‘ರಂಗ ದಸರಾ’: ಬಿ.ವಿ.ಕಾರಂತ ಕಾಲೇಜು ರಂಗೋತ್ಸವ
ದಸರಾ ಎಂದರೆ ಸಂಭ್ರಮ, ಸಮೃದ್ಧಿ. ಇದು ರಂಗಭೂಮಿಗೂ ಅನ್ವಯಿಸುತ್ತದೆ. ಕಾರಂತ ಕಾಲೇಜು ರಂಗೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನಿಜವಾದ ದಸರಾ ಎಂದರೆ ಇದೇ.
‘‘ನಾಟಕ ಮಾಡಿ ನಾಚಿಕೆ ಬಿಟ್ಟೆ’’ ವಿದ್ಯಾರ್ಥಿ ಹೇಳಿದ್ದಕ್ಕೆ ಬೆಚ್ಚಿದೆ.
‘‘ನಾಚಿಕೆ ಬಿಟ್ರೊ? ಸಂಕೋಚ ಬಿಟ್ರೊ?’’ ಕೇಳಿದೆ. ಉತ್ತರಿಸಲಿಲ್ಲ ವಿದ್ಯಾರ್ಥಿ.
‘‘ನಾಚಿಕೆ ಬೇರೆ, ಸಂಕೋಚ ಬೇರೆ’’ ಎಂದೆ. ಮಾತನಾಡಲಿಲ್ಲ ಅವರು.
-ಇದು ಮೈಸೂರಿನ ರಂಗಾಯಣದಲ್ಲಿ ಈ ವರ್ಷದ ಬಿ.ವಿ.ಕಾರಂತ ಕಾಲೇಜು ರಂಗೋತ್ಸವದಲ್ಲಿ ನಾಟಕವಾಡಿದವರನ್ನು ಮಾತನಾಡಿಸಿದಾಗ ಒಂದಿಬ್ಬರು ಹುಡುಗರು ಹೇಳಿದ ಅಭಿಪ್ರಾಯ. ನಾಚಿಕೆ, ಸಂಕೋಚ ಶಬ್ದದ ವ್ಯತ್ಯಾಸ ತಿಳಿಯದಿದ್ದರೂ ಅವರು ನಾಟಕವಾಡಿದ್ದು ಖುಷಿಯ ಸಂಗತಿ.
‘‘ಅವಸರವಾಗಿ ಮಾತನಾಡುವುದನ್ನು ಕಮ್ಮಿ ಮಾಡಿದೆ’’ ಎಂದ ವಿಖ್ಯಾತ್, ‘‘ಜನರೊಂದಿಗೆ ಬೆರೆತಿರಲಿಲ್ಲ, ಈಗ ಬಾಂಡಿಂಗ್, ಬಾಂಧವ್ಯ ಸಿಕ್ತು’’ ಎನ್ನುವ ಕೆ.ಆರ್.ಪ್ರಜ್ವಲ್, ‘‘ಜನರ ಹತ್ರ ಮಾತಾಡಲು ಧೈರ್ಯ ಬಂತು’’ ಎನ್ನುವ ಭರವಸೆ ಹೊತ್ತ ಕುಶಾಲನಗರದ ಯೋಗೇಶ್ವರಿ. ‘‘ರಂಗಭೂಮಿಯಲ್ಲದೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಸಲುವಾಗಿ ಶಿರಸಿಯಿಂದ ಮೈಸೂರಿಗೆ ಬಂದೆ, ಆತ್ಮವಿಶ್ವಾಸ ಸಿಕ್ಕಿದೆ’’ ಎಂದ ಅರ್ಚನಾ ಹೆಗಡೆ. ಇವರೆಲ್ಲ ಮಹಾಜನ ಕಾಲೇಜಿನ ವಿದ್ಯಾರ್ಥಿಗಳು. ಇವರೆಲ್ಲ ‘ತುಘಲಕ್’ ನಾಟಕವಾಡಿದ ಖುಷಿಯಲ್ಲಿದ್ದರು.
ಹೀಗೆಯೇ ‘ಹುಲಿಯ ನೆರಳು’ ನಾಟಕವಾಡಿದ ಹುಣಸೂರಿನ ವಿದ್ಯಾಶ್ರೀ ಅವರ ತಂದೆ ಸಿದ್ದರಾಜು, ತಾಯಿ ಸೌಮ್ಯಾ ಅಲ್ಲದೆ ಅವರ ಅಜ್ಜ, ಅಜ್ಜಿ ಕೂಡಾ ಬಂದಿದ್ದರು. ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯ ಅವರು ಮೊದಲ ಬಾರಿ ರಂಗಾಯಣಕ್ಕೆ ಬಂದು ನಾಟಕ ನೋಡಿ ಖುಷಿಪಟ್ಟು ‘‘ಅವಕಾಶ ಸಿಕ್ರೆ ಕಳಸ್ತೀವಿ’’ ಎಂದರು. ಇವರ ಹಾಗೆ ಮೊದಲ ಬಾರಿಗೆ ನಾಟಕ ನೋಡಿದವರು, ರಂಗಾಯಣ ನೋಡಿದವರು ಇದ್ದರು. ಇವರಿಗಿಂತ ಮೊದಲು ‘ಪರಿಜು’ ನಾಟಕವಾಡಿದ ಮೈಸೂರಿನ ಅಮೃತ ವಿಶ್ವವಿದ್ಯಾಪೀಠಂನ ವಿದ್ಯಾರ್ಥಿನಿ ಪ್ರಣತಿ ‘‘ನಾಟಕದಿಂದ ಎಮೋಷನಲ್ ಕಂಟ್ರೋಲ್ ಮಾಡಿಕೊಳ್ಳುವುದು ಕಲಿತೆ’’ ಎಂದರೆ, ಅವರೊಂದಿಗಿದ್ದ ಕ್ಷಮಾ ಅವರು ‘‘ಪರಿಸ್ಥಿತಿ ನಿಭಾಯಿಸುವುದನ್ನು ಕಲಿತೆ’’ ಎಂದರು.
ಡಾ.ಮಾಧುಪ್ರಸಾದ್ ಅವರ ‘ಕೂಳಿನ ಕಾಳಗ’ ನಾಟಕವಾಡಿದ ಹುಣಸೂರಿನ ವಿದ್ಯಾರ್ಥಿಗಳು ಗಮನಸೆಳೆದರು. ಮಾಧುಪ್ರಸಾದ್ ಅವರ ಕಥೆಯನ್ನು ಆಧರಿಸಿದ ಇದು ಕೂಳಿಗಾಗಿ ಕಾಳಗ ನಡೆಸುವವರ ಕಥನ. ಆಡುಭಾಷೆ, ಸಹಜ ಅಭಿನಯದಿಂದ ನಾಟಕ ಯಶಸ್ವಿಯಾಯಿತು. ಇದಕ್ಕೆ ಮುಖ್ಯ ಕಾರಣ; ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತ ಈ ನಾಟಕವನ್ನು ವಿದ್ಯಾರ್ಥಿಗಳು ಅನುಭವಿಸಿದಂತೆ ಅಭಿನಯಿಸಿದರು. ಅದರಲ್ಲೂ ರಾಚನ ಪಾತ್ರದಲ್ಲಿ ಮೊದಲ ವರ್ಷದ ಪಿಯು ವಿದ್ಯಾರ್ಥಿ ಪೂರ್ಣಚಂದ್ರ ಗಮನಸೆಳೆದರು. ಆದರೆ ತುಘಲಕ್, ಹುಲಿಯ ನೆರಳು ನಾಟಕಗಳ ಸಂಭಾಷಣೆಯನ್ನು ಉರು ಹೊಡೆದು ಒಪ್ಪಿಸುವುದಕ್ಕಷ್ಟೇ ವಿದ್ಯಾರ್ಥಿಗಳು ಸೀಮಿತರಾದರು, ಅಂದರೆ ಅವರು ನಾಟಕ ಹೊರಡಿಸುವ ಧ್ವನಿಯನ್ನು ಹಿಡಿದಿಡಲಿಲ್ಲ. ಎತ್ತರಿಸಿ ಮಾತನಾಡುವುದೇ ಅಭಿನಯ ಎಂದುಕೊಂಡಿದ್ದ ಅನೇಕ ವಿದ್ಯಾರ್ಥಿಗಳು, ಜೋರಾಗಿ ಸಂಭಾಷಣೆ ಹೇಳುತ್ತಿದ್ದರು. ಮುಖ್ಯವಾಗಿ ಪ್ರಸಿದ್ಧರ ಈಗಾಗಲೇ ನೂರಾರು ತಂಡಗಳು ಅಭಿನಯಿಸಿದ ನಾಟಕವನ್ನೇ ಆಯ್ದುಕೊಳ್ಳುವುದೇಕೆ? ಪ್ರಸಿದ್ಧರ ನಾಟಕ ಎನ್ನುವ ರಿಯಾಯಿತಿ ಸಿಗುತ್ತದೆ ಮತ್ತು ಸೇಫ್ ಎನ್ನುವ ಕಾರಣಕ್ಕೋ? ತಾವು ಎಂದೋ ನೋಡಿದ, ಮಾಡಿದ ನಾಟಕವನ್ನು ಸುಲಭವಾಗಿ ಕಟ್ಟಬಹುದಲ್ಲ ಎನ್ನುವ ಲೆಕ್ಕಾಚಾರ ಇದ್ದೀತು. ಆದರೆ ಅಭಿನಯಿಸುವ ವಿದ್ಯಾರ್ಥಿಗಳು ಉರು ಹೊಡೆದು ಸಂಭಾಷಣೆ ಒಪ್ಪಿಸುತ್ತಾರೆ ಹೊರತು, ಪಾತ್ರದಲ್ಲಿ ಲೀನರಾಗಲು ಸಾಧ್ಯವಾಗುವುದಿಲ್ಲ. ಚಂದ್ರಶೇಖರ ಕಂಬಾರ ಅವರ ‘ಹುಲಿಯ ನೆರಳು’ ಉತ್ತರ ಕರ್ನಾಟಕದ ಭಾಷೆಯಲ್ಲಿದೆ. ಇದನ್ನು ಹುಣಸೂರು ವಿದ್ಯಾರ್ಥಿಗಳು ಹಿಡಿದಿಡಲು ಕಷ್ಟಸಾಧ್ಯ. ಇದಕ್ಕಾಗಿ ಅವರಾಡುವ ಭಾಷೆ, ಪರಿಸರದ ಕಥೆ, ಕಾದಂಬರಿಗಳನ್ನು ಆಯ್ದುಕೊಂಡು ನಾಟಕ ಕಟ್ಟಿದರೆ ಯಶಸ್ವಿಯಾಗಲು ಸಾಧ್ಯ.
‘ತುಘಲಕ್’ ನಾಟಕದಲ್ಲಿ ಪಾತ್ರ ನಿರ್ವಹಿಸಿದ ಮಹಾಜನ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಅವರು ಹೊಸಪೇಟೆಯವರು. ಅವರ ತಂದೆ ಹುಲಗಪ್ಪ ಅವರು ಆಟೊ ಚಾಲಕರು. ಓದುವುದರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಮೈಸೂರಿಗೆ ಓದಲು ಬಂದಿರುವ ಅಕ್ಷತಾ ಅವರ ನಾಟಕವನ್ನು ನೋಡಲು ಅವರ ಹೆತ್ತವರೂ ಬಂದಿದ್ದರು. ಹೀಗೆಯೇ ನಟರಾಜ ಮಹಿಳಾ ಕಾಲೇಜಿನ ಸೋನು ಅಂಧ ವಿದ್ಯಾರ್ಥಿನಿ. ದ್ವಿತೀಯ ಬಿಎ ಓದುತ್ತಿರುವ ಅವರು ‘ರೂಪ ರೂಪಗಳನು ದಾಟಿ’ ನಾಟಕದಲ್ಲಿ ಅಭಿನಯಿಸಿದರು. ಹೀಗೆ ವಿದ್ಯಾರ್ಥಿಗಳ ನಾಟಕವನ್ನು ನೋಡಲು ಅವರ ಸಹಪಾಠಿಗಳು, ಗೆಳೆಯರು, ಹೆತ್ತವರು, ಪೋಷಕರು ಬರುತ್ತಾರೆ.
ಹೀಗೆ ಇದು ಶುರುವಾಗಿದ್ದು 2005ರಿಂದ. ಚಿದಂಬರ ರಾವ್ ಜಂಬೆ ಅವರು ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಬಿ.ವಿ.ಕಾರಂತ ಹೆಸರಲ್ಲಿ ಕಾಲೇಜು ರಂಗೋತ್ಸವ ಆರಂಭಿಸಿದರು. ಆರಂಭದಲ್ಲಿ ಮೈಸೂರು ನಗರದ ಕಾಲೇಜುಗಳ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುತ್ತಿದ್ದರು. ನಂತರ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಕಾಲೇಜುಗಳ ತಂಡಗಳು ಭಾಗವಹಿಸುತ್ತಿವೆ. ಆಗೆಲ್ಲ ಕಾಲೇಜು ವಿದ್ಯಾರ್ಥಿಗಳಿಗೆಂದೇ ಮಧ್ಯಾಹ್ನ ನಾಟಕ ಪ್ರದರ್ಶನವಿರುತ್ತಿತ್ತು, ಸಂಜೆ ಅವರ ಕಾಲೇಜಿನ ಸಿಬ್ಬಂದಿ, ಗೆಳೆಯರು, ಹೆತ್ತವರಿಗೆ ಇರುತ್ತಿತ್ತು. ಈಗ ಸಂಜೆ ಮಾತ್ರ ನಾಟಕವಿರುತ್ತದೆ.
ಆದರೆ ಈಗ ಡೀಮ್ಡ್ ವಿಶ್ವವಿದ್ಯಾನಿಲಯಗಳ ಹೆಚ್ಚಳ, ಸೆಮಿಸ್ಟರ್ ಪದ್ಧತಿಯಿಂದ ಹೆಚ್ಚಿನ ಕಾಲೇಜು ತಂಡಗಳು ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕೂ ಮುಂಚೆ ರಂಗಾಯಣದ ಹಿರಿಯ ಕಲಾವಿದರು ಕಾಲೇಜುಗಳಿಗೆ ತೆರಳಿ ಶಿಬಿರ ನಡೆಸಿ ನಾಟಕ ನಿರ್ದೇಶಿಸುತ್ತಿದ್ದರು. ಕೆಲವರ್ಷಗಳಿಂದ ರಂಗಾಯಣದ ಹಿರಿಯ ಕಲಾವಿದರು ನಿವೃತ್ತರಾದುದರಿಂದ ನೀನಾಸಂ, ರಂಗಾಯಣ, ಸಾಣೇಹಳ್ಳಿ ಮೊದಲಾದ ರಂಗಸಂಸ್ಥೆಗಳಿಂದ ತರಬೇತಿ ಹೊಂದಿದವರು ಈಚಿನ ವರ್ಷಗಳಲ್ಲಿ ಕಾಲೇಜು ರಂಗೋತ್ಸವಕ್ಕೆ ನಾಟಕಗಳನ್ನು ನಿರ್ದೇಶಿಸುತ್ತಿದ್ದಾರೆ.
ಇದರಿಂದ ಒಂದು ವರ್ಷಕ್ಕೆ 10-12 ಕಾಲೇಜು ತಂಡಗಳಿಂದ 200-300 ವಿದ್ಯಾರ್ಥಿಗಳು ರಂಗಭೂಮಿಯತ್ತ ಮುಖ ಮಾಡಲು ಸಾಧ್ಯವಾಗುತ್ತಿದೆ. ರಂಗಶಿಕ್ಷಣ ಪಡೆದಿರುವ ಪದವೀಧರರೂ ನಾಟಕ ನಿರ್ದೇಶಿಸಲು ಅವಕಾಶಗಳು ಸಿಗುತ್ತಿವೆ. ಕೇವಲ ಕಾಲೇಜುಗಳ ಪಠ್ಯಕ್ಕೆ ಅಂಟಿಕೊಳ್ಳದ ವಿದ್ಯಾರ್ಥಿಗಳು ನಾಟಕವಾಡುವ ನೆಪದಲ್ಲಿ ಶಿಬಿರಗಳಲ್ಲಿ ಭಾಗವಹಿಸಿ ರಂಗದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಆಮೇಲೆ ನಾಟಕಕ್ಕೆ ಅಣಿಯಾಗುತ್ತಾರೆ. ಇದರಿಂದ ಓದಲು ಸಾಧ್ಯವಾಗಲ್ಲ ಎಂದವರು ಯಾರೂ ಇಲ್ಲ ಬದಲಾಗಿ ಏಕಾಗ್ರತೆ ಹೆಚ್ಚಿದೆ, ಓದಲು ಹೆಚ್ಚು ಅನುಕೂಲವಾಗಿದೆ ಎಂದವರೇ ಹೆಚ್ಚು. ಹೀಗೆ ನಾಟಕವಾಡುವ ನೆಪದಲ್ಲಿ ಎಲ್ಲರೊಂದಿಗೆ ಬೆರೆಯುತ್ತಾರೆ, ಒಂದಿಬ್ಬರ ಜೊತೆಗೆ ಮಾತ್ರ ಬೆರೆಯುತ್ತಿದ್ದವರು ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ.
ಇದನ್ನೇ ಮೈಸೂರು ರಂಗಾಯಣದ ಉಪನಿರ್ದೇಶಕರಾದ ನಿರ್ಮಲಾ ಮಠಪತಿ ಅವರು ಹೇಳಿದ್ದು; ‘‘ರಂಗ ತರಬೇತಿ ಮೂಲಕ ರಂಗಭೂಮಿಯನ್ನು ಜೀವಂತವಾಗಿಡುವ ಕೆಲಸ ನಡೆಯುತ್ತಿದೆ. ನಟ, ನಾಟಕಕಾರ, ತಂತ್ರಜ್ಞರಾಗಿ ಹೊಸಬರ ಪ್ರವೇಶವಾಗುತ್ತಿದೆ. ರಂಗ ಚಟುವಟಿಕೆಗಳು ಮುಂದುವರಿದಂತೆ ಯುವಕರು ರಂಗಭೂಮಿಯತ್ತ ವಾಲುತ್ತಾರೆ, ಅವರ ವ್ಯಕ್ತಿತ್ವವನ್ನು ರಂಗಭೂಮಿ ರೂಪಿಸುತ್ತದೆ. ಸಂಕೀರ್ಣ ಹಾಗೂ ಸಮೂಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಸಮಾಜದಲ್ಲಿ ಹೇಗೆ ಬೆರೆತು ಬದುಕಬೇಕೆಂದು ಅರ್ಥ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಸಂಕುಚಿತ ಭಾವನೆ ಹೋಗಲಾಡಿ, ಎಲ್ಲರೊಡನೆ ಬೆರೆಯುತ್ತಾರೆ. ಪರೀಕ್ಷೆಗೆ ಮಾತ್ರ ಸಿದ್ಧಗೊಳ್ಳುವವರು ನಾಟಕದ ನೆಪದಲ್ಲಿ ಸಾಹಿತ್ಯ ಕೃತಿಗಳನ್ನು ಓದುತ್ತಾರೆ. ಇದರಿಂದ ಓದುವ ಹವ್ಯಾಸ ಹೆಚ್ಚುತ್ತದೆ. ಈಮೂಲಕ ರಂಗಭೂಮಿ ಶ್ರೀಮಂತವಾಗುತ್ತದೆ’’
‘‘ಕೋವಿಡ್ ಸಂದರ್ಭದಲ್ಲಿ ರಂಗೋತ್ಸವ ನಿಂತಿತ್ತು. ಇದಾದ ಮೇಲೆ ಸೆಮಿಸ್ಟರ್ ಪದ್ಧತಿ, ಪರೀಕ್ಷೆ, ಪ್ರವೇಶಾತಿ ನಡೆಯುತ್ತಿರುವುದರಿಂದ ಏಳು ಕಾಲೇಜುಗಳು ಮಾತ್ರ ಈ ಬಾರಿಯ ರಂಗೋತ್ಸವದಲ್ಲಿ ಪಾಲ್ಗೊಂಡಿವೆ. ಒಟ್ಟು 30 ಕಾಲೇಜುಗಳನ್ನು ಕೇಳಿದ್ದೆವು. ಆದರೆ ಬೇರೆ ಬೇರೆ ಕಾರಣಗಳಿಗೆ ಅವು ಭಾಗವಹಿಸಲಿಲ್ಲ. ಒಂದೂವರೆ ತಿಂಗಳ ಶಿಬಿರದಲ್ಲಿ ರಂಗದ ಹಿನ್ನೆಲೆಯ ಸೃಜನಶೀಲ ಚಟುವಟಿಕೆಗಳು ನಡೆಯುತ್ತವೆ. ಆಂಗಿಕ ಅಭಿನಯ, ಧ್ವನಿ ಸಂಸ್ಕೃತಿ, ಸಂಗೀತ, ಪರಿಕರ ಸಿದ್ಧತೆ, ಪ್ರಸಾಧನ ಕುರಿತು ಪರಿಣತರಿಂದ ಅರಿವು ಮೂಡಿಸಲಾಗುವುದು’’ ಎನ್ನುವ ಅವರ ಮಾತು ನಿಜವಾಗುತ್ತಿದೆ.
ಈ ಬಾರಿಯ ಕಾಲೇಜು ರಂಗೋತ್ಸವ ಅಕ್ಟೋಬರ್ 5ರಿಂದ 11ರ ವರೆಗೆ ನಡೆದಿದ್ದು, ಮತ್ತೆ ಇದೇ ನಾಟಕಗಳು ಅಕ್ಟೋಬರ್ 15ರಿಂದ 23ರ ವರೆಗೆ ಮೈಸೂರಿನ ರಂಗಾಯಣದಲ್ಲಿ ಆಯೋಜಿಸಿರುವ ನವರಾತ್ರಿ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತವೆ. ಈಮೂಲಕ ಮೊದಲ ಪ್ರದರ್ಶನಕ್ಕೆ ನಿಲ್ಲಬಾರದೆನ್ನುವ ಉದ್ದೇಶವೂ ಇದೆ, ಜೊತೆಗೆ ಮೊದಲ ಪ್ರದರ್ಶನದ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಎರಡನೇ ಪ್ರದರ್ಶನಕ್ಕೆ ಅಣಿಯಾಗುತ್ತಾರೆ. ಇದರೊಂದಿಗೆ ಹಿರಿಯ ಕಲಾವಿದರ ನಾಟಕಗಳನ್ನೂ ಅವರು ನೋಡಲು ಸಾಧ್ಯವಾಗುತ್ತದೆ.
ರಂಗಾಯಣದ ನಿವೃತ್ತ ಕಲಾವಿದರಾದ ನೂರ್ ಅಹ್ಮದ್ ಶೇಕ್ ಅವರು ‘ಕಿಂದರಿಜೋಗಿ’ ನಾಟಕ ನಿರ್ದೇಶಿಸಿದರೆ, ನೀನಾಸಂ ಹಾಗೂ ಮೈಸೂರು ರಂಗಾಯಣದ ಭಾರತೀಯ ರಂಗ ಶಿಕ್ಷಣ ಕೇಂದ್ರದಿಂದ ಹೊರಬಂದು ರಂಗಭೂಮಿಯಲ್ಲಿ ತೊಡಗಿಸಿಕೊಂಡ ಯುವ ನಿರ್ದೇಶಕರು ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಗಮನಾರ್ಹ ಸಂಗತಿಯೊಂದನ್ನು ಕಾಲೇಜು ರಂಗೋತ್ಸವದ ಸಂಚಾಲಕರಾದ ಅರಸೀಕೆರೆ ಯೋಗಾನಂದ ಅವರು ‘‘2007ರಲ್ಲಿ ಆರಂಭವಾದ ಧಾರವಾಡ ರಂಗಾಯಣದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶುರುವಾಯಿತು. ಇದಕ್ಕೆ ಪೂರಕವಾಗಿ ಮೈಸೂರು ರಂಗಾಯಣದಿಂದ ಸಿದ್ಧಗೊಂಡ ಕಾಲೇಜು ತಂಡಗಳು ಇಲ್ಲಿ ಪ್ರದರ್ಶನ ನೀಡಿದ ರಾತ್ರಿಯೇ ರೈಲು ಹತ್ತಿ ಮರುದಿನ ಧಾರವಾಡ ರಂಗಾಯಣದಲ್ಲಿ ನಾಟಕ ಪ್ರದರ್ಶಿಸಿದವು. ಹೀಗೆಯೇ ಧಾರವಾಡದಲ್ಲಿ ಸಿದ್ಧಗೊಂಡ ನಾಟಕಗಳನ್ನು ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿ ಆಡಿ ಅವತ್ತು ರಾತ್ರಿಯೇ ರೈಲು ಹತ್ತಿ ಮೈಸೂರಿಗೆ ಬಂದು ಇಲ್ಲಿನ ರಂಗಾಯಣದಲ್ಲಿ ಪ್ರದರ್ಶಿಸಿದ್ದರು’’ ಎಂದರು
ಇದೆಲ್ಲ ಮೈಸೂರಿನ ಪ್ರಖ್ಯಾತ ದಸರಾ ಮಹೋತ್ಸವ ನೆಪದಲ್ಲಿ ನಡೆಯುವ ರಂಗ ಚಟುವಟಿಕೆಗಳು. ದಸರಾ ಎಂದರೆ ಸಂಭ್ರಮ, ಸಮೃದ್ಧಿ. ಇದು ರಂಗಭೂಮಿಗೂ ಅನ್ವಯಿಸುತ್ತದೆ. ಕಾರಂತ ಕಾಲೇಜು ರಂಗೋತ್ಸವದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ನಿಜವಾದ ದಸರಾ ಎಂದರೆ ಇದೇ.
ಈಗಂತೂ ರಾಜ್ಯದಲ್ಲಿ ಆರು ರಂಗಾಯಣಗಳಿದ್ದು, ಮೈಸೂರು ಹೊರತುಪಡಿಸಿ ಉಳಿದ ಕಡೆ ರಂಗೋತ್ಸವ ನಡೆದಿಲ್ಲ. ಇದು ನಿರ್ದೇಶಕರಿಲ್ಲದ ಸಮಸ್ಯೆ, ಅನುದಾನದ ಕೊರತೆಯ ನಡುವೆ ಸ್ಥಳೀಯ ಪ್ರಾಯೋಜಕತ್ವದಲ್ಲಿ ರಂಗೋತ್ಸವ ಆಯೋಜಿಸಿದರೆ ವಿದ್ಯಾರ್ಥಿಗಳು ಮೊಬೈಲ್ ಫೋನ್‌ನಿಂದ ಆಚೆಗೆ ಬರುತ್ತಾರೆ. ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ಮಹತ್ವ ಅರಿತು ಬದುಕಿನ ಮೌಲ್ಯಗಳನ್ನು ತಿಳಿದುಕೊಂಡು ಸಮಾಜಕ್ಕೆ ಹೊರೆಯಾಗದ ಹಾಗೆ ಬದುಕುತ್ತಾರೆ.