ಪ್ರಾಯೋಜಿತ ಹಿಂಸೆ ವಿರುದ್ಧ ಆದಿವಾಸಿಗಳ ಗೆಲುವು

ವಚಾತಿ ಪ್ರಕರಣವು ಕಾಯ್ದೆ ತಿದ್ದುಪಡಿಗೆ ಕಾರಣವಾದ ನಿರ್ಭಯಾ(2012) ಪ್ರಕರಣಕ್ಕಿಂತ 20 ವರ್ಷ ಮೊದಲು ನಡೆದದ್ದು. ಅತ್ಯಾಚಾರಕ್ಕೀಡಾದವರ ಗುರುತು ರಹಸ್ಯವಾಗಿಡುವುದು, ಲಿಂಗ ಸಂವೇದಿ ತನಿಖೆ-ವಿಚಾರಣೆ ಹಾಗೂ ಅಂಥವರಿಗೆ ವೈದ್ಯಕೀಯ-ಕಾನೂನು ಮತ್ತು ಮಾನಸಿಕ ಬೆಂಬಲ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದ್ಯಾವುದೂ ವಚಾತಿಯ ಮಹಿಳೆಯರಿಗೆ ಸಿಗಲಿಲ್ಲ. ಅವರ ಗುರುತು ಸಾರ್ವಜನಿಕಗೊಂಡಿತು ಮತ್ತು ನ್ಯಾಯಾಲಯದಲ್ಲಿ ಪಾಟೀಸವಾಲಿನ ಅವಮಾನ ಎದುರಿಸಬೇಕಾಯಿತು. ಆದರೆ, ಅವರೆಲ್ಲರೂ ಹಗೆತನ ಮತ್ತು ವಿಳಂಬವನ್ನು ಎದುರಿಸಿ ಗೆಲುವು ಸಾಧಿಸಿದ್ದಾರೆ; ಶಿಕ್ಷಣ ಪಡೆದು, ಆರ್ಥಿಕ-ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೆಣ್ಣುಮಕ್ಕಳು ನಿಜವಾದ ಹೀರೋಗಳು.

Update: 2023-10-13 05:53 GMT
Editor : Naufal | Byline : ಮಾಧವ ಐತಾಳ್

ತಮಿಳುನಾಡಿನ ವಚಾತಿಯಲ್ಲಿ ನಡೆದ ಆದಿವಾಸಿಗಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಸೆಪ್ಟಂಬರ್ 29, 2023ರಂದು ನೀಡಿದ ತೀರ್ಪು ಅಪರೂಪದಲ್ಲಿ ಅಪರೂಪದ ಪ್ರಸಂಗ. ಆದೇಶವು ಆದಿವಾಸಿಗಳ ಮಾನವ ಹಕ್ಕುಗಳನ್ನು ಎತ್ತಿ ಹಿಡಿದಿದ್ದು, ಸರಕಾರದ ಮೇಲಿನ ಹಂತದಲ್ಲಿರುವವರ ಸಮ್ಮತಿ ಇಲ್ಲವೇ ಕೈವಾಡ ಇಲ್ಲದೆ ಸಮವಸ್ತ್ರ ಧರಿಸಿದವರು ಸಂಯೋಜಿತ-ಭಾರೀ ಪ್ರಮಾಣದ ಹಿಂಸಾಚಾರ ನಡೆಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ವಚಾತಿಯ ಹೆಣ್ಣು ಮಕ್ಕಳು ಚರಿತ್ರೆ ನಿರ್ಮಿಸಿದ್ದಾರೆ ಮತ್ತು ಈ ತೀರ್ಪು ಅವರ ಎಡೆಬಿಡದ ಪ್ರಯತ್ನಕ್ಕೆ ಸಾಕ್ಷಿ. ನ್ಯಾಯಾಂಗದ ಚರಿತ್ರೆಯಲ್ಲಿ ಮಹತ್ವಪೂರ್ಣ ತೀರ್ಪು ಇದಾಗಿದ್ದು, ಪರಿಶಿಷ್ಟ ಜಾತಿ ಮತ್ತು ವರ್ಗ(ಉಲ್ಲಂಘನೆ ತಡೆ) ಕಾಯ್ದೆ 1989 ಹಾಗೂ ಭಾರತೀಯ ದಂಡ ಸಂಹಿತೆಯಡಿ 215 ಆರೋಪಿ(269 ಮಂದಿಯಲ್ಲಿ ಉಳಿದವರು)ಗಳ ಮೇಲಿನ ಆರೋಪ ಸಾಬೀತಾಗಿದೆ. ‘ಕಳ್ಳಸಾಗಣೆದಾರರು ಮತ್ತು ಹಣವಂತರನ್ನು ರಕ್ಷಿಸಲು ಕಂದಾಯ, ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹೂಡಿದ ಹೂಟಕ್ಕೆ ಆದಿವಾಸಿ ಮಹಿಳೆಯರು ಬಲಿಯಾದರು’ ಎಂದು ನ್ಯಾಯಾಲಯ ಹೇಳಿದೆ. ತೂತುಕುಡಿಯಲ್ಲಿ ಸ್ಟರ್ಲೈಟ್ ಘಟಕದ ವಿಸ್ತರಣೆ ವಿರುದ್ಧದ ಪ್ರತಿಭಟನೆ ಯಲ್ಲಿ 13 ಮಂದಿ ಸಾವು, ಜೆಎನ್ಯುನ ವಿದ್ಯಾರ್ಥಿಗಳ ಪ್ರತಿಭಟನೆ, ಉತ್ತರಪ್ರದೇಶ-ಹರ್ಯಾಣದಲ್ಲಿನ ಬುಲ್ಡೋಜರ್ ರಾಜ್ಯ ಮತ್ತು ಮಣಿಪುರದಲ್ಲಿ ನಡೆಯುತ್ತಿರುವ ಗಲಭೆಯ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಾಮುಖ್ಯತೆ ಗಳಿಸುತ್ತದೆ.

ಧರ್ಮಪುರಿ ಜಿಲ್ಲೆಗೆ ಸೇರಿದ ವಚಾತಿ, ಆದಿವಾಸಿ ಗ್ರಾಮ. ಗಂಧದ ತುಂಡುಗಳನ್ನು ಅಕ್ರಮವಾಗಿ ಶೇಖರಿಸಲಾಗಿದೆ ಎಂದು 300ಕ್ಕೂ ಅಧಿಕ ಅಧಿಕಾರಿಗಳ ತಂಡ ಗ್ರಾಮದ ಮೇಲೆ ಜೂನ್ 20, 1992ರಂದು ದಾಳಿ ನಡೆಸಿತು. ಗರ್ಭಿಣಿ ಸೇರಿದಂತೆ 19 ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. 90 ಮಹಿಳೆಯರು, 28 ಮಕ್ಕಳು ಹಾಗೂ 15 ಮಂದಿ ಪುರುಷರನ್ನು ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಅಕ್ರಮವಾಗಿ ಸೆರೆಯಲ್ಲಿಡಲಾಯಿತು. ಮಹಿಳೆಯರನ್ನು ವಿವಸ್ತ್ರಗೊಳಿಸುವಂತೆ ಗ್ರಾಮದ ಮುಖಂಡನಿಗೆ ಆದೇಶಿಸಲಾಯಿತು. ಹಲವರನ್ನು ಸೇಲಂನ ಕೇಂದ್ರೀಯ ಕಾರಾಗೃಹಕ್ಕೆ ತಳ್ಳಲಾಯಿತು. ಗ್ರಾಮದಲ್ಲಿ ಹಿಂಸೆ ಮುಂದುವರಿದು, ಗ್ರಾಮಸ್ಥರು ಕಾಡಿನಲ್ಲಿ ಅಡಗಿಕೊಂಡರು. ಜಿಲ್ಲಾಧಿಕಾರಿ, ಜಿಲ್ಲಾ ಕಂದಾಯ ಅಧಿಕಾರಿ, ಪೊಲೀಸ್ ಅಧೀಕ್ಷಕ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಇವರ್ಯಾರೂ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ. ತಮಿಳುನಾಡು ಆದಿವಾಸಿಗಳ ಸಂಘಟನೆ ಮತ್ತು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ ಸದಸ್ಯರು ಜುಲೈ 1992ರಲ್ಲಿ ಗ್ರಾಮಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿ ಜೆ.ಜಯಲಲಿತಾ ಮತ್ತು ಅರಣ್ಯ ಸಚಿವ ಕೆ.ಎ.ಸೆಂಗೋಟ್ಟಿಯನ್ ಅವರಿಗೆ ಬರೆದ ಪತ್ರದಲ್ಲಿ ‘ಆದಿವಾಸಿಗಳ ಮೇಲಿನ ಗಂಧದ ಕಳ್ಳಸಾಗಣೆ ಆರೋಪಗಳು ಕಟ್ಟುಕತೆ’ ಎನ್ನಲಾಯಿತು. ರಾಷ್ಟ್ರೀಯ ಎಸ್ಸಿ/ಎಸ್ಟಿ ಆಯೋಗದ ನಿರ್ದೇಶಕಿ, ಐಎಎಸ್ ಅಧಿಕಾರಿ ಭಾಮತಿ ರಾಷ್ಟ್ರೀಯ ಎಸ್ಸಿ/ಎಸ್ಟಿ ಆಯೋಗಕ್ಕೆ ವರದಿ ಸಲ್ಲಿಸಿದರೂ, ಎಫ್ಐಆರ್ ದಾಖಲಾಗಲಿಲ್ಲ.

ಸಾರ್ವಜನಿಕ ಹಿತಾಸಕ್ತಿ ದಾವೆ

ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಎ.ನಲ್ಲಶಿವನ್ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದರು. ಭಾಮತಿ ಅವರ ವರದಿಯನ್ನು ಆಧರಿಸಿ ತೀರ್ಪು ನೀಡಿದ ಹೈಕೋರ್ಟ್, ರಾಜ್ಯ ಸರಕಾರ ಆದಿವಾಸಿಗಳಿಗೆ ಮೂಲಭೂತ ಅಗತ್ಯಗಳನ್ನು ಪೂರೈಸಬೇಕು ಮತ್ತು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು 1995ರಲ್ಲಿ ತೀರ್ಪು ನೀಡಿತು. ಆದರೆ, ಸರಕಾರ ಹಲ್ಲೆಗೊಳಗಾದ ಕುಟುಂಬಗಳಿಗೆ ಮಧ್ಯಂತರ ಪರಿಹಾರ ಕೊಡಲು ನಿರಾಕರಿಸಿತು; ಆರೋಪಪಟ್ಟಿಯಲ್ಲಿದ್ದವರು ಸುಳ್ಳು ಮೊಕದ್ದಮೆ ದಾಖಲಿಸುತ್ತ ವಿಚಾರಣೆಯನ್ನು ಮುಂದೂಡುತ್ತ ನಡೆದರು. ಇದಕ್ಕೆ ರಾಜ್ಯ ಸರಕಾರ ಪ್ರತಿಕ್ರಿಯಿಸಲಿಲ್ಲ. ಆನಂತರ, ಧರ್ಮಪುರಿ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಧೀಶ ಎನ್. ಕುಮಾರಗುರು, ಸೆಪ್ಟಂಬರ್ 29,2021ರಲ್ಲಿ 15,000 ರೂ. ಪರಿಹಾರ ನೀಡಬೇಕೆಂದು ಆದೇಶಿಸಿದರು.

ಮದ್ರಾಸ್ ಹೈಕೋರ್ಟ್ನ ಆದೇಶದಂತೆ ಪ್ರಕರಣದ ತನಿಖೆ ನಡೆಸಿದ ಸಿಬಿಐ, ಪ್ರಿನ್ಸಿಪಲ್ ಚೀಫ್ ಕನ್ಸರ್ವೇಟರ್ ಎಂ.ಹರಿಕೃಷ್ಣನ್, ಕನ್ಸರ್ವೇಟರ್ಗಳಾದ ಪಿ.ಮುತ್ತಯ್ಯನ್ ಹಾಗೂ ಎಲ್.ನಾಥನ್ ಮತ್ತು ಜಿಲ್ಲಾ ಅರಣ್ಯಾಧಿಕಾರಿ ಎಸ್. ಬಾಲಾಜಿ ಸೇರಿದಂತೆ 269 ಮಂದಿ ವಿರುದ್ಧ ದೋಷಾರೋಪ ಹೊರಿಸಿತು. ನ್ಯಾ.ವೇಲ್ಮುರುಗನ್ 2011ರಲ್ಲಿ ಅಧಿಕಾರಿಗಳು ಸಲ್ಲಿಸಿದ್ದ ಎಲ್ಲ ಕ್ರಿಮಿನಲ್ ಅರ್ಜಿಗಳನ್ನು ವಜಾಗೊಳಿಸಿದ್ದಾರೆ. ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸಿದ್ದು, ಇದರಲ್ಲಿ ಶೇ.50ರಷ್ಟು ಮೊತ್ತವನ್ನು ಅತ್ಯಾಚಾರಿಗಳಿಂದ ಸಂಗ್ರಹಿಸಬೇಕು ಮತ್ತು ಬಲಾತ್ಕಾರಕ್ಕೀಡಾದ ಮಹಿಳೆಯರಿಗೆ ಸರಕಾರಿ ಉದ್ಯೋಗ ನೀಡಬೇಕು ಇಲ್ಲವೇ ಸ್ವಯಂ ಉದ್ಯೋಗ ಯೋಜನೆಯಡಿ ಅವಕಾಶ ಕಲ್ಪಿಸಬೇಕು ಎಂದು ಆದೇಶಿಸಿದ್ದಾರೆ. ಗ್ರಾಮಸ್ಥರ ಜೀವನಮಟ್ಟವನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸರಕಾರಕ್ಕೆ ಸೂಚಿಸಿದ್ದು, ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕ ಮತ್ತು ಜಿಲ್ಲಾ ಅರಣ್ಯಾಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆದೇಶಿಸಿದ್ದಾರೆ. ನ್ಯಾಯಚಕ್ರ ಒಂದು ಸುತ್ತು ಬರಲು 30 ವರ್ಷ ತೆಗೆದುಕೊಂಡಿದೆ.

ತೀರ್ಪು ವಿಳಂಬಕ್ಕೆ ಕಾರಣವನ್ನು ನ್ಯಾಯಾಲಯ ವಿವರಿಸಿರುವುದು ಹೀಗೆ-‘‘ಸಮವಸ್ತ್ರಧಾರಿಗಳು ನಡೆಸಿದ ಅತ್ಯಾಚಾರದ ಬಗ್ಗೆ ಒಬ್ಬರೂ ದೂರು ದಾಖಲಿಸಿಲ್ಲ ಎನ್ನುವುದು ಸಾಕ್ಷ್ಯಗಳಿಂದ ಗೊತ್ತಾಗುತ್ತದೆ. ವ್ಯಕ್ತಿ ಹಾಗೂ ಅವರ ಕುಟುಂಬಕ್ಕೆ ಪ್ರಾಣಭಯ ಒಡ್ಡಲಾಗಿದೆ’’.

ಆದಿವಾಸಿಗಳು-ಪರಿಶಿಷ್ಟ ವರ್ಗಗಳು ಶತಮಾನಗಳಿಂದ ಶೋಷಿತರು ಮತ್ತು ಅವರ ಮೇಲಿನ ಲೈಂಗಿಕ ಹಾಗೂ ನಿರ್ದೇಶಿತ ಹಿಂಸೆ ಕಠಿಣ ಶಿಕ್ಷೆಗೆ ಅರ್ಹವಾದುದು. ಕೇಳಬೇಕಾದ ಪ್ರಶ್ನೆಯೆಂದರೆ, ಪ್ರಾಯೋಜಿತ ಅಪರಾಧವನ್ನು ವೈಯಕ್ತಿಕ ಅಪರಾಧದಂತೆ ಏಕೆ ಪರಿಗಣಿಸಲಾಯಿತು? ಇಲಾಖೆಯ ಮುಖ್ಯಸ್ಥರು ಇಲ್ಲವೇ ಸಚಿವರ ಮೇಲೆ ಅಧಿಕಾರಿಗಳ ಅಪರಾಧದ ಹೊಣೆಗಾರಿಕೆಯನ್ನು ಹೊರಿಸಬಾರದೇಕೆ? ಸಂಘಟಿತ ಅಪರಾಧದಲ್ಲಿ ಪ್ರತಿಯೊಬ್ಬ ಅಧಿಕಾರಿಯ ಅಪರಾಧವನ್ನು ಸಾಬೀತು ಮಾಡಬೇಕಿರುವುದರಿಂದ ವಿಚಾರಣೆ ಮತ್ತು ತೀರ್ಪು ವಿಳಂಬವಾಯಿತು. ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಈ ಲೋಪವನ್ನು ಸರಿಪಡಿಸುವುದು ಹೇಗೆ? ಇಂತಹ ಸಂದರ್ಭಗಳಲ್ಲಿ ಆಡಳಿತ ನಡೆಸುತ್ತಿರುವ ಸರಕಾರದ ಹೊಣೆಗಾರಿಕೆಯೇನು?

ಅಂತರ್ರಾಷ್ಟ್ರೀಯ ನೀತಿಗಳು

ಬಲಪ್ರಯೋಗ ಹಾಗೂ ಶಸ್ತ್ರಾಸ್ತ್ರಗಳ ಬಳಕೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಮೂಲತತ್ವಗಳ 24ನೇ ನಿಯಮದ ಪ್ರಕಾರ, ಅಧಿಕಾರಿಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸಿದರೆ, ಅಂಥ ಉಲ್ಲಂಘನೆಗಳನ್ನು ತಡೆಯದಿದ್ದರೆ ಅಥವಾ ಆ ಸಂಬಂಧ ವರದಿ ಮಾಡದೆ ಇದ್ದಲ್ಲಿ ಅದಕ್ಕೆ ಹಿರಿಯ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ. ದಕ್ಷಿಣ ಅಮೆರಿಕದ ಮಾನವ ಹಕ್ಕುಗಳ ನ್ಯಾಯಾಲಯವು ಉನ್ನತಾಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸಲು ರೂಪಿಸಿದ ಸೂತ್ರವೆಂದರೆ, ‘ಜೀವ/ದೈಹಿಕ ಅಪಾಯದ ಅರಿವು ಮತ್ತು ಅಂಥ ಹಾನಿಯನ್ನು ತಡೆಯುವ ಸಾಧ್ಯತೆಗಳ ಬಗ್ಗೆ ಅಧಿಕಾರಿಗಳಿಗೆ ಗೊತ್ತಿರಬೇಕು. ಮೇಲುಸ್ತುವಾರಿ ಮತ್ತು ನಿಯಂತ್ರಣದಲ್ಲಿ ಹಿರಿಯ ಅಧಿಕಾರಿಗಳು ವಿಫಲರಾದರೆ, ಅವರು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯ ಕುರಿತ ರೋಮ್ ಒಪ್ಪಂದದ ವಿಧಿ 28 ಕೂಡ ಉನ್ನತಾಧಿಕಾರಿಗಳ ಹೊಣೆಗಾರಿಕೆ ಸಿದ್ಧಾಂತವನ್ನು ಅನುಸರಿಸುತ್ತದೆ. ಆದರೆ, ಭಾರತದಲ್ಲಿ ಕೋಮು ಮತ್ತು ಗುರಿನಿರ್ದೇಶಿತ ಹಿಂಸೆ(ನ್ಯಾಯ ಮತ್ತು ನಷ್ಟ ಭರ್ತಿ)ಕಾಯ್ದೆ ರದ್ದಾಗಿದೆ. ಒಕ್ಕೂಟ ಸರಕಾರ ವಸಾಹತುಶಾಹಿ ಕಾನೂನುಗಳನ್ನು ಬದಲಿಸಲು ಮುಂದೊತ್ತಿರುವ ಅಪರಾಧ ನ್ಯಾಯ ಸಂಹಿತೆಯಲ್ಲಿ ಅಧಿಕಾರಿಗಳ ಸಂಘಟಿತ ಹಿಂಸೆಯನ್ನು ಪ್ರತ್ಯೇಕ ಅಪರಾಧ ವರ್ಗವೆಂದು ವಿಂಗಡಿಸಿಲ್ಲ. ಇದರಿಂದ ನ್ಯಾಯ ಶೀಘ್ರವಾಗಿ ಸಿಗುವುದಿಲ್ಲ. ರಾಜ್ಯ ಪ್ರಾಯೋಜಿತ ಹಿಂಸೆ ವಸಾಹತುಶಾಹಿ ಪರಂಪರೆಯದು; ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಜಾಗ ಇರಕೂಡದು.

ವಚಾತಿ ತೀರ್ಪು ಏಕೆ ಮುಖ್ಯ?

ದಲಿತರು ಮತ್ತು ಆದಿವಾಸಿಗಳಿಗೆ ನ್ಯಾಯ ಮರೀಚಿಕೆಯಾಗಿರುವ ಸಂದರ್ಭದಲ್ಲಿ ವಚಾತಿ ತೀರ್ಪು ಅತ್ಯಂತ ಮುಖ್ಯವಾಗಲಿದೆ. ದೇಶದಲ್ಲಿ 8.43 ಕೋಟಿ ಪರಿಶಿಷ್ಟ ವರ್ಗದವರಿದ್ದಾರೆ; 416 ಕುಲಸಂಬಂಧಿ ವರ್ಗ ಗಳು ಮತ್ತು 174 ಗುರುತಿಸಲ್ಪಡದ ಆದಿವಾಸಿ ಗುಂಪುಗಳಿವೆ. ರಾಷ್ಟ್ರೀಯ ಅಪರಾಧ ದಾಖಲು ಬ್ಯೂರೋ(ಎನ್ಸಿಆರ್ಬಿ) ಪ್ರಕಾರ, 2011-2020ರ ಅವಧಿಯಲ್ಲಿ ಪರಿಶಿಷ್ಟ ವರ್ಗಗಳ ಮೇಲೆ ನಡೆದ ಅಪರಾಧಗಳ ಸಂಖ್ಯೆ 76,899. 500ಕ್ಕೂ ಅಧಿಕ ದಲಿತ-ಆದಿವಾಸಿ ಸಂಘಟನೆಗಳ ವೇದಿಕೆಯಾದ ಎನ್ಸಿಎಸ್ಪಿಎ(ನ್ಯಾಷನಲ್ ಕೊಯಲಿಷನ್ ಫಾರ್ ಸ್ಟ್ರೆಂಥನಿಂಗ್ ಎಸ್ಸಿ ಆ್ಯಂಡ್ ಎಸ್ಟಿ ಆ್ಯಕ್ಟ್) ವಿಶ್ಲೇಷಣೆ ಪ್ರಕಾರ, ದಲಿತರು, ಆದಿವಾಸಿ ಮಹಿಳೆಯರು-ಮಕ್ಕಳ ಮೇಲೆ ಹಿಂಸೆ/ಅತ್ಯಾಚಾರ ಹೆಚ್ಚಿದೆ. ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೇಲಿನ ಹಿಂಸೆ ಪ್ರಕರಣಗಳ ಸಂಖ್ಯೆ ಕ್ರಮವಾಗಿ 2,63,512 ಮತ್ತು 42,512. 2021ರ ಅಂತ್ಯದಲ್ಲಿ ಎಸ್ಸಿ-ಎಸ್ಟಿ ಮೇಲಿನ ತನಿಖೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಕ್ರಮವಾಗಿ 70,818 ಮತ್ತು 12,159. ಮಕ್ಕಳ ಅತ್ಯಾಚಾರ, ಅತ್ಯಾಚಾರ ಯತ್ನ, ಹಲ್ಲೆ ಮತ್ತು ಅಪಹರಣಗಳು ಎಸ್ಸಿ ಶೇ.16.8 ಮತ್ತು ಎಸ್ಟಿ ಶೇ.26.8.

ಆದಿವಾಸಿಗಳ ಮೇಲೆ ವಸಾಹತುಶಾಹಿ ಕ್ರೌರ್ಯದಿಂದ ವರ್ತಿಸುತ್ತಿತ್ತು. ಸಂವಿಧಾನ ರಚನಾ ಸಭೆಯಲ್ಲಿ ಆದಿವಾಸಿ ಮಹಾಸಭಾದ ಮುಖಂಡ ಜೈಪಾಲ್ ಸಿಂಗ್ ಮುಂಡಾ ತಮ್ಮನ್ನು ‘ಅರಣ್ಯವಾಸಿ’(ಜಂಗ್ಲಿ) ಎಂದು ಘೋಷಿಸಿಕೊಂಡಿದ್ದರು. ಸಂವಿಧಾನದ ಶೆಡ್ಯೂಲ್ 5 ಮತ್ತು 6, ಆದಿವಾಸಿಗಳಿಗೆ ಒಂದು ಮಟ್ಟದ ಸ್ವಾಯತ್ತೆ ನೀಡಿದ್ದರೂ, ದೌರ್ಜನ್ಯ ಕಡಿಮೆಯಾಗಿಲ್ಲ. ಆದಿವಾಸಿಗಳ ವಾಸಸ್ಥಾನ ನೈಸರ್ಗಿಕ ಸಂಪನ್ಮೂಲಗಳಿಂದ ತುಂಬಿರುವುದರಿಂದ, ಅವರನ್ನು ಬಲಾತ್ಕಾರದಿಂದ ಸ್ಥಳಾಂತರಿಸಲಾಗುತ್ತಿದೆ. ಮಧ್ಯಪ್ರದೇಶ ಸರಕಾರ ಜುಲೈ 2021ರಲ್ಲಿ ಭಿಲ್ ಮತ್ತು ಬರೇಲಾ ಸಮುದಾಯಗಳನ್ನು ಸ್ಥಳಾಂತರಿಸಿತು. ದತ್ತಾಂಶ ಸಂಶೋಧನಾ ಏಜೆನ್ಸಿ ‘ಲ್ಯಾಂಡ್ ಕಾನ್ಫ್ಲಿಕ್ಟ್ ವಾಚ್’ ಪ್ರಕಾರ, ಭೂಮಿಗೆ ಸಂಬಂಧಿಸಿದ ಸಂಘರ್ಷ ಪ್ರಕರಣಗಳಲ್ಲಿ ಶೇ.25ರಷ್ಟು ಆದಿವಾಸಿ ಪ್ರದೇಶಗಳಲ್ಲಿದೆ. ಫ್ರೀಪ್ರೆಸ್ ಜರ್ನಲ್ನ 2019ರ ವರದಿಯಲ್ಲಿ ಪ್ರತಿನಿತ್ಯ ತಮ್ಮ ಮೇಲೆ ಅತ್ಯಾಚಾರ ನಡೆಯುತ್ತದೆ ಎಂದು ಡಿನೋಟಿಫೈಡ್ ಸಮುದಾಯಗಳ ಮಹಿಳೆಯರು ಹೇಳಿದ್ದರು. ಎನ್ಸಿಆರ್ಬಿಯಲ್ಲಿ ಈ ಸಮುದಾಯದ ಮೇಲಿನ ಅಪರಾಧದ ಅಂಕಿಅಂಶಗಳು ಇಲ್ಲ. ಏಕೆಂದರೆ, ಅವರಿಗೆ ಸಂವಿಧಾನಾತ್ಮಕ ರಕ್ಷಣೆ ಲಭ್ಯವಿಲ್ಲ. ದಕ್ಷಿಣ ಆಫ್ರಿಕಾದ ವಿದ್ವಾಂಸ ಆಲ್ಫ್ ಗನ್ವಾಲ್ಡ್ ನಿಲ್ಸನ್ ಗುರುತಿಸಿದಂತೆ, ಪಶ್ಚಿಮ ಮಧ್ಯಪ್ರದೇಶದಲ್ಲಿ ಆದಿವಾಸಿಗಳಿಗೆ ನಾಗರಿಕ ಸೇವೆ-ಹಕ್ಕುಗಳನ್ನು ನೀಡಬೇಕಿದ್ದ ಸರಕಾರಿ ಅಧಿಕಾರಿಗಳು ನ್ಯಾಯಪರತೆಯಿಂದ ವರ್ತಿಸಿಲ್ಲ. ಅರಣ್ಯ ರಕ್ಷಕರು, ಸೇನೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಅವರನ್ನು ಸದಾಕಾಲ ಕಾಡುತ್ತಾರೆ. ಮನುಷ್ಯರೇ ಅಲ್ಲ ಎಂಬಂತೆ ವರ್ತಿಸುತ್ತಾರೆ.

ಆದಿವಾಸಿಗಳ ಮೇಲೆ ಹಿಂಸೆಗೆ ಹಲವು ಕಾರಣಗಳಿದ್ದು, ಅದರಲ್ಲಿ ಮುಖ್ಯವಾದುದು- ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಕಡಿಮೆ. 2009-18ರ ಅವಧಿಯಲ್ಲಿ ಎಸ್ಸಿ/ಎಸ್ಟಿ ಕಾಯ್ದೆಯಡಿ ಶಿಕ್ಷೆ ಪ್ರಮಾಣ ಶೇ.22.8. ಆದರೆ, ಪ್ರಕರಣಗಳ ಹೆಚ್ಚಳ ಪ್ರಮಾಣ ಶೇ.575.33! ಬಾಹ್ಯ ಒತ್ತಡ ಮತ್ತು ಲೈಂಗಿಕ ಹಿಂಸೆಯಿಂದ ದೂರು ಹಿಂಪಡೆಯಲಾಗುತ್ತದೆ. ಇನ್ನೊಂದು ಅಂಶ-ಸಂಪನ್ಮೂಲಗಳ ಜಾತಿ ಆಧರಿತ ಹಂಚಿಕೆ. ಮೇಲ್ಜಾತಿಗಳು ಭೌತಿಕ ಸಂಪನ್ಮೂಲದ ಮೇಲೆ ಅಧಿಕ ಹಿಡಿತ ಹೊಂದಿರುವುದರಿಂದ, ಆದಿವಾಸಿ/ದಲಿತರು ಸಾಮಾಜಿಕವಾಗಿ-ಆರ್ಥಿಕವಾಗಿ ಹಿಂದುಳಿಯುತ್ತಾರೆ.

‘ಇಂಟರ್ನ್ಯಾಷನಲ್ ವರ್ಕಿಂಗ್ ಗ್ರೂಪ್ ಫಾರ್ ಇಂಡಿಜೀನಸ್ ಅಫೇರ್ಸ್’ ಪ್ರಕಾರ, ಇಂಡಿಯಾದ ಮೂಲವಾಸಿ ಸಂರಕ್ಷಣೆ ಕಾನೂನುಗಳು ನಿಷ್ಪ್ರಯೋಜಕ. ಸೇನೆ ಅವರ ಮೇಲೆ ನಡೆಸುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ರಾಷ್ಟ್ರೀಯ ಅಪರಾಧ ದಾಖಲು ಬ್ಯೂರೋ ದಾಖಲಿಸುವುದಿಲ್ಲ. ‘‘ಆದಿವಾಸಿಗಳಿಗೆ ಸಂಬಂಧಿಸಿದಂತೆ ಇಂಡಿಯಾದ ಕಾರ್ಯನೀತಿ ಮತ್ತು ಆಚರಣೆಗಳು ವಿರೋಧಾಭಾಸದಿಂದ ಕೂಡಿವೆ. ಮೂಲವಾಸಿಗಳ ಹಕ್ಕು ಕುರಿತ ವಿಶ್ವಸಂಸ್ಥೆಯ ಘೋಷಣೆಗೆ ದೇಶ ಸಹಿ ಹಾಕಿದೆ. ಅದೇ ಹೊತ್ತಿನಲ್ಲಿ ದೇಶದ ಎಲ್ಲ ಪ್ರಜೆಗಳು ಮೂಲವಾಸಿಗಳು ಎನ್ನುವ ಮೂಲಕ ದ್ವಂದ್ವ ನೀತಿ ಪ್ರದರ್ಶಿಸುತ್ತಿದೆ’’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 2016ರ ಜಾಗತಿಕ ಅವಲೋಕನ ಹೇಳುತ್ತದೆ.

ನಿಜವಾದ ಹೀರೋಗಳು

ಎನ್ಡಿಎ ಆಡಳಿತದಲ್ಲಿ ಆದಿವಾಸಿಗಳ ಮೇಲೆ ಹಿಂಸಾಚಾರ ಹೆಚ್ಚಿದೆ. ಆದರೆ, ಇಂತಹ ಅಪರಾಧ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಗುಜರಾತ್, ಛತ್ತೀಸ್ಗಡ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಗೆ ಅಧಿಕ ಆದಿವಾಸಿ ಮತಗಳು ಬಂದಿವೆ(1996ರಲ್ಲಿ ಶೇ.21, 2014ರಲ್ಲಿ ಶೇ.37 ಮತ್ತು 2019ರಲ್ಲಿ ಶೇ.44). ಮಣಿಪುರದಲ್ಲಿ ಬಹುಸಂಖ್ಯಾತ ಮೈತೈ ಮತ್ತು ಅಲ್ಪಸಂಖ್ಯಾತ ಕುಕಿ ಸಮುದಾಯದ ನಡುವೆ ಮೇ 3ರಿಂದ ಆರಂಭವಾದ ಹಿಂಸಾಚಾರದಲ್ಲಿ ಈವರೆಗೆ 181 ಮಂದಿ ಮೃತಪಟ್ಟಿದ್ದಾರೆ. ಸರಕಾರ ಹಿಂಸಾಚಾರ ನಡೆಯುತ್ತಿದೆ ಎಂಬುದನ್ನು ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡಿತು. ಮೈತೈ ಸಮುದಾಯಕ್ಕೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಬೇಕೆಂಬ ಶಿಫಾರಸನ್ನು ಕೇಂದ್ರ ಸರಕಾರಕ್ಕೆ ಕಳಿಸಬೇಕೆಂದು ಹೈಕೋರ್ಟ್ ಮಾಡಿದ ಸಲಹೆ ಗಲಭೆ ಆರಂಭಕ್ಕೆ ಕಾರಣ. ಈ ಆದೇಶವನ್ನು ಆನಂತರ ಸುಪ್ರೀಂ ಕೋರ್ಟ್ ಟೀಕಿಸಿತು. ಆದರೆ, ಹಿಂಸಾಕಾಂಡ ಮುಂದುವರಿದಿದೆ.

ವಚಾತಿ ಪ್ರಕರಣವು ಕಾಯ್ದೆ ತಿದ್ದುಪಡಿಗೆ ಕಾರಣವಾದ ನಿರ್ಭಯಾ(2012) ಪ್ರಕರಣಕ್ಕಿಂತ 20 ವರ್ಷ ಮೊದಲು ನಡೆದದ್ದು. ಅತ್ಯಾಚಾರಕ್ಕೀಡಾದವರ ಗುರುತು ರಹಸ್ಯವಾಗಿಡುವುದು, ಲಿಂಗ ಸಂವೇದಿ ತನಿಖೆ-ವಿಚಾರಣೆ ಹಾಗೂ ಅಂಥವರಿಗೆ ವೈದ್ಯಕೀಯ-ಕಾನೂನು ಮತ್ತು ಮಾನಸಿಕ ಬೆಂಬಲ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದ್ಯಾವುದೂ ವಚಾತಿಯ ಮಹಿಳೆಯರಿಗೆ ಸಿಗಲಿಲ್ಲ. ಅವರ ಗುರುತು ಸಾರ್ವಜನಿಕಗೊಂಡಿತು ಮತ್ತು ನ್ಯಾಯಾಲಯದಲ್ಲಿ ಪಾಟೀಸವಾಲಿನ ಅವಮಾನ ಎದುರಿಸಬೇಕಾಯಿತು. ಆದರೆ, ಅವರೆಲ್ಲರೂ ಹಗೆತನ ಮತ್ತು ವಿಳಂಬವನ್ನು ಎದುರಿಸಿ ಗೆಲುವು ಸಾಧಿಸಿದ್ದಾರೆ; ಶಿಕ್ಷಣ ಪಡೆದು, ಆರ್ಥಿಕ-ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೆಣ್ಣುಮಕ್ಕಳು ನಿಜವಾದ ಹೀರೋಗಳು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಮಾಧವ ಐತಾಳ್

contributor

Similar News

ನಾಸ್ತಿಕ ಮದ