ಸಾಗರಗಳ ನೀರಿನ ಬಣ್ಣಕ್ಕೆ ಕಾರಣರು ಯಾರು?

ನಮ್ಮೂರ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದಾಗ ಕಲುಷಿತ ಗೊಂಡಿದೆ ಎಂಬುದಂತೂ ಗೊತ್ತಾಗುತ್ತಿತ್ತು. ಆದರೆ ಈಗ ಅದನ್ನು ಹವಾಮಾನ ಬದಲಾವಣೆಯಿಂದಾದುದು ಎಂಬ ಹೆಸರಿಡಬೇಕಷ್ಟೆ. ನಮ್ಮೂರ ಕೆರೆ ನೀರಿನ ಬಣ್ಣ ಬದಲಾವಣೆ ಗಮನಿಸಲು ಯಾವ ಉಪಗ್ರಹಗಳ ಸಹಾಯವೂ ಬೇಕಿರಲಿಲ್ಲ. ಆದರೆ ಈಗ ಉಪಗ್ರಹ ಗಳು ನೀಡಿದ ಚಿತ್ರಗಳನ್ನು ಅಧ್ಯಯನ ಮಾಡಿ ನೀರಿನ ಬಣ್ಣ ಬದಲಾಗಿದೆ ಎಂದು ಹೇಳುವ ಕಾಲ ಬಂದಿದೆ.

Update: 2023-07-30 07:00 GMT

ನಮ್ಮ ನೆಚ್ಚಿನ ವೀಕೆಂಡ್ ತಾಣಗಳೆಂದರೆ ನಮ್ಮೂರ ಗುಡ್ಡ ಮತ್ತು ಕೆರೆ. ವಾರಾಂತ್ಯದ ಬಹುತೇಕ ಸಮಯವನ್ನು ನಾವು ಅಲ್ಲಿಯೇ ಕಳೆಯುತ್ತಿದ್ದೆವು. ಬುತ್ತಿ(ಊಟದ ಡಬ್ಬಿ) ಕಟ್ಟಿಕೊಂಡು ಗುಡ್ಡ ಹತ್ತುವುದು, ಅಲ್ಲಿಯೇ ಊಟ ಮಾಡುವುದು, ನಂತರ ಗುಡ್ಡದ ಬುಡದಲ್ಲಿನ ಕೆರೆಗೆ ಇಳಿಯುವುದು. ಮನಸಾರೆ ಈಜುವುದು. ವಾರಾಂತ್ಯದಲ್ಲಿ ಬಹುತೇಕ ಮಕ್ಕಳು ಅಲ್ಲಿಯೇ ಜಮಾಯಿಸುತ್ತಿದ್ದರು.

ಮಳೆ ಬಂದಾಗ ಕೆರೆಗೆ ಹೊಸ ನೀರು ಹರಿದು ಬರುತ್ತಿತ್ತು. ಮಳೆ ಹೆಚ್ಚಾದಾಗ ಕೋಡಿಯ ಮೂಲಕ ಹೆಚ್ಚಾದ ನೀರನ್ನು ಹೊರಬಿಡಲಾ ಗುತ್ತಿತ್ತು. ಹಳೆಯ ನೀರೆಲ್ಲ ಕೊಚ್ಚಿ ಹೋಗಿ ಹೊಸ ನೀರು ತುಂಬಿಕೊಂಡ ಕೆರೆ ಮದುವಣಗಿತ್ತಿಯಂತೆ ನಳನಳಿಸುತ್ತಿತ್ತು. ನಾವು ಬಾಲಕರಾಗಿದ್ದಾಗ ಅಂದರೆ ನಾಲ್ಕು ದಶಕಗಳ ಹಿಂದೆ ಇದೇ ಕೆರೆಯ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದರು. ಈಗಿನಂತೆ ನಳದ ವ್ಯವಸ್ಥೆ ಇರಲಿಲ್ಲ. ಆಗ ಕೆರೆಯ ನೀರು ಸ್ವಚ್ಛವಾಗಿತ್ತು. ಆದರೆ ನಳದ ವ್ಯವಸ್ಥೆ ಬಂದ ಮೇಲೆ ಕೆರೆ ನೀರು ಬಳಸುವುದು ಕಡಿಮೆಯಾಯಿತು. ಅದರ ಮೇಲಿದ್ದ ಗ್ರಾಮಸ್ಥರ ಕಾಳಜಿಯೂ ಕಡಿಮೆಯಾಯಿತು. ಕ್ರಮೇಣವಾಗಿ ಕೆರೆಯ ನೀರು ಮಲಿನವಾಗತೊಡಗಿತು. ಈಗೀಗಂತೂ ಬಳಸುವುದಿರಲಿ, ದನಕರು ಗಳು ಕುಡಿಯಲು ಸಹ ಅದು ಯೋಗ್ಯವಾಗಿಲ್ಲ. ಕೆಲವು ವೇಳೆ ಕೊಳೆ ಹೆಚ್ಚಾಗಿ ದುರ್ನಾತ ಬರುತ್ತದೆ.

ಇದನ್ನೆಲ್ಲಾ ಹೇಳಲು ಕಾರಣ ಏನು ಎಂಬ ಪ್ರಶ್ನೆ ಕಾಡುತ್ತಿರಬಹುದು. ಕಾರಣ ಇದೆ. ಇದು ಕೇವಲ ನಮ್ಮ ಹೊಳಗುಂದಿ ಕೆರೆಯ ಕಥೆಯಲ್ಲ. ಬಹುತೇಕ ಕೆರೆಗಳ ಕಥೆಯೂ ಇದೇ ಆಗಿದೆ. ಬೋರ್ವೆಲ್ ನೀರು ಮನೆಯ ಬಾಗಿಲಲ್ಲಿ ದೊರೆಯುವಾಗ ಕೆರೆಯ ನೀರನ್ನು ಯಾಕೆ ತರಬೇಕು? ಎಂಬ ನಮ್ಮ ಭಾವನೆಯೇ ಸ್ಥಳೀಯ ಜಲಮೂಲಗಳು ಹಾಳಾಗಲು ಕಾರಣವಾಗಿದೆ.

ಆಗ ಕಲುಷಿತಗೊಂಡ ನೀರು ಕೆಲವು ದಿನಗಳ ನಂತರ ಸ್ವಚ್ಛವಾಗು ತ್ತಿತ್ತು. ಇದು ಜಲಚರಗಳಿಂದಾದುದೋ ಅಥವಾ ಜಲದ ಸ್ವಯಂ ದುರಸ್ತಿಯೋ ತಿಳಿಯದು. ಈಗ ನೀರು ಕಲುಷಿತಗೊಂಡರೆ ಅದನ್ನು ಹವಾಮಾನ ಬದಲಾವಣೆಯಿಂದಾದ ತಾಪದ ಪರಿಣಾಮ ಎಂದು ಲೇಬಲ್ ಮಾಡುತ್ತೇವೆ.

ಹವಾಮಾನ ವೈಪರೀತ್ಯದ ಪರಿಣಾಮ ಕೇವಲ ಕೆರೆ, ಹಳ್ಳಗಳಂತಹ ಸಣ್ಣ ಸಣ್ಣ ಜಲಮೂಲಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಮುದ್ರ, ಸಾಗರಗಳಿಗೂ ತಲುಪಿರುವುದು ದುರಂತ. ಹವಾಮಾನ ಬದಲಾವಣೆಯು ಸಾಗರದ ನೀರಿನ ಬಣ್ಣ ಬದಲಾಗಲು ಕಾರಣವಾಗಿದೆ ಎಂಬ ಅಂಶವೇ ನಮ್ಮನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇದು ಕೇವಲ ಒಂದು ವರ್ಷದಲ್ಲಾದ ಬದಲಾವಣೆಯಂತೂ ಅಲ್ಲ. ವಿಶ್ವದ ಅರ್ಧಕ್ಕಿಂತ ಹೆಚ್ಚು ಸಾಗರಗಳಲ್ಲಿನ ಮೇಲ್ಮೈ ನೀರು ಕಳೆದ ಎರಡು ದಶಕಗಳಲ್ಲಿ ಬಣ್ಣವನ್ನು ಬದಲಾಯಿಸುತ್ತಿದೆ ಎಂಬ ಅಂಶವನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಇದು ಭೂಮಿಯ ಮೇಲಿನ ಒಟ್ಟು ಭೂ ಮೇಲ್ಮೈ ಹಾನಿಗಿಂತ ದೊಡ್ಡದಾಗಿದೆ.

ಸಾಗರದ ಬಣ್ಣದಲ್ಲಿ ಬದಲಾವಣೆ ಎಂದರೆ ಸಾಗರ ಪರಿಸರ ವ್ಯವಸ್ಥೆಗಳು ರೂಪಾಂತರಗಳಿಗೆ ಒಳಗಾಗಿರಬಹುದು. ಈ ಬದಲಾವಣೆಗಳ ನಿಖರ ಸ್ವರೂಪವು ಅಂತರ್ರಾಷ್ಟ್ರೀಯ ಸಂಶೋಧಕರ ತಂಡಕ್ಕೆ ಅಸ್ಪಷ್ಟವಾಗಿ ಉಳಿದಿದೆಯಾದರೂ, ಈ ಬದಲಾವಣೆಯು ಮಾನವ ಪ್ರೇರಿತ ಹವಾಮಾನ ಬದಲಾವಣೆಗೆ ಕಾರಣವಾಗಿದೆ ಎಂದು ಅವರು ಬಲವಾಗಿ ನಂಬುತ್ತಾರೆ.

ನೇಚರ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯೊಂದು ಈ ಅಂಶವನ್ನು ಬಯಲು ಮಾಡಿದೆ. ಹವಾಮಾನ ಬದಲಾವಣೆಯಿಂದಾಗಿ ಸಾಗರಗಳ ಮೇಲ್ಮೈಗಳಿಗೆ ಹತ್ತಿರವಿರುವ ಸೂಕ್ಷ್ಮಜೀವಿಗಳನ್ನು ಬೆಂಬಲಿಸುವ ಪರಿಸರ ವ್ಯವಸ್ಥೆಗಳು ಬದಲಾಗುತ್ತಿರುವ ಕಾರಣದಿಂದ ಸಾಗರದ ನೀರಿನ ಬಣ್ಣ ಬದಲಾಗುತ್ತಿದೆ ಎಂದು ಈ ಸಂಶೋಧನೆ ತೋರಿಸುತ್ತದೆ. ಮೇಲ್ಮೈ ನೀರಿನ ಮೇಲಿನ ಕಣಗಳು ಮತ್ತು ನೀರಿನ ಅಣುಗಳ ಜೊತೆಗೆ ಸೂಕ್ಷ್ಮಾಣು ಜೀವಿಗಳು ಬೆಳಕನ್ನು ಹೀರಿಕೊಳ್ಳುತ್ತವೆ ಮತ್ತು ಚದುರಿಸುತ್ತವೆ. ಸೂಕ್ಷ್ಮಾಣು ಜೀವಿಗಳಿಂದ ಚದುರಿದ ಬೆಳಕು ಸಾಗರದ ನೀರಿನ ಬಣ್ಣ ಬದಲಾವಣೆಗೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಾಗರದ ನೀರಿನ ಬಣ್ಣ ಹಸಿರಾಗಿರುವುದನ್ನು ಸಂಶೋಧಕರು ಹಂಚಿಕೊಂಡಿದ್ದಾರೆ. ಸಾಗರಗಳ ನೀರಿನ ಮೇಲ್ಮೈ ಬಳಿ ಹಸಿರು ಫೈಟೊಪ್ಲಾಂಕ್ಟನ್ನಂತಹ ಜೀವಿಗಳು ಹೆಚ್ಚಳವಾದಾಗ, ಅದು ಹೆಚ್ಚು ಹಸಿರು ಬಣ್ಣದಲ್ಲಿ ಕಂಡುಬರುತ್ತದೆ.

ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೂ ವಾತಾವರಣ ಮತ್ತು ಗ್ರಹ ವಿಜ್ಞಾನಗಳ ವಿಭಾಗದ ಹಿರಿಯ ಸಂಶೋ ಧನಾ ವಿಜ್ಞಾನಿ ಸ್ಟೆಫನಿ ಡಟ್ಕಿವಿಜ್ ಮತ್ತು ತಂಡದವರು ನಡೆಸಿದ ಅಧ್ಯಯನಗಳಿಂದ ಈ ಮಾಹಿತಿ ಹೊರಬಂದಿದೆ. ಕಳೆದ ೨೦ ವರ್ಷ ಗಳಿಂದಲೂ ನಡೆಸಿದ ಉಪಗ್ರಹ ಆಧಾರಿತ ಚಿತ್ರಗಳ ಅಧ್ಯಯನದಿಂದ ಇಂತಹ ತೀರ್ಮಾನಕ್ಕೆ ಬರಲಾಗಿದೆ. ಇದು ನಿಜವಾಗಿ ನಡೆಯುತ್ತಿದೆ ಎಂದು ನೋಡಲು ಆಶ್ಚರ್ಯವೇನಿಲ್ಲ, ಆದರೆ ಪ್ರಪಂಚದ ಸಾಗರಗಳಾದ್ಯಂತ ಮೇಲ್ಮೈ ನೀರಿನ ಪರಿಸರ ವ್ಯವಸ್ಥೆಗಳು ಹೇಗೆ ಬದಲಾಗುತ್ತಿವೆ ಎಂದು ಸಂಶೋಧಕರಿಗೆ ಖಚಿತತೆ ಇಲ್ಲ. ಆದರೆ ಬಣ್ಣ ಬದಲಾವಣೆಗಳು ನೈಸರ್ಗಿಕವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹವಾಮಾನ ಘಟನೆಗಳು ಮತ್ತು ಪ್ರವಾಹಗಳಂತಹ ಇತರ ಕಾರಣಗಳಿಂದ ಮೇಲ್ಮೈ ನೀರಿನ ಬಣ್ಣ ಬದಲಾಗಿರಬಹುದು ಎಂಬುದನ್ನು ಅವರು ಹೇಳಿದ್ದಾರೆ.

ಸಾಗರಗಳ ಪದರಗಳಲ್ಲಿ ಯಾವ ಜೀವಿಗಳು ವಾಸಿಸುತ್ತದೆ ಎಂಬು ದನ್ನು ನಿರ್ಣಯಿಸಲು ಸಮುದ್ರದ ಬಣ್ಣವನ್ನು ಮಾಪಕವಾಗಿ ಬಳಸಲಾಗುತ್ತದೆ. ಉದಾಹರಣೆಗೆ ಸಾಗರಗಳ ಆಳವಾದ ನೀಲಿ ನೀರು ಜೀವಿಗಳ ಅನುಪಸ್ಥಿತಿಯನ್ನು ಸೂಚಿಸುತ್ತದೆ. ಆದರೆ ಹಸಿರು ನೀರು ಹಸಿರು ವರ್ಣದ್ರವ್ಯ ಕ್ಲೋರೊಫಿಲ್ ಅನ್ನು ಒಳಗೊಂಡಿರುವ ಫೈಟೊಪ್ಲಾಂಕ್ಟನ್ ಎಂಬ ಸಸ್ಯದಂತಹ ಸೂಕ್ಷ್ಮಜೀವಿಗಳ ಉಪಸ್ಥಿತಿ ಯನ್ನು ಸೂಚಿಸುತ್ತದೆ.

ಫೈಟೊಪ್ಲಾಂಕ್ಟನ್ ಸೂರ್ಯನ ಬೆಳಕನ್ನು ಹೀರಿಕೊಳ್ಳುತ್ತವೆ ಮತ್ತು ದ್ಯುತಿಸಂಶ್ಲೇಷಣೆಯ ಮೂಲಕ ಆಹಾರ ತಯಾರಿಸಲು ಕಾರ್ಬನ್ ಡೈಆಕ್ಸೈಡ್ನ್ನು ಬಳಸುತ್ತವೆ. ಹೀಗಾಗಿ ಫೈಟೊಪ್ಲಾಂಕ್ಟನ್ಗಳು ಸಾಗರಗಳಲ್ಲಿ ಆಹಾರ ಜಾಲದ ಅಡಿಪಾಯವನ್ನು ರೂಪಿಸುತ್ತವೆ. ಕ್ರಿಲ್ ನಂತಹ ಸಣ್ಣ ಜೀವಿಗಳಿಂದ ದೊಡ್ಡ ದೊಡ್ಡ ಮೀನುಗಳು ಸೇರಿದಂತೆ ಸಮುದ್ರ ಪಕ್ಷಿಗಳು ಮತ್ತು ಸಮುದ್ರ ಸಸ್ತನಿಗಳಿಗೆ ಆಹಾರವನ್ನು ಒದಗಿಸುತ್ತವೆ.

ಆಹಾರ ಒದಗಿಸುವುದರ ಹೊರತಾಗಿ ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯಿಂದ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ನ್ನು ಸೆರೆಹಿಡಿಯುವಲ್ಲಿ ಮತ್ತು ಸಂಗ್ರಹಿಸುವಲ್ಲಿ ಫೈಟೊಪ್ಲಾಂಕ್ಟನ್ಗಳು ಪ್ರಮುಖ ಪಾತ್ರ ವಹಿಸಿವೆ ಎಂದರ್ಥ. ಕಾರ್ಬನ್ ಡೈಆಕ್ಸೈಡ್ ಒಂದು ಪ್ರಮುಖ ಹಸಿರುಮನೆ ಅನಿಲವಾಗಿರುವುದರಿಂದ, ಹವಾಮಾನ ಬದಲಾವಣೆಗೆ ಈ ಸೂಕ್ಷ್ಮಾಣುಜೀವಿಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಅಧ್ಯಯನ ಮಾಡಲು ವಿಜ್ಞಾನಿಗಳು ಸಾಗರಗಳ ಮೇಲ್ಮೈ ಮೇಲೆ ಫೈಟೊಪ್ಲಾಂಕ್ಟನ್ನ್ನು ತೀವ್ರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ನಮ್ಮೂರ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದಾಗ ಕಲುಷಿತ ಗೊಂಡಿದೆ ಎಂಬುದಂತೂ ಗೊತ್ತಾಗುತ್ತಿತ್ತು. ಆದರೆ ಈಗ ಅದನ್ನು ಹವಾಮಾನ ಬದಲಾವಣೆಯಿಂದಾದುದು ಎಂಬ ಹೆಸರಿಡಬೇಕಷ್ಟೆ. ನಮ್ಮೂರ ಕೆರೆ ನೀರಿನ ಬಣ್ಣ ಬದಲಾವಣೆ ಗಮನಿಸಲು ಯಾವ ಉಪಗ್ರಹಗಳ ಸಹಾಯವೂ ಬೇಕಿರಲಿಲ್ಲ. ಆದರೆ ಈಗ ಉಪಗ್ರಹ ಗಳು ನೀಡಿದ ಚಿತ್ರಗಳನ್ನು ಅಧ್ಯಯನ ಮಾಡಿ ನೀರಿನ ಬಣ್ಣ ಬದಲಾಗಿದೆ ಎಂದು ಹೇಳುವ ಕಾಲ ಬಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನವು ಇನ್ನೂ ಏನೇನು ಅವಾಂತರಗಳನ್ನು ತರಲಿದೆಯೋ ಅಥವಾ ಮಾನವ ಭವಿಷ್ಯಕ್ಕೆ ಪೂರಕ ಅಂಶಗಳನ್ನು ಕಾಣ್ಕೆಯಾಗಿ ನೀಡಲಿದೆಯೋ ಕಾದು ನೋಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಆರ್. ಬಿ. ಗುರುಬಸವರಾಜ

contributor

Similar News

ಸಂವಿಧಾನ -75