ಬಣ ರಾಜಕೀಯಕ್ಕೆ ಕರ್ನಾಟಕ ಬಿಜೆಪಿ ಬಲಿ?
ಕಾಂಗ್ರೆಸ್ ಸರಕಾರದ ವಿರುದ್ಧ ಪ್ರಮುಖ ವಿಪಕ್ಷವಾಗಿ ಹೋರಾಡಬೇಕಿದ್ದ ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ಹೈರಾಣಾಗುತ್ತಿದೆ. ವಿಜಯೇಂದ್ರ ಬಣ ಮತ್ತು ಯತ್ನಾಳ್ ಬಣಗಳ ನಡುವಿನ ಕದನ ತಾರಕಕ್ಕೇರಿದ್ದು, ಬಿಜೆಪಿ ಮನೆಯೊಳಗೆ ಬೆಂಕಿ ಬಿದ್ದಿದೆ. ಮೇಲ್ನೋಟಕ್ಕೆ ವಿಜಯೇಂದ್ರ ವಿರುದ್ಧ ಯತ್ನಾಳ್ ಮಾತ್ರ ಇದ್ದಾರೆ ಎನ್ನುವಂತೆ ಇರುವ ಈ ಕದನದ ಹಿಂದೆ ಯಡಿಯೂರಪ್ಪ ಅವರನ್ನು ವಿರೋಧಿಸುವ ಇತರ ಹಿರಿಯ ನಾಯಕರೂ ಇದ್ದೇ ಇರುವುದು ಗುಟ್ಟಿನ ವಿಷಯವೇನೂ ಅಲ್ಲ. ಕರ್ನಾಟಕದಲ್ಲಿ ಕಾಲಕಾಲಕ್ಕೆ ಹಲವು ನಾಯಕರ ನೇತೃತ್ವದಲ್ಲಿ ಬೆಳೆದು ನಿಂತಿರುವ ಪಕ್ಷ ಇಂದು ಒಳಗೊಳಗೇ ಒಂದು ಕುಟುಂಬದ ಹಿಡಿತಕ್ಕೆ ಒಳಪಟ್ಟಿರುವುದೇ ಪಕ್ಷದೊಳಗಿನ ಅಸಮಾಧಾನಕ್ಕೆ ಕಾರಣವಾದಂತಿದೆ. ಈ ಭಿನ್ನಮತದ ಗಾಯಕ್ಕೆ ಉಪ್ಪು ಸವರಿದಂತೆ, ಮೊನ್ನೆ ನಡೆದ ಉಪಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರಗಳನ್ನು ಬಿಜೆಪಿ ಸೋತಿದೆ.
1951ರಲ್ಲೇ ಭಾರತೀಯ ಜನಸಂಘ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ, ಅಧಿಕೃತವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂದಾದದ್ದು 1980ರ ಎಪ್ರಿಲ್ 6ರಂದು. ಶ್ಯಾಮಪ್ರಸಾದ್ ಮುಖರ್ಜಿಯವರು ಸ್ಥಾಪಿಸಿದ್ದ ಜನಸಂಘ ಕಾಂಗ್ರೆಸ್ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಲು 1977ರಲ್ಲಿ ಇತರ ಪಕ್ಷಗಳ ಜತೆಗೂಡಿ ಜನತಾ ಪಕ್ಷವನ್ನು ಸ್ಥಾಪಿಸಿತು. ಆದರೆ ಮೂರೇ ವರ್ಷಗಳಲ್ಲಿ, ಅಂದರೆ 1980ರಲ್ಲಿ ಜನತಾ ಪಕ್ಷ ವಿಸರ್ಜನೆಗೊಂಡು ಬಿಜೆಪಿ ಸ್ಥಾಪನೆಯಾಯಿತು. ಅಟಲ್ ಬಿಹಾರಿ ವಾಜಪೇಯಿ ಬಿಜೆಪಿಯ ಮೊದಲ ಅಧ್ಯಕ್ಷರಾದರು. ಮಾರನೇ ವರ್ಷ 1984ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದರೂ, ಹಿಂದುತ್ವ ಸಿದ್ಧಾಂತದ ಬಲದೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಯಶಸ್ವಿಯಾಯಿತು.
ಇನ್ನು, ಕರ್ನಾಟಕದಲ್ಲಿ ಬಿಜೆಪಿಯ ನಿಜವಾದ ಚುನಾವಣಾ ಇತಿಹಾಸ ಶುರುವಾದದ್ದು 1983ರಲ್ಲಿ. ಪಶ್ಚಿಮ ಕರಾವಳಿಯಲ್ಲಿ ತನಗಿದ್ದ ನೆಲೆಯನ್ನು ಸೀಟುಗಳನ್ನಾಗಿ ಬದಲಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾದದ್ದು ಆಗಲೇ. ಜನತಾ ಪಕ್ಷ ಎಂದಿದ್ದ ಹೊತ್ತಿನಲ್ಲಿ ಅಭ್ಯರ್ಥಿಗಳಿಗೆ ಇದ್ದ ಪ್ರಾಮುಖ್ಯತೆ ಮತ್ತು ಆರೆಸ್ಸೆಸ್ ಮೂಲಕ ಪಕ್ಷದೊಳಗೆ ಮೈಗೂಡಿದ್ದ ಹಿಂದುತ್ವ ಆಧರಿತ ಸಂಘಟನೆ ಇವೆರಡೂ ಬಿಜೆಪಿಯ ಬಲವಾಗಿದ್ದವು. ಆ ಹೊತ್ತಿನಲ್ಲಿ ಪುತ್ತೂರು ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಮಂಗಳೂರಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದವರು ಉರಿಮಜಲು ರಾಮ ಭಟ್. ಅಲ್ಲಿ ಆಗಲೇ ಆರೆಸ್ಸೆಸ್ ಪ್ರಬಲ ಅಸ್ತಿತ್ವ ಹೊಂದಿತ್ತು. 1980ಕ್ಕಿಂತ ಮುಂಚಿನಿಂದಲೇ ಬಿಜೆಪಿ ಮತ್ತು ಆರೆಸ್ಸೆಸ್ ರೈತ ಲಾಬಿಗಳಲ್ಲಿಯೂ ಪ್ರಭಾವ ಹೊಂದಿದ್ದವು.
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಬಲವಾಗುವುದರೊಂದಿಗೆ ರಾಮ ಭಟ್ ನೇತೃತ್ವದ ಬಿಜೆಪಿ ಕರ್ನಾಟಕದಲ್ಲಿ ಮೊದಲ ಬಾರಿಗೆ 18 ಸ್ಥಾನಗಳನ್ನು ಗಳಿಸಿತಲ್ಲದೆ, ಸುಮಾರು ಶೇ.8ರಷ್ಟು ಮತಗಳನ್ನು ಪಡೆದಿತ್ತು.
1983ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಆನಂತರದ ವರ್ಷಗಳಲ್ಲಿ ಪಕ್ಷದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಪ್ರಮುಖರೆಂದರೆ, ಧನಂಜಯ ಕುಮಾರ್ (ಮಂಗಳೂರು), ರುಕ್ಮಯ್ಯ ಪೂಜಾರಿ (ವಿಟ್ಲ), ವಸಂತ ಬಂಗೇರ (ಬೆಳ್ತಂಗಡಿ), ವಿ.ಎಸ್. ಆಚಾರ್ಯ (ಉಡುಪಿ) ಮತ್ತು ಡಿ.ವಿ. ಸದಾನಂದ ಗೌಡ (ಪುತ್ತೂರು). ಹೀಗೆ ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಸ್ಥಾಪಿಸಿತಾದರೂ, ಪಶ್ಚಿಮ ಕರಾವಳಿಯ ಅತ್ಯಂತ ಸಣ್ಣ ಪ್ರದೇಶಕ್ಕಷ್ಟೇ ಸೀಮಿತವಾಗಿತ್ತು. ಸಂಘಟನೆಯಾಗಿ ಬಲವಾಗಿದ್ದರೂ, ರಾಜಕೀಯವಾಗಿ ದುರ್ಬಲವಾಗಿತ್ತು. ಈ ಪ್ರದೇಶದ ಹೊರತಾಗಿ ಮೈಸೂರಿನ ಕೃಷ್ಣರಾಜದಲ್ಲಿ ಎನ್. ಗಂಗಾಧರ ಮತ್ತು ಶಿವಮೊಗ್ಗದ ಶಿಕಾರಿಪುರದಲ್ಲಿ ಬಿ.ಎಸ್. ಯಡಿಯೂರಪ್ಪ ಸ್ವಂತ ಬಲದಿಂದ ಗೆದ್ದು ಗಮನ ಸೆಳೆದಿದ್ದರು. ಆ ಹೊತ್ತಿನಲ್ಲಿ ಅವರು ತಮ್ಮ ಕ್ಷೇತ್ರಗಳಾಚೆ ತೀರಾ ಪ್ರಭಾವ ಹೊಂದಿದವರೇನೂ ಆಗಿರಲಿಲ್ಲ.
ಒಂದು ಅಚ್ಚರಿಯ ಸಂಗತಿಯೆಂದರೆ, ರಾಮ ಭಟ್ ಸೇರಿದಂತೆ 1983ರಲ್ಲಿ ಗೆದ್ದಿದ್ದ ಬಿಜೆಪಿ ಶಾಸಕರೆಲ್ಲ 1985ರ ಚುನಾವಣೆಯಲ್ಲಿ ಹೆಸರಿಲ್ಲದಂತಾಗಿಬಿಟ್ಟಿದ್ದರು. ಆಗ ಬೆಳ್ತಂಗಡಿಯಲ್ಲಿ ವಸಂತ ಬಂಗೇರ ಗೆದ್ದದ್ದು ಬಿಟ್ಟರೆ ಆ ಚುನಾವಣೆಯಲ್ಲಿ ಬಿಜೆಪಿಯ ಮರ್ಯಾದೆ ಉಳಿಸಿದ್ದ ಮತ್ತೊಬ್ಬರು ಬಿ.ಎಸ್. ಯಡಿಯೂರಪ್ಪ. ಮುಂದೆ ರಾಮ ಭಟ್ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆದದ್ದೂ ಸೇರಿದಂತೆ ಬಿಜೆಪಿಯೊಳಗೆ ಹಲವಾರು ಬದಲಾವಣೆಗಳಾಗುತ್ತವೆ. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆಗೆ ಬಿಜೆಪಿ ಕೊಚ್ಚಿಹೋಗುತ್ತದೆ. ಆದರೆ ಆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಗೆಲ್ಲುವುದರೊಂದಿಗೆ ಈಶ್ವರಪ್ಪ ಬಿಜೆಪಿಯ ಮತ್ತೊಬ್ಬ ಪ್ರಮುಖ ನಾಯಕನಾಗಿ ಹೊರಹೊಮ್ಮುತ್ತಾರೆ. 1991ರ ಹೊತ್ತಿಗೆ ದೊಡ್ಡ ಬದಲಾವಣೆಯಾಗುತ್ತದೆ. ಬಿಜೆಪಿ ತಮ್ಮ ಹಿತಾಸಕ್ತಿಯನ್ನು ಕಾಯಬಲ್ಲ ಪಕ್ಷ ಎಂಬ ಭಾವನೆ ದೊಡ್ಡ ಹಿಂದೂ ಮಠಗಳಲ್ಲಿ ಬಲವಾಗಿಯೇ ಮೂಡುತ್ತದೆ. ಮುಂದೆ ಮಠಗಳೊಂದಿಗಿನ ರಾಜಕೀಯ ಬೆಸುಗೆಯಲ್ಲಿ ಯಡಿಯೂರಪ್ಪ ಮಹತ್ವದ ಪಾತ್ರ ನಿರ್ವಹಿಸಿದವರೆಂಬುದು ಎಲ್ಲರಿಗೂ ಗೊತ್ತೇ ಇದೆ.
1991ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ನಾಲ್ಕು ಬಿಜೆಪಿ ಸಂಸದರು ಮೊದಲ ಬಾರಿಗೆ ಆಯ್ಕೆಯಾಗುವುದರೊಂದಿಗೆ, ಅದೇ ಮೊದಲ ಸಲ ಕರ್ನಾಟಕದ 28 ಸೀಟುಗಳಲ್ಲಿ ಕಾಂಗ್ರೆಸ್ 25ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯುವಂತಾಗಿತ್ತು. 1991ರಲ್ಲಿ ಬಿಜೆಪಿ ಹಿಂದುತ್ವದ ಅಲೆಯ ಲಾಭ ಪಡೆಯಲು ಹೊರಗಿನವರನ್ನು ಅವಲಂಬಿಸಬೇಕಾಯಿತು. ಬೆಂಗಳೂರು ದಕ್ಷಿಣದಿಂದ ಗುಂಡೂರಾವ್ ವಿರುದ್ಧ ವೆಂಕಟಗಿರಿ ಗೌಡ ಅವರನ್ನು ಕಣಕ್ಕಿಳಿಸಲಾಯಿತು, ಮತ್ತವರು ಸಂಪೂರ್ಣವಾಗಿ ಹಿಂದುತ್ವದ ಅಲೆಯ ಮೇಲೆ ಗೆದ್ದರು. ಇದೇ ವೇಳೆ ಹೊರಗಿನವರಲ್ಲಿ ಮತ್ತೊಬ್ಬ ಪ್ರಮುಖರಾಗಿದ್ದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಚುನಾವಣೆಯಲ್ಲಿ ಸೋತರಾದರೂ, ಪಕ್ಷಕ್ಕೆ ಅವರು ವಿದ್ಯಾವಂತ ಗಣ್ಯರ ವಲಯದ ಪ್ರಮುಖರಾಗಿ ಅಗತ್ಯವಾಗಿದ್ದರು. ಇಷ್ಟೆಲ್ಲದರ ಹೊರತಾಗಿಯೂ ಬಿಜೆಪಿ ದಕ್ಷಿಣದ ಹೆಚ್ಚಿನ ಜಿಲ್ಲೆಗಳಲ್ಲಿ ಪ್ರಬಲವಾಗಿತ್ತೇ ಹೊರತು ಉತ್ತರ ಕರ್ನಾಟಕದಲ್ಲಿ ನೆಲೆ ಹೊಂದಿರಲಿಲ್ಲ.
1994ರ ಹೊತ್ತಿಗೆ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯಂತಹ ನಗರ ಪ್ರದೇಶಗಳಲ್ಲಿ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಬಿಜೆಪಿಯ ನೆಲೆ ಭದ್ರವಾಗಿತ್ತು. ವಿಶೇಷವಾಗಿ ಹುಬ್ಬಳ್ಳಿ-ಧಾರವಾಡದಲ್ಲಿ ಈದ್ಗಾ ಮೈದಾನ ವಿವಾದದಿಂದ ಬಿಜೆಪಿಗೆ ಲಾಭವಾಯಿತು. ಯಡಿಯೂರಪ್ಪನವರು ವಿಶೇಷವಾಗಿ ಕೊಡಗು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮತ್ತು ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಪಕ್ಷವನ್ನು ಕಟ್ಟಿದ್ದುದರ ಲಾಭ ಬಿಜೆಪಿಗೆ ಆಗಿತ್ತು. ಬೆಂಗಳೂರು ಜಿಲ್ಲೆಯಲ್ಲಿನ ಬಿಜೆಪಿ ಪ್ರಾಬಲ್ಯ ಕೂಡ ಯಡಿಯೂರಪ್ಪನವರ ಶ್ರಮದ ಫಲವೇ ಆಗಿದೆ. ಆದರೆ ಈ ನಡುವೆಯೇ ಇನ್ನೂ ಎರಡು ಬದಲಾವಣೆಗಳು ಅಷ್ಟೊಂದು ಸದ್ದಿಲ್ಲದೆ ನಡೆದಿರುತ್ತವೆ. ಒಂದು, ಬಿ.ಬಿ. ಶಿವಪ್ಪ ನಾಯಕತ್ವದಲ್ಲಿ ಹಾಸನದಲ್ಲಿ ಕಾಂಗ್ರೆಸ್ ಮತ್ತು ಜೆಡಿಯು ಎರಡಕ್ಕೂ ಪರ್ಯಾಯವಾಗಿ ಬಿಜೆಪಿ ಬೆಳೆಯುತ್ತದೆ. ಎರಡನೆಯದಾಗಿ, ಮುಂದೆ ಬಿಜೆಪಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಮಟ್ಟಕ್ಕೆ ಬೆಳೆದ ಮತ್ತು ಇವತ್ತು ಪಕ್ಷದಲ್ಲಿ ಭಿನ್ನಮತೀಯರ ನಾಯಕನಾಗಿ ಕಾಣಿಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಬಿಜಾಪುರ ನಗರದಿಂದ ಬಿಜೆಪಿಯಿಂದ ಗೆದ್ದಿರುತ್ತಾರೆ.
1996ರ ಲೋಕಸಭಾ ಚುನಾವಣೆ ಹೊತ್ತಿಗೆ ತನ್ನ ನೆಲೆಯನ್ನು ಇನ್ನಷ್ಟು ಭದ್ರಪಡಿಸಿಕೊಂಡ ಬಿಜೆಪಿ, 1998ರ ಹೊತ್ತಿಗೆ ಇನ್ನಷ್ಟು ಪ್ರಬಲವಾಯಿತು. ಧಾರವಾಡ, ಬೆಳಗಾವಿ, ಗುಲ್ಬರ್ಗ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ನಾಯಕರು ಬಿಜೆಪಿಯನ್ನು ಸೇರಿದರು. ಆದರೆ 1998ರಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಿನ್ನೆಲೆಯಿಂದ ಬಂದಿರುವ ಬಾಬಾಗೌಡ ಪಾಟೀಲ್ ಬಿಜೆಪಿಗೆ ಬಂದಿದ್ದು ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಪರಿವರ್ತಿಸಿತು. ಬಾಂಬೆ-ಕರ್ನಾಟಕ ಪ್ರದೇಶದ ರೈತ ಸಂಘಗಳ ಮೇಲೆ ಹಿಡಿತ ಸಾಧಿಸುವಷ್ಟು ಬೆಳೆಯಿತು. ಈ ಪ್ರದೇಶದ ಸಕ್ಕರೆ ಉದ್ಯಮಿಗಳಿಗೆ ಪಕ್ಷದ ಬಾಗಿಲು ತೆರೆಯಿತು. ಇದು ಬಿಜೆಪಿಯನ್ನು ರೈತರ ಹಿತಾಸಕ್ತಿಗಳ ಪರವಾಗಿರುವ ಪಕ್ಷವಾಗಿ ಕಾಣುವಂತೆ ಮಾಡಿತು. ಸಕ್ಕರೆ ಉದ್ಯಮಿಗಳ ಬಲದಿಂದಾಗಿ ಈ ಪ್ರದೇಶದಲ್ಲಿ ಬಿಜೆಪಿ ಶಾಶ್ವತ ನೆಲೆ ಪಡೆಯಿತು. ಬೆಳಗಾವಿ, ಬಿಜಾಪುರ, ಬಾಗಲಕೋಟೆ ಭಾಗದಲ್ಲಿ ಬಿಜೆಪಿ ಪ್ರಬಲವಾಗಿರುವುದರ ಹಿನ್ನೆಲೆ ಇದು.
1998ರ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಡಬಲ್ ಮಾಡಿಕೊಂಡಿದ್ದರೂ, ಹಲವು ಜಿಲ್ಲೆಗಳಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಟ್ಟಿಕೊಳ್ಳುವಲ್ಲಿ ವಿಫಲವಾಗಿತ್ತು. ಅದರ ನಂತರದ ವರ್ಷವಂತೂ ಬಿಜೆಪಿ ಪಾಲಿಗೆ ದುರ್ದೆಸೆಯದ್ದಾಗಿತ್ತು.
ಯಡಿಯೂರಪ್ಪ, ಈಶ್ವರಪ್ಪರಂಥ ದಿಗ್ಗಜರು ಕಂಡೂ ಕಾಣದ ಎದುರಾಳಿಗಳಿಂದ ಹೀನಾಯವಾಗಿ ಸೋತಿದ್ದರು. ಇದೆಲ್ಲದರ ನಡುವೆಯೂ ಇಬ್ಬರು ವ್ಯಕ್ತಿಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡರು. ಅವರೇ ಬಿ.ಬಿ. ಶಿವಪ್ಪ ಮತ್ತು ಬಸನಗೌಡ ಪಾಟೀಲ್. ಆದರೆ, ಹಾಸನದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಬಿ.ಬಿ. ಶಿವಪ್ಪ, ಪಕ್ಷಾಧ್ಯಕ್ಷ ಸ್ಥಾನದ ವಿಚಾರವಾಗಿ ಯಡಿಯೂರಪ್ಪ ಅವರೊಂದಿಗೆ ಸಂಘರ್ಷಕ್ಕಿಳಿದು ಉಚ್ಚಾಟನೆಗೊಂಡರು. ಅದರೊಂದಿಗೆ ಹಾಸನದಲ್ಲಿ ಬಿಜೆಪಿಯೂ ಬಿದ್ದುಹೋಯಿತು.
ಬಿಜೆಪಿ ಪಶ್ಚಿಮ ಕರ್ನಾಟಕವನ್ನೆಲ್ಲ ಸ್ವೀಪ್ ಮಾಡಿ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸದ್ದು ಮಾಡಲು ಸಾಧ್ಯವಾದದ್ದು 2004ರಲ್ಲಿ. ಇದರ ಹಿಂದೆ ಯಡಿಯೂರಪ್ಪನವರ ವೈಯಕ್ತಿಕ ವರ್ಚಸ್ಸು ಮತ್ತು ರೆಡ್ಡಿಗಳ ಹಣ ಬಲವಿತ್ತು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು, ರಾಜ್ಯ ಬಿಜೆಪಿಯಲ್ಲಿ ಮೊದಲ ಮುಖ್ಯಮಂತ್ರಿಯಾದವರು ಯಡಿಯೂರಪ್ಪ. ಆದರೆ ಉಳಿದ ಯಾವುದೇ ನಾಯಕರು ಬೆಳೆಯದಂತೆ ದಮನಿಸುತ್ತಿದ್ದಾರೆ ಎಂಬ ಆರೋಪವೂ ಯಡಿಯೂರಪ್ಪ ಮೇಲೆ ಬಂತು. ತಾನು ಅಧಿಕಾರದಿಂದ ಇಳಿಯಬೇಕಾದ ಹೊತ್ತಲ್ಲೂ ತನಗೆ ಆಪ್ತರಾಗಿದ್ದವರನ್ನೇ ಆ ಹುದ್ದೆಯಲ್ಲಿ ಕೂರಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಒಟ್ಟು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾರೆ ಬಿ.ಎಸ್. ಯಡಿಯೂರಪ್ಪ. ಈ ಪೈಕಿ ಎರಡು ಬಾರಿ ಕೆಲವೇ ದಿನಗಳ ಕಾಲ ಮಾತ್ರ ಅವರು ಅಧಿಕಾರದಲ್ಲಿದ್ದರು. ಪಕ್ಷಾಧ್ಯಕ್ಷರಾಗಿಯೂ ಮೂರು ಬಾರಿ ಯಡಿಯೂರಪ್ಪ ಅಧಿಕಾರ ಅನುಭವಿಸಿದ್ದಾರೆ. ಈಗ ಅವರ ಪುತ್ರ ವಿಜಯೇಂದ್ರ ಆ ಹುದ್ದೆಯಲ್ಲಿದ್ದಾರೆ.
ಯಡಿಯೂರಪ್ಪನವರಂತೆ ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಿದ ಮತ್ತೊಬ್ಬ ನಾಯಕ ಅನಂತ ಕುಮಾರ್. ಬಿಜೆಪಿಯ ರಾಜ್ಯಾಧ್ಯಕ್ಷರಾಗಿಯೂ ಅವರು ದುಡಿದಿದ್ದರೂ, ಅವರ ಹೆಸರೇನಿದ್ದರೂ ರಾಷ್ಟ್ರ ರಾಜಕಾರಣದಲ್ಲಿ ಎನ್ನುವುದು ನಿಜ.
ಯಡಿಯೂರಪ್ಪನವರನ್ನು ತೃಪ್ತಿಪಡಿಸುವುದಕ್ಕಾಗಿಯೇ ಬಸನಗೌಡ ಪಾಟೀಲ್ ಅವರನ್ನು ಹೊರಹಾಕಲಾಯಿತು.
ಅವರ ಅನುಪಸ್ಥಿತಿ ಬಾಂಬೆ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿಯನ್ನು ತೀವ್ರವಾಗಿ ಕಾಡಿತು. ಆಮೇಲೆ ಅವರು ಪಕ್ಷಕ್ಕೆ ಮರಳಿದರೆನ್ನುವುದು ಬೇರೆ. ಕಡೆಗೆ ಯಡಿಯೂರಪ್ಪನವರೇ ಪಕ್ಷ ಬಿಟ್ಟು ಹೋಗಿ ಮತ್ತೆ ಬಂದದ್ದೂ ನಡೆಯಿತು. ಆಮೇಲೆ ಆಪರೇಷನ್ ಕಮಲ ಎಂಬ ಕಳಂಕವನ್ನೂ ಪಕ್ಷಕ್ಕೆ ಅಂಟಿಸಿದರು.
ರಾಜ್ಯದಲ್ಲಿ ಬಿಜೆಪಿ ಯಡಿಯೂರಪ್ಪ ಕುಟುಂಬದ್ದೇ ಹಿಡಿತದಲ್ಲಿದೆ ಎನ್ನುವುದೇ ಅದು ಇವತ್ತು ಹೊತ್ತಿರುವ ಹೊರೆಯೂ ಆಗಿದೆ. ವಿರೋಧಿಗಳ ದೊಡ್ಡ ಪಡೆಯೇ ಕತ್ತಿ ಮಸೆಯುವುದಕ್ಕೂ ಕಾರಣವಾಗಿದೆ. ಈ ಹಿಂದೆ ಯಡಿಯೂರಪ್ಪನವರು ಅನಂತ ಕುಮಾರ್ ಅವರನ್ನೆಂದೂ ರಾಜ್ಯ ಬಿಜೆಪಿಯಲ್ಲಿ ನೋಡಿ ಸಹಿಸಿದವರಾಗಿರಲಿಲ್ಲ. ಯಡಿಯೂರಪ್ಪನವರ ಕಾರಣದಿಂದಾಗಿಯೇ ಬಿ.ಬಿ. ಶಿವಪ್ಪರಂತಹ ಪಕ್ಷ ಕಟ್ಟಿ ಬೆಳೆಸಿದ ನಾಯಕರು ಹೊರಹೋಗಬೇಕಾಗಿ ಬಂದಿತ್ತು. ಯಡಿಯೂರಪ್ಪನವರ ಕಾರಣಕ್ಕಾಗಿಯೇ ಯತ್ನಾಳ್ ಅವರನ್ನೂ ಹೊರಹಾಕಲಾಗಿತ್ತು. ಈಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧವೂ ಯತ್ನಾಳ್ ಸಮರ ಮುಂದುವರಿದಿದೆ.
ಯತ್ನಾಳ್ ಅವರನ್ನು ಹರಕು ಬಾಯಿಯ ನಾಯಕ ಎಂದು ಆರೋಪಿಸುವವರು ಯತ್ನಾಳ್ ಮಾಡುತ್ತಿರುವ ಆರೋಪಗಳನ್ನು ಸುಳ್ಳು ಎಂದು ಸಾಬೀತು ಮಾಡುವುದಕ್ಕೇನೂ ಹೋಗಿಲ್ಲ. ಭ್ರಷ್ಟರನ್ನು ಕಿತ್ತೊಗೆದರಷ್ಟೇ ಮೋದಿ ಮಾತಿಗೆ ಗೌರವ ಕೊಡುತ್ತೇನೆ ಎನ್ನುವಲ್ಲಿಯವರೆಗೂ ಯತ್ನಾಳ್ ಮಾತನಾಡುತ್ತಿರುವುದರ ಹಿನ್ನೆಲೆ ಏನು? ಅವರ ಹಿಂದೆ ಇರುವವರು ಯಾರು? ವಕ್ಫ್ ವಿರುದ್ಧದ ವಿಜಯಪುರ ಧರಣಿಗೆ ಶೋಭಾ ಕರಂದ್ಲಾಜೆಯವರನ್ನು ಕಳಿಸಿಕೊಟ್ಟಿದ್ದವರು ಯಾರು? ಇವೆಲ್ಲ ಪ್ರಶ್ನೆಗಳು ಅನೇಕ ಸತ್ಯಗಳನ್ನು ಅಡಗಿಸಿಕೊಂಡಿರುವ ಹಾಗೆಯೂ ಕಾಣಿಸುತ್ತದೆ.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವರ್ಷ ಪೂರೈಸಿದ್ದೇನೋ ಆಗಿದೆ. ಆದರೆ ಅವರು ಹುದ್ದೆಗೆ ಏರಿದಾಗಿನಿಂದಲೂ ಶುರುವಾದ ಅಸಮಾಧಾನದ ಬೆಂಕಿ ಮಾತ್ರ ಆರಿಲ್ಲ. ರಾಜ್ಯ ಬಿಜೆಪಿಯ ಅಧ್ಯಕ್ಷ ಪಟ್ಟವನ್ನು ಯಾರಿಗೆ ಕೊಡುವುದು ಎಂದು ಅಳೆದೂ ತೂಗಿ ಕಡೆಗೆ ಯಡಿಯೂರಪ್ಪ ಅವರಿಗೇ ಮಣಿದು ಅವರ ಪುತ್ರನಿಗೆ ಪಟ್ಟ ಕಟ್ಟಲಾಗಿತ್ತು. ರಾಜ್ಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ದಿಲ್ಲಿ ನಾಯಕರು ಯಡಿಯೂರಪ್ಪ ಬಣಕ್ಕೇ ಪ್ರಾಧಾನ್ಯತೆ ನೀಡಿದ್ದರು. ಆದರೆ ಇದನ್ನು ವಿರೋಧಿ ಬಣ ಒಪ್ಪಲು ಸಿದ್ಧವಿಲ್ಲ. ವಿಜಯೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ವಿರೋಧಿ ಬಣದ್ದಾಗಿದೆ. ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಅದು ಏಕ ವ್ಯಕ್ತಿ ತೀರ್ಮಾನವಾಗುತ್ತಿದೆ. ಪಕ್ಷದ ಹಿರಿಯ ನಾಯಕರನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪವೇ ವರ್ಷದಿಂದಲೂ ಕೇಳಿಬರುತ್ತಿದೆ.
ಇದೊಂದು ಸಂಗತಿಯಾದರೆ, ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಕ್ಕೇ ಯತ್ನಾಳ್, ರಮೇಶ್ ಜಾರಕಿಹೊಳಿ ಮೊದಲಾದವರು ತಯಾರಿಲ್ಲ ಎಂಬುದು ಇನ್ನೊಂದು ಸತ್ಯ. ಈ ಹಿನ್ನೆಲೆಯಲ್ಲಿ ಯತ್ನಾಳ್ ತಂಡ ಭಿನ್ನ ಹಾದಿಯನ್ನು ಹಿಡಿದಿದೆ. ಇದಕ್ಕೆ ಹೈಕಮಾಂಡ್ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜ್ಯ ಬಿಜೆಪಿಯ ಕೆಲವು ನಾಯಕರ ಬೆಂಬಲವೂ ಇದೆ ಎಂಬ ಮಾತು ಕಮಲ ಪಾಳಯದಲ್ಲಿಯೇ ಕೇಳಿಬರುತ್ತಿದೆ. ವರಿಷ್ಠರ ವಲಯದ ಪರೋಕ್ಷ ಬೆಂಬಲವೇ ಯತ್ನಾಳ್ ತಂಡವನ್ನು ಬಲಗೊಳಿಸಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ವಿರುದ್ಧ ನಿರಂತರವಾಗಿ ಹರಿಹಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲವೂ ಸೇರಿ, ಆ ಬಣದ ಮೇಲೆ ಈ ಬಣ, ಈ ಬಣದ ಮೇಲೆ ಆ ಬಣ ಬಹಿರಂಗವಾಗಿಯೇ ಮುಗಿಬೀಳುತ್ತಿವೆ. ಭಿನ್ನಮತ ಬಿರುಸುಗೊಂಡಿದೆ.
ಇದಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ಮುಂದಾಗುತ್ತದೆಯೇ? ರಾಜ್ಯ ಬಿಜೆಪಿಯ ನಾಯಕತ್ವ ಬದಲಾವಣೆಯನ್ನೇ ಪರಿಹಾರವೆಂದು ನಿರ್ಧರಿಸಲಾಗುವುದೆ? ಸದ್ಯಕ್ಕೆ ಕುತೂಹಲ ಕೆರಳಿಸಿರುವ ಪ್ರಶ್ನೆಗಳಿವು.
ರಾಜ್ಯದಲ್ಲಿನ ಬಿಜೆಪಿಯ ಚುನಾವಣಾ ರಾಜಕಾರಣದ ಏಳುಬೀಳುಗಳು
ವಿಧಾನಸಭೆಯಲ್ಲಿ:
1983 224ರಲ್ಲಿ 18 ಸೀಟುಗಳು ಜನತಾ ಪಕ್ಷ ಸರಕಾರಕ್ಕೆ ಬಾಹ್ಯ ಬೆಂಬಲ
1985 2 ಸೀಟುಗಳು
1989 4 ಸೀಟುಗಳು
1994 40 ಸೀಟುಗಳು
1999 44 ಸೀಟುಗಳು
2004 79 ಸೀಟುಗಳು ವಿಪಕ್ಷ ಮತ್ತು ನಂತರ ಸರಕಾರ ರಚನೆ
2008 110 ಸೀಟುಗಳು ಸರಕಾರ
2013 40 ಸೀಟುಗಳು ವಿಪಕ್ಷ ಸ್ಥಾನ
2018 104 ಸೀಟುಗಳು - ವಿಪಕ್ಷ ಮತ್ತು ನಂತರ ಸರಕಾರ ರಚನೆ
2023 66 ಸೀಟುಗಳು ವಿಪಕ್ಷ ಸ್ಥಾನ
ಲೋಕಸಭೆಯಲ್ಲಿ:
1991 28ರಲ್ಲಿ 4 ಸೀಟುಗಳು
1996 6 ಸೀಟುಗಳು
1998 13 ಸೀಟುಗಳು
1999 7 ಸೀಟುಗಳು
2004 18 ಸೀಟುಗಳು
2009 19 ಸೀಟುಗಳು
2014 17 ಸೀಟುಗಳು
2019 25 ಸೀಟುಗಳು
2024 17 ಸೀಟುಗಳು