ಇಂದು ಅಂಬೇಡ್ಕರ್ ಮನುಸ್ಮೃತಿ ಸುಟ್ಟ ದಿನ

Update: 2024-12-25 04:56 GMT

✍️ ಆರ್.ಡಿ. ಪೂರ್ಣಿಮಾ, ಮಂಡ್ಯ

ದೇಶದಲ್ಲಿ ಸಂವಿಧಾನವನ್ನು ಬದಿಗೆ ಸರಿಸಿ, ಆ ಜಾಗದಲ್ಲಿ ಮತ್ತೆ ಮನುಸ್ಮತಿಯನ್ನು ಪ್ರತಿಷ್ಠಾಪಿಸುವ ಪ್ರಯತ್ನ ತೀವ್ರವಾಗಿ ನಡೆಯುತ್ತಿರುವ ಸಂದರ್ಭದಲ್ಲೇ ಡಿಸೆಂಬರ್ 25 ಮರಳಿ ಬಂದಿದೆ. ಇಂದು ಅಂಬೇಡ್ಕರ್ ಅವರು ಮನುಸ್ಮತಿಯನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದ ದಿನ. ಅಸ್ಪಶ್ಯತೆಯ ವಿರುದ್ಧ ಅಂಬೇಡ್ಕರ್ ನಡೆಸಿದ ಹತ್ತು ಹಲವು ಹೋರಾಟಗಳಲ್ಲಿ ಅತಿ ಮಹತ್ವದ ಸಾಂಕೇತಿಕ ಹೋರಾಟವಾಗಿದೆ ಮನುಸ್ಮತಿಯನ್ನು ಸುಟ್ಟಿರುವುದು. ಆ ಮೂಲಕ ಅವರು ದೇಶದೊಳಗಿರುವ ಜಾತಿ ಅಸಮಾನತೆಯನ್ನು ಶಾಶ್ವತವಾಗಿ ಇಲ್ಲವಾಗಿಸುವ ಕನಸು ಕಂಡರು.

ಅಂಬೇಡ್ಕರ್ ಹೋರಾಟದ ಬದುಕಿನಲ್ಲಿ ಹಲವು ರೂಪಕಗಳನ್ನು ನಾವು ನೋಡಬಹುದು. ‘ಕೋರೆಗಾಂವ್ ವಿಜಯ’ವನ್ನು ಆಚರಿಸುವ ಮೂಲಕ ಅವರು ದಲಿತರಲ್ಲಿ ಸ್ವಾಭಿಮಾನವನ್ನು, ಆತ್ಮವಿಶ್ವಾಸವನ್ನು ತುಂಬಲು ಪ್ರಯತ್ನಿಸಿದರು. ಕೋರೆಗಾಂವ್ ಬ್ರಿಟಿಷರು ಮತ್ತು ಪೇಶ್ವೆಗಳ ನಡುವೆ ನಡೆದಿರುವ ಯುದ್ಧವಾದರೂ, ಇಲ್ಲಿ ಗೆದ್ದಿರುವುದು ಬ್ರಿಟಿಷರೇ ಆಗಿದ್ದರೂ ಆ ಯುದ್ಧ ಹೇಗೆ ದಲಿತರ ಬದುಕಿಗೆ ಹೊಸ ದಿಕ್ಕನ್ನು ನೀಡಿತು ಎನ್ನುವುದನ್ನು ಅವರು ಗುರುತಿಸುತ್ತಾರೆ. ಚಿತ್ವಾವನ ಬ್ರಾಹ್ಮಣರಾಗಿದ್ದ ಪೇಶ್ವೆಗಳ ಜಾತೀಯತೆಯ ವಿರುದ್ಧ ಸೇನೆಯೊಳಗಿರುವ ಮಹಾರ್ ದಲಿತರು ಬಂಡೇಳುತ್ತಾರೆ. ಬಲಿಷ್ಠ 500 ಮಂದಿ ದಲಿತ ಸೇನಾನಿಗಳು ಬ್ರಿಟಿಷರ ಜೊತೆಗೆ ಸೇರಿ, ಪೇಶ್ವೆಗಳ ಸೈನ್ಯದ ವಿರುದ್ಧ ಹೋರಾಡುತ್ತಾರೆ ಮತ್ತು ಗೆಲ್ಲುತ್ತಾರೆ. ಈ ಯುದ್ಧವನ್ನು ಅಂಬೇಡ್ಕರ್ ಪೇಶ್ವೆಗಳ ಜಾತೀಯತೆಯ ವಿರುದ್ಧ ದಲಿತರು ನಡೆಸಿದ ಯುದ್ಧವೆಂದು ಬಣ್ಣಿಸಿ, ಆ ಗೆಲುವನ್ನು ದಲಿತರ ಶಕ್ತಿಯನ್ನಾಗಿಸುತ್ತಾರೆ. ಹೊಸ ಹೋರಾಟಕ್ಕೆ ಅವರನ್ನು ಈ ಮೂಲಕ ಸಜ್ಜುಗೊಳಿಸುತ್ತಾರೆ.

ಆದರೆ ನಿಜಕ್ಕೂ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದಲಿತರ ಮೊದಲ ಬಂಡಾಯವಾಗಿ ಗುರುತಿಸುವುದು ‘ಮಹಾಡ್’ ಚಳವಳಿಯನ್ನು. ಮಾರ್ಚ್ 19, 1927ರಂದು ನಡೆದ ಮಹಾಡ್ ಚಳವಳಿಯನ್ನು ‘ಜಗತ್ತಿನ ಬಹುಮುಖ್ಯ ನಾಗರಿಕ ಹಕ್ಕುಗಳ ಹೋರಾಟಗಳಲ್ಲಿ ಒಂದು’ ಎಂದು ಚಿಂತಕ ಆನಂದ್ ತೇಲ್ತುಂಬ್ಡೆ ಬಣ್ಣಿಸುತ್ತಾರೆ. ವಿಪರ್ಯಾಸವೆಂದರೆ ಈ ಸಮಾವೇಶ ನಡೆಸಲು ಅವರಿಗೆ ಸೂಕ್ತ ಸ್ಥಳವೇ ಸಿಗದೆ, ತಮಾಷಾ ನಾಟಕ ನಡೆಯುವ ಥಿಯೇಟರನ್ನೇ ಆರಿಸಿಕೊಳ್ಳಬೇಕಾಯಿತಂತೆ. ಆ ಸಭೆಯಲ್ಲಿಯೇ ಚೌದಾರ್ ಕೆರೆಯ ನೀರನ್ನು ಕುಡಿಯುವ ಅನಿರೀಕ್ಷಿತ ತೀರ್ಮಾನವನ್ನು ಮಾಡಲಾಯಿತು. ಮೆರವಣಿಗೆಯಲ್ಲಿ ಸಾಗಿ ಅಂಬೇಡ್ಕರ್ ಬೊಗಸೆಯಲ್ಲಿ ಕೆರೆಯ ನೀರೆತ್ತಿ ಕುಡಿದರು. ಬಹುಶಃ ದೇಶದ ಇತಿಹಾಸದಲ್ಲೇ ಅದೊಂದು ಮಹತ್ವದ ಕ್ಷಣ. ಅಂಬೇಡ್ಕರ್ ಸ್ಪರ್ಶದಿಂದ ಆ ಕೆರೆಯ ನೀರು ಮಾತ್ರವಲ್ಲ, ಭಾರತದಲ್ಲಿ ಹರಿಯುವ ಕೆರೆ, ತೊರೆಗಳೆಲ್ಲವೂ ಪವಿತ್ರವಾದವು. ಅಲ್ಲಿಯವರೆಗೆ ನೀರಿಗೆ ಜಾತಿಯ ಮಾಲಿನ್ಯ ಅಂಟಿ, ದೇಶದ ಜನತೆಯನ್ನು ರೋಗಪೀಡಿತವನ್ನಾಗಿಸಿತ್ತು. ಅಂಬೇಡ್ಕರ್ ಮಾಲಿನ್ಯವನ್ನು ಕಳೆದರು. ಆದರೆ, ಮರುದಿನ ನೀರನ್ನು ಮುಟ್ಟಿದ ಕಾರಣಕ್ಕಾಗಿ ನೆರೆದ ದಲಿತರ ಮೇಲೆ ಭಾರೀ ದಾಳಿಗಳು ನಡೆದವು. ಮೇಲ್ಜಾತಿಯ ಗೂಂಡಾಗಳು ಅಟ್ಟಾಡಿಸಿಕೊಂಡು ದಲಿತರಿಗೆ ಹೊಡೆದರು. ಈ ಸಂದರ್ಭದಲ್ಲಿ ಸ್ಥಳೀಯ ಮುಸ್ಲಿಮರು ಮತ್ತು ಕಾಯಸ್ಥ ಜಾತಿಯ ಜನರು ದಲಿತರಿಗೆ ತಮ್ಮ ಮನೆಯಲ್ಲಿ ರಕ್ಷಣೆಯನ್ನು ನೀಡಿದ್ದರು. ಈ ಸಂದರ್ಭದಲ್ಲಿ ದಲಿತರು ಪ್ರತಿ ದಾಳಿ ನಡೆಸಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಅಂಬೇಡ್ಕರ್ ಕಟ್ಟಕಡೆಯವರೆಗೂ ಅಹಿಂಸೆಯನ್ನು ಪಾಲಿಸಲು ಕರೆ ನೀಡಿದ್ದರು. ಈ ದಾಳಿ ಪೂರ್ಣ ಪ್ರಮಾಣದ ಸತ್ಯಾಗ್ರಹಕ್ಕೆ ಕಾರಣವಾಯಿತು. ಇದಾದ ಬಳಿಕ ಮಹಾಡ್ ಮುನ್ಸಿಪಾಲಿಟಿ, ಚೌದಾರ್ ಕೆರೆ ಖಾಸಗಿಯಾದದ್ದು ಎಂದು ನೆಪ ತೆಗೆದು ದಲಿತರ ಬಳಕೆಗೆ ನಿಷೇಧ ಹೇರಿತು. ಇದರ ವಿರುದ್ಧ ಅಂಬೇಡ್ಕರ್ ನ್ಯಾಯಾಲಯದ ಮೆಟ್ಟಿಲೇರಿದರು. 1937ರಲ್ಲಿ ಈ ಕೇಸನ್ನು ಅಂಬೇಡ್ಕರ್ ಗೆದ್ದರು.

ಮಾರ್ಚ್ 19ರ ಸಮ್ಮೇಳನದಲ್ಲಿ ನಡೆದ ಸಂಘರ್ಷ ಮುಂದೆ ಡಿಸೆಂಬರ್ ತಿಂಗಳಲ್ಲಿ ಬೃಹತ್ ಸಮ್ಮೇಳನಕ್ಕೆ ಕಾರಣವಾಯಿತು. ಈ ಸಮ್ಮೇಳನವನ್ನು ‘ಬಹಿಷ್ಕೃತ್ ಹಿತಕಾರಿಣಿ ಸಭಾ’ ವಹಿಸಿಕೊಂಡಿತ್ತು. ಈ ಸಮ್ಮೇಳವೇ ಮನುಸ್ಮತಿ ಸುಡುವುದಕ್ಕೂ ಕಾರಣವಾಯಿತು. ಅಂದರೆ ಅಂಬೇಡ್ಕರ್ ಹೋರಾಟ ನೀರು-ಬೆಂಕಿ ಎರಡನ್ನೂ ಒಳಗೊಂಡಿತ್ತು. ಡಿಸೆಂಬರ್‌ನಲ್ಲಿ ನಡೆದ ಮಹಾಡ್ ಸತ್ಯಾಗ್ರಹಕ್ಕೆ ಜಾಗವನ್ನು ನೀಡಿದವರು ಸ್ಥಳೀಯ ಫತೇಹ್ ಖಾನ್. ಚಳವಳಿಗೆ ಸ್ಥಳ ನೀಡದಂತೆ ಭಾರೀ ಒತ್ತಡಗಳು ಬಂದರೂ ಫತೇಹ್ ಖಾನ್ ಅಂಬೇಡ್ಕರ್ ಜೊತೆಗೆ ನಿಂತರು. ಈ ಸಮಾವೇಶದಲ್ಲಿ ಅಂಬೇಡ್ಕರ್ ಜಾತೀಯತೆಯ ಬೇರಿಗೇ ಕೈ ಹಾಕಿದರು. ಜಾತಿ ಭೇದವನ್ನು ಕಾನೂನಾಗಿಸಿದ ಮನುಸ್ಮತಿಯನ್ನು ಇಲ್ಲವಾಗಿಸದೆ ಜಾತೀಯತೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎಂದು ಮನಗಂಡರು. ಕೆರೆಯ ನೀರನ್ನು ಮುಟ್ಟಲು ನಿಷೇಧಿಸಿದ ವ್ಯವಸ್ಥೆಯನ್ನು ಇಲ್ಲವಾಗಿಸದೆ ಅಸ್ಪಶ್ಯತೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು ಈ ಸಾಂಕೇತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡರು. ವಿಶೇಷವೆಂದರೆ, ಈ ಸಂದರ್ಭದಲ್ಲಿ ಮನುಸ್ಮತಿಯನ್ನು ಸುಟ್ಟವರು ಬಾಪೂಸಾಹೇಬ ಸಹಸ್ರ ಬುದ್ಧ ಎಂಬ ಪ್ರಗತಿ ಪರ ಬ್ರಾಹ್ಮಣರಾಗಿದ್ದರು.

ಮನುಸ್ಮತಿಯನ್ನು ಸುಟ್ಟ ಅಂಬೇಡ್ಕರ್ ಅವರೇ ಮುಂದೆ ಈ ದೇಶಕ್ಕೆ ಹೊಸ ಸಂವಿಧಾನವನ್ನು ಬರೆದರು. ಆದರೆ ಇಂದು ಮತ್ತೆ ಮನುಸ್ಮತಿ ಗವಾಕ್ಷಿಯ ಮೂಲಕ ಪ್ರಜಾಸತ್ತೆಯೊಳಗೆ ಪ್ರವೇಶಿಸಲು ನೋಡುತ್ತಿದೆ. ರಾಜಸ್ಥಾನದ ಹೈಕೋರ್ಟ್ ಮುಂದೆಯೇ ಮನುಮಹರ್ಷಿಯ ಪ್ರತಿಮೆಯನ್ನು ಸ್ಥಾಪಿಸಿರುವುದು ಇದಕ್ಕೆ ಉದಾ ಹರಣೆಯಾಗಿದೆ. ಅಮಿತ್ ಶಾ ಅವರಿಗೆ ‘ಅಂಬೇಡ್ಕರ್ ಜಪ’ ಒಂದು ಶೋಕಿಯಾಗಿ ಕಂಡಿದೆ. ಬೇರೆ ಬೇರೆ ರೂಪಗಳಲ್ಲಿ ಅಂಬೇಡ್ಕರ್ ಮೇಲೆ ದಾಳಿಗಳು ನಡೆಯುತ್ತಿವೆ. ವಿಪರ್ಯಾಸವೆಂದರೆ, ದಲಿತರು ಕೂಡ ಈ ದಾಳಿಗೆ ಪ್ರತಿಕ್ರಿಯಿಸಲಾಗದೆ ಅಸಹಾಯಕರಾಗಿ ನಿಂತಿದ್ದಾರೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News