ಬಾಂಗ್ಲಾ ಘಟನೆಯಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ

Update: 2024-08-10 05:15 GMT

ಮಾನ್ಯರೇ

ಬಾಂಗ್ಲಾದೇಶ ಈಗ ಹಿಂಸಾಚಾರದ ಬೆಂಕಿಯಲ್ಲಿ ಬೇಯುತ್ತಿದೆ. ಅಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಹಿಂಸಾಚಾರದ ರೂಪ ತಾಂಡವವಾಡುತ್ತಿದೆ.

ಕೆಲವೊಮ್ಮೆ ಅಧಿಕಾರದಲ್ಲಿ ಉಳಿಯುವ ಗೀಳು ಒಬ್ಬರನ್ನು ಎತ್ತರದಿಂದ ಆಳಕ್ಕೆ ತರಬಹುದು ಎಂಬುದಕ್ಕೆ ಬಾಂಗ್ಲಾ ದೇಶದ ಘಟನೆ ಉದಾಹರಣೆಯಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸರ್ವಾಧಿಕಾರಿಗಳಿಗೆ ಜನ ಯಾವಾಗಲೂ ತಕ್ಕ ಪಾಠ ಕಲಿಸಿಯೇ ಕಲಿಸುತ್ತಾರೆ.

ಬಾಂಗ್ಲಾದೇಶ ನಮ್ಮ ನೆರೆಯ ದೇಶವಾಗಿದೆ. ಆದ್ದರಿಂದ ನಾವು ಈ ಬಗ್ಗೆ ಯೋಚಿಸಬೇಕಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವ ಮತ್ತು ಭಿನ್ನಾಭಿಪ್ರಾಯಗಳನ್ನು ದಮನಿಸುವ ಘಟನೆಗಳು ಅತಿರೇಕವಾದಾಗ ಈ ರೀತಿಯ ಸಾರ್ವಜನಿಕ ಆಕ್ರೋಶಗಳು ಘಟಿಸುತ್ತವೆ. ಯಾವುದೇ ಅಧಿಕಾರಗಳು ಶಾಶ್ವತವಲ್ಲ. ಆದರೆ ಯಾವುದೇ ಉನ್ನತ ಅಧಿಕಾರವನ್ನು ಹೊಂದಿರುವ ವ್ಯಕ್ತಿ ತನ್ನ ಅಧಿಕಾರಾವಧಿಯಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಮತ್ತು ಸಂಸ್ಥೆಗಳನ್ನು ದುರ್ಬಲಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಒಂದು ವೇಳೆ ಕೈ ಹಾಕಿದರೆ ಅದರ ಪರಿಣಾಮ ಗಂಭೀರವಾಗಿಯೇ ಇರುತ್ತದೆ. ಜನರ ಸಂಕಷ್ಟಗಳನ್ನು ನಿವಾರಿಸದ ಮತ್ತು ಅಧಿಕಾರವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುವುದರ ಫಲಿತಾಂಶವು ಇದೀಗ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಘಟನೆ ನಮಗೆ ಎಚ್ಚರಿಕೆ ಗಂಟೆ ಹಾಗೂ ಮಹತ್ವದ ಪಾಠವಾಗಿದೆ. ಕಾರಣ ಏನೇ ಇರಲಿ, ಬಾಂಗ್ಲಾ ದೇಶದಲ್ಲಿ ಶಾಂತಿ ನೆಲೆಸುವ ಪ್ರಕ್ರಿಯೆ ಆದಷ್ಟು ಬೇಗ ಪ್ರಾರಂಭವಾಗಲಿ.

-ಹರಳಹಳ್ಳಿಪುಟ್ಟರಾಜು, ಪಾಂಡವಪುರ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಗೀಳಿಗರು