ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಜಿಎಸ್ಸೆಸ್: ಪ್ರೊ.ಚಂಪಾ

Update: 2016-02-07 18:37 GMT

ಡಾ.ಜಿಎಸ್ಸೆಸ್ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು, ಫೆ. 7: ರಾಷ್ಟ್ರಕವಿ ಕುವೆಂಪು ಅವರ ನಂತರ ಹಿರಿಯ ಸಾಹಿತಿ ಡಾ.ಜಿ.ಎಸ್.ಶಿವರುದ್ರಪ್ಪ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ ಪ್ರತೀಕ ವಾಗಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ನಗರದ ಎಚ್.ಎನ್.ಸಭಾಂಗಣದಲ್ಲಿ ಜಿಎಸ್ಸೆಸ್ ವಿಶ್ವಸ್ಥ ಮಂಡಳಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ವಿಮರ್ಶಕ ಡಾ.ಚಂದ್ರಶೇಖರ್ ನಂಗಲಿ ಯವರಿಗೆ ಡಾ.ಜಿಎಸ್ಸೆಸ್ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
  ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಮಾಡದೆ ಉಳಿದಂತಹ ಕೆಲಸವನ್ನು ಜಿಎಸ್ಸೆಸ್ ನಿರ್ವಹಿಸಿದ್ದಾರೆ. ಜಿಎಸ್ಸೆಸ್ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಂತರ ಕನ್ನಡ ಸಾಹಿತ್ಯಕ್ಕೆ ಹೊಸ ಅಯಾಮ ನೀಡಿದರು. ಮಾತ್ರವಲ್ಲ, ಸಾಂಸ್ಕೃತಿಕ ಆಯಾಮಗಳಿಗೆ ಗಟ್ಟಿತನವನ್ನು ತಂದುಕೊಟ್ಟರು ಎಂದು ಶ್ಲಾಘಿಸಿದರು.
   ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಂಪೂರ್ಣ ಮಹತ್ವ ನೀಡಿದ್ದರು. ಈ ಬಗೆಯ ಪರಂಪರೆಯನ್ನು ವೈಯಕ್ತಿಕ ವರ್ಚಸ್ಸಿನಲ್ಲಿ ಜಿಎಸ್ಸೆಸ್ ಮುಂದುವರಿಸಿದರು. ಜಿಎಸ್ಸೆಸ್ ಕೇವಲ ಅಕ್ಷರಗಳನ್ನು ಸೃಷ್ಟಿ ಮಾಡಿ ಮರೆಯಾದವರಲ್ಲ. ಕನ್ನಡ ಸಾಹಿತ್ಯದ ವಿಮರ್ಶೆ, ಮೀಮಾಂಸೆ ಸೇರಿದಂತೆ ಎಲ್ಲ ಪ್ರಕಾರಗಳನ್ನು ಪೋಷಣೆ ಮಾಡಿ ಬೆಳೆಸಿದ್ದಾರೆ ಎಂದು ಪ್ರತಿಪಾದಿಸಿದರು.
 ಕೆಲ ವಿಮರ್ಶೆಗಳನ್ನು ಓದುತ್ತಿದ್ದರೆ ಬೇಸರವಾಗಿ ಓದುವುದನ್ನು ಅರ್ಧಕ್ಕೆ ನಿಲ್ಲಿಸುತ್ತೇವೆ. ಆದರೆ, ಚಂದ್ರಶೇಖರ ನಂಗಲಿಯವರ ವಿಮರ್ಶೆಯನ್ನು ಓದಿದರೆ ದಲಿತ ಪ್ರಬಂಧವನ್ನು ಓದಿದ ಅನುಭವ ನೀಡುತ್ತದೆ ಎಂದು ಬಣ್ಣಿಸಿದ ಅವರು, ವಿಮರ್ಶಕರಲ್ಲಿರುವ ಕಾವ್ಯದ ಸೆಲೆ ಮತ್ತು ಸೃಜನಶೀಲತೆ ಸೆಲೆಗಳ ಪರಸ್ಪರ ಪೋಷಣೆಯೆ ಸಮಗ್ರ ಕನ್ನಡ ಸಾಹಿತ್ಯದ ಬೆಳ ವಣಿಗೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಮಾತನಾಡಿ, ನಂಗಲಿಯವರ ಚಾರಣ ಸಾಹಿತ್ಯವು ಪರಿಸರ ಪ್ರಜ್ಞೆಯನ್ನು ಜನರಿಗೆ ವಿಸ್ತರಿಸಿದೆ. ಕಾಡಿನಲ್ಲಿರುವ ಪರಿಸರ ಸೌಂದರ್ಯವನ್ನು ಅಕ್ಷರ ರೂಪದಲ್ಲಿ ಚಿತ್ರಿಸಿದ್ದಾರೆ. ಇವರ ಪುಸ್ತಕಗಳಲ್ಲಿ ನಿರ್ಜೀವ ಕಲ್ಲು ಬಂಡೆಗಳಿಗೆ ಜೀವವನ್ನು ನೀಡಿದ್ದಾರೆ ಎಂದು ತಿಳಿಸಿದರು.
  ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್ ನಂಗಲಿ ಮಾತನಾಡಿ, ಜಿಎಸ್ಸೆಸ್ ಜಾತಿವಾದ ಮತ್ತು ಭ್ರಷ್ಟಾಚಾರ ವಿರೋಧಿ ಗಳಾಗಿದ್ದರು. ಉಪನ್ಯಾಸಕರಾಗಿದ್ದ ವೇಳೆ ವಿದ್ಯಾರ್ಥಿಗಳಿಗಾಗಿ ಆಡಳಿತದ ಭ್ರಷ್ಟಾಚಾರ ವಿರುದ್ಧ ತಿರುಗಿ ಬಿದ್ದ ಪರಿಣಾಮ ಬೆಂಗಳೂರು ವಿವಿ ಕುಲಪತಿ ಸ್ಥಾನ ಜಿಎಸ್ಸೆಸ್‌ಗೆ ದೂರವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ.ಜಿಎಸ್ಸೆಸ್ ವಿಶ್ವಸ್ತ ಮಂಡಳಿಯ ಕಾರ್ಯದರ್ಶಿಯೂ ಆಗಿರುವ ಖ್ಯಾತ ಅಂಕಣಕಾರ ಶೂದ್ರ ಶ್ರೀನಿವಾಸ್, ಸಾಹಿತಿ ಡಾ.ಎಸ್. ನಟರಾಜ ಬೂದಾಳು, ಗಾಯಕ ವೈ.ಕೆ.ಮುದ್ದಕೃಷ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News