ಒಂದು ದೇಶ, ಒಂದು ಚುನಾವಣೆ: ಸಂಸದೀಯ ಪ್ರಜಾಪ್ರಭುತ್ವದಿಂದ ಅಧ್ಯಕ್ಷೀಯ ಸರ್ವಾಧಿಕಾರದೆಡೆಗೆ
ಬಿಜೆಪಿಯು ಅಧಿಕಾರಕ್ಕಾಗಿ ಯಾವುದೇ ಬಗೆಯ ಕೀಳು ಹಂತಕ್ಕಾದರೂ ತಲುಪಬಲ್ಲದು ಎನ್ನುವ ಅಪಖ್ಯಾತಿ ಗಳಿಸಿದೆ. ಆಪರೇಷನ್ ಕಮಲ ಎನ್ನುವ ಅನೈತಿಕತೆ ಇದಕ್ಕೆ ಸಾಕ್ಷಿ. ತಮ್ಮ ನಿರಂಕುಶ ಆಡಳಿತದ ವೈಖರಿಯಿಂದ ಚುನಾಯಿತ ಸರ್ವಾಧಿಕಾರ ವ್ಯವಸ್ಥೆಗೆ ಕಾರಣರಾಗಿರುವ ಮೋದಿಯವರು ಏಕಪಕ್ಷೀಯವಾಗಿ, ಪ್ರಚಾರದ ಹಪಾಹಪಿತನದಿಂದ ಮತ್ತು ನಿರಂತರವಾಗಿ ಅಧಿಕಾರದಲ್ಲಿರುವ ಒಳ ಉದ್ದೇಶದಿಂದ ಘೋಷಿಸುವ ನೀತಿಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ‘ಒಂದು ದೇಶ, ಒಂದು ಚುನಾವಣೆ’ ಸಹ ಇದಕ್ಕೆ ಹೊರತಲ್ಲ. ಇಂದು ದೇಶವು ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಂತಹ ಸಂದರ್ಭದಲ್ಲಿ ಈ ರೀತಿ ನೀತಿಗಳನ್ನು ಘೋಷಣೆ ಮಾಡುವುದು ಸ್ವಾಗತಾರ್ಹವಲ್ಲ.
ಮಾಜಿ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅಧ್ಯಕ್ಷತೆಯ ಉನ್ನತ ಸಮಿತಿಯು ಮಾರ್ಚ್ 2024ರಲ್ಲಿ ‘ಒಂದು ದೇಶ ಒಂದು ಚುನಾವಣೆ’ ಶಿಫಾರಸಿಗೆ ಅನುಮೋದನೆ ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ 18,626 ಪುಟಗಳ ವರದಿ ಸಲ್ಲಿಸಿದೆ. ಅಲ್ಪ ಸಮಯದಲ್ಲಿ ಇಂತಹ ಬೃಹತ್ ಗಾತ್ರದ ವರದಿ ರಚನೆಯಾಗಿದ್ದು ಅಚ್ಚರಿಯ ಸಂಗತಿ. ಸೆಪ್ಟಂಬರ್ 2024ರಲ್ಲಿ ಕೇಂದ್ರ ಸಚಿವ ಸಂಪುಟವು ಒಂದು ದೇಶ, ಒಂದು ಚುನಾವಣೆ ಶಿಫಾರಸನ್ನು ಅನುಮೋದಿಸಿದೆ. ಡಿಸೆಂಬರ್ 2024ರ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದ್ದಾರೆ. ಮತದಾನದ ದಿನ 461 ಸಂಸದರು ಹಾಜರಿದ್ದರು. ಇದರ ಆಧಾರದಲ್ಲಿ 2/3 ಬಹುಮತ ದೊರಕಲು 307 ಮತಗಳು ಬೇಕಾಗುತ್ತದೆ. ಆದರೆ ಆಡಳಿತದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಪರವಾಗಿ ಕೇವಲ 263 ಮತಗಳು ವಿರೋಧದ ಪರವಾಗಿ 198 ಮತಗಳು ಬಂದಿವೆ. ಈ ಕಾರಣದಿಂದ ‘ಒಂದು ದೇಶ ಒಂದು ಚುನಾವಣೆ’ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಲಾಗಿದೆ. ಇದು ಸದ್ಯದ ಪರಿಸ್ಥಿತಿ.
ಮೊದಲ ಹಂತದಲ್ಲಿ ಸಂಸತ್ತು ಮತ್ತು ರಾಜ್ಯವಿಧಾನಸಭೆಗಳಿಗೆ ನಡೆಯುವ ಚುನಾವಣೆ, ನೂರು ದಿನಗಳ ನಂತರ ಪಂಚಾಯತ್ ಮತ್ತು ನಗರಸಭೆಗಳಿಗೆ ನಡೆಯುವ ಎರಡನೇ ಹಂತದ ಚುನಾವಣೆಗೆ ತಯಾರಿ ಶುರು ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದೂ ವರದಿಯಾಗಿದೆ. ಬಿಜೆಪಿಯ ಹಿರಿಯ ಮುಖಂಡ ಅಡ್ವಾಣಿ ಶುರು ಮಾಡಿದ ‘ಒಂದು ದೇಶ, ಒಂದು ಚುನಾವಣೆ’ ಎನ್ನುವ ಗೀಳನ್ನು 2014ರ ಚುನಾವಣೆಯ ನಂತರ ಪ್ರಧಾನಿ ಮೋದಿ ಮುಂದುವರಿಸಿಕೊಂಡು ಬಂದಿದ್ದರು. ಇದಕ್ಕೂ ಹಿಂದೆ 1983ರಲ್ಲಿ ಆಗಿನ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಆರ್.ಕೆ. ತ್ರಿವೇದಿ ಇದರ ಕುರಿತು ಪ್ರಸ್ತಾವಿಸಿದ್ದರು. ಹಿಂದಿನ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ (ಗಣರಾಜ್ಯ ದಿನಾಚರಣೆಯಂದು) ಮತ್ತು ರಾಮನಾಥ ಕೋವಿಂದ್ (ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ) ಈ ಕುರಿತು ಪ್ರಸ್ತಾಪ ಮಾಡಿದ್ದರು. ಇದಕ್ಕಾಗಿ ಹಠಾತ್ತನೆ ಮಾಜಿ ರಾಷ್ಟ್ರಪತಿ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರ ಸಮಿತಿ ನೇಮಕಾತಿ ಮಾಡಿದರು. ಈಗ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ವಿಚಾರ ಚರ್ಚೆಯಲ್ಲಿದೆ.
ಕೋವಿಂದ್ ಸಮಿತಿಯು ‘ಭಾರತೀಯರು ಒಂದು, ದೇಶ ಒಂದು ಚುನಾವಣೆ ಬಯಸುತ್ತಾರೆ, 21,558 ಜನರ ಪ್ರತಿಕ್ರಿಯೆಯಲ್ಲಿ ಶೇ.80ರಷ್ಟು ಜನಸಂಖ್ಯೆ ಇದರ ಪರವಾಗಿದ್ದಾರೆ’ ಎಂದು ಹೇಳಿದೆ. ಭಾರತದ 97 ಕೋಟಿ ಜನಸಂಖ್ಯೆ ಮತದಾನ ಮಾಡುವ ಅರ್ಹತೆ ಹೊಂದಿದ್ದಾರೆ. ಈ ಸಂಖ್ಯೆಗೆ ಹೋಲಿಸಿದಾಗ ಸಮಿತಿಯು ಸಮೀಕ್ಷೆ ನಡೆಸಿದ ಜನಸಂಖ್ಯೆ ತುಂಬಾ ಕಡಿಮೆಯಿದೆ. ಇದರ ಆಧಾರದಲ್ಲಿ ‘ಒಂದು ದೇಶ, ಒಂದು ಚುನಾವಣೆ’ಯನ್ನು ನಿರ್ಧರಿಸಲು ಸಾಧ್ಯವಿಲ್ಲ. 19 ಸೆಪ್ಟಂಬರ್ 2024ರ ಬಾರ್‌ಬೆಂಚ್ ಅಂತರ್ಜಾಲ ಪತ್ರಿಕೆಯ ವರದಿಯ ಪ್ರಕಾರ ಸುಪ್ರೀಂಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಗೊಗೋಯಿ, ಶರದ್ ಬೋಬ್ಡೆ, ಯು.ಯು. ಲಲಿತ್ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾಪವನ್ನು ಬೆಂಬಲಿಸಿದ್ದಾರೆ. ಈ ನಾಲ್ವರೂ ಮೋದಿ 1.0, ಮೋದಿ 2.0 ಅವಧಿಯಲ್ಲಿ ಮು. ನ್ಯಾ.ಗಳಾಗಿದ್ದರು, ಇವರ ಅವಧಿಯಲ್ಲೇ ಸುಪ್ರೀಂಕೋರ್ಟ್‌ನ ವಿಶ್ವಾಸಾರ್ಹತೆ ಮತ್ತು ನಂಬಿಕೆ ಎರಡೂ ಕಳೆದು ಹೋದವು ಎನ್ನುವುದು ನಿಜ. ಇಂತಹವರಿಂದ ಮತ್ತೇನು ನಿರೀಕ್ಷೆ ಮಾಡ್ತೀರಾ ಎನ್ನುವ ಪ್ರಶ್ನೆಯೂ ನಿಜ. ಆದರೆ ದಿಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಪಿ. ಶಾ, ಕೋಲ್ಕತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗಿರೀಶ್ ಚಂದ್ರ ಗುಪ್ತಾ, ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ‘ಒಂದು ದೇಶ, ಒಂದು ಚುನಾವಣೆ’ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಕೇಂದ್ರ ಸರಕಾರದ ಮೈತ್ರಿ ಪಕ್ಷವಾದ ಟಿಡಿಪಿಯ ಸಂಸದೀಯ ಪಕ್ಷದ ಮುಖಂಡ ಲವು ಶ್ರೀಕೃಷ್ಣ ದೇವರಾಯಲು ಈ ನಿರ್ಧಾರವನ್ನು ಸ್ವಾಗತಿಸುತ್ತಲೇ ‘‘ಇದರ ಕುರಿತು ವ್ಯಾಪಕ ಸಮಾಲೋಚನೆಗಳಾಗಬೇಕಿದೆ, ಎಲ್ಲಾ ವೇದಿಕೆಗಳಲ್ಲಿ ಚರ್ಚೆ ನಡೆಸುವುದನ್ನು ಬಯಸುತ್ತೇವೆ’’ ಎಂದು ಹೇಳಿದ್ದಾರೆ. ಆದರೆ ಮತ್ತೊಂದು ಮೈತ್ರಿ ಪಕ್ಷ ಜೆಡಿಎಸ್‌ನ ಮುಖಂಡ, ಕೇಂದ್ರ ಬೃಹತ್ ಕೈಗಾರಿಕೆ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತ್ರ ಇದರ ಸಾಧಕ ಬಾಧಕಗಳನ್ನು ಅರಿಯಲು ಯತ್ನಿಸದೆ ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ಈ ಹಿಂದೆ ಕಾನೂನು ಆಯೋಗ, ನೀತಿ ಆಯೋಗ ಮತ್ತು ಸಂಸದೀಯ ಸ್ಥಾಯಿ ಸಮಿತಿ ಇದರ ಕುರಿತು ತಮ್ಮ ಶಿಫಾರಸುಗಳನ್ನು ಪ್ರಕಟಿಸಿದ್ದವು. ಸ್ವಾತಂತ್ರ್ಯ ಬಂದ ನಂತರ 1952, 1957, 1962, 1967ರಲ್ಲಿ ಲೋಕಸಭೆ ಮತ್ತು ರಾಜ್ಯ ಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸಲಾಗಿತ್ತು. 1971ರಲ್ಲಿ ಒಂದು ವರ್ಷಕ್ಕೂ ಮುಂಚೆ ಇಂದಿರಾ ಗಾಂಧಿಯವರು ಲೋಕಸಭಾ ಚುನಾವಣೆ ಘೋಷಣೆ ಮಾಡಿದರು. ನಂತರ 1976ರಲ್ಲಿ ನಡೆಯಬೇಕಿದ್ದ ಚುನಾವಣೆ ತುರ್ತುಪರಿಸ್ಥಿತಿಯ ಕಾರಣಕ್ಕೆ 1977ರಲ್ಲಿ ನಡೆಯಿತು ಮತ್ತು ಜನತಾ ಪಕ್ಷದ ಸರಕಾರ ರಾಜೀನಾಮೆ ಸಲ್ಲಿಸಿದ ಕಾರಣಕ್ಕೆ 1980ರಲ್ಲಿ ಚುನಾವಣೆ ನಡೆಸಬೇಕಾಯಿತು. ಅಂದಿನಿಂದ ಇಂದಿನವರೆಗೂ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಲಾಗುತ್ತಿದೆ. 2016ರಲ್ಲಿ ಆಗಿನ ಪ್ರಧಾನಿ ಮೋದಿ ‘‘ಚುನಾವಣೆ ಸಂದರ್ಭದಲ್ಲಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗುತ್ತದೆ’’ ಎಂದು ಉತ್ಪ್ರೇಕ್ಷೆಯ ಹೇಳಿಕೆ ಕೊಟ್ಟಿದ್ದರು. ಆದರೆ ಸ್ವತಃ ಮೋದಿ ಮತ್ತು ಅಮಿತ್ ಶಾ ವರ್ಷವಿಡೀ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಬೇರೆ ಸಂದರ್ಭವಾಗಿದ್ದರೆ ಈ ಒಂದು ದೇಶ, ಒಂದು ಚುನಾವಣೆಯ ಸಾಧಕಗಳ ಕುರಿತು ಚರ್ಚಿಸಬಹುದಾಗಿತ್ತು. ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಮೈತ್ರಿ ಸರಕಾರವು ಪ್ರಜಾಪ್ರಭುತ್ವದ ಒಂದೊಂದೇ ಸ್ತಂಭಗಳ ಗೋಣು ಮುರಿದು ಹಾಕುತ್ತಿರುವುದರಿಂದ ಜನತೆ ಇವರ ಮೇಲೆ ಪ್ರಜೆಗಳ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದಾರೆ. ಬಿಜೆಪಿಯು ಅಧಿಕಾರಕ್ಕಾಗಿ ಯಾವುದೇ ಬಗೆಯ ಕೀಳು ಹಂತಕ್ಕಾದರೂ ತಲುಪಬಲ್ಲದು ಎನ್ನುವ ಅಪಖ್ಯಾತಿ ಗಳಿಸಿದೆ. ಆಪರೇಷನ್ ಕಮಲ ಎನ್ನುವ ಅನೈತಿಕತೆ ಇದಕ್ಕೆ ಸಾಕ್ಷಿ. ತಮ್ಮ ನಿರಂಕುಶ ಆಡಳಿತದ ವೈಖರಿಯಿಂದ ಚುನಾಯಿತ ಸರ್ವಾಧಿಕಾರ ವ್ಯವಸ್ಥೆಗೆ ಕಾರಣರಾಗಿರುವ ಮೋದಿಯವರು ಏಕಪಕ್ಷೀಯವಾಗಿ, ಪ್ರಚಾರದ ಹಪಾಹಪಿತನದಿಂದ ಮತ್ತು ನಿರಂತರವಾಗಿ ಅಧಿಕಾರದಲ್ಲಿರುವ ಒಳ ಉದ್ದೇಶದಿಂದ ಘೋಷಿಸುವ ನೀತಿಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ‘ಒಂದು ದೇಶ, ಒಂದು ಚುನಾವಣೆ’ ಸಹ ಇದಕ್ಕೆ ಹೊರತಲ್ಲ. ಇಂದು ದೇಶವು ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಂತಹ ಸಂದರ್ಭದಲ್ಲಿ ಈ ರೀತಿ ನೀತಿಗಳನ್ನು ಘೋಷಣೆ ಮಾಡುವುದು ಸ್ವಾಗತಾರ್ಹವಲ್ಲ.
ಸಮಿತಿಯ ಶಿಫಾರಸುಗಳು ಮತ್ತು ಬಾಧಕಗಳು
‘ಒಂದು ದೇಶ ಒಂದು ಚುನಾವಣೆ’ ಎನ್ನುವ ಗೀಳಿನ ಕುರಿತು ವರದಿ ನೀಡಲು ನೇಮಿಸಿದ ಸಮಿತಿಯ ರಚನೆಯೇ ಪ್ರಶ್ನಾರ್ಹವಾಗಿದೆ. ಎಂಟು ಸದಸ್ಯರ ಪೈಕಿ ಮಾಜಿ ರಾಷ್ಟ್ರಪತಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಿ ಅವರನ್ನೂ ಈ ರಾಜಕೀಯ ವಿವಾದಗಳಿಗೆ ಎಳೆದು ತಂದಿರುವುದು ವಿವೇಕಯುಕ್ತವಲ್ಲ ಮತ್ತು ಕೋವಿಂದ್ ಅವರು ರಾಷ್ಟ್ರಪತಿಗಳಾಗಿದ್ದಂತಹ ಸಂದರ್ಭದಲ್ಲಿ ಮೋದಿ ಸರಕಾರದ ರಬ್ಬರ್ ಸ್ಟ್ಯಾಂಪ್‌ನಂತೆ ಕಾರ್ಯ ನಿರ್ವಹಿಸಿರುವುದರಿಂದ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇತರ ಸದಸ್ಯರಲ್ಲಿ ಗೃಹ ಮಂತ್ರಿ ಅಮಿತ್ ಶಾ ಮೊದ ಲಿನಿಂದಲೂ ಈ ಗೀಳಿನ ಸಮರ್ಥಕರಾಗಿದ್ದಾರೆ. ಬಿಜೆಪಿ ಪಕ್ಷದ ಕದ ತಟ್ಟುತ್ತಿರುವ ಗುಲಾಂನಬಿ ಆಝಾದ್ ತಮ್ಮ ಸ್ವತಂತ್ರ ವಿಚಾರ ಗಳನ್ನು ಮಂಡಿಸಿದ್ದಾರೆ ಎನ್ನುವುದು ಅನುಮಾನಾಸ್ಪದವಾಗಿದೆ. ಇನ್ನುಳಿದಂತೆ 15 ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಮತ್ತು ನಿವೃತ್ತ ಲೋಕಸಭಾ ಜನರಲ್ ಕಾರ್ಯದರ್ಶಿ ಕಶ್ಯಪ್ ಯಾವುದೇ ಸಂದರ್ಭ ದಲ್ಲಿಯೂ ಮೋದಿ-ಶಾ ವಿರುದ್ಧ ತಮ್ಮ ಆಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಇವರನ್ನು ಹೊರತುಪಡಿಸಿ ನೆಪ ಮಾತ್ರಕ್ಕೆ ವಿರೋಧ ಪಕ್ಷದ ನಾಯಕರನ್ನು ಸೇರಿಸಿಕೊಳ್ಳಲಾಗಿದೆ. ಆದರೆ ಈ ಏಳು ಸದಸ್ಯರ ಬಿಜೆಪಿ ಪರವಾದ ನಿಷ್ಠೆಯ ಮುಂದೆ ವಿರೋಧ ಪಕ್ಷದ ನಾಯಕರು ಏಕಾಂಗಿಯಾಗಿ ಏಗಲು ಸಾಧ್ಯವಿಲ್ಲದ ಕಾರಣ ಅಧೀರ್ ಚೌಧುರಿ ಆ ಸಮಿತಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಮುಖ್ಯವಾಗಿ ಈ ಸಮಿತಿಯಲ್ಲಿ ಮಾಜಿ/ಹಾಲಿ ಚುನಾವಣಾ ಅಧಿಕಾರಿಗಳಿಲ್ಲ, ರಾಜ್ಯ ಸರಕಾರಗಳ, ಪ್ರಾದೇಶಿಕ ಪಕ್ಷಗಳ ಪ್ರತಿನಿಧಿಗಳಿಲ್ಲ. ಒಕ್ಕೂಟ ವ್ಯವಸ್ಥೆಯನ್ನೇ ಧಿಕ್ಕರಿಸಿ ಸಂಪೂರ್ಣ ಕೇಂದ್ರೀಕರಣಗೊಳಿಸಲ್ಪಟ್ಟ ಈ ಸಮಿತಿಯ ಜವಾಬ್ದಾರಿಗಳೂ ಸಹ ಪೂರ್ವನಿರ್ಧರಿತವಾಗಿದೆ. ‘ಒಂದು ದೇಶ, ಒಂದು ಚುನಾವಣೆ’ ಸಾಧಕವೇ, ಭಾದಕವೇ ಎನ್ನುವ ವಿಚಾರವೇ ಈ ಸಮಿತಿಯ ಮುಂದಿಲ್ಲ. ಬದಲಿಗೆ ಈ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರಕಾರಗಳೊಂದಿಗೆ ಸಮಾಲೋಚನೆ ನಡೆಸಬೇಕೇ, ಬೇಡವೇ, ಈ ನೀತಿ ಜಾರಿಗೊಳಿಸಲು ಕಾನೂನು ತೊಡಕುಗಳೇನು ಮತ್ತು ಪರಿಹಾರವಾಗಿ ಸಂವಿಧಾನ ತಿದ್ದುಪಡಿಯ ಸ್ವರೂಪವೇನು ಎನ್ನುವಂತಹ ವಿಚಾರಗಳ ಕುರಿತು ಶಿಫಾರಸು ಮಾಡಲು ಸೂಚಿಸಲಾಗಿದೆ. ಈ ಹೊಸ ನೀತಿಗೆ ಚೌಕಟ್ಟು ಚುನಾವಣೆಯನ್ನು ರಾಷ್ಟ್ರೀಕರಣ ಮತ್ತು ಕೇಂದ್ರೀಕರಣಗೊಳಿಸಲು ನಿರ್ಧರಿಸಿರುವ ಮೋದಿ ಸರಕಾರದ ಈ ಗೀಳಿಗೆ ಸಮಿತಿಯು ಶಿರಸಾವಹಿಸಿ ಕಪ್ಪ ಒಪ್ಪಿಸುತ್ತದೆ ಎನ್ನ್ನುವುದರಲ್ಲಿ ಅನುಮಾನವಿಲ್ಲ.
ಪ್ರಸ್ತಾಪ: ‘ಐದು ವರ್ಷಗಳ ಅವಧಿಯನ್ನು ಕಡ್ಡಾಯವಾಗಿ ಪೂರೈಸಬೇಕು ಎನ್ನುವ ನೀತಿಯನ್ನು ಬದಲಿಸಲು ಸಂವಿಧಾನಕ್ಕೆ 15 ತಿದ್ದುಪಡಿಗಳನ್ನು ಮಾಡಬೇಕು, ಸಂಸತ್ತಿನ ಅವಧಿಯನ್ನು ವಿವರಿಸುವ ಪರಿಚ್ಛೇದ 83, ವಿಧಾನಸಭೆಗಳ ಅವಧಿಯನ್ನು ವಿವರಿಸುವ ಪರಿಚ್ಛೇದ 172ನ್ನು ಸಹ ತಿದ್ದುಪಡಿ ಮಾಡಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಗೆ ಹೊಂದಿಕೆಯಾಗುವಂತೆ ತಿದ್ದುಪಡಿ ಮಾಡಬೇಕಿರುವುದರಿಂದ ಪರಿಚ್ಛೇದ 172ರ ಅಡಿಯಲ್ಲಿ ರಾಜ್ಯಗಳು ಐದು ವರ್ಷಗಳ ಅವಧಿಯನ್ನು ಕಳೆದುಕೊಳ್ಳುತ್ತವೆ. ಇದೇ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಏಕಕಕಾಲಕ್ಕೆ ಸಂಸತ್ತು, ವಿಧಾನಸಭೆಗಳ ಜೊತೆ ನಡೆಸಲು ಪರಿಚ್ಛೇದ 324ಎ ಸೇರಿಸಬೇಕಾಗುತ್ತದೆ. ಇದರ ಜೊತೆಗೆ ಪರಿಚ್ಛೇದ 85, 174, 327, 356ಗಳನ್ನೂ ತಿದ್ದುಪಡಿ ಮಾಡಬೇಕಾಗುತ್ತದೆ. ‘ಒಂದು ದೇಶ, ಒಂದು ಚುನಾವಣೆ’ ಬದಲಾಗಲು ಪರಿಚ್ಛೇದ 82ಎಯನ್ನು ಸೇರಿಸಬೇಕಾಗುತ್ತದೆ
ಬಾಧಕ: ಕೇವಲ ಏಕಕಾಲಿಕ ಚುನಾವಣೆಗಾಗಿ ಈ ಮಟ್ಟದ ಸಂವಿಧಾನ ತಿದ್ದುಪಡಿಗಳನ್ನು ಮಾಡುವುದು ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಉಂಟು ಮಾಡುತ್ತದೆ. 543 ಲೋಕಸಭಾ ಸಂಸದರ ಪೈಕಿ ಮಸೂದೆಗೆ ಅನುಮೋದನೆ ಪಡೆದುಕೊಳ್ಳಲು 362 ಸಂಸದರ ಬೆಂಬಲದ ಅಗತ್ಯವಿದೆ. ಆದರೆ 18ನೇ ಲೋಕಸಭೆಯಲ್ಲಿ ಆಡಳಿತ ಎನ್‌ಡಿಎ ಸರಕಾರದಲ್ಲಿ 292 ಸಂಸದರಿದ್ದಾರೆ. ಬಹುಮತಕ್ಕೆ 70 ಮತಗಳ ಕೊರತೆಯಿದೆ. ವಿರೋಧ ಪಕ್ಷಗಳು ಒಗ್ಗಟ್ಟಾಗಿ ಈ ‘ಒಂದು ದೇಶ, ಒಂದು ಚುನಾವಣೆ’ ಪದ್ಧತಿಯನ್ನು ವಿರೋಧಿಸುತ್ತಿದ್ದಾರೆ. ಈ ಕಾರಣದಿಂದ ಲೋಕಸಭೆಯಲ್ಲಿಯೇ ಈ ಮಸೂದೆಗೆ ಸೋಲುಂಟಾಗುವ ಸಾಧ್ಯತೆಗಳಿವೆ. ಆದರೆ ಮೋದಿ ಮತ್ತು ಶಾ ಈ ಹಿಂದಿನಂತೆ ವಿರೊಧ ಪಕ್ಷಗಳ ಒಗ್ಗಟ್ಟನ್ನು ಮುರಿಯಲು ನಾನಾ ತಂತ್ರಗಳನ್ನು ಪ್ರಯೋಗಿಸುತ್ತಾರೆ, ಆದರೆ ಈ ಬಾರಿ ಈ ತಂತ್ರಗಳು ಫಲಿಸುವ ಸಾಧ್ಯತೆಗಳಿಲ್ಲ. ಅಂದರೆ ‘ಒಂದು ದೇಶ ಒಂದು ಚುನಾವಣೆ’ ಜಾರಿಗೊಳಿಸುವುದಕ್ಕಿಂತಲೂ ಮುಂಚೆಯೇ ಅದರ ಅನುಮೋದನೆಯ ಹಂತದಲ್ಲಿಯೇ ಹಿನ್ನಡೆ ಉಂಟಾಗುತ್ತದೆ
ಪ್ರಸ್ತಾಪ: ಎರಡು ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಮಂಡಿಸಬೇಕಾಗುತ್ತದೆ. ಮೊದಲನೆಯ ಮಸೂದೆಯಲ್ಲಿ ‘ಒಂದು ದೇಶ, ಒಂದು ಚುನಾವಣೆ’ಗೆ ಬದಲಾಯಿಸಲು, ಲೋಕಸಭಾ ಮತ್ತು ರಾಜ್ಯಗಳ ಚುನಾವಣೆಯ ಕುರಿತಾಗಿ ಕಾರ್ಯವಿಧಾನವನ್ನು ರೂಪಿಸಲು ಮೊದಲನೇ ಮಸೂದೆಯ ಅಗತ್ಯವಿದೆ. ಇದಕ್ಕಾಗಿ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸುವ ಅಗತ್ಯವಿಲ್ಲ ಮತ್ತು ವಿಧಾನಮಂಡಲವನ್ನು ವಿಸರ್ಜಿಸದೆ ಈ ಮಸೂದೆಯನ್ನು ಮಂಡಿಸಬಹುದು. ನಗರಸಭೆ ಮತ್ತು ಪಂಚಾಯತ್ ರಾಜ್ ಚುನಾವಣೆ ನಡೆಸಲು, ತಿದ್ದುಪಡಿ ಮಾಡಲು ರಾಜ್ಯಗಳಿಗೆ ಅಧಿಕಾರ ಇರುವುದರಿಂದ ದೇಶದ 29 ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳ ಅನುಮತಿಯ ಅಗತ್ಯವಿದೆ.
ಒಂದು ವೇಳೆ ಅವಧಿಗೂ ಮುಂಚೆ ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ವಿಸರ್ಜನೆಗೊಂಡರೆ ಮಿಕ್ಕ ವರ್ಷಗಳನ್ನು ‘ಅವಧಿ ಮೀರದ ಹಂತ’ ಎಂದು ಕರೆಯಲಾಗುತ್ತದೆ, ಐದು ವರ್ಷಗಳ ನಂತರ ಚುನಾವಣೆ ನಡೆಸುವ ಸಂದರ್ಭದಲ್ಲಿ ವಿಧಾನಮಂಡಲವನ್ನು ವಿಸರ್ಜಿಸಲಾಗುತ್ತದೆ
ಬಾಧಕ: ‘ಒಂದು ದೇಶ, ಒಂದು ಚುನಾವಣೆ’ ಅಳವಡಿಸಿಕೊಳ್ಳ ಬೇಕೆಂದರೆ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯ ವಿಧಾನಸಭೆಗಳ ಅವಧಿಯನ್ನು ಅನಿರ್ದಿಷ್ಟವಾಗಿ ಮುಂದೂಡಬೇಕಾಗುತ್ತದೆ. ಇನ್ನು ನಾಲ್ಕು ವರ್ಷಗಳಿಂದ ಒಂದು ವರ್ಷದ ಅವಧಿ ಬಾಕಿಯಿರುವ ವಿಧಾನಸಭೆಗಳನ್ನು ಪೂರ್ಣಾವಧಿ ಮುಗಿಸುವುದಕ್ಕೂ ಮೊದಲೇ ವಿಸರ್ಜಿಸಬೇಕಾಗುತ್ತದೆ. ‘ಒಂದು ದೇಶ, ಒಂದು ಚುನಾವಣೆ’ ಜಾರಿಗೊಂಡ ನಂತರವೂ ಸಹ ಒಂದುವೇಳೆ ಮೈತ್ರಿ ಸರಕಾರಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡ ಪಕ್ಷಗಳ ನಡುವೆ ವೈಮನಸ್ಯ ತಲೆದೋರಿದರೆ ಕೆಲವು ಪಕ್ಷಗಳು ಸರಕಾರಕ್ಕೆ ಬೆಂಬಲ ವಾಪಸ್ ಪಡೆಯುವ ಸಂಭವವಿರುತ್ತದೆ. ಆಗ ಸರಕಾರವೇ ಬಹುಮತ ಕಳೆದುಕೊಳ್ಳುತ್ತದೆ. ಈ ಬಿಕ್ಕಟ್ಟಿನಲ್ಲಿ ಸಂಸತ್ತಿಗೆ ಚುನಾವಣೆ ನಡೆಯುವವರೆಗೂ ಆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕಾಗುತ್ತದೆ. ಏಕಕಾಲ ಚುನಾವಣೆಯ ಫಲಿತಾಂಶದಲ್ಲಿ ಅತಂತ್ರ ಸಂಸತ್ತಿನ ಸಾಧ್ಯತೆಗಳಿವೆ. ಆ ಸಂದರ್ಭದಲ್ಲಿ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವುದಕ್ಕೆ ಸಮಿತಿಯಲ್ಲಿ ವಿವರಣೆಗಳಿಲ್ಲ. ಇದರ ಪರಿಣಾಮವಾಗಿ ಚುನಾಯಿತ ಸರಕಾರಗಳೇ ಕಣ್ಮರೆಯಾಗಿ ಕೇಂದ್ರದಿಂದ ಹೇರಲ್ಪಟ್ಟ ರಾಷ್ಟ್ರಪತಿ ಆಡಳಿತ ವ್ಯವಸ್ಥೆ ಸಾಮಾನ್ಯೀಕರಣಗೊಳ್ಳುತ್ತದೆ.
‘ಒಂದು ದೇಶ, ಒಂದು ಚುನಾವಣೆ’ ಪದ್ಧತಿಯಿಂದ ರಾಜ್ಯಗಳ ಒಕ್ಕೂಟ ವ್ಯವಸ್ಥೆಯ ನೀತಿಗಳು ಕಡೆಗಣಿಸಲ್ಪಡುತ್ತವೆ. ಚುನಾವಣೆಯ ಸಂದರ್ಭದಲ್ಲಿ ಸ್ಥಳೀಯ ಆದ್ಯತೆಗಳು, ಪ್ರಶ್ನೆಗಳು ಹಿನ್ನೆಲೆಗೆ ತಳ್ಳಲ್ಪಟ್ಟು ದೇಶದ ವಿಚಾರಗಳು ಮಾತ್ರ ಚರ್ಚೆಯಾಗುತ್ತದೆ. ಇದರಿಂದ ರಾಜ್ಯಗಳ ಅಭಿವೃದ್ಧಿ ಕುರಿತಾದ ಪ್ರಣಾಳಿಕೆಯೂ ಬದಲಾಗುತ್ತದೆ. ಮೋದಿಯಂತಹ ಪ್ರಧಾನಿ, ಬಿಜೆಪಿಯಂತಹ ಪಕ್ಷವು ಅಧಿಕಾರದಲ್ಲಿರುವ ಸಂದರ್ಭದಲ್ಲಿ ಚುನಾವಣಾ ಪ್ರಚಾರದಲ್ಲಿ ಅನಗತ್ಯವಾಗಿ ಮತ್ತು ಚರ್ಚೆಯ ದಿಕ್ಕು ತಪ್ಪಿಸಲು ದೇಶದ ಭದ್ರತೆ ಕುರಿತು ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾರೆ. ಶತ್ರು ದೇಶಗಳನ್ನು ಹದ್ದುಬಸ್ತಿನಲ್ಲಿಡಲು ಬಿಜೆಪಿಗೆ ಮತ ನೀಡಿ ಎನ್ನುವ ಒಂದಂಶದ ಕಾರ್ಯಕ್ರಮವೇ ಹೆಚ್ಚು ಪ್ರಚಾರಗೊಳ್ಳುತ್ತದೆ. ಬಹುತೇಕ ಮಡಿಲ ಮಾಧ್ಯಮಗಳು ಸ್ಥಳೀಯ ವಿಚಾರಗಳನ್ನು ಬದಿಗಿಟ್ಟು ಕೇವಲ ದೇಶ ಮತ್ತು ಶತ್ರು ದೇಶಗಳನ್ನು ಕೇಂದ್ರೀಕರಿಸಿಕೊಂಡು ಸುದ್ದಿ ಬಿತ್ತರಿಸುತ್ತಾರೆ. 2019ರ ಚುನಾವಣೆಯಲ್ಲಿ ಪುಲ್ವಾಮಾ ಹತ್ಯೆ ಮತ್ತು ಬಾಲಾಕೋಟ್ ದಾಳಿ ಹೇಗೆ ಬಿಜೆಪಿ 303 ಸ್ಥಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎನ್ನವುದು ಈಗಾಗಲೇ ಸಾಕಷ್ಟು ಬಾರಿ ಚರ್ಚೆಯಾಗಿದೆ.
ಪ್ರಸ್ತಾಪ: ‘ಒಂದು ದೇಶ, ಒಂದು ಚುನಾವಣೆ’ಯಿಂದ ಹಣಕಾಸು ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ. ಈಗಿರುವ ಪದ್ಧತಿಯಲ್ಲಿ ವೆಚ್ಚ ತುಂಬಾ ಹೆಚ್ಚಿದೆ.
ಬಾಧಕ: ಆದರೆ ವಾಸ್ತವದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಜಾರಿಗೊಂಡರೆ ಹಣಕಾಸು ವೆಚ್ಚವೂ ಹೆಚ್ಚುತ್ತದೆ. ಚುನಾವಣಾ ಆಯೋಗದ ಎಣಿಕೆಯಂತೆ ಐದು ವರ್ಷಗಳ ಆವರ್ತನದಲ್ಲಿ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ ಪ್ರತೀ ವರ್ಷ, ಪ್ರತೀ ಮತದಾರರಿಗೆ ರೂ.10 ವೆಚ್ಚವಾಗುತ್ತದೆ. ಅಂದರೆ 97 ಕೋಟಿ ಮತದಾರರಿಗೆ ಪ್ರತೀ ವರ್ಷಕ್ಕೆ 970 ಕೋಟಿ ರೂ. ಐದು ವರ್ಷಕ್ಕೆ 4,850 ಕೋಟಿ ರೂ. ವೆಚ್ಚವಾಗುತ್ತದೆ. ಆಯೋಗಕ್ಕೆ ತಗಲುವ ಈ ವೆಚ್ಚದಲ್ಲಿ ರಾಜಕೀಯ ಪಕ್ಷಗಳ ವೆಚ್ಚ ಸೇರಿರುವುದಿಲ್ಲ. ಮಾಧ್ಯಮ ಅಧ್ಯಯನ ಕೇಂದ್ರದ ವರದಿಯಂತೆ 2024ರ ಲೋಕಸಭಾ ಚುನಾವಣೆಯಲ್ಲಿ 1.35 ಲಕ್ಷ ಕೋಟಿ ರೂ. ವೆಚ್ಚವಾಗಿದೆ. 2019ರಲ್ಲಿ ಬಿಜೆಪಿ 27,000 ಕೋಟಿ ರೂ. ವೆಚ್ಚ ಮಾಡಿದೆ. ಆಗಿನ ಒಟ್ಟು ಚುನಾವಣಾ ವೆಚ್ಚ 60,000 ಕೋಟಿ ರೂ.ಯಲ್ಲಿ ಬಿಜೆಪಿಯ ವೆಚ್ಚವೇ ಶೇ.45ರಷ್ಟಿದೆ. ‘ಒಂದು ದೇಶ, ಒಂದು ಚುನಾವಣೆ’ಯಿಂದ ಈ ವೆಚ್ಚದಲ್ಲಿ ಯಾವುದೇ ಬಗೆಯಲ್ಲಿ ಕಡಿಮೆಯಾಗುವುದಿಲ್ಲ. ಈಗಿನ ಪದ್ಧತಿಗೆ ಹೋಲಿಸಿದರೆ ‘ಒಂದು ದೇಶ, ಒಂದು ಚುನಾವಣೆ’ಯಿಂದ ಚುನಾವಣಾ ಯಂತ್ರಗಳ ಬಳಕೆ ಹತ್ತು ಪಟ್ಟು ಹೆಚ್ಚಾಗುತ್ತದೆ. ಸಿಬ್ಬಂದಿಯ ಅಗತ್ಯ ದುಪ್ಪಟ್ಟಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಕೋವಿಂದ್ ಅವರ ಸಮಿತಿ ಮತ್ತು ಬಿಜೆಪಿ ಎಲ್ಲಿಯೂ ಅಂದಾಜಿಸಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಈಗಿನ ವ್ಯವಸ್ಥೆಯಲ್ಲಿ ಪಕ್ಷಗಳು ಮಾಡುವ ಚುನಾವಣಾ ವೆಚ್ಚವನ್ನು ಉಳಿಸಿದರೆ ಆ ಹಣವನ್ನು ಅಭಿವೃದ್ಧಿ ವೆಚ್ಚಕ್ಕೆ ಬಳಸಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಇದು ಅತ್ಯಂತ ಮುಗ್ಧತೆಯ ನಂಬಿಕೆಯಾಗಿದೆ. ಯಾಕೆಂದರೆ 1952-1967ರಲ್ಲಿ ನಡೆದ ಏಕಕಾಲ ಚುನಾವಣೆಗಳಲ್ಲಿ ಅಭ್ಯರ್ಥಿಗಳು, ಸಂಸದರು, ಶಾಸಕರು ತಮ್ಮ ಉಳಿಕೆಯ ಮೊತ್ತದಿಂದ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡ ಒಂದು ಉದಾಹರಣೆಯೂ ಕಂಡುಬರುವುದಿಲ್ಲ.
ಪ್ರಸ್ತಾಪ: ಬೇರೆ ಸಂದರ್ಭಗಳಲ್ಲಿ ಚುನಾವಣೆಗಳನ್ನು ನಡೆಸಿದರೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ, ಆಗ ಅಭಿವೃದ್ಧಿ ಕಾರ್ಯಗಳಲ್ಲಿ ಕುಂಠಿತವಾಗುತ್ತದೆ. ಒಮ್ಮೆಯೇ ಚುನಾವಣೆ ನಡೆಸಿದರೆ ಒಂದು ಬಾರಿ ಮಾತ್ರ ನೀತಿಸಂಹಿತೆ ಅನ್ವಯವಾಗುವುದರಿಂದ ಅಭಿವೃದ್ಧಿ ಕಾರ್ಯಕ್ಕೆ ಅಡಚಣೆಯಾಗುವುದಿಲ್ಲ
ಬಾಧಕ: 1967ರಿಂದ ಇಲ್ಲಿಯವರೆಗೆ ಬೇರೆ ಬೇರೆ ಸಂದರ್ಭ ಗಳಲ್ಲಿ ಚುನಾವಣೆ ನಡೆದಿದೆ. ಇದೇ ಅವಧಿಯಲ್ಲಿ ದೇಶದ ಅಭಿವೃದ್ಧಿಯ ವೇಗದಲ್ಲಿ ಯಾವುದೇ ತೊಂದರೆಯಾಗಲಿಲ್ಲ. ಬದಲಿಗೆ 2014-2024ರ ಹತ್ತು ವರ್ಷಗಳ ಮೋದಿ ಆಡಳಿತದ ಅವಧಿಯಲ್ಲಿ ನೋಟು ಅಮಾನ್ಯ, ಜಿಎಸ್‌ಟಿ ಜಾರಿ, ಲಾಕ್‌ಡೌನ್ ಮುಂತಾದ ನಿರ್ಧಾರಗಳಿಂದ ದೇಶದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ.
ಈಗಿರುವ ಚುನಾವಣೆಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಯ ಅಗತ್ಯವಿದೆ. ಈಗಿನ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಬಲಿಷ್ಠವಾಗಿರುವ ರಾಷ್ಟ್ರೀಯ ಪಕ್ಷಗಳೇ ಪ್ರತೀ ಹಂತದಲ್ಲಿ ಮೇಲುಗೈ ಸಾಧಿಸುತ್ತವೆ. ಇದು ಬದಲಾಗಬೇಕಿದೆ. ಸಣ್ಣ ಸಣ್ಣ ಪಕ್ಷಗಳಿಗೂ ಸಮಾನ ಅವಕಾಶ ದೊರಕುವಂತಹ ವ್ಯವಸ್ಥೆಯ ಅಗತ್ಯವಿದೆ.