ಕನ್ನಡಕ್ಕೆ ಗೌರವ ತಂದ ತಿಥಿ

Update: 2016-02-08 14:15 GMT

ತಿಥಿ ಸಾಧಾರಣವಾಗಿ ಎಲ್ಲ ಮುಗಿದ ಬಳಿಕ ಮಾಡುವ ಸಂಸ್ಕಾರ. ಆದರೆ ಕನ್ನಡ ಚಿತ್ರೋದ್ಯಮದ ಪಾಲಿಗೆ ‘ತಿಥಿ’ ಎನ್ನೋದು ಒಂದು ಆರಂಭವಾಗಿದೆ. ಹೌದು. ರಾಮ್‌ರೆಡ್ಡಿ ನಿರ್ಮಾಣದ ‘ತಿಥಿ’ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರೋದ್ಯಮದ ಹೆಸರನ್ನು ಎತ್ತಿ ಹಿಡಿದಿದೆ.2015ರ ಆಗಸ್ಟ್ ನಲ್ಲಿ ಗೋಲ್ಡನ್ ಲಿಯೊಪಾರ್ಡ್ ಹಾಗೂ ಲೊಕ್ಯಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಕಥಾಚಿತ್ರ ಪ್ರಶಸ್ತಿ ಪಡೆದಿರುವ ಈ ಚಿತ್ರ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳ ಸ್ಪರ್ಧಾ ವಿಭಾಗದಲ್ಲೂ ಪ್ರಶಸ್ತಿ ಗಳಿಸಿದ ಸಾಧನೆ ಮಾಡಿದೆ.

ಲೊಕ್ಯಾರ್ನೊ ಚಿತ್ರೋತ್ಸವದಲ್ಲಿ ರೆಡ್ಡಿಯವರ ಈ ಚಿತ್ರ ಎರಡು ಅಗ್ರ ಪ್ರಶಸ್ತಿಗಳನ್ನು ಗೆದ್ದು, ಕನ್ನಡ ಚಿತ್ರರಂಗಕ್ಕೆ 43 ವರ್ಷಗಳಿಂದ ಒಲಿಯದಿದ್ದ ಗೌರವ ಹೆಗ್ಗಳಿಕೆಯನ್ನು ತಂದುಕೊಟ್ಟಿತು. ವಿಶ್ವದ ಅತ್ಯಂತ ಹಳೆಯ ಚಲನಚಿತ್ರೋತ್ಸವ ಎನಿಸಿದ ಲೊಕ್ಯಾರ್ನೊ ಚಿತ್ರೋತ್ಸವದಲ್ಲಿ ಪಟ್ಟಾಭಿರಾಮ ರೆಡ್ಡಿ ನಿರ್ದೇಶನದ ‘ಸಂಸ್ಕಾರ’ ಪ್ರಶಸ್ತಿ ಪಡೆದದ್ದೇ ಕನ್ನಡ ಚಿತ್ರರಂಗಕ್ಕೆ ಸಂದ ಕೊನೆಯ ಗೌರವ. ಸಂಸ್ಕಾರದ ಬಳಿಕ ಇದೀಗ ‘ತಿಥಿ’ಗೆ ಈ ಗೌರವ ಸಿಕ್ಕಿತೆ. ‘ಸಂಸ್ಕಾರ’ ಹಾಗೂ ‘ತಿಥಿ’ ಎರಡೂ ಸಮಾನಾರ್ಥಗಳುಳ್ಳ ಹೆಸರಾಗಿರುವುದು ಒಂದು ಕಾಕತಾಳೀಯವೂ ಆಗಿದೆ. ಲೊಕ್ಯಾರ್ನೊ ಚಿತ್ರೋತ್ಸವದಲ್ಲಿ ತಿಥಿ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಇದುವರೆಗೆ ಚಿತ್ರಕ್ಕೆ ಸಿಕ್ಕ ಸ್ಪಂದನೆಯಿಂದ ರೆಡ್ಡಿ ಖುಷಿಯಾಗಿದ್ದಾರೆ. ಬಿಐಎಫ್‌ಎಫ್ ಚಿತ್ರೋತ್ಸವಗಳಲ್ಲಿ ತಿಥಿ ಏಷ್ಯನ್ ಚಿತ್ರವಿಭಾಗದಲ್ಲಿ ಸ್ಪರ್ಧಿಸುತ್ತಿದೆ. 101 ವರ್ಷದ ಗೌಡನ ಸಾವಿನೊಂದಿಗೆ ಚಿತ್ರ ಅನಾವರಣಗೊಳ್ಳುತ್ತದೆ. ಮಂಡ್ಯ ಸಮೀಪದ ಒಂದು ಗ್ರಾಮದಲ್ಲಿ ವಾಸಿಸುವ ಕುಟುಂಬವೊಂದರ ಮೂರು ತಲೆಮಾರುಗಳ ಬದುಕಿನ ಸುತ್ತ ಚಿತ್ರ ಹೆಣೆಯಲಾಗಿದೆ.

ಈ ಚಿತ್ರದ ಪಾತ್ರಗಳನ್ನು ನಿರ್ವಹಿಸಿದವರು ವೃತ್ತಿಪರ ಕಲಾವಿದರಲ್ಲ. ಅದಾಗ್ಯೂ ಈ ಗ್ರಾಮ ಕಲಾವಿದರು ಚಿತ್ರಕ್ಕೆ ಸರಿಸಾಟಿಯಿಲ್ಲದ ನಿಖರತೆಯನ್ನು ಒದಗಿಸಿದ್ದಾರೆ. ಮೂರು ತಲೆಮಾರುಗಳ ಮಕ್ಕಳಲ್ಲಿನ ವೈರುದ್ಧ್ಯಗಳ ಸುತ್ತ ಚಿತ್ರ ಸುತ್ತುತ್ತದೆ. ಈ ಪೈಕಿ ಎರಡು ಪೀಳಿಗೆಗಳು ಭೌತಿಕ ಆಕಾಂಕ್ಷೆಗಳಿಗೆ ಹಾತೊರೆಯುತ್ತಿದ್ದರೆ, ಒಂದು ಪೀಳಿಗೆ ಮಾತ್ರ ಆಕಾಂಕ್ಷೆಗಳ ಸಂಕೋಲೆಯಿಂದ ಮುಕ್ತವಾಗಿದೆ. ಪಾತ್ರಗಳ ನಡುವಿನ ವೈರುದ್ಧ್ಯವೇ ರಾಮ್ ಅವರ ಚಿತ್ರಕ್ಕೆ ಪ್ರೇರಣೆ.

ತಿಥಿ ಚಿತ್ರ ನಿರ್ಮಾಣಕ್ಕೆ ರಾಮ್ ಮುಂದಾಗಿದ್ದು ಕೂಡಾ ಆಕಸ್ಮಿಕ. ಐದು ವರ್ಷಗಳ ಹಿಂದೆ ಅವರು, ಸ್ನೇಹಿತ ಯೆರೇಗೌಡ ಎಂಬವರ ಭೇಟಿಗೆ ಮಂಡ್ಯ ಜಿಲ್ಲೆ ಕೆ.ಆರ್.ನಗರ ತಾಲೂಕಿನ ನೊದೇನಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿದ್ದರು. ಯೆರೇಗೌಡ ಈ ಚಿತ್ರದ ಸಹಲೇಖಕ. ಇಟ್ ರೈನ್ಸ್ ಇನ್ ಮಾಯಾ ಕಾದಂಬರಿ ಬರೆದಿದ್ದ ಸ್ನೇಹಿತನ ಕಾರಣದಿಂದ ಆ ಸ್ಥಳದ ಬಗ್ಗೆ ರಾಮ್‌ಗೆ ವಿಶೇಷ ಒಲವು. ಈ ಸ್ಥಳವೇ ಹೊಸ ಚಿತ್ರವೊಂದರ ಕನಸು ಕುಡಿಯೊಡೆಯಲು ಸ್ಫೂರ್ತಿ ನೀಡಿದ ತಾಣ. ತಿಥಿ ಎನ್ನುವುದು ಸತ್ತ ಬಳಿಕದ ಧಾರ್ಮಿಕ ಕ್ರಿಯೆಯಾಗಿದ್ದರೂ, ಚಿತ್ರ ವಾಸ್ತವವಾಗಿ ಸಾವಿನ ಬಗ್ಗೆ ಇರುವುದಲ್ಲ. ಇದು ಜೀವನಕ್ಕೆ ತಳಹದಿಯಾಗಿದ್ದು, ಇದರ ಆಧಾರದಲ್ಲಿ ಚಿತ್ರ ನಿರ್ಮಿಸಲಾಗಿದೆ ಎಂದು ರಾಮ್ ಹೇಳುತ್ತಾರೆ.

ಹಾಲೆಂಡ್‌ನ ಡೊರೊನ್ ಟೆಂಪೆರ್ಟ್, ಅಮೆರಿಕದ ಜಾನ್ ಝಿಂಬರ್‌ಮನ್ ಹಾಗೂ ಕೊರಿಯಾ ಮೂಲದ ಅಮೆರಿಕನ್ ಸುಮಿನ್ ಪಾರ್ಕ್ ಅವರ ಸಹಕಾರದಿಂದ ಈ ಚಿತ್ರ ಅಂತಾರಾಷ್ಟ್ರೀಯ ವರ್ತುಲದಲ್ಲಿ ಜನಪ್ರಿಯವಾಗಿತ್ತು.

. ಈ ಚಿತ್ರದ ಯಶಸ್ಸು ನನ್ನ ಜೀವನದಲ್ಲಿ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದೆ. ಜನ ನನ್ನ ಕಾರ್ಯವನ್ನು ಹೆಚ್ಚು ಗಂಭೀರತೆಯಿಂದ ಪರಿಗಣಿಸುತ್ತಾರೆ. ಇದರಿಂದ ಸೃಜನಾತ್ಮಕ ವಹಿವಾಟಿನಲ್ಲಿ ಭವಿಷ್ಯದಲ್ಲಿ ನನಗೆ ಅವಕಾಶಗಳು ಹೆಚ್ಚಲಿವೆ. ಇದು ನನ್ನ ವೃತ್ತಿ ಆರಂಭದಲ್ಲಿ ಸಿಕ್ಕ ಅತಿ ದೊಡ್ಡ ಉಡುಗೊರೆ.

Writer - ವಿಸ್ಮಯ

contributor

Editor - ವಿಸ್ಮಯ

contributor

Similar News