ನ್ಯಾಡ್-ಡಿಜಿಲಾಕರ್ ನಲ್ಲಿ ಶೈಕ್ಷಣಿಕ ದಾಖಲೆಗಳ ಅಪ್ಲೋಡ್ ಗೆ ವಿವಿಗಳ ನಿರಾಸಕ್ತಿ!

Update: 2024-01-05 04:53 GMT

ಬೆಂಗಳೂರು: ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳು ನ್ಯಾಷನಲ್ ಅಕಾಡಮಿಕ್ ಡೆಪೋಸಿಟರಿ (ನ್ಯಾಡ್)- ಡಿಜಿಲಾಕರ್ನಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಡಿಜಿಟಲ್ ರೂಪದಲ್ಲಿ ಅಪ್ಲೋಡ್ ಮಾಡಲು ನಿರಾಸಕ್ತಿ ತೋರುತ್ತಿರವ ಕಾರಣ ಅರ್ಹ ಪದವೀಧರರು ‘ಯುವನಿಧಿ’ ಯೋಜನೆಗೆ ಅರ್ಜಿ ಸಲ್ಲಿಸಲು ತೊಂದರೆಯನ್ನು ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ.

ಕಾಂಗ್ರೆಸ್ ಸರಕಾರವು ನಿರುದ್ಯೋಗ ಭತ್ತೆಯನ್ನು ನೀಡುವ ಸಲುವಾಗಿ ಯುವನಿಧಿ ಯೋಜನೆಯನ್ನು ಜಾರಿ ಮಾಡಿದೆ. ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ವಿಶ್ವವಿದ್ಯಾನಿಯಲಗಳು ನ್ಯಾಡ್-ಡಿಜಿಲಾಕರ್ನಲ್ಲಿ ಶೈಕ್ಷಣಿಕ ದಾಖಲೆಗಳನ್ನು ಸಂಗ್ರಹಿಸಿ ಇಡಬೇಕಾಗುತ್ತದೆ. ಆದರೆ ಬಹುತೇಕ ವಿಶ್ವವಿದ್ಯಾನಿಲಯಗಳು ನ್ಯಾಡ್-ಡಿಜಿಲಾಕರ್ನಲ್ಲಿ ಶೈಕ್ಷಣಿಕ ದಾಖಲೆಗಳನ್ನು ಸಂಗ್ರಹಿಸಿಲ್ಲ. ಹಾಗಾಗಿ ಯುವನಿಧಿಗೆ ಅರ್ಜಿಗಳನ್ನು ಸಲ್ಲಿಸಲು ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.

ಅಲ್ಲದೆ, ಉನ್ನತ ಶಿಕ್ಷಣ ಇಲಾಖೆಯು ನ್ಯಾಡ್-ಡಿಜಿಲಾಕರ್ನ ಕುರಿತು ತಪ್ಪಾಗಿ ಆದೇಶ ಮಾಡಿ ವಿಶ್ವವಿದ್ಯಾನಿಲಯಗಳ ದಿಕ್ಕು ತಪ್ಪಿಸಿದೆ. ವಿಶ್ವವಿದ್ಯಾನಿಲಯಗಳು 2023-24ನೇ ಶೈಕ್ಷಣಿಕ ಸಾಲಿನಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಅಂಕಪಟ್ಟಿ, ಪ್ರಮಾಣ ಪತ್ರ ಮತ್ತು ಇನ್ನಿತರ ಶೈಕ್ಷಣಿಕ ದಾಖಲೆಗಳನ್ನು ನ್ಯಾಡ್-ಡಿಜಿಲಾಕರ್ನಲ್ಲಿ ಸಂಗ್ರಹಿಸಿ ಇಡುವಂತೆ ಉನ್ನತ ಶಿಕ್ಷಣ ಇಲಾಖೆಯು ಆದೇಶಿಸಿದೆ. ಹೀಗಾಗಿ ವಿವಿಗಳು 2022-23ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಮಾಹಿತಿಯನ್ನು ನ್ಯಾಡ್-ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡಿಲ್ಲ.

ಯುವನಿಧಿ ಯೋಜನೆಗೆ 2022-23ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಭ್ಯರ್ಥಿಯ ಪದವಿ/ಡಿಪ್ಲೊಮಾ ಹೊಂದಿರುವ ಸ್ಥಿತಿಯ ಬಗ್ಗೆ ಪರಿಶೀಲಿಸಲು ನ್ಯಾಡ್-ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡಲಾದ ಅಭ್ಯರ್ಥಿಗಳ ಪದವಿ, ಡಿಪ್ಲೊಮಾ ಪ್ರಮಾಣ ಪತ್ರವನ್ನು ಅಥವಾ ತಾತ್ಕಾಲಿಕ ಪದವಿ/ಡಿಪ್ಲೊಮಾ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದು ಎಂದು ‘ಯುವನಿಧಿ’ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ಅರ್ಹ ಅಭ್ಯರ್ಥಿಗಳ ದಾಖಲೆಗಳನ್ನು ನ್ಯಾಡ್-ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡದ ಕಾರಣ ಸ್ನಾತಕೋತ್ತರ ಪದವಿ ಪೂರೈಸಿದ ಅರ್ಹ ಅಭ್ಯರ್ಥಿಗಳು ಇಕ್ಕಟಿಗೆ ಸಿಲುಕಿದ್ದಾರೆ.

ಫಲಿತಾಂಶ ಪ್ರಕಟನೆಯಾದ ದಿನದಿಂದ ವಾರದೊಳಗೆ ವಿದ್ಯಾರ್ಥಿಗಳ ಪ್ರಮಾಣ ಪತ್ರಗಳನ್ನು ಅಥವಾ ತಾತ್ಕಾಲಿಕ ಪ್ರಮಾಣ ಪತ್ರಗಳು ನ್ಯಾಡ್-ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡಲಾಗಿರುವುದನ್ನು ವಿವಿಗಳು ಮತ್ತು ಮಂಡಳಿಗಳು ಖಚಿತಪಡಿಸಿಕೊಳ್ಳಬೇಕೆಂದು ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಆದರೆ, ಬೆಂಗಳೂರು ಉತ್ತರ ವಿವಿಯು ಡಿಸೆಂಬರ್ ಮೊದಲ ವಾರದಲ್ಲಿಯೇ ಫಲಿತಾಂಶವನ್ನು ಪ್ರಕಟಿಸಿದ್ದರೂ, ಮಾಹಿತಿಯನ್ನು ನ್ಯಾಡ್-ಡಿಜಿಲಾಕರ್ನಲ್ಲಿ ಹಾಕಿಲ್ಲ. ದಾಖಲೆಗಳನ್ನು ನ್ಯಾಡ್-ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡದಿದ್ದರೆ, ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.

ನೋಂದಾಯಿತ ಅಭ್ಯರ್ಥಿಗಳ ಮಾಹಿತಿಯನ್ನು ನ್ಯಾಡ್-ಡಿಜಿಲಾಕರ್ ಮೂಲಕ ಪರಿಶೀಲಿಸಲಾಗುವುದು. ಪದವಿ/ಡಿಪ್ಲೊಮಾದ ಪ್ರಮಾಣ ಪತ್ರಗಳನ್ನು ಮ್ಯಾನುವಲ್ ಆಗಿ ಅಪ್ಲೋಡ್ ಮಾಡಿದರೆ, ಅಪ್ಲೋಡ್ ಮಾಡಿದ ದಾಖಲೆಗಳ ವಿವರಗಳನ್ನು ಆಯಾ ವಿಶ್ವ ವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಅವರಿಗೆ ರವಾನಿಸಿ, ಅವರಿಗೆ ಲಾಗಿನ್ ಅನ್ನು ನೀಡಲಾಗುತ್ತದೆ. ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ಅದನ್ನು ಪರಿಶೀಲಿಸಿ, 5 ದಿನಗಳ ಕೆಲಸದ ಅವಧಿಯಲ್ಲಿ ನ್ಯಾಡ್-ಡಿಜಿಲಾಕರ್ನಲ್ಲಿ ಅದನ್ನು ಅಪ್ಲೋಡ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಹೀಗಾಗಿ ನ್ಯಾಡ್-ಡಿಜಿಲಾಕರ್ ಯುವನಿಧಿ ಯೋಜನೆಗೆ ಕಡ್ಡಾಯವಾಗಿದೆ. ಆದರೆ ಯುವ ನಿಧಿಯ ಬಗ್ಗೆ ಹಾಗೂ ನ್ಯಾಡ್-ಡಿಜಿಲಾಕರ್ನ ಬಗ್ಗೆ ಮಾಹಿತಿಯು ರಾಜ್ಯದ ಕೆಲ ವಿಶ್ವವಿದ್ಯಾನಿಲಯದ ಅಧಿಕಾರಿಗೆ ತಿಳಿಯದೆ ಇರುವ ಕಾರಣ ವಿದ್ಯಾರ್ಥಿಗಳು ಯೋಜನೆಯನ್ನು ಪಡೆಯಲು ಪರದಾಡುತ್ತಿದ್ದಾರೆ.

ಉನ್ನತ ಶಿಕ್ಷಣ ಸಚಿವರ ಕ್ಷೇತ್ರದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವು ವಿದ್ಯಾರ್ಥಿಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಅಂಕಪಟ್ಟಿ, ಪ್ರಮಾಣ ಪತ್ರ ಮತ್ತು ಇನ್ನಿತರ ಶೈಕ್ಷಣಿಕ ದಾಖಲೆಗಳನ್ನು ನ್ಯಾಡ್-ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡಿಲ್ಲ ಎಂದು ತಿಳಿದು ಬಂದಿದೆ. ನ್ಯಾಡ್-ಡಿಜಿಲಾಕರ್ನಲ್ಲಿ ದಾಖಲೆಗಳನ್ನು ಸಲ್ಲಿಸುವಂತೆ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಯುವನಿಧಿಗೆ ಅರ್ಜಿಯನ್ನು ಸಲ್ಲಿಸಲು ನಾನು ಅರ್ಹನಾಗಿದ್ದರೂ, ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆನ್ಲೈನ್ ಅರ್ಜಿಯನ್ನು ಭರ್ತಿ ಮಾಡುವಾಗ ವಿಶ್ವವಿದ್ಯಾನಿಲಯದ ಹೆಸರನ್ನು ನಮೂದು ಮಾಡಿ, ನನ್ನ ರಿಜಿಸ್ಟರ್ ನಂಬರ್ ಅನ್ನು ಹಾಕಿದರೆ, ಅದು ತೆಗೆದುಕೊಳ್ಳುತ್ತಿಲ್ಲ. ನ್ಯಾಡ್-ಡಿಜಿಲಾಕರ್ನಲ್ಲಿ ನಿಮ್ಮ ಮಾಹಿತಿ ಇಲ್ಲ ಎಂದು ಮೆನು ಬರುತ್ತಿದೆ. ಹಾಗಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದರೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು ನ್ಯಾಡ್-ಡಿಜಿಲಾಕರ್ನಲ್ಲಿ ಮಾಹಿತಿ ತುಂಬಬೇಕು ಎಂದು ತಿಳಿಸುತ್ತಿದ್ದಾರೆ.

ಮೋಹನ್, ಬೆಂಗಳೂರು ಉತ್ತರ ವಿವಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿ

ದಾಖಲೆಗಳನ್ನು ಅಪ್ಲೋಡ್ ಮಾಡಲು ಕ್ರಮ

ಈಗಾಗಲೇ ಎಲ್ಲ ಪದವಿ ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣ ಪತ್ರ ಮತ್ತು ಇನ್ನಿತರ ಶೈಕ್ಷಣಿಕ ದಾಖಲೆಗಳನ್ನು ನ್ಯಾಡ್-ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಹೀಗಾಗಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಯುವನಿಧಿಗೆ ಅರ್ಜಿ ಸಲ್ಲಿಸಿದ್ದಾರೆ. ಜ.5 ಸಂಜೆಯೊಳಗೆ 2022-23ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳ ಅಂಕಪಟ್ಟಿ, ಪ್ರಮಾಣ ಪತ್ರ ಮತ್ತು ಇನ್ನಿತರ ಶೈಕ್ಷಣಿಕ ದಾಖಲೆಗಳನ್ನು ನ್ಯಾಡ್-ಡಿಜಿಲಾಕರ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ’ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ಪ್ರಕಾಶ್ ಅವರಡ್ಡಿ

contributor

Similar News