ಸರಕಾರಿ ಬಸ್ಸುಗಳಲ್ಲಿ ಸ್ಕ್ಯಾನ್ ಪಾವತಿಯಲ್ಲಿ ಸಮಸ್ಯೆ

Update: 2024-12-25 05:47 GMT

ಮಾನ್ಯರೇ,

ಕೊನೆಗೂ ಕರ್ನಾಟಕದ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಸ್ಕ್ಯಾನ್ ಮೂಲಕ ಟಿಕೆಟ್ ದರ ಪಾವತಿಸುವ ವ್ಯವಸ್ಥೆ ಜಾರಿ ಮಾಡಲಾಗಿದೆ. ಇದು ಕ್ಯಾಶ್‌ಲೆಸ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವುದೇನೋ ನಿಜ. ಆದರೆ ಇದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಸ್ಕ್ಯಾನ್ ಪಾವತಿ ಆರಂಭ ಆಗಿದ್ದರೂ ಹೆಚ್ಚಿನ ಸರಕಾರಿ ಬಸ್‌ಗಳಲ್ಲಿ ಈ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡುವ ಪೋಸ್ಟರ್‌ಗಳೇ ಇಲ್ಲ. ಜೊತೆಗೆ ಕಂಡಕ್ಟರ್ ಗಳು ಕೂಡಾ ಈ ಕುರಿತು ಮಾಹಿತಿ ನೀಡುವ ಕನಿಷ್ಠ ಪ್ರಯತ್ನ ಮಾಡದೇ ಈಗಲೂ ನೋಟು, ಚಿಲ್ಲರೆ ಪಡೆದು ಟಿಕೆಟ್ ನೀಡುತ್ತಿದ್ದಾರೆ. ವಿಪರ್ಯಾಸವೆಂದರೆ ಹೆಚ್ಚಿನ ಬಸ್ ಪ್ರಯಾಣಿಕರಿಗೆ ಈ ಕುರಿತು ಮಾಹಿತಿಯೇ ಇಲ್ಲ.

ಅಲ್ಲದೆ ಇನ್ನೊಂದು ಸಮಸ್ಯೆಯಿದೆ. ಮೊನ್ನೆ ಸರಕಾರಿ ಬಸ್‌ನಲ್ಲಿ ಪ್ರಯಾಣ ಮಾಡಿದಾಗ ಸ್ಕ್ಯಾನ್ ಮೂಲಕ ಹಣ ಪಾವತಿಸಲು ಮುಂದಾದರೆ ಸರ್ವರ್ ಸಮಸ್ಯೆ ಎದುರಾಯಿತು. ಹೀಗಾಗಿ ಆನ್‌ಲೈನ್ ಪೇಮೆಂಟ್ ಮಾಡಲು ಆಗಲಿಲ್ಲ. ಕಂಡಕ್ಟರ್‌ಗೆ ಈ ಸಮಸ್ಯೆಯನ್ನು ನಿವಾರಿಸುವುದು ಹೇಗೆ ಎಂಬುದೇ ಗೊತ್ತಿರಲಿಲ್ಲ. ಈ ರೀತಿ ಸಮಸ್ಯೆ ಬರುತ್ತದೆ ಎಂದು ಗೊತ್ತಿದ್ದರೂ ಇಲಾಖೆ ತಕ್ಷಣದ ಪರಿಹಾರ ಮಾಡಬೇಕಲ್ಲವೇ? ಒಂದು ಹೊಸ ವ್ಯವಸ್ಥೆಯು ಯಶಸ್ವಿಯಾಗಬೇಕೆಂದರೆ ಅದರ ಬಗ್ಗೆ ಮಾಹಿತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕೆಲಸ ಮಾಡಬೇಕು. ಅದನ್ನು ಇನ್ನೂ ಮಾಡಿಯೇ ಇಲ್ಲ. ಇನ್ನು ಕೆಲ ನಿರ್ವಾಹಕರು ಸ್ಕ್ಯಾನ್ ಮೂಲಕ ಪಾವತಿ ಮಾಡಲು ಅವಕಾಶವನ್ನೇ ಕೊಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಮುಂದೆ ಪ್ರಯಾಣಿಕರು ಸ್ಕ್ಯಾನ್ ವ್ಯವಸ್ಥೆ ಬಂದಿದೆ ಎಂದು ನಗದು ಇಲ್ಲದೆ ಬಸ್ ಹತ್ತಿ ಪ್ರಯಾಣ ಮಾಡಲು ಹೋದರೆ ಸರ್ವರ್ ಸಮಸ್ಯೆ ಉಂಟಾದರೆ ಯಾರು ಹೊಣೆ? ಹೀಗಾಗಿ ಸಾರಿಗೆ ಸಚಿವರು, ಕೆಎಸ್ಸಾರ್ಟಿಸಿ ಅಧಿಕಾರಿಗಳು ಈ ಕುರಿತು ಗಂಭೀರವಾಗಿ ಕ್ರಮ ತೆಗೆದುಕೊಳ್ಳಬೇಕಾಗಿದೆ.

-ಶಂಶೀರ್ ಬುಡೋಳಿ ಬಂಟ್ವಾಳ

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News