ಆರಂಭದ ಮೀಸಲಾತಿಗಳು ಮತ್ತು ಆನಂತರದ ಸೇರ್ಪಡೆಗಳು

Update: 2024-12-25 05:42 GMT

✍️ ಕೆ.ಎನ್. ಲಿಂಗಪ್ಪ,

ಮಾಜಿ ಸದಸ್ಯ,ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಮೀಸಲಾತಿಯ ಸಮಸ್ಯೆಯನ್ನು ಅದರ ಹಿಂದಿನ ಉದಾತ್ತ ಗುರಿ ಮತ್ತು ಉದ್ದೇಶದ ವಿಶಾಲ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಮೀಸಲಾತಿಯನ್ನು ಮೊದಲು ಆರಂಭಿಸಿದ ನಂತರ ಸಮತಲ ಮತ್ತು ಲಂಬವಾಗಿ ವಿಸ್ತರಿಸಲಾಯಿತು. ಕೆಲವೊಮ್ಮೆ ಬಹಳಷ್ಟು ತಪ್ಪು ಗ್ರಹಿಕೆಗಳು ಮತ್ತು ಕೆಟ್ಟ ಭಾವನೆಗಳನ್ನು ಅದು ಹುಟ್ಟು ಹಾಕಿದ್ದು ನಿಜ. ಮೀಸಲಾತಿಯ ಅನುಷ್ಠಾನವು ಈ ಕೆಳಗಿನಂತೆ ಎರಡು ಅಂಶಗಳನ್ನು ಹೊಂದಿದೆ: ಶತಮಾನಗಳಷ್ಟು ಹಳೆಯದಾದ ಸಾಮಾಜಿಕ ತಾರತಮ್ಯ ಮತ್ತು ದೇಶದಲ್ಲಿರುವ ಅನಿಷ್ಟ ಜಾತಿಗಳೊಳಗಿನ ಅಸಮಾನತೆ ನೀತಿಯಿಂದ ಆರಂಭದ ಮೀಸಲಾತಿ ಹುಟ್ಟಿತು. ಮೀಸಲಾತಿ ಪ್ರಯೋಜನ ಪಡೆದ ಫಲಾನುಭವಿಗಳು ಅನಾದಿ ಕಾಲದಿಂದಲೂ ಅಸ್ಪಶ್ಯ ಎಂದು ಪರಿಗಣಿಸಲ್ಪಟ್ಟ ಸಮುದಾಯಗಳನ್ನು ಒಳಗೊಳ್ಳುತ್ತವೆ. ಅವನ್ನು ಈಗ ಪರಿಶಿಷ್ಟ ಜಾತಿ ಎಂದು ಕರೆಯಲಾಗುತ್ತದೆ, ಹಾಗೆಯೇ ಬುಡಕಟ್ಟುಗಳು ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದು ಈಗ ಪರಿಶಿಷ್ಟ ಪಂಗಡಗಳಾಗಿ ಗುರುತಿಸಲ್ಪಟ್ಟಿವೆ.

ಸಂವಿಧಾನ ನಿರ್ಮಾತೃಗಳ ಗುರಿಯೆಂದರೆ ಹಿಂದೂ ಸಮಾಜದಲ್ಲಿನ ‘ಜಾತಿ’ ಎಂಬ ಅರ್ಬುದ ರೋಗವನ್ನು ನಿರ್ಮೂಲನೆ ಮಾಡುವು ದಾಗಿತ್ತು. ಆದ್ದರಿಂದ ಸ್ವಾತಂತ್ರ್ಯಾನಂತರ, ಸಾಮಾಜಿಕ ಸಮಾನತೆಯನ್ನು ಸಾಧಿಸುವ ಕಾರ್ಯವು ಸಂವಿಧಾನದ ರಚನಕಾರರಿಗೆ ಆದ್ಯತೆಯ ವಿಷಯವಾಗಿತ್ತು. ಇದು ಸಂವಿಧಾನದ ಆರಂಭದಿಂದಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯ ಕಲ್ಪನೆಗೆ ಕಾರಣವಾಯಿತು. ಆರಂಭದಲ್ಲಿ ಜಾರಿಗೊಳಿಸಲಾದ ಮೀಸಲಾತಿಯ ಹಿಂದಿನ ಕಲ್ಪನೆಯು ಸಾಮಾಜಿಕವಾಗಿ ವಂಚಿತರಾದ, ಮುಖ್ಯ ವಾಹಿನಿಯಿಂದ ತಿರಸ್ಕರಿಸಲ್ಪಟ್ಟ ಮತ್ತು ಉಳಿದ ಮನುವಾದಿ ಮೇಲ್ಜಾತಿ ಸಮಾಜದಿಂದ ಅಸ್ಪಶ್ಯರು ಎಂದು ಪರಿಗಣಿಸಲ್ಪಟ್ಟವರನ್ನು ಪಾಲನೆ ಮಾಡುವುದಾಗಿತ್ತು. ಅವರ ಸಾಮಾಜಿಕ ಹಿಂದುಳಿದಿರುವಿಕೆಯು ಅವರನ್ನು ಶೋಚನೀಯ ಆರ್ಥಿಕ ಹಿನ್ನೆಡೆಗೆ ತಳ್ಳಿತ್ತು.

ಪರಿಶಿಷ್ಟ ಜಾತಿಗಳು:

ಪರಿಶಿಷ್ಟ ಜಾತಿಯ ಪ್ರವರ್ಗವು ಪ್ರತ್ಯೇಕವಾಗಿ ವಿಂಗಡಿಸಲ್ಪಟ್ಟ, ಅಸ್ಪಶ್ಯತೆ ಮತ್ತು ಅನನುಕೂಲತೆಯಿಂದ ಕೂಡಿದ ಗುಂಪುಗಳನ್ನು ಒಳಗೊಂಡಿದೆ. ಅಂದರೆ ಸಾಂಪ್ರದಾಯಿಕ ಹಿಂದೂ ಜಾತಿ ಶ್ರೇಣಿಯಲ್ಲಿ ಅವರ ಸ್ಥಾನಮಾನ ಕೆಳ ಮಟ್ಟದ್ದಾಗಿತ್ತು. ‘ಪರಿಶಿಷ್ಟ ಜಾತಿಗಳು’ ಎಂದು ಪರಿಗಣಿಸಲು ಇರುವ ಪ್ರಾಥಮಿಕವಾಗಿ ಅಸ್ಪಶ್ಯತೆಯ ಮಾನದಂಡವನ್ನು ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ, ವಸತಿ ಮತ್ತು ಧಾರ್ಮಿಕ ಚೌಕಟ್ಟಿನ ಘಟನೆಗಳ ದೌರ್ಬಲ್ಯಗಳಲ್ಲಿ ಅಳೆಯಲಾಗುತ್ತದೆ.

ಪರಿಶಿಷ್ಟ ಪಂಗಡಗಳು:

ಪರಿಶಿಷ್ಟ ಪಂಗಡದ ಜನರು ಅಸ್ಪಶ್ಯತೆ ಮತ್ತು ಸಾಮಾಜಿಕ ದ್ವೇಷಕ್ಕೆ ಒಳಗಾಗದಿದ್ದರೂ ಪರಿಶಿಷ್ಟ ಜಾತಿಗಳಂತೆ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯು ಹೀನಾಯ ಮತ್ತು ಕರುಣಾಜನಕವಾಗಿದ್ದು, ಸಮಾಜದ ಸಾಮಾನ್ಯ ಜನರ ಗುಂಪಿನೊಡನೆ ಬೇರೆಯಲು ರಕ್ಷಣಾತ್ಮಕ ತಾರತಮ್ಯಕ್ಕೆ(Protective discrimination) ಅರ್ಹರಾಗಿದ್ದಾರೆ. ಈ ವರ್ಗದ ಅಡಿಯಲ್ಲಿ ಬುಡಕಟ್ಟು ಜನರನ್ನು ಸೇರಿಸಲು ಸಾಮಾನ್ಯ ಮಾನದಂಡಗಳೆಂದರೆ, ಅವರ ಬುಡಕಟ್ಟು ಮೂಲ, ವಿಶಿಷ್ಟ ಪ್ರಾಚೀನ ಲಕ್ಷಣಗಳು, ಜೀವನ ವಿಧಾನ, ದೂರದಲ್ಲೆಲ್ಲೋ ವಸತಿ ಮತ್ತು ಭೌಗೋಳಿಕ ಪ್ರತ್ಯೇಕತೆ. ಪರಿಶಿಷ್ಟ ಪಂಗಡಗಳ ವರ್ಗೀಕರಣ ಪರಿಶಿಷ್ಟ ಜಾತಿಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಪರಿಶಿಷ್ಟ ಪಂಗಡಗಳಿಗೆ ಯಾವುದೇ ಧಾರ್ಮಿಕ ಪರೀಕ್ಷೆಗಳನ್ನು ಪರಿಶಿಷ್ಟ ಜಾತಿಗಳಿಗಿರುವಂತೆ ನಿರ್ದಿಷ್ಟ ಪಡಿಸಿಲ್ಲದಿರುವುದು ಅತ್ಯಲ್ಪ ನೆಮ್ಮದಿ ತರುವುದು.

ಪರಿಶಿಷ್ಟ ಪಂಗಡಗಳ ಮೀಸಲಾತಿಯು ಪರಿಶಿಷ್ಟ ಜಾತಿಗಳಿಂದ ಅವರ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಅವರ ಉದ್ದೇಶದಲ್ಲಿಯೂ ಭಿನ್ನವಾಗಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿಯ ಸಂದರ್ಭದಲ್ಲಿ ಈ ಸಮುದಾಯಗಳನ್ನು ಅವರ ಸಹವರ್ತಿಗಳಿಂದ ಪ್ರತ್ಯೇಕಿಸುವ ಪ್ರತಿಕೂಲತೆಯನ್ನು ಆದ್ಯತಾ ಉಪಚಾರದಿಂದ ನಿವಾರಿಸಲಾಗುವುದು ಎಂದು ಭಾವಿಸಲಾಗಿದೆ. ಅಂದರೆ ಅವರನ್ನು ಸಮಾಜದ ಉಳಿದವರಿಂದ ಪ್ರತ್ಯೇಕಿಸುವ ಎಲ್ಲಾ ತಾರತಮ್ಯಗಳಿಂದ ಮುಕ್ತಿಗೊಳಿಸುವ ಮೂಲಕ ಅವರ ಪ್ರತ್ಯೇಕ ಸ್ವರೂಪವನ್ನು ಹೋಗಲಾಡಿಸುವುದು ಮೀಸಲಾತಿ ನೀತಿಯ ಗುರಿಯಾಗಿದೆ. ಪರಿಶಿಷ್ಟ ಪಂಗಡಗಳ ಮೀಸಲಾತಿ ನೀತಿಯ ಗುರಿಯು ಅವರ ಪ್ರತ್ಯೇಕ ಸ್ವರೂಪ ಮತ್ತು ಸ್ವಾಯತ್ತತೆಯನ್ನು ಸೂಕ್ತ ಕಾರ್ಯಕ್ರಮದೊಂದಿಗೆ ಅವರ ಸ್ಥಿತಿ ಮತ್ತು ಸಂಯೋಜನೆ ಹಂತವು ಸೇರಿದಂತೆ ಸುಧಾರಣೆ ಮಾಡುವುದು.

ಈ ಸಾವಿರ ವರ್ಷಗಳ ಹಿಂದಿನ ಸಾಮಾಜಿಕ ಸಮಸ್ಯೆಯ ನಿರ್ಮೂಲನಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಈ ಗುಂಪುಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಬಹುಮಟ್ಟಿಗೆ ಯಾವುದೇ ವಿವಾದಗಳಿಲ್ಲ.

ರಾಜಕೀಯ ನಿಮಿತ್ತ ಬೆಂಬಲಸಲ್ಪಟ್ಟ ಆರ್ಥಿಕ ಹಿಂದುಳಿದಿರುವಿಕೆಯ ಪರಿಣಾಮವಾಗಿ ಆನಂತರದ ಸೇರ್ಪಡೆಗಳು(ಒಬಿಸಿ).

ಕಾಲ ಕ್ರಮೇಣ ಸ್ವಾತಂತ್ರ್ಯಾನಂತರ ಸಮಾಜದಲ್ಲಿ ಇನ್ನೂ ಒಂದು ನಿಷ್ಪ್ರಯೋಜಕ ಭಾಗವು ನಿರ್ಗತಿಕ ಸ್ಥಿತಿಯಲ್ಲಿ ವಾಸಿಸುತ್ತಿದೆ ಮತ್ತು ಅಸ್ತಿತ್ವದಲ್ಲಿರುವ ಸಕಾರಾತ್ಮಕ ತಾರತಮ್ಯದ ಯೋಜನೆಗೆ ಅದನ್ನೂ ಸೇರಿಸಬೇಕಾಗಿದೆ ಎಂದು ನಂತರದಲ್ಲಿ ಭಾವಿಸಲಾಯಿತು. ಈ ಭಾಗವು ಅಸ್ಪಶ್ಯರಲ್ಲದ ಮತ್ತು ಸಾಮಾಜಿಕವಾಗಿ ತಿರಸ್ಕರಿಸಲ್ಪಟ್ಟ ಜಾತಿಗಳೂ ಅಲ್ಲದ ಇತರ ಜಾತಿಗಳನ್ನು ಒಳಗೊಂಡಿದೆ. ಆದರೆ ಅವರ ಜೀವನ ಪರಿಸ್ಥಿತಿಗಳು ಬಹುತೇಕ ಸಮಾನ ಅಥವಾ ಕೆಲವೊಮ್ಮೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗಿಂತ ಕೆಟ್ಟದಾಗಿದೆ. ಒಟ್ಟಾರೆಯಾಗಿ ಇತರ ಹಿಂದುಳಿದ ಜಾತಿಗಳು ಅಥವಾ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜಾತಿಗಳು (ಒಬಿಸಿ) ಅಥವಾ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ (ಎಸ್‌ಇಬಿಸಿ) ಎಂದು ಕರೆಯಲ್ಪಡುವ ಈ ಜನರ ಸಂಕಷ್ಟ ಪರಿಸ್ಥಿತಿ ಅವರ ಶೈಕ್ಷಣಿಕ ಹಿಂದುಳಿದಿರುವಿಕೆಗೆ ಕಾರಣವಾಗಿದೆ ಮತ್ತು ಅದರೊಂದಿಗೆ ಅವರ ಆರ್ಥಿಕ ಪರಿಸ್ಥಿತಿಯು ಹಿಂದುಳಿದಿದೆ. ಕೆಲವು ಮಾರ್ಪಾಡುಗಳೊಂದಿಗೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಒದಗಿಸಲಾದ ಆರಂಭದ ಮೀಸಲಾತಿಗೆ ಅನುಗುಣವಾಗಿ ಅವರಿಗೂ ಮೀಸಲಾತಿಯ ಅಗತ್ಯ ಇದೆ ಎಂದು ಪರಿಗಣಿಸಲಾಗಿದೆ.

ಇತರ ಹಿಂದುಳಿದ ಜಾತಿಗಳನ್ನು (ಒಬಿಸಿ) ಮೀಸಲಾತಿ ಅಡಿಯಲ್ಲಿ ಸೇರಿಸುವುದರ ಹಿಂದೆ ರಾಜಕೀಯ ಪರಿಗಣನೆಗಳೂ ಇದ್ದವು. ಈ ಎರಡೂ ವರ್ಗಗಳಿಗೆ ಮೀಸಲಾತಿಯ ಮಾದರಿ ಒಂದೇ ಆಗಿದ್ದರೂ; ಈ ಪ್ರತಿಯೊಂದು ಮೀಸಲಾತಿಯ ಹಿಂದಿನ ಕಲ್ಪನೆಯು ವಿಭಿನ್ನವಾಗಿತ್ತು.

ತೊಂಭತ್ತರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನದಿಂದ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರಾರಂಭವಾಯಿತು(ಕೇಂದ್ರ ಸರಕಾರ). ಈ ಮೀಸಲಾತಿ ನೀತಿಯು ಮೊದಲಿನಿಂದಲೂ ನಿರಂತರ ದಾಳಿಗಳು ಮತ್ತು ವಿವಾದಗಳಿಗೆ ಒಳಗಾಗಿದೆ ಮತ್ತು ಅದರ ಅಂತಿಮ ಸ್ವರೂಪದಲ್ಲಿ ನೆಲೆಗೊಂಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಎಲ್ಲಾ ರಾಜಕೀಯ ಪರಿಗಣನೆಗಳಿಂದ ಮುಕ್ತವಾದ ಸಾಮಾಜಿಕ ಆರ್ಥಿಕ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳಬೇಕು. ಇದು ಇತರ ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೀಸಲಾತಿ ನಡುವಿನ ವ್ಯತ್ಯಾಸದ ಒಂದು ತೆಳುವಾದ ಗೆರೆಯಿಂದ ಸುತ್ತುವರಿದಿದೆ. ಸಾಮಾನ್ಯ ತಪ್ಪು ತಿಳುವಳಿಕೆಯನ್ನು ನಿವಾರಿಸಲು ಮತ್ತು ಇವೆರಡೂ ಪರಸ್ಪರ ಬೆರೆಯಲು ಸ್ಪಷ್ಟವಾದ ಸರಿ ಸಮಾನತೆ ರೂಢಿಯಲ್ಲಿರಬೇಕು.

ಸ್ವಾತಂತ್ರ್ಯ ಪೂರ್ವದಲ್ಲಿ, ರಾಜಾಳಿಕೆಯಲ್ಲಿ ತಾರತಮ್ಯಕ್ಕೆ ಒಳಪಟ್ಟ ಜಾತಿಗಳನ್ನು ಯಾವುದೇ ರೀತಿ ಬೇರ್ಪಡಿಸದೆ ಮೀಸಲಾತಿಯನ್ನು ಕೊಡಮಾಡಿದ್ದುಂಟು. ಆದರೆ ಸ್ವಾತಂತ್ರ್ಯ ಭಾರತದಲ್ಲಿ ಮೊದಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು (ವಿಧಿ 341 ಮತ್ತು ವಿಧಿ 342) ಮೀಸಲಾತಿಗೆ ಒಳಪಡಿಸಲಾಯಿತು. ಆನಂತರದಲ್ಲಿ 40 ವರ್ಷಗಳು ಗತಿಸಿದ ಮೇಲೆ ಕೇಂದ್ರ ಸರಕಾರದ ನೇಮಕಾತಿ ಮತ್ತು ಹುದ್ದೆಗಳಿಗೆ ಮೀಸಲಾತಿಯನ್ನು ಸಮಾಜದಲ್ಲಿನ ಶ್ರೇಷ್ಠ-ಕನಿಷ್ಠ ಎಂಬೆರಡು ವರ್ಗಗಳ ನಡುವಿನ ಸಂಘರ್ಷದ ಮಧ್ಯೆ ಸರ್ವೋಚ್ಚ ನ್ಯಾಯಾಲಯದ ಸಕಾರಾತ್ಮಕ ಆದೇಶದಂತೆ ಜಾರಿಗೆ ಬಂದುದು ಮಾತ್ರ ಹಿಂದುಳಿದ ವರ್ಗಗಳಿಗೆ ಮನುವಾದಿ ಮೇಲ್ಜಾತಿ-ವರ್ಗಗಳು ಬಿಟ್ಟುಕೊಟ್ಟ ಔದಾರ್ಯದ ಭಿಕ್ಷೆಯಾಗಿ ಪರಿಗಣಿತವಾಗಿರುವುದು ಸಾಮಾಜಿಕ ದೌರ್ಜನ್ಯ ಹಾಗೂ ದುರಂತ!

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News