ದೇಶದ್ರೋಹಿಗಳು ಯಾರು?
ದಿಲ್ಲಿಯ ಮಾತ್ರವಲ್ಲ, ದೇಶದ ಪ್ರತಿಷ್ಠಿತ ವಿಶ್ವ ವಿದ್ಯಾ ನಿಲಯಗಳಲ್ಲೊಂದಾದ ಜವಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಸಂಕ್ಷಿಪ್ತವಾಗಿ ಜೆಎನ್‌ಯು ಈಗ ಸುಳ್ಳುಕಾರಣಗಳಿಗಾಗಿ ಸುದ್ದಿಯಲ್ಲಿದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯು ಅಫ್ಝಲ್ ಗುರುವಿನ ನೆನಪಲ್ಲಿ ಕಾರ್ಯಕ್ರಮವೊಂದನ್ನು ರೂಪಿಸಿ ಅದರಲ್ಲಿ ಕೆಲವರು ದೇಶದ ವಿರುದ್ಧ ಘೋಷಣೆಗಳನ್ನು ಕೂಗಿದರೆಂಬುದಕ್ಕಾಗಿ ದಿಲ್ಲಿ ಪೊಲೀಸರು ವಿಶ್ವವಿದ್ಯಾನಿಲಯದ ಆವರಣದೊಳಗೆ ದಾಳಿ ಮಾಡಿ ಅಲ್ಲಿನ ವಿದ್ಯಾರ್ಥಿ ಮುಖಂಡ ಕನ್ಹಾಯ್ಯಾ ಕುಮಾರ್‌ರನ್ನು ದೇಶದ್ರೋಹದ ಆಪಾದನೆಯ ಮೇರೆಗೆ ಬಂಧಿಸಿದ್ದಾರೆ. ವಿದ್ಯಾರ್ಥಿ ಸಂಘಟನೆ ಮತ್ತು ಪ್ರಾಧ್ಯಾಪಕ ವೃಂದವು ಈ ಘಟನೆಯನ್ನು ಖಂಡಿಸಿದರೆ, ಉಪಕುಲಪತಿಗಳು ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಆದರೆ ಈಗಾಗಲೇಪೊಲೀಸರ ಕೈಗೆ ಎಲ್ಲ ಅಧಿಕಾರವನ್ನು ನೀಡಿದ ನಂತರ ತನಿಖೆ ನಡೆಯುವುದಾದರೂ ಯಾಕೆ? ವಿದ್ಯಾರ್ಥಿ ನಾಯಕನ ಬಂಧನವನ್ನು ಅನೇಕ ರಾಜಕೀಯ ಮುಖಂಡರು- ಮುಖ್ಯವಾಗಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಟೀಕಿಸಿವೆ ಮಾತ್ರವಲ್ಲ, ವಿಶ್ವವಿದ್ಯಾನಿಲಯದೊಳಗೆ ಪೊಲೀಸರ ಪ್ರವೇಶವು ಅಕ್ರಮ ಹಾಗೂ ಇದು ಕೇಂದ್ರ ಸರಕಾರದ ನೇರ ಹಸ್ತಕ್ಷೇಪವೆಂದು ಆಪಾದಿಸಿವೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರ ಮತ್ತು ಅದರ ಎಡಬಲಕ್ಕಿರುವ ಭಾಜಪ, ಸಂಘ ಪರಿವಾರ ಮತ್ತು ವಿದ್ಯಾರ್ಥಿ ಸಂಘಟನೆ ಅಭಾವಿಪ(ತ್ತು) ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡು ಇನ್ನೂ ಉಗ್ರಕ್ರಮವನ್ನು ನಡೆಸುವುದಾಗಿ ಎಚ್ಚರಿಸಿವೆ. ಜೆಎನ್‌ಯು ನಲ್ಲಿರುವ ದೇಶದ್ರೋಹಿಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಶಿಕ್ಷೆವಿಧಿಸಬೇಕೆಂದು ಒತ್ತಾಯಿಸಿವೆ. ಇಂಡಿಯಾದಲ್ಲಿ ಅಧಿಕಾರದಲ್ಲಿರುವವರು ಯಾರು ಮತ್ತು ಆಡಳಿತ ನಡೆಸುವವರು ಯಾರು ಎಂಬುದನ್ನು ಪತ್ತೆಹಚ್ಚಬೇಕಾಗಿದೆ. ಈ ಪ್ರಕರಣದಲ್ಲಿ ದೇಶದ್ರೋಹ ಯಾವುದೆಂಬುದು ಪೊಲೀಸರಿಗೂ ಅವರಿಗೆ ಕುಮ್ಮಕ್ಕು ನೀಡಿದ ಆಡಳಿತ-ವ್ಯವಸ್ಥಾಪಕ ದುಷ್ಟಶಕ್ತಿಗಳಿಗೆ ಮಾತ್ರ ಗೊತ್ತಿರ ಬಹುದು. ಕಾನೂನು ಮತ್ತು ನ್ಯಾಯಪರವಾದ ಮನಸ್ಸುಗಳಿಗೆ ಈ ಪ್ರಕರಣವು ಇಷ್ಟೊಂದು ಗಂಡಾಂತರಕಾರಿ ಸ್ಥಿತಿಯನ್ನು ತಲುಪಿದ್ದು ವಿಷಾದವನ್ನುಂಟುಮಾಡುತ್ತಿದೆ. ಕಣ್ಣೆದುರು ನಡೆಯುವ ಯಾವ ಸಂಗತಿಗಳ ಕುರಿತಾದರೂ ಅಭಿವ್ಯಕ್ತಿಸಿ: ಅದು ಒಂದಿಲ್ಲೊಂದು ರಾಜಕೀಯ ಬಣ್ಣ ಪಡೆ ಯುತ್ತದೆ. ಯಾವುದೇ ಸೈದ್ಧಾಂತಿಕ ಹೋರಾಟದಲ್ಲಿ ರಾಜಕಾರಣಿಗಳು ಪ್ರವೇಶಿಸುವುದು ಪ್ರಜಾತಂತ್ರದ ಲಕ್ಷಣ ಗಳಲ್ಲೊಂದು. ಅವರ ಉದ್ದೇಶವೇನಿರಬಹುದು ಎಂಬುದು ಊಹೆಗೆ ಬಿಟ್ಟದ್ದು. ಆದರೆ ರಾಜಕಾರಣ ಪ್ರವೇಶವಾಗದಿದ್ದರೆ ಎಲ್ಲ ಬಗೆಯ ಹೋರಾಟಗಳೂ ನಿರರ್ಥಕವಾಗುತ್ತವೆ. ಗಾಂಧೀಜಿಯ ಸ್ವಾತಂತ್ರ್ಯ ಹೋರಾಟವೂ ಕಾಂಗ್ರೆಸ್‌ನಂತಹ ರಾಜಕೀಯ ಪಕ್ಷದ ಬೆಂಬಲದೊಂದಿಗೆ ವ್ಯಾಪಕತೆಯನ್ನು ಪಡೆದದ್ದು. ಆದ್ದರಿಂದ ರಾಜಕೀಯವು ಪ್ರವೇಶಿಸಿತೆಂದಾಕ್ಷಣ ಹೋರಾಟಗಳು ರಾಜಕೀಯ ಕಾರಣದವು ಎಂದು ತಿಳಿಯು ವುದು ತಪ್ಪಾಗುತ್ತದೆ. ಎಲ್ಲ ಬಗೆಯ ಚಿಂತನೆಗಳೂ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯವೇ. ಅವನ್ನು ಗೌರವಿಸಬೇ ಕಾದದ್ದು ಅವುಗಳ ಸೈದ್ಧಾಂತಿಕತೆಯ ಮತ್ತು ಪ್ರಾಮಾಣಿಕತೆಯಆಧಾರದಲ್ಲಿ. ಬರಿಯ ರಾಜಕೀಯ ಘೋಷಣೆಗಳಿಗೂ ಚಿಂತನಪರವಾದ ಯೋಚನೆಗಳಿಗೂ ಅಪಾರ ಅಂತರವಿ ರುತ್ತದೆ. ಇದು ಬಹುಪಾಲು ಮಂದಿಗೆ ಅರ್ಥವಾಗುವುದಿಲ್ಲ. ಈ ಅಜ್ಞಾನದಿಂದಲೇ ಜನರು ಗಿರೀಶ್ ಕಾರ್ನಾಡ್, ಅನಂತ ಮೂರ್ತಿ ಮುಂತಾದವರ ವ್ಯಕ್ತಿತ್ವ ಮತ್ತು ಕೊಡುಗೆಯನ್ನು ಅರಿಯುವ ಗೋಜಿಗೆ ಹೋಗದೆ ಬೇಕಾಬಿಟ್ಟಿ ಟೀಕಿಸಿದ್ದು. ಮಹಾನ್ ವ್ಯಕ್ತಿಗಳನ್ನು ದೇಶದ್ರೋಹಿಗಳೆಂದು ಕರೆದದ್ದು ಇತಿಹಾಸದ ಪುಟಗಳಲ್ಲಿ ಅನೇಕವಿವೆ. ತತ್ವಜ್ಞಾನಿ ಸಾಕ್ರೆಟಿಸ್, ಖಗೋಳ ಶಾಸ್ತ್ರಜ್ಞ ಗೆಲಿಲಿಯೋ, ಆಮ್ಲಜನಕದ ಸಂಶೋಧಕ ಲವಾಶಿಯೆ, ನಮ್ಮದೇ ನೆಲದ ಬಾಲಗಂಗಾಧರ ತಿಲಕ್, ಗಾಂಧೀಜಿ, ಇವರೆಲ್ಲರೂ ದೇಶದ್ರೋಹದ ಆಪಾದನೆಗೆ ಗುರಿಯಾದವರೇ. (ಹಾಗೆಂದು ದೇಶದ್ರೋಹದ ಆಪಾದನೆಗೆ ಗುರಿಯಾದವರೆಲ್ಲರೂ ಮಹಾನುಭಾವರೆಂದಲ್ಲ.) ಇಷ್ಟಕ್ಕೂ ದೇಶದ್ರೋಹವೆಂದರೇನು? ನಾವಿಂದು ಕಾಣುತ್ತಿರುವುದು ಭಾರತೀಯ ದಂಡ ಸಂಹಿತೆಯ ಕಲಂ 124ಎಯಲ್ಲಿನ ನಿರೂಪಣೆ. ಇದರನ್ವಯ ದೇಶದ್ರೋಹ ಎಂಬುದು ಮಾತಿನ ಅಥವಾ ಬರಹದ ಪದಗಳ ಅಥವಾ ಸಂಜ್ಞೆಗಳ ಅಥವಾ ದೃಶ್ಯ ಸಂಕೇತಗಳ ಮೂಲಕ, ಇಲ್ಲವೇ ಇತರ ರೀತಿಯಲ್ಲಿ, ದ್ವೇಷ ಇಲ್ಲವೇ ನಿಂದನೆಯನ್ನು ಉಂಟು ಮಾಡುವುದು ಅಥವಾ ಉಂಟುಮಾಡಲು ಪ್ರಯತ್ನಿಸುವುದು ಅಥವಾ ಇಂಡಿಯಾದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಸರಕಾರದ ವಿರುದ್ಧ ಅತೃಪ್ತಿಯನ್ನು ಉತ್ತೇಜಿಸುವುದು ಅಥವಾ ಉತ್ತೇಜಿಸಲು ಪ್ರಯತ್ನಿಸುವುದು. ಈ ಕಲಂಗೆ ವಿವರಣೆಯನ್ನು ನೀಡಲಾಗಿದೆ: 1.ಅತೃಪ್ತಿ ಎಂದರೆ ರೂಢಿಯ ಅತೃಪ್ತಿಯಲ್ಲ; ಬದಲಾಗಿ ಅವಿಧೇಯತೆ ಮತ್ತು ವೈರದ ಭಾವನೆಗಳು. 2.ದ್ವೇಷ, ನಿಂದನೆ ಅಥವಾ ಅತೃಪ್ತಿಯನ್ನು ಉತ್ತೇಜಿಸುವ ಅಥವಾ ಹಾಗೆ ಪ್ರಯತ್ನಿಸುವ ಹಾಗಿಲ್ಲದ ಸರಕಾರದ ಕ್ರಮಗಳ ಕುರಿತು ಅವುಗಳನ್ನು ಬದಲಾಯಿಸುವ ಉದ್ದೇ ಶದಿಂದ ಕಾನೂನುಸಮ್ಮತವಾದ ರೀತಿ ಯಲ್ಲಿ ಮಾಡಿದ ಟೀಕೆಗಳು ಈ ಕಲಮಿನಡಿ ಅಪರಾಧವಾ ಗುವುದಿಲ್ಲ.
3.ಸರಕಾರದ ಆಡಳಿತಾತ್ಮಕ ಅಥವಾ ಇತರ ಕ್ರಮಗಳನ್ನು ಒಪ್ಪದೆಯೂ ದ್ವೇಷ, ನಿಂದನೆ ಅಥವಾ ಅತೃಪ್ತಿಯನ್ನು ಉತ್ತೇಜಿಸುವ ಅಥವಾ ಹಾಗೆ ಪ್ರಯತ್ನಿಸುವ ಹಾಗಿಲ್ಲದ ಟೀಕೆಗಳು ಈ ಕಲಮಿನಡಿ ಅಪರಾಧವಾಗುವುದಿಲ್ಲ.
ಈ ಕಲಮು ಎಲ್ಲವನ್ನೂ ಹೇಳಿದಂತಿಲ್ಲವೆಂಬುದು ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಅನೇಕ ತೀರ್ಪುಗಳು ಸಾಬೀತು ಮಾಡುತ್ತವೆ. ಮುಖ್ಯವಾಗಿ ಹಿಂಸೆಗೆ ಕುಮ್ಮಕ್ಕು ನೀಡುವ ಕ್ರಮಗಳಷ್ಟೇ ದೇಶದ್ರೋಹವಾಗುತ್ತವೆ. ಹಿಂಸೆಗೆ ಕರೆ ಕೊಡದ ಯಾವ ಟೀಕೆಯೂ ಈ ಪರಿಧಿಯೊಳಗೆ ಬರುವು ದಿಲ್ಲ. ರಾಜಕೀಯ ವಿಚಾರಗಳ ಕುರಿತ ಟೀಕೆ ದೇಶದ್ರೋಹವಾ ಗುವುದಿಲ್ಲ. ತೀರ್ಪಿನ ಟೀಕೆಯೂ ದೇಶದ್ರೋಹವಾಗುವು ದಿಲ್ಲ. ಹಾಗಲ್ಲದಿದ್ದರೆ ದಿನ ನಿತ್ಯ ವಿರೋಧಪಕ್ಷಗಳು ಮಾಡು ವ ಟೀಕೆ, ಚುನಾವಣಾ ಭಾಷಣಗಳು, ಪತ್ರಿಕೆಗಳಲ್ಲಿ ಬರುವ ಅನೇಕ ಲೇಖನಗಳು, ಸಂಪಾದಕೀಯಗಳು- ದೇಶ ದ್ರೋಹಗಳಾಗಬೇಕಿತ್ತು. ಪ್ರಜಾತಂತ್ರದಲ್ಲಿ ಟೀಕೆಗಳು, ಆಕ್ಷೇಪಗಳು, ಎಷ್ಟೇ ಹರಿತವಾಗಿದ್ದರೂ ಅವು ಸಹ್ಯ ಮಾತ್ರ ವಲ್ಲ, ಅಪೇಕ್ಷಣೀಯ ಕೂಡಾ. ಇಲ್ಲವಾದರೆ ಪ್ರಜಾತಂತ್ರದಲ್ಲಿ ಸಂವಿಧಾನ ನೀಡಿದ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಇನ್ನೂ ಒಂದು ಮುಖ್ಯ ಅಂಶವೆಂದರೆ ಸರಕಾರ ಎಂಬ ಪದದ ವಿನ್ಯಾಸ ಮತ್ತು ಮಹತ್ವ. ಇದು ಒಟ್ಟಾರೆ ಆಡಳಿತದ ವೌಲ್ಯವನ್ನು ಹೇಳುತ್ತದೆಯೇ ಹೊರತು ಆಡಳಿತದ ಸೂತ್ರವನ್ನು ಹಿಡಿದ ವ್ಯಕ್ತಿಗಳನ್ನು ಸಂರಕ್ಷಿಸುವ ವ್ಯವಸ್ಥೆಯಲ್ಲ. ಇದಕ್ಕೆ ಅಪವಾದವೆಂದರೆ ರಾಷ್ಟ್ರಪತಿ, ರಾಜ್ಯಪಾಲ ಮುಂತಾದ ಸಂವಿಧಾನಾತ್ಮಕ ಹುದ್ದೆಯಲ್ಲ್ಲಿರುವವರಿಗೆ ಕಾನೂನಿನ ಕ್ರಮಗಳಿಂದ ನೀಡಲಾದ ವಿನಾಯಿತಿ. ಆದ್ದರಿಂದ ದೇಶದ್ರೋಹವೆಂಬುದು ಬಹಳ ಗುರುತರವಾದ ಮತ್ತು ಜವಾಬ್ದಾರಿಯುತವಾಗಿ ಮಾಡಬೇಕಾದ ಆರೋಪ. ಅದನ್ನು ಬೇಕಾಬಿಟ್ಟಿ ಬಳಸುವುದು ಅಧಿಕಾರದ ದುರುಪಯೋಗ.
ದೇಶದ್ರೋಹವೆಂಬುದು ರಾಜದ್ರೋಹವೆಂಬುದರ ರೂಪಾಂತರ. ಅರಸೊತ್ತಿಗೆಯಲ್ಲಿ ಆಳುವವನ ಕುರಿತ ಯಾವುದೇ ಟೀಕೆಯೂ ದಂಡನೆಗೆ ಅವಕಾಶ ನೀಡುತ್ತಿತ್ತು. ತಾನೇ ಎಲ್ಲವೂ ಎಂದು ತಿಳಿದ ಅರಸನಿಗೆ ತನ್ನ ಕುರಿತ ಟೀಕೆ ಸಹ್ಯವಾಗುತ್ತಿರಲಿಲ್ಲ. ಹಾಸ್ಯಪ್ರಜ್ಞೆಯೂ ಇಲ್ಲದ ರಾಜನಿಗಂತೂ ತನ್ನನ್ನು ನೋಡಿ ಯಾರಾದರೂ ನಕ್ಕರೆ ಅದೂ ರಾಜದ್ರೋಹವಾಗುತ್ತಿತ್ತು. ರಾಜಸತ್ತೆ ಅಳಿದು ಪ್ರಜಾತಂತ್ರ ಬಂದಾಗ ಈ ಪಳೆಯು ಳಿಕೆಗಳು ಮತ್ತೆ ಚಿಗುರಬಹುದೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಹಾಗೂ ಊಳಿಗಮಾನ್ಯ ವ್ಯವಸ್ಥೆಗಳು ಇಂತಹ ಕೆಟ್ಟ ಸಂಪ್ರದಾಯವನ್ನು ಇನ್ನೊಂದು ರೀತಿಯಲ್ಲಿ ಸೃಷ್ಟಿಸಿದವು. ಇದೇ ದೇಶದ್ರೋಹವೆಂಬ ಅಪರಾಧದ ಆರೋಪದ ಪ್ರವೇಶಕ್ಕೆ ಕಾರಣವಾಯಿತು. ಬ್ರಿಟಿಷರ ದಂಡ ಸಂಹಿತೆಯಲ್ಲಿ ಕಲಂ 124ಎಯನ್ನು ಜ್ಯಾರಿಮಾಡಲಾಯಿತು. ಇಂಡಿಯಾವನ್ನು ಬ್ರಿಟಿಷರು (ಮತ್ತು ಇತರ ವಸಾಹತುಶಾಹಿ ಆಡಳಿತಗಳು) ಆಳುತ್ತಿದ್ದಾಗ ತಮ್ಮ ಆಳ್ವಿಕೆಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದವರ ವಿರುದ್ಧ ಈ ಕಾನೂನನ್ನು ಪ್ರಯೋಗಿಸಲಾಯಿತು. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರನ್ನು ರಾಜದ್ರೋಹದ ಆಪಾದನೆಗೆ ಸಿಲುಕಿಸಿ ದಂಡಿಸಲಾಯಿತು. ಬಾಲಗಂಗಾಧರ ತಿಲಕರ ಪ್ರಕರಣದಲ್ಲಿ ಹಿಂಸೆಗೆ ಪ್ರೇರಣೆಯೂ ಅನಗತ್ಯವೆಂದು (ಬಿಳಿಯ) ನ್ಯಾಯಾಲಯ ಹೇಳಿತು. ಇದರ ಬಲಿಪಶು ವಾಗಿ ತಿಲಕರು ಮಾಂಡಲೆಯ ಸೆರೆಮನೆ ಸೇರಿದರು. ಮುಂದೆ 1942ರಲ್ಲಿ ನಿಹಾರೇಂದ್ರ ದತ್ತ ಮುಜುಂದಾರ್ ಪ್ರಕರಣದಲ್ಲಿ ಒಕ್ಕೂಟ ನ್ಯಾಯಾಲಯವು ದೇಶದ್ರೋಹವು ಸಾಬೀತಾಗಬೇಕಾದರೆ ಹಿಂಸೆಗೆ ಕುಮ್ಮಕ್ಕು ನೀಡಿದ ಪುರಾವೆ ಯು ಅಗತ್ಯವೆಂದು ಸಾರಿತು. (ಆದರೆ ಈ ತೀರ್ಪನ್ನು 1947ರಲ್ಲಿ ಪ್ರಿವಿ ಕೌನ್ಸಿಲ್ ಅನೂರ್ಜಿತಗೊಳಿಸಿ ಹಿಂಸೆಗೆ ಕುಮ್ಮಕ್ಕು ನೀಡುವುದು ಈ ಆರೋಪದ ಸಾಬೀತಿಗೆ ಅಗತ್ಯ ವಿಲ್ಲವೆಂದು ಸಾರಿತು.) ಆದರೆ ಇಂಡಿಯಾದ ಸರ್ವೋಚ್ಚ ನ್ಯಾಯಾಲಯವು 1962ರಷ್ಟು ಹಿಂದೆಯೇ ಹಿಂಸೆಗೆ ಕುಮ್ಮಕ್ಕು ನೀಡುವುದು ದೇಶದ್ರೋಹದ ಅಗತ್ಯ ಅಂಶವೆಂದು ಹೇಳಿತು. ಈ ತೀರ್ಪು ಈಗಲೂ ಈ ನೆಲದ ಕಾನೂನಾಗಿ ಉಳಿದಿದೆ. ದೇಶದ್ರೋಹದ ಕರಾಳ ಕಾನೂನು ಈ ದೇಶದ ಅನೇಕ ದೇಶಭಕ್ತರನ್ನು ಬಲಿತೆಗೆದುಕೊಂಡದ್ದು ನಮ್ಮ ಸ್ವಾತಂತ್ರ್ಯ ಹೋರಾಟದ ಕಥೆಯನ್ನೋದಿದವರಿಗೆ ಗೊತ್ತು. ಆದರೆ ಇಂಡಿಯಾ ಎಂದಿಗೂ ಪಾಠ ಕಲಿಯದ ದಡ್ಡ ದೇಶ. ಸ್ವಾತಂತ್ರ್ಯಾನಂತರ ಈ ಕಲಮನ್ನು ಭಾರತೀಯ ದಂಡ ಸಂಹಿತೆ ಯಿಂದ ತೆಗೆದು ಹಾಕಬೇಕೆಂದು ಪಂಡಿತ್ ನೆಹರೂ ಬಹಳ ಪ್ರಯತ್ನ ಪಟ್ಟರೂ ಸಾಕಷ್ಟು ಬೆಂಬಲ ಸಿಗದೆ ಅದು ಶಾಸನ ವಾಗಿ ಉಳಿಯಿತು. ವಿಶೇಷವೆಂದರೆ ಬ್ರಿಟಿಷರು ರೂಪಿಸಿದ ಈ ಕಲಮನ್ನು ಅವರೇ 2009ರಲ್ಲಿ ಬ್ರಿಟನ್‌ನಲ್ಲಿ ಅಳಿಸಿದರಾ ದರೂ ಅದು ಇಂಡಿಯಾದಲ್ಲಿ ಅಳಿಯಲಿಲ್ಲ. ಬದಲಾಗಿ ಆಳುವವರ ತುಘಲಕ್ ದರ್ಬಾರಿಗೆ ಸೂಟುಬೂಟಿನ ಬಿಳಿದೊರೆಗಳ ಸಂಕೇತವಾಗಿ ಉಳಿಯಿತು. ದೇಶದ್ರೋಹವೆಂಬ ದಂಡನಾರ್ಹ ಅಪರಾಧಕ್ಕೆ ಸಂಬಂಧಿ ಸಿದ ಕಲಮು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ. 1975ರಲ್ಲಿ ಕಾಂಗ್ರೆಸ್ ಸರಕಾರ ತುರ್ತುಸ್ಥಿತಿ ತಂದಾಗ ಆಡಳಿತವನ್ನು ಪ್ರಶ್ನಿಸಿದ ಅನೇಕರು ಸೆರೆಮನೆ ಸೇರಿದ್ದರು. ಸರ್ವಾಧಿಕಾರ ಎಷ್ಟು ಕೆಟ್ಟದೆಂದು ಅರಿಯದ ತಲೆಮಾರು ನಮ್ಮದಲ್ಲ. ಆದರೆ ಕೇವಲ ನಾಲ್ಕು ದಶಕಗಳಲ್ಲಿ ಅದೆಲ್ಲವೂ ಮರೆತುಹೋದವರಂತೆ ಇದ್ದೇವಲ್ಲ, ಇದು ನಮ್ಮ ದಡ್ಡತನಕ್ಕೆ ಸಾಕ್ಷಿ. ಇಂದಿರಾ ಗಾಂಧಿ ಆಡಳಿತಕ್ಕೆ ಬಂದು ಒಂದು ದಶಕದ ನಂತರ ಸರ್ವಾಧಿಕಾರ ಮತ್ತು ತುರ್ತುಸ್ಥಿತಿಯನ್ನು ಹೇರಿದರು. ಆದರೆ ಈಗಿನ ಸರಕಾರ ಕೇವಲ ಎರಡು ವರುಷಗಳೊಳಗೆ ಈ ಸಾಧನೆಯನ್ನು ಮಾಡಿದ (ಅ)ಗೌರವಕ್ಕೆ ಪಾತ್ರವಾಗಿದೆ. ಜೆಎನ್‌ಯುವಿನಲ್ಲಿ ನಡೆಯಿತೆನ್ನಲಾದ ಆಚರಣೆ ಮತ್ತು ಪ್ರತಿಭಟನೆ ಪ್ರಜಾತಂತ್ರಕ್ಕೆ ಹೊಸದೇನೂ ಅಲ್ಲ. ಅಫ್ಝಲ್ ಗುರುವಿನ ಕುರಿತ ತೀರ್ಪು ಸರಿ/ತಪ್ಪೆಂದು ಹೇಳುವುದು ಅವರ ವರ ಅಭಿಪ್ರಾಯ. ಯಾವ ತೀರ್ಪು ಕಾಲಮಾನದಂಡದಲ್ಲಿ ಶಾಶ್ವತವಾಗಿ ಊರ್ಜಿತವಾಗಬೇಕಾಗಿಲ್ಲ. ಮೊಗಲ್ ರಾಜ ಕುಮಾರ ದಾರಾ ಶಿಕೋವನ್ನು ಅವನ ತಮ್ಮನೇ ಆದ ಸಾಮ್ರಾಟ ಔರಂಗಝೇಬನು ಮರಣದಂಡನೆಗೆ ಗುರಿಪಡಿ ಸಿದ್ದು ಸರಿಯಲ್ಲವೆಂದು ಹೇಳುತ್ತೇವಲ್ಲವೇ? ಈ ಟೀಕೆಯೂದೇಶದ್ರೋಹವೇ. ಹೋಗಲಿ, ಇದು ತೀರಾ ಹಳತಾ ಯಿತೆಂದರೆ (ಯಾವುದೂ ಹಳತಾಗುವುದಿಲ್ಲವೆಂಬುದಕ್ಕೆ ಮತ್ತು ಇತಿಹಾಸವನ್ನು ಯಾವಕಾಲದಲ್ಲೂ ಸರಿಪಡಿಸಬಹು ದೆಂಬುದಕ್ಕೆ ಬಾಬರಿ ಮಸೀದಿ ಧ್ವಂಸ ಮತ್ತು ಮರಣೋತ್ತರ ಭಾರತರತ್ನ ಪ್ರಶಸ್ತಿಗಳೇ ಸಾಕ್ಷಿ!) ಮಹಾತ್ಮಾಗಾಂಧಿಯನ್ನು ಕೊಂದು ಗಲ್ಲಿಗೇರಿದ ನಾಥೂರಾಂ ಗೋಡ್ಸೆಗೆ ಗುಡಿಕಟ್ಟಲು ಹೊರಟವರನ್ನು ದೇಶ ದ್ರೋಹದ ಆಪಾದನೆಗೆ ಗುರಿಪಡಿಸಿ ಶಿಕ್ಷಿಸದೆ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸರಕಾರ ಈಗ ಅಫ್ಝಲ್ ಗುರುವನ್ನು ಮರ ಣೋತ್ತರವಾಗಿ ಬೆಂಬಲಿಸಿದರೆಂಬುದಕ್ಕಾಗಿ ದೇಶದ್ರೋಹದ ಆಪಾದನೆಗೆ ಗುರಿಪಡಿಸಿ ಶಿಕ್ಷಿಸಹೊರಟದ್ದು ಎಂತಹ ವ್ಯಂಗ್ಯ ಮತ್ತು ವಿರೋಧಾಭಾಸ! ಗೋಡ್ಸೆಗೂ ಅಫ್ಝಲ್ ಗುರುವಿಗೂ ಕಾನೂನಿನಡಿ ಯಾವ ತಾರತಮ್ಯವೂ ಇಲ್ಲವಲ್ಲ!
ಯಾವುದನ್ನು ಉದಾರವಾಗಿ ಅಲಕ್ಷಿಸಬಹುದಿತ್ತೋ ಅದನ್ನು ಮೈಮೇಲೆರಚಿಕೊಂಡು ಭಾರತ ಸರಕಾರ ಬೆತ್ತಲೆಯಾಗಿ ನಿಂತಿದೆ. ಈ ರಾಜರಹಸ್ಯ ಬಯಲಿಗೆ ಬರಲು ಹೆಚ್ಚು ಕಾಲವಿರ ಲಾರದು. ದೇಶದ್ರೋಹ ಪ್ರಕರಣವು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಈಗಲೇ ಏನೂ ಹೇಳಲಾಗದು. ಆದರೆ (ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್, ನಟ ಅನುಪಮ್‌ಖೇರ್ ಅವರಿಗೆ ಸಿಕ್ಕಿದಂತೆ-), ಈಗಾಗಲೇ ಕೇಜ್ರಿವಾಲ್ ಅವರಿಗೆ ಸೆಡ್ಡುಹೊಡೆದು ಕೇಂದ್ರದ ನೀಲಿಗಣ್ಣಿನ ಹುಡುಗನಾ ಗಿರುವ ಮತ್ತು ಈ ದೇಶದ್ರೋಹದ ಪ್ರಕರಣದಲ್ಲಿ ಸರಕಾರ ವನ್ನು ಮುನ್ನಡೆಸುತ್ತಿರುವ ದಿಲ್ಲಿ ಪೊಲೀಸ್ ಆಯುಕ್ತ ಬಸ್ಸಿಯ ವರಿಗೆ ಮುಂದಿನ ವರ್ಷ ಪದ್ಮ ಪ್ರಶಸ್ತಿ ಬರಬಹು ದೆಂದು ನಿರೀಕ್ಷಿಸಬಹುದು!