ಮೊದಲ ಲಿಂಗಾಂತರಿ ಕನ್ನಡ ಸಹಾಯಕ ಪ್ರಾಧ್ಯಾಪಕಿ: ರೇಣುಕಾ ಪೂಜಾರಿ
‘ರೇಣುಕಾ ಮೇಡಂ ಅವರು ಪಾಠವನ್ನು ಬಹಳ ಸ್ಪಷ್ಟವಾಗಿ ಮಾಡ್ತಾರೆ, ಪಾಠದ ಜತೆೆ ಸಮಾಜದಲ್ಲಿ ಹೇಗಿರಬೇಕು ಅಂತ ಹೇಳ್ತಾರೆ. ಸ್ವತಃ ಸಮಯಪಾಲನೆ ಮಾಡ್ತಾರೆ, ನಮಗೂ ಸಮಯಪಾಲನೆ ಮಾಡೋಕೆ ಹೇಳ್ತಾರೆ, ಏನೇ ಪ್ರಶ್ನೆಗಳಿದ್ದರೂ ಕೇಳಿ ಎಂದು ಪ್ರಶ್ನೆ ಮಾಡುವುದನ್ನು ಕಲಿಸ್ತಿದಾರೆ’ ಎಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಕನ್ನಡ ಎಂ.ಎ. ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ಎಚ್.ದೊಡ್ಡಪ್ಪ ಹೀಗೆ ಅಭಿಪ್ರಾಯ ಪಡುತ್ತಾರೆ. ಇದೇ ತರಗತಿಯ ದಿವ್ಯ ಚೌಹಾನ್ ಎಂಬ ವಿದ್ಯಾರ್ಥಿನಿ ‘ನಮಗೆ ಅವರು ಮೇಡಂ ಅಂತಾನೆ ಅನ್ನಿಸುತ್ತೆ ಸರ್ ಬೇರೆ ತರಹ ಅನ್ನಿಸಲ್ಲ, ಬಹಳ ಸ್ಪಷ್ಟವಾಗಿ ಅರ್ಥವಾಗುವಂತೆ ಪಾಠ ಮಾಡ್ತಾರೆ’ ಎನ್ನುತ್ತಾರೆ. ಈ ಇಬ್ಬರು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಮೊದಲ ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಕನ್ನಡ ಅಧ್ಯಾಪಕಿ ರೇಣುಕಾ ಪೂಜಾರಿ ಅವರ ಬಗ್ಗೆ.
ಹೌದು, ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಕನ್ನಡ ವಿಭಾಗದಲ್ಲಿ ಡಿಸೆಂಬರ್ 10ರಂದು ರೇಣುಕಾ ಪೂಜಾರಿ ತಾತ್ಕಾಲಿಕ ಕನ್ನಡದ ಸಹಾಯಕ ಪ್ರಾಧ್ಯಾಪಕಿಯಾಗಿ ವೃತ್ತಿಗೆ ಸೇರಿಕೊಂಡರು. ಆ ಮೂಲಕ ಕರ್ನಾಟಕದಲ್ಲಿ ಮೊದಲ ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಕನ್ನಡ ಅಧ್ಯಾಪಕಿ ಎನ್ನುವ ಚಾರಿತ್ರಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಎನ್.ಇ.ಟಿ. ಪರೀಕ್ಷೆಯಲ್ಲಿ ಆದ ತೊಡಕಿನ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ನನಗೆ ಸಾಧ್ಯವಿರುವ ಸಹಾಯ ಮಾಡುತ್ತಿರುವೆ. ಈ ಮಧ್ಯೆ ಈಚೆಗೆ ಡಿಸೆಂಬರ್ 14-15 ರಂದು ಬಳ್ಳಾರಿಯಲ್ಲಿ ಕರ್ನಾಟಕ ಬಯಲಾಟ ಅಕಾಡಮಿಯು ಆಯೋಜಿಸಿದ ಸೆಮಿನಾರ್‌ಗೆ ಹೋದ ಸಂದರ್ಭದಲ್ಲಿ ರೇಣುಕಾ ನನ್ನನ್ನು ಮುಖತಃ ಭೆೇಟಿಯಾದರು. ಜತೆಗೆ ಒಂದು ಸಂತಸದ ಸುದ್ದಿಯನ್ನು ಹಂಚಿಕೊಂಡರು. ‘ಸರ್ ನಾನು ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕಿಯಾಗಿ ಆಯ್ಕೆಯಾಗಿದ್ದೇನೆ, ಡಿಸೆಂಬರ್ 10ರಂದು ವೃತ್ತಿಗೆ ಸೇರಿಕೊಂಡೆ’ ಎಂದು ತಿಳಿಸಿದರು. ನಾನು ಆ ಕ್ಷಣವೇ ಸಂತಸದಿಂದ ಅಭಿನಂದಿಸಿ, ಬಳ್ಳಾರಿಯ ಪತ್ರಕರ್ತ ಮಿತ್ರರಿಗೆ ವಿಷಯ ತಿಳಿಸಿ ಪರಿಚಯಿಸಿದೆ. ನನ್ನ ಫೇಸ್‌ಬುಕ್ ಪೇಜಲ್ಲೂ ಈ ಬಗ್ಗೆ ಬರೆದುಕೊಂಡೆ. ರೇಣುಕಾಗೆ ಅಭಿನಂದನೆಗಳ ಮಹಾಪೂರವೇ ಹರಿಯಿತು.
ಯಾರು ಈ ರೇಣುಕಾ? ಈಕೆಯ ಬದುಕಿನ ಹಿನ್ನೆಲೆಯೇನು? ಸಹಾಯಕ ಪ್ರಾಧ್ಯಾಪಕಿಯಾಗುವ ತನಕದ ಬದುಕಿನ ದಾರಿ ಹೇಗಿದೆ ಎಂದು ರೇಣುಕಾಳ ಹತ್ತಿರ ಮಾತನಾಡಿದಾಗ ತನ್ನ ಬದುಕಿನ ಹೆಜ್ಜೆ ಗಳನ್ನು ತಣ್ಣಗೆ ಹಂಚಿಕೊಂಡಳು. ಬಳ್ಳಾರಿ ಜಿಲ್ಲೆಯ ಕುರುಗೋಡಿನ ಹಾಲುಮತ ಕುರುಬ ಸಮುದಾಯದ ಒಂದೆಕರೆ ಜಮೀನಿರುವ ಕೂಲಿನಾಲಿ ಮಾಡಿಕೊಂಡು ಬದುಕುವ ಬಡಕುಟುಂಬದ ಪೂಜಾರಿ ಮಲ್ಲಯ್ಯ ಮತ್ತು ತಿಪ್ಪಮ್ಮ ಅವರ ಮೊದಲ ಮಗ ಮಲ್ಲೇಶ್ ಕೆ. ಈ ಹುಡುಗ ಎಲ್ಲಾ ಮಕ್ಕಳ ಜತೆ ಆಟ ಆಡಿಕೊಂಡು, ಶಾಲೆಯಲ್ಲಿ ಚುರುಕಾದ ವಿದ್ಯಾರ್ಥಿಯಾಗಿ ಗಮನಸೆಳೆದಿದ್ದ. ಮನೆಯಲ್ಲಿ ಮಲ್ಲೇಶನ ಓದಿನ ಆಸಕ್ತಿ ನೋಡಿ ಪುಳಕಗೊಂಡಿದ್ದರು. 8ನೇ ವರ್ಷದಲ್ಲಿ 2 ನೇ ತರಗತಿ ಓದುವಾಗಲೇ ಮಲ್ಲೇಶನ ಒಳಗೆ ಹೆಣ್ಣಿನ ಬೀಜ ಮೊಳೆಯಲು ಶುರುವಾಗುತ್ತದೆ. ಇದರ ಪರಿಣಾಮ ಮಲ್ಲೇಶನ ನಡೆ-ನುಡಿ ಹುಡುಗಿಯರಂತೆ ಚೂರು ಬದಲಾಗುತ್ತದೆ. ಇದರಿಂದಾಗಿ ಗಂಡು ಹುಡುಗರು ‘ನೀನು ಹೆಣ್ಣುಡುಗಿ ಮಾಡಿದಂಗೆ ಮಾಡ್ತೀಯಾ, ನಮ್ಮ ಜತೆ ಆಟಕ್ಕೆ ಬರಬೇಡ’ ಅಂತ ಮಲ್ಲೇಶನನ್ನು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಇತ್ತ ಹುಡುಗಿಯರೂ ‘ಹೇಯ್ ಮಲ್ಲೇಶ ನೀನು ನಮ್ ಜತೆ ಯಾಕೆ ಬರ್ತಿಯೋ ಹುಡುಗರ ಜತೆ ಹೋಗು’ ಎಂದು ಹೇಳತೊಡಗಿದರು. ಇತ್ತ ಇಬ್ಬರ ಜತೆಗೂ ಹೋಗದೆ ಮಲ್ಲೇಶ ಒಂಟಿಯಾಗಿ ಇರತೊಡಗಿದ.
ಮಲ್ಲೇಶನಿಗೆ ಒಂದು ಕಡೆಯಿಂದ ಏಕೆ ಹೀಗೆ ಎಂದು ನೋವಾದರೆ, ಮತ್ತೊಂದೆಡೆ ಓದಿನ ಕಡೆಗೆ ಹೆಚ್ಚಿನ ಗಮನ ಕೊಡುತ್ತಾ ಎಲ್ಲಾ ಮಕ್ಕಳಲ್ಲಿ ಬುದ್ಧ್ದಿವಂತ ಮಗುವಾಗಿ ಬೆಳೆಯುತ್ತಾನೆ. ಶಾಲೆಯ ಶಿಕ್ಷಕ ಶಿಕ್ಷಕಿಯರು ಮಲ್ಲೇಶನನ್ನು ಪ್ರೀತಿಯಿಂದಲೇ ನಡೆಸಿಕೊಳ್ಳುತ್ತಾರೆ. ಮನೆಯವರು ಊರಲ್ಲಿ ಹೆಣ್ಣಿಗರಂತೆ ನಡೆದುಕೊಳ್ಳುತ್ತಾ ಮದುವೆ,
ಮಕ್ಕಳು ಪಡೆದು ಜೀವನ ನಡೆಸುವವರಂತೆ ಇವನೂ ಆಗಬಹುದು ಎಂದುಕೊಳ್ಳುತ್ತಾರೆ. ಬೆಳೆಯುತ್ತಾ ಹೋದಂತೆ ಮಲ್ಲೇಶನ ಒಳಗಿನ ಹೆಣ್ಣು ಅರಳತೊಡಗುತ್ತಾಳೆ. ಇದರ ಪರಿಣಾಮ ಮಲ್ಲೇಶನ ನಡೆ, ನುಡಿ, ನಡಿಗೆ , ಮಾತು ಹೆಣ್ಣಿನ ರೂಪು ಪಡೆಯತೊಡಗುತ್ತದೆ. ಹೀಗೆ ಹೈಸ್ಕೂಲು ಮುಗಿಸುತ್ತಾನೆ.
ಬಳ್ಳಾರಿಯ ಮುನ್ಸಿಪಲ್ ಪದವಿಪೂರ್ವ ಕಾಲೇಜಿನಲ್ಲಿ ಪಿ.ಯು. ಮುಗಿಸುತ್ತಾನೆ. ಮತ್ತೆ ಪದವಿ ಶಿಕ್ಷಣಕಾಗಿ ಕುರುಗೋಡಿನ ಸರಕಾರಿ ಪದವಿ ಕಾಲೇಜಿಗೆ ಸೇರುತ್ತಾನೆ. ಪದವಿ ಹಂತಕ್ಕೆ ಬಂದಾಗ ಮಲ್ಲೇಶನೊಳಗಿನ ಹೆಣ್ಣು ಬಲಿಷ್ಠವಾಗಿ ಬೆಳೆಯುತ್ತಾಳೆ. ಮುಚ್ಚಿ ಡಲಾರದ ಒಳಗಿನ ಒತ್ತಡದೊಂದಿಗೆ ಮಲ್ಲೇಶ ಹೋರಾಡಿ ಸುಸ್ತಾಗುತ್ತಾನೆ. ಪದವಿ ಕಾಲೇಜಿನ ಎನ್.ಎಸ್.ಎಸ್. ಶಿಬಿರದಲ್ಲಿ ರಾತ್ರಿಯ ವೇಳೆ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ (2015-16) ಮೊದಲ ಬಾರಿಗೆ ಎರ‌್ರಂಗಳಿ, ಚಳ್ಳಗುರ್ಕಿ, ಕಾಕನಕೋಟ ಗ್ರಾಮಗಳಲ್ಲಿ ಸೀರೆಯುಟ್ಟು ಹೆಣ್ಣಾಗಿ ನೃತ್ಯ ಮಾಡುತ್ತಾನೆ. ಆ ಸಂದರ್ಭಕ್ಕೆ ಒಂದು ವಾರ ಸತತವಾಗಿ ಸೀರೆ ಉಟ್ಟು ಸಂಭ್ರಮಿಸುತ್ತಾನೆ. ವಿಷಯ ಮನೆಯವರಿಗೆ ತಿಳಿಯುತ್ತದೆ. ಮಲ್ಲೇಶನನ್ನು ಏಕೆ ಸೀರೆ ಉಟ್ಟಿದ್ದೆ ಎಂದು ವಿಚಾರಿಸುತ್ತಾರೆ. ಮಲ್ಲೇಶ ಅದೊಂದು ಪಾತ್ರ ಅಷ್ಟೇ, ಪಾತ್ರಕ್ಕಾಗಿ ಸೀರೆ ಉಟ್ಟಿದ್ದೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಮನೆಯವರಿಗೆ ನಿಮ್ಮ ಒಪ್ಪಿಗೆ ಇಲ್ಲದೆ ನಾನು ಸೀರೆ ಉಡುವುದಿಲ್ಲ ಎಂದು ಮಾತು ಕೊಡುತ್ತಾನೆ. ಹೀಗೆ ಬಿ.ಎ. ಒಂದೊಂದು ಸೆಮಿಷ್ಟರಿಗೂ ಒಳಗಿನ ಹೆಣ್ಣು ಹೊರ ಬರಲು ಹಾತೊರೆಯುತ್ತಾಳೆ.
ಬಿ.ಎ. ನಾಲ್ಕನೇ ಸೆಮಿಷ್ಟರಿಗೆ ಬರುವ ಹೊತ್ತಿಗೆ ತಡೆಯಲಾರದಂತೆ ‘ಹೆಣ್ಣುತನ’ ಸ್ಫೋಟವಾಗುತ್ತದೆ. ಈ ಸ್ಥಿತಿಯನ್ನು ನೋಡಿ ಮನೆಯಲ್ಲಿ ಗೋಳು ಮುಗಿಲು ಮುಟ್ಟುತ್ತದೆ. ‘ಎಲ್ಲಮ್ಮಾ ನನ್ನ ಮಗನನ್ನು ತಗೊಂಡೆಲ್ಲಾ’ ಎಂದು ದೇವಿಗೆ ಬೈಯುತ್ತಾರೆ. ಕೊನೆಗೂ ಅಪ್ಪ ಅಮ್ಮ ಮಗನಿಗೆ ಎಲ್ಲಮ್ಮನ ದೀಕ್ಷೆ ಕೊಡಿಸಲು ನಿರ್ಧರಿಸುತ್ತಾರೆ. ಮಗನನ್ನು ಮಗಳೆಂದು ಒಪ್ಪಿಕೊಳ್ಳಲು ಬಹಳ ಸಂಕಟ ಅನುಭವಿಸುತ್ತಾರೆ. ಇಷ್ಟೆಲ್ಲಾ ಸಂಕಟಗಳ ನಡುವೆಯೂ ಎಲ್ಲಮ್ಮ ದೊಡ್ಡಾಕಿ ಆಕಿ ಕಣ್ ಹಾಕಿದ ಮೇಲೆ ನಾವಾದರೂ ಏನು ಮಾಡಬೇಕೆಂದು ಸಮಾಧಾನ ಪಡುತ್ತಾರೆ. ಮಗ ಮಲ್ಲೇಶನಿಗೆ ಮುತ್ತುಕಟ್ಟಿಸಿ ಹೆಣ್ಣಾಗಿಸಲು ಒಪ್ಪಿಗೆ ಇಲ್ಲದೆಯೂ ಬಂಧು ಬಳಗವನ್ನೆಲ್ಲಾ ಒಪ್ಪಿಸುತ್ತಾರೆ. ಮನೆಯ ಮುಂದೆ ಚಪ್ಪರ ಹಾಕಲಾಗುತ್ತದೆ. ತೆಂಗಿನ ಗರಿ, ಮಾವಿನ ತೋರಣ ಕಟ್ಟಿ, ಮಲ್ಲೇಶನಿಗೆ ಅರಿಷಿಣ ಹಚ್ಚಿ ಸಿಂಗರಿಸುತ್ತಾರೆ. ಮನೆ ಮದುವೆಗೆ ಸಿದ್ಧವಾದಂತೆ ಸಿಂಗರಿಸಿಕೊಳ್ಳುತ್ತದೆ. ಮದುವೆಗೆ ವಧುವನ್ನು ವರನ ಮನೆಗೂ, ವರನನ್ನು ವಧುವಿನ ಮನೆಗೂ ಕರೆದುಕೊಂಡು ಹೋಗುವಂತೆ ಬಂಧು ಬಳಗ ಎಲ್ಲರೂ ಸೇರಿ ಎಲ್ಲಮ್ಮನ ಗುಡ್ಡಕ್ಕೆ ತೆರಳುತ್ತಾರೆ. ಬೆಳಗಾಂ ಜಿಲ್ಲೆಯ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಕುರುಗೋಡಿನ ಜೋಗತಿ ಬಂದಮ್ಮನಿಂದ 2017 ಎಪ್ರಿಲ್ 11 ರಂದು ಮಲ್ಲೇಶನಿಗೆ ಜೋಗತಿ ದೀಕ್ಷೆ ಕೊಡಿಸಲಾಗುತ್ತದೆ. ರೇಣುಕಾ ಎಲ್ಲಮ್ಮನ ದೀಕ್ಷೆ ಪಡೆದು, ಮಲ್ಲೇಶ ರೇಣುಕೆಯಾಗಿ ಬದಲಾಗುತ್ತಾಳೆ. ರೇಣುಕಾ ಶಾಸ್ತ್ರೋಕ್ತವಾಗಿ ರೇಣುಕೆಯ ದೀಕ್ಷೆ ಪಡೆದ ಕಾರಣ ಜೋಗತಿ ಸಂಪ್ರದಾಯದಲ್ಲಿ ನಿಷ್ಠೆಯಿಂದ ಮುಂದುವರಿದಿದ್ದಾಳೆ. ಸುಶ್ರಾವ್ಯವಾಗಿ ಎಲ್ಲಮ್ಮನ ಪದಗಳನ್ನು ಹಾಡುತ್ತಾಳೆ. ಚೌಡಕಿ ಬಾರಿಸುತ್ತಾಳೆ, ಸಹ ಜೋಗತಿಯರ ಜೊತೆಗೂಡಿ ಎಲ್ಲಮ್ಮನ ಕಥೆ ಹೇಳುತ್ತಾಳೆ. ಹೀಗೆ ಹಾಡು-ನೃತ್ಯ-ನಟನೆಯಲ್ಲಿ ರೇಣುಕಾ ಪರಿಣಿತಿ ಪಡೆದ ಕಲಾವಿದೆಯೂ ಆಗಿದ್ದಾಳೆ. ಕಾಳಮ್ಮ ಎನ್ನುವವರಿಗೆ ದೀಕ್ಷೆಕೊಟ್ಟು ಶಿಷ್ಯೆಯನ್ನಾಗಿಸಿಕೊಂಡಿದ್ದಾಳೆ. ಜಾತ್ರೆ, ಹಬ್ಬ, ಊರ ತೇರು ಮುಂತಾದ ಕಡೆ ಚೌಡಕಿ ಹಾಡು ಹಾಡುತ್ತಾ ಭಿಕ್ಷೆ ಬೇಡಿದ್ದು ಬಿಟ್ಟರೆ ರಸ್ತೆ, ಹೈವೆ, ಅಂಗಡಿಗಳಿಗೆ ಹೋಗಿ ಭಿಕ್ಷೆ ಬೇಡಿದ್ದಿಲ್ಲ. ಅಡ್ಡಲಗಿ ಮೂಲೆಯಲ್ಲಿಡಬಾರದು ಎನ್ನುವ ನಂಬಿಕೆ ಇರುವುದರಿಂದ ತಿಂಗಳಲ್ಲಿ ಒಮ್ಮೆ ಶಾಸ್ತ್ರಕ್ಕೆ ಐದು ಮನೆಗಳಿಗೆ ಭಿಕ್ಷೆಗೆ ಹೋಗುತ್ತಾಳೆ.
ಸೀರೆ ಉಟ್ಟು ಹುಡುಗಿಯಾಗಿಯೇ ಬಿ.ಎ. ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಾಳೆ. ಉಳಿದಂತೆ ಐದು, ಆರನೇ ಸೆಮಿಷ್ಟರ್ ರೇಣುಕೆಯಾಗಿಯೇ ತರಗತಿಗೆ ಹೋಗಿ ಪರೀಕ್ಷೆ ಬರೆಯುತ್ತಾಳೆ. 2018 ರಲ್ಲಿ ಪದವಿ ಪಡೆದ ರೇಣುಕಾ ಎರಡು ವರ್ಷ ಓದನ್ನು ನಿಲ್ಲಿಸಿ ತನ್ನ ಪದವಿ ಸರ್ಟಿಫಿಕೇಟ್ ಹಿಡಿದುಕೊಂಡು ಕೆಲಸಕ್ಕಾಗಿ ಅಲೆಯುತ್ತಾಳೆ. ಈ ಅವಧಿಯಲ್ಲಿ ಜೋಗತಿ ನೃತ್ಯ ಹಾಡಿಕೆಯಲ್ಲಿ ಮತ್ತಷ್ಟು ತೊಡಗಿಕೊಳ್ಳುತ್ತಾಳೆ. ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿಯೂ, ಹೊರ ರಾಜ್ಯಗಳಾದ ಆಂಧ್ರದ ಅನಂತಪುರ ಮತ್ತು ಗೋವಾದ ಪಣಜಿಯಲ್ಲಿಯೂ ಜೋಗತಿ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡು ಎಲ್ಲರ ಗಮನಸೆಳೆಯುತ್ತಾಳೆ. ಎರಡು ವರ್ಷದ ನಂತರ ಎಂ.ಎ. ಮಾಡಬೇಕೆಂದು ಮನಸ್ಸು ಮಾಡುತ್ತಾಳೆ. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಶಾಂತನಾಯಕ ಶಿರಗಾನಹಳ್ಳಿ ಅವರನ್ನು ಮಾತನಾಡಿಸಿ ಮಾಹಿತಿ ಪಡೆಯುತ್ತಾಳೆ. ಅವರು ಕುಲಪತಿ ಹತ್ತಿರ ಮಾತನಾಡಲು ಸೂಚಿಸುತ್ತಾರೆ. ರೇಣುಕಾ ‘ನನಗೆ ಫೀಸು ಕಟ್ಟಲು ಆಗುವುದಿಲ್ಲ ನನಗೆ ಅಡ್ಮಿಷನ್ ಕೊಡಿ’ ಎಂದು ಕುಲಪತಿಗಳಲ್ಲಿ ಕೇಳಿಕೊಳ್ಳುತ್ತಾಳೆ. ಇದೇ ಸಂದರ್ಭದಲ್ಲಿದ್ದ ಇಂಗ್ಲಿಷ್ ವಿಭಾಗದ ಡಾ.ರಾಬರ್ಟ್ ಜೋಸ್ ಎನ್ನುವ ಅಧ್ಯಾಪಕರು ಫೀಸು ಕಟ್ಟುವುದಾಗಿ ಹೇಳಿದ್ದರಂತೆ, ಮುಂದೆ ಈ ಬಗ್ಗೆ ಸಿಂಡಿಕೇಟ್ ಚರ್ಚೆ ಆಗಿ ಲಿಂಗಾಂತರಿ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಘೋಷಿಸುತ್ತದೆ. ಇದು ರೇಣುಕಾಳ ಓದಿನ ಹಂಬಲದ ಪರಿಣಾಮ.
ಹೀಗೆ ಎಂ.ಎ. ಕನ್ನಡ ಪೂರೈಸಿದ ರೇಣುಕಾ ಮತ್ತೆ ಕೆಲಸಗಳಿಗಾಗಿ ಹುಡುಕಾಟ ಮಾಡುತ್ತಾಳೆ. ಬೆಂಗಳೂರಿನಲ್ಲಿ ಕೆಲದಿನಗಳ ಕಾಲ ತಾನು ಲಿಂಗಾಂತರಿ ಎಂದು ಹೇಳಿಕೊಳ್ಳದೆ ಮನೆಕೆಲಸ ಮಾಡಿಕೊಂಡಿರುತ್ತಾಳೆೆ. ಯಾವುದೇ ಕೆಲಸಕ್ಕೆ ಸ್ವವಿವರ ಕೊಟ್ಟಾಗಲೂ ಆಧಾರ್ ಕಾರ್ಡಿನಿಂದ ಟ್ರಾನ್ಸ್ ಜೆಂಡರ್ ಎಂದು ಗೊತ್ತಾದ ತಕ್ಷಣ ಕೆಲಸ ಕೊಡುವುದಿಲ್ಲ. ಹೀಗೆ ಬೆಂಗಳೂರಿನಲ್ಲಿ ಕೆಲಸ ಹುಡುಕಾಟ ಮಾಡಿ ಸೋತು, ಭಿಕ್ಷೆ, ಸೆಕ್ಸ್ ವರ್ಕ್ ಮಾಡಲು ಮನಸ್ಸು ಒಪ್ಪದೆ ಮರಳಿ ಕುರುಗೋಡಿಗೆ ಬರುತ್ತಾಳೆ. ಬಂದ ನಂತರ ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರು ಮತ್ತು ಕುಲಪತಿಗಳಲ್ಲಿ ಚರ್ಚೆ ಮಾಡಿ ‘ನನಗೆ ಎಲ್ಲೂ ಕೆಲಸ ಸಿಗುತ್ತಿಲ್ಲ ಪಾಠ ಮಾಡಲು ಅವಕಾಶ ನೀಡಿ’ ಎಂದು ಕೇಳಿಕೊಳ್ಳುತ್ತಾಳೆ. ಇದಕ್ಕೆ ಸ್ಪಂದಿಸಿದ ಕುಲಸಚಿವರು ತಾತ್ಕಾಲಿಕ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪ್ರಕ್ರಿಯೆಯ ಅಧಿಸೂಚನೆಯಲ್ಲಿಯೇ ತೃತೀಯ ಲಿಂಗಿ ಅಭ್ಯರ್ಥಿಗಳನ್ನು ಪರಿಣಿಸುವುದಾಗಿ ನಿಯಮಾವಳಿ ರೂಪಿಸುತ್ತಾರೆ. ಇದರಿಂದ ರೇಣುಕಾ ಅರ್ಜಿ ಹಾಕುತ್ತಾಳೆ. ಆಯ್ಕೆಯಾಗಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಡಿಸೆಂಬರ್ 10ರಂದು ಹುದ್ದೆಗೆ ಸೇರಿ ಇದೀಗ ಪಾಠ ಮಾಡುತ್ತಿದ್ದಾಳೆ.
ರೇಣುಕಾ ಅವರು ಅಧ್ಯಾಪಕಿಯಾಗಿ ಆಯ್ಕೆ ಮಾಡಲು ಅನುವು ಮಾಡಿದಂತಹ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಎಂ.ಮುನಿರಾಜು ಅವರನ್ನೂ, ಕುಲಸಚಿವರಾದ ಎಸ್.ಎನ್.ರುದ್ರೇಶ್ ಅವರನ್ನೂ ಕೃತಜ್ಞತೆಯಿಂದ ನೆನೆಯುತ್ತಾಳೆೆ. ಮುಂದೆ ಪಿಎಚ್.ಡಿ ಮಾಡಬೇಕು, ಸಂಶೋಧನೆ ಮಾಡಬೇಕು, ಲೇಖನ ಬರೀಬೇಕು, ಪುಸ್ತಕ ಬರೀಬೇಕು ಮುಂತಾದ ನೂರಾರು ಕನಸುಗಳನ್ನು ಕಟ್ಟಿಕೊಂಡ ರೇಣುಕಾಳ ಕನಸುಗಳು ಈಡೇರಲಿ, ಇದೇ ವಿಶ್ವವಿದ್ಯಾಲಯದಲ್ಲಿ ಖಾಯಂ ಅಧ್ಯಾಪಕಿಯಾಗಿ ನೆಲೆಗೊಳ್ಳಲಿ ಎಂದು ಆಶಿಸೋಣ.