಿಯಾ ವಕ್ಫ್ ಮಂಡಳಿಗಳು ಸೇರಿದಂತೆ ದೇಶದಲ್ಲಿ ಒಟ್ಟು 32 ವಕ್ಫ್ ಮಂಡಳಿಗಳಿವೆ.

ರಾಜ್ಯ ವಕ್ಫ್ ಮಂಡಳಿಗಳ ನಿಯಂತ್ರಣ ಸುಮಾರು 200 ವ್ಯಕ್ತಿಗಳ ಕೈಯಲ್ಲಿದೆ. ಕರ್ನಾಟಕದಲ್ಲಿ ವಿಜಯನಗರ , ಬಹಮನಿ, ಆದಿಲ್ ಶಾಹಿ, ಟಿಪ್ಪು ಹಾಗೂ ಒಡೆಯರ್‌ಗಳ ಕಾಲದಲ್ಲಿ ನೂರಾರು ದಾನ ಹಾಗೂ ದತ್ತಿಗಳನ್ನು ಹಿಂದೂಗಳಿಗೂ, ಮುಸ್ಲಿಮರಿಗೂ ನೀಡಲಾಗಿತ್ತು. ಆಗ ಈ ಧಾರ್ಮಿಕ ದೇಣಿಗೆ ಹಾಗೂ ದತ್ತಿಗಳನ್ನು ದಿ ಮೈಸೂರು ಮುಜರಾಯಿ ಮ್ಯಾನುವಲ್ 1934ರ ಪ್ರಕಾರ ನಿರ್ವಹಿಸಲಾಗುತ್ತಿತ್ತು. 1974ರಲ್ಲಿ ರಾಜ್ಯ ಸರಕಾರ ವಕ್ಫ್ ಸೊತ್ತುಗಳನ್ನು ವಕ್ಫ್ ಕಾಯ್ದೆ 1954ರ ಪ್ರಕಾರ ನಿರ್ವಹಿಸಲು ವಕ್ಫ್ ಬೋರ್ಡ್‌ಗೆ ವರ್ಗಾಯಿಸಿತು.

ಇನ್ನು ಕರ್ನಾಟಕದಲ್ಲಿನ ವಕ್ಫ್ ಆಸ್ತಿ ಬಗ್ಗೆ ತಿಳಿಯೋಣ.

ಕರ್ನಾಟಕದಲ್ಲಿನ ಅತ್ಯಂತ ಹಳೆಯ ವಕ್ಫ್ ಆಸ್ತಿ ಮಂಗಳೂರಿನ ಮಸ್ಜಿದ್-ಎ-ಝೀನತ್ ಬಕ್ಷ್. ಇದು ಭಾರತದ 3ನೇ ಅತ್ಯಂತ ಹಳೆಯ ಮಸೀದಿ ಮತ್ತು ರಾಜ್ಯದ ಅತ್ಯಂತ ಹಳೆಯ ಮಸೀದಿಯಾಗಿದೆ. ಕ್ರಿ.ಶ. 644ರಲ್ಲಿ ಇದರ ನಿರ್ಮಾಣವಾಯಿತೆಂದು ದಾಖಲೆಗಳು ಹೇಳುತ್ತವೆ.

ಕರ್ನಾಟಕದಲ್ಲಿನ ವಕ್ಫ್ ಆಸ್ತಿ ವಿವರ:

► ಒಟ್ಟು ವಕ್ಫ್ ಸಂಸ್ಥೆಗಳು - 32,543

► ಮಸೀದಿಗಳು - 11,436

► ಮದ್ರಸಗಳು - 1,652

► ಖಬರಸ್ಥಾನಗಳು - 6,032

► ದರ್ಗಾಗಳು - 3,131

► ಈದ್ಗಾಗಳು - 1,555

► ಅಶುರ್ಖಾನಾ ಮತ್ತಿತರ ಆಸ್ತಿ - 8,737

► ವಕ್ಫ್ ಆಸ್ತಿಗಳ ಒಟ್ಟು ಸಂಖ್ಯೆ : 47,629

► ವಕ್ಫ್ ಆಸ್ತಿಗಳ ಒಟ್ಟು ವಿಸ್ತೀರ್ಣ - 1,12,007 ಎಕರೆ 2 ಗುಂಟೆಗಳು

ವಕ್ಫ್ ಆಸ್ತಿಗಳ ದಾವೆ ಮತ್ತು ಒತ್ತುವರಿ:

► ಇನಾಮ್ ರದ್ದತಿ ಕಾಯ್ದೆ ಅಡಿಯಲ್ಲಿ ವಕ್ಫ್ ಕೈತಪ್ಪಿದ ಒಟ್ಟು ಆಸ್ತಿ - 47,263 ಎಕರೆಗಳು.

► ಭೂ ಸುಧಾರಣಾ ಕಾಯ್ದೆಯಡಿಯಲ್ಲಿ ಕಳೆದುಕೊಂಡ ಒಟ್ಟು ವಕ್ಫ್ ಆಸ್ತಿ - 23,620 ಎಕರೆ.

► ಭೂಸ್ವಾಧೀನದ ಅಡಿಯಲ್ಲಿ ಕಳೆದುಕೊಂಡ ವಕ್ಫ್ ಆಸ್ತಿಗಳ ಒಟ್ಟು ಸಂಖ್ಯೆ - 3,101 ಎಕರೆ.

► ಖಾಸಗಿ ವ್ಯಕ್ತಿಗಳು ಮತ್ತು ಸರಕಾರಿ ಸಂಸ್ಥೆಗಳಿಂದ ಆಗಿರುವ ಒತ್ತುವರಿ - 17,969 ಎಕರೆ.

► ಒತ್ತುವರಿಯಾದ ವಕ್ಫ್ ಆಸ್ತಿಯ ಒಟ್ಟು ವಿಸ್ತೀರ್ಣ - 91,953 ಎಕರೆ.

► ವಕ್ಫ್ ಸಂಸ್ಥೆಗಳ ಬಳಿ ಉಳಿದಿರುವ ಭೂಮಿ - 20,054 ಎಕರೆ.

► ವಕ್ಫ್ ಆಸ್ತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳು - 17

► ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳು - 904

► ವಕ್ಫ್ ನ್ಯಾಯಮಂಡಳಿಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳು - 1,341

► ಸೆಷನ್, ಜಿಲ್ಲೆ ಮತ್ತು ಇತರ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳು - 1,383

► ವಕ್ಫ್ ಕಾಯ್ದೆಯ ಸೆಕ್ಷನ್ 52ರ ಅಡಿಯಲ್ಲಿ ನೋಂದಾಯಿಸಲಾದ ಪ್ರಕರಣಗಳು - 809.

► ವಕ್ಫ್ ಕಾಯ್ದೆಯ ಸೆಕ್ಷನ್ 52ರ ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳು - 322.

► ವಕ್ಫ್ ಕಾಯ್ದೆಯ ಸೆಕ್ಷನ್ 54ರ ಅಡಿಯಲ್ಲಿ ನೋಂದಾಯಿಸಲಾದ ಪ್ರಕರಣಗಳು - 4,095.

► ವಕ್ಫ್ ಕಾಯ್ದೆಯ ಸೆಕ್ಷನ್ 54ರ ಅಡಿಯಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು - 2,164.

► ಬಾಕಿ ಇರುವ ಪ್ರಕರಣಗಳ ಒಟ್ಟು ಸಂಖ್ಯೆ : 6,131

ಈಗ ಕರ್ನಾಟಕದಲ್ಲಿ ವಕ್ಫ್ ಆಸ್ತಿ ಬಗ್ಗೆ ವಿಪಕ್ಷಗಳು ವಿವಾದವೆಬ್ಬಿಸಿವೆ. ವಕ್ಫ್ ಹೆಸರಿನಲ್ಲಿ ಸರಕಾರ ರೈತರ ಜಮೀನು ವಶಪಡಿಸಿಕೊಳ್ಳಲು ಹೊರಟಿದೆ ಎಂಬುದು ಅಪಪ್ರಚಾರ ಮತ್ತು ಹುನ್ನಾರ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ವಕ್ಫ್ ಬಳಿ ಇದೆಯೆಂದು ಬಿಂಬಿಸಲಾಗುತ್ತಿರುವುದೇ ಬೇರೆ, ವಾಸ್ತವವಾಗಿ ವಕ್ಫ್ ಬಳಿ ಉಳಿದುಕೊಂಡಿರುವ ಆಸ್ತಿಯ ಪ್ರಮಾಣವೇ ಬೇರೆ. ದೊಡ್ಡ ಪ್ರಮಾಣದ ಆಸ್ತಿಯನ್ನು ವಕ್ಫ್ ಕಳೆದುಕೊಂಡಿದೆ ಎಂದು ಸರಕಾರ ಲೆಕ್ಕ ಕೊಡುತ್ತಿದೆ.

ಅದರ ಪ್ರಕಾರ, ವಿಜಯಪುರದಲ್ಲಿ 14,201 ಎಕರೆ ಭೂಮಿಯಲ್ಲಿ 13,428 ಎಕರೆ ಕಬಳಿಕೆ!

ವಿಜಯಪುರ ಜಿಲ್ಲೆಯಲ್ಲಿ ಈ ಮೊದಲು 14,201 ಎಕರೆ ವಕ್ಫ್ ಆಸ್ತಿ ಇತ್ತು. ಅದರಲ್ಲಿ 1,459 ಎಕರೆ ಭೂಮಿ ಇನಾಂ ರದ್ದತಿ ಕಾಯ್ದೆಯಡಿ ವಕ್ಫ್ ಕೈತಪ್ಪಿದೆ. ಭೂಸುಧಾರಣೆ ಕಾಯ್ದೆಯಡಿ 11,835 ಎಕರೆ ರೈತರಿಗೆ ಹಂಚಿಕೆಯಾಗಿದೆ. ವಿವಿಧ ಯೋಜನೆಗಳಿಗೆ 939 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ.

ಇನ್ನು ವಕ್ಫ್ ಹೆಸರಲ್ಲಿ ಇರುವುದು 773 ಎಕರೆ ಮಾತ್ರ. ಇನ್ನು ಕಲಬುರಗಿ ಜಿಲ್ಲೆಯಲ್ಲಿ 5,814 ಎಕರೆ ಜಮೀನು ವಕ್ಫ್ ಅಧೀನದಲ್ಲಿ ಇರಬೇಕಿತ್ತು. ಆದರೆ ಈ ಪೈಕಿ 3,610 ಎಕರೆ 4 ಗುಂಟೆ ಜಮೀನು ಒತ್ತುವರಿಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ 823 ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 147 ಎಕರೆ 22 ಗುಂಟೆ ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ.

ವಿಜಯಪುರದಲ್ಲಿನ ವಕ್ಫ್ ಆಸ್ತಿ ವಿವಾದದ ಬೆನ್ನಲ್ಲೇ ಈಗ ಯಾದಗಿರಿ ಮತ್ತು ಧಾರವಾಡ ಜಿಲ್ಲೆಗಳ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದಾಗಿ ಸುದ್ದಿ ಹಬ್ಬಿಸಲಾಗಿದೆ.

ವಿಜಯಪುರದಲ್ಲಿ ಅನವಶ್ಯಕವಾಗಿ ಸಾವಿರಾರು ಎಕರೆ ಎಂದು ಬಿಜೆಪಿ ಆರೋಪಿಸಿದ್ದು ಎಂಥ ಸುಳ್ಳಿನ ಕಂತೆ ಎಂಬುದನ್ನು ಮೂವರು ಮಂತ್ರಿಗಳೇ ಖುದ್ದು ಸುದ್ದಿಗೋಷ್ಠಿ ನಡೆಸುವ ಮೂಲಕ ಬಯಲಿಗೆಳೆದಿದ್ದಾರೆ. ಅದರಿಂದ ಆಗಿರುವ ಮುಜುಗರ ತಪ್ಪಿಸಿಕೊಳ್ಳಲು ಎನ್ನುವಂತೆ, ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಕುರಿತ ತಪ್ಪು ಭಾವನೆ ತಣ್ಣಗಾಗದಂತೆ ನೋಡಿಕೊಳ್ಳುವ ವ್ಯವಸ್ಥಿತ ಯತ್ನವಾಗಿ ಈ ಹೊಸ ಆರೋಪ ಮಾಡಲಾಗಿದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಬಿಜೆಪಿ ಮಾಡುತ್ತಿರುವ ಆರೋಪಗಳ ಹಿಂದಿನ ಸತ್ಯಾಸತ್ಯತೆ ಬಯಲಾಗಬೇಕಿದೆ. ಈಗ ನಡೀತಿರೋ ವಿವಾದದ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ರಾಜ್ಯ ವಕ್ಫ್ ಬೋರ್ಡ್ ನ ಮಾಜಿ ಸಿಇಒ ಮುಜೀಬುಲ್ಲಾ ಝಫಾರಿ ಅವರು ಸುಪ್ರೀಂ ಕೋರ್ಟ್ 1998 ರಲ್ಲಿ ನೀಡಿದ ತೀರ್ಪಿನಲ್ಲಿ ‘‘Waqf is always a Waqf” ಎಂದು ಹೇಳಿದೆ. ಇನಾಮ್ ಕಾಯ್ದೆಯಡಿ ವಕ್ಫ್ ಭೂಮಿಯ ಪಟ್ಟ ಕೊಟ್ಟಿದ್ದರೆ ಅದನ್ನು ಈ ಹಿಂದೆ ವಕ್ಫ್ ಮಾಡಿರುವುದರಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದೇ ಸುಪ್ರೀಂ ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕ ಧಾರ್ಮಿಕ ದತ್ತಿ ಇನಾಮ್ ಕಾಯ್ದೆ, ಇನಾಮ್ ರದ್ದತಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ವಕ್ಫ್‌ಗೆ ಹೇಗೆ ಅನ್ವಯಿಸಬೇಕು ಎಂದು ಕರ್ನಾಟಕ ವಕ್ಫ್ ಬೋರ್ಡ್ ರಾಜ್ಯ ಸರಕಾರವನ್ನು ಕೇಳುತ್ತದೆ. ರಾಜ್ಯ ಸರಕಾರ ಅದನ್ನು ಕಾನೂನು ಇಲಾಖೆಗೆ ಕಳಿಸುತ್ತದೆ. ಆಗ ರಾಜ್ಯ ಕಾನೂನು ಇಲಾಖೆ ಇದನ್ನು ಅಧ್ಯಯನ ಮಾಡಿ ಇನಾಮ್ ರದ್ದತಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯಡಿ ಸರಕಾರ ಪಡೆದುಕೊಂಡಿರುವ ಭೂಮಿಗೆ ನ್ಯಾಯಾಂಗದ ಮಾನ್ಯತೆಯಿಲ್ಲ. ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪಿನ ಆಧಾರದಲ್ಲಿ ಒಮ್ಮೆ ವಕ್ಫ್ ಸೊತ್ತು ಎಂದಾದ ಮೇಲೆ ಅದು ಶಾಶ್ವತವಾಗಿ ವಕ್ಫ್ ಸೊತ್ತು , ಅದರ ಮೇಲೆ ಇನಾಮ್ ರದ್ದತಿ ಕಾಯ್ದೆ ಅಥವಾ ಭೂ ಸುಧಾರಣಾ ಕಾಯ್ದೆಯನ್ನು ಅನ್ವಯಿಸುವಂತಿಲ್ಲ ಎಂದು ಹೇಳಿತು.

ಆಗ ರಾಜ್ಯ ಸರಕಾರ 2017 ರಲ್ಲಿ ವಕ್ಫ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ವ್ಯಕ್ತಿಗಳು ಅಥವಾ ಗುಂಪುಗಳಿಂದ ಅದನ್ನು ವಕ್ಫ್ ಕಾಯ್ದೆ 1995 ಮರು ಸ್ವಾಧೀನ ಪಡೆಯುವಂತೆ ರಾಜ್ಯ ವಕ್ಫ್ ಬೋರ್ಡ್‌ಗೆ ಸೂಚಿಸಿತು. ಅದರಂತೆ ಇನಾಮ್ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯಡಿ ಕಳಕೊಂಡಿರುವ ವಕ್ಫ್ ಭೂಮಿಯನ್ನು ಮರು ಸ್ವಾಧೀನ ಪಡೆಯುವಂತೆ ವಕ್ಫ್ ಬೋರ್ಡ್ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳನ್ನು ವಿನಂತಿಸಿತು. ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರು ಅಂತಹ ಭೂ ಮಾಲಕರಿಗೆ ನೋಟಿಸ್ ಕೊಟ್ಟರು. ರಾಜ್ಯ ಹೈಕೋರ್ಟ್ ಕೂಡ ತಹಶೀಲ್ದಾರರಿಗೆ ನಿರ್ದೇಶನ ನೀಡಿ ನೋಟಿಸ್ ಜಾರಿ ಮಾಡಿ, ಅವರ ಅಹವಾಲು ಕೇಳಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿದೆ.ಆದರೆ ಈಗ ರಾಜ್ಯ ಸರಕಾರ ಬಿಜೆಪಿ ಒತ್ತಡಕ್ಕೆ ಮಣಿದು ಯಾವುದೇ ನೋಟಿಸ್ ನೀಡುವುದಿಲ್ಲ ಎಂದು ಹೇಳಿದೆ. ಇದು ಸುಪ್ರೀಂಕೋರ್ಟ್‌ನ

ತೀರ್ಪು ಹಾಗೂ ರಾಜ್ಯ ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂದು ಹೇಳುತ್ತಾರೆ ರಾಜ್ಯ ವಕ್ಫ್ ಬೋರ್ಡ್‌ನ ಮಾಜಿ ಸಿಇಒ ಮುಜೀಬುಲ್ಲಾ ಝಫಾರಿ.

1995 ರಿಂದ ಇನಾಮ್‌ದಾರರು ಹಾಗೂ ಭೋಗ್ಯದಾರರು ತಮಗೆ ಸಿಕ್ಕಿದ ವಕ್ಫ್ ಭೂಮಿಯನ್ನು ಮಾರಾಟ ಮಾಡಿದ್ದಾರೆ, ಆ ಭೂಮಿಯನ್ನು ಕೃಷಿಯೇತರ ಬಳಕೆಗೆ ಬದಲಾಯಿಸಿದ್ದಾರೆ, ವಸತಿ ಲೇಔಟ್‌ಗಳನ್ನು ಮಾಡಿದ್ದಾರೆ, ವಾಣಿಜ್ಯ ಸಂಕೀರ್ಣಗಳನ್ನೂ ನಿರ್ಮಿಸಿದ್ದಾರೆ.

ಈ ನಡುವೆ, ವಕ್ಫ್ ಆಸ್ತಿ ಕಬಳಿಕೆ ಕುರಿತು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪಾಡಿ 2012ರಲ್ಲಿ ಸಿದ್ಧಪಡಿಸಿದ್ದ ವರದಿ ವಿಚಾರವೂ ಮತ್ತೆ ಮುನ್ನೆಲೆಗೆ ಬರುತ್ತಿದೆ.ಅದು ಸಿದ್ಧವಾಗಿ 10 ವರ್ಷಗಳ ಬಳಿಕ 2022ರಲ್ಲಿ ರಾಜ್ಯ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿತ್ತು.

ವಕ್ಫ್ ಆಸ್ತಿಗಳ ಕುರಿತ ಅನ್ವರ್ ಮಾಣಿಪಾಡಿ ವರದಿ ಪ್ರಭಾವೀ ರಾಜಕೀಯ ಮುಖಂಡರು, ಅಧಿಕಾರಿಗಳು ಮತ್ತು ವಕ್ಫ್ ಬೋರ್ಡ್ ಸದಸ್ಯರು ಒಟ್ಟಾಗಿಯೇ ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಹೇಳುತ್ತದೆ.

ವಕ್ಫ್ ಭೂಮಿಯನ್ನು ವೈಯಕ್ತಿಕ ಲಾಭಕ್ಕಾಗಿ ಅಕ್ರಮವಾಗಿ ಗುತ್ತಿಗೆ ಅಥವಾ ಮಾರಾಟ ಮಾಡಲಾಗಿದೆ ಎಂದು ವರದಿ ಆರೋಪಿಸಿದೆ. ಮಾಣಿಪಾಡಿ ವರದಿ ವ್ಯಾಪಕ ಭ್ರಷ್ಟಾಚಾರ ಮತ್ತು ವಕ್ಫ್ ಆಸ್ತಿಗಳ ದುರುಪಯೋಗವನ್ನು ವಿವರಿಸುತ್ತ, ಮಲ್ಲಿಕಾರ್ಜುನ ಖರ್ಗೆ ಮತ್ತು ಹಲವಾರು ಉನ್ನತ ರಾಜಕೀಯ ವ್ಯಕ್ತಿಗಳ ವಿರುದ್ಧವೂ ಆರೋಪ ಮಾಡಿದೆ.

ವಕ್ಫ್ ಆಸ್ತಿಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ವಕ್ಫ್ ಸಂಸ್ಥೆಗಳೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದವು ಎಂದು ಹೇಳಿದೆ. ವರದಿಯ ಪ್ರಕಾರ, ವಕ್ಫ್ ಜಮೀನುಗಳನ್ನು ಸಾಮಾನ್ಯವಾಗಿ ಕಡಿಮೆ ಮಾರುಕಟ್ಟೆ ದರದಲ್ಲಿ ಗುತ್ತಿಗೆಗೆ ನೀಡಲಾಗುತ್ತದೆ.

ವಕ್ಫ್ ಬೋರ್ಡ್‌ಗಳು ಸಂಗ್ರಹಿಸುವ ಸಂಪೂರ್ಣ ಬಾಡಿಗೆ ಮೌಲ್ಯದ ಬದಲಿಗೆ, ಶೇ.20ರಷ್ಟು ಮಾತ್ರ ಉದ್ದೇಶಿತ ಸಂಸ್ಥೆಗಳಿಗೆ ತಲುಪುತ್ತದೆ. ಆದರೆ ಉಳಿದ ಶೇ.80ರಷ್ಟು ಹಣ ಭ್ರಷ್ಟ ಅಧಿಕಾರಿಗಳು, ಮಂಡಳಿಯ ಸದಸ್ಯರು ಮತ್ತು ರಾಜಕೀಯ ಪಕ್ಷದ ನಾಯಕರ ಜೇಬಿಗಿಳಿದಿದೆ ಎಂಬುದು ಮಾಣಿಪಾಡಿ ವರದಿಯ ಆರೋಪ.

ವರದಿಯಲ್ಲಿನ ಪ್ರಮುಖ ತಕರಾರು ಎಂದರೆ, ವಕ್ಫ್ ಭೂಮಿಯನ್ನು ಅತ್ಯಲ್ಪ ಮೊತ್ತಕ್ಕೆ ಅಕ್ರಮವಾಗಿ ಗುತ್ತಿಗೆ ನೀಡಲಾಗಿತ್ತು ಎಂಬುದು. ಉದಾಹರಣೆಗೆ, ಪಂಚತಾರಾ ಹೋಟೆಲ್‌ಗಳು ಮತ್ತು  ಇಂಜಿನಿಯರಿಂಗ್ ಕಾಲೇಜುಗಳ ಸ್ಥಳಗಳು ಸೇರಿದಂತೆ ಪ್ರಮುಖ ಆಸ್ತಿಗಳನ್ನು 5,000 ರಿಂದ 50,000 ರೂ.ಗಳಿಗೆ ಬಾಡಿಗೆಗೆ ಪಡೆದ ಪ್ರಕರಣಗಳನ್ನು ವರದಿ ಎತ್ತಿ ತೋರಿಸುತ್ತದೆ.

ಈ ಸಂಸ್ಥೆಗಳು ಕೋಟಿ ಕೋಟಿಗಳನ್ನು ಗಳಿಸುತ್ತಿದ್ದರೂ ಇಷ್ಟು ಕಡಿಮೆ ಮೊತ್ತ ನಿಗದಿಪಡಿಸಿರುವುದಕ್ಕೆ ಅದು ತಕರಾರು ಎತ್ತಿದೆ. ಕೆಲ ಪ್ರಕರಣಗಳಲ್ಲಿ ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಗುತ್ತಿಗೆ ಮೊತ್ತ ರೂ. 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿತು. ಆದರೆ ಈ ಒಪ್ಪಂದಗಳನ್ನು ಇನ್ನೂ ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಈ ದೀರ್ಘಾವಧಿಯ ಗುತ್ತಿಗೆ ಅಥವಾ ಮಾರಾಟಗಳು ಸುಪ್ರೀಂ ಕೋರ್ಟ್‌ನ 1998ರ ತೀರ್ಪಿಗೆ ನೇರವಾಗಿ ವಿರುದ್ಧವಾಗಿವೆ ಎಂದು ಮಾಣಿಪಾಡಿ ಗಮನ ಸೆಳೆದಿದ್ದಾರೆ.

ಮಾಣಿಪಾಡಿ ವರದಿಯಲ್ಲಿ ಹಲವಾರು ಪ್ರಮುಖ ರಾಜಕೀಯ ವ್ಯಕ್ತಿಗಳು ಈ ಮೋಸದ ವ್ಯವಹಾರಗಳಲ್ಲಿ ಪಾತ್ರ ವಹಿಸಿದ್ದಾರೆಂದು ಆರೋಪಿಸಲಾಗಿದೆ. ಅವರೆಲ್ಲರೂ ಸೇರಿ ವಕ್ಫ್ ಆಸ್ತಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ, ಕಾನೂನುಬಾಹಿರವಾಗಿ ಲೀಸ್ ಅಥವಾ ಪ್ರಧಾನ ಭೂಮಿಯನ್ನು ಮಾರಾಟ ಮಾಡಲಾಗಿದೆ.

ಅದರಿಂದಾಗಿ ವಕ್ಫ್ ಸಂಸ್ಥೆಗಳಿಗೆ ದತ್ತಿ ಉದ್ದೇಶಗಳಿಗಾಗಿದ್ದ ಲಕ್ಷಾಂತರ ಆದಾಯ ಬೇರೆಯವರ ಪಾಲಾಗಿದೆ ಎಂಬುದು ಅರೋಪ. ಮುತವಲ್ಲಿಗಳು ಮತ್ತು ಸಮಿತಿಯ ಸದಸ್ಯರು ಸೇರಿದಂತೆ ವಿವಿಧ ವಕ್ಫ್ ಮಂಡಳಿ ಅಧಿಕಾರಿಗಳು ಅಕ್ರಮ ಗುತ್ತಿಗೆಗಳನ್ನು ವ್ಯವಸ್ಥಿತವಾಗಿ ಸಕ್ರಮಗೊಳಿಸಿದ್ದಾರೆ ಮತ್ತು ಲಾಭವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಮಾಣಿಪಾಡಿ ವರದಿ ಆರೋಪಿಸಿದೆ.

ವಕ್ಫ್ ಆಸ್ತಿಗಳ ದುರುಪಯೋಗ ತಡೆಯಲು ತುರ್ತಾಗಿ ಸುಧಾರಣೆಗಳ ಅಗತ್ಯವಿದೆ ಎಂದು ಮಾಣಿಪಾಡಿ ವರದಿ ಸೂಚಿಸಿತ್ತು. ಮಾಣಿಪಾಡಿ ವರದಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು ಎಂಬುದನ್ನೂ ಇಲ್ಲಿ ಗಮನಿಸಬಹುದು. ಅದು ಸತ್ಯಕ್ಕೆ ದೂರ ಎಂಬ ಟೀಕೆಗಳೂ ಇದ್ದವು. ಆ ವರದಿಯಲ್ಲಿ ವಕ್ಫ್ ಭೂಮಿ ಅಕ್ರಮದ ಅತಿ ಹೆಚ್ಚು ಆರೋಪ ಇರುವುದು ಕಾಂಗ್ರೆಸ್ ಮುಖಂಡರ ಮೇಲೆ ಹಾಗು ಆ ವರದಿಯನ್ನು ಅತಿ ಹೆಚ್ಚು ವಿರೋಧಿಸಿರುವುದು ಕಾಂಗ್ರೆಸ್ ಮುಖಂಡರು ಎಂಬುದು ಗಮನಾರ್ಹ.

ಖರ್ಗೆ ಮಾತ್ರವಲ್ಲದೆ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ದಿವಂಗತ ಜಾಫರ್ ಷರೀಫ್, ಖಮರುಲ್ ಇಸ್ಲಾಂ, ಇಕ್ಬಾಲ್ ಅಹ್ಮದ್ ಸರಡಗಿ, ಮಾಜಿ ಸಚಿವರಾದ ರಹ್ಮಾನ್ ಖಾನ್, ರೋಷನ್ ಬೇಗ್, ಸಿಎಂ ಇಬ್ರಾಹೀಂ, ಶಾಸಕರಾದ ತನ್ವೀರ್ ಸೇಠ್, ಎನ್.ಎ. ಹಾರಿಸ್ ಮತ್ತಿತರ ಮುಖಂಡರು ಹಾಗೂ ಅಧಿಕಾರಿಗಳನ್ನು ಮಾಣಿಪಾಡಿ ವರದಿಯಲ್ಲಿ ಹೆಸರಿಸಲಾಗಿದೆ.

ಈಗ ಈ ಅನ್ವರ್ ಮಾಣಿಪಾಡಿ ವರದಿಯನ್ನು ವಕ್ಫ್ ಕಾಯ್ದೆ ಕುರಿತ ಜಂಟಿ ಸಂಸದೀಯ ಸಮಿತಿಯ ಮುಂದೆಯೂ ಇಡಲಾಗಿದೆ. ಅಲ್ಲೂ ಕಾಂಗ್ರೆಸ್ ಮುಖಂಡರು ಇದನ್ನು ವಿರೋಧಿಸಿದ್ದಾರೆ.

ಖರ್ಗೆ ಸಹಿತ ಕಾಂಗ್ರೆಸ್ ನಾಯಕರ ವಿರುದ್ಧ ಅಪಪ್ರಚಾರಕ್ಕೆ ಇದನ್ನು ಬಳಸಲಾಗುತ್ತಿದೆ ಎಂದು ದೂರಿದ್ದಾರೆ. ಈಗ ಮತ್ತೊಮ್ಮೆ ವಕ್ಫ್ ಕುರಿತು ಎದ್ದಿರುವ ತಕರಾರುಗಳು ಕೂಡ ಸತ್ಯಕ್ಕೆ ದೂರ ಎಂದು ಸರಕಾರ ಪ್ರತಿಪಾದಿಸುತ್ತಿದೆ. ಆದರೆ ಸ್ವತಃ ರಾಜ್ಯ ಸರಕಾರ ಕೂಡ ವಕ್ಫ್ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸುತ್ತಿಲ್ಲ.

ಅಲ್ಲದೆ ವಕ್ಫ್ ಆಸ್ತಿ ಎನ್ನುವುದು ಸರಕಾರದ ಆಸ್ತಿ ಎಂಬ ಭಾವನೆಯಿದ್ದು, ಆದರೆ ಅದು ಸತ್ಯವಲ್ಲ, ಅದು ಆ ಸಮುದಾಯದ ಜನರಿಂದ ಸಮುದಾಯಕ್ಕೆ ದಾನವಾಗಿ ಬಂದಿರುವ ಭೂಮಿ ಎಂದು ನೆನಪಿಸಬೇಕಾಗಿದೆ.

ವಕ್ಫ್ ಆಸ್ತಿ ಕುರಿತ ವಿವಾದವನ್ನು ಎತ್ತಿಕೊಂಡು, ಕಾಂಗ್ರೆಸ್ ವಿರುದ್ಧದ ಮುಸ್ಲಿಮ್ ತುಷ್ಟೀಕರಣ ಆರೋಪವನ್ನು ಬಿಜೆಪಿ ಇನ್ನಷ್ಟು ಬೆಳೆಸುತ್ತಿದೆ. ಬಿಜೆಪಿ ಈ ಮೂಲಕ ಕಾಂಗ್ರೆಸ್ ವಿರುದ್ಧ ಚುನಾವಣೆ ಹೊತ್ತಲ್ಲಿ ಹುನ್ನಾರ ರೂಪಿಸಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News